• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣ

By ವಸಂತ ಕುಲಕರ್ಣಿ, ಸಿಂಗಪುರ
|

ನನ್ನ ಮೊಟ್ಟ ಮೊದಲ ಭಾಷಣ ಮಾಡಿದ್ದು ನಾನು ಐದನೆಯ ತರಗತಿಯಲ್ಲಿ ಎಂದು ನೆನಪು. ಅದಾಗಿದ್ದು ಸಂಕೇಶ್ವರದ ಬ್ರಾಹ್ಮಣ ಸಮಾಜ ಏರ್ಪಡಿಸಿದ ಸ್ಪರ್ಧೆಯೊಂದರಲ್ಲಿ. ಆಗ ಸಂಕೇಶ್ವರದಲ್ಲಿ ಬ್ರಾಹ್ಮಣ ಸಭೆ ಬಹಳ ಸಕ್ರಿಯವಾಗಿತ್ತು. ಸಂಕೇಶ್ವರದ ಬ್ರಾಹ್ಮಣ ಸಮಾಜದಲ್ಲಿ ಬಹುತೇಕ ಎಲ್ಲರೂ ಮರಾಠಿ ಭಾಷಿಕರೇ. ನನಗೆ ಗೊತ್ತಿರುವ ಮಟ್ಟಿಗೆ ಕೆಲವೇ ಕನ್ನಡಿಗ ಕುಟುಂಬಗಳ ಪೈಕಿ ನಮ್ಮದೂ ಒಂದು. ಅಲ್ಲದೇ ಕೆಲವು ಕುಟುಂಬಗಳು ಕನ್ನಡ ಮರಾಠಿ ಮಿಶ್ರ ಕುಟುಂಬಗಳು. ಬೆಳಗಾವಿ ಜಿಲ್ಲೆಯಲ್ಲಿ ಇಂತಹ ಮಿಶ್ರ ಕುಟುಂಬಗಳು ಸರ್ವೇ ಸಾಮಾನ್ಯ.

ತಂದೆ ಸಂಕೇಶ್ವರಕ್ಕೆ ವರ್ಗವಾಗಿ ಬಂದ ಮೇಲೆ ಅಲ್ಲಿನ ಸಮಾಜದ ಮುಖ್ಯಸ್ಥರ ಪರಿಚಯವಾಗಿ ಅವರ ಆಗ್ರಹದ ಮೇಲೆ ಅದರ ಸದಸ್ಯತ್ವ ಪಡೆದುಕೊಂಡರು. ನಮ್ಮೆಲ್ಲರನ್ನೂ ಕರೆತಂದ ಮೇಲೆ ನಾವೆಲ್ಲ ಅದರ ಚಟುವಟಿಕೆಗಳಲ್ಲಿ ಭಾಗವಹಿಸಲು ಆರಂಭಿಸಿದೆವು. ಶಂಕರ ಮಠದ ಮುಖ್ಯ ಕೇಂದ್ರವಾಗಿದ್ದ ಸಂಕೇಶ್ವರದಲ್ಲಿ ಬ್ರಾಹ್ಮಣ ಸಮಾಜ ಅನೇಕ ಚಟುವಟಿಕೆಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿತ್ತು. ಲೋಕಮಾನ್ಯ ಟಿಳಕರ ಜನ್ಮದಿನ, ಗೀತಾ ಜಯಂತಿ ಇತ್ಯಾದಿಗಳು ನನಗೆ ಸ್ಪಷ್ಟವಾಗಿ ನೆನಪಿನಲ್ಲಿ ಉಳಿದಿವೆ. ಅಲ್ಲಿನ ಉತ್ಸಾಹಿ ಯುವಕರ ತಂಡ ಅನೇಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸುತ್ತಿತ್ತು.

