ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಋಣಾತ್ಮಕ ಮನೋಸ್ಥಿತಿಯಿಂದ ಮುಕ್ತರಾಗುವುದು ಹೇಗೆ?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಮೊನ್ನೆ ಮಧ್ಯಾಹ್ನ ಹೀಗೇ ಏನೋ ಕೆಲಸದಲ್ಲಿ ತೊಡಗಿದ್ದಾಗ ನನ್ನ ಮೊಬೈಲು ಗುಣುಗುಟ್ಟಿತು. ಮತ್ತೇನೋ ಹೊಸ ಜಾಹೀರಾತಿನ ಎಸ್ ಎಮ್ ಎಸ್ ಇರಬಹುದು ಅನಿಸಿ ಅದನ್ನು ತಕ್ಷಣ ನೋಡಲಿಲ್ಲ. ನಂತರ ನೋಡಿದಾಗ ಮಿತ್ರನೊಬ್ಬ ಒಂದು ಮೆಸೇಜ್ ಅನ್ನು ಕಳುಹಿಸಿದ್ದ.

"ನಮ್ಮೆಲ್ಲರ ಗುರಿ, ಆಕಾಂಕ್ಷೆ ಮತ್ತು ಕೆಲಸಗಳು, ನಮ್ಮ ಗ್ರಹಿಕೆ (Perception), ನಂಬಿಕೆ (Belief) ಮತ್ತು ಶ್ರದ್ಧೆ(Faith)ಗಳ ಸಂಕೀರ್ಣ ಮಿಶ್ರಣಗಳಾಗಿರುತ್ತವೆ. ಯಾವಾಗ ಈ ಮೂರೂ ಅಂಶಗಳು ಮನಸ್ಸಿನಲ್ಲಿ ಧನಾತ್ಮಕ (Positive) ಮಾರ್ಗವನ್ನು ಪಡೆಯುತ್ತವೆಯೋ, ಆವಾಗ ಗ್ರಹಿಕೆ, ಜ್ಞಾನ ಮತ್ತು ಜಾಣ್ಮೆಯಾಗಿಯೂ, ನಂಬಿಕೆ, ಮನಃಶಕ್ತಿ ಮತ್ತು ಉತ್ಸುಕತೆಯಾಗಿಯೂ ಹಾಗೂ ಶ್ರದ್ಧೆ, ಸಾಮರ್ಥ್ಯ ಮತ್ತು ಪ್ರೇರಣೆಯಾಗಿಯೂ ಪರಿವರ್ತನೆಗೊಳ್ಳುತ್ತವೆ. ಆದರೆ ಈ ಮೂರು ಅಂಶಗಳು ಋಣಾತ್ಮಕ (Negative) ಮಾರ್ಗವನ್ನು ಪಡೆದರೆ ತಪ್ಪು ಗ್ರಹಿಕೆ (Misperception), ಅಜ್ಞಾನ ಮತ್ತು ಅಸಮರ್ಥತೆಯಾಗಿ, ಅಪನಂಬಿಕೆ (Disbelief), ದುರ್ಬಲತೆ ಮತ್ತು ನ್ಯೂನತೆಗಳಾಗಿ ಹಾಗೂ ಸಂಶಯ (Cynicism), ಪರಿಮಿತತೆಯಾಗಿ ಪರಿವರ್ತನೆಗೊಳ್ಳುತ್ತವೆ".

ಜನಪ್ರಿಯವಲ್ಲದ ನಿರ್ಧಾರ ತೆಗೆದುಕೊಳ್ಳಲೂ ಗುಂಡಿಗೆ ಬೇಕುಜನಪ್ರಿಯವಲ್ಲದ ನಿರ್ಧಾರ ತೆಗೆದುಕೊಳ್ಳಲೂ ಗುಂಡಿಗೆ ಬೇಕು

'ಎಂಥಾ ಸತ್ಯವಾದ ಹೇಳಿಕೆ!' ಅನಿಸಿತು. ಎಲ್ಲವೂ ಒಳ್ಳೆಯದಾಗಬೇಕೆಂಬುದು ನಮ್ಮೆಲ್ಲರ ಆಶಯ. ಆದರೆ ಅದಕ್ಕೆ ಬೇಕಾಗುವ ಧನಾತ್ಮಕ ಅಂಶಗಳನ್ನು ನಾವು ಬೆಳೆಸಿಕೊಳ್ಳುತ್ತಿದ್ದೇವೆಯೆ ಎಂಬುದನ್ನು ಆಗಾಗ ನಮ್ಮ ಆಂತರ್ಯವನ್ನು ಕೆದಕಿ ನೋಡುತ್ತಿರಬೇಕಲ್ಲವೆ? ಆಶಾವಾದ ಅಥವಾ ಧನಾತ್ಮಕ ದೃಷ್ಟಿ ನಮ್ಮನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕರೆದೊಯ್ಯುವ ಸಾಧನ. ಗ್ರಹಿಕೆ, ನಂಬಿಕೆ ಮತ್ತು ಶ್ರದ್ಧೆಗಳ ಸರಿಯಾದ ದಿಗ್ದರ್ಶನ ನಮ್ಮನ್ನು ಆಕಾಶಕ್ಕೆತ್ತಿದರೆ, ಅವುಗಳ ತಪ್ಪು ದಿಶೆಯಿಂದ ನಾವು ಪಾತಾಳ ಸೇರುವದು ನಿತ್ಯ ಸತ್ಯ.

