ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

1979ರ ಡಿಸೆಂಬರ್ ತಿಂಗಳು ಎಂದು ನೆನಪು. ನಮ್ಮ ತಂದೆ ನಮ್ಮನ್ನು ಬಿಜಾಪುರದಿಂದ ಸಂಕೇಶ್ವರ ಎಂಬ ಊರಿಗೆ ಕರೆದುಕೊಂಡು ಹೊರಟರು. ಒಂದು ವರ್ಷದಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಅವರು ಮನೆ ಮಾಡಿ ನಮ್ಮನ್ನೆಲ್ಲ ಆ ಊರಿಗೆ ಕರೆದೊಯ್ಯುತ್ತಿದ್ದರು. ನನಗೆ ನೆನಪಿದ್ದ ಮಟ್ಟಿಗೆ ನನ್ನ ತಾಯಿ ಮತ್ತು ಅಣ್ಣನ ಮನದಲ್ಲಿ ಮಿಶ್ರ ಭಾವನೆಗಳು. ತಂಗಿ ತೀರ ಚಿಕ್ಕವಳಾದ್ದರಿಂದ ಅವಳು ಏನು ಯೋಚಿಸುತ್ತಿದ್ದಳು ಎಂದು ಗೊತ್ತಾಗುತ್ತಿರಲಿಲ್ಲ. ಅವರಿಗೆಲ್ಲ ಹುಟ್ಟಿನಿಂದ ಚಿರಪರಿಚಿತ ಸುತ್ತುಮುತ್ತಲನ್ನು ಬಿಟ್ಟು ಇನ್ನೂರು ಕಿಲೋಮೀಟರ್ ದೂರದ ಅಪರಿಚಿತ ಊರಿಗೆ ಹೋಗಲು ಎಂಥದೋ ಹಿಂಜರಿತ. ಹೊಸ ಊರು, ಹೊಸ ಜನ ಅದು ಹೇಗೋ ಎಂಬ ಕಳವಳ. ಒಂದು ಬಗೆಯ ಆತಂಕದಿಂದಲೇ ಅವರು ಸಂಕೇಶ್ವರದ ಬಸ್ಸು ಹತ್ತಿದರೆನ್ನಬಹುದು.

ಅಕ್ಕರೆಯನ್ನು ನನ್ನ ಬಾಯಿಗೆ ಸುರಿಯುತ್ತಿದ್ದ ಗುಳಂಬದ ಆಯಿಅಕ್ಕರೆಯನ್ನು ನನ್ನ ಬಾಯಿಗೆ ಸುರಿಯುತ್ತಿದ್ದ ಗುಳಂಬದ ಆಯಿ

ನನಗೋ ಬಹಳ ಹಿಗ್ಗು. ಬಿಜಾಪುರದ ನಮ್ಮ ಮನೆಯ ಉಸಿರುಗಟ್ಟಿಸುವ ವಾತಾವರಣವನ್ನು ಶಾಶ್ವತವಾಗಿ ಬಿಟ್ಟು ಹೋಗುವುದು ನನಗೆ ಬಹಳ ಆನಂದ ತರಿಸಿತ್ತು. ಸದಾ ಬೈಯುವ ಅಜ್ಜಿ ಮತ್ತು ಅವಳ ಕುಮ್ಮಕ್ಕಿನಿಂದ ಬೀಳುವ ಅಮ್ಮನ ಹೊಡೆತಗಳಿಂದ ಪಾರಾಗುವುದು ನನಗೆ ಬಹಳ ಆನಂದ ತಂದ ವಿಚಾರವಾಗಿತ್ತು. ನನ್ನ ಸಂತೋಷವನ್ನು ನಾನು ಯಾರಿಗೂ ಬಾಯಿ ಬಿಟ್ಟು ಹೇಳಲಿಲ್ಲ. ಆದರೆ ನನ್ನ ಅಂದಿನ ಸಂತೋಷವನ್ನು ಹೊಸ ಊರಿಗೆ ಹೋಗುವಾಗ ಆಗುವ ಬಾಲ್ಯ ಸಹಜ ಆನಂದ ಎಂದೇ ಎಲ್ಲರೂ ಭಾವಿಸಿದ್ದರು ಎಂದು ಕಾಣುತ್ತದೆ. ಮೇಲು ನೋಟಕ್ಕೆ ಅಮ್ಮನಿಗೆ ವಿಜಯಪುರವನ್ನು ಬಿಟ್ಟು ಹೋಗುವುದು ಇಷ್ಟವಿಲ್ಲ ಎಂದೇ ಕಾಣುತ್ತಿದ್ದರೂ, ಹಿಂಸಾತ್ಮಕ ಪರಿಸರವನ್ನು ಬಿಟ್ಟು ಹೋಗುವುದು ಅವಳಿಗೂ ನೆಮ್ಮದಿಯ ವಿಷಯವೇ ಆಗಿತ್ತು ಎನ್ನುವ ಗುಮಾನಿ ನನ್ನದು. ಬಸ್ಸೇರಿ ಕುಳಿತ ತಕ್ಷಣ ಯಾವಾಗ ಹೊಸ ಊರು ಬರುವುದೋ, ಯಾವಾಗ ಹೊಸ ಮನೆಯನ್ನು ಸೇರುತ್ತೇವೋ ಎಂದೇ ಕಾಯುತ್ತಿದ್ದೆ.

