ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶಸ್ಸಿನ ಬಗ್ಗೆ ಮಾತಾಡೋರೆ ಎಲ್ಲ, ಸೋಲಿನ ಬಗ್ಗೆ ಸೊಲ್ಲೇ ಇಲ್ಲ!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಕೆಲ ದಿನಗಳ ಹಿಂದೆ ನಾನು ಟಿವಿಯಲ್ಲಿ ಸಂಗೀತದ ರಿಯಾಲಿಟಿ ಶೋ ಒಂದನ್ನು ನೋಡುತ್ತಿದ್ದೆ. ಆಗ ಅಲ್ಲಿನ ಸ್ಪರ್ಧಿಯೊಬ್ಬನ ತಾಯಿ ಅವನು ಆ ರಿಯಾಲಿಟಿ ಶೋದಲ್ಲಿ ಭಾಗವಹಿಸಲು ವಿರೋಧ ವ್ಯಕ್ತಪಡಿಸುತ್ತಿದ್ದಳು. ಅವಳ ಪ್ರಕಾರ, ಸಂಗೀತದಲ್ಲಿ ಮೇಲೆ ಬರಲು ಬಹಳ ಪರಿಶ್ರಮ ಪಡಬೇಕಾಗುತ್ತದೆ. ಅಲ್ಲದೇ ಅಷ್ಟೊಂದು ಪರಿಶ್ರಮ ಪಟ್ಟರೂ ಯಶಸ್ಸಿನ ಯಾವ ಭರವಸೆಯೂ ಇರುವುದಿಲ್ಲ ಎಂಬುದು ಅವಳ ಅಳಲು. ಆದುದರಿಂದ ಈ ಸಂಗೀತದ ರಿಯಾಲಿಟಿ ಶೋದಲ್ಲಿ ತಿಂಗಳುಗಟ್ಟಲೇ ಭಾಗವಹಿಸಿ ಸಮಯ ಹಾಳು ಮಾಡಿಕೊಳ್ಳುವುದಕ್ಕಿಂತ ಎಮ್ ಬಿ ಎ ಅಂತಹ ಹೆಚ್ಚಿನ ಶಿಕ್ಷಣ ಪಡೆದು ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳುವುದು ಉತ್ತಮ ಎಂಬುದು ಅವಳ ಅಭಿಪ್ರಾಯ. ತುಂಬಾ ಉತ್ತಮ ಗಾಯಕನಾದ ಅವಳ ಮಗನ ಹಾಡು ಕೇಳಿದ ಎಲ್ಲರೂ ಅವಳ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದರು.

ಈ ಪ್ರಹಸನವನ್ನು ನೋಡುತ್ತಿದ್ದಂತೆ ಮೊದಮೊದಲು ನಾನು ಕೂಡ ಹಾಗೆಯೇ ಯೋಚಿಸಿದೆ. ಆದರೆ ಸ್ವಲ್ಪ ಸಮಯದ ನಂತರ ಅವಳ ಮಾತುಗಳಲ್ಲಿ ವಾಸ್ತವಿಕತೆ ಇತ್ತು ಎಂದು ಅನಿಸತೊಡಗಿತು. ಇಲ್ಲಿಯವರೆಗೆ ಈ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದವರೆಷ್ಟು? ಅದರಲ್ಲಿ ಅಭೂತಪೂರ್ವ ಯಶಸ್ಸು ಪಡೆದವರೆಷ್ಟು? ಈ ಪ್ರಶ್ನೆಗಳು ಮನಸ್ಸಿನಲ್ಲಿ ಉದ್ಭವವಾದಾಗ ಆ ತಾಯಿಯು ಕಂಡುಕೊಂಡ ಕಟು ಸತ್ಯದ ಅರಿವಾಯಿತು.

ನನ್ನ ಶಾಸ್ತ್ರೀಯ ಗಾಯನದ ಮೊದಲ ಗುರು ಮೊಹಮ್ಮದ್ ರಫಿನನ್ನ ಶಾಸ್ತ್ರೀಯ ಗಾಯನದ ಮೊದಲ ಗುರು ಮೊಹಮ್ಮದ್ ರಫಿ

