• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಲೇಜಿನ SPIC MACAY ದಿನಗಳನ್ನು ಮರೆಯಲು ಹೇಗೆ ಸಾಧ್ಯ?

By ವಸಂತ ಕುಲಕರ್ಣಿ, ಸಿಂಗಪುರ
|

ಕಳೆದ ಶನಿವಾರದಂದು ಸಿಂಗಾಪುರ ಪೊಲಿಟೆಕ್ನಿಕ್‍ನಲ್ಲಿ ಕರ್ನಾಟಕ ಸಂಗೀತದ ಪ್ರತಿಭಾಶಾಲಿ ಯುವ ಗಾಯಕರಾದ ತ್ರಿಚೂರ್ ಸಹೋದರರ ಗಾಯನ ಕಾರ್ಯಕ್ರಮವಿತ್ತು. ತಮ್ಮ ಜೇನು ಲೇಪಿಸಿದ ಧ್ವನಿಯಿಂದ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿದ ಈ ಯುವ ಕಲಾಕಾರರು, ಕಾರ್ಯಕ್ರಮದ ನಡುನಡುವೆ ತಾವು ಹಾಡಿದ ಕೃತಿಯ ಬಗ್ಗೆ, ತಮ್ಮ ಮಾತೃಭಾಷೆಯ ಬಗ್ಗೆ ಮಾತನಾಡಿದರಲ್ಲದೇ, ಒಂದು ಬಾರಿ ಪ್ರೇಕ್ಷಕರಿಗೆ ತಾವು ಹಾಡಿದ ಕೃತಿಯೊಂದರ ರಾಗವನ್ನು ಗುರುತಿಸಲು ಸವಾಲೆಸೆದರು ಕೂಡಾ.

ಸಿಂಗಪುರದ ಲಹರಿ ಸಂಗೀತ ಸಂಸ್ಥೆ ಪ್ರಸ್ತುತಪಡಿಸಿದ ಈ ಕಾರ್ಯಕ್ರಮ ಅದೇಕೋ ನನಗೆ ನನ್ನ ಕಾಲೇಜು ದಿನಗಳಲ್ಲಿ ನಡೆಯುತ್ತಿದ್ದ SPIC MACAYಯ Lecture Demonstration ಕಾರ್ಯಕ್ರಮಗಳನ್ನು ನೆನಪಿಸಿತು.

ವಿನಾಶಕಾರಿ ಮಾರ್ಗದತ್ತ ಸಾಗದಿರಲಿ ಮಾನವನ ರಚನಾತ್ಮಕ ಬುದ್ಧಿ

1988-90ರ ದಿನಗಳವು. ನಾನಾಗ ಎಂಜಿನೀಯರಿಂಗ್ ಕಲಿಯುತ್ತಿದ್ದೆ. ನಮ್ಮ ಎಂಜಿನೀಯರಿಂಗ್‍ನ ಯಾಂತ್ರಿಕ ದಿನಗಳನ್ನು ಸ್ವಲ್ಪ ರಸವತ್ತಾಗಿಸಲು ನಾನಾಗ ಮೊರೆ ಹೋಗುತ್ತಿದ್ದುದು ಶಾಸ್ತ್ರೀಯ ಸಂಗೀತಕ್ಕೆ. ನನ್ನ ಈ ಹವ್ಯಾಸ ನನ್ನ ಅನೇಕ ಗೆಳೆಯರಿಗೆ ಮೋಜಿನ ಮಾತಾಗಿತ್ತು. ಕೆಲವು ಮಿತ್ರರು ನನಗೆ ಅದು ಹೇಗೆ ಈ ಬೋರಿಂಗ್ ಶಾಸ್ತ್ರೀಯ ಸಂಗೀತ ಹಿಡಿಸುತ್ತದೆಂದು ಆಶ್ಚರ್ಯ ಪಟ್ಟರೆ, ಅವರಿಗೆ ಹೇಗೆ ಅದ್ಭುತವಾದ ಈ ಶಾಸ್ತ್ರೀಯ ಸಂಗೀತ ಹಿಡಿಸುವುದಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿತ್ತು.

