ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಗಾಪುರ ಹಳ್ಳಿ ಸಹಪಾಠಿಗಳಾದ ಕಾಂಬಳ್ಯಾ ಕಣಕಣ್ಯಾ ಲೋಹ್ಯಾ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಸಂಕೇಶ್ವರದ ನಮ್ಮ ಎಸ್ ಡಿ ಹಾಯಸ್ಕೂಲು, ಸಂಕೇಶ್ವರ ಮಾತ್ರವಲ್ಲ ಸುತ್ತ ಮುತ್ತಲಿನ ಅನೇಕ ಹಳ್ಳಿಗಳ ಮಕ್ಕಳಿಗೆ ವಿದ್ಯಾದಾಯಿನಿ ಸಂಸ್ಥೆ. ಸುತ್ತ ಮುತ್ತಲಿನ ಹಳ್ಳಿಗಳಾದ ಅಂಕಲಿ, ಗೋಟುರ, ಸೋಲಾಪುರ ಮತ್ತು ಹರಗಾಪುರದಂತಹ ಹಳ್ಳಿಗಳಿಂದ ಅನೇಕ ವಿದ್ಯಾರ್ಥಿಗಳು ಎಸ್ ಡಿ ಪ್ರೌಢ ಶಾಲೆಗೆ ಕಲಿಯಲು ಬರುತ್ತಿದ್ದರು. ಅನೇಕ ವಿದ್ಯಾರ್ಥಿಗಳು ಶಾಲೆಯಿಂದ ಸುಮಾರು ಐದು ಆರು ಕಿಲೋಮೀಟರುಗಳಷ್ಟು ಅಥವಾ ಇನ್ನೂ ಹೆಚ್ಚೇ ದೂರವಿದ್ದ ತಮ್ಮ ಹಳ್ಳಿಗಳಿಂದ ಶಾಲೆಗೆ ನಡೆದೇ ಬರುತ್ತಿದ್ದರು. ನಾನು ಕೂಡ ನಮ್ಮ ಮನೆಯಿಂದ ಸುಮಾರು ಎರಡು ಕಿಲೋಮೀಟರು ದೂರದ ಶಾಲೆಗೆ ನಡೆದು ಹೋಗುತ್ತಿದ್ದೆ. ನಾನಷ್ಟೇ ಅಲ್ಲ ಊರಿನ ಎಲ್ಲ ಮಕ್ಕಳೂ ಹಾಗೆಯೇ.

ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ

ಚಿಕ್ಕ ಊರಾಗಿದ್ದುದರಿಂದ ಬೇರೆ ಯಾವ ಸಾರಿಗೆ ವ್ಯವಸ್ಥೆ ಇರಲಿಲ್ಲ. ಪಟ್ಟಣಗಳಲ್ಲಿ ಇರುವ ಯಾವ ಸೌಕರ್ಯಗಳೂ ಇಲ್ಲಿ ಇರದಿದ್ದರೂ ಅದು ನಮಗೊಂದು ಸಮಸ್ಯೆಯಾಗಿ ಕಾಣುತ್ತಿರಲಿಲ್ಲ. ನಿತ್ಯದ ಕೆಲಸಗಳಲ್ಲಿ ಸ್ಕೂಲಿಗೆ ನಡೆದು ಹೋಗುವುದು ಕೂಡ ಒಂದು ಕೆಲಸ, ಜೀವನದ ಅವಿಭಾಜ್ಯ ಅಂಗ. ನನ್ನ ಕ್ಲಾಸಿನಲ್ಲಿ ಕೂಡ ಕೆಲವರು ಸಮೀಪದ ಹಳ್ಳಿಗಳಿಂದ ಬರುತ್ತಿದ್ದರು. ಅದರಲ್ಲಿಯೂ ನನ್ನ ಕ್ಲಾಸಿನಲ್ಲಿ ಹರಗಾಪುರದಿಂದ ಬರುವ ಮೂವರು ಸ್ನೇಹಿತರಿದ್ದರು. ಕಾಂಬಳೆ, ಕಣಕಣಿ ಮತ್ತು ಲೋಹಾರ್ ಅವರ ಅಡ್ಡಹೆಸರುಗಳು. ಆಗ ನಾವು ಒಬ್ಬರನ್ನೊಬ್ಬರು ನಮ್ಮ ಅಡ್ಡ ಹೆಸರಿನಿಂದ ಕರೆಯುವುದು ರೂಢಿಯಾಗಿತ್ತು. ಚಿದಾನಂದ ನೇಸರಿ ಎಂಬ ಹೆಸರಿನ ಮಿತ್ರ ನಮಗೆ ನೇಸರಿಯಾ ಆಗುತ್ತಿದ್ದ. ಮಹಾಂತೇಶ ದುಂಡಗಿ ನಮಗೆ ದುಂಡಗ್ಯಾ ಆಗುತ್ತಿದ್ದ. ಸಣದಿ ಸಣದ್ಯಾ ಅಗುತ್ತಿದ್ದ. ಅನೇಕ ಬಾರಿ ಅವರ ಮೊದಲ ಹೆಸರುಗಳು ನಮಗೆ ತಿಳಿದೇ ಇರುತ್ತಿರಲಿಲ್ಲ. ಇದೇ ರೀತಿ ಈ ನನ್ನ ಹರಗಾಪುರದ ಸಹಪಾಠಿಗಳಾದ ಕಾಂಬಳೆ ನನಗೆ ಕಾಂಬಳ್ಯಾ, ಕಣಕಣಿ, ಕಣಕಣ್ಯಾ ಮತ್ತು ಲೋಹಾರ್, ಲೋಹ್ಯಾ ಅಗಿದ್ದರು.

