• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಂಕೇಶ್ವರದ ಆ ದಿನಗಳು

By ವಸಂತ ಕುಲಕರ್ಣಿ, ಸಿಂಗಪುರ
|

ಸಂಕೇಶ್ವರಕ್ಕೆ ಬಂದಿದ್ದು ಡಿಸೆಂಬರದ ಚಳಿಯಲ್ಲಿ. ಚಳಿಗಾಲದಲ್ಲಿ ಹಿರಣ್ಯಕೇಶಿ ನದಿಯಲ್ಲಿ ಮಂದವಾಗಿ ಪ್ರವಹಿಸುತ್ತಿದ್ದ ನೀರಿರುತ್ತಿತ್ತು. ನಸುಕಿನಲ್ಲಿ ಮಂಜು ಮುಸುಕಿರುತ್ತಿತ್ತು, ದಿನಗಳೆದಂತೆ ನಿಧಾನವಾಗಿ ಚಳಿ ಮಾಯವಾಗಿ ಬಿಸಿಲೇರಿದಂತೆ ಹಿರಣ್ಯಕೇಶಿಯ ಪಾತ್ರ ಸಣ್ಣದಾಗುತ್ತ ಹೋಗುವುದನ್ನು ಗಮನಿಸಿದೆವು.

ಮೊದಲ ಬಾರಿ ಪರೀಕ್ಷೆ ಮುಗಿದು ರಜಾದಿನಗಳು ಶುರುವಾಗುವಷ್ಟರಲ್ಲಿ ನದಿಯ ನೀರು ಪೂರ್ತಿಯಾಗಿ ಬತ್ತಿಬಿಟ್ಟಿತ್ತು. ನದಿಯಲ್ಲಿ ನೀರಿದ್ದಾಗ ಮಾತ್ರ ನಲ್ಲಿಯಲ್ಲಿ ನೀರು. ಮುಂದೆ ಇದು ಇಲ್ಲಿ ಸರ್ವೇ ಸಾಮಾನ್ಯ ಎಂದು ತಿಳಿಯಿತು. ಹೀಗಾಗಿ ನಾವು ಚಿಕ್ಕವರಿದ್ದಾಗ ಸಂಕೇಶ್ವರದಲ್ಲಿ ಫೆಬ್ರವರಿ ತಿಂಗಳಿನ ಮಧ್ಯದಿಂದ ಜೂನ್ ವರೆಗೂ ನಲ್ಲಿಯಲ್ಲಿ ನೀರೇ ಬರುತ್ತಿರಲಿಲ್ಲ. ನೀರಿನ ಅಭಾವ ಎಂದರೇನು ಮತ್ತು ನೀರು ಅದೆಷ್ಟು ಅಮೂಲ್ಯ ಎಂಬುದರ ಅರಿವು ನನಗಾಗತೊಡಗಿತು. ಈಗ ಹೇಗಿದೆಯೋ ಗೊತ್ತಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ನಮ್ಮ ರಜಾ ದಿನಗಳಲ್ಲಿ ನೀರು ತರುವ ಕೆಲಸವೇ ದೊಡ್ಡದಾಗಿಬಿಡುತ್ತಿತ್ತು. ಓಣಿಗೊಂದೋ ಎರಡೋ ಮನೆಗಳಲ್ಲಿ ಬಾವಿ ಇರುತ್ತಿತ್ತು. ಬಾವಿಯಲ್ಲಿಯ ಸೆಲೆಯಲ್ಲಿ ಸಣ್ಣಗೆ ನೀರು ಒಸರುತ್ತಿತ್ತು. ರಾತ್ರಿಯೆಲ್ಲ ನೀರು ಸಂಗ್ರಹಿಸಿ ಬೆಳಿಗ್ಗೆ ತಮ್ಮ ಮನೆಗೆ ನೀರು ತಂದುಕೊಂಡ ಮೇಲೆ ಆ ಮನೆಗಳ ಯಜಮಾನರು ತಮ್ಮ ಓಣಿಯ ಇತರ ಜನರಿಗೆ ಬಾವಿಯಿಂದ ನೀರು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತಿದ್ದರು. ಅಂತಹ ಮನೆಗಳಿಂದ ನಾವು ಐದಾರು ಕೊಡ ನೀರು ತರುತ್ತಿದ್ದೆವು. ಎಲ್ಲ ಮನೆಗಳಲ್ಲೂ ಇದೇ ಸಮಸ್ಯೆಯಾಗಿರುತ್ತಿದ್ದುದರಿಂದ ನಮಗೆ ಅದೊಂದು ಸಮಸ್ಯೆ ಎನಿಸುತ್ತಲೇ ಇರಲಿಲ್ಲ. ಜೀವನದ ಭಾಗವಾಗಿ ಹೋಗಿತ್ತು. ನಿಜ ಹೇಳಬೇಕೆಂದರೆ ಚಿಕ್ಕವರಾದ ನಮಗೆ ನೀರು ಹೊತ್ತು ತರುವುದು ಒಂದು ರೀತಿಯ ಮೋಜಿನ ಕೆಲಸವಾಗಿತ್ತು.

