ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕೇಶ್ವರದಲ್ಲಿ ನನ್ನಲ್ಲಿನ ಆಟಗಾರನನ್ನ ಬಡಿದೆಬ್ಬಿಸಿದ್ದ ಅಮ್ಮಣಗಿ ಸರ್

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನನಗೆ ಆಟದಲ್ಲಿ ಆಸಕ್ತಿಯೇನೋ ಇತ್ತು. ಆದರೆ ಪರಿಣಿತಿ ಇರಲಿಲ್ಲ. ಆರನೇ ತರಗತಿ ಎಂದು ನೆನಪಿದೆ. ನಮ್ಮ ಕ್ಲಾಸಿನ ಕೆಲವು ಹುಡುಗರು ಸೇರಿಕೊಂಡು ಕ್ರಿಕೆಟ್ಟಿನ ಟೀಮ್ ಒಂದನ್ನು ಮಾಡಿಕೊಂಡರು. ನನಗೂ ಅದರಲ್ಲಿ ಸೇರುವ ಆಸೆ. ಆದರೆ ಟೀಮಿನವರಿಗೆ ನನ್ನನ್ನು ಸೇರಿಸಿಕೊಳ್ಳಲು ಎಳ್ಳಷ್ಟೂ ಇಷ್ಟವಿರಲಿಲ್ಲ. ನನಗೆ ನೆನಪಿರುವ ಮಟ್ಟಿಗೆ ಆ ಟೀಮಿನ ಕ್ಯಾಪ್ಟನ್ ಪಾಟೀಲ್ ಎಂಬ ಹುಡುಗ. ಅವನು ಕೂಡ ನನ್ನ ಕ್ಲಾಸಿನವನೇ. ಆದರೆ ಅವನ ಜೊತೆ ನನಗೆ ಅಷ್ಟೊಂದು ಖಾಸಾ ಗೆಳೆತನ ಇರಲಿಲ್ಲ. ಅವನ ಹೆಸರು ನನಗೆ ನೆನಪಿಲ್ಲ. ಅವನು ಬಹಳ ಚೆನ್ನಾಗಿ ಕ್ರಿಕೆಟ್ ಆಡುತ್ತಿದ್ದ ಎಂಬ ನೆನಪು. ಅಷ್ಟೇ ಅಲ್ಲದೇ ಓದಿನಲ್ಲಿ ನನ್ನ ಪ್ರತಿಸ್ಪರ್ಧಿ ಸುಜಿತ್ ಕುಲಕರ್ಣಿ ಕೂಡ ಆ ಟೀಮಿನ ಪ್ರಮುಖ ಸದಸ್ಯನಾಗಿದ್ದುದು ನನಗೆ ಕಸಿವಿಸಿಯುಂಟಾಗಿತ್ತು. ಸುಜಿತ್ ಕುಲಕರ್ಣಿ ಕ್ರಿಕೆಟ್ ಟೀಮಿನಲ್ಲಿದ್ದರೆ ನಾನೇಕೆ ಇಲ್ಲ ಎಂಬುದು ನನಗೆ ಪ್ರತಿಷ್ಠೆಯ ವಿಷಯವಾಗಿತ್ತು.

ನಾನು ಒಬ್ಬ ಸಹಪಾಠಿ ಮಿತ್ರ, ಒಳ್ಳೆಯ ಆಟಗಾರ ಅಜಿತ್ ನೇಸರಿಯ ಮೂಲಕ ಟೀಮಿನ ಕ್ಯಾಪ್ಟನ್ ನಿಗೆ ನನ್ನ ಬಗ್ಗೆ ಶಿಫಾರಸ್ಸು ಮಾಡಿಸಿದೆ. ಆದರೆ ಟೀಮಿನ ಕ್ಯಾಪ್ಟನ್ ಶಿಫಾರಸ್ಸನ್ನು ನಿರ್ಲಕ್ಷಿಸಿದ. ನನಗೋ ಬಹಳ ಕೋಪ. ಬಿಜಾಪುರದಲ್ಲಿ ರಬ್ಬರ್ ಚೆಂಡಿನ ಮೂಲಕ ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಚಿಳ್ಳೆ ಮಿಳ್ಳೆಗಳ ತಂಡದ ಕ್ಯಾಪ್ಟನ್ ಆಗಿದ್ದ ನನ್ನನ್ನು ಆ ರೀತಿಯಾಗಿ ಅವಮಾನ ಮಾಡಿದ್ದು ನನಗೆ ಕೋಪ ಕೂಡ ತರಿಸಿತ್ತು.

ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ

ಬಿಜಾಪುರದ ಗಲ್ಲಿ ಕ್ರಿಕೆಟ್ಟಿನ ಚಿಕ್ಕ ಪಿಚ್ಚಿನಲ್ಲಿ, ಯಾರದೋ ಮನೆಯ ಗೋಡೆಯ ಮೇಲೆ ಸೀಮೆ ಸುಣ್ಣದಿಂದ ಸ್ಟಂಪುಗಳನ್ನು ಬರೆದು ವಿಕೆಟ್ ಮೂಡಿಸಿ, ನನಗೆ ಬೇಕಾದ ದುರ್ಬಲ ಬೌಲರುಗಳನ್ನು ಆರಿಸಿಕೊಂಡು ಸಿಕ್ಕಾಪಟ್ಟೆ ಚಚ್ಚುತ್ತಿದ್ದ ನನಗೆ ನನ್ನ ಕ್ರಿಕೆಟ್ ಸಾಮರ್ಥ್ಯದ ಮೇಲೆ ಬಹಳ ನಂಬಿಕೆ ಉಂಟಾಗಿತ್ತು. ಅಲ್ಲದೇ ನನ್ನ ಆಟವನ್ನು ಒಂದು ಬಾರಿಯೂ ಪರೀಕ್ಷಿಸದೇ ನನ್ನ ಅರ್ಜಿಯನ್ನು ತಳ್ಳಿಹಾಕಿದ್ದು ನನಗೆ ಅವಮಾನ ಎನಿಸಿತ್ತು.

Sankeshwar Days 14 : My inclination to become sports person

ಅವರೆಲ್ಲರಿಗೂ ನನ್ನ ಕ್ರಿಕೆಟ್ ಆಟದ ಸಾಮರ್ಥ್ಯದ ಪರಿಚಯ ಮಾಡಲೇಬೇಕು ಎಂಬ ತುಡಿತ ಶುರುವಾಗಿತ್ತು. ದಿನವೂ ದೂರದಿಂದ ಅವರಾಡುತ್ತಿದ್ದುದನ್ನು ನೋಡುತ್ತಿದ್ದೆ. ಅವರು ಕೂಡ ಶಾಲೆಯ ಹಿಂಬದಿಯ ಗೋಡೆಯಲ್ಲಿಯೇ ಸೀಮೆಸುಣ್ಣದಿಂದ ವಿಕೆಟ್ ಮೂಡಿಸಿದ್ದರು. ಆದರೆ ಅವರ ಪಿಚ್ಚು ತುಂಬಾ ದೊಡ್ಡದಿತ್ತು. ಅಲ್ಲದೇ ಚೆಂಡನ್ನು ತುಂಬಾ ವೇಗದಿಂದ ಎಸೆಯುತ್ತಿದ್ದರು ಎಂದೆನಿಸಿತ್ತು. ಅವರಾಗಲೇ ಮತ್ತೊಂದು ಕ್ಲಾಸಿನ ಟೀಮಿನೊಡನೆ ಕೆಲವು ಮ್ಯಾಚುಗಳನ್ನು ಆಡಿದ್ದರು. ಅದೇಕೋ ನನಗೆ ನಾನು ಕೂಡ ಚೆನ್ನಾಗಿಯೇ ಆಡಬಲ್ಲೆ ಎಂದೆನಿಸಿತ್ತು.