ರಾಮಾಯಣ ಮಹಾಭಾರತ ಬಿಂಬಿಸುವ ಬೋರೋಬುದುರ್ ದೇಗುಲ ರಾಮಾಯಣ ಮಹಾಭಾರತ ಬಿಂಬಿಸುವ ಬೋರೋಬುದುರ್ ದೇಗುಲ

ಬಸ್ಸು ಜಮಖಂಡಿ, ರಬಕವಿ, ಬನಹಟ್ಟಿ, ಮಹಾಲಿಂಗಪುರ, ಹುಕ್ಕೇರಿ ಮಾರ್ಗವಾಗಿ ಐದಾರು ಗಂಟೆಗಳ ನಂತರ ಸಂಕೇಶ್ವರಕ್ಕೆ ಬಂದು ನಿಂತಾಗ ಸಂಜೆ ನಾಲ್ಕರ ಸಮಯ. ಬಸ್ ನಿಲ್ದಾಣದಲ್ಲಿ ನಮ್ಮನ್ನು ಸ್ವಾಗತಿಸಲು ನಮ್ಮ ತಂದೆಯ ಆಫೀಸಿನಲ್ಲಿ ಕೆಲಸ ಮಾಡುವ ಜನಾರ್ಧನ ಎಂಬ ಪ್ಯೂನ್ ಬಂದಿದ್ದ. ಬಸ್ಸಿನಿಂದಿಳಿದ ನಮ್ಮನ್ನು ನಗುಮೊಗದಿಂದ ಸ್ವಾಗತಿಸಿದ ಜನಾರ್ಧನನನ್ನು ನನ್ನ ತಂದೆ ಪರಿಚಯಿಸಿದ ಮೇಲೆ, ನಾನು ಅವನನ್ನು ಜನಾರ್ಧನ ಮಾಮಾ ಎಂದೇ ಸಂಬೋಧಿಸಿದೆ. ಸಂಕೇಶ್ವರದ ಬಳಿಯ ಕುಗ್ರಾಮವೊಂದರ ಜನಾರ್ಧನ ತನ್ನ ಮುಗ್ಧ ಮತ್ತು ಸ್ನೇಹಪರ ನಡವಳಿಕೆಯಿಂದ ನಮಗೆ ಬಹಳ ಆತ್ಮೀಯನಾಗಿಬಿಟ್ಟ.

