• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಕೇಶ್ವರದ ದಿನಗಳು 10 : ಹೆಂಗಿದ್ದ ಜನಾರ್ಧನ ಹೆಂಗಾದ?

By ವಸಂತ ಕುಲಕರ್ಣಿ, ಸಿಂಗಪುರ
|

ಆಗ ತಾನೇ ನಾವು ನಮ್ಮ ಬೇಸಿಗೆ ರಜೆಯನ್ನು ನಮ್ಮ ಸೋದರತ್ತೆಯ ಊರಿನಲ್ಲಿ ಕಳೆದು ವಾಪಸ್ಸಾಗಿದ್ದೆವು. ತಂದೆಯವರು ಆಫೀಸಿಗೆ ಹೋಗಿ ಮನೆಗೆ ಬಂದಾಗ ಬಹಳ ಅಸಂತೋಷದಿಂದಿದ್ದರು. ಸ್ವಲ್ಪ ಹೊತ್ತಿನ ನಂತರ ನಮಗೆ ತಿಳಿದದ್ದೇನೆಂದರೆ ತಂದೆಯವರು ರಜೆಯ ಮೇಲಿದ್ದಾಗ ಆಫೀಸಿನಲ್ಲಿ ಕೆಲವು ಜನ ಸೇರಿಕೊಂಡು ತಾತ್ಕಾಲಿಕ ಕೆಲಸದಲ್ಲಿದ್ದ ಜನಾರ್ಧನನನ್ನು ಕೆಲಸದಿಂದ ಕಿತ್ತು ಹಾಕಿದ್ದರು.

ಊರಿನಿಂದ ಬಂದ ಮೇಲೆ ಅದೆಷ್ಟು ಪ್ರಯತ್ನಿಸಿದರೂ ಜನಾರ್ಧನನಿಗೆ ಮತ್ತೆ ಕೆಲಸವನ್ನು ಕೊಡಿಸಲಾಗಲಿಲ್ಲ. ಹೀಗಾಗಿ ತಂದೆ ಬಹಳ ನೊಂದಿದ್ದರು. ಈ ಸಮಾಚಾರ ತಿಳಿದ ಮೇಲೆ ನಮ್ಮೆಲ್ಲರಿಗೂ ಬಹಳ ನೋವಾಯಿತು. ಜನಾರ್ಧನ ನಮ್ಮ ತಂದೆಯವರ ವಿಶ್ವಾಸಿಗ. ಅದಲ್ಲದೇ ಮೇಲಿಂದ ಮೇಲೆ ನಮ್ಮ ಮನೆಗೆ ಬರುತ್ತ, ಕೊನೆಗೆ ನಮ್ಮ ಮನೆಯವನೇ ಆಗಿ ಹೋಗಿದ್ದ. ಇನ್ನು ಮುಂದೆ ಏನು ಎಂಬ ಪ್ರಶ್ನೆ ಅವನನ್ನೆಷ್ಟು ಕಾಡಿತ್ತೋ, ನಮ್ಮನ್ನು ಕೂಡ ಅಷ್ಟೇ ಕಾಡಿತ್ತು ಎಂದು ನನಗೆ ಈಗಲೂ ತೋರುತ್ತದೆ.

ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು!