ಕೊನೆಗೆ ನಾನು ನನ್ನೆಲ್ಲ ಬಿಗುಮಾನವನ್ನು ಒತ್ತಿಟ್ಟು ನಮ್ಮ ಟೀಮಿನ ಕ್ಯಾಪ್ಟನ್ ಅದ ಪಾಟೀಲನೊಡನೆ ಮಾತನಾಡಿದೆ. ಅಂದುಕೊಂಡಂತೆ ಅವನಿಗೆ ನನ್ನ ಆಟದ ಸಾಮರ್ಥ್ಯದ ಬಗ್ಗೆ ಸ್ವಲ್ಪವೂ ನಂಬಿಕೆ ಇರಲಿಲ್ಲ. ಕ್ಲಾಸಿನ ಗೇಮ್ ಪೀರಿಯಡ್ಡಿನಲ್ಲಿ ನಾನು ಫುಟ್ಬಾಲ್ ಆಗಲಿ, ಲಗೋರಿ ಆಗಲಿ ಅಥವಾ ಖೋಖೋ ಆಟಗಳಲ್ಲಿ ಚೆನ್ನಾಗಿ ಆಡದಿದ್ದುದನ್ನು ಅವನು ಕಂಡುಕೊಂಡಿದ್ದ. ಅದನ್ನೇ ನನ್ನೊಂದಿಗೆ ಹೇಳಿದ. "ನೀನು ಕ್ಲಾಸಿನ ಯಾವದೂ ಆಟ ಚೆನ್ನಾಗಿ ಆಡುವುದಿಲ್ಲ. ಅದು ಹೇಗೆ ಕ್ರಿಕೆಟ್ ಆಡುತ್ತೀಯಾ?" ಎಂದು ನೇರವಾಗಿ ಪ್ರಶ್ನಿಸಿದ್ದ. "ಇಲ್ಲಿ ಸುಜಿತನಂತಹ ವೇಗದ ಬೌಲರ್ ಗಳನ್ನು ಕೂಡ ಮರಾಠಿ ಕ್ಲಾಸಿನವರು ಹಿಗ್ಗಾಮುಗ್ಗಾ ಚಚ್ಚುತ್ತಿದ್ದಾರೆ, ನಿನ್ನಿಂದೇನಾಗಬಹುದು?" ಎಂಬ ಅಪನಂಬಿಕೆ ವ್ಯಕ್ತಪಡಿಸಿದ.

ಸುಪ್ತವಾಗಿದ್ದ ಅಹಂಕಾರದ ಸರ್ಪವನ್ನು ಬಡಿದೆಚ್ಚರಿಸಿದ ಪ್ರಸಂಗ! ಸುಪ್ತವಾಗಿದ್ದ ಅಹಂಕಾರದ ಸರ್ಪವನ್ನು ಬಡಿದೆಚ್ಚರಿಸಿದ ಪ್ರಸಂಗ!

ಮೊದಲು ನನ್ನ ಬಾಯಿ ಕಟ್ಟಿತಾದರೂ ನಾನು ಸುಧಾರಿಸಿಕೊಂಡು ಬಿಜಾಪುರದಲ್ಲಿ ನನ್ನದೇ ಟೀಮು ಇದ್ದುದನ್ನು ಕುರಿತು ಹೇಳಿದೆ. ನನ್ನ ಆಟದ ಬಗ್ಗೆ ಸ್ವಲ್ಪ ಹೆಚ್ಚೇ ಬಡಾಯಿ ಕೊಚ್ಚಿಕೊಂಡೆ. "ನೀನು ಎಂತಹ ಕ್ರಿಕೆಟರ್? ಬ್ಯಾಟ್ಸ್ ಮ್ಯಾನೋ ಅಥವಾ ಬೌಲರೋ" ಎಂದು ಪ್ರಶ್ನಿಸಿದ. ಮತ್ತೆ ನನಗೆ ಸಮಸ್ಯೆ ಎದುರಾಯಿತು. ಗಲ್ಲಿಯ ಅರ್ಧ ಪಿಚ್ಚಿನಲ್ಲಿ ನಾನು ಎರಡೂ ಆಗಿದ್ದೆ. ಅದನ್ನೇ ಹೇಳಿದೆ. ಅಲ್ಲದೇ ನಾನು ಸುಜಿತನಿಗಿಂತ ವೇಗವಾಗಿ ಬೌಲು ಎಸೆಯುತ್ತೇನೆ ಎಂದು ಕೊಚ್ಚಿಕೊಂಡೆ. ಎಂದೂ ಯಾವ ಮ್ಯಾಚೂ ಆಡಿರಲಿಲ್ಲವಾದರೂ ಅನೇಕ ಮ್ಯಾಚುಗಳನ್ನಾಡಿ ಗೆದ್ದಿದ್ದೇನೆಂದು ಸುಳ್ಳು ಹೇಳಿದೆ. ನನ್ನ ಮಾತು ಕೇಳಿದ ಕ್ಯಾಪ್ಟನ್ ಅಪನಂಬಿಕೆಯಿಂದಲೇ ಮರುದಿನ ನನ್ನನ್ನು ಟ್ರಯಲ್ ಗೆಂದು ಪಿಚ್ಚಿಗೆ ಕರೆದ.