Never forgettable lesson learnt in Sankeshwar

ಅಂದಹಾಗೆ ಈ ಹರಗಾಪುರ ನಮ್ಮ ಸ್ಕೂಲಿನ ಹಿಂದೆ ಕಾಣುತ್ತಿದ್ದ ಗುಡ್ಡಗಳ ಮೇಲಿತ್ತು. ಅಲ್ಲಿಂದ ನಮ್ಮ ಸ್ಕೂಲಿನವರೆಗೆ ಸುಮಾರು ಐದು ಕಿಲೋಮೀಟರ್ ಇತ್ತು ಎಂದು ನನ್ನ ಅಂದಾಜು. ಆ ಹಾದಿ ಒಂದು ಕಾಲುದಾರಿಯಾಗಿತ್ತು. ಹರಗಾಪುರದಿಂದ ಬರುವ ಎಲ್ಲ ಹುಡುಗರು ಆ ಗುಡ್ಡ ಇಳಿದು ಕಾಲುದಾರಿಯಿಂದ ನಡೆದು ಬರುತ್ತಿದ್ದರು. ಶಾಲೆಯಿಂದ ವಾಪಸ್ಸು ಹೋಗುವಾಗ ಗುಡ್ಡ ಏರಿ ಹೋಗಬೇಕಾಗುತ್ತಿತ್ತು. ದಿನವೂ ಐದು ಕಿಲೋಮೀಟರು ಹೋಗುವುದು ಮತ್ತು ಐದು ಕಿಲೋಮೀಟರು ಬರುವುದು ಅವರ ನಿತ್ಯದ ಕೆಲಸವಾಗಿತ್ತು. ನನಗನಿಸುವ ಮಟ್ಟಿಗೆ ಹಾಗೆ ಐದು ಕಿಲೋ ಮೀಟರ್ ನಡೆಯಲು ಅವರಿಗೆ ಒಂದು ಗಂಟೆಯಾದರೂ ಬೇಕಾಗುತ್ತಿತ್ತು. ಐದೂವರೆಗೆ ಶಾಲೆ ಮುಗಿದು ಗುಡ್ಡ ಹತ್ತಿ ಮನೆ ತಲುಪಲುವಷ್ಟರಲ್ಲಿ ಸೂರ್ಯ ಮುಳುಗುತ್ತಿದ್ದ. ಅಲ್ಲದೇ ಅಂದಿನ ದಿನಗಳಲ್ಲಿ ಹರಗಾಪುರಕ್ಕೆ ಇನ್ನೂ ವಿದ್ಯುತ್ ದೀಪ ಬಂದಿರಲಿಲ್ಲ ಎಂದು ನೆನಪು.

