• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಪ್ತವಾಗಿದ್ದ ಅಹಂಕಾರದ ಸರ್ಪವನ್ನು ಬಡಿದೆಚ್ಚರಿಸಿದ ಪ್ರಸಂಗ!

By ವಸಂತ ಕುಲಕರ್ಣಿ, ಸಿಂಗಪುರ
|

ಏಳನೆಯ ಕ್ಲಾಸು ಶುರುವಾಗಿತ್ತು. ಅದೇಕೋ ಕೆಲವು ದಿನಗಳ ಮಟ್ಟಿಗೆ ನಾನು ಸ್ಕೂಲಿಗೆ ಹೋಗಿರಲಿಲ್ಲ. ಸ್ಕೂಲಿಗೆ ಹೋದ ಮೊದಲ ದಿನ ನನ್ನ ಪರಮಮಿತ್ರ ಪಾಟೀಲ ನನ್ನ ಕಿವಿಯಲ್ಲಿ ಉಸುರಿದ. "ಹೇ ವಸಂತ, ನಮ್ಮ ಕ್ಲಾಸಿಗೆ ಒಬ್ಬ ಹೊಸ ಹುಡುಗಿ ಬಂದಿದ್ದಾಳೆ. ಅವಳು ಬಹಳ ಚೆನ್ನಾಗಿ ಹಾಡುತ್ತಾಳೆ. ಬಹುಶಃ ನಿನಗಿಂತ ಚೆನ್ನಾಗಿ ಹಾಡುತ್ತಾಳೆ". ಅವನ ಕೊನೆಯ ವಾಕ್ಯ ನನ್ನಲ್ಲಿ ಸುಪ್ತವಾಗಿದ್ದ ಅಹಂಕಾರದ ಸರ್ಪವನ್ನು ಬಡಿದೆಚ್ಚರಿಸಿತು.

"ಅದು ಹೇಗೆ ಅವಳು ನನಗಿಂತ ಚೆನ್ನಾಗಿ ಹಾಡುತ್ತಾಳೆಯೋ ನಾನು ನೋಡಿಯೇ ಬಿಡುತ್ತೇನೆ" ಎಂದು ದರ್ಪದಿಂದ ಹೇಳಿದೆ. ಅಲ್ಲದೇ ಹುಡುಗಿಯರ ಬೆಂಚುಗಳತ್ತ ನೋಡಿದೆ. ಬಾಬ್ ಕಟ್ ಮಾಡಿಕೊಂಡ ಒಬ್ಬ ಮುಗ್ಧ ಮುಖದ ಹೊಸ ಹುಡುಗಿ ಕಂಡಳು. "ಇವಳೇ ಏನೋ?" ಎಂದು ಕೇಳುವಂತೆ ನನ್ನ ಸಹಪಾಠಿಯತ್ತ ಮುಖ ಮಾಡಿದೆ. ಅವನು ತಲೆಯಲ್ಲಾಡಿಸಿದ. ಹೆಸರೇನೆಂದು ಕೇಳಲಿಲ್ಲ. ಹೇಗೂ ಆಮೇಲೆ ತಿಳಿಯುತ್ತದಲ್ಲ? ನೋಡಿಯೇ ಬಿಡೋಣ ಎಂದು ಅಸಡ್ಡೆ ಮಾಡಿದೆ.

ಸಂಕೇಶ್ವರದ ದಿನಗಳು 12 : ವೈಚಾರಿಕತೆಯನ್ನು ಬಡಿದೆಬ್ಬಿಸಿದ ಶಾಲಾ ನಾಟಕ ಸಂಕೇಶ್ವರದ ದಿನಗಳು 12 : ವೈಚಾರಿಕತೆಯನ್ನು ಬಡಿದೆಬ್ಬಿಸಿದ ಶಾಲಾ ನಾಟಕ