ಹತ್ತಾರು ಟಿವಿ ಶೋಗಳಲ್ಲಿ ಸಾವಿರಾರು ಜನ Audition ನೀಡಿ ಅವರಲ್ಲಿ ನೂರಾರು ಜನರು ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾದರೂ ಗೆಲ್ಲುವವರು ಕೇವಲ ಬೆರಳೆಣಿಕೆಯಷ್ಟು. ಹಾಗೆ ಗೆದ್ದವರಲ್ಲಿ ಅದೆಷ್ಟು ಜನ ನಿಜವಾಗಿಯೂ ಪ್ರಸಿದ್ಧರಾದ ಹಾಡುಗಾರರಾಗಿ ಹೊರಹೊಮ್ಮುತ್ತಾರೆ? ಸುನಿಧಿ ಚೌಹಾಣ್, ಶ್ರೇಯಾ ಘೋಶಾಲ್, ಅರಿಜಿತ್ ಸಿಂಗ್ ಮತ್ತು ಮೋನಾಲಿ ಠಾಕೂರ್ ಅವರಂಥವರು ಎಲ್ಲೋ ಲಕ್ಷಕ್ಕೊಬ್ಬರು.

Reality check of reality shows : Why no one talks about failure

ಆದರೂ ಪ್ರತೀ ವರ್ಷ ಇಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅಲ್ಲದೇ ಎಲ್ಲ ಟಿವಿ ಚಾನೆಲ್ಲುಗಳು ಇಂತಹ ಹೊಸ ಹೊಸ ರಿಯಾಲಿಟಿ ಶೋಗಳನ್ನು ಪ್ರದರ್ಶನ ಮಾಡುತ್ತಿವೆ ಮತ್ತು ತಮ್ಮ TRPಗಳನ್ನು ಹೆಚ್ಚಿಸಿಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ, ಯಶಸ್ಸಿಗೆ ದೊರಕುವ ಪ್ರಸಿದ್ಧಿ ಅಪಯಶಸ್ಸಿಗೆ ದೊರಕುವುದಿಲ್ಲ. ಹೀಗಾಗಿ ಈ ಎಲ್ಲ ಟಿವಿ ಕಾರ್ಯಕ್ರಮಗಳು, ವರ್ತಮಾನ ಪತ್ರಿಕೆಗಳು ಅಷ್ಟೇ ಏಕೆ ಸಾಮಾನ್ಯ ಜನರೆಲ್ಲ ಮಾತನಾಡಿ ಪ್ರಚಾರ ಮಾಡುವುದು ಕೇವಲ ಯಶಸ್ಸನ್ನೇ. ಅಪಯಶಸ್ಸಿನ ಬಗ್ಗೆ ಮಾತನಾಡುವವರು ತೀರ ಕಡಿಮೆ. ಸೋಲು ಗೆಲುವಿನ ಭರಾಟೆಗೆ ಸೋತು ಮೌನವಹಿಸುತ್ತದೆ. ಗೆಲುವು ವಿಜಯದುಂಧುಭಿಯಲ್ಲಿ ಮುಳುಗಿ ವಾಸ್ತವತೆಯನ್ನು ಮರೆಮಾಚುತ್ತದೆ.

ವಸಂತ ಕುಲಕರ್ಣಿ ಅವರ ಅಂಕಣ 'ಅಂತರ್ಮಥನ' ಅಜೇಯ ಶತಕ! ವಸಂತ ಕುಲಕರ್ಣಿ ಅವರ ಅಂಕಣ 'ಅಂತರ್ಮಥನ' ಅಜೇಯ ಶತಕ!

ಹೀಗಾಗಿ ಸಾಮಾನ್ಯ ಜನತೆಗೆ ಸದಾ ಕಂಡು ಬರುವುದು ಯಶಸ್ಸು ಮಾತ್ರ. ಪ್ರತೀ ಯಶಸ್ಸಿನ ಶಿಖರದ ಹಿಂದಿರುವ ವೈಫಲ್ಯದ ಪ್ರಪಾತಗಳು ಕಾಣುವುದಿಲ್ಲ. ಯಶಸ್ಸಿನ ಈ ಪರಿ ಜನರಲ್ಲಿ ಒಂದು ತರಹದ ಪಕ್ಷಪಾತವನ್ನು ಹುಟ್ಟುಹಾಕುತ್ತದೆ ಮತ್ತು ವಾಸ್ತವಿಕತೆಯ ಮೇಲೆ ಪರದೆ ಹಾಕುತ್ತದೆ. ನಮ್ಮಂತಹ ಶ್ರೀ ಸಾಮಾನ್ಯರು ಒಂದು ಬಗೆಯ ಭ್ರಾಂತಿಗೆ ಒಳಗಾಗುತ್ತೇವೆ. ಯಶಸ್ಸು ಸರ್ವೇ ಸಾಮಾನ್ಯ ಎಂದುಕೊಂಡು ಅದರ ಹಿಂದಿರುವ ಸೋಲಿನ ಬೃಹತ್ ಸಂಭವನೀಯತೆಯನ್ನು ನಿರ್ಲಕ್ಷಿಸುತ್ತೇವೆ. ಈ ನಡವಳಿಕೆಯನ್ನು Survivorship Bias ಎಂದು ಕರೆಯುತ್ತಾರೆ.

