ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮಾವತ್, ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲೊಂದು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಮೊನ್ನೆ 'ಪದ್ಮಾವತ್' ಸಿನೆಮಾ ನೋಡಿದೆ. ಈ ಸಿನೆಮಾದ ವಿಷಯವನ್ನು ಕುರಿತು ನಡೆದ ಅನವಶ್ಯಕ ಗಲಭೆ, ಅನಗತ್ಯ ದೋಷಾರೂಪಣೆ ಮತ್ತು ಅರ್ಥಹೀನ ಚರ್ಚೆಗಳಿಂದ ಬೇಸರಗೊಂಡು ಅದನ್ನು ನೋಡುವ ಆಸಕ್ತಿಯನ್ನೇ ಕಳೆದುಕೊಂಡಿದ್ದೆ. ಆದರೆ ಕೆಲವು ಸ್ನೇಹಿತರು 'ಪದ್ಮಾವತ್' ಸಿನೆಮಾ ನೋಡಿ ಬಂದು ಅದನ್ನು ಕುರಿತು ಅತ್ಯುತ್ಸಾಹದ ವರ್ಣನೆ ಮಾಡಿದ ನಂತರ ಮತ್ತೆ ಕುತೂಹಲಗೊಂಡು ಅದನ್ನು ನೋಡಲು ಹೋದೆ. ಸಿನೆಮಾ ನೋಡಿದ ಮೇಲೆ ಈ ಸಿನೆಮಾ ಕುರಿತಾದ ಸಂಪೂರ್ಣ ವಿವಾದ ಅನಗತ್ಯದ್ದು ಎಂಬ ನನ್ನ ಅನಿಸಿಕೆ ಸರಿಯಾಯಿತು.

ನನಗಂತೂ ಈ ಸಿನೆಮಾ, ಒಂದು ದೃಶ್ಯಚಮತ್ಕಾರ ಎನಿಸಿತು. 1540ರಲ್ಲಿ ಮಲಿಕ್ ಮೊಹಮ್ಮದ್ ಜೈಸಿ ಎಂಬ ಸೂಫಿ ಕವಿಯೊಬ್ಬರಿಂದ ರಚಿಸಲ್ಪಟ್ಟ 'ಪದ್ಮಾವತ್' ಎಂಬ ಕಥೆಯನ್ನು ಆಧರಿಸಿ ಚಿತ್ರಿಸಲ್ಪಟ್ಟ ಈ ಸಿನೆಮಾದ ಐತಿಹಾಸಿಕ ತಥ್ಯವನ್ನು ಗಣನೆಗೆ ತೆಗೆದುಕೊಳ್ಳದೇ, ಕೇವಲ ಕಥೆ ಎಂದುಕೊಂಡು ನೋಡಿದರೆ ಕಥೆಯನ್ನು ನಿರ್ದೇಶಕರು ಬಿಗಿಯಾಗಿ ಹೆಣೆದು ಪ್ರೇಕ್ಷಕರನ್ನು ಮೊದಲಿನಿಂದ ಕೊನೆಯವರೆಗೆ ತಮ್ಮ ಸೀಟಿನಲ್ಲಿ ಹಿಡಿದಿಡುತ್ತಾರೆ.