ಹರಗಾಪುರ ಹಳ್ಳಿ ಸಹಪಾಠಿಗಳಾದ ಕಾಂಬಳ್ಯಾ ಕಣಕಣ್ಯಾ ಲೋಹ್ಯಾ

ಗೀತಾ ಜಯಂತಿಯ ಅಂಗವಾಗಿ ಗೀತಾ ಶ್ಲೋಕ ಪಠಣ ಸ್ಪರ್ಧೆಗಳು ನಡೆಯುತ್ತಿದ್ದವು. ಹತ್ತು ಹನ್ನೊಂದು ವರ್ಷಗಳ ಬಾಲಕರಿಗೆ ಭಗವದ್ಗೀತೆಯ ಒಂದೊಂದು ಪೂರ್ತಿ ಅಧ್ಯಾಯ ಕಂಠಪಾಠ ಮಾಡಿ ಸ್ಪರ್ಧೆಯಲ್ಲಿ ಪಠಿಸಬೇಕಾಗಿತ್ತು. ಯಾರು ದಿಟ್ಟತನದಿಂದ, ಸ್ಪಷ್ಟ ಉಚ್ಛಾರ ಮಾಡಿ, ತಪ್ಪಿಲ್ಲದೇ ಪಠಿಸುವರೋ ಅವರಿಗೆ ಪಾರಿತೋಷಕ ಸಿಗುತ್ತಿತ್ತು. ನಾವು ಅಲ್ಲಿ ಇದ್ದ ಮೂರು ವರ್ಷಗಳಲ್ಲಿ ಹನ್ನೆರಡನೆಯ ಅಧ್ಯಾಯ, ಹದಿಮೂರನೆಯ ಅಧ್ಯಾಯ ಹಾಗೂ ಹದಿನೈದನೆಯ ಅಧ್ಯಾಯಗಳ ಪಠಣ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಅದೊಂದು ವರ್ಷದ ಸ್ಪರ್ಧೆಯಲ್ಲಿ ಪಠಣ ಮಾಡುವಾಗ ನಾನು ಕೆಲವೆಡೆ ಶ್ಲೋಕವನ್ನು ಮರೆತು ತಡವರಿಸಿದೆ. ಆರಂಭದಲ್ಲೊಮ್ಮೆ ತಡವರಿಸಿದಾಗ ನನ್ನ ಆತ್ಮವಿಶ್ವಾಸ ಮತ್ತು ಉತ್ಸಾಹ ಅಡಗಿ ಹೋಯಿತು. ಮುಂದೆ ಕೂಡ ಕೆಲವು ಕಡೆ ಹಾಗೆ ಆಯಿತು. ಕೊನೆಗೂ ಪಠಣ ಮುಗಿದಾಗ ನನಗೆ ಬಿಡುಗಡೆ ಸಿಕ್ಕಂತಾಗಿ ನಿಟ್ಟುಸಿರು ಬಿಟ್ಟೆ. ನಿರೀಕ್ಷೆಯಂತೆ ನನಗೆ ಯಾವ ಬಹುಮಾನವೂ ದೊರಕಲಿಲ್ಲ. ನನ್ನ ಅಣ್ಣ ಮತ್ತು ತಂಗಿಗೆ ಆ ವರ್ಷ ಬಹುಮಾನ ಬಂದಿತ್ತು. ಹೀಗಾಗಿ ನನಗೆ ಅವಮಾನ ಎನಿಸಿತ್ತು.

