ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಾರಿಸು ಕನ್ನಡ ಡಿಂಡಿಮವ' ಕವನದ ಸಾಲುಗಳಲ್ಲಿನ ಪದಲಾಲಿತ್ಯ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಅದು ಯಾವ ದಿನ ಎಂದು ನನಗೆ ನೆನಪಿಲ್ಲ. ಐದನೇ ತರಗತಿಯಲ್ಲಿ ನಮಗೆ ಕನ್ನಡ ಕಲಿಸುತ್ತಿದ್ದ ಮಗದುಮ್ ಗುರುಗಳು ಕುವೆಂಪು ಅವರ ಕನ್ನಡ ನಾಡಿನ ಮೇಲಿನ ಕವನವೊಂದನ್ನು ಓದಿ ಹೇಳಿದರು. "ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ" ಎಂಬ ಪದ್ಯ. ಅದು ಯಾವ ಸಂದರ್ಭದಲ್ಲಿ ಈ ಕವನವನ್ನು ನಮಗೆ ಹೇಳಿದ್ದರು ಎಂಬುದು ನೆನಪಿಲ್ಲ. ಅದು ನಮ್ಮ ಪಠ್ಯ ಪುಸ್ತಕದಲ್ಲಿತ್ತೋ ಏನೋ ನನಗೆ ನೆನಪಾಗುತ್ತಿಲ್ಲ. ಆದರೆ ಕವನ ಮನಸ್ಸಿನ ಆಳಕ್ಕಿಳಿದು ಬಿಟ್ಟಿತು. ಅದರಲ್ಲೂ...

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

ಎಂಬ ಸಾಲುಗಳು ಮನಸ್ಸಿನಲ್ಲಿ ಅಚ್ಚಳಿಯದಂತೆ ನಿಂತು ಬಿಟ್ಟವು. ಮೊದಲ ಸಾಲಾದ ಚೈತ್ಯ ಶಿವೇತರ ಕೃತಿ ಕೃತಿಯಲ್ಲಿ ಎಂಬ ಸಾಲುಗಳ ಅರ್ಥ ನನಗೆ ಬಹಳ ಕಾಲ ಅರ್ಥವಾಗಿರಲಿಲ್ಲ. ಆದರೆ ಈ ಸಾಲಿನಲ್ಲಿರುವ ಶಬ್ದ ಸೌಂದರ್ಯ ಮತ್ತು ಅದರಲ್ಲಿ ಅಡಕವಾದ ಗೂಢಾರ್ಥ ಬಹಳ ಪ್ರಿಯವೆನಿಸಿ ಬಿಟ್ಟಿತು. ಅದೇಕೋ ಕವನವೆಂದರೆ ಕ್ಲಿಷ್ಟವಾದದ್ದನ್ನು ಸ್ವಲ್ಪ ಶಬ್ದಗಳಲ್ಲಿಯೇ ಸ್ಪಷ್ಟವಾಗಿ ಹೇಳುವುದು ಎಂಬ ಭಾವ ನನ್ನ ಮನದಲ್ಲಿ ಈ ಪದ್ಯದಿಂದಲೇ ಹುಟ್ಟಿಕೊಂಡಿತು ಎಂದು ಎಷ್ಟೋ ಬಾರಿ ಅನಿಸಿದೆ.

ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ

ಕನ್ನಡ ಡಿಂಡಿಮವನ್ನು ಬಾರಿಸಿದ ಶಿವನ ಚೈತನ್ಯ ಕನ್ನಡಿಗರಾದ ನಮ್ಮ ಪ್ರತಿಯೊಂದು ಕೆಲಸದಲ್ಲಿಯೂ ಕಾಣಿಸಲಿ ಎಂಬುದು ನನಗೆ ಇಂದು ತಿಳಿದ ಅರ್ಥ. ಸರಿಯಾಗಿದೆ ಎಂದುಕೊಂಡಿದ್ದೇನೆ. (ಬೇರೆ ಏನಾದರೂ ಅರ್ಥವಿದ್ದರೆ ತಿಳಿದವರು ಹೇಳಬೇಕು). ಈ ಸಾಲುಗಳಲ್ಲಿನ ಪದಲಾಲಿತ್ಯ, ಉನ್ನತ ಭಾವ ಅಂದಿನ ನನ್ನ ಮುಗ್ಧ ಮನಸ್ಸಿನ ಮುಂದೆ ಆಕಾಶದೆತ್ತರಕ್ಕೆ ಏಣಿಯನ್ನು ಸೃಷ್ಟಿಸಿ ನನ್ನನ್ನು ಕಲ್ಪನಾ ಲೋಕದ ಸದಸ್ಯನನ್ನಾಗಿ ಮಾಡಿಬಿಟ್ಟಿತು.

My poetical journey started from Sankeshwar school

ಅದೇ ಲಹರಿಯಲ್ಲಿ ಸೃಷ್ಟಿಯಾಗಿದ್ದು ನನ್ನದೇ ಆದ ಕನ್ನಡಮ್ಮನ ಮೇಲಿನ ಪದ್ಯ. ಇದು ನನ್ನ ಮೊತ್ತ ಮೊದಲ ಪದ್ಯ. ಆ ಕವನವನ್ನು ಬರೆದಾದ ತಕ್ಷಣ ಭಾರತಮಾತೆಯನ್ನು ಓಲೈಸುವ ಮತ್ತೊಂದು ಪದ್ಯವನ್ನು ಬರೆದೆ. ಇವರಡೂ ನಾನು ಬರೆದ ಮೊತ್ತ ಮೊದಲ ಪದ್ಯಗಳು. ಅದರ ನಂತರ ನಾನು ಎಂದೂ ಕಂಡಿರದ ಅರಣ್ಯವನ್ನು ಕುರಿತು ಕವನವೊಂದನ್ನು ಬರೆದೆ. ಬೇಂದ್ರೆಯವರ ಕರಡಿ ಕುಣಿತ ಪದ್ಯದಿಂದ ಪ್ರಭಾವಿತನಾಗಿ ನಾನೂ ಕೂಡ ನನ್ನದೇ "ಕರಡಿ ಕುಣಿತ" ಪದ್ಯವನ್ನು ಬರೆದೆ. ಹತ್ತನೇ ವರ್ಷದಲ್ಲಿ ಬರೆದ ಈ ಪದ್ಯಗಳ ಎಲ್ಲ ಸಾಲುಗಳು ನೆನಪಿಲ್ಲ. ನಾನು ಬರೆದ ಪದ್ಯಗಳನ್ನು ನನ್ನ ಶಾಲಾ ಮಿತ್ರರನ್ನು ಬಿಟ್ಟು ಇತರರಿಗೆ ತೋರಿಸಲು ಅಳುಕು ಉಂಟಾಯಿತು. ಹೀಗಾಗಿ ನಾನು ಅವುಗಳನ್ನು ಬಚ್ಚಿಡುತ್ತಿದ್ದೆ.

ನಾನೆಷ್ಟೇ ಬಚ್ಚಿಟ್ಟುಕೊಂಡರೂ ಈ ಪದ್ಯಗಳು ನನ್ನ ತಂದೆಯ ಕೈಗೆ ಸಿಲುಕಿದವು. ನನಗಿನ್ನೂ ನೆನಪಿದೆ, ನನ್ನ ತಂದೆ ನನ್ನ ಕರಡಿಯ ಕುಣಿತ ಪದ್ಯವನ್ನು ಓದಿ, ಕೊನೆಯ ಸಾಲನ್ನು ಅನೇಕ ಬಾರಿ ಗುನುಗಿ ಜೋರಾಗಿ ನಕ್ಕರು. ಆ ಸಾಲುಗಳು ಹೀಗಿದ್ದವು ಎಂದು ನೆನಪು.