ಸಂಕೇಶ್ವರದ ಬಸ್ ನಿಲ್ದಾಣದಲ್ಲಿ ಮೊದಲ ಬಾರಿ ಬಸ್ಸಿನಿಂದಿಳಿದಾಗ ನಾನು ಕಂಡಿದ್ದು ಜನಾರ್ಧನನನ್ನು. ಅದೇ ತಾನೇ ಸಂಕೇಶ್ವರಕ್ಕೆ ಬರುತ್ತಿದ್ದ ನಮ್ಮನ್ನು ಬರಮಾಡಿಕೊಳ್ಳಲು ಬಸ್ಸು ನಿಲ್ದಾಣಕ್ಕೆ ಬಂದಿದ್ದ. ಅವನನ್ನು ಅದೇ ಪ್ರಥಮಬಾರಿ ನೋಡುತ್ತಿದ್ದರೂ ನನಗೆ ಅದೇಕೋ ಅವನ ಮೇಲೆ ಬಹಳ ವಿಶ್ವಾಸ ಹುಟ್ಟಿತು. ಇನ್ನೂ ಒಂಬತ್ತು ವರ್ಷ ತುಂಬದ ನನಗೆ ಈ ಹೊಸ ಊರಿನಲ್ಲಿ ಅವನು ಹತ್ತಿರದ ಸಂಬಂಧಿಯಂತೆಯೇ ಕಂಡಿದ್ದ. ಮೊಟ್ಟ ಮೊದಲ ಬಾರಿಗೆ ನಾನು ಅವನನ್ನು ಮಾಮಾ ಎಂದೇ ಸಂಬೋಧಿಸಿದ್ದೆ. ನಮ್ಮ ಮನೆಯನ್ನು ಸಜ್ಜುಗೊಳಿಸಲು ನಮಗೆಲ್ಲ ನೆರವು ನೀಡಿದ್ದಲ್ಲದೇ ಮುಂದೆ ಕೂಡ ಮನೆಗೆ ಬಂದಾಗಲೆಲ್ಲ ಏನಾದರೂ ನೆರವು ನೀಡುತ್ತಿದ್ದ. ಹೊಸ ಊರಿಗೆ ನಾವು ಹೊಂದಿಕೊಳ್ಳಲು ಅವನ ಪಾತ್ರ ಅಮೂಲ್ಯವಾಗಿತ್ತು.

ನಮ್ಮ ಎಸ್ ಡಿ ಮಹಾವಿದ್ಯಾಲಯದ ಹಿಂದೆ ಕಾಣುತ್ತಿದ್ದ ಗುಡ್ಡದ ಮೇಲೆ ಅವನ ಊರು ಹರಗಾಪುರ. ಪಕ್ಕದಲ್ಲಿಯೇ ವಲ್ಲಭಗಡವಿದೆ. ವಲ್ಲಭಗಡವನ್ನು ಕಟ್ಟಿಸಿದ್ದು ಶಿವಾಜಿ ಮಹಾರಾಜರು. ಕೊಂಕಣ, ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ಪ್ರದೇಶಗಳನ್ನು ಗೆದ್ದು ತಮ್ಮ ಆಡಳಿತಕ್ಕೆ ಒಳಪಡಿಸಿದ ಶಿವಾಜಿ ಮಹಾರಾಜರು ಈ ಪ್ರದೇಶಗಳಲ್ಲಿ ತಮ್ಮ ಆಡಳಿತವನ್ನು ಸುಗಮವಾಗಿ ನಡೆಸಲು ಕಟ್ಟಿದ ಅನೇಕ ಕೋಟೆಗಳಲ್ಲಿ ವಲ್ಲಭಗಡವೂ ಒಂದು.

ಜನಾರ್ಧನನ ಮನೆಭಾಷೆ ಮರಾಠಿ. ಅವನ ತಂದೆ ಕೃಷಿಕರು. ತುಂಡು ಭೂಮಿ ಮತ್ತು ನಂಬಲನರ್ಹ ಮಳೆರಾಯನನ್ನು ನಂಬಿಕೊಂಡು ತಮ್ಮ ದೊಡ್ಡ ಕುಟುಂಬದ ನೊಗವನ್ನು ಹೊತ್ತಿದ್ದ ಅವರಿಗೆ ತಮ್ಮ ಹಿರಿಯ ಪುತ್ರ ಜನಾರ್ಧನನ ಮೇಲೆ ಬಹಳ ನಂಬಿಕೆ ಮತ್ತು ಪ್ರೀತಿಯಿತ್ತು. ಅವನನ್ನು ಆಫೀಸಿನಲ್ಲಿ ಕೆಲಸಕ್ಕಿಟ್ಟುಕೊಂಡ ತಂದೆಯವರನ್ನು ಅವರು ಬಹಳ ಗೌರವಾದರಗಳಿಂದ ನೋಡುತ್ತಿದ್ದರು.

ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಂಕೇಶ್ವರದ ಆ ದಿನಗಳು

ಬೇಸಿಗೆ ಕಾಲ ಬಂದಾಗ ಜನಾರ್ಧನ ಕೆಲವು ಬಾರಿ ನಮ್ಮ ಮನೆಗೆ ಬಂದು ನಮ್ಮ ಜೊತೆ ನೀರು ತರಲು ನಿಲ್ಲುತ್ತಿದ್ದ. ದೂರದ ಭಾವಿಗಳ ಆಳದಿಂದ ನೀರು ಎತ್ತಿ ಕೊಡುವುದು ಅವನ ಕೆಲಸವಾದರೆ, ನಾವು ಅಲ್ಲಿಂದ ನೀರು ಮನೆಗೆ ಹೊತ್ತು ತರುತ್ತಿದ್ದೆವು. ಗುಡ್ಡದ ಮೇಲಿನ ಹಳ್ಳಿಯಲ್ಲಿ ಹುಟ್ಟಿ ಬೆಳೆದು, ಕೃಷಿ ಕುಟುಂಬದವನಾದ ಅವನಿಗೆ ಕಷ್ಟದ ಜೀವನ ರೂಢಿಯಾಗಿತ್ತು. ಅಷ್ಟೆಲ್ಲ ಕೆಲಸ ಮಾಡಿದರೂ ದಣಿಯದ ಅವನ ದೇಹದಾರ್ಢ್ಯವನ್ನು ನೋಡಿ ನನಗೆ ಅಚ್ಚರಿಯಾಗುತ್ತಿತ್ತು. ಅವನು ಮಾಂಸ ತಿನ್ನುತ್ತಾನೆ, ಅದಕ್ಕೆ ಅವನು ಹೀಗೆ ದಣಿವಿಲ್ಲದೇ ಕೆಲಸ ಮಾಡಬಲ್ಲ ಎಂದು ನನ್ನ ಕೆಲವು ಗೆಳೆಯರು ನನಗೆ ಹೇಳಿದರು. ಮಾಂಸ ತಿನ್ನುವುದರಿಂದ ಇಂತಹ ದೇಹಬಲ ಬರುವುದಾದರೆ, ನಾವೇಕೆ ತಿನ್ನಬಾರದು ಎಂಬ ಪ್ರಶ್ನೆ ಮನಸ್ಸಿನಲ್ಲಿ ಹುಟ್ಟಿತು. ಆದರೆ ಮಾಂಸ ತಿನ್ನುವುದು ಪಾಪ ಎಂಬ ಮಾತನ್ನು ಚಿಕ್ಕಂದಿನಿಂದ ಕೇಳಿ ನಂಬಿಕೊಂಡು ಬೆಳೆದ ನನಗೆ ನನ್ನ ವಿಚಾರದ ಬಗ್ಗೆ ಬಹಳ ನಾಚಿಕೆಯಾಗುತ್ತಿತ್ತು.

ಹರಗಾಪುರದಲ್ಲಿ ದೇವಿಯ ಗುಡಿಯಿದೆ. ವರ್ಷಕ್ಕೊಮ್ಮೆ ಅಲ್ಲಿ ಜಾತ್ರೆ ನಡೆಯುತ್ತದೆ. ಜನಾರ್ಧನನಿಗೆ ನಮ್ಮನ್ನು ತನ್ನೂರಿನ ಜಾತ್ರೆಗೆ ಕರೆದೊಯ್ಯುವ ಆಸೆ. ಹೀಗಾಗಿ ನಾವು ದೇವಿಯ ಜಾತ್ರೆಗೆಂದು ಹರಗಾಪುರಕ್ಕೆ ಹೋದೆವು. ಅಲ್ಲಿ ದೇವಿಯ ದರ್ಶನ ಪಡೆದ ಮೇಲೆ ಜನಾರ್ಧನನ ಮನೆಯಲ್ಲಿ ನಮಗೆ ಊಟದ ವ್ಯವಸ್ಥೆ ಮಾಡಿದ್ದರು. ಪಡಸಾಲೆಯಲ್ಲಿ ಸಾಲಾಗಿ ಕುಳಿತು ಊಟ ಮಾಡಿ ಕೈತೊಳೆಯಲು ಎದ್ದು ಹಿತ್ತಲಿನ ಬಚ್ಚಲಿಗೆ ಬಂದು ನೋಡಿದ ನಮಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಆಗ ತಾನೇ ಕಡಿದ ಕುರಿಯೊಂದರ ಚರ್ಮವನ್ನು ಸುಲಿಯುತ್ತಿದ್ದರು! ಅಮ್ಮನಿಗೆ ಕೆಂಡದಂತಹ ಕೋಪ! ಆಗ ತಾನೆ ಕುರಿ ಕಡಿದ ಮನೆಯೊಂದರಲ್ಲಿ ಊಟ ಮಾಡಿದ್ದು, ವೈದಿಕ ಮನೆತನದಲ್ಲಿ ಹುಟ್ಟಿ ಬೆಳೆದ ಅಮ್ಮನ ಮಡಿವಂತ ಮನಸ್ಸಿಗೆ ಘಾಸಿ ಉಂಟು ಮಾಡಿತ್ತು.

ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಸಂಕೇಶ್ವರದ ದಿನಗಳು

ಅದಾದ ಮೇಲೆ ಒಂದು ದಿನ ಅಮ್ಮ ಜನಾರ್ಧನನನ್ನು ತರಾಟೆಗೆ ತೆಗೆದುಕೊಂಡಳು. "ನೀವು ವಾರಕರಿ ಜನ, ನಮ್ಮಂತೆ ವಿಠ್ಠಲನ ಭಕ್ತರು. ವಿಠ್ಠಲದೇವರ ಭಕ್ತರಾಗಿ ಅದು ಹೇಗೆ ಕುರಿ ಕಡಿಯುತ್ತೀರಿ?" ಎಂದೆಲ್ಲಾ ರೇಗಾಡಿದಳು. "ಅಕ್ಕ, ನಮ್ಮ ಮನೆಯಲ್ಲಿ ಜಾತ್ರೆಯ ದಿನ ಕುರಿ ಕಡಿಯುವ ಪದ್ಧತಿ ತಲೆಮಾರಿನಿಂದ ನಡೆದು ಬಂದಿದೆ. ಹಾಗೆ ಕುರಿ ಕಡಿಯದಿದ್ದರೆ, ದೇವಿ ಸಿಟ್ಟಿಗೆದ್ದು ಇಡೀ ಹರಗಾಪುರಕ್ಕೆ ಮಳೆ ಬರದ ಹಾಗೆ ಮಾಡುತ್ತಾಳೆ" ಎಂದು ಸಮಜಾಯಿಶಿ ಹೇಳಿದ ಜನಾರ್ಧನ. ಅಮ್ಮ ಸುಮ್ಮನಾದಳು. ಪ್ರಕೃತಿ ದೇವಿಯ ಸಿಟ್ಟನ್ನು ಕುರಿ ಪ್ರಸಾದ ನೀಡಿ ಇಳಿಸಬಹುದು ಎಂಬ ಮುಗ್ಧ ನಂಬಿಕೆ ಉಳ್ಳ ಮುಗ್ಧ ಜನರಿಗೆ ಏನು ಹೇಳುವುದು ಎಂದು ಅಮ್ಮ ಸುಮ್ಮನಾದಳೇನೋ?

ಅದೊಂದು ದಿನ ತಂದೆಯವರು ಬೆಳ್ಳಂಬೆಳಿಗ್ಗೆ ಎದ್ದು ತಯಾರಾದರು. "ಇಷ್ಟು ಬೇಗ ಎಲ್ಲಿ ಹೋಗುತ್ತಿದ್ದೀಯಾ ದಾದಾ?" ಎಂದು ಕೇಳಿದರೆ ಬಹಳ ಶಾಂತಿಯಿಂದ "ಇಂದು ಎಸ್ ಎಸ್ ಎಲ್ ಸಿಯ ಸಪ್ಲಿಮೆಂಟರಿ ಪರೀಕ್ಷೆ ಇದೆ. ಜನಾರ್ಧನ ಪರೀಕ್ಷೆ ಕೊಡುತ್ತಿದ್ದಾನೆ. ಅವನಿಗೆ ಸಹಾಯ ಮಾಡಲು ಹೋಗುತ್ತಿದ್ದೇನೆ" ಎಂದರು. "ಅವನು ಪರೀಕ್ಷೆ ಕೊಟ್ಟರೆ, ನಿನಗೇನು ಅಲ್ಲಿ ಕೆಲಸ?" ಎಂದು ಅಧಿಕಪ್ರಸಂಗದ ಮಾತನಾಡಿದೆ. ತಂದೆ ಶಾಂತಿಯಿಂದ "ಕಾಪಿ ಮಾಡಲು ಸಹಾಯ ಮಾಡುವ ವಿಚಾರವಿದೆ" ಎಂದರು. ತಮ್ಮ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಿಜಾಪುರ ನಗರಕ್ಕೇ ಪ್ರಥಮ ಕ್ರಮಾಂಕ ಪಡೆದ ತಂದೆಯವರು ಜನಾರ್ಧನನಿಗೆ ಕಾಪಿ ಕೊಡಲು ಹೋಗುತ್ತಿದ್ದುದನ್ನು ನೋಡಿ ಗಾಬರಿ ಮತ್ತು ಅಚ್ಚರಿಗಳೆರಡೂ ಆದವು. ಒಳಗೆ ಓಡಿ ಹೋಗಿ ಅಮ್ಮನಿಗೆ ಹೇಳಿದೆ.

ಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣ

"ಪಾಪ ಜನಾರ್ಧನ ಹಳ್ಳಿಯ ಹುಡುಗ. ಅವರ ಅಪ್ಪನೋ ಅನಕ್ಷರಸ್ಥರು. ಇವನು ಕೂಡ ಶಾಲೆ ಕಲಿತು ಮುಂದೆ ಬರಲಿಲ್ಲ. ಏಳನೆಯ ಇಯತ್ತೆಗೇ ಶಾಲೆ ಬಿಟ್ಟು ಬಿಟ್ಟ. ಎಸ್ ಎಸ್ ಎಲ್ ಸಿ ಪಾಸಾಗಿ ಬಿಟ್ಟರೆ ಒಳ್ಳೆ ಶಾಶ್ವತ ನೌಕರಿ ಸಿಕ್ಕು ಅವನ ಕುಟುಂಬದ ಪರಿಸ್ಥಿತಿ ಸುಧಾರಿಸುತ್ತದೆ. ಆದುದರಿಂದ ಅವನಿಗೆ ನೆರವು ನೀಡುತ್ತಿದ್ದೇನೆ" ಎಂದು ಹೇಳಿದ ನೆನಪು. ಅಲ್ಲಿಯವರೆಗೆ ಕೇವಲ ಶಕ್ತಿವಂತ, ಕೆಲಸವಂತ ಮತ್ತು ಸ್ನೇಹಜೀವಿಯಾಗಿ ಮಾತ್ರ ಕಾಣುತ್ತಿದ್ದ ಜನಾರ್ಧನನ ಕಷ್ಟಕರ ಜೀವನದ ವಾಸ್ತವ ಮುಖದ ಪರಿಚಯವಾಗಿ ನನಗೆ ಖೇದವೆನಿಸಿತು. ಆದರೆ ಜನಾರ್ಧನ ಪರೀಕ್ಷೆಯಲ್ಲಿ ಪಾಸಾಗಲಿಲ್ಲ. ಜನಾರ್ಧನನಿಗಿಂತ ತಂದೆಯವರಿಗೇ ಹೆಚ್ಚು ನೋವಾಯಿತು ಎಂದು ಕಂಡಿತು. "ಎಸ್ ಎಸ್ ಎಲ್ ಸಿ ಪಾಸಾಗಿದ್ದರೆ ಏನಾದರೂ ಮಾಡಿ ಈ ಹುಡುಗನ ನೌಕರಿಯನ್ನು ಪಕ್ಕಾ ಮಾಡಿಬಿಡಲು ಶಿಫಾರಸ್ಸು ಮಾಡಬಹುದಾಗಿತ್ತು" ಎಂದು ಒಂದೆರಡು ಬಾರಿ ಅಮ್ಮನ ಮುಂದೆ ಹಲುಬಿಕೊಂಡಿದ್ದು ಕೇಳಿಸಿತ್ತು.

