ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನಪನ್ನು ಹಸಿರಾಗಿಸುವ ಸಂಕೇಶ್ವರದ ಸಕ್ಕರೆ ಕಾರಖಾನೆಯ ಭವ್ಯ ಚಿತ್ರಣ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನಾವು ಚಿಕ್ಕವರಿದ್ದಾಗ ಶಾಲೆಗೆ ಹೋಗಿ ಬರುತ್ತಿರುವಾಗ ಎತ್ತಿನ ಬಂಡಿಗಳು ಸಾಲು ಸಾಲು ಕಬ್ಬನ್ನು ಹೇರಿಕೊಂಡು ಹೋಗುತ್ತಿರುವುದು ಕಾಣಿಸುತ್ತಿತ್ತು. ನನ್ನ ಅನೇಕ ಸಹಪಾಠಿಗಳು ಆ ಬಂಡಿಗಳ ಹಿಂದೆ ಓಡಿ ಹೋಗಿ ಹಿಂದಿನಿಂದ ಕಬ್ಬನ್ನು ಮುರಿದುಕೊಂಡು ಬರುತ್ತಿದ್ದರು. ಕೆಲವು ಬಾರಿ ನಾನೂ ಕೂಡ ಓಡಿ ಕಬ್ಬು ಮುರಿದುಕೊಂಡಿದ್ದುಂಟು. ಮುಂದೆ ಕುಳಿತು ಎತ್ತುಗಳನ್ನು ನಿಯಂತ್ರಿಸುತ್ತಿದ್ದ ರೈತರು ಕಬ್ಬು ಕದಿಯಲು ಬರುವ ನಮ್ಮನ್ನು ಬೈಯುತ್ತಿದ್ದರು, ಅಲ್ಲದೇ ಕೆಲವು ಬಾರಿ ಬಾರುಕೋಲನ್ನೆತ್ತಿ ಸಪ್ಪಳ ಮಾಡಿ ಓಡಿಸಲು ಪ್ರಯತ್ನಿಸುತ್ತಿದ್ದರು.

ಮೊದಮೊದಲು ನನಗೆ ಈ ಕಬ್ಬನ್ನು ಹೇರಿಕೊಂಡು ಅದೆಲ್ಲಿ ಹೋಗುತ್ತಿದ್ದರು ಎಂದು ತಿಳಿದಿರಲಿಲ್ಲ. ಕಬ್ಬನ್ನು ಅವರು ಬೆಲ್ಲ ಮಾಡುವ ಅಲೆಮನೆಗೋ ಅಥವಾ ಸಂತೆಗೋ ತೆಗೆದುಕೊಂಡು ಹೋಗುತ್ತಿದ್ದರು ಎಂದು ನನ್ನ ಭಾವನೆಯಾಗಿತ್ತು. ಆದರೆ ಕೆಲದಿನಗಳ ನಂತರ ನನಗೆ ರೈತರು ತಮ್ಮ ಕಬ್ಬನ್ನು ಸಂಕೇಶ್ವರದ ಪ್ರಸಿದ್ಧ ಹಿರಾ ಸಕ್ಕರೆ ಕಾರಖಾನೆಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿತು.

ಸಂಕೇಶ್ವರದಲ್ಲಿ ನನ್ನಲ್ಲಿನ ಆಟಗಾರನನ್ನ ಬಡಿದೆಬ್ಬಿಸಿದ್ದ ಅಮ್ಮಣಗಿ ಸರ್ ಸಂಕೇಶ್ವರದಲ್ಲಿ ನನ್ನಲ್ಲಿನ ಆಟಗಾರನನ್ನ ಬಡಿದೆಬ್ಬಿಸಿದ್ದ ಅಮ್ಮಣಗಿ ಸರ್