ಸಂಕೇಶ್ವರಕ್ಕೆ ಬಂದ ಹೊಸದರಲ್ಲಿ ಕಂಡ ಇನ್ನೊಂದು ಮಜವಾದ ವಿಷಯವೆಂದರೆ, ನದಿಗೆ ಹೋಗಿ ಒರತೆ ತೋಡುವುದು. ಬತ್ತಿದ ನದಿಯ ತಳದಲ್ಲಿ ಕೆಲವು ಸ್ಥಳಗಳಲ್ಲಿ ಮರಳನ್ನು ತೋಡಿ ಗುಂಡಿಮಾಡಿದರೆ ನೀರು ಒಸರುತ್ತಿತ್ತು. ಹಾಗೆ ಬಂದ ನೀರು ಕೆಸರಾಗಿರುತ್ತಿತ್ತು. ಆ ಕೆಸರು ನೀರನ್ನು ತೆಗೆದು ಹಾಕಿದಂತೆ ನೀರು ಸ್ವಚ್ಛವಾಗುತ್ತ ಬರುತ್ತಿತ್ತು. ಚಿಕ್ಕದೊಂದು ಲೋಟದಿಂದ ಈ ನೀರನ್ನು ನಾವು ನಮ್ಮ ಬಿಂದಿಗೆಗೆ ಹಾಕಿ ತುಂಬಿಕೊಳ್ಳುತ್ತಿದ್ದೆವು. ಭೂಮಿಯಿಂದ ನೀರು ಒಸರುವುದು ನನಗೊಂದು ಅದ್ಭುತವಾಗಿ ಕಾಣುತ್ತಿತ್ತು. ಅಲ್ಲದೇ ಮರಳಿನಲ್ಲಿ ಒರತೆಯನ್ನು ತೋಡುವುದು ನನಗೆ ಒಂದು ಚಿಕ್ಕಂದಿನ ಆಟವಾಗಿತ್ತು.

ಭಾವೋನ್ಮಾದದ ದೇಶಭಕ್ತಿ ವರ್ಸಸ್ ಅಭಿಮಾನ ಶೂನ್ಯತೆ

ಆದರೆ ನದಿಯಲ್ಲಿಯೇ ಸ್ವಲ್ಪ ದೂರದಲ್ಲಿ ದೊಡ್ಡದೊಂದು ಒರತೆ ತೋಡಿದ್ದರು. ಅದರಲ್ಲಿ ಬಾವಿಯಂತೆ ದೊಡ್ಡ ಸೆಲೆಯಿಂದ ನೀರು ತುಂಬುತ್ತಿತ್ತು. ಸಂಜೆ ಹೊತ್ತು ಮುಳುಗಿದ ಮೇಲೆ ಅಲ್ಲಿ ಹೋದರೆ ಜನರಿರುತ್ತಿರಲಿಲ್ಲ. ಹೀಗಾಗಿ ನಾನು ಮತ್ತು ನನ್ನ ಅಣ್ಣ, ತಂದೆ ಮತ್ತು ನಮ್ಮ ನೆರೆಯವರೊಂದಿಗೆ ರಾತ್ರಿಯಲ್ಲಿ ಟಾರ್ಚ್ ತೆಗೆದುಕೊಂಡು ಹೋಗುತ್ತಿದ್ದೆವು. ಊರಿನಲ್ಲಿ ಮಂದವಾಗಿ ಬೆಳಗುತ್ತಿದ್ದ ಬೀದಿ ದೀಪಗಳನ್ನು ದಾಟಿ ಬತ್ತಿದ ನದಿಯಲ್ಲಿಳಿದಾಗ ಸುತ್ತ ಮುತ್ತಲೂ ಕತ್ತಲೋ ಕತ್ತಲು. ನದಿಯಲ್ಲಿನ ಕಾಲುಹಾದಿಯನ್ನು ತಂದೆಯವರು ಹಿಡಿದ ಟಾರ್ಚ್ ಬೆಳಗುತ್ತಿದ್ದರೆ, ಮೇಲೆ ಆಕಾಶದಲ್ಲಿ ನಕ್ಷತ್ರಗಳು ತಮ್ಮ ನಸುನಗುವಿನ ಮಿಂಚನ್ನು ಚೆಲುವಾಗಿ ಚದುರುತ್ತಿದ್ದವು.