ಹೀಗಾಗಿ ಮುಂದಿನ ವರ್ಷ ನಾನು ಬಹಳ ಪರಿಶ್ರಮಪಟ್ಟೆ. ದಿನದಲ್ಲಿ ಅನೇಕ ಬಾರಿ ಶ್ಲೋಕಗಳನ್ನು ಪಠಿಸಿ ಕಂಠಪಾಠ ಮಾಡಿಕೊಳ್ಳುತ್ತಿದ್ದೆ. ಹಿಂದಿನ ವರ್ಷದ ಹಾಗೆ ಪಠಣ ಸ್ಪರ್ಧೆ ನಡೆದಾಗ ತಡವರಿಸಿ ನಿಲ್ಲುವದನ್ನು ಹೇಗಾದರೂ ತಪ್ಪಿಸಿ ಅಸ್ಖಲಿತವಾಗಿ ಪಠಿಸುವುದು ನನ್ನ ಗುರಿಯಾಗಿತ್ತು. ಈ ಬಾರಿ ಪಠಣವನ್ನು ತಪ್ಪಿಲ್ಲದೇ ಕಲಿಯುವುದರಲ್ಲಿ ನಾನು ಅದೆಷ್ಟು ಮಗ್ನನಾಗಿದ್ದೆನೆಂದರೆ ರಾತ್ರಿ ಮಲಗಿದಾಗ ನಿದ್ರೆಯಲ್ಲಿ ಕೂಡ ಕೆಲವು ಬಾರಿ ಶ್ಲೋಕಗಳನ್ನು ಪಠಿಸುತ್ತಿದ್ದೆ ಎಂದು ನನ್ನ ತಾಯಿ ಹೇಳಿ ನಗಾಡುತ್ತಿದ್ದರು. ಕೊನೆಗೂ ಸ್ಪರ್ಧೆಯ ದಿನ ಬಂದಿತು. ಸತತ ಪ್ರಯತ್ನ ಮಾಡಿ ಕಲಿತಿದ್ದ ನಾನು ತುಂಬು ಆತ್ಮವಿಶ್ವಾಸದಿಂದಿದ್ದೆ, ನನ್ನ ಬಾರಿ ಬಂದಾಗ ಕೊಂಚವೂ ತಪ್ಪಿಲ್ಲದೇ, ತಡವರಿಸದೇ ಸ್ಪಷ್ಟವಾಗಿ ಪಠಣವನ್ನು ಮಾಡಿದೆ. ನನಗೆ ಪ್ರಥಮ ಬಹುಮಾನ ಬಂದಿತು!

'ಬಾರಿಸು ಕನ್ನಡ ಡಿಂಡಿಮವ' ಕವನದ ಸಾಲುಗಳಲ್ಲಿನ ಪದಲಾಲಿತ್ಯ

ಭಗವದ್ಗೀತೆಯ ಹದಿನೈದನೆಯ ಅಧ್ಯಾಯ "ಊರ್ಧ್ವ ಮೂಲಮಧಶಾಖಂ ಅಶ್ವಥ್ಥಂ ಪ್ರಾಹುರವ್ಯಯಂ" ಎಂದು ಶುರುವಾಗುವ ಈ ಆಧ್ಯಾಯದ ಅನೇಕ ಶ್ಲೋಕಗಳು ನನಗೆ ಇನ್ನೂ ನೆನಪಿವೆ. ಈ ಪ್ರಕರಣ ನನಗೆ ಒಂದು ವಿಷಯವನ್ನು ಮನದಟ್ಟು ಮಾಡಿಕೊಟ್ಟಿತು. ಏನೇ ಮಾಡಿದರೂ ಹೃದಯಪೂರ್ವಕವಾಗಿ ಮನಸ್ಸಿಟ್ಟು ಮಾಡಿದರೆ ಯಶಸ್ಸು ಖಂಡಿತ ದೊರಕುತ್ತದೆ. ಸತತ ಪ್ರಯತ್ನ ಮಾತ್ರ ಯಶಸ್ಸಿನ ಮಾರ್ಗಕ್ಕೆ ಕರೆದೊಯ್ಯಬಲ್ಲದು ಎಂಬ ವಿಷಯ ನನ್ನ ಈ ಪ್ರಯತ್ನದಿಂದ ನನಗೇ ಸ್ಪಷ್ಟವಾಯಿತು. ಮುಂದಿನ ಜೀವನದಲ್ಲಿ ಕೂಡ ನಾನು ಯಾವಾಗ ಪೂರ್ಣ ಶ್ರದ್ಧೆಯಿಂದ ನನ್ನನ್ನು ನಾನು ತೊಡಗಿಸಿಕೊಂಡೆನೋ ಆವಾಗ ನನಗೆ ನಿರೀಕ್ಷಿತ ಯಶಸ್ಸು ದೊರಕಿದರೆ, ಎಲ್ಲಿ ನನ್ನ ಪ್ರಯತ್ನದಲ್ಲಿ ಕಡಿಮೆಯಿತ್ತೋ ನನಗೆ ನಿರೀಕ್ಷಿತ ಯಶಸ್ಸು ದೊರಕಲಿಲ್ಲ.