ಆಗ ಯಾವುದಾದರೂ ವಿಷಯದ ಟೀಚರ್ ರಜೆಯ ಮೇಲಿದ್ದರೆ ಬೇರೆ ಶಿಕ್ಷಕರು ಆ ಕ್ಲಾಸು ತೆಗೆದುಕೊಳ್ಳಲು ಬರುತ್ತಿದ್ದರು. ಅಂತಹ ಕ್ಲಾಸುಗಳಲ್ಲಿ ಬದಲಿ ಟೀಚರ್ ವಿಷಯವನ್ನು ಕಲಿಸುತ್ತಿರಲಿಲ್ಲ. ಅದು ಒಂದು ಮನೋರಂಜನೆಯ ಕ್ಲಾಸಾಗಿ ಮಾರ್ಪಡುತ್ತಿತ್ತು. ಅಂತಹ ಕ್ಲಾಸುಗಳಲ್ಲಿ ನನ್ನಂತಹ ಹಾಡುಗಾರರಿಗೋ, ಕಥೆಗಾರರಿಗೋ ನಮ್ಮ ಪ್ರತಿಭೆ ತೋರಿಸಲು ಒಂದು ಅವಕಾಶ ಸಿಗುತ್ತಿತ್ತು. ಅಂದೇ ಅಂತಹ ಒಂದು ಅವಕಾಶ ಸಿಗಬೇಕೇ? ನಮ್ಮ ಕ್ಲಾಸ್ ಟೀಚರ್ ಆದ ಠಾಕೂರ್ ಟೀಚರ್ ಯಾವುದೋ ಬದಲಿ ಕ್ಲಾಸಿಗೆ ಬಂದರು. ಬಂದವರೇ "ವಸಂತ, ನೀನು ಹಾಡು" ಎಂದು ಕರೆದರು. ನನಗೂ ಅದೇ ಬೇಕಾಗಿತ್ತು. ಬಹಳ ಗತ್ತಿನಿಂದ ಟೀಚರ್ ಅವರ ಟೇಬಲ್ಲಿನ ಹತ್ತಿರ ಬಂದು ನಿಂತೆ. ಅದೇ ದರ್ಪದಿಂದ ಆ ಹುಡುಗಿಯತ್ತ ನೋಡಿದೆ. ನಂತರ ಹಾಡಲು ಆರಂಭಿಸಿದೆ.

ಮಾಮೂಲಾಗಿ ನಾನು ಹಾಡುತ್ತಿದ್ದುದು ಕೆಲವು ಮಕ್ಕಳ ಹಾಡುಗಳನ್ನು. "ನಿನ್ನೆ ರಾತ್ರಿ ಮಲಗಿರುವಾಗ ಕನಸು ಒಂದು ಬಿತ್ತ..." ಎಂಬ ಮಕ್ಕಳ ಹಾಡು ನನ್ನ ನೆಚ್ಚಿನದಾಗಿತ್ತು. ಅಲ್ಲದೇ ಚೆನ್ನವೀರ ಕಣವಿ ಅವರ "ವಿಶ್ವ ವಿನೂತನ, ವಿದ್ಯಾ ಚೇತನ" ಹಾಡನ್ನು ಕೂಡ ಹಾಡುತ್ತಿದ್ದೆ. ಅನೇಕ ಬಾರಿ ಅಂದು ಬಹಳ ಪಾಪ್ಯುಲರ್ ಆಗಿದ್ದ ಡಾ. ರಾಜಕುಮಾರ್ ಅವರ "ವಾರ ಬಂತಮ್ಮ, ಗುರುವಾರ ಬಂತಮ್ಮ" ಎಂಬ ಹಾಡನ್ನು ಹಲವು ಬಾರಿ ಹಾಡುತ್ತಿದ್ದೆ ಎಂಬ ನೆನಪು. ಆದರೆ ಅಂದಿನವರೆಗೆ ನನಗೆ ಯಾರೂ ಸವಾಲು ಹಾಕಿರಲಿಲ್ಲ. ಎಲ್ಲರೂ ನನ್ನ ಹಾಡನ್ನು ಕೇಳಿ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸುವವರೇ. ಆದರೆ ಅಂದು ಮೊಟ್ಟ ಮೊದಲ ಬಾರಿ ಪರಿಸ್ಥಿತಿ ಬದಲಾಗಿತ್ತು. ನನಗೊಬ್ಬ ಪ್ರಬಲ ಪ್ರತಿಸ್ಪರ್ಧಿ ಎದುರಾಗಿದ್ದಳು. ಅವಳ ಹಾಡನ್ನು ನಾನು ಕೇಳಿಯೇ ಇರಲಿಲ್ಲ. ಆದರೂ ಮೊದಲ ಬಾರಿಗೆ ಅವಳಿಗಿಂತ ಚೆನ್ನಾಗಿ ಹಾಡಿ ನನ್ನ ಹಿಂಬಾಲಕರಿಂದ "ಭಲೇ ಭಲೇ ನೀನು ಅವಳಿಗಿಂತ ಚೆನ್ನಾಗಿ ಹಾಡುತ್ತೀಯಾ" ಎಂದೆನಿಸಿಕೊಳ್ಳಬೇಕೆಂಬ ಇಚ್ಛೆ ಬಲವಾಗಿತ್ತು.