ನಾನು ಮತ್ತು ನನ್ನ ಅಣ್ಣ ದೊಡ್ಡ ಒರತೆಯಿಂದ ನೀರು ಮೇಲೆತ್ತಿ ಸೈಕಲ್ ಮೇಲೆ ಐದು ಬಿಂದಿಗೆ ನೀರು ಹೇರಿಕೊಂಡು ಬರುತ್ತಿದ್ದೆವು. ಆ ಐದು ಬಿಂದಿಗೆ ನೀರನ್ನು ನಮ್ಮ ದಿನ ಪೂರ್ತಿ ಬಳಕೆಗಾಗಿ ಉಪಯೋಗಿಸುತ್ತಿದ್ದೆವು. ಅಂದು ಆ ನೀರು ನಮಗೆ ಎಷ್ಟು ಅಮೂಲ್ಯವಾಗಿರುತ್ತಿತ್ತೋ, ಆ ನೀರು ತರುವ ಕ್ಷಣಗಳ ಸವಿ ನೆನಪು ನನಗೆ ಇಂದಿಗೂ ಅಷ್ಟೇ ಅಮೂಲ್ಯವಾಗಿದೆ. ಜೀವನದ ಹೋರಾಟದಲ್ಲಿ ಮನಸ್ಸನ್ನು ಸಕಾರಾತ್ಮಕವಾಗಿ ತೊಡಗಿಸಿಕೊಂಡರೆ ಕಷ್ಟದಲ್ಲೂ ಸುಖದ ಅಮೃತ ಘಳಿಗೆಗಳು ದೊರಕುತ್ತವೆ ಎಂಬುದಕ್ಕೆ ಸಂಕೇಶ್ವರದಲ್ಲಿನ ನನ್ನ ಬಾಲ್ಯವೇ ಸಾಕ್ಷಿ.

ಸಂಕೇಶ್ವರಕ್ಕೆ ಬಂದ ಹೊಸದರಲ್ಲಿ ಮಠ ಗಲ್ಲಿಯ ತೇರಣಿಕರ್ ಅವರ ಮನೆಯಲ್ಲಿದ್ದಾಗ ಅದೊಂದು ಬೇಸಿಗೆಯ ಸಂಜೆ ಮನೆಯಲ್ಲಿ ನೀರು ಮುಗಿದಿತ್ತು. ಮನೆಯಿಂದ ಚಿಕ್ಕ ಪುಟ್ಟ ಬಿಂದಿಗೆಗಳನ್ನು ತೆಗೆದುಕೊಂಡು ಸುಮಾರು ಅರ್ಧ ಕಿಲೋಮೀಟರ್ ನಡೆದು ನದಿಯಲ್ಲಿ ಇಳಿದು ಅಲ್ಲಿನ ಒರತೆಯಿಂದ ನೀರನ್ನು ತುಂಬಿಕೊಂಡು ಮನೆಗೆ ಬರುತ್ತಿದ್ದೆವು. ನನ್ನ ಕೈಯಲ್ಲಿ ಪುಟ್ಟದೊಂದು ಬಿಂದಿಗೆ ಇತ್ತು. ಹಾಗೆ ಬರುವಾಗ ನನ್ನ ಶಾಲಾ ಮಿತ್ರನೊಬ್ಬ ನನಗೆ ಕಾಣಿಸಿದ. ನಾವಿಬ್ಬರೂ ಮಾತನಾಡುತ್ತ ಬರುತ್ತಿರುವಾಗ ಕಾಲಿಗೆ ತುರಿಕೆಯಾಯಿತೇನೋ. ನಾನು ನನ್ನ ಬಿಂದಿಗೆಯನ್ನು ಅವನು ಕೈಗೆ ಕೊಟ್ಟೆ. ನಂತರ ಮತ್ತೆ ಬಿಂದಿಗೆಯನ್ನು ಕೈಗೆತ್ತಿಕೊಂಡಾಗ ಅಮ್ಮ ನನ್ನನ್ನು ಬಿರುಸಾಗಿ ನೋಡುತ್ತಿದ್ದುದು ಗಮನಕ್ಕೆ ಬಂದಿತು. ನನಗೇನೂ ತಿಳಿಯಲಿಲ್ಲ. ಹಾದಿಯ ನಡುವೆಯೇ ನನ್ನ ಮಿತ್ರ ಕೈ ಬೀಸಿ ತನ್ನ ಮನೆಯ ಹಾದಿಗೆ ತಿರುಗಿದ.

ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಸಂಕೇಶ್ವರದ ದಿನಗಳು

ನಂತರ ಕೆಲವೇ ನಿಮಿಷಗಳಲ್ಲಿ ನಮ್ಮ ಮನೆ ತಲುಪಿದಾಗ ಅಮ್ಮ ನನಗೆ ನಾನು ತಂದ ನೀರಿನಿಂದ ಕೈಕಾಲು ತೊಳೆದು ಮುಗಿಸಿಬಿಡಲು ಹೇಳಿದಳು. ಅಷ್ಟು ದೂರದಿಂದ ಹೀಗೆ ಹೊತ್ತು ತಂದ ನನಗೆ ಆ ನೀರನ್ನು ಈ ರೀತಿ ವ್ಯರ್ಥ ಮಾಡಲು ಮನಸ್ಸಾಗಲಿಲ್ಲ. ಏಕೆಂದು ಕೇಳಿದಾಗ ನನ್ನ ಅಮ್ಮ ಅದ್ಯಾವ ಕೆಳಜಾತಿಯವನನ್ನು ಮುಟ್ಟಿದೆಯೋ ಏನೋ? ಅಂತಹ ನೀರನ್ನು ಮನೆಯೊಳಗೆ ಹೇಗೆ ಉಪಯೋಗಿಸುವುದು ಎಂದು ಬೈದಳು. ಅಂದು ಮೊಟ್ಟ ಮೊದಲ ಬಾರಿಗೆ ನನ್ನ ಮನಸ್ಸಿನಲ್ಲಿ ಜಾತಿಯ ಬಗ್ಗೆ ತೀವ್ರ ತಿರಸ್ಕಾರ ಉಂಟಾಯಿತು.

ಆದರೆ ಯಾವಾಗಲೂ ಈ ಜಾತಿಯ ನಿಯಮದ ಪಾಲನೆ ಆಗುತ್ತಿರಲಿಲ್ಲ. ಕೆಳಜಾತಿಯವನಾದ ಜನಾರ್ಧನ ನಮ್ಮ ಮನೆಯವನೇ ಆಗಿ ಹೋಗಿದ್ದ. ಮನೆಗೆ ಕೆಲಸ ಮಾಡಲು ಬರುತ್ತಿದ್ದ ಆಶಮ್ಮನನ್ನು ಅಮ್ಮ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ನೆನಪಿದೆ. ಗಂಡ ಬಿಟ್ಟು ಹೋಗಿದ್ದ ನಾಲ್ಕು ಮಕ್ಕಳ ತಾಯಿಯಾದ ಅವಳಿಗೆ ಅಮ್ಮ ತನ್ನಿಂದಾದಷ್ಟು ಸಹಾಯ ಮಾಡುತ್ತಿದ್ದಳು. ಅಲ್ಲದೇ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣವಾಗತೊಡಗಿದಂತೆ ಯಾರು ನೀರು ತಂದು ಕೊಟ್ಟರೂ ಅಮ್ಮ ಮಾತಾಡದೇ ಮನೆಯೊಳಗೆ ತೆಗೆದುಕೊಳ್ಳತೊಡಗಿದಳು.