Sankeshwar Days 14 : My inclination to become sports person

ನಾನು ಅವನೊಡನೆ ಪಿಚ್ಚಿಗೆ ಹೋದ ಕೂಡಲೇ ನನ್ನ ಕೈಯಲ್ಲಿ ಬ್ಯಾಟು ಕೊಟ್ಟು "ನಾನು ನಿನಗೆ ಒಂದು ಓವರ್ ಹಾಕುತ್ತೇನೆ, ನೀನು ಬ್ಯಾಟಿಂಗ್ ಮಾಡು" ಎಂದು ಹೇಳಿದ. ಬ್ಯಾಟು ತುಂಬಾ ಭಾರ ಎನಿಸಿತು. ಗಲ್ಲಿ ಕ್ರಿಕೆಟ್ಟಿನ ಸಾದಾ ಕಟ್ಟಿಗೆಯ ಬ್ಯಾಟಿನಿಂದ ಆಡಿದ ನನಗೆ ನಿಜವಾದ ಕ್ರಿಕೆಟ್ ಬ್ಯಾಟು ಹಿಡಿದೇ ಗೊತ್ತಿರಲಿಲ್ಲ. ಆದರೂ ಬ್ಯಾಟು ಹಿಡಿದು ಅವನನ್ನೆದುರಿಸಲು ನಿಂತೆ. ಮೊದಲನೇ ಬಾಲು ವೇಗವಾಗಿ ಝುಂಯ್ ಎಂದು ಬಂದಾಗ ಬಾಲು ನನಗೆ ಕಾಣಿಸಲೇ ಇಲ್ಲ. ಹಾಗೆಯೇ ಬ್ಯಾಟು ಬೀಸಿದೆ. ಬ್ಯಾಟು ಗಾಳಿಯನ್ನು ಗುದ್ದಿತೇ ಹೊರತು ಬಾಲಿನ ಸ್ಪರ್ಶವಾಗಲೇ ಇಲ್ಲ. ಸುತ್ತಮುತ್ತಲಿನ ಜನ ನನ್ನನ್ನು ಔಟ್ ಎಂದಾಗಲೇ ನಾನು ಕ್ಲೀನ್ ಬೋಲ್ಡ್ ಆಗಿದ್ದು ತಿಳಿಯಿತು. ಮುಂದಿನ ಐದು ಬಾಲುಗಳಲ್ಲಿ ಮತ್ತೆ ಮೂರು ಬಾರಿ ನಾನು ಕ್ಲೀನ್ ಬೋಲ್ಡ್ ಆದಾಗ ನನಗೆ ನಾನು ಎಂತಹ ಬ್ಯಾಟ್ಸ್ ಮನ್ ಎಂದು ತಿಳಿದು ಹೋಯಿತು. ಒಂದು ಓವರ್ ಆದ ಮೇಲೆ ಕ್ಯಾಪ್ಟನ್ ನನ್ನನ್ನು ಕ್ರಿಮಿಯಂತೆ ನೋಡಿ ನನ್ನ ಕೈಯಲ್ಲಿ ಬಾಲು ಕೊಟ್ಟ.