Reality check of reality shows : Why no one talks about failure

ಇದೇ ರೀತಿ ನಿತ್ಯವೂ ಹಲವಾರು ಜನ ಲೇಖಕರು ಪುಟಗಟ್ಟಲೇ ಬರೆಯುತ್ತಾರೆ. ಆದರೂ ಕೆಲವರು ಮಾತ್ರ ತಾವು ಬರೆದಿದ್ದನ್ನು ಪ್ರಕಟಿಸಲು ಯಶಸ್ವಿಯಾಗುತ್ತಾರೆ. ಹಾಗೆ ಪ್ರಕಟಗೊಂಡ ಬರಹಗಾರರಲ್ಲಿ ಕೆಲವರು ಮಾತ್ರ ಬರಹಗಾರರಾಗಿ ಗುರುತಿಸಲ್ಪಡುತ್ತಾರೆ. ಹಾಗೆ ಗುರುತಿಸಲ್ಪಟ್ಟವರಲ್ಲಿ ಕೆಲವರು ಮಾತ್ರ ಪ್ರಸಿದ್ಧಿ ಪಡೆಯುತ್ತಾರೆ. ಲಕ್ಷಾಂತರ ಬರಹಗಾರರಲ್ಲಿ ನಮಗೆ ನೆನಪಿನಲ್ಲಿ ಉಳಿಯುವವರು ಈ ಕೆಲವರು ಮಾತ್ರ. ಆದರೆ ನಾವು ಬರಹಗಾರನಾಗಿ ಹೊರಹೊಮ್ಮುವುದು ಬಹಳ ಸುಲಭದ ಮಾತು ಎಂದುಕೊಳ್ಳುತ್ತೇವೆ. ಅದಕ್ಕೆ ಕಾರಣ ನಮಗೆ ಕಾಣುವುದು ಕೇವಲ ಪ್ರಸಿದ್ಧರು ಮಾತ್ರ. ಎಲೆ ಮರೆಯ ಕಾಯಿಯಂತೆ ಕೆಲಸ ಮಾಡಿ ಮರೆಯಾದವರು ನೆನಪಾಗುವುದೇ ಇಲ್ಲ. ಈ ಮಾತು ಕೇವಲ ಗಾಯಕರಿಗೆ ಮತ್ತು ಬರಹಗಾರರಿಗೆ ಮಾತ್ರ ಅನ್ವಯವಾಗುವುದಿಲ್ಲ. ವಿಜ್ಞಾನಿಗಳು, ತಂತ್ರಜ್ಞಾನಿಗಳು, ನಟರುಗಳು, ಕಲಾವಿದರು, ಆಟಗಾರರು ಮತ್ತೆಲ್ಲರಿಗೂ ಇದೇ ಮಾತು ಅನ್ವಯವಾಗುತ್ತದೆ.

Reality check of reality shows : Why no one talks about failure

ಈಗ ವಿಜೃಂಭಿಸುವ ಮಾಧ್ಯಮಗಳಿಗೆ ನಮ್ಮ ಸುತ್ತಲಿನ ವಾಸ್ತವಿಕತೆಯಲ್ಲಿ ಯಾವುದೇ ಆಸಕ್ತಿ ಇಲ್ಲ. ಅವುಗಳಿಗೆ ಯಶಸ್ಸನ್ನು ವೈಭವೀಕರಿಸುವುದರಲ್ಲಿ ಮಾತ್ರ ಆಸಕ್ತಿ ಇದೆ. ಏಕೆಂದರೆ ಯಶಸ್ಸಿನ ಉತ್ಪ್ರೇಕ್ಷೆ ಮಾರಾಟವಾದಂತೆ ಸೋಲಿನ ವಾಸ್ತವಿಕತೆ ಮಾರಾಟವಾಗುವುದಿಲ್ಲ. ಅವು ನಮ್ಮ Survivorship Bias ಅನ್ನು ಇನ್ನೂ ಉಲ್ಬಣಗೊಳಿಸುತ್ತವೆ. ಹೀಗಾಗಿ ಮಾಧ್ಯಮಗಳ ಅತಿಶಯದಲ್ಲಿ ನಮ್ಮನ್ನು ನಾವು ಮರೆತು ವಾಸ್ತವಿಕತೆಯನ್ನು ನಿರ್ಲಕ್ಷಿಸಬಾರದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ.

