• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಮ್ಮ ಆತ್ಮವೇ ರಾಮ, ನಮ್ಮ ಮನಸ್ಸೇ ಸೀತೆ, ಉಸಿರೇ ಹನುಮಂತ!

By ವಸಂತ ಕುಲಕರ್ಣಿ, ಸಿಂಗಪುರ
|

ಎರಡು ವರ್ಷಗಳ ಹಿಂದೆ ಕನ್ನಡ ಸಂಘ (ಸಿಂಗಪುರ)ವು, ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಏರ್ಪಡಿಸಿತ್ತು. ಸಮ್ಮೇಳನಕ್ಕೆ ಸುಪ್ರಸಿದ್ಧ ಸಾಹಿತಿ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆಗ ನಡೆದ ಸಂವಾದದಲ್ಲಿ ಅವರು ಒಂದು ಮಾತನ್ನು ಹೇಳಿದ್ದರು.

ನನಗೆ ಅರ್ಥವಾದ ಮಟ್ಟಿಗೆ ಅವರು ಹೇಳಿದ್ದೇನೆಂದರೆ, ರಾಮಾಯಣ ಮತ್ತು ಮಹಾಭಾರತಗಳು ಭಾರತದ ಎಲ್ಲ ಸೂಕ್ಷ್ಮ ಸಂವೇದನೆಯ ಸಾಹಿತಿಗಳ ಮನಸ್ಸನ್ನು ಕಲಕುತ್ತಿರುತ್ತವೆ. ಅವುಗಳ ಮೇಲೆ ಆಧರಿಸಿದ ಕಥೆ, ಬರಹಗಳನ್ನು ಎಲ್ಲ ಸಾಹಿತಿಗಳು ಬರೆದು ತಮ್ಮದೇ ಆದ ವ್ಯಾಖ್ಯಾನವನ್ನು ಸೃಷ್ಟಿಸಲು ಅವರಲ್ಲಿಯ ರಚನಾತ್ಮಕ ಮನೋಭಾವ ತುಡಿಯುತ್ತಿರುತ್ತದೆ.

ರಾಮಾಯಣ ಮಹಾಭಾರತ ಬಿಂಬಿಸುವ ಬೋರೋಬುದುರ್ ದೇಗುಲ

ಈ ಮಾತು ನನಗೆ ಬಹಳ ಹಿಡಿಸಿತು. ಈ ಮಾತನ್ನು ಹೇಳಿ ಒಂದು ವರ್ಷದಲ್ಲಿಯೇ ಅವರ ಉತ್ತರ ಕಾಂಡ ಹೊರಬಂದಿತು. ಈ ಕೃತಿ ನನ್ನ ಅತ್ಯಂತ ನೆಚ್ಚಿನ ಕೃತಿಗಳಲ್ಲೊಂದು. ಏಕೆಂದರೆ ನನಗೆ ರಾಮಾಯಣ ಚಿಕ್ಕಂದಿನಿಂದ ಪ್ರಿಯವಾದದ್ದು. ರಾಮಾಯಣದ ಅವರ ವ್ಯಾಖ್ಯಾನ ವಾಸ್ತವಕ್ಕೆ ತೀರ ಹತ್ತಿರವಾದ ಚಿತ್ರಣ ಮತ್ತು ಪಾತ್ರಗಳ ಮೂಲಕ ನಾಜೂಕಾದ ಕಥೆಯನ್ನು ಹೆಣೆದ ಬಗೆ ಬಹಳ ಇಷ್ಟವಾಯಿತು.

ಮೊನ್ನೆ ನನ್ನ ವಾಟ್ಸಾಪ್‍ನಲ್ಲಿ ಒಂದು ಸಂದೇಶ ಹರಿದು ಬಂದಿತು. ರಾಮಾಯಣದ ಮೇಲಿನ ಈ ಸಂದೇಶ ಕೂಡಲೇ ನನ್ನನ್ನು ತೀವ್ರವಾಗಿ ಆಕರ್ಷಿಸಿತು. ಮೂಲ ಇಂಗ್ಲೀಷಿನಲ್ಲಿದ್ದ ಈ ಸಂದೇಶದ ಕನ್ನಡ ಭಾವಾನುವಾದವನ್ನು ಇಲ್ಲಿ ಮಾಡಿದ್ದೇನೆ.