ಸಂಕೇಶ್ವರದ ದಿನಗಳು 12 : ವೈಚಾರಿಕತೆಯನ್ನು ಬಡಿದೆಬ್ಬಿಸಿದ ಶಾಲಾ ನಾಟಕ ಸಂಕೇಶ್ವರದ ದಿನಗಳು 12 : ವೈಚಾರಿಕತೆಯನ್ನು ಬಡಿದೆಬ್ಬಿಸಿದ ಶಾಲಾ ನಾಟಕ

ಬಾಲ್ ಮಾಡಲು ನಿಂತಾಗ ಪಿಚ್ಚು ಎಷ್ಟು ದೊಡ್ಡದು ಎಂದು ತಿಳಿಯಿತು. ನಾನು ಹಾಕಿದ ಬಾಲು ಬ್ಯಾಟ್ಸ್ ಮ್ಯಾನ್ ನತ್ತ ತಲುಪುವದೋ ಇಲ್ಲವೋ ಎಂದು ನನಗೆ ಸಂಶಯ ಉಂಟಾಯಿತು. ಆದರೂ ಸುಜಿತನಿಗಿಂತ ಹೆಚ್ಚು ವೇಗವಾಗಿ ಬಾಲ್ ಮಾಡಬೇಕೆಂದು ಓಡಿ ಬಂದು ಸಾಧ್ಯವಾದಷ್ಟು ವೇಗವಾಗಿ ಬೌಲ್ ಮಾಡಿದೆ. ಬಾಲು ವಿಕೆಟ್ಟಿನಿಂದ ದೂರದಲ್ಲೆಲ್ಲೋ ಬಹಳ ವೈಡ್ ಆಗಿ ಹೋಯಿತು. ಸುತ್ತಲಿನವರು ನಕ್ಕು ಬಿಟ್ಟರು. ಮುಂದಿನ ಬಾಲನ್ನು ಅದು ಹೇಗಾದರೂ ಮಾಡಿ ವಿಕೆಟ್ಟಿಗೆ ಸರಿಯಾಗಿ ಹಾಕಬೇಕೆಂದು ಸ್ವಲ್ಪ ನಿಧಾನವಾಗಿ ಬೌಲ್ ಮಾಡಿದರೆ ಅದು ಬ್ಯಾಟ್ಸ್ ಮ್ಯಾನ್ ವರೆಗೂ ತಲುಪಲೇ ಇಲ್ಲ. ಒಟ್ಟಿನಲ್ಲಿ ನಾನು ಬ್ಯಾಟ್ಸ್ ಮ್ಯಾನ್ ಮತ್ತು ಬೌಲರ್ ಎರಡೂ ಡಿಪಾರ್ಟ್ ಮೆಂಟುಗಳಲ್ಲೂ ಫೇಲಾಗಿದ್ದೆ. ನನ್ನ ಕ್ರಿಕೆಟ್ಟಿನ ಜ್ವರ ಅಲ್ಲಿಗೆ ನಿಂತು ಹೋಯಿತು. ಮುಂದೆ ಬೆಳಗಾವಿ ತಲುಪುವವರೆಗೆ ನಾನು ಕ್ರಿಕೆಟ್ಟಿನ ಹೆಸರೆತ್ತಲೇ ಇಲ್ಲ.