ಹಿರಾ ಸಕ್ಕರೆ ಕಾರಖಾನೆ ಸ್ವಾತಂತ್ರ್ಯ ಯೋಧ ದಿ. ಅಪ್ಪಣ್ಣಗೌಡ ಪಾಟೀಲರ ಕನಸಿನ ಕೂಸು. ಸಂಕೇಶ್ವರದ ರೈತರ ಸ್ಥಿತಿಗತಿಗಳನ್ನು ಸುಧಾರಿಸುವುದು ಮತ್ತು ಸಂಕೇಶ್ವರ ಪ್ರಾಂತ್ಯದ ಒಟ್ಟಾರೆ ಅಭಿವೃದ್ಧಿಗೆ ಅಪ್ಪಣ್ಣಗೌಡ ಪಾಟೀಲರ ಕೊಡುಗೆ ಅಪಾರವಾದುದು. ಅವರ ನೇತೃತ್ವದಲ್ಲಿ ಸಂಕೇಶ್ವರ ಪ್ರಾಂತ್ಯದ ಇತರ ಸಹಕಾರಿ ನಾಯಕರು ಒಟ್ಟಾಗಿ 1955ರಲ್ಲಿ ಸ್ಥಾಪಿಸಿದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆ (ಹಿರಾ ಶುಗರ್) ದೇಶದ ಅತ್ಯಂತ ಉತ್ತಮ ಗುಣಮಟ್ಟದ ಸಕ್ಕರೆ ಕಾರಖಾನೆ ಎಂದು ಪ್ರಸಿದ್ಧವಾಯಿತು. ಈ ಕಾರಖಾನೆ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರದ ಅನೇಕ ಸಹಕಾರಿ ಸಕ್ಕರೆ ಕಾರಖಾನೆಗಳಿಗೆ ಮಾದರಿಯಾಯಿತು. ಸ್ಕೂಲಿನಲ್ಲಿ ಅಪ್ಪಣ್ಣಗೌಡರ ಫೋಟೋ ಒಂದರ ಕೆಳಗೆ "ಬಹುಜನ ಹಿತಾಯ ಬಹುಜನ ಸುಖಾಯ ನಿನ್ನ ಬಾಳು" ಎಂದು ಬರೆದ ಒಕ್ಕಣಿಕೆ ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ.

http://ptimages.greynium.com/viewimage.php?module=big&path=/2018/01/31/&file=pti1_31_2018_000061b.jpg

ಸುಮಾರು ಹತ್ತು ವರ್ಷಗಳ ನಂತರ ನಾನು ಎಂಜಿನೀಯರಿಂಗ್ ಓದುತ್ತಿದ್ದಾಗ ಸಾಂಗ್ಲಿ ಜಿಲ್ಲೆಯ ಉತ್ತರ ಭಾಗದ ವಿಟಾ ಎಂಬ ಊರಿನ ಹತ್ತಿರದ ಹಳ್ಳಿಯೊಂದಕ್ಕೆ ಹೋಗಿದ್ದೆ. ಅದು ನನ್ನ ಸಹಪಾಠಿಯೋರ್ವನ ಊರಾಗಿತ್ತು. ಅಲ್ಲಿ ನಾನು ಭೇಟಿಯಾದ ನನ್ನ ಸಹಪಾಠಿಯ ಸೋದರಮಾವ ಒಬ್ಬ ಸಾಮಾನ್ಯ ಕಬ್ಬು ಬೆಳೆಗಾರ. ಅಷ್ಟೇನೂ ಓದಿರದಿದ್ದರೂ ಅವರಿಗೆ ಸುಮಾರು ನೂರೈವತ್ತಕ್ಕೂ ಹೆಚ್ಚು ಕಿಲೋಮೀಟರ್ ದೂರದ ಸಂಕೇಶ್ವರದ ಹಿರಾ ಶುಗರ್ ಬಗ್ಗೆ ಗೊತ್ತಿತ್ತು.

