• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುಲ್ವಾಮಾ ಬರ್ಬರ ಹತ್ಯಾಕಾಂಡ ಮತ್ತು ಇತಿಹಾಸದ ಪುಟಗಳು

By ವಸಂತ ಕುಲಕರ್ಣಿ, ಸಿಂಗಪುರ
|

ಮೊನ್ನೆ ತಾನೇ ಉರಿ ಚಿತ್ರವನ್ನು ನೋಡಿ ಬಂದಿದ್ದೆ. ಯಾವುದೇ ರಾಜಕೀಯ ಪಕ್ಷದ ಉದ್ದೇಶ ಅಥವಾ ಚಿಂತನೆಗಳಿಗೆ ಕಟ್ಟು ಬೀಳದೆ ಕೇವಲ ಸೈನ್ಯದ ದೃಷ್ಟಿಯಿಂದ ಮಾಡಿದ ಚಿತ್ರ ಎಂದೆನಿಸಿ, ನಮ್ಮ ದೇಶದ ಸೈನಿಕರ ಬಲ, ತ್ಯಾಗ ಮತ್ತು ದೇಶಭಕ್ತಿಗಳನ್ನು ಮತ್ತೊಮ್ಮೆ ನಮ್ಮ ಮುಂದೆ ಯಾವುದೇ ವೈಭವೀಕರಣವಿಲ್ಲದೇ ತೋರಿಸಿದ್ದ ಚಿತ್ರಕ್ಕೆ ನಾನು ಮಾರು ಹೋಗಿದ್ದೆ.

"How is the josh?" ಎಂಬ ಸಿನಿಮಾದ ಸಂವಾದವನ್ನು ನಮ್ಮ ಕೆಲ ರಾಜಕೀಯ ನಾಯಕರು ಬಳಸಿದರೂ ಜನ ಕೂಡ ಅದಕ್ಕಷ್ಟೊಂದು ಮಹತ್ವ ನೀಡದೆ ಸೈನ್ಯದ ಗರಿಮೆಗೆ ಹೆಚ್ಚಿನ ಮಹತ್ವ ನೀಡಿ ಈ ಚಲನಚಿತ್ರವನ್ನು ಯಶಸ್ವಿಯಾಗಿ ಮಾಡಿದರು ಎಂದು ನನ್ನ ಅನಿಸಿಕೆ. ಕೆಲವೇ ಕೆಲವು ಸಿನಿಮೀಯ ದೃಶ್ಯಗಳನ್ನು ಬಿಟ್ಟರೆ ಚಿತ್ರ ವಾಸ್ತವಕ್ಕೆ ಸಾಕಷ್ಟು ಹತ್ತಿರವಾಗಿತ್ತು. ತಾಂತ್ರಿಕವಾಗಿ ಕೂಡ ಬಹಳ ಉತ್ತಮ ಮಟ್ಟದಲ್ಲಿತ್ತು. ಬಹುತೇಕ ನಟ ನಟಿಯರು ಹೊಸಬರಾದರೂ ನಟನೆ ತುಂಬಾ ಸಹಜವಾಗಿತ್ತು.

ಹುತಾತ್ಮ ಯೋಧರ ಕುಟುಂಬದ ಹೃದಯ ಹಿಂಡುವ ಚಿತ್ರಗಳು

ಅಚ್ಚುಕಟ್ಟಾದ ದೇಶ ಪ್ರೇಮದ ಕಥೆಯೊಂದನ್ನು ನೋಡಿ ಮನಸ್ಸು ಉಲ್ಲಸಿತಗೊಂಡಿತ್ತು. ನನ್ನಂತೆ ಬಹುತೇಕ ಭಾರತೀಯರು ಇದೇ ರೀತಿ ಉತ್ಕಟ ದೇಶಪ್ರೇಮದ ಘಳಿಗೆಗಳನ್ನು ಸಂತಸದಿಂದ ಅನುಭವಿಸಿರಬೇಕು. ಆದರೆ ಭಾರತೀಯರ ಈ ಸಂತೋಷ ಜಗತ್ತಿನ ಸೈತಾನರಿಗೆ ಬಹಳ ಮೈಯುರಿ ಉಂಟು ಮಾಡಿತೇನೋ?