 Sankeshwar City and the transformation in my life

ಆ ವೇಳೆಗಾಗಲೇ ಪ್ಯೂನ್ ಎಂಬ ಪದದ ಅರ್ಥ ನನಗಾಗಲೇ ಆಗಿತ್ತು. ಪ್ಯೂನ್ ಎಂಬ ಪದದ ಅರ್ಥವನ್ನು ನನಗೆ ಪರಿಚಯ ಮಾಡಿಸಿದ ಘಟನೆ ರಸವತ್ತಾದ್ದು. ವಿಜಯಪುರದ ನಮ್ಮ ಮನೆಯ ಪಕ್ಕದಲ್ಲಿ ಎಣ್ಣೆ ವ್ಯಾಪಾರಸ್ಥರ ಮಗನಾದ ಬಸವರಾಜ ಎಂಬ ಗೆಳೆಯ, ದಿನ ನಿತ್ಯ ಗರಿಗರಿಯಾದ ಬಿಳಿ ಅಂಗಿ, ಕಪ್ಪು ನೀಲಿ ಚಡ್ಡಿ ಮತ್ತು ಟೈಯನ್ನು ಧರಿಸಿ ತನ್ನ ಇಂಗ್ಲೀಷು ಮೀಡಿಯಮ್ ಸ್ಕೂಲಿಗೆ ಹೋಗುತ್ತಿದ್ದ. ನಾನು ಬೀದಿಯ ಹೆಚ್ಚಿನ ಮಕ್ಕಳು ಹೋಗುತ್ತಿದ್ದ ಸರಕಾರಿ ಕನ್ನಡ ಮಾಧ್ಯಮದ ಗಂಡು ಮಕ್ಕಳ ಶಾಲೆಗೆ ಹೋಗುತ್ತಿದ್ದೆ.

ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಆ ಮಹಾನ್ ಯುದ್ಧಗಳುಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಆ ಮಹಾನ್ ಯುದ್ಧಗಳು

ಸಂಜೆ ಶಾಲೆಯಿಂದ ಬಂದ ಮೇಲೆ, ನಾವೆಲ್ಲ ಮಕ್ಕಳು ನಮ್ಮ ನಮ್ಮ ಸ್ಕೂಲಿನ್ ಬಗ್ಗೆ ದೊಡ್ಡ ದೊಡ್ಡ ಬಡಾಯಿ ಕೊಚ್ಚಿಕೊಳ್ಳುತ್ತಿದ್ದೆವು. ಅವನು ತನ್ನ ಸ್ಕೂಲಿನ ಬಗ್ಗೆ ಮಾತನಾಡುವಾಗ ಪ್ಯೂನ್, ಪ್ಯೂನ್ ಎಂದು ಅನೇಕ ಬಾರಿ ಮಾತನಾಡುತ್ತಿದ್ದುದನ್ನು ಗಮನಿಸಿದ ನಾನು ಈ ಪ್ಯೂನ್ ಎಂದರೆ ಸ್ಕೂಲಿನ ಅತಿದೊಡ್ಡ ಹುದ್ದೆ ಎಂದು ಭಾವಿಸಿದ್ದೆ. ಅದೊಂದು ದಿನ ನಮ್ಮ ಸಂಜೆಯ ಮೀಟಿಂಗಿನಲ್ಲಿ ಹುಡುಗರೆಲ್ಲರೂ ದೊಡ್ಡವರಾದ ಮೇಲೆ ತಾವೇನಾಗಬೇಕೆಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದರು. ಒಬ್ಬ ಹುಡುಗ ತಾನು ಇಂಜಿನೀಯರ್ ಆಗಬೇಕು ಎಂದರೆ, ಇನ್ನೊಬ್ಬ ತಾನು ಡಾಕ್ಟರ್ ಎಂದ. ಮಗದೊಬ್ಬ ತಾನು ಸ್ಕೂಲು ಹೆಡ್ ಮಾಸ್ಟರ್ ಎಂದರೆ ಮತ್ತೊಬ್ಬ ತಾನು ಪೊಲೀಸು ಇನ್ಸಪೆಕ್ಟರ್ ಆಗಬೇಕಾಗಿದೆ ಎಂದ. ನನ್ನ ಸರದಿ ಬಂದಾಗ ನಾನು ಬಹಳ ಬೀಗಿ ನಾನು ಪ್ಯೂನ್ ಆಗುತ್ತೇನೆ ಎಂದು ಹೇಳಿಕೊಂಡೆ. ಎಲ್ಲ ಹುಡುಗರೂ ಜೋರಾಗಿ ನಗತೊಡಗಿದರು. ನನ್ನ ಅಣ್ಣ ಜೋರಾಗಿ ನಗುತ್ತಲೇ "ಪ್ಯೂನ್ ಎಂದರೆ ಏನೆಂದುಕೊಂಡೆ? ಜವಾನ ಕಣೋ" ಎಂದು ಹೇಳಿದಾಗ ನನಗೆ ಬಹಳ ಅವಮಾನವಾಗಿ ಅಳುವೇ ಬಂದಿತು.