ಈ ಸಂದರ್ಭದಿಂದ ನನಗೆ ನನ್ನಲ್ಲಿ ಒಂದು ಕೀಳರಿಮೆ ಉಂಟಾಯಿತು. ಆಟದ ವಿಷಯ ಬಂದಾಗ ನಾನು ಹಿಂದುಳಿಯತೊಡಗಿದೆ. ಅದರಲ್ಲೂ ತಂಡದ ಆಟಗಳಿಂದ ದೂರ ಉಳಿಯತೊಡಗಿದೆ. ಲಗೋರಿಯಾಗಲಿ, ಫುಟ್ಬಾಲ್ ಆಗಲಿ ಆಡಲು ನನಗೆ ಇಚ್ಛೆಯಾಗುತ್ತಿರಲಿಲ್ಲ. ಸುಮ್ಮನೇ ಆಡಲೇಬೇಕೆಂಬ ನಿಯಮವಿದ್ದುದರಿಂದ ಆಡುತ್ತಿದ್ದೆ ಅಷ್ಟೇ. ವರ್ಷಾಂತ್ಯದಲ್ಲಿ ಸ್ಕೂಲಿನಲ್ಲಿ ಆಟದ ಪರೀಕ್ಷೆಯನ್ನು ಭಯದಿಂದಲೇ ಎದುರಿಸಿದೆ. ಓಟ, ಹೈ ಜಂಪು ಮತ್ತು ಲಾಂಗ್ ಜಂಪು ಎಂದರೆ ನನಗೆ ಆತಂಕವಾಗುತ್ತಿತ್ತು. ನಾನು ಸ್ವಲ್ಪ ಧಡೂತಿ ದೇಹದವನಾದುದರಿಂದ ಹೈ ಜಂಪು ನನ್ನಿಂದಾಗುತ್ತಲೇ ಇರಲಿಲ್ಲ. ನನ್ನ ಸ್ಕೂಲಿನ ಎಲ್ಲ ಹುಡುಗರು ನನ್ನ ಲಾಂಗ್ ಜಂಪು, ಹೈ ಜಂಪುಗಳನ್ನು ನೋಡಿ ಜಿಗಿಯುತ್ತ, ಕುಣಿಯುತ್ತ ನಗುತ್ತಿದ್ದರು. ಅಣಕಿಸುತ್ತಿದ್ದರು.

ಶಿವಾಜಿ ಆಶೀರ್ವಾದ ಪಡೆದು ಮೊಘಲರ ಮಣಿಸಿದ್ದ ಮಹಾರಾಜ ಛತ್ರಸಾಲ ಶಿವಾಜಿ ಆಶೀರ್ವಾದ ಪಡೆದು ಮೊಘಲರ ಮಣಿಸಿದ್ದ ಮಹಾರಾಜ ಛತ್ರಸಾಲ

ಏಳನೆಯ ತರಗತಿಯಲ್ಲಿ ಒಬ್ಬ ಹೊಸ ಆಟದ ಸರ್ ಬಂದರು. ಅಮ್ಮಣಗಿ ಸರ್ ಎಂದು ಅವರ ಹೆಸರು. ಆಟದಲ್ಲಿ ನಾನು ಅತೀ ಸಾಧಾರಣದವನಾದರೂ ಅವರಿಗೆ ನನ್ನನ್ನು ಕಂಡರೆ ವಿಶೇಷ ಅಕ್ಕರೆ. ನಾನು ಓದಿನಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದುದು ಅವರಿಗೆ ಬಹಳ ಹಿಡಿಸಿರಬಹುದು. ನಾನು ಸ್ಕೂಲಿನ ಕಾರ್ಯಕ್ರಮಗಳಲ್ಲಿ ಹಾಡುವುದು ಮತ್ತು ನಾಟಕಗಳನ್ನು ಮಾಡುವುದನ್ನು ಅವರು ನೋಡಿದ್ದರು. ಅಲ್ಲದೇ ನಾನು ಕಿಲಾಡಿ ಸ್ವಭಾವದವನಾಗಿರದೇ ಬಹಳ ಸಿನ್ಸಿಯರ್ ಆಗಿದ್ದುದು ಅವರಿಗೆ ಪಸಂದಾಗಿರಬಹುದು. ಹೀಗಾಗಿ ಕ್ಲಾಸಿನಲ್ಲಿ ನನ್ನ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸುತ್ತಿದ್ದರು.

