ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಶೇಕ್ಸ್ ಪಿಯರ್ ಕಂದಗಲ್ ಹನುಮಂತರಾಯರು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಉತ್ತರ ಕರ್ನಾಟಕದ ಹೊಸ ಜಿಲ್ಲೆಗಳಲ್ಲೊಂದಾದ ಬಾಗಲಕೋಟೆಗೆ ಬಿಜಾಪುರ ಮತ್ತು ಬಾದಾಮಿಗಳಿಗಿರುವಂತಹ ಐತಿಹಾಸಿಕ ಮಹತ್ವದ ಸ್ಥಾನವಿಲ್ಲದಿದ್ದರೂ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಅಪಾರ ಕೊಡುಗೆ ನೀಡಿದ ಪ್ರದೇಶವಿದು.

ಕನ್ನಡದ ಆದಿಕವಿಗಳಲ್ಲೊಬ್ಬನಾದ ರನ್ನ, ಖ್ಯಾತ ಹರಿದಾಸರಾದ ಪ್ರಸನ್ನ ವೆಂಕಟದಾಸರು, ಪ್ರಕಾಂಡ ಪಂಡಿತ ಸಾಹಿತಿ ಸತ್ಯಕಾಮ, ಗ್ರಾಮಾಯಣ ಖ್ಯಾತಿಯ ರಾವ್ ಬಹಾದ್ದೂರ್, ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ, ಭಾಷಾ ಶಾಸ್ತ್ರಜ್ಞ ರಾ ಯ ಧಾರವಾಡಕರ ಮುಂತಾದ ಮಹನೀಯರ ಜನ್ಮಭೂಮಿ ಈ ಪ್ರದೇಶ. ಕನ್ನಡ ನಾಟಕ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಒಂದು ಕಾಲದಲ್ಲಿ ಕರ್ನಾಟಕದ ಶೇಕ್ಸ್ ಪಿಯರ್ ಎಂದು ಖ್ಯಾತರಾದ ಕಂದಗಲ್ ಹನುಮಂತರಾಯರು ಕೂಡ ಬಾಗಲಕೋಟೆಯ ಕೊಡುಗೆ.

ಅಹಂಕಾರದಿಂದ ಅವನತಿ ಹೊಂದಿದ ನಹುಷನ ಕಥೆಅಹಂಕಾರದಿಂದ ಅವನತಿ ಹೊಂದಿದ ನಹುಷನ ಕಥೆ

ಕಂದಗಲ್ ಹನುಮಂತರಾಯರು ಹುಟ್ಟಿದ್ದು ಜನವರಿ 11, 1896ರಂದು, ಬಾಗಲಕೊಟೆ ಜಿಲ್ಲೆಯ ಬೀಳಗಿ ತಾಲೂಕಿನ ಕಂದಗಲ್ ಗ್ರಾಮದಲ್ಲಿ. ಅವರ ತಂದೆ ಭೀಮರಾಯರು ಕಂದಗಲ್ಲಿನ ಕುಲಕರ್ಣಿ ಮನೆತನದವರು. ತಾಯಿ ಗಂಗೂಬಾಯಿ. ಅವರ ಪ್ರಾಥಮಿಕ ಶಿಕ್ಷಣ ಕಂದಗಲ್ಲಿನಲ್ಲಿಯೇ ಆಯಿತು. ಅವರಿಗೆ ಚಿಕ್ಕಂದಿನಲ್ಲಿಯೇ ನಾಟಕ, ಸಂಗೀತಗಳಲ್ಲಿ ಬಹಳ ಆಸಕ್ತಿ.

Shakespear of Karnataka Kandagal Hanumantha Rao

ಮಾಧ್ಯಮಿಕ ಶಿಕ್ಷಣಕ್ಕಾಗಿ ಅವರು ಬಂದಿದ್ದು ವಿಜಾಪುರಕ್ಕೆ. ವಿಜಾಪುರಕ್ಕೆ ಬಂದ ಮೇಲೆ ಅಲ್ಲಿ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದ ಗಣೇಶ ಉತ್ಸವದಲ್ಲಿ ನಡೆಯುತ್ತಿದ್ದ ನಾಟಕಗಳಿಂದ ಅವರು ಇನ್ನಷ್ಟು ಪ್ರೇರಿತಗೊಂಡರು. ಅವರ ತಾಯಿಗೋ ಮಗ ಮಾಧ್ಯಮಿಕ ಶಾಲೆ ಓದಿ ಪರಂಪರೆಯಿಂದ ಬಂದ ಕುಲಕರ್ಣಿಕೆ ವೃತ್ತಿಯನ್ನು ಮಾಡಬೇಕೆಂಬ ಆಸೆ. ಮಗನಿಗೋ ನಾಟಕ, ಸಂಗೀತಗಳನ್ನು ಬಿಟ್ಟರೆ ಉಳಿದ ವಿಷಯಗಳಲ್ಲಿ ಆಸಕ್ತಿಯೇ ಇಲ್ಲ.

ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಅನೇಕ ಏಕಾಂಕ ನಾಟಕಗಳನ್ನು ಬರೆದು ತಮ್ಮ ಗೆಳೆಯರೊಂದಿಗೆ ಸೇರಿಕೊಂಡು ಪ್ರದರ್ಶಿಸಿದರು. ಅವರ ನಾಟಕಗಳನ್ನು ಫ ಗು ಹಳಕಟ್ಟಿ ಮತ್ತು ಶ್ರೀನಿವಾಸ ಕೌಜಲಗಿ ಮುಂತಾದ ಮಹನೀಯರು ಮೆಚ್ಚಿಕೊಂಡರು. ಅವರ ಈ ನಾಟಕದ ಹುಚ್ಚಿನಿಂದ ಓದು ಹಿಂದೆ ಬಿತ್ತು. ಆದುದರಿಂದ ಅವರು ಮೆಟ್ರಿಕ್ ಪರೀಕ್ಷೆಯಲ್ಲಿ ನಾಪಾಸಾದರು.

ಮೃಗಜಲದ ಬೆನ್ನು ಹತ್ತಿ ಸುಖಿಸುವ ಯಯಾತಿ ಇಂದಿಗೂ ಪ್ರಸ್ತುತಮೃಗಜಲದ ಬೆನ್ನು ಹತ್ತಿ ಸುಖಿಸುವ ಯಯಾತಿ ಇಂದಿಗೂ ಪ್ರಸ್ತುತ

ಮನೆಯವರ ಮೂದಲಿಕೆಯಿಂದ ಪಾರಾಗಲೆಂದು ಹನುಮಂತರಾಯರು ಪುಣೆಗೆ ಬಂದು ಮಿಲಿಟರಿಯಲ್ಲಿ ಕಾರಕೂನ ವೃತ್ತಿಗೆ ಸೇರಿದರು. ಅಂದಿನ ಪುಣೆ ನಾಟಕ ಕಲೆಯ ತವರೂರಾಗಿತ್ತು. ಅಲ್ಲಿ ಅವರು ಬಾಲ ಗಂಧರ್ವರ ಅನೇಕ ನಾಟಕಗಳನ್ನು ನೋಡಿ ಕಲಿತರು. ಅವರು ಗಡಕರಿ ಅವರಂತಹ ನಾಟಕಕಾರರೊಂದಿಗೆ ಸ್ನೇಹ ಸಂಪಾದಿಸಿ ಅವರ ಒಡನಾಟದಲ್ಲಿ ನಾಟಕ ಕಲೆಯ ಸೂಕ್ಷ್ಮಗಳನ್ನು ಕಂಡುಕೊಂಡರು.

Shakespear of Karnataka Kandagal Hanumantha Rao

ಮೂರು ವರ್ಷಗಳನ್ನು ಪುಣೆಯಲ್ಲಿ ಕಳೆದ ನಂತರ ತಾಯಿಯ ಅನಾರೋಗ್ಯದ ನಿಮಿತ್ತ ಹನುಮಂತರಾಯರಿಗೆ ಊರಿಗೆ ವಾಪಸ್ಸಾಗಬೇಕಾದ ಪ್ರಸಂಗ ಒದಗಿತು. ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ತಿರುಗಿ ಬಂದ ಹನುಮಂತರಾಯರಿಗೆ ಕಂದಗಲ್ ಗ್ರಾಮದ ನೀರಸ ಬದುಕು ಅಸಹನೀಯವಾಯಿತು. ಅವರು ವಿಜಾಪುರಕ್ಕೆ ಬಂದು ಅಲ್ಲಿ ತಮ್ಮ ತಮ್ಮನ ಮನೆಯಲ್ಲಿ ಇರತೊಡಗಿದರು. ಅಲ್ಲಿಯೇ ಒಂದು ಹೊಲಿಗೆ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದರು.