'ಪದ್ಮಾವತ್' ಮೊದಲ ವಿಮರ್ಶೆ: ಮೂಕವಿಸ್ಮಿತಗೊಳಿಸುವ ಬನ್ಸಾಲಿ ದೃಶ್ಯಕಾವ್ಯ

ಚಿತ್ರ ಒಳ್ಳೆಯ ನಟನೆ, ಉತ್ತಮ ಸಂಗೀತ, ಅದ್ಭುತ ಸೆಟ್ಟುಗಳು, ಮೋಹಕ ದೃಶ್ಯಗಳು ಮತ್ತು ಎದ್ದು ಕಾಣುವಂತಹ ನಿರ್ದೇಶಕರ ಕಲಾಭಿರುಚಿಗಳಿಂದ ಒಂದು ಉಚ್ಚ ಸಿನೆಮಾ ಆಗಿ ಎದ್ದು ನಿಲ್ಲುತ್ತದೆ. ಹಾಗಾಗಿ ನಾನು ಇತ್ತೀಚೆಗೆ ನೋಡಿದ ಅತ್ಯುತ್ತಮ ಚಿತ್ರಗಳಲ್ಲೊಂದು ಎಂದು ಹೇಳಲು ಹಿಂಜರಿಯುವುದಿಲ್ಲ.

Padmaavat is visual treat : Review by Vasant Kulkarni

ಈ ಸಿನೆಮಾದ ಉನ್ನತ ಮಟ್ಟದ ಸಿನೆಮಾಟೋಗ್ರಾಫಿಯ ಕಾರಣದಿಂದ ಈ ಚಿತ್ರವನ್ನು ದೊಡ್ಡ ಪರದೆಯಲ್ಲಿಯೇ ನೋಡಬೇಕು. ಒಂದು ವೇಳೆ ನಾನು ಮೊದಲು ಹೇಳಿದ ಕಾರಣಗಳಿಂದ ನೋಡದೆ ಇದ್ದರೆ ಒಂದು ಉತ್ತಮ ಚಿತ್ರದ ವೀಕ್ಷಣೆಯ ಅವಕಾಶವನ್ನು ಕಳೆದುಕೊಳ್ಳುತ್ತಿದ್ದೆ. ಈಗಲೂ ಈ ಚಿತ್ರವನ್ನು ನಿರ್ಬಂಧಿಸಿದ ರಾಜ್ಯಗಳ ಕಲಾರಸಿಕರು ಅನವಶ್ಯಕವಾಗಿ ಇಂತಹ ಅವಕಾಶವನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಬೇಜಾರಾಗುತ್ತದೆ.

'ಪದ್ಮಾವತ್' ಸಿನೆಮಾ ವಿವಾದ ನಮ್ಮ ದೇಶದಲ್ಲಿ ಮೊದಲನೆಯದೂ ಅಲ್ಲ ಕೊನೆಯದೂ ಅಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತು. ದುರದೃಷ್ಟವಶಾತ್ ಇಂತಹ ಗಲಭೆ, ವಿವಾದಗಳು ನಮ್ಮ ದೇಶದಲ್ಲಿ ಹಲವಾರು ಕಾರಣಗಳಿಂದ ನಡೆಯುತ್ತಲೇ ಇವೆ. ನನಗನಿಸಿದ ಮಟ್ಟಿಗೆ ಇನ್ನು ಮುಂದೆ ಕೂಡ ನಡೆಯುತ್ತಲೇ ಇರುತ್ತವೆ. ಎಲ್ಲಿಯವರೆಗೆ ನಮ್ಮ ದೇಶದಲ್ಲಿ ಸ್ವಂತವಾಗಿ ವಿಚಾರ ಮಾಡುವ ಮತ್ತು ಕ್ಷುಲ್ಲಕ ಕಾರಣಗಳಿಂದ ರೊಚ್ಚಿಗೇಳದ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮ ದೇಶದಲ್ಲಿ ಇಂತಹ ವಿವಾದಗಳು ತಲೆದೋರುತ್ತಲೇ ಇರುತ್ತವೆ. ಅಲ್ಲಿಯವರೆಗೆ ನಮ್ಮ ದೇಶದಲ್ಲಿ ನಾಯಕರೆನಿಸಿಕೊಂಡ ಅನೇಕ ಪುಢಾರಿಗಳು ಇಂತಹ ಸುಲಭವಾಗಿ ವಂಚನೆಗೊಳಗಾಗುವ ಮುಗ್ಧರನ್ನು ರೊಚ್ಚಿಗೆಬ್ಬಿಸಿ ಮಜಾ ನೋಡುತ್ತಲೇ ಇರುತ್ತಾರೆ.