ತಮ್ಮ ತಮ್ಮ ಲಘು ರಜೆಯನ್ನು ಮುಗಿಸಿಕೊಂಡು ವೃದ್ಧ ತಂದೆ ತಾಯಿಯರು, ಚಿಕ್ಕ ವಯಸ್ಸಿನ ಮಡದಿಯರು ಮತ್ತು ಪುಟ್ಟ ಪುಟ್ಟ ಮಕ್ಕಳನ್ನು ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡರೂ ಕೂಡ ನಗುತ್ತಲೇ ಬೀಳ್ಕೊಂಡು ದೇಶದ ಗಡಿಗೆ ಬಂದ ಸೈನಿಕರನ್ನು ಕಾಶ್ಮೀರದ ಬಳಿ ಪುಲ್ವಾಮಾದಲ್ಲಿ ಸೈತಾನ ಅಟ್ಟಹಾಸ ಬೀರುತ್ತಾ ಅಗ್ನಿಜ್ವಾಲೆಗಳನ್ನು ಬೀಸಿ ಬಲಿತೆಗೆದುಕೊಂಡಿದ್ದ. ಈ ಘಟನೆ ಇಡೀ ದೇಶವನ್ನು ಕಣ್ಣೀರಿನಲ್ಲಿ ಮುಳುಗಿಸಿದೆ. ಈ ಘಟನೆ ಸಹಜವಾಗಿ ಎಲ್ಲರಲ್ಲೂ ರೋಷವನ್ನುಕ್ಕಿಸಿದೆ. ನಾನು ಕೂಡ ಅದಕ್ಕೆ ಹೊರತಲ್ಲ.

ವಿಡಿಯೋ: ಪತಿಯ ಕಳೇಬರದ ಮುಂದೆ ನಿಂತರೂ ಆಕೆಯ ಕಣ್ಣಲ್ಲಿ ಹನಿ ನೀರಿಲ್ಲ!

ಯಾವ ತಪ್ಪೂ ಮಾಡದೇ ಕೇವಲ ಮಾತೃ ಭೂಮಿಯ ರಕ್ಷಣೆಗಾಗಿ ತಮ್ಮವರನ್ನು ಬಿಟ್ಟು ದೂರದ ಕಾಶ್ಮೀರದ ಗಡಿಗೆ ಹೋಗಿ ದುರ್ಮರಣ ಪಡೆದದ್ದು ಯಾವ ಭಾರತೀಯನಿಗಾದರೂ ರಕ್ತ ಕುದಿದು ಹೋಗುವಂತಹ ಘಟನೆ. ಕಾಶ್ಮೀರಿ ಉಗ್ರಗಾಮಿಯೊಬ್ಬ ಪಾಕಿಸ್ತಾನದ ಕುಮ್ಮಕ್ಕಿಗೆ ತನ್ನನ್ನು ತಾನೇ ಬಲಿಪಶು ಮಾಡಿಕೊಂಡು, ಸ್ಫೋಟಕಗಳಿಂದ ತುಂಬಿದ ಗಾಡಿಯನ್ನು ಸೈನಿಕರ ಬಸ್ಸಿಗೆ ಢಿಕ್ಕಿ ಹೊಡೆಸಿ ಸ್ಫೋಟಿಸಿದ ಕೃತ್ಯ ಭಾರತೀಯರನ್ನೆಲ್ಲ ವಿಹ್ವಲಗೊಳಿಸಿದೆ. ಈ ಭೀಭತ್ಸ ಕೃತ್ಯಕ್ಕೆ ತಕ್ಕ ಪ್ರತೀಕಾರವನ್ನು ಕೂಡಲೇ ಮಾಡಬೇಕು ಎಂಬ ಭಾವನೆ ನಮ್ಮೆಲ್ಲರಲ್ಲೂ ಉಕ್ಕಿದ್ದು ಸಹಜ. ಬಹುತೇಕ ಜನರ ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ:

* ಪಾಕಿಸ್ತಾನದ ಮೇಲೆ ಯುದ್ಧವನ್ನು ಘೋಷಿಸಿ ಆ ದೇಶವನ್ನು ನೆಲಸಮ ಮಾಡಬೇಕು.