ಸಾಮಾನ್ಯವಾಗಿ ಆಡುತ್ತಿದ್ದ ಫುಟ್ ಬಾಲ್, ವಾಲಿಬಾಲ್, ಲಗೋರಿ ಮುಂತಾದ ಆಟಗಳಲ್ಲದೇ ಅವರು ನಮ್ಮ ಕ್ಲಾಸಿಗೆ ಬೇಸ್ ಬಾಲ್ ಆಟವನ್ನು ಕೂಡ ಪರಿಚಯಿಸಿದರು. ಕ್ರಿಕೆಟ್ಟಿನಂತೆಯೇ ಇದ್ದ ಈ ಆಟ ನನಗೆ ಬಹಳ ಹಿಡಿಸಿತು. ಅಲ್ಲದೇ ಕ್ರಿಕೆಟ್ಟಿನ ಪಿಚ್ಚಿಗಿಂತ ಚಿಕ್ಕದಾಗಿದ್ದ ಪಿಚ್ಚಿನಲ್ಲಿ ಕೈ ತಿರುಗಿಸದೇ ನೇರವಾಗಿ ಬಾಲನ್ನು ಎಸೆಯುವ ರೀತಿ ಕೂಡ ನನಗೆ ಹಿಡಿಸಿತು. ಆದರೂ ತುಂಬಾ ಹೊಸ ಆಟವಾದುದರಿಂದ ಎಲ್ಲರಿಗೂ ಈ ಆಟ ಅಷ್ಟೊಂದು ತಿಳಿಯಲಿಲ್ಲ. ಆದರೂ ಅವರ ಬೆಂಬಲದಿಂದ ನಾನು ಆ ಆಟವನ್ನು ಸ್ವಲ್ಪ ಮಟ್ಟಿಗೆ ಕಲಿತೆ. ಅಲ್ಲದೇ ಅವರ ಸಾರಥ್ಯದಲ್ಲಿ ನನಗೆ ಆಟದಲ್ಲಿ ಸ್ವಲ್ಪ ಆಸಕ್ತಿ ಮೂಡಿತು. ಅಲ್ಲದೇ ಸ್ಕೂಲಿನ ವಾರ್ಷಿಕ ಆಟದ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತೆಗೆದುಕೊಳ್ಳಬೇಕೆಂಬ ಇಚ್ಛೆ ಕೂಡ ಉಂಟಾಯಿತು. ಸ್ಕೂಲಿನ ಮೈದಾನದಲ್ಲಿ ಓಟ, ಲಾಂಗ್ ಜಂಪ್ ಗಳ ಅಭ್ಯಾಸ ಆವಾಗಾವಾಗ ಮಾಡುತ್ತಿದ್ದೆ. ಆಟದ ಪೀರಿಯಡ್ಡಿನಲ್ಲಿ ಹೈ ಜಂಪ್ ನ ಅಭ್ಯಾಸ ಕೂಡ ಮಾಡಿದೆ. ಆದರೂ ಹೈ ಜಂಪ್ ಎಂದರೆ ಏನೋ ಒಂದು ಭಯ.

ಕೊನೆಗೂ ಏಳನೆಯ ತರಗತಿಯ ಕೊನೆಯ ಪರೀಕ್ಷೆ ಬಂದೇ ಬಿಟ್ಟಿತು. ಓಟದಲ್ಲಿ ಅಷ್ಟೇನೂ ಚೆನ್ನಾಗಿ ಮಾಡಲಿಲ್ಲವಾದರೂ ಕೊನೆಯವನಾಗಿ ಉಳಿದಿರಲಿಲ್ಲ ಎಂಬುದೇ ಸಮಾಧಾನದ ಸಂಗತಿ. ಲಾಂಗ್ ಜಂಪ್ ಕೂಡ ಚೆನ್ನಾಗಿಯೇ ಮಾಡಿದೆ. ಹೈ ಜಂಪಿನ ಬಾರಿ ಬಂದಾಗ ಮೈ ಮತ್ತು ಮನಸ್ಸು ನಡುಗಿದವು. ಅಷ್ಟೇನೂ ಎತ್ತರವಲ್ಲದ ಮೊದಲ ಎರಡು ಮೂರು ಲೆವಲ್ಲುಗಳನ್ನು ಸ್ವಲ್ಪ ನಿರಾಯಾಸದಿಂದಲೇ ಮಾಡಿದೆ. ನಂತರದ ಲೆವೆಲ್ಲಿನಲ್ಲಿ ಕ್ಲಾಸಿನ ಅರ್ಧಕ್ಕಿಂತ ಹೆಚ್ಚು ಹುಡುಗರು ಫೇಲಾದರು. ನನ್ನ ಬಾರಿ ಬಂದಾಗ ಎಲ್ಲರಿಗೂ ನಾನು ಫೇಲಾಗಿಯೇ ತೀರುತ್ತೇನೆ ಎಂದೇ ನಂಬಿಕೆ. ನನ್ನೊಂದಿಗೆ ಮಾತು ಬಿಟ್ಟ ಅನೇಕ ಸಹಪಾಠಿಗಳು ಜೋರಾಗಿ ಅಣಕಿಸತೊಡಗಿದರು. ಅಮ್ಮಣಗಿ ಸರ್ ಅವರನ್ನೆಲ್ಲಾ ಗದರಿಸಿ ನನಗೆ ಲಕ್ಷದ ಮೇಲೆ ಗಮನವಿಡಲು ಹೇಳಿದರು.