ಅವರು ಹಿರಾ ಶುಗರ್ ಕಾರಖಾನೆಯ ಬಗ್ಗೆ ಕೇಳಿದ್ದೇ ತಡ, "ಅದು ನಮ್ಮ ಭಾಗದ ಎಲ್ಲ ಸಕ್ಕರೆ ಮಿಲ್ಲುಗಳಲ್ಲಿ ಅತ್ಯಂತ ಪ್ರತಿಷ್ಠಿತವಾದದ್ದು. ಆ ಭಾಗದ ರೈತರಿಗೆ ಎಲ್ಲರಿಗಿಂತ ಹೆಚ್ಚಿನ ಹಣ ನೀಡುವ ಸಂಸ್ಥೆ" ಎಂದು ಬಹಳ ಗೌರವ ಮತ್ತು ಹೆಮ್ಮೆಯಿಂದ ಹೇಳಿದ. ಆಗ ನನಗೆ ಸಂಕೇಶ್ವರದ ಸಕ್ಕರೆ ಕಾರಖಾನೆಯ ನಿಜವಾದ ಮಹತ್ವದ ಅರಿವಾಯಿತು. ರೈತರಿಗೆ ತಕ್ಕ ಬೆಲೆಯನ್ನು ಕೊಟ್ಟು ಈ ಭಾಗದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಈ ಕಾರಖಾನೆ ಮತ್ತು ಅದನ್ನು ಸ್ಥಾಪಿಸಿದ ಮಹಾನ್ ಶಕ್ತಿಗಳ ಬಗ್ಗೆ ನನಗೆ ಅಪಾರ ಗೌರವ ಉಂಟಾಯಿತು. ಇಂದಿಗೂ ಈ ಕಾರಖಾನೆ ಅಪ್ಪಣ್ಣಗೌಡರ ಆದರ್ಶ ಪಥದಲ್ಲಿಯೇ ಮುಂದುವರೆಯುತ್ತಿದೆ ಎಂದು ಭಾವಿಸುತ್ತೇನೆ.

ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ ಹೊಸ ಕಾವ್ಯಮಾರ್ಗದಲ್ಲಿ ಹೆಜ್ಜೆ ಹಾಕಲು ಕಲಿಸಿದ ಕವಿ ಎಚ್ಚೆಸ್ವಿ

ನಾನು ಆರನೆಯ ತರಗತಿಯಲ್ಲಿದ್ದೆನೋ ಅಥವಾ ಏಳನೆಯ ತರಗತಿಯಲ್ಲಿದ್ದೆನೋ ನೆನಪಿಲ್ಲ. ಆಗ ನನಗೆ ಸಕ್ಕರೆ ಕಾರಖಾನೆ ನೋಡುವ ಅವಕಾಶ ಕೂಡ ದೊರೆಯಿತು. ನನಗಿನ್ನೂ ಸ್ಫುಟವಾಗಿ ನೆನಪಿದೆ. ಕಬ್ಬಿನ ಹಾಲು ಕೊತಕೊತ ಕುದಿಯುವ ದೊಡ್ಡ ಟ್ಯಾಂಕುಗಳು, ಗಟ್ಟಿಯಾದ ಪಾಕ ಹರಿದು ಹೋಗುತ್ತಿದ್ದ ಕನ್ವೇಯರುಗಳು ಮತ್ತು ಬಿಳಿ ಸಕ್ಕರೆಯನ್ನು ತುಂಬಿಕೊಳ್ಳುತ್ತಿದ್ದ ಗೋಣಿಚೀಲಗಳು ನಿನ್ನೆ ತಾನೇ ನೋಡಿದ ಹಾಗೆ ಸ್ಪಷ್ಟವಾಗಿ ನೆನಪಿನಲ್ಲಿವೆ. ಸಕ್ಕರೆ ತುಂಬುವ ಸ್ಥಳಕ್ಕೆ ಬಂದಾಗ ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರು ಎಲ್ಲರ ಕೈಯಲ್ಲಿ ಮುಷ್ಟಿ ಮುಷ್ಟಿಯಾಗಿ ಸಕ್ಕರೆ ಹಾಕಿ ತಿನ್ನಲು ಹೇಳಿದರು. "ನೀವು ಎಷ್ಟು ಬೇಕಾದರೂ ತಿನ್ನಿ. ಆದರೆ ಹೊರಗೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ" ಎಂದು ಹೇಳಿ ನಕ್ಕರು. ಹುಡುಗರಾದ ನಾವು ಮುಕ್ಕಿದ್ದೇ ಮುಕ್ಕಿದ್ದು. ಆದರೇನು? ಸ್ವಲ್ಪ ತಿನ್ನುವಷ್ಟರಲ್ಲಿಯೇ ಸಾಕಪ್ಪಾ ಸಾಕು ಎನಿಸಿತು. ಲಗುಬಗೆಯಿಂದ ಸಕ್ಕರೆ ಮುಕ್ಕುವ ನಮ್ಮನ್ನು ನೋಡಿ ದೊಡ್ಡವರೆಲ್ಲ ನಸುನಕ್ಕರು.