ವಸಂತ ಕುಲಕರ್ಣಿ ಅವರ ಅಂಕಣ 'ಅಂತರ್ಮಥನ' ಅಜೇಯ ಶತಕ! ವಸಂತ ಕುಲಕರ್ಣಿ ಅವರ ಅಂಕಣ 'ಅಂತರ್ಮಥನ' ಅಜೇಯ ಶತಕ!

ಕರಡಿಯು ಕುಣಿವುದು ಮನುಷ್ಯನಿಗಾಗಿ
ಮನುಷ್ಯನು ಕುಣಿವನು ಹೊಟ್ಟೆಗಾಗಿ|

ಗೇಣುದ್ದದ ನನ್ನ ಕವನದ ಕೊನೆಯಲ್ಲಿ ನೀತಿಯೊಂದು ಇದ್ದಿದ್ದು ಅವರಿಗೆ ವಿನೋದವೆನಿಸಿತ್ತು. ಅವರು ನನ್ನ ಬಾಲಿಶ ಕವನ ಓದಿ ತಮಾಷೆ ಮಾಡಿ ನಕ್ಕರೋ ಅಥವಾ ನನ್ನ ಕವನ ಪ್ರತಿಭೆಗೆ ಸಂತೋಷವಾಗಿ ನಕ್ಕರೋ ಇಂದಿಗೂ ನನಗೆ ಅರ್ಥವಾಗಿಲ್ಲ.

My poetical journey started from Sankeshwar school

ನೋಡು ನೋಡುತ್ತ ನಾನು ಕವನಗಳಿಂದ ಒಂದು ನೋಟ್ ಬುಕ್ಕನ್ನೂ ತುಂಬಿಸಿಬಿಟ್ಟೆ. ಆದರೆ ನಾನೆಷ್ಟೇ ಜೋಪಾನವಾಗಿ ಇಟ್ಟುಕೊಳ್ಳಲು ಪ್ರಯತ್ನ ಪಟ್ಟರೂ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಈ ಎಲ್ಲ ಕವನಗಳು ಕಳೆದುಹೋದವು. ಸಂಕೇಶ್ವರದಿಂದ ಬೆಳಗಾವಿಗೆ ವರ್ಗವಾಗಿ ಹೋಗುವಾಗಲೋ ಅಥವಾ, ಬೆಳಗಾವಿಯಲ್ಲಿ ಮನೆ ಬದಲು ಮಾಡುವಾಗಲೋ ಕಳೆದು ಹೋಗಿರಬೇಕು. ಇಂಜಿನೀಯರಿಂಗ್ ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ನನ್ನ ಕವನ ನನಗೇ ಬಾಲಿಶ ಎನಿಸತೊಡಗಿದವು. ಅದಕ್ಕೆ ನನಗೆ ಕವನಗಳನ್ನು ಬರೆಯುವ ಸ್ಫುರಣೆ ಹೆಚ್ಚು ಕಡಿಮೆ ನಿಂತು ಹೋಯಿತು ಎಂದೆನಿಸುತ್ತದೆ.

ಬೆಳಗಾವಿಯ 'ಭಜನ ಸಂಗೀತ ಚೂಡಾಮಣಿ' ಕಡ್ಲಾಸ್ಕರ್ ಬುವಾಬೆಳಗಾವಿಯ 'ಭಜನ ಸಂಗೀತ ಚೂಡಾಮಣಿ' ಕಡ್ಲಾಸ್ಕರ್ ಬುವಾ

