• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾವೋನ್ಮಾದದ ದೇಶಭಕ್ತಿ ವರ್ಸಸ್ ಅಭಿಮಾನ ಶೂನ್ಯತೆ

By ವಸಂತ ಕುಲಕರ್ಣಿ, ಸಿಂಗಪುರ
|

2003. ಸಿಂಗಪುರಕ್ಕೆ ಬಂದ ಹೊಸತು. ಒಂದು ಸಂಜೆ ನಾನು, ನನ್ನ ಪತ್ನಿ ಮತ್ತು ಮೂರು ವರ್ಷದ ಮಗಳೊಂದಿಗೆ ಹಣ್ಣಿನ ರಸದ ಅಂಗಡಿಯೊಂದರ ಮುಂದೆ ನಿಂತಿದ್ದೆ. ನನ್ನ ಮಗಳು ಒಮ್ಮೆಲೇ ತಾನು ಶಾಲೆಯಲ್ಲಿ ಕಲಿತಿದ್ದ ಸಿಂಗಪುರದ ರಾಷ್ಟ್ರೀಯ ಪ್ರಮಾಣ (ವಾಗ್ದಾನ)ವನ್ನು ಜೋರಾಗಿ ಆದರೆ ತನಗೆ ತಾನೇ ಹೇಳಿಕೊಂಡಳು. ಅಲ್ಲಿಯೇ ನಿಂತು ಹಣ್ಣು ತಿನ್ನುತ್ತಿದ್ದ ಸಿಂಗಪೂರಿನ ನಾಗರಿಕನೊಬ್ಬನಿಗೆ ಅದನ್ನು ಕೇಳಿ ಬಹಳ ಖುಶಿಯಾಯಿತು. ಅವಳು ಅದನ್ನು ಹೇಳುತ್ತಿದ್ದ ಹಾಗೆಯೇ ಅವನು ಹಣ್ಣು ತಿನ್ನುವುದನ್ನು ನಿಲ್ಲಿಸಿ "Attention"ನಲ್ಲಿ ನಿಂತ. ಅವಳು ಹೇಳುವುದನ್ನು ಮುಗಿಸಿದ ಮೇಲೆ "Very nice, very nice" ಎಂದು ಖುಷಿಯನ್ನು ವ್ಯಕ್ತಪಡಿಸಿದ. ಹಣ್ಣಿನ ಅಂಗಡಿಯವನ ಮುಖದಲ್ಲಿ ಕೂಡ ಸಂತಸ ಎದ್ದು ಕಾಣುತ್ತಿತ್ತು.

ಅಲ್ಲಿಂದ ಮುಂದೆ ನನಗೆ ತಿಳಿದು ಬಂದ ಅಂಶವೇನೆಂದರೆ, ಸಿಂಗಪುರದ ಪ್ರತಿಯೊಬ್ಬ ನಾಗರಿಕ ಈ ರಾಷ್ಟ್ರೀಯ ಪ್ರಮಾಣ(ವಾಗ್ದಾನ)ವನ್ನು ಸ್ಕೂಲಿನಲ್ಲೇ ಕಲಿಯುತ್ತಾನೆ. ಹೀಗಾಗಿ ಎಲ್ಲರಿಗೂ ಅದು ಕಂಠಪಾಠವಾಗಿರುತ್ತದೆ. ಅಲ್ಲದೇ ಪ್ರತಿಯೊಬ್ಬ ನಾಗರಿಕ ಬಹಳ ಅಭಿಮಾನದಿಂದ ಈ ಪ್ರಮಾಣವನ್ನು ಹೇಳುತ್ತಾನೆ. ಈ ಪ್ರಮಾಣ ಮಾತ್ರವಲ್ಲ. ತಮ್ಮ ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಎಲ್ಲದರ ಮೇಲೆ ಸಿಂಗಪುರದ ಜನರಿಗೆ ಅಪಾರ ಅಭಿಮಾನ. ಸಿಂಗಪುರದ ರಾಷ್ಟ್ರೀಯ ದಿನ ಹತ್ತಿರ ಬಂದ ಹಾಗೆ ಪ್ರತಿಯೊಂದು ಮನೆ ಮನೆಯ ಮುಂದೆ ರಾಷ್ಟ್ರಧ್ವಜ ರಾರಾಜಿಸುತ್ತದೆ. ಯಾರಾದರೂ ರಾಷ್ಟ್ರಚಿಹ್ನೆಗಳಿಗೆ ಅವಮಾನ ಮಾಡಿದರೆ ಅವರು ಸಹಿಸುವುದಿಲ್ಲ. ಕಳೆದ ವರ್ಷ ಭಾರತೀಯ ಉದ್ಯೋಗಿಯೊಬ್ಬ ತನ್ನ ಟೀ ಶರ್ಟಿನ ಮೇಲೆ ಸಿಂಗಪುರದ ಹರಿದ ಧ್ವಜದ ಫೋಟೋ ಹಾಕಿದ್ದಕ್ಕೆ ತನ್ನ ಕೆಲಸ ಕಳೆದುಕೊಂಡ. ಅವರ ಈ ಉತ್ಕಟ ದೇಶಭಕ್ತಿಯನ್ನು ನೋಡಿ ಮನಸ್ಸು ತುಂಬಿ ಬರುತ್ತದೆ. ಸೋಜಿಗವಾಗುತ್ತದೆ.