ಸಂಕೇಶ್ವರದ ದಿನಗಳು 10 : ಹೆಂಗಿದ್ದ ಜನಾರ್ಧನ ಹೆಂಗಾದ? ಸಂಕೇಶ್ವರದ ದಿನಗಳು 10 : ಹೆಂಗಿದ್ದ ಜನಾರ್ಧನ ಹೆಂಗಾದ?

ಆಗ ನಾನು ಹಿರೇಮಠ ಎಂಬ ವೃದ್ಧ ಗುರುಗಳಿಂದ ಹಿಂದುಸ್ತಾನಿ ಸಂಗೀತದ ಪಾಠ ಹೇಳಿಸಿಕೊಳ್ಳುತ್ತಿದ್ದೆ. ಅಂದಿನ ದಿನ ನನ್ನ ಸಾಮಾನ್ಯ ಹಾಡುಗಳನ್ನು ಬಿಟ್ಟು ಅದ್ಯಾವುದೋ ಹಿಂದುಸ್ತಾನಿ ಬಂದಿಶ್ ಅನ್ನು ಕೈಗೆತ್ತಿಕೊಂಡೆ. ನಡುನಡುವೆ ತಪ್ಪುತಪ್ಪಾಗಿ ಸರಗಮ್ ತಾನುಗಳನ್ನು ಹಾಕಿ ಎಳೆದೆಳೆದು ಕೆಟ್ಟದಾಗಿ ಹಾಡತೊಡಗಿದೆ. ನಡುನಡುವೆ ಆ ಹೊಸ ಹುಡುಗಿಯತ್ತ ನೋಡುತ್ತಿದ್ದೆ. ಅವಳ ಮುಖದಲ್ಲಿ ಅದೇ ಮುಗ್ಧ ಭಾವವಿತ್ತು. ಸುಮಾರು ಒಂದೈದು ನಿಮಿಷ ಹಾಗೆಯೇ ಕೂಗಾಡಿರಬಹುದು. ಕೊನೆಗೊಮ್ಮೆ ಠಾಕೂರ್ ಮೇಡಂ ನನ್ನನ್ನು ನಿಲ್ಲಿಸಲು ಹೇಳಿದರು. ಒಂದು ಕ್ಷಣ ನಾನು ಅಪ್ರತಿಭನಾದರೂ ನನ್ನಲ್ಲಿ ಗೆದ್ದೆ ಎಂಬ ಭಾವ ಮೂಡಿತು. ನನ್ನ ಮಿತ್ರ ರವಿಯತ್ತ ನೋಡಿದೆ. ಅವನ ಮುಖ ಸಿಂಡರಿಸಿದಂತಿತ್ತು. ಆದರೂ ನಾನು ಅದೇ ಗತ್ತಿನಿಂದ ಬಂದು ನನ್ನ ಸ್ಥಾನದಲ್ಲಿ ಕುಳಿತೆ. ಠಾಕೂರ್ ಟೀಚರ್ "ಉಷಾ, ನೀನು ಬಾರಮ್ಮ" ಎಂದು ಕರೆದರು. ಆ ಹೊಸ ಹುಡುಗಿಯ ಹೆಸರು ಉಷಾ ಎಂದು ಗೊತ್ತಾಯಿತು.