ಅಂದಿನ ದಿನಗಳಲ್ಲಿ ಏರ್ಪಾಡಾಗುತ್ತಿದ್ದ ಇನ್ನೊಂದು ಮುಖ್ಯ ಕಾರ್ಯಕ್ರಮವೆಂದರೆ, ಲೋಕಮಾನ್ಯ ತಿಲಕರ ಜಯಂತಿಯ ನಿಮಿತ್ತವಾಗಿ ಅವರ ಜೀವನ ಮತ್ತು ಸಾಧನೆಗಳನ್ನು ಕುರಿತ ಭಾಷಣ ಸ್ಪರ್ಧೆ. ಭಾಷಣವನ್ನು ನನ್ನ ತಂದೆ ನಮಗೆ ಬರೆದು ಕೊಡುತ್ತಿದ್ದರು. ನಾವು ಅದನ್ನು ಕಂಠಪಾಠ ಮಾಡಿ ಸ್ಪರ್ಧೆಯಲ್ಲಿ ಹೇಳುತ್ತಿದ್ದೆವು. ಕಂಠಪಾಠ ಮಾಡುತ್ತಿದ್ದರೂ ಕನ್ನಡ ಭಾಷೆಯಲ್ಲಿಯೇ ಇರುತ್ತಿದ್ದುದರಿಂದ ನಮಗೆ ಎಲ್ಲವೂ ಅರ್ಥವಾಗುತ್ತಿತ್ತು. ಹೀಗಾಗಿ ಲೋಕಮಾನ್ಯ ತಿಲಕರ ಬಾಲ್ಯ ಜೀವನ, ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಮಹತ್ವದ ಪಾತ್ರ ನಮಗೆ ಗೊತ್ತಾಗಿದ್ದು ಈ ಭಾಷಣಗಳ ಮೂಲಕವೇ. ಪಠ್ಯಕ್ರಮದಲ್ಲಿ ಅವರ ಬಗ್ಗೆ ಅಷ್ಟೊಂದು ಹೆಚ್ಚು ಮಾಹಿತಿ ಇರಲಿಲ್ಲ. ಹೀಗಾಗಿ ತಂದೆ ಬೇರೆ ಬೇರೆ ಪುಸ್ತಕಗಳನ್ನು ಓದಿ ಅಲ್ಲಿಂದ ಕೆಲವು ಘಟನೆಗಳನ್ನು ಆರಿಸಿಕೊಂಡು ಭಾಷಣದ ಪ್ರತಿಯನ್ನು ತಯಾರು ಮಾಡುತ್ತಿದ್ದರು.

ಬೆಳಗಾವಿಯ 'ಭಜನ ಸಂಗೀತ ಚೂಡಾಮಣಿ' ಕಡ್ಲಾಸ್ಕರ್ ಬುವಾ

ಒಂದು ವರ್ಷ ನಾನು ನನ್ನ ನೆಚ್ಚಿನ ಟೀಚರ್ ಆದ ಗೋಡಖಿಂಡಿ ಟೀಚರ್ ಅವರಿಗೆ ತಿಲಕರ ಕುರಿತಾದ ಭಾಷಣವನ್ನು ಮಾಡುತ್ತಿದ್ದೇನೆ ಎಂದು ಹೇಳಿದೆ. ಅವರಿಗೇನನಿಸಿತೋ, ಕೇವಲ ಎರಡೇ ದಿನಗಳಲ್ಲಿ ನನಗಾಗಿ ಒಂದು ಭಾಷಣವನ್ನು ಸಿದ್ಧಪಡಿಸಿ ತಂದು ಕೊಟ್ಟರು. ನನಗೆ ಶಾಲೆಯಲ್ಲಿ ಎಲ್ಲರಿಗಿಂತ ಹೆಚ್ಚಿನ ಸಲಿಗೆ ಗೋಡಖಿಂಡಿ ಟೀಚರ್ ಅವರ ಜೊತೆ ಇತ್ತು. ಅವರು ಬಹಳ ಶಿಸ್ತಿನ ಟೀಚರ್ ಆಗಿದ್ದರು. ನಮ್ಮಲ್ಲಿ ಯಾರಾದರೂ ತಪ್ಪು ಮಾಡಿದರೆ ಅಥವಾ ಸರಿಯಾಗಿ ಹೋಮ್ ವರ್ಕ್ ಮಾಡದಿದ್ದರೆ ಯಾವ ಭೇದಭಾವ ಮಾಡದೇ ಶಿಕ್ಷಿಸುತ್ತಿದ್ದರು. ಏನೋ ಕಿಲಾಡಿಗಿರಿ ಮಾಡಿ ನಾನು ಕೂಡ ಅವರಿಂದ ಶಿಕ್ಷೆ ಪಡೆದಿದ್ದುಂಟು.