ಯಶಸ್ಸಿನ ಬಗ್ಗೆ ಮಾತಾಡೋರೆ ಎಲ್ಲ, ಸೋಲಿನ ಬಗ್ಗೆ ಸೊಲ್ಲೇ ಇಲ್ಲ!

ನಾನು 2001ರಲ್ಲಿ ಜಪಾನಿನಲ್ಲಿ ಮೂರು ತಿಂಗಳು ಕೆಲಸ ಮಾಡಿದೆ. ಅಲ್ಲಿನ ನನ್ನ ಸಹೋದ್ಯೋಗಿಯೊಬ್ಬನ ಜೊತೆ ಮಾತನಾಡುತ್ತಿದ್ದಾಗ, ನಾನು ಜಪಾನಿನ ಸೋನಿ ಕಂಪನಿ ತನ್ನ ಉನ್ನತ ಗುಣಮಟ್ಟದ ಉತ್ಪನ್ನಗಳಿಗಾಗಿ ಭಾರತದಲ್ಲಿ ಬಹಳ ಪ್ರಸಿದ್ಧಿ ಪಡೆದಿದೆ ಎಂದು ಹೇಳಿದೆ. ಆತ ತಟ್ಟನೇ "ಸೋನಿ ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ಪ್ರಸಿದ್ಧಿ ಪಡೆದಿದೆ. ಬರೀ ಸೋನಿ ಮಾತ್ರವಲ್ಲ, ಟೊಯೋಟಾ, ಮಿತ್ಸುಬಿಷಿ, ಹೋಂಡಾ, ಹಿತಾಚಿ ಮುಂತಾದ ಕಂಪನಿಗಳು ಕೂಡ ಬಹಳ ಪ್ರಸಿದ್ಧಿ ಪಡೆದಿವೆ" ಎಂದು ಬಹಳ ಠೀವಿಯಿಂದ ನುಡಿದ.

ಆತನ ಮಾತಿನಲ್ಲಿ ತನ್ನ ದೇಶದ ಮತ್ತು ತನ್ನ ಜನರ ಬಗ್ಗೆ ಅಪಾರ ಭಕ್ತಿ ನಿಚ್ಚಳವಾಗಿ ಕಂಡು ಬಂದಿತು. ಅದರಲ್ಲಿ ನನಗೆ ತಪ್ಪೇನೂ ಕಾಣಿಸಲಿಲ್ಲ. ಆತ ಸತ್ಯವನ್ನೇ ಹೇಳುತ್ತಿದ್ದ. ಜಪಾನಿನ ವಿವಿಧ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೇಳುವುದರಲ್ಲಾಗಲಿ, ಇತಿಹಾಸವನ್ನು ನನ್ನಂತಹ ವಿದೇಶೀಯರಿಗೆ ತಿಳಿಸಿಕೊಡುವುದರಲ್ಲಾಗಲಿ ಅವನ ದೇಶಾಭಿಮಾನ ತುಂಬಿ ತುಳುಕಾಡುತ್ತಿದ್ದುದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ವಿನಯಶೀಲತೆ ಅಲ್ಲಿರುತ್ತಿತ್ತು ಮತ್ತು ಯಾವುದೂ ಅತಿ ಅನ್ನಿಸುತ್ತಿರಲಿಲ್ಲ.