ನಾನಾಗ ನನ್ನ ಕಾಲೇಜಿನ SPIC MACAYಯಲ್ಲಿ ತುಂಬಾ ಆಸಕ್ತಿಯಿಂದ ಭಾಗವಹಿಸುತ್ತಿದ್ದೆ. ಗಂಗೂಬಾಯಿ ಹಾನಗಲ್, ಹರಿಪ್ರಸಾದ ಚೌರಾಸಿಯಾ, ರಾಜನ್ ಮತ್ತು ಸಾಜನ್ ಮಿಶ್ರಾ, ಸಿ ಆರ್ ವ್ಯಾಸ್ ಅವರಂತಹ ಮಹಾನ್ ಸಂಗೀತಕಾರರು ನಮ್ಮ ಕಾಲೇಜಿಗೆ ಆಗಮಿಸಿ ನಮ್ಮ ಮುಂದೆ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತ ಪಡಿಸಿದ್ದು ನಮ್ಮ ಅದೃಷ್ಟವೇ ಸರಿ. ಅಲ್ಲದೇ SPIC MACAYಯ ಕಾರ್ಯಕಾರಿ ಮಂಡಳಿಯ ಸದಸ್ಯನಾದುದರಿಂದ ಈ ಅಸಾಧಾರಣ ವ್ಯಕ್ತಿಗಳೊಂದಿಗೆ ಸ್ವಲ್ಪ ಹೊತ್ತು ಕಳೆಯುವ ಅದೃಷ್ಟ ಕೂಡ ನನಗೆ ಅನೇಕ ಬಾರಿ ದೊರಕಿತ್ತು.

ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?

ನಮ್ಮ ಕಾಲೇಜಿನಲ್ಲಿ, ಅದೇಕೆ, ನಮ್ಮ ಬೆಳಗಾವಿ ನಗರದಲ್ಲಿ SPIC MACAYಯ ಒಂದು ವಿಭಾಗ ಕಾಲೂರಲು ಕಾರಣಕರ್ತರೆಂದರೆ ಅಂದಿನ ನಮ್ಮ ಎಂಜಿನೀಯರಿಂಗ್ ಕಾಲೇಜಿನ ಪ್ರಿನ್ಸಿಪಾಲರಾದ ಕೆ ಎಸ್ ವಿಶ್ವನಾಥ್ ಅವರು. ಅವರಿಗೆ ಸಂಗೀತದ ಬಗ್ಗೆ ಎಷ್ಟು ಆಳವಾದ ಜ್ಞಾನವಿತ್ತೋ ನನಗೆ ಗೊತ್ತಿರಲಿಲ್ಲ. ಆದರೆ ಸಂಗೀತಕಾರರು ಮತ್ತು ಕಲಾವಿದರ ಬಗ್ಗೆ ಅವರಿಗಿದ್ದ ಅಪಾರ ಆದರ ಭಾವ ಮತ್ತು ಅಂದು ನಾವೆಲ್ಲ ಕೂಡಿ ಮಾಡುತ್ತಿದ್ದ ಸೇವೆಯ ಬಗ್ಗೆ ಅವರಿಗಿದ್ದ ಅತೀವ ಆಸ್ಥೆ ನಮಗೆ ದಾರಿದೀಪವಾಗಿತ್ತು. ನಮ್ಮ ಭಾರತೀಯ ಕಲೆಗಳ ಉಜ್ವಲ ಇತಿಹಾಸ ಮತ್ತು ವೈವಿಧ್ಯದ ಬಗ್ಗೆ ಅವರಿಗೆ ತೀವ್ರ ಆಸಕ್ತಿಯಿತ್ತು.