ಆದರೂ ಅವರಿಗೆ ನನ್ನ ಬಗ್ಗೆ ವಿಶೇಷ ಅಕ್ಕರೆ ಇತ್ತು ಎಂದು ನನ್ನ ಅನಿಸಿಕೆ. ಅವರು ಕಲಿಸುತ್ತಿದ್ದ ಇತಿಹಾಸ ಮತ್ತು ಭೂಗೋಳಗಳಲ್ಲಿ ಮೊದಲ ಕ್ರಮಾಂಕ ನನ್ನದೇ. ಇತರ ವಿದ್ಯಾರ್ಥಿಗಳಿಗೆ ಉದಾಹರಣೆಯಾಗಿ ತೋರಿಸಲು ನನ್ನದೇ ನೋಟುಬುಕ್ಕನ್ನು ಉಪಯೋಗಿಸುತ್ತಿದ್ದರು. ಶಾಲಾ ಚಟುವಟಿಕೆಗಳಲ್ಲದೇ ಇತರ ಚಟುವಟಿಕೆಗಳಲ್ಲಿ ನಾನು ಯಾವಾಗಲೂ ಮುಂದಿರುತ್ತಿದ್ದೆನಾದ್ದರಿಂದ ನನ್ನ ಬಗ್ಗೆ ಅವರಿಗೆ ವಿಶೇಷ ಮಮತೆ. ಹೀಗಾಗಿ ಅವರು ನನಗೆ ನನ್ನ ಟೀಚರಿಗಿಂತ ದೊಡ್ಡಕ್ಕನೇ ಆಗಿದ್ದರು ಅನಿಸುತ್ತದೆ.

ದಯಾಮಯನಾದ ದೇವರೇ, ಯಾಕೆ ನೀನು ಅಷ್ಟು ನಿಷ್ಕರುಣಿ?

ಗೋಡಖಿಂಡಿ ಟೀಚರ್ ಬರೆದ ಭಾಷಣವನ್ನು ತಂದು ನನ್ನ ತಂದೆಗೆ ತೋರಿಸಿದೆ. ಆ ಭಾಷಣದಲ್ಲಿ ಉಂಟಾಗಿದ್ದ ಕೆಲವು ಕಾಗುಣಿತದ ತಪ್ಪುಗಳನ್ನು ತಂದೆ ತೋರಿಸಿ ನಕ್ಕಾಗ ನನ್ನ ಮೆಚ್ಚಿನ ಟೀಚರ್ ಬಗ್ಗೆ ಹಾಗೆ ಅಂದಿದ್ದರಿಂದ ನನಗೆ ಸಿಟ್ಟು ಬಂದಿತ್ತು. ನಾನು ಅವರ ಬರಹವನ್ನು ಸಮರ್ಥಿಸಿಕೊಂಡಿದ್ದೆ. ಅದೇ ಸರಿ ಎಂದು ತಂದೆಯ ಜೊತೆ ವಾಗ್ವಿವಾದ ಮಾಡಿದ್ದೆ. ಕೊನೆಗೆ ನನ್ನ ತಂದೆ ನಮ್ಮ ಟೀಚರ್ ಬರೆದ ಭಾಷಣದಿಂದ ಕೆಲವು ವಿಷಯ ಆಯ್ದುಕೊಂಡು ತಮ್ಮದಿಷ್ಟು ವಿಷಯ ಸೇರಿಸಿ ಇನ್ನೊಂದು ಭಾಷಣ ಬರೆದರು. ಆ ಭಾಷಣವನ್ನು ಮತ್ತೆ ನಾನು ಟೀಚರಿಗೆ ತೋರಿಸಿದೆ. ಅವರಿಗೆ ಅಷ್ಟು ಇಷ್ಟವಾಗಲಿಲ್ಲ. ಹಾಗೆಂದು ನಾನು ತಂದೆಗೆ ಹೇಳಲಿಲ್ಲವಾದರೂ ಅವರ ಭಾಷಣದ ಇನ್ನೂ ಕೆಲವು ವಿಷಯಗಳನ್ನು ಸೇರಿಸಿ ಕೊನೆಗೆ ಸ್ಪರ್ಧೆಯಲ್ಲಿ ನಿರರ್ಗಳವಾಗಿ ಭಾಷಣ ಮಾಡಿದೆ. ನನಗೆ ಎರಡನೇ ಬಹುಮಾನ ಬಂದಿತು.