ಐದು ಆರನೇ ಕ್ಲಾಸಿನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಇನ್ನೂ ಚಿಕ್ಕವರೇ ಅಲ್ಲವೇ? ಹತ್ತು ಹನ್ನೊಂದು ವರ್ಷದ ಬಾಲಕರು. ಅಷ್ಟೊಂದು ನಡೆದು ದಣಿದು ಹೊತ್ತು ಮುಳುಗಿದ ಮೇಲೆ ಊರು ತಲುಪಿದ ಹುಡುಗರಿಗೆ ವಿದ್ಯುತ್ ದೀಪವಿಲ್ಲದೇ ಅದು ಹೇಗೆ ಓದುವುದು ಸಾಧ್ಯ? ಹೀಗಾಗಿ ನನ್ನ ಮಿತ್ರರಾದ ಕಾಂಬಳ್ಯಾ, ಕಣಕಣ್ಯಾ ಮತ್ತು ಲೋಹ್ಯಾ ಕೂಡ ಓದುತ್ತಿರಲಿಲ್ಲ ಎಂದು ಕಾಣುತ್ತಿತ್ತು. ಸ್ಕೂಲಿನ ಪಠ್ಯದಲ್ಲಿ ಸದಾ ಹಿಂದಿರುತ್ತಿದ್ದರು. ಸ್ಕೂಲಿನ ಟೆಸ್ಟುಗಳಲ್ಲಿ ಸದಾ ಫೇಲಾಗುತ್ತಿದ್ದರು. ನನಗನಿಸುವ ಮಟ್ಟಿಗೆ ಅವರ ಚಿಕ್ಕ ಹಳ್ಳಿಯಿಂದ ಸ್ಕೂಲಿಗೆ ಬಂದು ಅಕ್ಷರ ಬರೆಯಲು ಕಲಿಯುವುದೇ ಅವರಿಗೆ ದೊಡ್ಡ ಸಾಹಸವಾಗಿರುತ್ತಿತ್ತು. ಬಹುಶಃ ಅವರ ಮನೆಯಲ್ಲಿ ಕೂಡ ಯಾರೂ ಅಷ್ಟೊಂದು ವಿದ್ಯಾವಂತರಾಗಿರಲಿಲ್ಲ. ಹೀಗಾಗಿ ಸ್ಕೂಲಿನ ಪಾಠಗಳನ್ನು ಸರಿಯಾಗಿ ತಿಳಿದುಕೊಂಡು ಅಭ್ಯಾಸ ಮಾಡುವುದು ಅವರಿಗೆ ಬಹಳ ಕಷ್ಟಕರ ಸಂಗತಿಯಾಗಿತ್ತು ಎಂದೆನಿಸುತ್ತದೆ.

ಯಾರೂ ರೋಲ್ ಮಾಡೆಲ್ಲುಗೊಳೇ ಇಲ್ಲ ಅನ್ನೂದು ಸುಳ್ಳು ಯಾರೂ ರೋಲ್ ಮಾಡೆಲ್ಲುಗೊಳೇ ಇಲ್ಲ ಅನ್ನೂದು ಸುಳ್ಳು

ಆದರೆ ಸ್ಕೂಲಿನಲ್ಲಿ ಸ್ವಲ್ಪ ಜಾಣ ಎನಿಸಿಕೊಂಡ ನನಗೆ ಆಗ ಈ ವಿಷಯ ತಿಳಿಯುತ್ತಿರಲಿಲ್ಲ. ಅವರನ್ನು ದಡ್ಡರು ಎಂದು ತಿಳಿದುಕೊಂಡಿದ್ದೆ. ನನ್ನಲ್ಲಿ ಸ್ವಲ್ಪ ಮೇಲರಿಮೆ ಮನೆ ಮಾಡಿತ್ತು. ಆ ಹುಡುಗರಿಗೆ ನಾನು ಏನಾದರೂ ಚಿಕ್ಕ ಸಹಾಯ ಮಾಡಿ ಬೀಗುತ್ತಿದ್ದೆ. ಈ ಚಿಕ್ಕ ಸಹಾಯ ಅವರಿಗೆ ನಾನು ಬರೆದುಕೊಂಡ ನೋಟ್ಸುಗಳನ್ನು ಕೊಡುವದು, ಏನಾದರೂ ತಿಳಿದಿರದಿದ್ದರೆ ಸ್ವಲ್ಪ ಹೇಳಿಕೊಡುವುದು ಇತ್ಯಾದಿ. ಬದಲಿಗೆ ಅವರು ತಮ್ಮ ಊರಿನಿಂದ ಬರುವಾಗ ಹಾದಿಯಲ್ಲಿದ್ದ ಹುಣಿಸೆ ಮರದಿಂದ ಹುಳಿ ಸಿಹಿ ಹುಣಿಸೆ ಹಣ್ಣು ಮತ್ತು ಹುರಿದ ಹುಣಿಸೆ ಬೀಜಗಳನ್ನು ತಂದು ಕೊಡುತ್ತಿದ್ದರು. ಅದರೂ ನಾನು ಬಹಳ ಗತ್ತಿನಿಂದ ಅವರೊಂದಿಗೆ ನಡೆದುಕೊಳ್ಳುತ್ತಿದ್ದೆ ಎಂಬ ನೆನಪು.