SPIC MACAYಯ ಉತ್ಸಾಹೀ ಕಾರ್ಯಕರ್ತರಾದ ನಮ್ಮನ್ನು ಹುರಿದುಂಬಿಸಲು ಅವರು ಒಂದು ಮಾತು ಹೇಳುತ್ತಿದ್ದುದು ನನಗೆ ಸ್ಪಷ್ಟವಾಗಿ ನೆನಪಿದೆ. "ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪಾಶ್ಚಿಮಾತ್ಯರು ನಮಗಿಂತ ದಶಕಗಳಷ್ಟು ಮುಂದೆ ಹೋಗಿದ್ದಾರೆ. ಅವರನ್ನು ಸರಿಗಟ್ಟಲು ನಮಗೆ ಬಹಳ ಸಮಯಬೇಕು. ಆದರೆ ವಿಶ್ವಕ್ಕೆ ನಮ್ಮದೇ ಆದ ಒಂದು ಸ್ವಂತ ಕೊಡುಗೆ ಎಂದರೆ ಅದು ನಮ್ಮ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಪರಂಪರೆಗಳು ಮಾತ್ರ. ನಾವು ವಿಶ್ವದಲ್ಲಿ ಗುರುತಿಸಲ್ಪಡುವುದು ಈ ಕಲೆಗಳಿಂದ ಮಾತ್ರ, ಆದುದರಿಂದ ಈ ಕಲೆಗಳನ್ನು ನಾವು ಉಳಿಸಿ ಬೆಳೆಸಬೇಕು". ಅವರ ಈ ಕಳಕಳಿ ನಮ್ಮಲ್ಲನೇಕರ ಮನಸ್ಸಲ್ಲಿ ಪ್ರತಿಧ್ವನಿಸುತ್ತಿತ್ತು. ಸ್ವಾಭಾವಿಕವಾಗಿ ಶಾಸ್ತ್ರೀಯ ಸಂಗೀತದಲ್ಲಿ ಆಳವಾದ ಅಭಿರುಚಿಯುಳ್ಳ ನನಗಂತೂ ಅವರ ಈ ಮಾತು ವೇದವಾಕ್ಯವಾಗಿತ್ತು.

ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ!

ಅದೇ ಸಮಯದಲ್ಲಿ ಇಂಡಿಯಾ ಟುಡೇ ಕಂಪನಿ ಮ್ಯೂಸಿಕ್ ಟುಡೇ ಬ್ರ್ಯಾಂಡ್‍ನಲ್ಲಿ "Morning Ragas", "Afternoon Ragas", "Evening Ragas" ಮತ್ತು "Night Ragas" ಎಂಬ ಕ್ಯಾಸೆಟ್ಟುಗಳನ್ನು ಹೊರ ತಂದಿತ್ತು. ಈ ಕ್ಯಾಸೆಟ್ಟುಗಳಲ್ಲಿ ಸಮಯಕ್ಕನುಗುಣವಾದ ರಾಗಗಳಲ್ಲಿ, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಪಂಡಿತ್ ಜಸರಾಜ್, ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ವಿದುಷಿ ಶೃತಿ ಶಾಡೋಲಿಕರ್, ವಿದುಷಿ ಪದ್ಮಾ ತಲವಾಲ್ಕರ್ ಮುಂತಾದ ಅಪ್ರತಿಮ ಸಂಗೀತಜ್ಞರ ಪ್ರಸ್ತುತಿ ಇತ್ತು. ನನ್ನಂತಹ ಜನರಿಗೆ ಈ ಕ್ಯಾಸೆಟ್ಟುಗಳು ವಿಟಾಮಿನ್ನುಗಳಾದವು. ಶಾಸ್ತ್ರೀಯ ಗಾಯನವನ್ನು ಪೂಜಿಸುವ ವಿರಳ ವರ್ಗದಲ್ಲಿ ಈ ಕ್ಯಾಸೆಟ್ಟುಗಳು ಚರ್ಚೆಯ ವಿಷಯವಾದವು.