* ಮತ್ತೊಂದು ಉರಿ ತರಹದ ಸರ್ಜಿಕಲ್ ಹೊಡೆತವನ್ನು ತಕ್ಷಣ ಕೈಗೊಳ್ಳಬೇಕು.

* ಆತಂಕವಾದಿಗಳ ಅಡಗು ಸ್ಥಾನಗಳನ್ನು ಗುರುತಿಸಿ ಅವುಗಳ ಮೇಲೆ ಯುದ್ಧ ವಿಮಾನಗಳಿಂದ ಸ್ಫೋಟಕಗಳನ್ನು ಹಾಕಬೇಕು.

* ಪಾಕಿಸ್ತಾನದಲ್ಲಿ ಹಾಡಹಗಲೇ ದ್ವೇಷವನ್ನು ಬಿತ್ತುತ್ತಿರುವ ಆತಂಕವಾದದ ಗುರುಗಳಾದ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್ ಅಂತಹವರನ್ನು ಇಸ್ರೇಲಿ ಮಾದರಿಯ ಕಾರ್ಯಾಚರಣೆ ನಡೆಸಿ ಕೊಂದು ಹಾಕಬೇಕು.

ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?

ಪಾಕಿಸ್ತಾನದಿಂದ ಹಣ ಪಡೆದು ಕಾಶ್ಮೀರದಲ್ಲಿ ಯುವಜನರ ತಲೆ ಕೆಡಿಸುವ ಕಾರ್ಯದಲ್ಲಿ ತೊಡಗಿರುವ ಕಾಶ್ಮೀರಿ ಪ್ರತ್ಯೇಕವಾದಿಗಳನ್ನು ಗುರುತಿಸಿ ಅವರನ್ನು ಮಟ್ಟಹಾಕಬೇಕು. ಕಾಶ್ಮೀರಕ್ಕೆ ಸಂವಿಧಾನದ 370ನೇ ಪರಿಚ್ಛೇದ ನೀಡಿರುವ ವಿಶೇಷ ಸ್ಥಾನಮಾನವನ್ನು ಕಿತ್ತು ಹಾಕಿ, ಅದನ್ನು ಭಾರತದ ಉಳಿದೆಲ್ಲ ರಾಜ್ಯಗಳಂತೆ ಪರಿಗಣಿಸಬೇಕು. ದೇಶದಾದ್ಯಂತ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವ, ಸೈನ್ಯದ ವಿರುದ್ಧ ಬೆಂಕಿ ಕಾರುವ, ಆತಂಕಿಗಳ ಪರ ಘೋಷಣೆ ಕೂಗುವ ದೇಶ ದ್ರೋಹಿಗಳನ್ನು ಹಿಡಿದು ತಕ್ಷಣ ಶಿಕ್ಷೆ ನೀಡಬೇಕು.