Never forgettable lesson learnt in Sankeshwar

ನಾನು ಐದನೆಯ ಕ್ಲಾಸಿನಲ್ಲಿದ್ದೆನೋ ಆರನೇ ಕ್ಲಾಸಿನಲ್ಲಿದ್ದೆನೋ ನೆನಪಿಲ್ಲ. ಆಗ ಒಂದು ಮಹತ್ವದ ಘಟನೆ ನಡೆಯಿತು. ಬಹುಶಃ ನನ್ನ ಹೆಸರು ಮತ್ತು ಅವರ ಹೆಸರುಗಳು ಇಂಗ್ಲೀಷಿನ "ಕೆ" ಅಕ್ಷರದಿಂದ ಶುರುವಾಗುತ್ತಿದ್ದರಿಂದಲೋ ಏನೋ ಸಾಮಾನ್ಯವಾಗಿ ಸ್ಕೂಲಿನ ಪರೀಕ್ಷೆಯಲ್ಲಿ ಈ ನನ್ನ ಸಹಪಾಠಿಗಳು ನನ್ನ ಹಿಂದೆಯೇ ಕುಳಿತುಕೊಳ್ಳುತ್ತಿದ್ದರು. ಆಗ ಸ್ಕೂಲಿನ ಮಧ್ಯ ವರ್ಷದ ಪರೀಕ್ಷೆ ಇತ್ತು ಎಂದು ನೆನಪು. ಪರೀಕ್ಷೆಗೂ ಮುನ್ನ ಈ ಸಹಪಾಠಿಗಳು ನನಗೆ ಪರೀಕ್ಷೆಯಲ್ಲಿ ಅವರು ಪಾಸಾಗುವಷ್ಟು ಉತ್ತರಗಳನ್ನು ತೋರಿಸಲು ಕೇಳಿಕೊಂಡಿದ್ದರು. ನಾನು ಸ್ವಲ್ಪ ಬಿಗುಮಾನದಿಂದ ರಾಜಕಾರಣಿಗಳಂತೆ "ನೋಡೋಣ" ಎಂದು ಹುಸಿ ಆಶ್ವಾಸನೆ ನೀಡಿದ್ದೆ.

ವಸಂತ ಕುಲಕರ್ಣಿ ಅವರ ಅಂಕಣ 'ಅಂತರ್ಮಥನ' ಅಜೇಯ ಶತಕ! ವಸಂತ ಕುಲಕರ್ಣಿ ಅವರ ಅಂಕಣ 'ಅಂತರ್ಮಥನ' ಅಜೇಯ ಶತಕ!

ಪರೀಕ್ಷೆ ಆರಂಭವಾದ ಕೆಲವು ಕ್ಷಣಗಳಲ್ಲಿಯೇ ಹಿಂದಿನಿಂದ ಬರೆದದ್ದನ್ನು ತೋರಿಸಲು ಕೋರಿಕೆ ಶುರುವಾಯಿತು. ಮೊದಲಿಗೆ ನಾನು ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಅವರ ಕೋರಿಕೆ ಗೋಗರೆತವಾಗತೊಡಗಿತು. ಕೆಲಕಾಲದಲ್ಲಿಯೇ ನನಗೆ ಅದು ಪೀಡನೆಯೆನಿಸಿ ನಾನು ಹಿಂತಿರುಗಿ ಅವರಿಗೆ ಬೇಕೆಂತಲೇ ತಪ್ಪು ತಪ್ಪು ಉತ್ತರಗಳನ್ನು ಹೇಳತೊಡಗಿದೆ. ನನ್ನ ಮೇಲಿನ ವಿಶ್ವಾಸದಿಂದ ಅವರು ನಾನು ಹೇಳಿದ್ದನ್ನೆಲ್ಲಾ ಹಾಗೆಯೇ ಬರೆಯತೊಡಗಿದರು.