ಶಾಲೆಗೆ ಹೋದ ಮೇಲೆ ಓಡುತ್ತ ಹೋಗಿ ಎಲ್ಲರಿಗಿಂತ ಮೊದಲು ಗೋಡಖಿಂಡಿ ಟೀಚರಿಗೆ ತಿಳಿಸಿದೆ. ತಮ್ಮ ಮಗನೇ ಸ್ಪರ್ಧೆಯಲ್ಲಿ ಗೆದ್ದಷ್ಟು ಖುಷಿ ಪಟ್ಟರು. ಕ್ಲಾಸಿನಲ್ಲಿ ಹೇಳಿ ಎಲ್ಲರಿಂದ ಚಪ್ಪಾಳೆ ತಟ್ಟಿಸಿದರು. ಸ್ಟಾಫ್ ರೂಮಿನಲ್ಲಿ ಕೂಡ ನನ್ನ ಬಗ್ಗೆ ಹೇಳಿದ್ದರೆಂದು ಕಾಣುತ್ತದೆ. ಇನ್ನೂ ಕೆಲವು ಟೀಚರುಗಳು ನನಗೆ ಅಭಿನಂದನೆ ಹೇಳಿದಾಗ ನಾನು ಹೆಮ್ಮೆಯಿಂದ ಆಕಾಶದಲ್ಲಿ ತೇಲಾಡತೊಡಗಿದ್ದೆ.

ಇಂದಿಗೂ ಗೋಡಖಿಂಡಿ ಟೀಚರ್ ಅವರ ಅನನ್ಯ ಅಕ್ಕರೆ ಮನಸ್ಸಿನ ಮೂಲೆಯಲ್ಲಿ ಉಳಿದುಕೊಂಡಿದೆ. ಭಗವದ್ಗೀತಾ ಪಠಣ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳು ನನ್ನ ಆತ್ಮವಿಶ್ವಾಸ ಮತ್ತು ಸಾಮಾನ್ಯ ಜ್ಞಾನಗಳನ್ನು ಬೆಳೆಸಿದವು. ನನ್ನ ಪ್ರತಿಭೆಯ ಬಗ್ಗೆ ಮೊಟ್ಟ ಮೊದಲ ಬಾರಿಗೆ ನನಗೇ ನಂಬಿಕೆ ಉಂಟಾಗುವಂತೆ ಮಾಡಿದ ಗೋಡಖಿಂಡಿ ಟೀಚರ್ ಅವರು ಇಂದಿಗೂ ನನ್ನ ಮೆಚ್ಚಿನ ಟೀಚರುಗಳ ಪಟ್ಟಿಯಲ್ಲಿ ಮೊದಲಿಗರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sankeshwar Days part 6 : Vasant Kulkarni from Singapore remembers how he used to participate in Gita recitation and debate competitions and how they instilled confidence in him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more