ಇಂತಹ ಜನಾರ್ಧನನನ್ನು ತಂದೆಯ ಗೈರು ಹಾಜರಿಯಲ್ಲಿ ಸಂಚು ಮಾಡಿ ತೆಗೆದು ಹಾಕಿದ್ದರು ಅವರ ಆಫೀಸಿನ ಕೆಲವು ಜನ. ಆಫೀಸಿನ ಎಂಜಿನೀಯರ್ ಜೊತೆ ಹಳ್ಳಿಯ ಬಡ ಅವಿದ್ಯಾವಂತ ಹುಡುಗನ ಆತ್ಮೀಯತೆ ನೋಡಿ ಕರುಬಿ ಆ ಕೆಲಸ ಮಾಡಿದ್ದರೋ ಅಥವಾ ಜನಾರ್ಧನನ ಜೊತೆ ಅವರಿಗೆ ಯಾವುದೋ ವೈಯುಕ್ತಿಕ ಜಗಳವಿತ್ತೋ ನನಗೆ ತಿಳಿಯಲಿಲ್ಲ. ಅವನನ್ನು ಈ ರೀತಿಯಾಗಿ ಕಿತ್ತು ಹಾಕಿದ್ದಕ್ಕೆ ತಂದೆ ಕೂಡ ಬಹಳ ನೋವನ್ನನುಭವಿಸಿದರು. ಅಲ್ಲಿಂದ ಮುಂದೆ ಜನಾರ್ಧನ ಅದ್ಯಾರದೋ ಸಂಬಂಧಿಯ ಜೊತೆ ಗೋವಾಕ್ಕೆ ಕಟ್ಟಡದ ಕೆಲಸ ಮಾಡಲು ಹೊರಟು ಹೋಗಿದ್ದು ತಿಳಿಯಿತು. ಅವನ ಅಪ್ಪ ಅವನು ಹಾಗೆ ಹೋಗುವುದನ್ನು ಬಹಳ ವಿರೋಧಿಸಿದರೂ, ಜನಾರ್ಧನ ಕೇಳಲಿಲ್ಲವಂತೆ. ತಂದೆ ಕೂಡ ಅವನಿಗೆ ಮತ್ತೇನಾದರೂ ಕೆಲಸ ಕೊಡಿಸುವುದಾಗಿ ಹೇಳಿದರೂ, ಒಂದೇ ದಿನದಲ್ಲಿ ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಬಹಳೇ ನೊಂದಿದ್ದ ಹರೆಯದ ಯುವಕ ಹಟ ಹಿಡಿದು ಗೋವಾಕ್ಕೆ ಹೊರಟು ಹೋಗಿದ್ದ.

ಮುಂದೆ ನಾವು ಜನಾರ್ಧನನನ್ನು ನೋಡಿದ್ದು ಏಳೆಂಟು ವರ್ಷಗಳ ನಂತರವೇ. ಅಪ್ಪ ಅಂದು ಬೆಳಗ್ಗೆ ಜನಾರ್ಧನ ಬರುತ್ತಿದ್ದಾನೆ, ಇಲ್ಲಿಯೇ ಊಟ ಮಾಡಿಕೊಂಡು ಹೋಗಲಿ ಎಂದು ಅಮ್ಮನಿಗೆ ಹೇಳಿದರು. ನನಗೋ ಬಹಳ ಖುಶಿ. ಮಧ್ಯಾಹ್ನದ ಹೊತ್ತಿಗೆ ಜನಾರ್ಧನ ಬಂದ. ಹಾಗೆ ಬಂದ ಜನಾರ್ಧನ ನಾವು ಅಂದು ಕಂಡಿದ್ದ ಜನಾರ್ಧನನಿಗಿಂತ ಬಹಳ ಬೇರೆಯೇ ಆಗಿದ್ದ. ನಮ್ಮೊಂದಿಗೆ ಊಟ ಮುಗಿಸಿ ಅಪ್ಪನ ಹತ್ತಿರ ಬಹಳ ಹೊತ್ತು ಮಾತಾಡಿದ.