ಮಠ ಗಲ್ಲಿಯಲ್ಲಿ ಸುಮಾರು ಏಳೆಂಟು ತಿಂಗಳನ್ನು ಕಳೆದ ನಂತರ ನಮ್ಮ ತಂದೆ ಮನೆಯನ್ನು ಸಂಕೇಶ್ವರದ ಬಸವನ ಗಲ್ಲಿಗೆ ವರ್ಗಾಯಿಸಿದರು. ನಮ್ಮ ಈ ಹೊಸ ಮನೆ ಅಂಬಲಿಮಠ ಎಂಬ ದೊಡ್ಡ ಜಮೀನ್ದಾರ ಮನೆತನದ ಒಡೆತನದಲ್ಲಿದ್ದ ಮನೆಯಾಗಿತ್ತು. ಎರಡು ದೊಡ್ಡ ಕೋಣೆಗಳುಳ್ಳ ಈ ಮನೆ ಮಂಗಳೂರು ಹೆಂಚಿನ ಮನೆಯಾಗಿತ್ತು. ಮನೆಯ ಛತ್ತು ಬಹಳ ಮೇಲೆ ಇತ್ತು ಎಂಬ ನೆನಪು. ಮೊದಲು ಮನೆ ನೋಡಿದ ನಂತರ ಅಮ್ಮ ಈ ಮನೆ ಮನೆಯೋ ಅಥವಾ ಗೋಡೌನೋ ಎಂದಿದ್ದರು. ನಿಜಕ್ಕೂ ಆ ಮನೆ ಗೋಡೌನಾಗಿತ್ತಂತೆ. ಅಂಬಲಿಮಠ ಮನೆತನದ ಜಮೀನಿನಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ನಾವಿದ್ದ ಮನೆಯಲ್ಲಿ ಸಂಗ್ರಹಿಸಲಾಗುತ್ತಿತ್ತು.

ಯಶಸ್ಸಿನ ಬಗ್ಗೆ ಮಾತಾಡೋರೆ ಎಲ್ಲ, ಸೋಲಿನ ಬಗ್ಗೆ ಸೊಲ್ಲೇ ಇಲ್ಲ!

ಮನೆ ಮಹಡಿಯ ಮೇಲೆ ಇದ್ದು ನೀರಿನ ನಲ್ಲಿ ಕೆಳಗಿದ್ದುದರಿಂದ ಸಾಮಾನ್ಯ ದಿನಗಳಲ್ಲೇ ನೀರನ್ನು ತರುವುದು ಸ್ವಲ್ಪ ಕಷ್ಟವಾದ ಕೆಲಸವಾಗಿತ್ತು. ಅಂತಹುದರಲ್ಲಿ ಬಿಸಿಲು ಕಾಲದಲ್ಲಿ ದೂರದಿಂದ ನೀರು ತರುವುದು ಬಹಳ ಕಷ್ಟವಾದ ಕೆಲಸವಾಗಿತ್ತು. ಸಮೀಪದ ರೋಡು ಕೂಡ ಮನೆಯಿಂದ ಸುಮಾರು ಮೂವತ್ತು ಮೀಟರು ದೂರವಿತ್ತು. ಹೀಗಾಗಿ ಟ್ಯಾಂಕರು ಬಂದರೂ ನೀರನ್ನು ಮನೆಯವರೆಗೂ ತರುವದು ಸುಲಭದ ಮಾತಾಗಿರಲಿಲ್ಲ, ಅಲ್ಲದೇ ಕುಡಿಯುವ ನೀರನ್ನು ನಾವು ಹೆಚ್ಚು ಕಡಿಮೆ ಎರಡು ನೂರು ಮೀಟರು ದೂರದ ದುಂಡಗಿ ಎಂಬುವವರ ಮನೆಯ ಬಾವಿಯಿಂದ ತರುತ್ತಿದ್ದೆವು. ಆ ಮನೆಯ ಮಹಾಂತೇಶ ನನ್ನ ಶಾಲಾ ಮಿತ್ರನಾಗಿದ್ದ.

ಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣ

ಈ ಕೆಲಸದಲ್ಲಿ ಮೊದಲು ನಮಗೆ ನನ್ನ ತಂದೆಯ ಆಫೀಸಿನಲ್ಲಿ ಜವಾನರಾಗಿ ಕೆಲಸ ಮಾಡುತ್ತಿದ್ದ ಜನಾರ್ಧನ ಮತ್ತು ನಂತರದ ದಿನಗಳಲ್ಲಿ ಹುದ್ದಾರ ಎಂಬಾತ ನೆರವು ನೀಡುತ್ತಿದ್ದರು. ನನ್ನ ತಂದೆ ಎಂದರೆ ಅವರಿಗೆ ಬಹಳ ಪೂಜ್ಯ ಭಾವನೆ ಇತ್ತು. ತುಂಬಾ ಬಡವರಾದ ಅವರಿಗೆ ಅನೇಕ ಬಾರಿ ನನ್ನ ತಂದೆ ತಮ್ಮಿಂದಾದಷ್ಟು ನೆರವು ನೀಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೆ. ಆಫೀಸಿನಲ್ಲಿ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿದ್ದ ಅವರ ಕೆಲಸವನ್ನು ಕಾಯಂಗೊಳಿಸಲು ನನ್ನ ತಂದೆ ಬಹಳ ಪ್ರಯತ್ನ ಪಟ್ಟಿದ್ದು ನಮಗೆ ಗೊತ್ತಿತ್ತು.