http://ptimages.greynium.com/viewimage.php?module=big&path=/2018/01/31/&file=pti1_31_2018_000061b.jpg

ನನಗೆ ನೆನಪಿರುವ ಹಿರಾಶುಗರ್ ಕಾರಖಾನೆಯ ಮತ್ತೊಂದು ವಿಷಯವೇನೆಂದರೆ, ಕಾರಖಾನೆಯ ಆವರಣದಲ್ಲಿಯೇ ಅಲ್ಲಿ ಕೆಲಸ ಮಾಡುವ ಅನೇಕ ಅಧಿಕಾರಿಗಳು ಮತ್ತು ಎಂಜಿನಿಯರುಗಳು ಅಲ್ಲಿನ ಕ್ವಾರ್ಟರ್ಸ್ ಗಳಲ್ಲಿ ವಾಸಿಸುತ್ತಿದ್ದರು. ಅವರಿಗಾಗಿ ಅಲ್ಲಿ ದೊಡ್ಡದೊಂದು ಸಿನೆಮಾ ಹಾಲ್ ಇತ್ತು. ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ನೆನಪಿಲ್ಲ, ಅಲ್ಲಿ ಉಚಿತ ಸಿನೆಮಾ ತೋರಿಸುತ್ತಿದ್ದರು. ಊರವರು ಕೂಡ ಅಲ್ಲಿಗೆ ಹೋಗಬಹುದಾಗಿತ್ತು. ಆದರೆ ಕಾರಖಾನೆ ಊರಿನಿಂದ ಸುಮಾರು ಐದು ಕಿಲೋಮೀಟರ್ ದೂರವಿದ್ದುದರಿಂದ ನಾವೆಲ್ಲ ಅಲ್ಲಿಯವರೆಗೆ ನಡೆಯುತ್ತಲೇ ಹೋಗಬೇಕಾಗುತ್ತಿತ್ತು. ಕಾರಖಾನೆಯ ಸ್ವಂತದ ಸಿನೆಮಾ ಹಾಲ್ ಇರುವುದರಿಂದ ಒಳ್ಳೆಯ ಪೌರಾಣಿಕ ಅಥವಾ ಸಾಮಾಜಿಕ ಸಿನೆಮಾಗಳನ್ನೇ ಅಲ್ಲಿ ತೋರಿಸುತ್ತಿದ್ದರು. ನನಗೆ ನೆನಪಿರುವ ಮಟ್ಟಿಗೆ ನಾವು ಅಲ್ಲಿ ಸುಮಾರು ಎರಡು ಮೂರು ಬಾರಿ ಸಿನೆಮಾ ನೋಡಿದ್ದೆವು. ನನಗೆ ಇಂದಿಗೂ ನೆನಪಿರುವ ಸಿನೆಮಾ ಎಂದರೆ ರಾಜಕುಮಾರ್ ಅಭಿನಯಿಸಿದ "ಭಕ್ತ ವಿಜಯ".

ಸುಪ್ತವಾಗಿದ್ದ ಅಹಂಕಾರದ ಸರ್ಪವನ್ನು ಬಡಿದೆಚ್ಚರಿಸಿದ ಪ್ರಸಂಗ! ಸುಪ್ತವಾಗಿದ್ದ ಅಹಂಕಾರದ ಸರ್ಪವನ್ನು ಬಡಿದೆಚ್ಚರಿಸಿದ ಪ್ರಸಂಗ!