ನನ್ನ ಮತ್ತು ಕವಿತೆ ಸಂಬಂಧ ಲಕ್ಷ್ಮಣ ಮತ್ತು ಊರ್ಮಿಳೆಯದ್ದು ನನ್ನ ಮತ್ತು ಕವಿತೆ ಸಂಬಂಧ ಲಕ್ಷ್ಮಣ ಮತ್ತು ಊರ್ಮಿಳೆಯದ್ದು

ಸಂಕೇಶ್ವರಕ್ಕೆ ಬರುವ ಮೊದಲು, ಅಲ್ಲಿಗೆ ಹೋಗುವ ವಿಚಾರ ಮನೆಯಲ್ಲಿ ನಡೆಯುತ್ತಿದ್ದಾಗ ನಮ್ಮ ಶಾಲೆಯ ಕುರಿತಾಗಿ ಮಾತುಕತೆಯಾಗುತ್ತಿತ್ತು. ಡಿಸೆಂಬರ್ ತಿಂಗಳಲ್ಲಿ ಹೋಗುವುದರಿಂದ ಉಂಟಾಗಬಹುದಾದ ತೊಂದರೆಗಳನ್ನು ಕುರಿತು ನಮಗೆ ಆತಂಕವಿತ್ತು. ಬಿಜಾಪುರಕ್ಕೆ ಹೋಲಿಸಿದರೆ ಸಂಕೇಶ್ವರ ತುಂಬಾ ಚಿಕ್ಕ ಊರಾಗಿದ್ದುದರಿಂದ ತಂದೆ ತಾಯಿಗಳಿಬ್ಬರೂ ನಿರಾಂತಕವಾಗಿದ್ದರು. ಅಮ್ಮನಂತೂ "ಸಂಕೇಶ್ವರ ಒಂದು ಹಳ್ಳಿಯೇ. ಅಂತಹ ಊರಲ್ಲಿ ನೀವೇ ಜಾಣರು, ಚಿಂತೆಯನ್ನೇ ಮಾಡಬೇಡಿ" ಎಂದು ಅನೇಕ ಬಾರಿ ಹೇಳಿದ್ದಳು. ಅದೇ ಮಾತನ್ನು ಕೆಲವು ಬಾರಿ ಕೇಳಿದ ಮೇಲೆ ನಮಗೂ ನಿರಾಂತಕವಾಯಿತು.

ಆದರೆ ಸಂಕೇಶ್ವರಕ್ಕೆ ಬಂದ ಮೇಲೆ ನಾನು ನಾಲ್ಕನೇ ತರಗತಿಯಲ್ಲಿ ಸರಕಾರಿ ಶಾಲೆಗೆ ಸೇರಿದೆ. ಅಲ್ಲಿ ಹೋದ ಮೇಲೆ ಆದ ಅನುಭವವೇ ಬೇರೆ. ಅಲ್ಲಿ ಕಲಿಸುತ್ತಿದ್ದ ಟೀಚರ್ ಬಿಜಾಪುರದ ಶಾಲೆಗಿಂತ ಪಠ್ಯಕ್ರಮದಲ್ಲಿ ಮಾತ್ರವಲ್ಲ, ಕಲಿಸುವ ರೀತಿಯಲ್ಲಿ ಕೂಡ ಬಹಳ ಮುಂದಿದ್ದರು. ನಾವೇ ಜಾಣರು ಎಂದುಕೊಂಡು ಬಂದಿದ್ದ ನಮಗೆ ದೊಡ್ಡ ಅಘಾತ ಕಾದಿತ್ತು. ಎಲ್ಲ ವಿಷಯಗಳನ್ನು ಬಹಳ ಮನಸ್ಸಿನಿಂದ ಪ್ರಾಮಾಣಿಕವಾಗಿ ಕಲಿಸುತ್ತಿದ್ದ ಕುಲಕರ್ಣಿ ಟೀಚರ್ ಮತ್ತು ಅವರ ಹಳ್ಳಿಗಾಡು ಹುಡುಗರ ಮುಂದೆ ನನ್ನ ಜಾಣತನ ಮಟಾ ಮಾಯವಾಗಿತ್ತು. ಮೊದಲ ಕ್ಲಾಸ್ ಟೆಸ್ಟಿನಲ್ಲಿ ಬಹಳ ತೊಂದರೆ ಅನುಭವಿಸಿದೆ. ಆರನೆಯ ತರಗತಿಯಲ್ಲಿ ಓದುತ್ತಿದ್ದ ಅಣ್ಣನ ಪರಿಸ್ಥಿತಿಯೂ ಹಾಗೆಯೇ ಇತ್ತು.

ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ? ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?

ಈ ಕುರಿತು ಚರ್ಚಿಸಲು ಸಂಕೇಶ್ವರದ ಟೀಚರಗಳನ್ನು ಭೇಟಿ ಮಾಡಿದಾಗ ಅಲ್ಲಿಯ ಟೀಚರುಗಳು "ಬಿಜಾಪುರದಂತಹ ದೊಡ್ಡ ಊರಿನಿಂದ ಬಂದ ನಿಮ್ಮ ಮಕ್ಕಳು ಅಭ್ಯಾಸದಲ್ಲಿ ಅದು ಹೇಗೆ ಇಷ್ಟೊಂದು ಹಿಂದೆ?" ಎಂದು ಕೇಳಿದರು. ಅವರ ಹತ್ತಿರ ಈ ಪ್ರಶ್ನೆಗೆ ಉತ್ತರವಿರಲಿಲ್ಲ. ಅಪ್ಪ ಅಮ್ಮಂದಿರಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿತು. ಬಿಜಾಪುರದ ಶಾಲೆಯ ಕಳಪೆ ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಕ್ಲಾಸಿನಲ್ಲಿ ಜಾಣ ಎಂದೆನಿಸಿಕೊಂಡು ಮೆರೆಯುತ್ತಿದ್ದ ನಮಗೂ ಕೂಡ ಧಕ್ಕೆ ಉಂಟಾಗಿತ್ತು.

ನನಗೆ ಚೆನ್ನಾಗಿ ನೆನಪಿದೆ. ಅಮ್ಮ ನಮ್ಮಿಬ್ಬರನ್ನು ಮುಂದೆ ಕೂರಿಸಿಕೊಂಡು ಬೆಳಿಗ್ಗೆ ಸಂಜೆ ಪಾಠ ಹೇಳಿದ್ದೇ ಹೇಳಿದ್ದು. ಶಾಲೆಯಲ್ಲಿ ಕುಲಕರ್ಣಿ ಟೀಚರ್ ಸಮಾಜ ವಿಷಯದಲ್ಲಿ ಒಂದೊಂದು ಪ್ರಶ್ನೆಗೆ ಒಂದೊಂದು ಪೇಜಿನ ಉತ್ತರ ಬರೆಸಿದ್ದರು. ಕ್ಲಾಸಿನ ಶಿವಾಜಿ ಎಂಬ ಹುಡುಗ ಈ ಎಲ್ಲ ಉತ್ತರಗಳನ್ನು ಕಂಠಪಾಠ ಮಾಡಿ ಇಡೀ ಶಾಲೆಯಲ್ಲಿಯೇ ಜಾಣ ಎನಿಸಿಕೊಂಡಿದ್ದ. ಶಾಲೆಯ ಉಳಿದ ಹುಡುಗರಲ್ಲಿ ಯಾರೂ ಅಂತಹ ಸಾಹಸವನ್ನು ಮಾಡಿರಲಿಲ್ಲ. ಬೇರಾರಿಗೂ ಸಾಧ್ಯವಾಗದು ಎಂದೇ ಎಲ್ಲ ಹುಡುಗರು ಭಾವಿಸಿದ್ದರು. ಮೊದಮೊದಲು ಅಸಾಧ್ಯ ಎಂದೆನಿಸಿದರೂ ಕೊನೆಗೊಮ್ಮೆ ನಾನು ಕೂಡ ಎಲ್ಲ ಉತ್ತರಗಳನ್ನು ಕಂಠಪಾಠ ಮಾಡಿದೆ. ಅದನ್ನು ಕೇಳಿದ ಉಳಿದ ಹುಡುಗರು ಬೆರಗಾದರು.