ಅಂದು ನಮ್ಮ ಪರೀಕ್ಷೆಯ ಸಂವೀಕ್ಷಕರಾಗಿ ನನ್ನ ಮೆಚ್ಚಿನ ಮಟ್ಟಿಕಲ್ಲಿ ಟೀಚರ್ ಆಗಮಿಸಿದ್ದರು. ಅವರು ಶಾಂತ ಮತ್ತು ಸಮಾಧಾನಿ. ಅವರು ಎಂದೂ ಯಾರಿಗೂ ಎತ್ತರದ ಧ್ವನಿಯಲ್ಲಿ ಗದರಿಸಿದವರೂ ಅಲ್ಲ. ಅವರಿದ್ದುದರಿಂದ ನನಗೆ ನೆಮ್ಮದಿಯುಂಟಾಗಿತ್ತು. ನಾವು ಸ್ವಲ್ಪ ಗದ್ದಲ ಮಾಡಿದರೂ ಒಮ್ಮೆ ಗದರಿಸಿದಂತೆ ಮಾಡಿ ನಮ್ಮನ್ನು ಸುಮ್ಮನಾಗಲು ಹೇಳುತ್ತಾರೆಯೇ ಹೊರತು ಅದಕ್ಕಿಂತ ಹೆಚ್ಚಿನದೇನನ್ನೂ ಮಾಡುವುದಿಲ್ಲ ಎಂಬ ಧೈರ್ಯ ಬಂದಿತ್ತು. ಒಂದು ಸಲ ಅವರು ನಮ್ಮನ್ನು ಗದರಿಸಿದರು ಕೂಡ. ಆದರೂ ನಮ್ಮ ಈ ಕೆಲಸ ಮುಂದುವರೆದ ಮೇಲೆ ಅವರು ಎದ್ದು ನಾವಿದ್ದ ಕಡೆಗೆ ಬಂದರು. ಬಂದವರೇ ಮೊದಲು ನನ್ನ ಹರಗಾಪುರದ ಮಿತ್ರರನ್ನು ಸುಮ್ಮನಿರಲು ಹೇಳಿದರು. ನಂತರ ನನ್ನನ್ನು ಏನಾಯಿತು ಎಂದು ಕೇಳಿದರು. ನಾನು ಅವರು ನನಗೆ ನನ್ನ ಪೇಪರ್ ತೋರಿಸಲು ಅಥವಾ ಉತ್ತರಗಳನ್ನು ಹೇಳಲು ಪೀಡಿಸುತ್ತಿದ್ದಾರೆ ಎಂದು ದೂರು ನೀಡಿದೆ.