ಕರ್ಣಿ ಸೇನಾ ಪ್ರತಿಭಟನಕಾರರ ಹೇಡಿತನಕ್ಕೆ ಶಿಕ್ಷೆಯಾಗಬೇಡವೇ?ಕರ್ಣಿ ಸೇನಾ ಪ್ರತಿಭಟನಕಾರರ ಹೇಡಿತನಕ್ಕೆ ಶಿಕ್ಷೆಯಾಗಬೇಡವೇ?

ಒಂದು ಕಲಾಕೃತಿಯನ್ನು ನೋಡುವಾಗ ಅದನ್ನು ನೋಡುವ ಜನರಲ್ಲಿ ಇರಬೇಕಾದ ಪಕ್ವತೆ ಇರದಿದ್ದಲ್ಲಿ ಅನಗತ್ಯ ವಿವಾದಗಳನ್ನು ಹುಟ್ಟು ಹಾಕುವುದು ಸುಲಭ. 'ಪದ್ಮಾವತ್' ಚಿತ್ರದಲ್ಲಿ ಮೇವಾಡದ ಅರಸ ರಾಜಾ ರತನ್ ಸಿಂಗ್‍ನ ಮೊದಲ ಪತ್ನಿ ತನ್ನ ವಾರಗಿತ್ತಿಯಾದ ಪದ್ಮಾವತಿಯ ರೂಪ ಲಾವಣ್ಯಗಳೇ ತಮ್ಮ ದೇಶಕ್ಕೆ ದುರ್ದೆಶೆ ತಂದವೆಂದು ಆರೋಪಿಸಿದಾಗ, ಪದ್ಮಾವತಿ "ತನ್ನ ರೂಪ ಹೇಗೆ ಶತ್ರುವಾಗುತ್ತದೆ? ತನ್ನನ್ನು ನೋಡುವವರ ಕೆಟ್ಟ ದೃಷ್ಟಿ ಕಾರಣವಲ್ಲವೇ?" ಎಂದು ಕೇಳುತ್ತಾಳೆ.

ಇದೇ ಉಪಮೆ 'ಪದ್ಮಾವತ್' ಸಿನೆಮಾದ ಬಗೆಗಿನ ಜನರ ಪ್ರತಿಕ್ರಿಯೆಗಳಿಗೂ ಅನ್ವಯಿಸುತ್ತದಲ್ಲವೇ? ಕಲಾಕೃತಿಯೊಂದನ್ನು ಕೇವಲ ಕಲಾಕೃತಿ ಮಾತ್ರ, ಇತಿಹಾಸವನ್ನು ಪ್ರಮಾಣೀಕರಿಸುವ ಸಂಶೋಧನಾ ಗ್ರಂಥವಲ್ಲ ಎಂದು ನೋಡುವ ಪಕ್ವತೆ ನಮ್ಮ ಜನರಲ್ಲಿದ್ದರೆ ಇಂತಹ ಎಲ್ಲ ವಿವಾದಗಳು ತಮ್ಮ ಶವಪೆಟ್ಟಿಗೆಯಲ್ಲಿಯೇ ಇರುತ್ತಿದ್ದವು. ಭಯಂಕರ ದೈತ್ಯರಾಗಿ ಮೇಲೇಳುತ್ತಿರಲಿಲ್ಲ.