ಕೆಲವು ಪ್ರಜೆಗಳು ನಮ್ಮ ಗೂಢಚಾರಿ ಸಂಸ್ಥೆಗಳ ವೈಫಲ್ಯವನ್ನು ಕುರಿತು ಮಾತನಾಡುತ್ತಿದ್ದರೆ, ಮತ್ತೆ ಕೆಲವರು ಸರಕಾರದ ಕಾರ್ಯನೀತಿಯನ್ನು ಪ್ರಶ್ನಿಸುತ್ತಿದ್ದಾರೆ. ಮತ್ತಿತರರು ವಿರೋಧ ಪಕ್ಷಗಳ ಧೋರಣೆಗಳನ್ನು ದೂಷಿಸುತ್ತಿದ್ದಾರೆ. ಭಾರತೀಯರ ಹೃದಯಗಳಲ್ಲಿ ಮೂಡಿರುವ ಈ ಎಲ್ಲ ಪ್ರತಿಕ್ರಿಯೆಗಳು ಮತ್ತು ಪ್ರತೀಕಾರಗಳು ಅವರ ದೃಷ್ಟಿಯಲ್ಲಿ ಸರಿಯೇ. ದೇಶದ ಬಹುತೇಕ ಟಿವಿ ಚಾನೆಲ್ಲುಗಳಲ್ಲಿ ಚರ್ಚೆ ನಡೆಸುತ್ತಿರುವ ಸಮಾಚಾರ ವಾಚಕರು, ರಾಜಕಾರಣಿಗಳು, ಮತ್ತು ತಥಾಕಥಿತ ಬುದ್ಧಿಜೀವಿಗಳು ಇದೇ ತರಹದ ನಿರ್ಣಯಗಳಿಗೆ ಬರುತ್ತಿದ್ದಾರೆ. ಆದರೆ ಒಂದು ದೇಶದ ಸಕಲ ಜವಾಬ್ದಾರಿಯನ್ನು ಹೊತ್ತಿರುವ ಸರಕಾರ ಯಾವುದೇ ಕ್ರಮವನ್ನು ಕೈಗೊಳ್ಳಬೇಕಾದರೂ ಬಹಳ ಯೋಚಿಸಿ ಹೆಜ್ಜೆಯಿಡಬೇಕಾಗುತ್ತದೆ.

ಸ್ಫೋಟಕ್ಕೆ ಉಗ್ರರು ಬಳಸುತ್ತಿರುವ ಹೊಸ ಟೆಕ್ನಿಕ್ ಏನು ಗೊತ್ತಾ?

ಪಾಕಿಸ್ತಾನದಂತಹ ಭಿಕ್ಷಾಪಾತ್ರೆ ಹಿಡಿದಿರುವ ಬೇಜವಾಬ್ದಾರಿ ದೇಶ ತನ್ನ ಜನರ ಹಿತಾಸಕ್ತಿಗಳನ್ನು ಕಡೆಗಣಿಸಿ ಕ್ರೂರ ಆತಂಕವಾದಿಗಳ ತವರಾಗಬಹುದು. ಆದರೆ ಭಾರತದ ಜವಾಬ್ದಾರಿಯುತ ಸರಕಾರಕ್ಕೆ ದಿಢೀರ್ ನಿರ್ಣಯ ಕೈಗೊಂಡು ತಪ್ಪು ಕ್ರಮಗಳನ್ನು ಜರುಗಿಸುವುದು ಅಸಾಧ್ಯ. ಎಲ್ಲ ಆಯ್ಕೆಗಳ ಸಾಧಕ ಬಾಧಕಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸರಕಾರ ತನ್ನ ಮುಂದಿನ ಹೆಜ್ಜೆಯನ್ನು ಇಡುತ್ತದೆ ಎಂದು ನನ್ನ ಅನಿಸಿಕೆ.