ದುರದೃಷ್ಟವಶಾತ್ ಜನಾರ್ಧನನ ಕೆಲಸ ಕಾಯಂ ಆಗಲಿಲ್ಲ. ಆದರೆ ಹುದ್ದಾರ ಅವರ ಕೆಲಸ ಕಾಯಂ ಆಯಿತು. ಅಂದು ಅವರು ನಮ್ಮ ಮನೆಗೆ ಬಂದು ತಂದೆಯ ಕಾಲು ಮುಟ್ಟಿದ್ದನ್ನು ನೋಡಿ ಆನಂದ ಮತ್ತು ಅಭಿಮಾನಗಳೆರಡೂ ಉಕ್ಕಿದ್ದವು. ನೀರನ್ನು ಹೊತ್ತು ತಂದ ನಂತರ ಅಮ್ಮ ಮಾಡುತ್ತಿದ್ದ ಅವಲಕ್ಕಿ ಸೂಸಲಾ ಅಥವಾ ಚುರಮುರಿ ಸೂಸಲಾ ಅಥವಾ ಉಪ್ಪಿಟ್ಟು ಮತ್ತು ಅದರ ಜೊತೆ ಬಿಸಿ ಬಿಸಿ ಚಹಾವನ್ನು ನಾವೆಲ್ಲ ಎಂದರೆ, ನಾನು, ಅಣ್ಣ, ತಂದೆ ಮತ್ತು ಜನಾರ್ಧನ ಅಥವಾ ಹುದ್ದಾರ ಬಹಳ ಆನಂದದಿಂದ ಸವಿಯುತ್ತಿದ್ದೆವು. ಹುದ್ದಾರ ಅವರಿಗಂತೂ ಉಪ್ಪಿಟ್ಟು ಎಂದರೆ ಎಲ್ಲಿಲ್ಲದ ಪ್ರೀತಿ.

ಬೇಸಿಗೆಯ ಸುಡುಬಿಸಿಲಿನಲ್ಲಿ ಅನೇಕ ಬಿಂದಿಗೆ ನೀರನ್ನು ಹೊತ್ತು ತಂದು ಅಟ್ಟದ ಮೇಲಿನ ಮನೆಗೇರಿಸಿದ ಕಷ್ಟವನ್ನು ಬಿಸಿ ಬಿಸಿ ನಾಶ್ಟಾ ಮತ್ತು ಚಹಾ ಮತ್ತು ಅದರೊಂದಿಗೆ ವಿನೋದವಾದ ಮಾತುಕತೆ ಮರೆಸಿ ಹಾಕಿ ಬಿಡುತ್ತಿತ್ತು. ಇಂದು ಎಲ್ಲಿ ನಲ್ಲಿಯನ್ನು ತಿರುಗಿಸಿದರೂ ನೀರು ಬರುವ ಸುಖ ಹಾಗೂ ಮನೆಯ ಮುಂದೆಯೇ ಯಾವಾಗ ಬೇಕಾದರೂ ಈಜುವ ಹಾಗೆ ಸ್ವಚ್ಛ ನೀರಿನ ಈಜುಕೊಳವನ್ನು ಹೊಂದಿದ್ದರೂ, ಸಂಕೇಶ್ವರದಲ್ಲಿನ ನೀರು ಹೊತ್ತು ತಂದ ನಂತರ ತಿನ್ನುವ ತಿಂಡಿ ಮತ್ತು ಅಂದಿನ ಆ ಮುಗ್ಧ ಮಾತುಕತೆಗಳ ಸುಖದ ಮುಂದೆ ಇಂದಿನ ಸಕಲೈಶ್ವರ್ಯಗಳು ಕೊಡುವ ಸುಖ ತೃಣ ಸಮಾನ.

English summary
Sankeshwar days taught the importance of every drop of water. We would struggle to bring water from river, well during summer, recalls Vasant Kulkarni, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X