Personality development : How to get rid of negative thoughts

ಆದರೆ ದಿನ ನಿತ್ಯದ ಭೀಭತ್ಸ, ಭಯಂಕರ ಆಗು ಹೋಗುಗಳು ನಮ್ಮನ್ನು ಸದಾ ಅಪ್ಪಳಿಸುತ್ತಿರುವಾಗ, ಸದಾ ಆಶಾವಾದಿಯಾಗಿರುವುದು ಹೇಗೆ ಸಾಧ್ಯ ಎಂಬ ಭಾವನೆ ಮೂಡುವುದು ಸಹಜ. ಅದಕ್ಕೆ ಪರಿಹಾರವಾಗಿ ಯೋಗಸೂತ್ರವೊಂದು ಹೀಗೆ ಹೇಳುತ್ತದೆ. 'ಯಾವಾಗ ಋಣಾತ್ಮಕ ವಿಚಾರಗಳು ಮನವನ್ನು ಘಾಸಿಗೊಳಿಸುತ್ತಿರುವಾಗ ಅದಕ್ಕೆ ವಿರುದ್ಧವಾದ (ಧನಾತ್ಮಕ) ಅಂಶಗಳತ್ತ ಮನವನ್ನು ಬಲವಂತವಾಗಿ ಪ್ರೇರೇಪಿಸಬೇಕು'. ಧ್ಯಾನ, ವ್ಯಾಯಾಮ, ಯೋಗಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಬಹುದು. ಒಳ್ಳೆಯ ಆಟಗಳಲ್ಲಿ ತೊಡಗಿಸಿಕೊಂಡು ಮನಸ್ಸನ್ನು ಪ್ರಫುಲ್ಲಿತಗೊಳಿಸಬಹುದು. ಸಾಹಿತ್ಯ, ಸಂಗೀತ, ಸಂಶೋಧನೆಗಳಂತಹ ರಚನಾತ್ಮಕ ಕ್ರಿಯೆಗಳಲ್ಲಿ ಮನಸ್ಸನ್ನು ತೊಡಗಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಋಣಾತ್ಮಕ ಭಾವನೆಗಳ ಮೂಲವನ್ನು ಶೋಧಿಸಿ, ಅದಕ್ಕೊಂದು ಒಳ್ಳೆಯ ಪರಿಹಾರ ಹುಡುಕುವುದು. ಈ ಎಲ್ಲ ಕಾರ್ಯಗಳಿಂದ ನಾವು ಋಣಾತ್ಮಕ ಭಾವನೆಗಳಿಂದ ಮುಕ್ತರಾಗಲು ಪ್ರಯತ್ನಿಸಬಹುದು.

ಎಲ್ಲ ನಂಬಿಕೆ, ಭರವಸೆಗಳನ್ನು ಕಳೆದುಕೊಂಡು ಜೀವಿಸುವುದು ಹೇಗೇ? ಪ್ರಸಿದ್ಧ ಲೇಖಕ ಮತ್ತು ಚಿಂತಕ ('You can win' ಖ್ಯಾತಿಯ) ಶಿವ್ ಖೇರಾ ಅವರ ಜೀವನ ಒಂದು ದೊಡ್ಡ ಉದಾಹರಣೆ. ಹತ್ತನೇ ತರಗತಿಯಲ್ಲಿ ಫೇಲಾದ ಅವರು, ಮುಂದೆ ತಮ್ಮ ತರುಣ ವಯಸ್ಸಿನಲ್ಲಿಯೇ ತಮ್ಮೆಲ್ಲ ಆಸ್ತಿ ಪಾಸ್ತಿಯನ್ನು ಕಳೆದುಕೊಂಡರು. ಭಾರತ ಬಿಟ್ಟು ಕೆನಡಾಕ್ಕೆ ಬಂದು ಅಲ್ಲಿ ಜೀವನವನ್ನು ಹೊಸದಾಗಿ ಆರಂಭಿಸಿದರು. ಕಾರುಗಳನ್ನು ತೊಳೆಯುವುದರಿಂದ ಆರಂಭಿಸಿ ಜೀವನವಿಮೆಯ ಏಜೆಂಟರಾಗಿ, ಸೇಲ್ಸ್ ಮ್ಯಾನ್‌ರಾಗಿ ದುಡಿದರು. ತಮ್ಮ ಜೀವನದ ಕಷ್ಟದ ಗಳಿಗೆಗಳಲ್ಲಿ ಅವರು ಧೃತಿಗೆಡಲಿಲ್ಲ. Motivational ಗುರು ನಾರ್ಮನ್ ವಿನ್ಸೆಂಟ್ ಪೀಲೆಯವರಿಂದ ಪ್ರೇರೇಪಿತರಾಗಿ ಕಷ್ಟದಲ್ಲಿದ್ದ ಜನರನ್ನು ಪ್ರೇರೇಪಿಸಿ ಮಾರ್ಗದರ್ಶನ ಮಾಡಿದರು. ಅನೇಕ ಜನರಿಗೆ ಸಲಹೆ ಕೊಟ್ಟು ಅವರ ಬದುಕಿನ ಮಾರ್ಗವನ್ನು ಬದಲಿಸಿದರು.