ಸಮಾಧಾನದ ವಿಷಯವೆಂದರೆ, ಎಲ್ಲ ವಿರೋಧ ಪಕ್ಷಗಳು ಒಕ್ಕೊರಲಿನಲ್ಲಿ ಸರಕಾರಕ್ಕೆ ಯಾವುದೇ ನಿರ್ಣಯ ಕೈಗೊಳ್ಳಲು ಬೆಂಬಲ ಘೋಷಿಸಿವೆ. ಯಾವಾಗಲೂ ನಾಯಿ ಬೆಕ್ಕುಗಳಂತೆ ಕಚ್ಚಾಡಿ ದೇಶದ ಹಿತಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಈ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ಮಾಡುವುದನ್ನೇ ನೋಡುತ್ತಿದ್ದ ನಮಗೆ ಈ ಅಭೂತಪೂರ್ವ ಒಗ್ಗಟ್ಟು ಸಮಾಧಾನದ ನಿಟ್ಟುಸಿರು ತರಿಸಿದೆ. ಇಂತಹ ಸಂದರ್ಭದಲ್ಲಿ ಮಾತ್ರವಲ್ಲ, ಎಲ್ಲ ದೇಶಹಿತದ ಕಾರ್ಯಕ್ರಮಗಳ ವಿಷಯದಲ್ಲಿ ವಸ್ತುನಿಷ್ಠ ಚರ್ಚೆ ನಡೆದು ಈ ತರಹದ ಒಗ್ಗಟ್ಟು ಉಂಟಾಗಲಿ ಎಂಬುದು ನನ್ನಂತಹ ಧನಾತ್ಮಕ ವಿಚಾರವುಳ್ಳವರ ಆಶಯ.

ಆದರೆ ಇವೆಲ್ಲ ಕೆಟ್ಟ ಘಟನೆಗಳ ಮಧ್ಯೆಯೂ, ಇಂದಿನ ವ್ಯಥೆಯ ನಡುವೆಯೂ ಸಾಮಾನ್ಯ ಪ್ರಜೆಗಳಾದ ನಾವು ಕೆಲವು ಪ್ರಶ್ನೆಗಳನ್ನು ನಮ್ಮಲ್ಲಿಯೇ ಕೇಳಿಕೊಳ್ಳಬೇಕಾಗಿದೆ. ಅದು ಹೇಗೆ ಕೆಲವೇ ಸಾವಿರ ಬ್ರಿಟಿಷರು ನಮ್ಮ ದೇಶದ ಎಲ್ಲ ಸಣ್ಣ ದೊಡ್ಡ ರಾಜರನ್ನು ಕ್ರಮವಾಗಿ ಸೋಲಿಸಿ ಇಡೀ ದೇಶವನ್ನು ತಮ್ಮ ವಶಪಡಿಸಿಕೊಂಡರು? ಅದು ಹೇಗೆ ಮರಾಠರ ಬಲಾಢ್ಯ ಸೇನೆ, ರಾಣಾ ಸಾಂಗಾನ ಪ್ರಬಲ ಪಡೆ, ಪೃಥ್ವಿರಾಜನ ಶಿಸ್ತಿನ ಸೈನ್ಯ ಮತ್ತು ಗುರ್ಜರ ಪ್ರತೀಹಾರರ ದೊಡ್ಡ ಸೈನ್ಯಗಳಿಗೆ ಪಶ್ಚಿಮದಿಂದ ಬಂದ ಪರದೇಶಿಯರ ದಾಳಿಯನ್ನು ಹಿಮ್ಮೆಟ್ಟಿಸಲಾಗಲಿಲ್ಲ? ನಮ್ಮ ದೇಶ ಏಕೆ ಕಳೆದ ಸಾವಿರ ವರ್ಷಗಳಿಂದ ಪದೇ ಪದೇ ಆಕ್ರಮಣಕ್ಕೆ ಒಳಗಾಗಿದೆ? ಈ ಆಕ್ರಮಣಗಳಿಂದ ನಮ್ಮದಾದ ಪಾಕಿಸ್ತಾನ, ಅಫಘಾನಿಸ್ತಾನ, ಬಂಗ್ಲಾದೇಶ ಮತ್ತು ಬರ್ಮಾಗಳಂತಹ ಅತಿ ದೊಡ್ಡ ಭೂಭಾಗಗಳು ನಮ್ಮ ಕೈಬಿಟ್ಟು ಹೇಗೆ ಪರಕೀಯವಾದವು?