ನನಗೆ ಜನಾರ್ಧನನ ಬಾಯಿಂದ ಮದ್ಯದ ವಾಸನೆ ಬರುತ್ತಿದೆ ಎನಿಸಿತು. ಬಾಯಲ್ಲಿ ತಂಬಾಕು ಹಾಕಿ ಹಾಕಿ ತುಟಿ ಕಪ್ಪಗಾಗಿತ್ತು. ಅವನ ಮಾತಿನಲ್ಲಿ ಅಂದಿನ ಮುಗ್ಧತೆ ಇರಲಿಲ್ಲ, ಜನಾರ್ಧನ ಗೋವಾದಲ್ಲಿ ತಾನು ಕಟ್ಟಣ ನಿರ್ಮಾಣದ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡ. ಜನಾರ್ಧನ ಜೀವನದ ಜಂಜಡದಲ್ಲಿ ಪಳಗಿಹೋಗಿದ್ದನೋ ಮುಳುಗಿಹೋಗಿದ್ದನೋ ನನಗೆ ತಿಳಿಯಲಿಲ್ಲ. ಆದರೆ ಮದ್ಯ ಕುಡಿಯುವುದನ್ನು ಮತ್ತು ತಂಬಾಕು ಹಾಕುವುದನ್ನು ಕಲಿತ ಜನಾರ್ಧನನ ಈ ಹೊಸ ಅವತಾರ ಅಂದಿನ ನನ್ನ ಆದರ್ಶವಾದಿ ಮನಸ್ಸಿಗೆ ಸರಿ ಬರಲಿಲ್ಲ. ಆತನು ಹೋಗುವಾಗ ತಂದೆಯವರು ಅವನಿಗೆ ಹಳ್ಳಿಯಲ್ಲಿರುವ ತಂಗಿ ತಮ್ಮಂದಿರ ಬಗ್ಗೆ ಅವನ ಜವಾಬ್ಧಾರಿಯನ್ನು ನಯವಾಗಿ ನೆನಪಿಸಿ ಕೆಟ್ಟ ಚಟಗಳನ್ನು ಬಿಡುವಂತೆ ಹೇಳಿದರು. ತಲೆ ತಗ್ಗಿಸಿ "ಹೂಂ" ಎಂದು ಹೊರಟುಹೋದ.

ಇದಾಗಿ ಎರಡು ಮೂರು ವರ್ಷಗಳಾಗಿರಬಹುದು. ಅದೊಂದು ದಿನ ಜನಾರ್ಧನ ತೀರಿಕೊಂಡ ಎಂಬ ಸುದ್ದಿ ಬಂದಿತು. ನನಗೆ ಸಿಡಿಲು ಬಡಿದಂತಾಯಿತು. ತಂದೆ "ತಾವು ರಜೆಯಲ್ಲಿದ್ದಾಗ ಜನಾರ್ಧನನನ್ನು ನೌಕರಿಯಿಂದ ವಜಾ ಮಾಡಿರದಿದ್ದರೆ, ಹುಡುಗನ ಬದುಕು ಹೀಗಾಗುತ್ತಿರಲಿಲ್ಲ. ಎಂತಹ ದುರ್ದೈವ?" ಎಂದು ಅನೇಕ ಬಾರಿ ಹೇಳುತ್ತಾ ಕೊರಗಿದರು. ಕೆಲವು ದಿನಗಳವರೆಗೆ ಮನೆಯಲ್ಲಿ ದುಃಖ ಗೂಡುಗಟ್ಟಿತ್ತು. ಅವನ ಸಾವು, ನನ್ನ ಗುಳಂಬದ ಆಯಿಯ ಮರಣದ ನಂತರ ನಾನು ಎದುರಿಸಿದ ಅತಿ ದೊಡ್ಡ ಆಘಾತವಾಗಿತ್ತು. ಜನಾರ್ಧನನ ಅಕಾಲಿಕ ಮರಣ ನನ್ನನ್ನು ಇನ್ನೂ ಅನೇಕ ಬಾರಿ ಬಾಧಿಸುತ್ತದೆ, ಕಾಡಿಸುತ್ತದೆ. ಇಂದಿಗೂ ನಾನು ನನ್ನ ಕೆಲಸದ ನಿಮಿತ್ತವಾಗಿ ನಿರ್ಮಾಣದ ಸ್ಥಳಗಳ ಹತ್ತಿರ ಹೋದಾಗ ಅಲ್ಲಿ ಕೆಲಸ ಮಾಡುವ ಹರೆಯದ ಯುವಕರನ್ನು ನೋಡಿದಾಗ ನನಗೆ ಅವರ ಮುಖದಲ್ಲಿ ಜನಾರ್ಧನ ಕಾಣುತ್ತಾನೆ. ಊರಿನಲ್ಲಿ ಆ ಹುಡುಗರ ಮುದಿ ತಂದೆ ತಾಯಿ ಮತ್ತು ತಮ್ಮ ತಂಗಿಯರ ಮುಖಗಳನ್ನು ಕಲ್ಪಿಸಿಕೊಂಡು ನನ್ನ ಹೃದಯ ಮೌನವಾಗಿ ರೋದಿಸುತ್ತದೆ.

English summary
Sankeshwar Days part 10 : Why Janardhana was removed from job who was working on temporary basis? Why did the innocent young man go to Goa and why did he change so much? Vasant Kulkarni goes down the memory lane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more