ಮುಂದಿನ ವರ್ಷ ಎಂದರೆ 2002ರಲ್ಲಿ ನಾನು ದಕ್ಷಿಣ ಕೋರಿಯಾದಲ್ಲಿದ್ದಾಗ ನನ್ನ ಮಿತ್ರನೊಬ್ಬನಿಗೆ ಕ್ಯಾಮೆರಾ ಖರೀದಿಸಬೇಕಾಗಿತ್ತು. ನನ್ನ ಕೋರಿಯನ್ ಸಹೋದ್ಯೋಗಿಯೊಬ್ಬ ಅತ್ಯಂತ ದೃಢವಾಗಿ ಸ್ಯಾಮ್ ಸುಂಗ್ ಕಂಪನಿಯ ಕ್ಯಾಮೆರಾ ಖರೀದಿ ಮಾಡಲು ಸಲಹೆ ಮಾಡಿದ. ಸ್ಯಾಮ್ ಸುಂಗ್ ಇನ್ನೂ ಆಗ ತಾನೇ ಪ್ರವರ್ಧಮಾನಕ್ಕೆ ಬರುತ್ತಿತ್ತು. ಆತನ ಸಲಹೆಯಲ್ಲಿ ಗಾಢವಾದ ದೇಶಭಕ್ತಿ ನಮಗೆ ಕಂಡು ಬಂದಿತು.

ಕಾಶ್ಮೀರಿಗಳನ್ನೇಕೆ ಆವರಿಸಿಕೊಂಡಿದೆ ಸಮೂಹ ಸನ್ನಿ? ಪರಿಹಾರವೇನು?

ಇವಿಷ್ಟೇ ಅಲ್ಲ. ನಮ್ಮ ಜಪಾನೀ ಸಹೋದ್ಯೋಗಿಗಳೇ ಆಗಲಿ, ಕೋರಿಯನ್ ಸಹೋದ್ಯೋಗಿಗಳೇ ಆಗಲಿ ತಮ್ಮ ದೇಶದ ಬಗ್ಗೆ ಹೀನಾಯವಾಗಿ ಅಥವಾ ಹಗುರವಾಗಿ ಮಾತನಾಡಿದ್ದನ್ನು ನಾನೆಂದೂ ಕಾಣಲಿಲ್ಲ. ನಾನು ಅಲ್ಲಿರುವಷ್ಟು ದಿನವೂ ತಮ್ಮ ದೇಶದ ಸಂಸ್ಕೃತಿ, ಧ್ವಜ ಅಥವಾ ರಾಷ್ಟ್ರಗೀತೆಗಳ ಬಗ್ಗೆ ಉಚ್ಚಮಟ್ಟದ ಗೌರವವನ್ನು ಕಂಡೆನೇ ಹೊರತು ಯಾವುದೇ ತರಹದ ಅಪಶೃತಿಯನ್ನು ಕಿಂಚಿತ್ತೂ ಕಾಣಲಿಲ್ಲ. ರಾಷ್ಟ್ರ ಪ್ರೇಮ ಅಲ್ಲಿನ ಜನಗಳಿಗೆ ಸಹಜವಾಗಿ ಬಂದಿದೆ. ರಾಷ್ಟ್ರ ಚಿಹ್ನೆಗಳನ್ನು ಗೌರವಿಸುವುದು ತಮ್ಮ ಆದ್ಯ ಕರ್ತವ್ಯವೆಂದು ಅಲ್ಲಿನ ಜನ ಭಾವಿಸುತ್ತಾರೆ. ರಾಷ್ಟ್ರೀಯತೆಗೆ, ದೇಶಪ್ರೇಮಕ್ಕೆ ಅಲ್ಲಿ ವರ್ಗಭೇದ, ಧರ್ಮಭೇದ, ಭಾಷಾಭೇದಗಳಂತಹ ಬಾಧೆಗಳಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.