ನನಗೆ ಒಂದು ಘಟನೆ ನೆನಪಾಗುತ್ತದೆ. ಡ್ಯಾನ್ ಬ್ರೌನ್ ಬರೆದ "ಡಾ ವಿಂಚಿ ಕೋಡ್" ಎಂಬ ಕಾದಂಬರಿ ಆಧಾರಿತ ಸಿನೆಮಾ ಬಿಡುಗಡೆಯಾದಾಗ ನಮ್ಮ ದೇಶವನ್ನೊಳಗೊಂಡಂತೆ ವಿಶ್ವದ ಅನೇಕ ದೇಶಗಳಲ್ಲಿ ಈ ಚಿತ್ರ ಕುರಿತು ವಿವಾದ ತಲೆಯೆತ್ತಿತು. ಕ್ರೈಸ್ತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂಬ ಕಾರಣದಿಂದ ಈ ಚಿತ್ರ ಅನೇಕ ದೇಶಗಳಲ್ಲಿ ನಿಷೇಧಿಸಲ್ಪಟ್ಟಿತು. ಸಿಂಗಪುರದಲ್ಲಿ ಯಾವ ಬಗೆಯ ಅಲೆಯೂ ಏಳಲಿಲ್ಲ.

Padmaavat is visual treat : Review by Vasant Kulkarni

ಒಮ್ಮೆ ನಮ್ಮ ಆಫೀಸಿನಲ್ಲಿ ನಮ್ಮ ಸಹೋದ್ಯೋಗಿಗಳ ನಡುವೆ ಒಂದು ಚಿಕ್ಕ ಚರ್ಚೆ ನಡೆದಾಗ ಪಕ್ಕಾ ಕ್ಯಾಥೋಲಿಕ್ ಆದ ನಮ್ಮ ಸಿಂಗಪುರಿಯನ್ ಮಿತ್ರರೊಬ್ಬರು "ಹಾಂ, ನಾನೂ ಕೂಡ ಈ ವಿವಾದವನ್ನು ಕುರಿತು ಕೇಳಿದ್ದೇನೆ. ಆದುದರಿಂದ ಕುತೂಹಲಗೊಂಡು ಈ ಚಿತ್ರದಲ್ಲಿ ಅಂಥದ್ದೇನಿದೆ ಎಂದು ನೋಡಲು ನನ್ನ ಕುಟುಂಬ ಸಮೇತ ಹೋಗುವವನಿದ್ದೇನೆ" ಎಂದು ಸಹಜವಾಗಿ ನುಡಿದಾಗ ನನ್ನ ಮನಸ್ಸಿನಲ್ಲಿ ಅವರ ಪಕ್ವ ಮನಸ್ಸಿನ ಬಗ್ಗೆ ಅಪಾರ ಗೌರವವುಂಟಾಯಿತು.

ಅದನ್ನು ನೋಡಿದ್ದರಿಂದ ಅವರ ಧಾರ್ಮಿಕ ನಂಬಿಕೆಗಳಿಗೇನೂ ಧಕ್ಕೆಯುಂಟಾಗಲಿಲ್ಲ. ಅವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಕುರಿತು ಎಷ್ಟು ಗೌರವವನ್ನು ಹೊಂದಿದ್ದರೋ, ಸಿನೆಮಾವನ್ನು ನಿರ್ಮಿಸುವವರ ಸ್ವಾತಂತ್ರ್ಯದ ಬಗ್ಗೆ ಕೂಡಾ ಅಷ್ಟೇ ಗೌರವವನ್ನು ಹೊಂದಿದ್ದರು. ಆದುದರಿಂದಲೇ ಸಿಂಗಪುರದಲ್ಲಿ ಯಾವುದೇ ನಿಷೇಧಗಳಿಲ್ಲದೇ ಈ ಚಿತ್ರ ಉಳಿದೆಲ್ಲ ಚಿತ್ರಗಳಂತೆ ಬಂದು ಹೋಯಿತು. ನಮ್ಮ ದೇಶದಲ್ಲಿ ಕೂಡ ಇಂತಹ ಪಕ್ವ ಮನಸ್ಸಿನವರ ಜನಸಂಖ್ಯೆ ಎಂದು ಹೆಚ್ಚಾಗುವುದೋ?

English summary
Vasant Kulkarni from Singapore says Padmaavat is ultimate visual treat and the best movie he has ever seen. The controversy surrounding the movie was baseless, says Vasant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X