ಅದರಂತೆ ನಾನು ಜಿಗಿಯಬೇಕಿದ್ದ ಬಾರಿನ ಎತ್ತರದ ಮೇಲೆ ಮಾತ್ರ ಗಮನವಿರಿಸಿದೆ. ಎಲ್ಲರೂ ನೋಡುತ್ತಿದ್ದಂತೆ ಆ ಲೆವೆಲ್ಲನ್ನು ನಾನು ಹಾರಿಬಿಟ್ಟೆ. ಎಲ್ಲರೂ ಬೆಕ್ಕಸ ಬೆರಗಾದರು. ಆ ಲೆವೆಲ್ಲನ್ನು ಕೇವಲ ಏಳೆಂಟು ಜನ ಮಾತ್ರ ಹಾರಿದ್ದರು. ನಾನು ನಂತರದ ಲೇವೆಲ್ಲನ್ನು ಕೂಡ ಹಾರಿ ಮುಗಿಸಿದಾಗ ಎಲ್ಲ ಸಹಪಾಠಿಗಳ ಬೆರಳು ಅವರ ಮೂಗಿನ ಮೇಲಿತ್ತು. ನಂತರದ ಲೆವೆಲ್ಲುಗಳನ್ನು ಹಾರಲಾಗದಿದ್ದರೂ ನನಗೆ ನೆನಪಿದ್ದ ಮಟ್ಟಿಗೆ ಸ್ಥೂಲಕಾಯದ ನಾನು ಕ್ಲಾಸಿನ ಬಹುತೇಕ ಒಳ್ಳೆಯ ಆಟಗಾರರನ್ನು ಹೈ ಜಂಪಿನಲ್ಲಿ ಸೋಲಿಸಿಬಿಟ್ಟಿದ್ದೆ. ಅಂದು ನನಗೇ ಆಶ್ಚರ್ಯವಾಗಿತ್ತು. ಅಮ್ಮಣಗಿ ಸರ್ ಅವರ ಪ್ರೋತ್ಸಾಹ ಮತ್ತು ಈ ಘಟನೆ ಇಂದಿಗೂ ಮನದಲ್ಲಿ ಹಸಿರಾಗಿ ಉಳಿದಿದೆ. ಒಬ್ಬ ಒಳ್ಳೆಯ ಗುರು ಒಬ್ಬ ಸಾಮಾನ್ಯನನ್ನು ಕೂಡಾ ಯಶಸ್ಸಿನತ್ತ ಕರೆದೊಯ್ಯಬಲ್ಲರು ಎಂಬುದನ್ನು ನನಗೆ ಅಮ್ಮಣಗಿ ಸರ್ ತೋರಿಸಿಬಿಟ್ಟಿದ್ದರು.

English summary
Sankeshwar Days 14 : Vasant Kulkarni writes about his inclination to become sports person, especially a cricketer, when he was in Sankeshwar studying in school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X