ಮುಂದೆ ಮ್ಯೂಸಿಕ್ ಟುಡೇ ಭೀಮಸೇನ್ ಜೋಷಿ, ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್, ಕಿಶೋರಿ ಅಮ್ಹೋಣಕರ್ ಮುಂತಾದವರ ಗಾಯನಗಳನ್ನುಳ್ಳ "Maestro's Choice", "ಬಸಂತ್ ಬಹಾರ್", "ಮೇಘ ಮಲ್ಹಾರ್", ಕ್ಯಾಸೆಟ್ಟುಗಳನ್ನೂ ಹಾಗೂ ಹೊಸ ಪೀಳಿಗೆಯ ರೋಣೂ ಮಜುಮದಾರ್, ಭಜನ್ ಸೋಪೋರಿ, ಕಲಾ ರಾಮನಾಥ್, ರಶೀದ್ ಖಾನ್ ಮುಂತಾದವರ "ಜುಗಲ್ ಬಂದಿ", "ಯಂಗ್ ಮಾಸ್ಟರ್ಸ್" ಮುಂತಾದ ಅನೇಕ ಅಮೂಲ್ಯವಾದ ಬಳುವಳಿಗಳನ್ನು ನೀಡಿ ನಮ್ಮಲ್ಲಿ ಬೆಲೆಕಟ್ಟಲಾಗದಷ್ಟು ಸಂತೋಷ, ಪ್ರಜ್ಞೆಯ ವ್ಯಾಪ್ತಿಯನ್ನು ವಿಸ್ತರಿಸುವ ತಿಳುವಳಿಕೆಯನ್ನು ನೀಡಿದವು. ಮುಂದೆ ನಾನು ವೃತ್ತಿಯಲ್ಲಿ ನಿರತನಾದರೂ ನನ್ನಿಂದಾದಷ್ಟು ಸಂಗೀತವನ್ನು ಕಲಿತೆ. ಈಗಲೂ ಕೇಳುತ್ತೇನೆ. ವೃತ್ತಿ ಜೀವನದ ಮತ್ತು ನಿತ್ಯ ಜೀವನದ ಒತ್ತಡಗಳು ಸಂಗೀತದ ಉಪಾಸನೆಯಿಂದ ಬಹಳ ಮಟ್ಟಿಗೆ ದೂರವಾಗುತ್ತವೆ. ಮುದುಡಿದ ಮನಸ್ಸಿಗೆ ಆಹ್ಲಾದ ದೊರಕುತ್ತದೆ.

ಆದರೆ ಅಂದು ನನ್ನಲ್ಲಿ ಒಂದು ವ್ಯಥೆಯಿತ್ತು. ಈ ದೇಶದ ಅಮೂಲ್ಯ ಕೊಡುಗೆಯಾದ ಶಾಸ್ತ್ರೀಯ ಸಂಗೀತವನ್ನು ಆರಾಧಿಸುವವರ ಸಂಖ್ಯೆ ಅದೇಕೆ ಇಷ್ಟು ಕಡಿಮೆ? ಈಗಲೂ ಅನೇಕ ಬಾರಿ ಈ ವ್ಯಥೆ ಕಾಡುತ್ತದೆ. ಯಾರಾದರೂ ಒಬ್ಬ ಪಾಪ್ ಗಾಯಕ ಅಥವಾ ಸಿನೆಮಾ ಸಂಗೀತದ ಗಾಯಕ ಒಂದು ಕಾರ್ಯಕ್ರಮ ನೀಡಲು ಬಂದರೆ ತಿಂಗಳುಗಟ್ಟಲೇ ಮೊದಲೇ ಬುಕ್ ಮಾಡಿ, ಅಪಾರ ಹಣ ತೆತ್ತಾದರೂ ಅವರ ಗಾಯನ ಕೇಳಲು ಜನ ಮುಗಿ ಬೀಳುತ್ತಾರೆ. ಆದರೆ ಶಾಸ್ತ್ರೀಯ ಗಾಯನ ಕಾರ್ಯಕ್ರಮಕ್ಕೆ ಜನರನ್ನು ಕೂಡಿಸಲು ಹೆಣಗಬೇಕಾಗುತ್ತದೆ. ಅಂದು ಶಾಸ್ತ್ರೀಯ ಗಾಯನ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಕೇಳಲು, ನೋಡಲು ಸಿಗುತ್ತಿತ್ತು. ಇಂದು ಇಷ್ಟೊಂದು ಟಿವಿ ಚಾನೆಲ್‍ಗಳಿದ್ದರೂ ಶಾಸ್ತ್ರೀಯ ಸಂಗೀತದ ಕಾರ್ಯಕ್ರಮಗಳನ್ನು ಬಿತ್ತರಿಸುವ ಯಾವ ಚಾನೆಲ್‍ಗಳು ಕಾಣುತ್ತಿಲ್ಲ. ಅಲ್ಲಲ್ಲಿ ಕೆಲವು ಸಂಗೀತದ ರಿಯಾಲಿಟಿ ಶೋಗಳಲ್ಲಿ ಕೆಲವು ಬಾರಿ ಶಾಸ್ತ್ರೀಯ ಗಾಯನ ಕೇಳುತ್ತದೆಯಾದರೂ ಅದು ಇಲ್ಲ ಎನ್ನಿಸುವಷ್ಟು ವಿರಳ.