ಆದರೆ ಸಂಕೇಶ್ವರದ ಎಸ್ ಡಿ ಹಾಯಸ್ಕೂಲಿನ ನನ್ನ ಗುರುಗಳಿಗೆ ನನ್ನ ಕವನಗಳ ಗುಟ್ಟು ಗೊತ್ತಾಗಿ ಹೋಯಿತು. ನನ್ನ ಮೊದಲ ಎರಡು ಕವನಗಳನ್ನು ನನ್ನ ಅಚ್ಚು ಮೆಚ್ಚಿನ ಇಬ್ಬರು ಟೀಚರ್ ಗಳಲ್ಲೊಬ್ಬರಾದ ಮಟ್ಟಿಕಲ್ಲಿ ಮೇಡಂ ಅವರಿಗೆ ತೋರಿಸಿದೆ. ಅವರು ನಗಲಿಲ್ಲ. ಬದಲಿಗೆ ಬಹಳ ಸಂತೋಷಪಟ್ಟು ಅವುಗಳನ್ನು ಸ್ಕೂಲಿನ ವಾರ್ಷಿಕ ಹಸ್ತ ಪತ್ರಿಕೆಗೆ ಕೊಡಲು ಹೇಳಿದರು. ಅವರ ಪ್ರೋತ್ಸಾಹದಿಂದ ನನ್ನ ಸಾಹಿತ್ಯ ಸೇವೆ ಗರಿಗೆದರಿತು. ಹೀಗೆ ನನ್ನ ನೆಚ್ಚಿನ ಕನ್ನಡಮ್ಮ ಮತ್ತು ಭಾರತಾಂಬೆ ನನ್ನ ಹಾಯಸ್ಕೂಲಿನ ಹಸ್ತ ಪತ್ರಿಕೆಯ ಬಣ್ಣ ಬಣ್ಣದ ಪತ್ರಿಕೆಗಳಲ್ಲಿ ರಾರಾಜಿಸಿ ನನ್ನ ಸಂತಸವನ್ನು ಮುಗಿಲನ್ನೇರಿಸಿದರು. ನನ್ನ ಮಿತ್ರ ಮತ್ತು ಪ್ರಬಲ ಪ್ರತಿಸ್ಪರ್ಧಿಯಾದ ಸುಜಿತ್ ಕುಲಕರ್ಣಿ ನನ್ನನ್ನು ಇಂಗ್ಲಿಷಿನಲ್ಲಿ ಪೋಯೆಟ್ ಎಂದು ಕರೆದು ನನ್ನ ಖುಷಿಯನ್ನು ದ್ವಿಗುಣಗೊಳಿಸಿದ.

ಮುಂದಿನ ವರ್ಷ ಎಂದು ನೆನಪು. ನಾನು ಸ್ಕೂಲಿನಲ್ಲಿ ನಡೆದ ಪ್ರಬಂಧ ಸ್ಪರ್ಧೆಗೆ "ವಿಜ್ಞಾನ ನಡೆದು ಬಂದ ದಾರಿ" ಎಂಬ ಪ್ರಬಂಧವೊಂದನ್ನು ಬರೆದೆ. ಹಾಗೆಯೇ ಅಣ್ಣನಿಗೆ ತೋರಿಸಿದೆ. ಅಂದು ಇಂಟರ್ನೆಟ್ ಅಂತೂ ಇರಲೇ ಇಲ್ಲ, ಸರಿಯಾದ ಗ್ರಂಥಾಲಯವೂ ಇಲ್ಲದ ಊರಿನಲ್ಲಿ ನಾನು ಮಾಹಿತಿ ಸಂಗ್ರಹಿಸಿ ಬರೆದಿದ್ದ ನನ್ನ ಪ್ರಬಂಧಕ್ಕೆ ಬಹಳ ಸಂತೋಷಪಟ್ಟು ಅದರಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಸೇರಿಸಿ "ಮಾನವನ ವಿಜ್ಞಾನ ಪಥ" ಎಂದು ಹೆಸರಿಟ್ಟು ಮತ್ತೊಮ್ಮೆ ಬರೆಯಿಸಿದ.