Never forgettable lesson learnt in Sankeshwar

ನಾನು ಅವರ ನೆಚ್ಚಿನ ವಿದ್ಯಾರ್ಥಿಯಾಗಿದ್ದರಿಂದ ನನ್ನನ್ನೇನೂ ಅನ್ನುವುದಿಲ್ಲ. ಅದರ ಬದಲಿಗೆ ಹರಗಾಪುರದ ಮಿತ್ರರಿಗೇ ಬೈಗಳು ಸಿಗುತ್ತವೆ ಎಂದು ನನ್ನ ಅಂದಾಜು. ಆದರೆ ಆಶ್ಚರ್ಯವೆನಿಸುವಂತೆ ಅವರು ಶಾಂತವಾಗಿ ಹರಗಾಪುರದ ಮಿತ್ರರಿಗೆ ನಾನು ಎಂತಹ ಉತ್ತರಗಳನ್ನು ಹೇಳಿಕೊಟ್ಟಿದ್ದೇನೆ ಎಂದು ಕೇಳಿದರು. ಅವರ ಬರೆದಿದ್ದ ಉತ್ತರ ಪತ್ರಿಕೆಯನ್ನು ಎತ್ತಿಕೊಂಡು ಮಟ್ಟಿಕಲ್ಲಿ ಟೀಚರ್ ಓದ ತೊಡಗಿದಂತೆ ನಾನು ಒಳಗಿಂದೊಳಗೇ ಬೆವರತೊಡಗಿದೆ. ಸ್ವಲ್ಪ ಹೊತ್ತಿನ ನಂತರ ಮಟ್ಟಿಕಲ್ಲಿ ಟೀಚರ್ ಅವರು ಉತ್ತರ ಪತ್ರಿಕೆಯಿಂದ ತಲೆಯೆತ್ತಿ ನನ್ನನ್ನು ದುರುಗುಟ್ಟಿ ನೋಡಿದರು. "ಅದೇಕೆ ಎಲ್ಲ ತಪ್ಪು ಉತ್ತರಗಳನ್ನು ಹೇಳಿಕೊಟ್ಟಿದ್ದೀಯಾ?" ಎಂದು ಸಿಟ್ಟಿನಿಂದ ಕೇಳಿದರು. ಆಗ ನನ್ನ ಎಲ್ಲ ಹರಗಾಪುರದ ಮಿತ್ರರು ತೀವ್ರ ದೃಷ್ಟಿಯಿಂದ ನನ್ನತ್ತ ನೋಡ ತೊಡಗಿದರು. ಕಣಕಣಿ, ಕಾಂಬಳಿ ಮತ್ತು ಲೋಹಾರರ ಮುಖದ ಮೇಲೆ ಉರಿಯುತ್ತಿದ್ದ ಸಿಟ್ಟು ಮತ್ತು ನನ್ನ ವಿಶ್ವಾಸಘಾತದಿಂದ ಅವರಿಗಾದ ಆಘಾತವನ್ನು ನಾನು ಇಂದಿಗೂ ಮರೆಯಲಾರೆ. ಅವರನ್ನು ಎದುರಿಸಲಾರದೇ ಮಟ್ಟಿಕಲ್ಲಿ ಟೀಚರ್ ಅವರತ್ತ ತಿರುಗಿ "ಅವರು ನನ್ನನ್ನು ಉತ್ತರ ಹೇಳಿಕೊಡು ಎಂದು ತುಂಬಾ ಪೀಡಿಸುತ್ತಿದ್ದಾರೆ" ಎಂದು ಮತ್ತೊಮ್ಮೆ ದೂರಿದೆ.

ಬೆಳಗಾವಿಯ 'ಭಜನ ಸಂಗೀತ ಚೂಡಾಮಣಿ' ಕಡ್ಲಾಸ್ಕರ್ ಬುವಾ ಬೆಳಗಾವಿಯ 'ಭಜನ ಸಂಗೀತ ಚೂಡಾಮಣಿ' ಕಡ್ಲಾಸ್ಕರ್ ಬುವಾ

ಮಟ್ಟಿಕಲ್ಲಿ ಟೀಚರ್ ನನ್ನನ್ನುದ್ದೇಶಿಸಿ "ಅವರು ನಿನ್ನನ್ನು ಪೀಡಿಸುತ್ತಿದ್ದರೆ ನೀನು ನನಗೆ ಹೇಳಬಹುದಾಗಿತ್ತು, ಇಲ್ಲವೇ ನಾನು ನಿಮಗೆ ಏನನ್ನೂ ಹೇಳಿಕೊಡುವುದಿಲ್ಲ ಎನ್ನಬೇಕಾಗಿತ್ತು. ಅದನ್ನು ಬಿಟ್ಟು ನೀನು ಮೊದಲು ಮಾಡಿದ ತಪ್ಪು ಎಂದರೆ ಅವರಿಗೆ ಉತ್ತರ ಹೇಳಿಕೊಟ್ಟದ್ದು. ಅದಕ್ಕಿಂತ ದೊಡ್ಡ ತಪ್ಪೆಂದರೆ ಸರಿ ಉತ್ತರಗಳನ್ನು ಹೇಳಿಕೊಡುವ ಬದಲು ಎಲ್ಲ ತಪ್ಪು ಉತ್ತರಗಳನ್ನು ಹೇಳಿಕೊಟ್ಟದ್ದು. ಅದು ಬರೀ ತಪ್ಪು ಮಾತ್ರವಲ್ಲ, ವಿಶ್ವಾಸಘಾತ" ಎಂದು ಕೋಪದಿಂದ ನುಡಿದರು. ನಾನು ಬೇರೆ ಏನನ್ನೂ ಹೇಳಲಾಗದೇ ಲಜ್ಜೆಯಿಂದ ತಲೆ ತಗ್ಗಿಸಿದೆ.