ಆದರೆ ನಾಟಕದ ಗೀಳು ಮುಂದುವರೆಯಿತು. ತಮ್ಮ ಸ್ನೇಹಿತರೊಡಗೂಡಿ ಶ್ರೀಕೃಷ್ಣ ನಾಟಕ ಕಂಪನಿಯನ್ನು ಹುಟ್ಟುಹಾಕಿದರು. ಅಲ್ಲಿ ತಾವೇ ಬರೆದ ನಾಟಕಗಳನ್ನು ಪ್ರದರ್ಶಿಸತೊಡಗಿದರು. ಆಗಲೇ ಅವರು "ಸಂಧ್ಯಾರಾಗ" ಎಂಬ ಐತಿಹಾಸಿಕ ನಾಟಕವನ್ನು ಬರೆದದ್ದು. ಆದರೆ ಅವರ ಈ ನಾಟಕದ ಗೀಳು ಅವರ ತಮ್ಮ ಮತ್ತು ತಾಯಿಗೆ ಸರಿಬರಲಿಲ್ಲ. ಮನೆಯವರ ವಿರೋಧ ಅಸಹನೀಯವಾದಾಗ ಅವರು ವಿಜಾಪುರವನ್ನು ತೊರೆದು ಬಾಗಲಕೋಟೆಯ ಸಹಕಾರಿ ಬ್ಯಾಂಕೊಂದರಲ್ಲಿ ಉದ್ಯೋಗಿಯಾದರು. ಬಾಗಲಕೋಟೆಯಲ್ಲಿದ್ದಾಗ ಆ ಭಾಗದಲ್ಲಿ ಹೆಸರುವಾಸಿಯಾಗಿದ್ದ ನಾಟಕ ಕಂಪನಿಯ ನಟ ನಟಿಯರ ಜೊತೆ ಸ್ನೇಹ ಸಂಪಾದಿಸಿದರು. ಬಾಗಲಕೋಟೆಯಲ್ಲಿದ್ದಾಗಲೇ ಗುಳೇದಗುಡ್ಡದ ಭೀಮರಾಯರ ಮಗಳು ಅಂಬಾಬಾಯಿಯೊಂದಿಗೆ ಅವರ ವಿವಾಹವಾಯಿತು. ಅವರು ತಮ್ಮ ನಾಟಕದ ಆಕರ್ಷಣೆಯನ್ನು ಹತ್ತಿಕ್ಕಿಕೊಳ್ಳಲಾಗದೇ ಬ್ಯಾಂಕಿನ ಉದ್ಯೋಗವನ್ನು ಬಿಟ್ಟು ನಾಟಕ ಕಂಪನಿಯೊಂದರಲ್ಲಿ ಮ್ಯಾನೇಜರ್ ಕೆಲಸಕ್ಕೆ ಸೇರಿಕೊಂಡರು.

ಮುಂದೆ ಆ ಕಂಪನಿ ಮುಚ್ಚಿದ್ದರಿಂದ ಇನ್ನೊಂದು ಖ್ಯಾತ ಕಂಪನಿಯಾದ ಗದುಗಿನ ವಾಣಿವಿಲಾಸ ನಾಟಕ ಕಂಪನಿಗೆ ಸೇರಿಕೊಂಡರು. ಈ ಕಂಪನಿಯಲ್ಲಿ ಕೆಲಸ ಮಾಡುತ್ತಲೇ "ವರಪ್ರದಾನ", "ಅಕ್ಷಯಾಂಭರ" ಮುಂತಾದ ನಾಟಕಗಳನ್ನು ಬರೆದರು. ಅಲ್ಲದೇ ಅವರಿಗೆ ಖ್ಯಾತ ಗಾಯಕ ಮಲ್ಲಿಕಾರ್ಜುನ ಮನ್ಸೂರ್ ಮತ್ತು ಖ್ಯಾತ ನಟ ಹಂದಿಗನೂರು ಸಿದ್ರಾಮಪ್ಪ ಅವರ ಒಡನಾಟ ದೊರೆಯಿತು. ಈ ಕಂಪನಿಯೂ ಚೆನ್ನಾಗಿ ನಡೆಯಲಿಲ್ಲ.