ರಾಮ ಎಂದರೆ ಹೃದಯದಲ್ಲಿನ ಬೆಳಕು

ರಾಮ ಎಂದರೆ ಹೃದಯದಲ್ಲಿನ ಬೆಳಕು

"ರಾ" ಎಂದರೆ ಬೆಳಕು. "ಮಾ" ಎಂದರೆ ಒಳಗು. ರಾಮ ಎಂದರೆ 'ಒಳಗಿನ ಬೆಳಕು'. ಹೃದಯದಲ್ಲಿರುವ ಬೆಳಕು ಎನ್ನಬಹುದು. ರಾಮ ಹುಟ್ಟಿದ್ದು ದಶರಥ ಮತ್ತು ಕೌಸಲ್ಯೆಗೆ. ದಶರಥ ಎಂದರೆ ಹತ್ತು ರಥಗಳನ್ನುಳ್ಳವನು. ಈ ಹತ್ತು ರಥಗಳಲ್ಲಿ ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು. ಕೌಸಲ್ಯೆ ಎಂದರೆ ನಿಪುಣೆ, ಪರಿಣಿತೆ. ಒಟ್ಟಿನಲ್ಲಿ ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳನ್ನು ನಿಪುಣತೆಯಿಂದ ನಡೆಸುವವನಿಗೆ ರಾಮ ಎಂದರೆ ಹೃದಯದಲ್ಲಿನ ಬೆಳಕು ಕಾಣುತ್ತದೆ. ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಅಯೋಧ್ಯೆ ಎಂದರೆ ಎಲ್ಲಿ ಯಾವ ತರಹದ ಯುದ್ಧವೂ ಆಗದಂತಹ ಸ್ಥಳ. ಇದರರ್ಥ ಯಾರ ಮನದಲ್ಲಿ ಯಾವುದೇ ತರಹದ ದ್ವಂದ್ವ ಇರುವುದಿಲ್ಲವೋ ಅವರಿಗೆ ರಾಮ ಎಂದರೆ ಆಂತರ್ಯದ ಬೆಳಕು ದೊರೆಯುತ್ತದೆ.

ಆತ್ಮವೇ ರಾಮ ಮನಸ್ಸೇ ಸೀತೆ

ಆತ್ಮವೇ ರಾಮ ಮನಸ್ಸೇ ಸೀತೆ

ರಾಮಾಯಣ ಪ್ರತಿ ನಿತ್ಯ ನಮ್ಮ ಶರೀರದಲ್ಲಿಯೇ ಆಗುತ್ತಿರುತ್ತದೆ. ನಮ್ಮ ಆತ್ಮವೇ ರಾಮ. ನಮ್ಮ ಮನಸ್ಸೇ ಸೀತೆ. ನಮ್ಮ ಉಸಿರೇ ಜೀವನದಾಯಿ ಪ್ರಾಣ ಎಂದರೆ ಹನುಮಂತ. ನಮ್ಮ ಅರಿವೇ ಲಕ್ಷ್ಮಣ ಮತ್ತು ನಮ್ಮ ಅಹಂಕಾರವೇ ರಾವಣ. ಯಾವಾಗ ನಮ್ಮ ಮನಸ್ಸನ್ನು ನಮ್ಮ ಅಹಂಕಾರ ಅಪಹರಿಸುತ್ತದೋ ಆವಾಗ ನಮ್ಮ ಆತ್ಮ ಗಲಿಬಿಲಿಗೊಳ್ಳುತ್ತದೆ. ಆಗ ಆತ್ಮ ಪ್ರಾಣ ಮತ್ತು ಅರಿವುಗಳ ಸಹಾಯ ಪಡೆದು ಮನಸ್ಸನ್ನು ಅಹಂಕಾರದಿಂದ ಬಿಡುಗಡೆ ಮಾಡುತ್ತದೆ. ಎಷ್ಟು ಸುಂದರವಾದ ವಿವರಣೆ ಅಲ್ಲವೇ?