ಸ್ಪರ್ಧೆಯಲ್ಲಿ ನನಗೆ ಎರಡನೇ ಕ್ರಮಾಂಕ ಬಂದಿತು. ಈ ನನ್ನ ಪ್ರಬಂಧವನ್ನು ಕಂಡು ಬಹಳ ಖುಷಿ ಪಟ್ಟವರು ನನ್ನ ಇನ್ನೊಬ್ಬ ಅಚ್ಚುಮೆಚ್ಚಿನ ಟೀಚರ್ ಗೋಡಖಿಂಡಿ ಮೇಡಂ. ಎಸ್ ಡಿ ಹಾಯಸ್ಕೂಲಿನಲ್ಲಿ ನನ್ನನ್ನು ಬಹಳ ಪ್ರೀತಿಯಿಂದ ಕಂಡು ನನ್ನನ್ನು ಇನ್ನೂ ಹೆಚ್ಚಿನದನ್ನು ಸಾಧಿಸಲು ಪ್ರೇರೇಪಿಸಿದವರು ಈ ಇಬ್ಬರು ಟೀಚರುಗಳು. ಗೋಡಖಿಂಡಿ ಮೇಡಂ ಮತ್ತು ಮಟ್ಟಿಕಲ್ಲಿ ಮೇಡಂ.

ಕನಸಾಗಿಯೇ ಉಳಿದ ವೈಜ್ಞಾನಿಕ ಸಂಶೋಧಕನಾಗಬೇಕೆಂಬ ಕನಸು! ಕನಸಾಗಿಯೇ ಉಳಿದ ವೈಜ್ಞಾನಿಕ ಸಂಶೋಧಕನಾಗಬೇಕೆಂಬ ಕನಸು!

ಅವರು ನನ್ನ ಒಳ್ಳೆಯ ರಚನಾತ್ಮಕ ಕೆಲಸಗಳಿಗಾಗಿ ಅದೆಷ್ಟು ಪ್ರೋತ್ಸಾಹ ಕೊಟ್ಟರೋ, ಏನಾದರೂ ತಪ್ಪುಗಳನ್ನು ಮಾಡಿದರೆ ಅಷ್ಟೇ ಕಠಿಣವಾಗಿ ಖಂಡಿಸುತ್ತಿದ್ದರು.

ಹಿರಣ್ಯಕೇಶಿ ನದಿಯಾಚೆಗೆ ಮಹಾರಾಷ್ಟ್ರದ ಗಡಿಯಿತ್ತು. ಹೀಗಾಗಿ ಸಂಕೇಶ್ವರದಲ್ಲಿ ಮರಾಠಿಯ ಪ್ರಭಾವವಿದ್ದರೂ ಕನ್ನಡವೇ ಪ್ರಬಲವಾಗಿತ್ತು. ಅಲ್ಲದೇ ಎರಡೂ ಭಾಷಿಕರ ಮಧ್ಯದಲ್ಲಿ ಅಂತಹ ವೈಷಮ್ಯದ ಮನೋಭಾವವಿರಲಿಲ್ಲ. ಹೀಗಾಗಿ ಕನ್ನಡ ಚಳವಳಿಯ ಬಗ್ಗೆ ನನಗೆ ಅಷ್ಟು ಅರಿವು ಬಂದಿರಲಿಲ್ಲ. ಹೀಗಾಗಿ ಬಾರಿಸು ಕನ್ನಡ ಡಿಂಡಿಮವ ಪದ್ಯದ ಮೊದಲ ನುಡಿಯಾದ...