ಮುಂದಿನ ಎರಡು ತಿಂಗಳಲ್ಲಿ ಅಲ್ಲಿಯವರೆಗೆ ಎಂದೂ ಮಾಡದಷ್ಟು ಅಭ್ಯಾಸ ಮಾಡಿ ವರ್ಷಾಂತ್ಯದ ಪರೀಕ್ಷೆಯಲ್ಲಿ ಕ್ಲಾಸಿನಲ್ಲಿ ಮೂರನೆಯ ಕ್ರಮಾಂಕ ಗಳಿಸಿದೆ. ಅಣ್ಣ ಕೂಡ ಹಾಗೆಯೇ ತನ್ನ ಕ್ಲಾಸಿನಲ್ಲಿ ಎರಡನೇ ಕ್ರಮಾಂಕ ಗಳಿಸಿದ ಎಂದು ನೆನಪು. ನನ್ನ ಟೀಚರ್ ಅಮ್ಮನೊಂದಿಗೆ ನಮ್ಮಲ್ಲುಂಟಾದ ಪ್ರಗತಿಯನ್ನು ನೋಡಿ ಹೊಗಳಿದ್ದರು. ಆಗ ನಮ್ಮೊಂದಿಗೆ ಅಮ್ಮ ಅಪ್ಪನ ಸಂತಸ ಕೂಡ ಆಗಸಕ್ಕೇರಿತ್ತು. ಐದನೆಯ ತರಗತಿಗೆ ನಾನು ಸರಕಾರಿ ಶಾಲೆಯನ್ನು ಬಿಟ್ಟು ಅಣ್ಣ ಕಲಿಯುತ್ತಿದ್ದ ಸಂಕೇಶ್ವರದ ಏಕಮೇವ ದೊಡ್ಡ ಸ್ಕೂಲಾದ ಎಸ್ ಡಿ ಹಾಯಸ್ಕೂಲಿಗೆ ಹೋಗಿ ಸೇರಿದೆ.

ಆದರೆ ನಾಲ್ಕನೆಯ ತರಗತಿಯಲ್ಲುಂಟಾದ ಈ ಅನಿರೀಕ್ಷಿತ ಆಘಾತ ನನ್ನ ಸ್ಪರ್ಧಾತ್ಮಕ ಜೀವನಕ್ಕೆ ನಾಂದಿ ಹಾಡಿತು. ಸಂಕೇಶ್ವರ ನನ್ನನ್ನು ಬಿಜಾಪುರದಲ್ಲಿನ ಅನಿಷ್ಟ ಜೀವನದಿಂದ ರಕ್ಷಿಸಿದ್ದಲ್ಲದೇ ನನ್ನ ಮುಂದಿನ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಜೀವನಕ್ಕೆ ಭದ್ರ ಬುನಾದಿ ಹಾಕಿತು. ಅಂದು ಒಮ್ಮೆಲೇ ಕೆಳಗೆ ಎಸೆದು, ಪ್ರಯತ್ನಶೀಲರಾಗುವಂತೆ ಮಾಡಿ ಮತ್ತೆ ಮೇಲಕ್ಕೇಳುವಂತೆ ಮಾಡಿದ ವಿಧಿಯ ಆಟ ನನ್ನಲ್ಲಿ ಸದಾ ಧನಾತ್ಮಕವಾಗಿ ಯೋಚಿಸುವ ಮನೋಭಾವವನ್ನು ಮೂಡಿಸಿತು. ರಾಜ್ಯದ ವಾಯುವ್ಯ ದಿಕ್ಕಿನ ಮೂಲೆಯಲ್ಲಿ, ಹಿರಣ್ಯಕೇಶಿ ನದಿಯ ದಂಡೆಯ ಮೇಲಿನ ಸಂಕೇಶ್ವರ ಊರು ಮತ್ತು ನನಗೆ ಸವಾಲೆಸೆದು, ಕಠಿಣ ಪ್ರರಿಶ್ರಮ ಮಾಡಲು ಪ್ರೇರಿಸಿದ ಕುಲಕರ್ಣಿ ಟೀಚರ್ ಇಂದಿಗೂ ನನ್ನ ಮನದಲ್ಲಿ ಚಿರಸ್ಮರಣೀಯರಾಗಿ ಉಳಿದಿದ್ದಾರೆ.

English summary
Kannada columnist Vasant Kulkarni from Singapore recalls how the small city Sankeshwar in Belagavi district and Kulkarni teacher brought positive transformation in his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X