Shakespear of Karnataka Kandagal Hanumantha Rao

ಕೊನೆಗೆ ತಾವೇ ಭಾಗ್ಯೋದಯ ನಾಟಕ ಆರಂಭಿಸಿ, "ಜ್ವಾಲೆ", "ಬಡತನದ ಭೂತ" ಎಂಬ ಸಾಮಾಜಿಕ ನಾಟಕಗಳಲ್ಲದೇ "ರಕ್ತ ರಾತ್ರಿ" ಎಂಬ ಐತಿಹಾಸಿಕ ನಾಟಕವನ್ನು ಬರೆದರು. ಈ ನಾಟಕ ಅವರಿಗೆ ಬಹಳ ಖ್ಯಾತಿ ತಂದು ಕೊಟ್ಟಿತು. ಆದರೆ ಅವರ ಕಂಪನಿಯೂ ಬಹಳ ಕಾಲ ನಡೆಯಲಿಲ್ಲ. ಮತ್ತೆ ಕೆಲವು ಬಾರಿ ಸಾಲಸೋಲ ಮಾಡಿ ನಾಟಕ ಕಂಪನಿಗಳನ್ನು ಕಟ್ಟಿ ಹಣ ಕಳೆದುಕೊಂಡು ಸೋತು ಸುಣ್ಣವಾದರು. ಅನೇಕ ಸುಪ್ರಸಿದ್ಧ ನಾಟಕಗಳನ್ನು ರಚಿಸಿಯೂ ಈ ಕಲಾವಿದ ತಮ್ಮ ಕೊನೆಯ ದಿನಗಳಲ್ಲಿ ದೀರ್ಘ ಬಡತನ ಅನುಭವಿಸಿ ಮೇ 5, 1966ರಲ್ಲಿ ತೀರಿಕೊಂಡರು.

ಅಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಜನ ಅವರಿಗೆ ಕರ್ನಾಟಕದ ಶೇಕ್ಸ್ ಪಿಯರ್ ಎಂಬ ಬಿರುದು ಕೊಟ್ಟು ಅವರನ್ನು ಖ್ಯಾತಿಯ ಎತ್ತರಕ್ಕೆ ಕರೆದೊಯ್ದರೂ, ಇಂದು ಕಂದಗಲ್ ಹನುಮಂತರಾಯರ ಬಗ್ಗೆ ಬಹುತೇಕ ಜನರಿಗೆ ಗೊತ್ತೇ ಇಲ್ಲ. ಬದುಕಿನ ವಿಡಂಬನೆ ಎಂದರೆ ಇದೇ ಅಲ್ಲವೇ? ಅದೇನು ಶಾಪವೋ ಗೊತ್ತಿಲ್ಲ. ಉತ್ತರ ಕರ್ನಾಟಕದ ಸಾಹಿತಿಗಳು, ಪಂಡಿತರು, ಸಂಗೀತಕಾರರಿಗೆ ತಮ್ಮ ನಾಡಿನಲ್ಲಿಯೇ ಬೆಲೆಯಿಲ್ಲ. ತಮ್ಮ ಭಾಗದ ಸಾಹಿತಿಗಳನ್ನು ಜಾತಿ ಮತ ಭೇದವಿಲ್ಲದೇ ಉನ್ನತ ಸ್ಥಾನಮಾನಗಳನ್ನು ಕೊಟ್ಟು ಪೂಜಿಸುವ ಬೆಂಗಳೂರು ಮತ್ತು ಮೈಸೂರು ಪ್ರಾಂತ್ಯಗಳಿಗೆ ಹೋಲಿಸಿದಾಗ ಉತ್ತರದ ಸಾಹಿತಿ, ಪಂಡಿತರುಗಳಿಗೆ ದೊರೆತ ಸ್ಥಾನಮಾನಗಳು ಕಮ್ಮಿಯೇ.