ಸಿನೆಮಾ ನೋಡುವುದಕ್ಕಿಂತ ನನಗೆ ಹೆಚ್ಚು ಆನಂದ ನೀಡುತ್ತಿದ್ದ ವಿಷಯವೇನೆಂದರೆ, ಅಲ್ಲಿನವರೆಗೂ ನಡೆದು ಹೋಗುತ್ತಿದ್ದ ದಾರಿ. ಮನೆಯಿಂದ ಹೊರಡುವಾಗ ನಮ್ಮ ನೆರೆಹೊರೆಯ ಎಲ್ಲರೂ ಸೇರಿಕೊಂಡು ಸುಮಾರು ಹತ್ತು ಹದಿನೈದು ಜನ ಇರುತ್ತಿದ್ದೆವು. ನಮ್ಮ ಮನೆ ಮಾಲೀಕರಾದ ಅಂಬಲಿಮಠ, ನನ್ನ ಗೆಳೆಯ ವೆಂಕಟೇಶ ಕುಲಕರ್ಣಿಯ ಮನೆ ಜನಗಳೆಲ್ಲ ನಮ್ಮ ಜೊತೆ ಸೇರುತ್ತಿದ್ದರು. ಎಲ್ಲರೂ ಮಾತನಾಡುತ್ತ ಊರ ಗಡಿಯನ್ನು ದಾಟಿ ಹೊಲಗಳ ಮಧ್ಯೆ ಇರುವ ದಾರಿಯಲ್ಲಿ ನಡೆಯುತ್ತ ಹೋಗುತ್ತಿದ್ದೆವು. ಅದೇ ದಾರಿಯಲ್ಲಿ ಅಂಬಲಿಮಠ ಅವರ ಹೊಲ ಕೂಡಾ ಇತ್ತು. ಹೊಲದಲ್ಲಿ ಅವರ ಮನೆಯೂ ಇತ್ತು. ಅವರ ಹೊಲದಲ್ಲಿ ಮೆಣಸಿನಕಾಯಿ, ಕಡಲೆ, ಬದನೆಕಾಯಿ ಮುಂತಾದವುಗಳನ್ನು ಬೆಳೆಯುತ್ತಿದ್ದುದನ್ನು ನಾನು ನೋಡಿದ್ದೆ. ಕಣ್ಣು ಹಾಯಿಸಿದಷ್ಟು ದೂರದಲ್ಲಿ ಹಸಿರು ಬೆಳೆ ಹರಡಿದ್ದುದನ್ನು ನೋಡಿ ಆನಂದವಾಗುತ್ತಿತ್ತು.

Sankeshwar and Hira Sugar factory

ಹಾಗೆ ಹೋಗಿ ಸಿನೆಮಾ ನೋಡಿ ಹಿಂತಿರುಗುವಾಗ ರಾತ್ರಿ ಕತ್ತಲೆಯಾಗಿಬಿಡುತ್ತಿತ್ತು. ಊರ ಗಡಿ ತಲುಪುವವರೆಗೂ ಬೀದಿ ದೀಪಗಳಿಲ್ಲದ ದಾರಿಯಲ್ಲಿ ಕಾಡ ಕತ್ತಲು. ನಕ್ಷತ್ರಗಳು ಫಳ ಫಳ ಹೊಳೆಯುತ್ತಿದ್ದ ಆಕಾಶದ ಕೆಳಗೆ ಒಬ್ಬರ ಮುಖ ಇನ್ನೊಬ್ಬರಿಗೆ ಕಾಣದಷ್ಟು ತುಂಬಿರುವ ಕಾರ್ಗತ್ತಲಿನಲ್ಲಿ, ನಾವೆಲ್ಲ ನೋಡಿದ ಸಿನೆಮಾ ಬಗ್ಗೆಯೋ ಅಥವಾ ಮತ್ತೇನಾದರೂ ವಿಷಯದ ಬಗ್ಗೆ ಮಾತನಾಡುತ್ತ ನಗುನಗುತ್ತ ನಡೆಯುವ ಸಂತಸದ ಕ್ಷಣಗಳು ಕವಿದ ಕತ್ತಲರಮನೆಯಲ್ಲಿ ಮಿಣುಕುವ ದೀಪಗಳಂತೆ ಪ್ರಜ್ವಲಿಸುತ್ತಿದ್ದವು. ಆ ಕ್ಷಣಗಳು ಹಾಗೆಯೇ ಅನಂತವಾಗಿಬಿಡಲಿ ಎಂದು ಅನೇಕ ಬಾರಿ ಅಂದುಕೊಳ್ಳುತ್ತಿದ್ದೆ.