ನಾನೇಕೆ ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ, ಕೆಲವು ದಿನಗಳ ಹಿಂದೆ ನಮ್ಮ ದೇಶದ ಮಿಲಿಟರಿ ಪಾಕಿಸ್ತಾನದ ಭಯೋತ್ಪಾದಕರ ನೆಲೆಯ ಮೇಲೆ ನಡೆಸಿದ ದಾಳಿಯ ಬಗ್ಗೆ ನನ್ನ ಪರಿಚಯದ ಭಾರತೀಯನೊಬ್ಬ ಸಂಶಯ ವ್ಯಕ್ತಪಡಿಸಿದ. ಅಲ್ಲದೇ ಟುಕ್ಡೇ ಟುಕ್ಡೇ ಗ್ಯಾಂಗಿನ ಹೇಳಿಕೆಗಳನ್ನು ಸಮರ್ಥಿಸಿ ಮಾತನಾಡಿದ. ಅದರಲ್ಲೂ ರಾಷ್ಟ್ರಗೀತೆಯನ್ನು ಹಾಡುವುದು ಅಥವಾ ಬಿಡುವುದು ಆಯಾ ವ್ಯಕ್ತಿಗಳ ಆಯ್ಕೆಗೆ ಬಿಟ್ಟದ್ದು ಎಂದು ಹೇಳಿದಾಗ ನನಗೆ ತೀವ್ರ ನೋವಾಯಿತು.

ವಸಂತ ಕುಲಕರ್ಣಿ ಅವರ ಅಂಕಣ 'ಅಂತರ್ಮಥನ' ಅಜೇಯ ಶತಕ!

ರಾಜಕೀಯ ನಾಯಕರು ಮತ್ತು ಬುದ್ಧಿಜೀವಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ವಿಷಯದ ಬಗ್ಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಬಹುದು ಅಥವಾ ದೊಡ್ಡ ಟಿವಿ ಮಾಧ್ಯಮಗಳು ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲೋ ಅಥವಾ ಮತ್ತಾವ ದುರುದ್ದೇಶದಿಂದಲೋ ಆ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಬಹುದು. ಆದರೆ ನಮ್ಮಂತಹ ಸಾಮಾನ್ಯ ಭಾರತೀಯರ ಬಾಯಿಯಿಂದ ಇಂತಹ ಹೇಳಿಕೆಗಳನ್ನು ಕೇಳಿದಾಗ ಸಂಕಟ ಉಂಟಾಗುತ್ತದೆ. ನಾನು ವಿರೋಧಿಸಿದಾಗ, "ಅದು ನನ್ನ ವಾಕ್ ಸ್ವಾತಂತ್ರ್ಯ" ಎನ್ನುವ ವಿತಂಡವಾದ ಕೇಳಿ ಬಂದಿತು.

ನಮ್ಮ ದೇಶದಲ್ಲಿ ವಾಕ್ ಸ್ವಾತಂತ್ರ್ಯದ ದುರ್ಬಳಕೆ ಬಹಳ ಹೆಚ್ಚಾಗಿದೆ ಎಂದು ನನಗೆ ಕೆಲವು ಬಾರಿ ಅನಿಸುತ್ತದೆ. ಬರೀ ವಾಕ್ ಸ್ವಾತಂತ್ರ್ಯವೇಕೆ, ಎಲ್ಲ ತರಹದ ಸ್ವಾತಂತ್ರ್ಯದ ದುರ್ಬಳಕೆಯಾಗುತ್ತಿದೆ ಮತ್ತು ಈ ಸ್ವಾತಂತ್ರ್ಯವನ್ನು ದೇಶದ ವಿರುದ್ಧ ಬಳಸಲಾಗುತ್ತಿದೆ ಎಂಬ ಭಾವನೆ ಬರುತ್ತದೆ. ಈ ದುರ್ಬಳಕೆಯನ್ನು ಕೇವಲ ಟುಕ್ಡೇ ಟುಕ್ಡೇ ಮನೋಧರ್ಮದರು ಮಾತ್ರ ಮಾಡುತ್ತಿಲ್ಲ. ಎಲ್ಲೆ ಮೀರಿದ ದೇಶಭಕ್ತಿ ಪ್ರಕಟಿಸುವವರೂ ಮಾಡುತ್ತಾರೆ.