ಕನ್ನಡದ ಏಳಿಗೆಗೆ ಹೋರಾಡಿದ ಬಿ ಎಮ್ ಶ್ರೀಕಂಠಯ್ಯನವರನ್ನು ಮೈಸೂರು ಪ್ರಾಂತ್ಯದ ಜನ ಇಂದಿಗೂ ಕನ್ನಡದ ಕಣ್ವ ಎಂದು ಪ್ರೀತಿಯಿಂದ ನೆನೆಸಿಕೊಂಡರೆ, ಅದೇ ರೀತಿಯಾಗಿ ಉತ್ತರ ಕರ್ನಾಟಕದಲ್ಲಿ ಕನ್ನಡವನ್ನು ಬೆಳೆಸಿ, ಕರ್ನಾಟಕದ ಏಕೀಕರಣಕ್ಕೂ ಹೋರಾಡಿ ಕನ್ನಡದ ಕುಲಪುರೋಹಿತರೆನಿಸಿದ ಆಲೂರು ವೆಂಕಟರಾಯರನ್ನು ನಮ್ಮ ಜನ ಬಹುತೇಕ ಮರೆತೇ ಹೋಗಿದ್ದಾರೆ. ಅದೆಂದು ನಮ್ಮ ಜನ ತಮ್ಮ ಶ್ರೇಷ್ಠ ಸಾಹಿತಿಗಳು ಮತ್ತು ಕಲಾವಿದರನ್ನು ನೆನೆಸಿಕೊಂಡು ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತಾರೋ ತಿಳಿಯದು.

ಅಂದ ಹಾಗೆ ನಾನು ಕೂಡ ಕಂದಗಲ್ ವಂಶದವನೇ. ಕಂದಗಲ್ ಹನುಮಂತರಾಯರು ನಮ್ಮ ಮುತ್ತಜ್ಜನ ಕಸಿನ್. ಆದರೆ ಅವರ ಬಗ್ಗೆ ನನಗೂ ಬಹಳ ಗೊತ್ತಿರಲಿಲ್ಲ. ಬಹಳ ಹುಡುಕಿದಾಗ ನನ್ನ ತಂಗಿಯ ಹತ್ತಿರ ಅವರು ಬರೆದ ನಾಟಕದ ನಾಂದಿ ಪದ್ಯವೊಂದು ದೊರಕಿತು. ಅದು ಇಂತಿದೆ:

ವಾರಿನಿಧಿ ಶಯನ ನೀರಜಾಸನ
ವಂದಿತ ಪವಮಾನ ವಿನುತ |
ಮಥಿಸಿ ಕಡಲನು ಅತಿವಿಲಾಸದಿ
ಸುಜನರಿಗೆ ವಾರಸುಧೆಯನುಣಿಸಿದೆ
ಭಕ್ತ ಮಹಿಮನೆ ವಾರಿನಿಧಿ ಶಯನ ।।

ಚಿಕ್ಕ ಪದ್ಯದಲ್ಲಿ ಅವರು ಉಪಯೋಗಿಸಿದ ಶಬ್ದ ವೈಭವ ಅವರ ಪಾಂಡಿತ್ಯದ ಒಂದು ಝಲಕ್ ನೀಡುತ್ತದೆ ಅಲ್ಲವೇ? ಆದರೆ ಅವರು ಬರೆದ ರಕ್ತರಾತ್ರಿ ನಾಟಕ ಇಂದಿಗೂ ಅನೇಕ ನಾಟಕ ಮಂಡಳಿಗಳಲ್ಲಿ ಪ್ರದರ್ಶಿತವಾಗುತ್ತಿರುವುದು ಒಂದು ಸಮಾಧಾನಕರ ಸಂಗತಿ. ಬಿಜಾಪುರ ನಗರದಲ್ಲಿಯ ಒಂದು ದೊಡ್ಡ ಸಭಾಮಂದಿರಕ್ಕೆ ಅವರ ಹೆಸರು ಕೊಟ್ಟು ಗೌರವಿಸಿದ್ದು ಕೂಡ ಬಹಳ ಒಳ್ಳೆಯ ಸಂಗತಿ.

ನಾನು ಇಲ್ಲಿ ಬರೆದ ವಿಷಯಗಳು ನನಗೆ ದೊರೆತಿದ್ದು ಈ ಕೆಳಗಿನ ಅಂತರ್ಜಾಲ ತಾಣಗಳಲ್ಲಿ:
ಭೂಮಿಗೀತ

ಕಣಜ : ಅಂತರಜಾಲ ಕನ್ನಡ ಜ್ಞಾನಕೋಶ

English summary
Kandagal Hanumantha Rao is known as Shakespear of Karnataka. Hanumantha Rao from Bijapur (Vijayapura) never showed any interest in studies, but he was like an institution in the field of Kannada theatre. He wrote many plays, established many threatre groups, but unknown to many. Vasant Kulkarni pays tribute to the legendary artist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X