ದಾರಿಯನ್ನು ತೋರಲು ನಮ್ಮ ತಂದೆಯವರ ಕೈಯಲ್ಲಿ ಚಿಕ್ಕದೊಂದು ಟಾರ್ಚ್ ಇರುತ್ತಿತ್ತು. ಅದನ್ನು ಹಿಡಿದುಕೊಂಡು ಅವರು ಮುಂದೆ ನಡೆಯುತ್ತಿದ್ದರು. ಅವರೊಂದಿಗೆ ನಾನು ಮತ್ತು ಇತರ ಮಕ್ಕಳು ನಡೆಯುತ್ತಿದ್ದೆವು. ಹಿಂದೆ ಹೆಂಗಸರೆಲ್ಲ ನಡೆಯುತ್ತಿದ್ದರು. ಅದೊಂದು ದಿನ ಹಾಗೆ ನಡೆಯುತ್ತಿದ್ದಾಗ ನಾನು ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ ಏನೋ ಹರಿದು ಹೋಗುತ್ತಿರುವುದು ಕಂಡಿತು. ಒಂದು ಕ್ಷಣದಲ್ಲಿ ಅದು ಹಾವು ಎಂದು ಗೊತ್ತಾಗಿ ನಾನು ಕೂಡಲೇ ಹಾವು ಹಾವು ಎಂದು ಚೀರಿ ಗಕ್ಕನೆ ಹಿಂದೆ ಹೆಜ್ಜೆ ಇಟ್ಟೆ. ನನ್ನ ಚೀರಾಟ ಕೇಳಿದ ಅಂಬಲಿಮಠ ಅವರ ಇಬ್ಬರು ಹುಡುಗಿಯರು ಅವರ ಅಮ್ಮ (ಅವರನ್ನು ನಾವು ಅಂಬಲಿಮಠ ಕಾಕು ಎಂದು ಕರೆಯುತ್ತಿದ್ದೆವು) ನೊಂದಿಗೆ ಹಿಂದೆ ತಿರುಗಿ ಓಡಲಾರಂಭಿಸಿದರು. ಅವರು ಓಡುತ್ತಿದ್ದುದನ್ನು ನೋಡಿ ಹಿಂದೆ ಉಳಿದ ಇತರರು ಹಾಗೆಯೇ ತಿರುಗಿ ಓಡಲಾರಂಭಿಸಿದರು. ಅಷ್ಟರಲ್ಲಿ ಹಾವು ಸರಿದು ಹೊಲವೊಂದರ ಬೇಲಿಯಾಚೆಗೆ ಹೋಗಿದ್ದರಿಂದ, ಮುಂದೆ ಇದ್ದ ನಾವೆಲ್ಲ "ತಿರುಗಿ ಹೋಗಬೇಡಿ, ಹಾವು ಹೊರಟು ಹೋಯಿತು, ವಾಪಸ್ಸು ಬನ್ನಿ" ಎಂದು ಕೂಗತೊಡಗಿದೆವು. ಹಿಂದೆ ಓಡಿ ಹೋಗುತ್ತಿದ್ದ ಅವರು ಮತ್ತೆ ವಾಪಸ್ಸು ತಿರುಗಿದರು.