ಇಂದು ಅವರು ವಿಶ್ವದ ಖ್ಯಾತ Motivational author/speaker ಆಗಿ ಹೊರಹೊಮ್ಮಿದ್ದಾರೆ. ತಾರುಣ್ಯದಲ್ಲಿಯ ಸಂಕಟಗಳೆದುರು ಸೋತು ಕೈ ಚೆಲ್ಲಿದ್ದರೆ, ಅವರು ಖ್ಯಾತ Motivational author/speaker ಆಗುತ್ತಿರಲಿಲ್ಲ ಮತ್ತು ಸಾವಿರಾರು ಜನರಿಗೆ ನೆರವಾಗುತ್ತಿರಲಿಲ್ಲ. ಅವರು ತಮ್ಮ ಗ್ರಹಿಕೆ, ನಂಬಿಕೆ ಮತ್ತು ಶ್ರದ್ಧೆಗಳನ್ನು ಧನಾತ್ಮಕ ಮಾರ್ಗದಲ್ಲಿ ನಡೆಸಿದ್ದುದರಿಂದ ನೂರಾರು ಜನರಿಗೆ ದಾರಿದೀಪವಾದರು. ನಮ್ಮ ಗ್ರಹಿಕೆ, ನಂಬಿಕೆ ಮತ್ತು ಶ್ರದ್ಧೆಗಳನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುವವರು ನಾವೇ. ಬೇರೆ ಯಾರೂ ಅಲ್ಲ. ಆದುದರಿಂದ ನಮ್ಮ ಆಶಾವಾದವನ್ನು ನಾವೆಂದೂ ಬಿಡಬಾರದು.

ಕನ್ನಡದ ಮೇರು ಕವಿ ಡಿ.ವಿ.ಜಿ ಅವರಂತೂ ಆಶಾವಾದ ಮನುಷ್ಯನ ಜೀವ ಗುಣ ಎಂದು ಬಣ್ಣಿಸಿದ್ದಾರೆ;

ಕ್ಲೇಶ ನೂರಾಗಿರೆಯುಮಾಶೆಗಳ ಪುನರುದಯ|
ಬೇಸರದ ನುಡಿಯೊಳಂ ಲೇಸುಗಳ ನೆನಪು||
ಆಶೆ ಸಾಯ್ತೆಂದೊಡಂ ಚೆಲುವೆನಲು ಕಣ್ಣಲೆತ|
ಮಾಸವೀ ಜೀವಗುಣ-ಮಂಕುತಿಮ್ಮ||

ಅದೆಷ್ಟು ತೊಂದರೆಗಳು ಮೇಲೆರಗಿದರೂ ಮನುಷ್ಯನಲ್ಲಿ ಅನೇಕ ಆಶೆಗಳ ಉದಯವಾಗುತ್ತದೆ. ಎಂತಹ ಕಟು ನುಡಿಗಳಲ್ಲಿ ಕೂಡ ಮನುಷ್ಯ ಒಳ್ಳೆಯ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾನೆ. ಜೀವನದ ಎಲ್ಲ ಇಚ್ಛೆಗಳು ಪೂರೈಸಿದರೂ ಸಂತೃಪ್ತಗೊಂಡರೂ ಸೌಂದರ್ಯ ಮನುಷ್ಯನ ಮನಸ್ಸನ್ನು ಮತ್ತೆ ಮತ್ತೆ ಆಕರ್ಷಿಸುತ್ತದೆ. ಒಟ್ಟಿನಲ್ಲಿ ಆಶಾವಾದ ಮನುಷ್ಯನ ಜೀವಗುಣ ಎನ್ನುತ್ತಾರೆ ಡಿವಿಜಿ.

ಈ ಜೀವಗುಣವನ್ನು ಸದಾ ಜೀವಂತವಾಗಿಟ್ಟು, ಅದನ್ನು ಸರಿಯಾದ ದಿಶೆಯಲ್ಲಿ ಪ್ರವಹಿಸುವಂತೆ ನೋಡಿಕೊಳ್ಳುವ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕಲ್ಲವೆ?

English summary
winners see the gain; losers see the pain. Winners dont do different things, they do things differently. Under Adverse conditions - some people break down,some break records. Shiv Khera, You Can Win: A Step by Step Tool for Top Achievers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X