ಸ್ವಲ್ಪ ಅವಲೋಕನ ಮಾಡಿ ನೋಡಿದರೆ ನಾವು ಭಾರತೀಯರು ಒಂದೇ ಸಂಸ್ಕೃತಿ, ಪರಂಪರೆ ಮತ್ತು ಜೀವನ ಶೈಲಿಗಳನ್ನು ಹೊಂದಿದ್ದರೂ ನಮ್ಮಲ್ಲಿ ಒಗ್ಗಟ್ಟಿರಲಿಲ್ಲ ಎಂಬುದು ಎಲ್ಲರಿಗೂ ತಿಳಿದು ಬರುತ್ತದೆ. ನಮ್ಮಲ್ಲಿಯ ಜಾತಿ, ಭಾಷೆ, ಪ್ರದೇಶ ಮುಂತಾದ ಭೇದಭಾವಗಳ ದುರುಪಯೋಗ ಪಡೆದು ಹೊರಗಿನಿಂದ ಬಂದ ಜನ ನಮ್ಮ ದೇಶದಲ್ಲಿಯೇ ನಮ್ಮನ್ನು ಸೋಲಿಸಿದರು. ಮತ್ತೊಂದು ಮುಖ್ಯ ವಿಷಯವೇನೆಂದರೆ, ನಾವು ಭಾರತೀಯರು ನಮ್ಮ ದೇಶದ ನೀತಿ, ನಿಯಮಗಳನ್ನು ಅನುಸರಿಸಿ ಹೊರಗಿನವರೊಡನೆ ಯುದ್ಧ ಮಾಡಲು ನೋಡಿದೆವು. ಆದರೆ ಕೇವಲ ಗೆದ್ದು ದೋಚಿಕೊಳ್ಳುವ ಗುರಿಯನ್ನು ಮಾತ್ರ ಇಟ್ಟುಕೊಂಡು ಬಂದ ಈ ಹೊರಗಿನ ಜನರಿಗೆ ನಮ್ಮ ದೇಶದ ನೀತಿ ನಿಯಮಗಳು ಹಾಸ್ಯಸ್ಪದವಾಗಿ ಕಂಡವು.

ಆದುದರಿಂದಲೇ ತಾನೇ ಸೋತು ಪೃಥ್ವಿರಾಜನಿಂದ ಕ್ಷಮಾಯಾಚನೆ ಪಡೆದು ಹೋದ ಘೋರಿ ಮತ್ತೆ ವಾಪಸ್ಸು ಬಂದು ಗೆದ್ದಾಗ ಪೃಥ್ವಿರಾಜನ ಮೇಲೆ ಅಂತಹ ಯಾವ ಕರುಣೆಯನ್ನೂ ತೋರಿಸಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹೊರಗಿನಿಂದ ಬಂದ ಜನರಿಂದ ಹೊಸದೇನನ್ನೂ ಕಲಿಯಲು ನಮ್ಮ ಜನ ಅಷ್ಟೊಂದು ಇಚ್ಛೆ ತೋರಿಸಲಿಲ್ಲ. ಅದರಿಂದಲೇ ಪಾಶ್ಚಿಮಾತ್ಯರು ಬಂದೂಕು ಮತ್ತು ತೋಪುಗಳನ್ನು ಕಂಡು ಹಿಡಿದು ಉಪಯೋಗಿಸತೊಡಗಿ ಎಷ್ಟೋ ಕಾಲವಾದರೂ ನಮ್ಮ ಸೈನಿಕರು ಇನ್ನೂ ಬಿಲ್ಲು ಬಾಣ, ಕತ್ತಿ ಮತ್ತು ಭಾಲೆಗಳಂತಹ ಆಯುಧಗಳನ್ನೇ ಉಪಯೋಗಿಸುತ್ತಿದ್ದರು. ಮಧ್ಯ ಪ್ರಾಚ್ಯದ ಜನ ಮತ್ತು ಪಾಶ್ಚಿಮಾತ್ಯರಿಂದ ನಾವು ಯುದ್ಧ ಕೌಶಲಗಳನ್ನು ಪಡೆಯಲಿಲ್ಲ. ನಮ್ಮ ಒಡಕು, ಏಕಪಕ್ಷೀಯ ನೀತಿ ನಿಯಮಗಳೊಂದಿಗೆ, ಹೊಸ ಕೌಶಲಗಳನ್ನು ಕಲಿಯುವುದರಲ್ಲಿನ ನಮ್ಮ ನಿರಾಸಕ್ತಿ ನಮ್ಮ ಅವನತಿಗೆ ಕಾರಣವಾಯಿತು ಎನ್ನಬಹುದು.