ನಮ್ಮಲ್ಲಿ ಕರ್ಣನೂ ಇದ್ದಾನೆ, ಧರ್ಮನಿಷ್ಠ ವಿದುರನೂ ಇದ್ದಾನೆ

ರಾಮ ಶಬ್ದ ಅಷ್ಟು ಪವಿತ್ರವಾದದ್ದು

ರಾಮ ಶಬ್ದ ಅಷ್ಟು ಪವಿತ್ರವಾದದ್ದು

ಈ ವ್ಯಾಖ್ಯಾನವನ್ನು ಓದುತ್ತಿರುವಂತೆ ನನಗೆ ನೆನಪಾಗಿದ್ದು ಪುರುಂದರದಾಸರ "ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ?" ಎಂಬ ಕೃತಿ. "ರಾ" ಎಂದ ಕೂಡಲೇ ನಮ್ಮ ದೇಹದ ರಕ್ತ ಮಾಂಸಗಳ ಒಳಗೆ ಬೇರೂರಿಕೊಂಡ ಪಾಪ ಹೊರಗೆ ಹೋಗಿ ಬಿಡುತ್ತದೆ. "ಮ" ಎಂದ ಕೂಡಲೆ ಬಾಯಿ ಮುಚ್ಚಿಕೊಂಡು ಹೊರಬಿದ್ದ ಪಾಪಗಳು ಮತ್ತೆ ಒಳಗೆ ಬರದಂತೆ ತಡೆ ಹಿಡಿದುಬಿಡುತ್ತದೆ. ಈ ಭೂಮಿಯಲ್ಲಿ "ರಾಮ" ಎಂಬ ಶಬ್ದ ಅಷ್ಟು ಪವಿತ್ರವಾದದ್ದು ಎಂದು ಪುರುಂದರದಾಸರು ಕೊಂಡಾಡುತ್ತಾರೆ.

ಚಂದಮಾಮದಲ್ಲಿ ವೀರ ಹನುಮಾನ್

ಚಂದಮಾಮದಲ್ಲಿ ವೀರ ಹನುಮಾನ್

ಮೊಟ್ಟ ಮೊದಲು ನನಗೆ ರಾಮಾಯಣದ ಅರಿವನ್ನುಂಟು ಮಾಡಿದ್ದು ಚಂದಮಾಮ ಮಕ್ಕಳ ಮಾಸಿಕದಲ್ಲಿ ಬರುತ್ತಿದ್ದ "ವೀರ ಹನುಮಾನ್" ಎಂಬ ಧಾರಾವಾಹಿ. ಬಣ್ಣ ಬಣ್ಣದ ಚೆಂದದ ಚಿತ್ರಗಳೊಂದಿಗೆ ಬರುತ್ತಿದ್ದ ಈ ಧಾರಾವಾಹಿಯನ್ನು ಓದುತ್ತಾ ಓದುತ್ತಾ ನಾನು ರಾಮಾಯಣದ ಪಾತ್ರಗಳಲ್ಲಿ ಒಂದಾಗಿ ಬಿಡುತ್ತಿದ್ದೆ. ಅಣ್ಣ ರಾಮನಾದರೆ ನಾನು ಲಕ್ಷ್ಮಣನಾಗಿರುತ್ತಿದ್ದೆ. ರಾಮಚಂದ್ರನಿಗೆ ಗಂಗಾ ನದಿಯನ್ನು ದಾಟಿಸುವ ಕರ್ತವ್ಯ ಹೊತ್ತ ಅವನ ಪರಮ ಸ್ನೇಹಿತ ಗುಹನಾಗಿರುತ್ತಿದ್ದೆ. ರಾವಣನ ಮೇಲೆ ಆಕ್ರಮಣ ಮಾಡಿದ ಪಕ್ಷಿರಾಜ ಜಟಾಯುವಾಗಿರುತ್ತಿದ್ದೆ. ಶರಧಿಯನ್ನು ಹಾರಿದ ಹನುಮಂತನಾಗಿಬಿಡುತ್ತಿದ್ದೆ. ಚಿಕ್ಕಂದಿನ ಮುಗ್ಧ ಭಾವಾವೇಶದಲ್ಲಿ ರಾಮಾಯಣದ ಕಥೆ ಕೇವಲ ಕಥೆಯಾಗಿರುತ್ತಿರಲಿಲ್ಲ. ನಮ್ಮ ಕಣ್ಣಿನ ಮುಂದೆಯೇ ಮೂಡಿ ನಮಗೆ ಆದರ್ಶ ಜೀವನದ ಮಾದರಿಯಾಗಿತ್ತು.

ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ

ಮೋಡಿ ಮಾಡಿದ ರಾಮಾನಂದ ಸಾಗರ

ಮೋಡಿ ಮಾಡಿದ ರಾಮಾನಂದ ಸಾಗರ

ಮುಂದೆ ಬೆಳಗಾವಿಯಲ್ಲಿ ಹೈಸ್ಕೂಲಿನಲ್ಲಿ ಓದುವಾಗ ರಾಮಾಯಣ ಮತ್ತು ಮಹಾಭಾರತಗಳ ಪರೀಕ್ಷೆ ಬರೆಯುವ ಅವಕಾಶ ಒದಗಿತು. ರಾಮಾಯಣ ಪರೀಕ್ಷೆಯಲ್ಲಿ ನಾನು ಉತ್ತಮ ಅಂಕ ಗಳಿಸಿದ್ದರಿಂದ ನನಗೆ ಬೆಳ್ಳಿಯ ಚಿಕ್ಕ ಪದಕ ಬಂದ ನೆನಪು. ಮುಂದೆ ದೂರದರ್ಶನ ವಿಜೃಂಭಿಸತೊಡಗಿದ ಮೇಲೆ ಅದರಲ್ಲಿ ಮೂಡಿ ಬಂದ ರಾಮಾನಂದ ಸಾಗರರ ರಾಮಾಯಣವಂತೂ ದೇಶದ ಜನರ ಮೇಲೆ ಬಹು ದೊಡ್ಡ ಮೋಡಿಯನ್ನೇ ಮಾಡಿತು. ಚಿಕ್ಕವರು ದೊಡ್ಡವರೆನ್ನದೇ ಎಲ್ಲರೂ ಭಾನುವಾರ ಮುಂಜಾನೆ ಒಂಭತ್ತಕ್ಕೆ ಟಿವಿಯ ಮುಂದೆ ಹಾಜರ್! ಆ ದಿನಗಳಲ್ಲಿ ರಸ್ತೆಗಳ ಮೇಲಿನ ಟ್ರ್ಯಾಫಿಕ್ ಕಮ್ಮಿಯಾಗಿ ಕರ್ಫ್ಯೂ ಜಾರಿಗೊಳಿಸಿದಂತಾಗಿರುತ್ತಿತ್ತು. ನಾನು ಕೂಡ ತಪ್ಪದೇ ನೋಡುತ್ತಿದ್ದೆನಾದರೂ ನನಗೆ ಅದರ ನಿರ್ದೇಶನದಲ್ಲಿ ತಪ್ಪುಗಳನ್ನು ಹುಡುಕುವ ಕೆಟ್ಟ ಚಟ ಅಂಟಿಕೊಂಡಿತ್ತು. ಹರೆಯದ ದಿನಗಳಲ್ಲವೇ? ಮನಸ್ಸನ್ನು ಕ್ರಾಂತಿಕಾರಕ ವಿಚಾರಗಳು ಆಳುತ್ತಿದ್ದವು.