ಅಂಬಲಿಮಠ ಕಾಕು ನಮ್ಮ ಹತ್ತಿರ ಬಂದು "ಏನಿತ್ತು?" ಎಂದು ಕೇಳಿದರು. "ಯಾವುದೋ ಹಾವು, ಕರಿಯಾಗಿತ್ತು. ನಾಗರಹಾವೇ ಇರಬಹುದು" ಎಂದು ಹೇಳಿದಾಗ, "ಓ! ಹಾವಾ? ನಾವೇನೋ ದೆವ್ವವೇ ಇರಬೇಕು ಎಂದುಕೊಂಡಿದ್ದೆವು" ಎಂದು ನೀರಸವಾಗಿ ಹೇಳಿದರು. ನನಗೆ ಆಶ್ಚರ್ಯ! ನಾವು ಹಾವೆಂದು ಹೌಹಾರಿ ಇಷ್ಟೊಂದು ಸದ್ದು ಮಾಡಿದರೆ, ಅವರು "ಹಾವಾ?" ಎಂದೆ ತಿರಸ್ಕಾರದಿಂದ ನುಡಿದಿದ್ದರು. ಅಲ್ಲದೇ ಅವರು ದೆವ್ವ ಎಂದು ಹೇಳಿದ್ದನ್ನು ಕೇಳಿ ನಮಗೂ ಕುತೂಹಲ ಕೆರಳಿತ್ತು. ಆಗ ಅವರು ಆ ದಾರಿಯಲ್ಲಿ ಯಾರೋ ಹೆಣ್ಣು ಮಗಳು ತೀರಿಕೊಂಡ ಮೇಲೆ ದೆವ್ವವಾಗಿ ತಿರುಗಾಡುತ್ತಾಳೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು. ನಾವು ಕೂಗಿದ್ದನ್ನು ನೋಡಿ ಅವರು ಆ ದೆವ್ವವೇ ನಮ್ಮ ಮುಂದೆ ಬಂದು ನಿಂತಿತ್ತು ಎಂದುಕೊಂಡು ಅವರು ತಿರುಗಿ ತಮ್ಮ ಹೊಲದ ಮನೆಯತ್ತ ಓಡಿ ಹೋಗುತ್ತಿದ್ದರು!

Sankeshwar and Hira Sugar factory

ಅಂಬಲಿಮಠ ಕಾಕು ಅವರು ನಿಜವಾಗಿಯೂ ಬಹಳ ಗಟ್ಟಿಗಿತ್ತಿ. ತಮ್ಮ ಹೊಲದ ಕೆಲಸವನ್ನು ತಾವೇ ನೋಡಿಕೊಳ್ಳುತ್ತಿದ್ದರು. ಅವರ ಪತಿ ಒಬ್ಬ ಉತ್ತಮ ಕಲಾವಿದರಾಗಿದ್ದರು. ಅವರು ಗಣಪತಿ, ಸಾಯಿಬಾಬಾ, ದುರ್ಗಾದೇವಿ ಮುಂತಾದವರ ವಿಗ್ರಹಗಳನ್ನು ಮಾಡುತ್ತಿದ್ದುದನ್ನು ನೋಡುತ್ತಾ ನಿಲ್ಲುತ್ತಿದ್ದೆ. ಅವರ ಮನಸ್ಸು ತಮ್ಮ ಕಲೆಯಲ್ಲೇ ನೆಟ್ಟಿತ್ತು. ಕಾಕು ಅವರು ತಮ್ಮ ಹೊಲ ಮತ್ತು ಮನೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದರು. ಇಬ್ಬರೂ ಮಕ್ಕಳನ್ನು ಬಹಳ ಮುತುವರ್ಜಿಯಿಂದ ಬೆಳೆಸುತ್ತಿದ್ದರು. ಅದೊಂದು ದಿನ ನಾನು ನಮ್ಮ ಮನೆಯ ಕೆಳಗೆ ಗಿಡವೊಂದರ ಹತ್ತಿರ ನಿಂತಿದ್ದಾಗ ಅವರ ದೊಡ್ಡ ಮಗಳು ಒಮ್ಮೆಲೇ ನನ್ನನ್ನು ನೋಡಿ ಕಿಟ್ಟನೇ ಕಿರುಚಿದಳು. ನಾನು ಕೆಳಗೆ ನೋಡಿದರೆ ನನ್ನ ಕಾಲಿನ ಕೆಳಗೇ ಹಾವೊಂದು ಹರಿದಾಡುತ್ತಿತ್ತು. ನಾನು ಕೂಡ ದೊಡ್ಡದಾಗಿ ಕಿರುಚುತ್ತ ಅಲ್ಲಿಂದ ಪಲಾಯನ ಹೇಳಿದೆ. ನಮ್ಮ ಅರಚಾಟ ಕೇಳಿದ ಕಾಕು ಹೊರಬಂದರು. ಹಾವನ್ನು ನೋಡಿ ಶಾಂತಚಿತ್ತದಿಂದಲೇ ಎರಡು ಕೋಲುಗಳನ್ನು ತಂದು ಒಂದು ಕೋಲಿನಿಂದ ಅದರ ತಲೆಯನ್ನು ಒತ್ತಿ ಹಿಡಿದು, ಇನ್ನೊಂದರಿಂದ ಬಡಿದು ಕೊಂದು ಹಾಕಿದರು. ಅವರ ಧೈರ್ಯ ನೋಡಿ ನಮಗೆ ಅಚ್ಚರಿಯಾಯಿತು.