ಹರಗಾಪುರ ಹಳ್ಳಿ ಸಹಪಾಠಿಗಳಾದ ಕಾಂಬಳ್ಯಾ ಕಣಕಣ್ಯಾ ಲೋಹ್ಯಾ

ಮೊನ್ನೆ ಮುಂಬಯಿಯ ಲೋಕಲ್ ಟ್ರೈನ್ ಒಂದರಲ್ಲಿ ಹುಡುಗರ ಗುಂಪೊಂದು ಅತ್ಯಾವೇಶದಲ್ಲಿ ದೇಶಭಕ್ತಿಯ ಘೋಷಣೆ ಕೂಗುತ್ತ ಪ್ರಯಾಣಿಕರಿಗೆ ಅದರಲ್ಲೂ ಒಂದು ಸಮುದಾಯಕ್ಕೆ ಸೇರಿದ ಕುಟುಂಬಕ್ಕೆ ತೊಂದರೆ ಮಾಡಿ ಕೆಳಗಿಳಿಯುಂತೆ ಮಾಡಿದ ವರದಿ ವಾಟ್ಸಾಪ್‍ನಲ್ಲಿ ಹರಿದು ಬಂದಿತ್ತು. ಇದನ್ನೋದಿದ ಮೇಲೆ ನನಗನಿಸಿದ್ದೇನೆಂದರೆ ಯಾವುದೇ ವಿಷಯಕ್ಕೆ ನಮ್ಮಲ್ಲನೇಕರದು ವೈಪರೀತ್ಯ ಎನ್ನಿಸುವ ಪ್ರತಿಕ್ರಿಯೆ. ನಮ್ಮ ದೇಶದಲ್ಲಿ ಮಾತ್ರ ದೇಶಭಕ್ತಿಯಂತಹ ನವಿರಾದ ಭಾವನೆ ಭಾವೋನ್ಮಾದವಾಗಿ ಮಾರ್ಪಾಡಾಗುತ್ತದೆ. ವಾಕ್ ಸ್ವಾತಂತ್ರ್ಯ ಎನ್ನುವ ಜವಾಬ್ದಾರಿಯುತ ಹಕ್ಕು ಬೇಜವಾಬ್ದಾರಿ ಜನಗಳ ಸ್ವೇಚ್ಛೆಗೆ ಸಿಲುಕಿ ಅಮೇಧ್ಯವಾಗುತ್ತದೆ. ಅದೇಕೆ ನಮ್ಮ ಸಮಾಜದಲ್ಲಿ ಈ ತರಹದ ತೀವ್ರ ಮತ್ತು ಸಂವೇದನಾಶೂನ್ಯ ನಡವಳಿಕೆ ಹೆಚ್ಚಾಗುತ್ತಿದೆ ಎನ್ನುವುದು ಒಂದು ಯಕ್ಷ ಪ್ರಶ್ನೆ.

ಸಂಪೂರ್ಣವಾಗಿ ನಾವು ಅಭಿಮಾನ ಶೂನ್ಯರಾಗುವುದರಿಂದ ಅದೆಷ್ಟು ಕೆಡುಕು ಉಂಟಾಗುವುದೋ ಅದನ್ನು ನಾವು ಉನ್ಮಾದವಾಗಿ ಪರಿವರ್ತಿಸಿದರೂ ಅಷ್ಟೇ ಕೆಡುಕಾಗುವುದು. ನಮ್ಮ ನಿರಭಿಮಾನದಿಂದ ಶತಮಾನಗಳ ಕಾಲ ಹೊರಗಿನ ಜನರ ದಬ್ಬಾಳಿಕೆಗೆ ಸಿಲುಕಿ ನಮ್ಮ ಸ್ವಾತಂತ್ರ್ಯವನ್ನು ನಾವು ಕಳೆದುಕೊಂಡಿದ್ದೆವು. ಇಂದು ಅದೇ ಅಜಾಗರೂಕತೆ ಮತ್ತು ಅನೈಕ್ಯತೆಗಳಿಗೆ ಅನುವು ಮಾಡಿಕೊಟ್ಟರೆ ಹೊರಗೆ ಮತ್ತು ಒಳಗೆ ಕಾದು ಕುಳಿತ ರಣಹದ್ದುಗಳಿಗೆ ನಮ್ಮನ್ನು ಮತ್ತೆ ಕಿತ್ತು ತಿನ್ನಲು ರಾಜಮಾರ್ಗ ದೊರಕುತ್ತದೆ. ಇದರಿಂದ ರಾಷ್ಟ್ರದ ಅಸ್ಮಿತೆಗೆ ಧಕ್ಕೆಯಾಗಿ ಅದರ ಬೆಲೆಯನ್ನು ನಾವು ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಗಳೂ ತೆತ್ತಬೇಕಾಗುತ್ತದೆ.

English summary
Patriotism should be like normal breathing. It should run in the blood and be proud to be part of the nation, like India. Vasant Kulkarni from Singapore analyses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more