ಆದರೆ ಹೀಗೆ ಬೇಸರವಾದಾಗಲೆಲ್ಲ ನಾನು ನೆನಪು ಮಾಡಿಕೊಳ್ಳುವ ಸಂಗತಿಯೆಂದರೆ ಒಮ್ಮೆ ನಮ್ಮ ಕಾಲೇಜಿನಲ್ಲಿ SPIC MACAYಯ ಸ್ಥಾಪಕ ಐಐಟಿ ದೆಹಲಿಯ ಪ್ರೊಫೆಸರ್ ಡಾ. ಕಿರಣ್ ಸೇಠ ಆಗಮಿಸಿದ್ದರು. ಅವರು ನಾವೆಲ್ಲ ಸ್ವಯಂಸೇವಕರೊಂದಿಗೆ ಒಂದು ಮಾತುಕತೆ ನಡೆಸಿದರು. ಅವರೊಂದಿಗೆ ಮಾತನಾಡುತ್ತಾ ನನ್ನಲ್ಲಿಯ ವ್ಯಥೆ ಹೊರಗೆ ಬಂದೇ ಬಿಟ್ಟಿತು. ಪಾಪ್ಯುಲರ್ ಸಂಗೀತ ಕಾರ್ಯಕ್ರಮಗಳಿಗೆ ಇರುವೆಗಳಂತೆ ಮುಗಿಬೀಳುವ ಜನ ಶಾಸ್ತ್ರೀಯ ಸಂಗೀತದಂತಹ ಪರಿಶುದ್ಧ ಸಂಗೀತ ಸಭೆಗಳನ್ನು ಮೂಸಿಯೂ ನೋಡುವುದಿಲ್ಲ, ಅದು ಹೇಗೆ ನಮ್ಮ ಜನರನ್ನು ಶಾಸ್ತ್ರೀಯ ಸಂಗೀತದತ್ತ ಆಕರ್ಷಿಸುವುದೋ ತಿಳಿಯದು, ಹೀಗೆಯೇ ಆದರೆ ಅದರ ಭವಿಷ್ಯ ಹೇಗೆ? ಎಂದು ನನ್ನ ಅಳುಕನ್ನು ಹೊರ ಹಾಕಿದಾಗ, ಅವರು ಮುಗುಳ್ನಗುತ್ತಾ, "ಶಾಸ್ತ್ರೀಯ ಸಂಗೀತವನ್ನು ಕೇಳುವ ಜನರ ಕಿವಿ ಸಂಸ್ಕಾರ ಹೊಂದಿದ ಕಿವಿಗಳು. ಈ ಸಂಸ್ಕಾರ ಎಲ್ಲರಿಗೂ ಇರಲು ಸಾಧ್ಯವಿಲ್ಲ. ಯಾವಾಗಲೂ ಶಾಸ್ತ್ರೀಯ ಸಂಗೀತಕ್ಕೆ ಅದರದೇ ಆದ ಒಂದು ಸಂಸ್ಕಾರವಂತ ಶ್ರೋತೃ ವರ್ಗವಿದೆ, ಮುಂದೆಯೂ ಇರುತ್ತದೆ. ಈ ಸಂಗೀತದ ಪ್ರಚಾರಕ್ಕೆ ನಮ್ಮಿಂದಾದಷ್ಟು ಕೆಲಸವನ್ನು ನಾವು ಮಾಡುತ್ತಿರಬೇಕು ಅಷ್ಟೇ. "ಹಮ್ ಲಂಬೇ ರೇಸ್ ಕೆ ಘೋಡೇ ಹೈ ಮೇರೇ ದೋಸ್ತ್" ಎಂದರು. ನಾನು ತಲೆದೂಗಿದೆ. ಅವರ ಈ ಮಾತುಗಳನ್ನು ಇನ್ನೂ ನೆನಪಿಸಿಕೊಳ್ಳುತ್ತಿರುತ್ತೇನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
My journey with SPIC MACAY (The Society for the Promotion of Indian Classical Music And Culture Amongst Youth) during college days. Vasant Kulkarni from Singapore goes back to his engineering college days. Have you been part of this SPIC MACAY journey?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more