My poetical journey started from Sankeshwar school

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಿಸು

ಎಂಬ ನುಡಿಯನ್ನು ವಿಶೇಷವಾಗಿ ಕನ್ನಡತನದ ದೃಷ್ಟಿಯಿಂದ ಅಂದು ನೋಡಿರಲಿಲ್ಲ. ಮುಂದೆ ಮೂರು ವರ್ಷಗಳ ನಂತರ ಬೆಳಗಾವಿಗೆ ಬಂದು ನೆಲೆಸಿದಾಗ ಅಲ್ಲಿನ ಗಡಿ ಸಮಸ್ಯೆಯ ರಾಜಕೀಯ ಹಾಗೂ ಕನ್ನಡ ಮತ್ತು ಮರಾಠಿ ಭಾಷಿಕರ ನಡುವಿನ ವೈಷಮ್ಯವನ್ನು ನೋಡಿದಾಗ ಈ ನುಡಿ ನನಗೆ ಒಂದು ವಿಶೇಷ ಸಂದೇಶವಾಗಿ ಕಂಡಿತು. ನಮ್ಮ ರಾಜ್ಯದಲ್ಲಿಯೇ ನಮ್ಮ ಭಾಷೆಯ ಉಳಿವಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಇದ್ದುದನ್ನು ನೋಡಿ ಕವಿಯ "ಬಾರಿಸು ಕನ್ನಡ ಡಿಂಡಿಮವ" ಎಂಬ ಸಂದೇಶ ಕನ್ನಡಿಗರಿಗೆಲ್ಲ ಸದಾ ನೆನಪಿಟ್ಟುಕೊಳ್ಳಬೇಕಾದ ಒಂದು ಸಂದೇಶ ಎಂಬ ಮನವರಿಕೆಯಾಯಿತು.

ನನಗನಿಸುವ ಮಟ್ಟಿಗೆ ಇಂದಿಗೂ ಪರಿಸ್ಥಿತಿ ಆಷ್ಟೊಂದು ಬದಲಾಗಿಲ್ಲ. ಇಂದಿಗೂ ಕನ್ನಡ ಜಾಗತೀಕರಣದ ಹಾವಳಿ ಮತ್ತು ನಾವೆಲ್ಲ ಕನ್ನಡಿಗರ ನಿರಭಿಮಾನದಿಂದ ಸೊರಗಿ ಹೋಗುತ್ತಿದೆ ಎಂದೆನಿಸುತ್ತಿದೆ. ನಮ್ಮ ಮಕ್ಕಳು ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲಿಷು ವ್ಯಾಮೋಹಿಗಳಾಗುತ್ತಿದ್ದಾರೆ ಎಂದೆನಿಸುತ್ತಿದೆ. ಇಂಗ್ಲಿಷು ಮತ್ತು ಹಿಂದಿ ಭಾಷೆಗಳ ಲಗ್ಗೆಯಿಂದ ಕನ್ನಡ ಹಿಮ್ಮೆಟ್ಟುತ್ತಿದೆ ಎಂದು ಭಾಸವಾಗುತ್ತಿದೆ. ಈ ಲಗ್ಗೆಯನ್ನು ನಾವೆಲ್ಲ ಕನ್ನಡಿಗರೂ ಮುನ್ನುಗ್ಗಿ ಹಿಮ್ಮೆಟ್ಟಿಸಬೇಕಾಗಿದೆ. ಮನೆಮನೆಯಲ್ಲಿಯೂ ಮಕ್ಕಳಿಗೆ "ಕನ್ನಡವ ಕಲಿ ನೀ ಕನ್ನಡದ ಕಲಿಯೇ" ಎಂದು ಹುರಿದುಂಬಿಸಬೇಕಾಗಿದೆ. ಸಾವಿರಾರು ವರ್ಷಗಳ ಸಂಸ್ಕೃತಿ ಮತ್ತು ಪರಂಪರೆಯಿರುವ ನಮ್ಮ ಕನ್ನಡ ಭಾಷೆ ಮುಂದೆಯೂ ಉಳಿದು ಬೆಳೆಯಲು ನಾವೆಲ್ಲ ಕನ್ನಡಿಗರು ಮತ್ತೊಮ್ಮೆ ಮುಂದೆ ಬಂದು ನಮ್ಮಲ್ಲಿಯ ಭೇದ ಭಾವಗಳನ್ನು ಮರೆತು ಕನ್ನಡ ಡಿಂಡಿಮವನ್ನು ಮೊಳಗಿಸಬೇಕಾಗಿದೆ.

English summary
My poetical journey started from Sankeshwar school, many of my teachers, friends encouraged the hidden talent in me, says Vasant Kulkarni, Singapore. Vasant mentions about Kuvempu's Barisu Kannada Dindimava poem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X