ಸರೋಜಾ ಶ್ರೀನಾಥ್ ಅವರ ಅಮರ ರಾಮಾಯಣ

ಸರೋಜಾ ಶ್ರೀನಾಥ್ ಅವರ ಅಮರ ರಾಮಾಯಣ

ಜನರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಅಪೂರ್ವ ಶಕ್ತಿಯನ್ನು ಒಳಗೊಂಡಿದ್ದರಿಂದಲೇ ರಾಮಾಯಣ ಕಥೆ ವಿಶ್ವದ ಅನೇಕ ದೇಶಗಳಲ್ಲಿ ಐತಿಹಾಸಿಕವಾಗಿ ಹರಡಿ ಅಲ್ಲಿನ ಭಾಗವಾಗಿ ಹೋಗಿದೆ. ಎಸ್ ಎಲ್ ಭೈರಪ್ಪ ಅವರು ಹೇಳಿದಂತೆ ಭಾರತದ ಯಾವುದೇ ಭಾಷೆಯಿರಲಿ, ಅವುಗಳಲ್ಲಿ ರಾಮಾಯಣದ ಅನೇಕ ರೂಪಾಂತರಗಳು ಅನೇಕ ಸಾಹಿತಿಗಳಿಂದ ಹೊರಬಂದಿವೆ. ಬೇರೆ ಬೇರೆ ಯುಗಗಳಲ್ಲಿ ಬೇರೆ ಬೇರೆ ಕೃತಿಗಳು ರಾಮಾಯಣವನ್ನು ಆಧರಿಸಿ ರಚಿಸಲ್ಪಟ್ಟಿವೆ.

ಕೇವಲ ಭಾರತದಲ್ಲಿ ಮಾತ್ರವಲ್ಲ, ಅನೇಕ ಪೌರ್ವಾತ್ಯ ದೇಶಗಳಲ್ಲಿ ರಾಮಾಯಣ ಹರಡಿಹೋಗಿದೆ. ಅಲ್ಲಿನ ಸಮಾಜದ ಅವಿಭಾಜ್ಯ ಅಂಗವಾಗಿ ಹೋಗಿದೆ. ಸಾಹಿತಿ, ಸಂಗೀತ ವಿದುಷಿ ಸರೋಜಾ ಶ್ರೀನಾಥ್ ಅವರು ತಮ್ಮ "ಅಮರ ರಾಮಾಯಣ" ಎಂಬ ಅದ್ಭುತ ಪುಸ್ತಕದಲ್ಲಿ ರಾಮಾಯಣ ಇಂಡೋನೇಶಿಯಾ, ಥೈಲ್ಯಾಂಡ್, ಜಪಾನ್, ಶ್ರೀಲಂಕಾ, ಫಿಲಿಪ್ಪೈನ್ಸ್, ಮಂಗೋಲಿಯಾ, ಕಾಂಬೋಡಿಯ, ಲಾವೋಸ್ ಮತ್ತು ಬರ್ಮಾ ದೇಶಗಳಲ್ಲಿ ಹರಡಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಅಲ್ಲಿನ ರಾಮಾಯಣ ಮೂಲ ರಾಮಾಯಣದಿಂದ ಎಷ್ಟರ ಮಟ್ಟಿಗೆ ಮತ್ತು ಹೇಗೆ ಭಿನ್ನವಾಗಿದೆ ಎಂದು ವಿವರಿಸಿದ್ದಾರೆ. ರಾಮಾಯಣ ಎಲ್ಲ ಉಪಾಸಕರು ಒಮ್ಮೆಯಾದರೂ ಓದಲೇ ಬೇಕಾದ ಕೃತಿ ಇದು.