ಉಷಾ ನಿಧಾನವಾಗಿ ಬಂದು ನಿಂತು ಹಾಡನ್ನು ಆರಂಭಿಸಿದಳು. "ನಿಂಬೀಯ ಬನದ ಮ್ಯಾಗಡ ಚಂದಾಮಾ ಚೆಂಡಾಡಿದ" ಎಂದು ಶುರುವಾದ ಹಾಡು ನನಗೆ ಹೊಸದಾಗಿದ್ದರೂ ಬಹಳ ಅದ್ಭುತ ಎನಿಸಿತು. ನನ್ನ ಪ್ರತಿಸ್ಪರ್ಧಿ ಎಂಬುದನ್ನು ಮರೆತು ಅಪ್ರಯತ್ನಪೂರ್ವಕವಾಗಿ ತಲೆ ತೂಗತೊಡಗಿದೆ. ಹಾಡು ಮುಗಿದಾದ ಮೇಲೆ ಜೋರಾಗಿ ಚಪ್ಪಾಳೆ ತಟ್ಟಿದವರಲ್ಲಿ ನಾನೂ ಒಬ್ಬ. ಕೆಲ ಕ್ಷಣಗಳ ಮೇಲೆ ರವಿ ನನ್ನತ್ತ ನೋಡುತ್ತಿದ್ದುದು ಗಮನಕ್ಕೆ ಬಂದಿತು. ಅವನತ್ತ ನೋಡಿ "ಪರವಾಗಿಲ್ಲ, ಚೆನ್ನಾಗಿ ಹಾಡುತ್ತಾಳೆ. ಆದರೆ ನನ್ನ ಹಾಗೆ ಶಾಸ್ತ್ರೀಯ ಗಾಯನ ಅವಳಿಗೆ ಗೊತ್ತಿಲ್ಲ" ಎಂದೆ. ಅವನು ನಸು ನಕ್ಕ.

ಅವಳು ನಮ್ಮ ಶಾಲೆಯಲ್ಲಿ ಓದಿದ್ದು ಕೇವಲ ಒಂದೇ ವರ್ಷ. ಆದರೆ ಅನೇಕ ಜಾನಪದ ಮತ್ತು ಸಿನೆಮಾ ಹಾಡುಗಳನ್ನು ಹಾಡಿ ಎಲ್ಲರ ಮನ ರಂಜಿಸಿದಳು. ಅವಳ ಉತ್ತಮ ಕಂಠ ಮತ್ತು ಗಾಯನ ನನ್ನನ್ನೊಳಗೊಂಡು ಎಲ್ಲರ ಮನವನ್ನು ಸೆಳೆದಿತ್ತು. ಕೆಲವೇ ದಿನಗಳಲ್ಲಿ ನಾನು ಕೂಡ ನನ್ನ ಅಹಂ ಮರೆತು ಅವಳನ್ನು ನನಗಿಂತ ಉತ್ತಮ ಹಾಡುಗಾರ್ತಿ ಎಂದು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದೆ. ಠಾಕೂರ್ ಟೀಚರ್ ಅವರಲ್ಲಿ ಕೇಳಿಕೊಂಡು ಅವಳು ಹಾಡುತ್ತಿದ್ದ "ನಿಂಬೀಯ ಬನದ ಮ್ಯಾಗಡ" ಹಾಡನ್ನು ಬರೆಸಿ ಪಡೆದುಕೊಂಡಿದ್ದೆ ("ನಾವು ಹುಡುಗರು ಹುಡುಗಿಯರೊಂದಿಗೆ ಮಾತನಾಡುತ್ತಿರಲಿಲ್ಲವಲ್ಲ?"). ಮುಂದೆ ಬೆಳಗಾವಿಗೆ ಬಂದ ಮೇಲೆ ನಡೆದ ಜಿಲ್ಲಾ ಮಟ್ಟದ ಜಾನಪದ ಹಾಡಿನ ಸ್ಪರ್ಧೆಯಲ್ಲಿ ಇದೇ ಹಾಡನ್ನು ಹಾಡಿ ಪ್ರಥಮ ಕ್ರಮಾಂಕ ಪಡೆದಾಗ ಮನಸ್ಸಿನಲ್ಲಿಯೇ ಉಷಾಳಿಗೆ ಧನ್ಯವಾದ ಅರ್ಪಿಸಿದ್ದೆ.

ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು! ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು!

ಉಷಾ ಬಂದಿದ್ದು ಶಿವಮೊಗ್ಗದ ಕಡೆಯಿಂದ. ಅವಳಿಗೆ ನಾವಾಡುತ್ತಿದ್ದ ಭಾಷೆ ಅರ್ಥವಾಗುತ್ತಿರಲಿಲ್ಲ. ನಮ್ಮ ಮಾತನ್ನು ಅರ್ಥಮಾಡಿಕೊಳ್ಳಲು ತುಂಬಾ ಕಷ್ಟಪಡುತ್ತಿದ್ದಳು. ಹೀಗಾಗಿ ಏನೋ ಕೇಳಿದ ಪ್ರಶ್ನೆಗೆ ಏನೋ ಉತ್ತರ ಹೇಳುತ್ತಿದ್ದಳು. ನಮ್ಮ ಹಳ್ಳಿಯ ಹುಡುಗರಲ್ಲಿ ನಗೆಬುಗ್ಗೆ ಏಳುತ್ತಿತ್ತು. ಅನೇಕರು ಅವಳ ಮಾತುಗಳನ್ನು ಅಣಕಿಸುತ್ತಿದ್ದರು. ಅದ್ಯಾವುದೋ ಒಂದು ದಿನ ನಾವೆಲ್ಲ ಶಾಲೆ ಮುಗಿಸಿ ವಾಪಸ್ಸು ಹೋಗುತ್ತಿದ್ದಾಗ ರವಿಂದ್ರ ಎಂಬ ಇನ್ನೊಬ್ಬ ಕ್ಲಾಸ್ ಮೇಟು ಅವಳನ್ನು ಬಹಿರಂಗವಾಗಿ ಅಣಕಿಸಿದ್ದು ನನ್ನ ಗಮನಕ್ಕೆ ಬಂದಿತು. ಕ್ಲಾಸಿನ ಕ್ಯಾಪ್ಟನ್ ಆಗಿದ್ದ ನಾನು ಕೂಡಲೇ ಅವನನ್ನು ಖಂಡಿಸಿ ಮಾತನಾಡಿದೆ. ಅವನಿಗೆ ಎಲ್ಲರ ಮುಂದೆ ಅಪಮಾನವಾದಂತಾಗಿ ನನ್ನ ಮೇಲೆ ಸಿಟ್ಟು ಬಂದಿತು. ಅದೇ ಸಿಟ್ಟನ್ನು ಮುಂದೆ ನನ್ನ ಮೇಲೆ ತೀರಿಸಿಕೊಳ್ಳುವ ಅವಕಾಶ ಅವನಿಗೆ ದೊರಕಿತು.

ನಮ್ಮ ಶಾಲೆಯಲ್ಲಿ ಗಣೇಶ ಚತುರ್ಥಿಯ ಸಮಾರಂಭ ದೊಡ್ಡದಾಗಿ ಜರುಗುತ್ತಿತ್ತು. ಗಣಪತಿಯ ಕೊನೆ ದಿನ ಅಂದಿನ ನಮ್ಮ ಪ್ರಿನ್ಸಿಪಾಲರು ಒಂದು ಹೊಸ ಪದ್ಧತಿಯನ್ನು ಜಾರಿಗೆ ತಂದರು. ಗಣಪತಿಯ ಮುಂದಿದ್ದ ಶ್ರೀ ಫಲವನ್ನು ಹರಾಜಿಗಿಟ್ಟು ಬಂದ ಹಣದಿಂದ ಸ್ಕೂಲಿನಲ್ಲಿ ಒಳ್ಳೆಯ ಕೆಲಸ ಮಾಡುವುದು ಅವರ ಯೋಜನೆಯಾಗಿತ್ತು. ಕ್ಲಾಸಿನ ಕ್ಯಾಪ್ಟನ್ ಹರಾಜಿನಲ್ಲಿ ತಮ್ಮ ಬೋಣಿ ಹೇಳಬೇಕಾಗಿತ್ತು. ನನಗೋ ಬೋಣಿ ಹೇಳುವುದರಲ್ಲಿ ಸ್ವಲ್ಪವೂ ಆಸಕ್ತಿ ಇರಲಿಲ್ಲ.

ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಂಕೇಶ್ವರದ ಆ ದಿನಗಳು ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಂಕೇಶ್ವರದ ಆ ದಿನಗಳು

ನಾನೇನೋ ಬೋಣಿ ಹೇಳಿ ಗೆದ್ದು ನಂತರ ಎಲ್ಲ ಹುಡುಗರು ಹಣ ನೀಡದಿದ್ದರೆ ಎಂಬ ಚಿಂತೆ ನನ್ನಲ್ಲಿ ಮೂಡಿತ್ತು. ಅಲ್ಲದೇ ಶಿವಣ್ಣಗೋಳ್ ಗುರುಗಳ ವೈಚಾರಿಕ ಚಿಂತನೆಯ ಪ್ರಭಾವದಲ್ಲಿದ್ದುದರಿಂದ ದೇವರ ಪ್ರಸಾದ ಎಂಬ ಭಕ್ತಿ ಭಾವ ನನ್ನಲ್ಲಿ ಕಡಿಮೆಯಾಗಿತ್ತು. ನಾನು ಬೋಣಿ ಹೇಳದಿದ್ದುದರಿಂದ ನಮ್ಮ ಕ್ಲಾಸು ಮಾತ್ರ ಶ್ರೀಫಲವನ್ನು ಗೆಲ್ಲಲಿಲ್ಲ. ಹೀಗಾಗಿ ನನ್ನ ಕ್ಲಾಸಿನ ಹುಡುಗರಿಗೆ ಅವಮಾನವಾದಂತಾಗಿ ನನ್ನ ಮೇಲೆ ಅತೀವ ಸಿಟ್ಟು ಉಂಟಾಯಿತು. ರವೀಂದ್ರ ಅಂತಹ ಎಲ್ಲ ಅಸಂತುಷ್ಟ ಹುಡುಗರ ನೇತೃತ್ವ ವಹಿಸಿದ. ಅಲ್ಲದೇ ತೀವ್ರವಾಗಿ ನನ್ನ ವಿರುದ್ಧ ಅತೃಪ್ತಿ ಹರಡಿ ಕ್ಲಾಸಿನ ಅರ್ಧ ಸಹಪಾಠಿಗಳಿಂದ ನನ್ನೊಂದಿಗೆ ಮಾತು ಬಿಡಿಸಿದ.

ಮೊದಮೊದಲಿಗೆ ಈ ಸಾಮೂಹಿಕ ಬಹಿಷ್ಕಾರ ನನ್ನನ್ನು ಅಷ್ಟೇನು ಅಧೀರಗೊಳಿಸಲಿಲ್ಲ. ಆದರೆ ನನ್ನ ಉತ್ತಮ ಮಿತ್ರರಾದ ಮಹಾಂತೇಶ, ಮಹೇಶ್, ರಾಘವೇಂದ್ರ, ಅರಿಫ್ ಮತ್ತು ಅರುಣ ಅವರಂತಹ ಸಹಪಾಠಿಗಳು ನನ್ನೊಂದಿಗೆ ಮಾತು ಬಿಟ್ಟದ್ದು ನನಗೆ ದುಃಖ ಉಂಟುಮಾಡಿತು. ನಾನೇನು ಅಂತಹ ದೊಡ್ಡ ತಪ್ಪು ಮಾಡಿದೆ ಎಂಬುದು ನನಗೆ ತಿಳಿಯಲಿಲ್ಲ. ಅಂತಹ ಸಂದರ್ಭದಲ್ಲಿ ಸೋಲಾಪುರ ಗ್ರಾಮದ ಪಾಟೀಲ, ತಟ್ಟೀಮನಿ ಮೊದಲಾದವರು ನನ್ನ ಬೆಂಬಲಕ್ಕೆ ನಿಂತರು. ನನ್ನ ಹರಗಾಪುರದ ಮಿತ್ರರಾದ ಕಾಂಬಳಿ, ಕಣಕಣಿ ಮೊದಲಾದವರು ನಾನು ಹಿಂದೆ ಅವರಿಗೆ ಮಾಡಿದ ದ್ರೋಹವನ್ನು ಮರೆತು ನನ್ನೊಂದಿಗೆ ನಿಂತಿದ್ದು ನನ್ನಲ್ಲಿ ಅವರ ಬಗ್ಗೆ ಗೌರವವನ್ನು ಇಮ್ಮಡಿಗೊಳಿಸಿತು.