ಐನ್ ಸ್ಟೀನ್ ನ ಸಾಪೇಕ್ಷ ಸಿದ್ಧಾಂತದ ಬಗ್ಗೆ ನಿಮಗೆಷ್ಟು ತಿಳಿದಿದೆ? ಐನ್ ಸ್ಟೀನ್ ನ ಸಾಪೇಕ್ಷ ಸಿದ್ಧಾಂತದ ಬಗ್ಗೆ ನಿಮಗೆಷ್ಟು ತಿಳಿದಿದೆ?

ಹಾಗಾದರೆ ನಾವ್ಯಾರೂ ಯಾವುದೇ ಪ್ರಯತ್ನವನ್ನೇ ಮಾಡಬಾರದೇ? Survivorship Biasನ ಅರಿವು ನಮ್ಮನ್ನು ನಿರಾಶಾವಾದದತ್ತ ತಳ್ಳುತ್ತದೆಯೇ? ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಪಡೆಯುವ ಸಂಭವನೀಯತೆ ಲಕ್ಷಕ್ಕೊಂದಾದರೆ ಅದೇಕೆ ಶ್ರಮಪಡಬೇಕು ಎಂಬ ಭಾವನೆ ಏಳುವುದು ಸಹಜ. ಆದರೆ ನನಗನಿಸುವ ಮಟ್ಟಿಗೆ Survivorship Biasನ ಅರಿವು ಕೇವಲ ವಾಸ್ತವಿಕತೆಗೆ ಕನ್ನಡಿ ಹಿಡಿಯುತ್ತದೆ ಅಷ್ಟೇ. ಯಶಸ್ಸನ್ನು ಪಡೆಯುವುದರ ಹಿಂದೆ ಅದೆಷ್ಟು ಪರಿಶ್ರಮ ಇದೆ ಎಂಬುದಕ್ಕೆ ಪ್ರಮಾಣ ನೀಡುತ್ತದೆ. Survivorship Biasನಿಂದಾಗಿ ನಾವು ನಮ್ಮ ಯಶಸ್ಸಿನ ಸಂಭವನೀಯತೆಯನ್ನು ಅತಿ ಹೆಚ್ಚೇ ಅಂದಾಜು ಮಾಡುತ್ತೇವೆ. ಆದುದರಿಂದ ಅದರ ಅರಿವು ನಮ್ಮನ್ನು ನಾವು ನಿಗ್ರಹಿಸಿಕೊಳ್ಳಲು ಸಹಾಯವಾಗುತ್ತದೆ. ವಾಸ್ತವ ಅರಿತು ಹೆಜ್ಜೆಯಿಡಲು ನೆರವಾಗುತ್ತದೆ. ಅದರ ಅರಿವು ಹೇಗೆ ಸಹಾಯಮಾಡುತ್ತದೆ ಎಂಬುದನ್ನು ಕೆಳಗಿನ ಉದಾಹರಣೆ ತೋರಿಸುತ್ತದೆ.

ದಯಾಮಯನಾದ ದೇವರೇ, ಯಾಕೆ ನೀನು ಅಷ್ಟು ನಿಷ್ಕರುಣಿ? ದಯಾಮಯನಾದ ದೇವರೇ, ಯಾಕೆ ನೀನು ಅಷ್ಟು ನಿಷ್ಕರುಣಿ?