ಭಾರತದ ಇತಿಹಾಸದ ದಿಕ್ಕನ್ನೇ ಬದಲಿಸಿದ ಆ ಮಹಾನ್ ಯುದ್ಧಗಳು

ರಾಮಾಯಣದ ಅಭೂತಪೂರ್ವ ಶಿಲ್ಪ

ರಾಮಾಯಣದ ಅಭೂತಪೂರ್ವ ಶಿಲ್ಪ

ಥೈಲ್ಯಾಂಡ್, ಕಾಂಬೋಡಿಯಾ ಮತ್ತು ಇಂಡೋನೇಶಿಯಾಗಳನ್ನು ಸಂದರ್ಶಿಸಿದ ನಾನು ಅಲ್ಲಿನ ರಾಮಾಯಣದ ಶ್ರೀಮಂತ ಪರಂಪರೆಯನ್ನು ಸ್ವಲ್ಪ ಮಟ್ಟಿಗಾದರೂ ಪರಿಚಯ ಮಾಡಿಕೊಂಡಿದ್ದೇನೆ. ರಾಮಾಯಣದ ಪ್ರಸಂಗಗಳ ಅನೇಕ ಚಿತ್ರಗಳನ್ನು ಥೈಲ್ಯಾಂಡ್‍ನ ಪ್ರಸಿದ್ಧ ಅರಮನೆಯ ಗೋಡೆಗಳಲ್ಲಿ ನೋಡಬಹುದು. ಕಾಂಬೋಡಿಯಾದ ಸುಪ್ರಸಿದ್ಧ ಅಂಗ್ ಕೋರ್ ವಾಟ್ ಮಂದಿರ ಮತ್ತು ಇಂಡೋನೇಶಿಯಾದ ಯೋಗ್ಯಕರ್ತಾದ ಪ್ರಾಂಬನಾನ್ ಮಂದಿರಗಳಲ್ಲಿ ರಾಮಾಯಣದ ಅಭೂತಪೂರ್ವ ಶಿಲ್ಪಗಳನ್ನು ಕೆತ್ತಲಾಗಿದೆ. ಇಂಡೋನೇಶಿಯಾದಲ್ಲಿ ರಾಮಾಯಣದ ಕಥೆಗಳನ್ನು ಅಲ್ಲಿನ ಶಾಸ್ತ್ರೀಯ ನೃತ್ಯಗಳ ಮೂಲಕ ಪ್ರಸ್ತುತಪಡಿಸುತ್ತಾರೆ. ಅಲ್ಲಿನ ಬಹಳ ಜನಪ್ರಿಯ ಕಲೆಗಳಲ್ಲಿ ಈ ರಾಮಾಯಣ ನೃತ್ಯಗಳು ಅಗ್ರಗಣ್ಯ.

ನಮ್ಮ ಸಂಸ್ಕೃತಿಯ ಪರಮೋಚ್ಛ ಕೃತಿ

ನಮ್ಮ ಸಂಸ್ಕೃತಿಯ ಪರಮೋಚ್ಛ ಕೃತಿ

ಋಷಿ ವಾಲ್ಮೀಕಿ ಬರೆದ ಮೂಲ ರಾಮಾಯಣದ ಆಧಾರದ ಮೇಲೆ ಭಾರತೀಯ ಭಾಷೆಗಳಲ್ಲಿ ಸುಮಾರು ಆರು ಸಾವಿರ ಮತ್ತು ವಿದೇಶಿ ಭಾಷೆಗಳಲ್ಲಿ ಸುಮಾರು ಒಂದು ಸಾವಿರ ಪ್ರಕಟವಾದ ರಚನೆಗಳು ಲಭ್ಯವಾಗಿವೆ. ಅಪ್ರಕಟಿತ ಇನ್ನೂ ಅದೆಷ್ಟು ರಾಮಾಯಣಗಳು ಇತಿಹಾಸದ ಗರ್ಭದಲ್ಲಿ ಹುದುಗಿ ಹೋಗಿವೆಯೋ? ನಮ್ಮ ಸಂಸ್ಕೃತಿಯ ಪರಮೋಚ್ಛ ಕೃತಿಯಾದ ರಾಮಾಯಣವನ್ನು ನಾವು ನಮ್ಮ ಹೊಸ ಪೀಳಿಗೆಗಳಿಗೆ ಯಶಸ್ವಿಯಾಗಿ ವರ್ಗಾಯಿಸುತ್ತಿದ್ದೇವೆಯೇ? ಈ ಪ್ರಶ್ನೆಯನ್ನು ನನ್ನಂತಹ ಎಲ್ಲ ಮಧ್ಯವಯಸ್ಕರು ತಮ್ಮನ್ನು ತಾವೇ ಕೇಳಿಕೊಳ್ಳಬೇಕಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ramayan is not just an epic poem written by Valmiki, it is part of our life. SL Bhyrappa says Ramayan inspires every writer in some or the other way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more