ನಂತರ ಅವರು ನನ್ನನ್ನು ಕರೆದು "ಜಾಣ ಹುಡುಗನಾಗಿ ನೀನು ತಪ್ಪನ್ನು ಮಾಡಬಾರದಾಗಿತ್ತು. ವಿಶ್ವಾಸಘಾತವನ್ನಂತೂ ಮಾಡಲೇಬಾರದಾಗಿತ್ತು. ಅವರು ಹಳ್ಳಿಗಾಡಿನ ಹುಡುಗರು. ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಲೇ ನಿತ್ಯವೂ ಅಷ್ಟು ದೂರದಿಂದ ನಡೆದು ಬಂದು ಶಾಲೆಗೆ ಬರುವದೇ ದೊಡ್ಡ ಮಾತು. ಅವರಿಗೆ ಅಭ್ಯಾಸ ಮಾಡಲು ಸಮಯವೆಲ್ಲಿರುತ್ತದೆ? ಅಂತಹ ಅವರಿಗೆ ತಾವು ಕೂಡ ಪರೀಕ್ಷೆ ಬರೆದು ಪಾಸು ಮಾಡಬೇಕು ಎಂಬ ಉಮೇದು ಬಂದಿದೆ ಎಂದರೆ ಅದು ಬಹಳ ದೊಡ್ಡ ವಿಷಯವಲ್ಲವೇ? ಅವರಿಗೆ ಪರೀಕ್ಷೆಯಲ್ಲಿ ಕಾಪಿ ಮಾಡಗೊಡಬೇಡ. ಆದರೆ ಓದುವುದಕ್ಕೆ ಅವರಿಗೆ ಸಹಾಯ ಮಾಡು. ನಿನ್ನಿಂದೆಷ್ಟಾಗುತ್ತದೋ ಅಷ್ಟು ಅವರಿಗೆ ಕಲಿಸು. ನಿನ್ನ ಮೇಲಿನ ಅವರ ನಂಬಿಕೆಗೆ ಎರಡು ಬಗೆಯಬೇಡ" ಎಂದು ತಿಳಿಸಿ ಹೇಳಿದರು.

ಎಲ್ಲಿ ನನ್ನನ್ನು ತೀವ್ರವಾಗಿ ಖಂಡಿಸುತ್ತಾರೋ ಹಾಗೂ ಇತರ ಟೀಚರುಗಳಿಗೆ ನನ್ನ ಘನ ಕಾರ್ಯದ ಬಗ್ಗೆ ತಿಳಿಸಿ ಮರ್ಯಾದೆಗೇಡು ಮಾಡುತ್ತಾರೋ ಎಂಬ ಭಯದಲ್ಲಿದ್ದ ನನಗೆ ಅಂದು ಅವರು ಮರೆಯಲಾಗದ ಪಾಠ ಹೇಳಿಕೊಟ್ಟರು. ಮಟ್ಟಿಕಲ್ಲಿ ಟೀಚರ್ ಅವರ ಅಂದಿನ ಪಾಠ ನನ್ನಲ್ಲಿ ಅದು ಹೇಗೋ ಅಡಗಿದ್ದ ಕುಬುದ್ಧಿಯ ಅಂಶವನ್ನು ಶಾಶ್ವತವಾಗಿ ತೊಡೆದು ಹಾಕಿತ್ತು. "ಮಟ್ಟಿಕಲ್ಲಿ ಟೀಚರ್, ನನ್ನನ್ನು ಒಬ್ಬ ಒಳ್ಳೆಯ ಮನುಷ್ಯನನ್ನಾಗಿ ರೂಪಿಸುವಲ್ಲಿಯ ನಿಮ್ಮ ಹಿರಿಯ ಪಾತ್ರವನ್ನು ನೆನೆಯುತ್ತಾ ನಿಮಗೆ ನಾನು ಭಕ್ತಿಯಿಂದ ನಮಸ್ಕರಿಸುತ್ತೇನೆ."

English summary
Sankeshwar school days : Vasant Kulkarni from Singapore writes what lesson he learnt from his teacher while writing exam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X