ಎರಡನೇ ಮಹಾಯುದ್ಧದಲ್ಲಿ ಅಮೇರಿಕದ ಬಾಂಬರ್ ಯುದ್ಧ ವಿಮಾನಗಳು ದಾಳಿ ಮಾಡಿ ತಿರುಗಿ ಬಂದಾಗ ಅವುಗಳ ಮೇಲೆ ಅನೇಕ ಗುಂಡುಗಳಿಂದಾದ ತೂತುಗಳಿರುವುದನ್ನು ಅಲ್ಲಿನ ತಂತ್ರಜ್ಞರು ಗಮನಿಸುತ್ತಿದ್ದರು. ಅವರು ವಿಮಾನಗಳನ್ನು ಈ ತೂತುಗಳು ಆಗದ ಹಾಗೆ ಹೇಗೆ ರಕ್ಷಿಸುವುದು ಎಂದು ಯೋಚಿಸಿ ಉತ್ತರ ಹುಡುಕುತ್ತಿದ್ದರು. ಆದರೆ ಅಬ್ರಹಾಮ್ ವಾಲ್ಡ್ ಎಂಬ ಸಂಖ್ಯಾಶಾಸ್ತ್ರಜ್ಞ ಯೋಚಿಸಿದ್ದೇ ಬೇರೆ. ಅವನು ತಂತ್ರಜ್ಞರಿಗೆ ತಿರುಗಿ ಬಂದ ವಿಮಾನಗಳಿಗೆ ರಕ್ಷಣೆ ಕೊಡುವ ಉತ್ತರಗಳನ್ನು ಹುಡುಕುವ ಬದಲು, ತಿರುಗಿಯೇ ಬರದ ವಿಮಾನಗಳು ಅದೇಕೆ ಬರಲಿಲ್ಲ ಎಂಬುದರ ಬಗ್ಗೆ ಯೋಚಿಸಲು ಹೇಳಿದನು.

Reality check of reality shows : Why no one talks about failure

ಅವನ ಈ ಸಲಹೆಯ ಮೇರೆಗೆ ವಿಚಾರಿಸಿದ ತಂತ್ರಜ್ಞರಿಗೆ ಅರಿವಾದ ವಿಷಯವೇನೆಂದರೆ ಹಿಂದಿರುಗಿದ ವಿಮಾನದ ರೆಕ್ಕೆಗಳು, ಬಾಲ ಮತ್ತು ಶರೀರದ ಮೇಲೆ ಮಾತ್ರ ಗಾಯಗಳಾಗಿದ್ದವು. ಆದರೆ ಹಿಂದಿರುಗದ ವಿಮಾನಗಳ ಎಂಜಿನ್ನುಗಳು ಅಪಾರ ನಷ್ಟ ಅನುಭವಿಸಿದ್ದುದರಿಂದ ಅವುಗಳು ಅಲ್ಲಿಯೇ ಹಾಳಾಗಿ ನೆಲಕ್ಕುರುಳಿದವು. ಈ ಸತ್ಯವನ್ನು ಕಂಡುಕೊಂಡ ಮೇಲೆ ತಂತ್ರಜ್ಞರು ವಿಮಾನದ ರೆಕ್ಕೆ, ಬಾಲ ಮತ್ತು ಶರೀರಗಳಿಗೆ ಹೆಚ್ಚಿನ ರಕ್ಷಣೆ ಒದಗಿಸುವ ಬದಲು, ಎಂಜಿನ್ನಿಗೆ ಹೆಚ್ಚಿನ ರಕ್ಷಣೆ ಒದಗಿಸುವ ಕೆಲಸವನ್ನು ಮಾಡಿದರು. ಹೀಗಾಗಿ ಅಲ್ಲಿಂದ ಮುಂದೆ ಅಮೇರಿಕದ ವಿಮಾನ ಪಡೆ ಹೆಚ್ಚಿನ ನಷ್ಟವನ್ನು ಅನುಭವಿಸಲಿಲ್ಲ. ಅಬ್ರಹಾಮ್ ವಾಲ್ಡ್ Survivorship Biasನ ಅರಿವಿನಿಂದ ಅಮೇರಿಕದ ವಿಮಾನದಳದ ಅಭೂತಪೂರ್ವ ಯಶಸ್ಸಿಗೆ ಕಾರಣನಾದ. ಅಂತೆಯೇ Survivorship Biasನ ಅರಿವು ನಮ್ಮ ಗಮನವನ್ನು ಸರಿಯಾದ ದಿಶೆಗೆ ತಿರುಗಿಸಿ ನಮ್ಮ ಯಶಸ್ಸಿನ ಗುರಿ ತಲುಪುವಲ್ಲಿ ಸಹಾಯ ಮಾಡುತ್ತದೆ ಎಂದು ನನ್ನ ಅನಿಸಿಕೆ. (ರಾಲ್ಫ್ ಡೊಬೆಲ್ಲಿ ಯ "The art of thinking clearly" ಪುಸ್ತಕದಿಂದ ಪ್ರೇರಣೆ).

English summary
Survivorship bias or survival bias is the logical error of concentrating on the people or things that made it past some selection process and overlooking those that did not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X