ಇಂದಿನ ದಿನಗಳಿಗೆ ಹೋಲಿಸಿ ನೋಡಿದಾಗ ಕೂಡ ಅಂದಿನ ಪರಿಸ್ಥಿತಿಯೇ ಮುಂದುವರೆದಿದೆ ಎಂದು ಭಾಸವಾಗುತ್ತದೆ. ಹೊಸ ಹೊಸ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ನಾವು ಬಹಳ ನಿಧಾನ ಮಾಡುತ್ತಿದ್ದೇವೆ. ಅಲ್ಲದೇ ಇಂದಿನ ಅತ್ಯಾಧುನಿಕ ವಿಜ್ಞಾನ ಯುಗದಲ್ಲಿ ಕೂಡ ಓಬೀರಾಯನ ಕಾಲದ ಭೇದಭಾವಗಳನ್ನು ನೆನಪಿಟ್ಟುಕೊಂಡು ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದೇವೆಯೇ ಹೊರತು ನಮ್ಮ ಇತಿಹಾಸದಿಂದ ನಾವೇನೂ ಕಲಿಯುತ್ತಿಲ್ಲ. ಇಂದಿಗೂ ಕೂಡ ಪಾಕಿಸ್ತಾನ ಮತ್ತು ಚೀನದಂತಹ ದೇಶಗಳು ನಮ್ಮ ದೇಶದ ಒಡಕನ್ನು ಅತ್ಯಂತ ಸುಲಭವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ಪುಲ್ವಾಮಾದಂತಹ ದಾಳಿ ಮಾಡಲು ಉಪಯೋಗಿಸಿಕೊಳ್ಳುತ್ತಿವೆ. ನಾವು ಮಾತ್ರ ಏನನ್ನೂ ಕಲಿಯದೇ ಅಂತಹ ಘಟನೆಗಳಾದಾಗ ಸ್ವಲ್ಪ ದಿನ ಕಿರುಚಾಡಿ ನಂತರ ಶಾಂತರಾಗುತ್ತೇವೆ. ಸ್ವಲ್ಪ ದಿನ ಒಗ್ಗಟ್ಟಾಗಿರುವಂತೆ ನಾಟಕ ಮಾಡಿ ಮತ್ತೆ ನಮ್ಮ ದೈನಂದಿನ ಪರಸ್ಪರ ಕಚ್ಚಾಟಗಳಿಗೆ ಸಿದ್ಧರಾಗುತ್ತೇವೆ. ನಮ್ಮ ಈ ಮೂಢತನದ ಇಂಧನಕ್ಕೆ ಬೆಂಕಿ ಕೊಡಲು ನಮ್ಮ ರಾಜಕೀಯ ಪುಢಾರಿಗಳು ಮತ್ತು ಹೊರದೇಶಗಳಿಗೆ ತಮ್ಮನ್ನು ಮಾರಿಕೊಂಡ ಬುದ್ಧಿಜೀವಿಗಳು ಸದಾ ಸಿದ್ಧರಾಗಿಯೇ ಕುಳಿತಿರುತ್ತಾರೆ.

English summary
Pulwama terror attack : What have we learnt from history? Asks Vasant Kulkarni from Singapore. Have we updated and upgraded to the present situation? Being a responsible country, what India should do now?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X