ಓದಿನಲ್ಲಿ ನನ್ನ ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಸುಜಿತ್ ಕುಲಕರ್ಣಿ ಕೂಡ ನನ್ನೊಂದಿಗೆ ಮಾತು ಬಿಡಲಿಲ್ಲ. ತುಂಬಾ ಸ್ನೇಹಶೀಲನಾದ ಅವನು ನನ್ನ ಮತ್ತು ರವೀಂದ್ರನ ಗುಂಪಿನ ಮಧ್ಯೆ ಒಪ್ಪಂದ ಮಾಡಿಸಲು ಪ್ರಯತ್ನಿಸಿದ ಎಂಬ ನೆನಪು. ಆದರೆ ವಿರೋಧಿ ಬಣ ಪಟ್ಟು ಬಿಡಲಿಲ್ಲ. ತನ್ನ ಪ್ರತಿರೋಧವನ್ನು ಇನ್ನಷ್ಟು ತೀವ್ರಗೊಳಿಸಿತು. ಶಾಲೆಯಲ್ಲಿ ಎಲ್ಲ ಸಂದರ್ಭಗಳಲ್ಲಿ ನನ್ನನ್ನು ವಿರೋಧಿಸುವುದು, ಅಣಕಿಸುವುದು ಮತ್ತು ಹೀಯಾಳಿಸುವುದರ ಜೊತೆ ಎಲ್ಲ ರೀತಿಯ ಅಸಹಕಾರ ಚಳುವಳಿಯನ್ನು ಆರಂಭಿಸಿಬಿಟ್ಟಿತು.

ಅವರ ಈ ತೀವ್ರ ವಿರೋಧದ ಪರಿಣಾಮದಿಂದ ಮೊದಮೊದಲು ನಾನು ಕಂಗೆಟ್ಟು ಕೆಲವು ಬಾರಿ ಅತ್ತಿದ್ದೂ ಉಂಟು. ನಂತರ ಏಳನೆಯ ತರಗತಿಯ ಅಭ್ಯಾಸದ ತೀವ್ರತೆ ಹೆಚ್ಚಾದುದರಿಂದ ಅವರನ್ನು ಪೂರ್ತಿಯಾಗಿ ನಿರ್ಲಕ್ಷಿಸಿ ಅಭ್ಯಾಸದಲ್ಲಿ ತೊಡಗಿಸಿಕೊಂಡೆ. ಅವರೆಲ್ಲರ ವಿರೋಧದ ನಡುವೆಯೂ ಏಳನೆಯ ತರಗತಿಯಲ್ಲಿ ಶೇಕಡಾ 88% ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ವರ್ತಮಾನ ನನಗೆ ಬಂದಾಗ ನಾನು ಬೆಳಗಾವಿಯಲ್ಲಿದ್ದ ನನ್ನ ಸೋದರ ಮಾವನ ಮನೆಯಲ್ಲಿದ್ದೆ.