ಸಂಕೇಶ್ವರದ ಸಕ್ಕರೆ ಕಾರಖಾನೆಯ ನಂತರ ನಾನು ದೇಶ ವಿದೇಶಗಳಲ್ಲಿ ಅನೇಕ ಬಗೆಯ ಕಾರಖಾನೆಗಳನ್ನು ನೋಡಿದ್ದೆನಾದರೂ ಮನಸ್ಸಿನಲ್ಲಿ ಸಂಕೇಶ್ವರದ ಸಕ್ಕರೆ ಕಾರಖಾನೆಯ ಭವ್ಯ ಚಿತ್ರಣ ಅಚ್ಚಳಿಯದಂತೆ ಉಳಿದುಕೊಂಡಿದೆ. ಅಪ್ಪಣ್ಣಗೌಡ ಪಾಟೀಲರ ದೂರದೃಷ್ಟಿ ಮತ್ತು ಜನಹಿತದ ಮನೋಭಾವ ಇಂದಿಗೂ ದಾರಿದೀಪವಾಗಿ ಚಿತ್ತದಲ್ಲಿ ಉಳಿದಿದೆ. ಸುತ್ತ ಮುತ್ತ ಹಚ್ಚ ಹಸಿರು ಪೈರು ನಳನಳಿಸುತ್ತಿರುವ ಹೊಲಗಳ ಮಧ್ಯೆ ನಾವು ಚಿಕ್ಕ ಮಕ್ಕಳು ನಲಿಯುತ್ತ ಮತ್ತು ದೊಡ್ಡವರು ನಸು ನಗುತ್ತ ಹೋಗಿ ಬರುತ್ತಿದ್ದ ಚಿತ್ರಣ ಇಂದಿಗೂ ಹಚ್ಚ ಹಸಿರಾಗಿದೆ. ಕವಿಗಳು ಸಂಜೆಗೆಂಪು ಎಂದು ಏನನ್ನು ವರ್ಣಿಸುತ್ತಿದ್ದರೋ ಅದನ್ನು ನಾವು ಆ ಹೊಲಗಳ ಮಧ್ಯದಿಂದ ಬೆರಗುಗಣ್ಣುಗಳಿಂದ ನೋಡುತ್ತಿದ್ದ ಕಾಲ ಅದೆಷ್ಟೋ ಸಮಯದ ನಂತರವೂ ಸದಾ ಹಸಿರಾಗಿ ಉಳಿದುಕೊಂಡಿದೆ. ಸದಾ ಚಲನಶೀಲವಾದ ಸಮಯದ ಮಾಯೆ ಕೂಡ ಅಂದಿನ ಆ ಅನುಭವಗಳನ್ನು ಮಸುಕುಗೊಳಿಸದೇ ಸ್ಫುಟವಾಗಿ ಕಣ್ಣಮುಂದೆ ಕಟ್ಟಿದಂತಿದೆ.

English summary
Sankeshwar and Hira Sugar factory have left everlasting childhood memories, says writer Vasant Kulkarni from Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X