ಅಂದ ಹಾಗೇ ಕೆಲವೇ ವರ್ಷಗಳ ಹಿಂದೆ ಫೇಸ್ ಬುಕ್ಕಿನಲ್ಲಿ ನನಗೊಂದು ಮೆಸೇಜು ಬಂದಿತು. "ಸಂಕೇಶ್ವರದ ಹೈಸ್ಕೂಲಿನಲ್ಲಿ ಓದುತ್ತಿದ್ದ ವಸಂತ ಕುಲಕರ್ಣಿ ನೀವೇನಾ?" ಎಂದಿತ್ತು ಆ ಮೆಸೇಜು. ಅದನ್ನು ಕಳಿಸಿದವರ ಹೆಸರು ಉಷಾ ಎಂದಿತ್ತು. ಸುಮಾರು ಮೂವತ್ತೈದು ವರ್ಷಗಳ ನಂತರ ನಮ್ಮ ಶಾಲೆಯ ಕೋಗಿಲೆ ಎನಿಸಿದ ಉಷಾ ನನ್ನನ್ನು ಸಂಪರ್ಕಿಸಿದ್ದಲ್ಲದೇ ನಾವಿಬ್ಬರೂ ಮೊಟ್ಟಮೊದಲ ಬಾರಿಗೆ ಮಾತನಾಡಿದ್ದೆವು ಫೋನಿನಲ್ಲಿ. ಉಷಾ ನನ್ನೊಂದಿಗೆ ಮತ್ತು ನನ್ನ ಶ್ರೀಮತಿಯೊಂದಿಗೆ ತುಂಬಾ ಮನಬಿಚ್ಚಿ ಮಾತನಾಡಿದಳು. ಅವಳಿಗೆ ಈಗ ಇಬ್ಬರು ಇಂಜಿನೀಯರಿಂಗ್ ಓದುವ ಮಕ್ಕಳಿದ್ದಾರೆ. ದೊಡ್ಡವನು ಅಮೇರಿಕದ ಪ್ರಸಿದ್ಧ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾನೆ.

ಫೇಸ್ ಬುಕ್ಕಿನಲ್ಲಿ ನನ್ನ ಮಗನ ಫೋಟೊ ನೋಡಿ ಮತ್ತು ನನ್ನ ಹೆಸರು ನೋಡಿ ನಾನೇ ಇರಬಹುದೇನೋ ಅಂದುಕೊಂಡು ಮೆಸೇಜ್ ಕಳಿಸಿದೆ ಎಂದು ನನಗೆ ಹೇಳಿದಳು. ಅವಳ ಮೆಸೇಜ್ ನನಗೆಷ್ಟು ಪ್ಲೀಸಂಟ್ ಸರ್ ಪ್ರೈಸ್ ಆಗಿತ್ತೋ, ಆ ಅಕೌಂಟು ನನ್ನದೇ ಆಗಿದ್ದು ಅವಳ ಮೆಸೇಜ್ ನನ್ನನ್ನು ತಲುಪಿದ್ದು ಅವಳಿಗೂ ಅಷ್ಟೇ ಸರ್ ಪ್ರೈಸ್ ಆಗಿತ್ತೆಂದು ಹೇಳಿದಳು.

ನಾನು ಉಷಾಳೊಡನೆ "ಈಗಲೂ ಹಾಡುತ್ತೀಯಾ? ರೇಡಿಯೋ ಮತ್ತು ಟಿವಿ ಆರ್ಟಿಸ್ಟ್ ಆಗಿರಬಹುದಲ್ಲವೇ?" ಎಂದು ಕೇಳಿದಾಗ ನಿಟ್ಟುಸಿರು ಬಿಟ್ಟು "ನಾನೀಗ ಗೃಹಿಣಿ ಅಷ್ಟೇ, ಮುಂದೆ ಹಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಲಿಲ್ಲ" ಎಂದಳು. ಅವಳಂತಹ ಒಳ್ಳೆಯ ನ್ಯಾಚುರಲ್ ಹಾಡುಗಾರ್ತಿಗೆ ಹಾಡು ಮುಂದುವರೆಸುವ ಅವಕಾಶ ಸಿಗಲಿಲ್ಲ ಎಂಬುದನ್ನು ಕೇಳಿ ಮನಸ್ಸು ಖಿನ್ನವಾಯಿತಾದರೂ ನನ್ನ ಚಿಕ್ಕಂದಿನ ಅನೇಕ ಸುಂದರ ನೆನಪುಗಳನ್ನು ಇಬ್ಬರೂ ನೆನಪಿಸಿಕೊಂಡಾಗ ಮನಸ್ಸು ಪ್ರಸನ್ನವಾಯಿತು.

English summary
Sankeshwar Days 13 : That new girl in our class gave a blow on my ego as a singer, writes Vasant Kulkarni from Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X