ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಾದಂಬರಿಗಳ ಹುಚ್ಚು ಹಿಡಿಸಿದ ಸಂಕೇಶ್ವರದ ದಿನಗಳು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಚಂದಮಾಮ, ಬಾಲಮಿತ್ರ ಮತ್ತು ಬೊಂಬೆಮನೆ ಮುಂತಾದ ಚಿಣ್ಣರ ಪತ್ರಿಕೆಗಳಲ್ಲಿ ಬರುವ ಕಥೆಗಳನ್ನು ಮತ್ತು ಸುಧಾ ಪತ್ರಿಕೆಯಲ್ಲಿ ಬರುತ್ತಿದ್ದ ಫ್ಯಾಂಟಮ್, ಡಾಬೂ ಮತ್ತು ಏಜೆಂಟ್ ವಿಕ್ರಮ್ ಮುಂತಾದ ಚಿತ್ರ ಕಥೆಗಳನ್ನು ಓದುವ ಹುಚ್ಚು ನನಗೆ ಬಿಜಾಪುರದಲ್ಲಿರುವಾಗಲೇ ಶುರುವಾಗಿತ್ತು. ಸಂಕೇಶ್ವರಕ್ಕೆ ಬಂದ ಮೇಲೆ ಕೂಡ ಅದು ಮುಂದುವರೆದಿತ್ತು. ಆದರೆ ಸಂಕೇಶ್ವರಕ್ಕೆ ಬಂದ ಮೇಲೆ ಸುಧಾ ಪತ್ರಿಕೆಯನ್ನು ನಿಲ್ಲಿಸಿ ಮಯೂರ ಮಾಸಪತ್ರಿಕೆಯನ್ನು ತರುವುದನ್ನು ನಮ್ಮ ಮನೆಯಲ್ಲಿ ಆರಂಭಿಸಿದ್ದರು. ನಾನು ಮಯೂರದಲ್ಲಿ ಬರುವ ಸಣ್ಣ ಕಥೆಗಳನ್ನು ಓದುವುದನ್ನು ಶುರು ಮಾಡಿದ್ದೆ. ಆದರೂ ಸುಧಾ ಪತ್ರಿಕೆಯ ಚಿತ್ರಕಥೆಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ.

ಮಠ ಗಲ್ಲಿಯನ್ನು ತೊರೆದು ನಾವು ಬಸವನ ಗಲ್ಲಿಗೆ ಬಂದೆವು. ಅಲ್ಲಿ ಅಂಬಲಿಮಠ ಅವರ ವಠಾರದಲ್ಲಿ ನಮ್ಮದು ಬಾಡಿಗೆ ಮನೆ. ಅಂಬಲಿಮಠ ಸಂಕೇಶ್ವರದ ದೊಡ್ಡ ಜಮೀನುದಾರ ಮನೆತನಗಳಲ್ಲಿ ಒಂದು. ಅವರು ಐದು ಜನ ಸಹೋದರರು ಎಂದು ನೆನಪು. ನಾವಿದ್ದ ವಠಾರದಲ್ಲಿ ಇಬ್ಬರು ಸಹೋದರರು ಮನೆ ಮಾಡಿಕೊಂಡಿದ್ದರು. ನಮ್ಮ ಮನೆಯ ಮಾಲೀಕರು ಎರಡನೆಯವರು. ನಾವಿದ್ದ ವಠಾರದಲ್ಲಿಯೇ ಅವರ ಹಿರಿಯ ಸಹೋದರನ ಮನೆಯಿತ್ತು. ತುಂಬಾ ಗಂಭೀರ ಪ್ರವೃತ್ತಿಯವರಾದ ಅವರನ್ನು ನಾವು ಕಾಕಾ ಎಂದು ಕರೆಯುತ್ತಿದ್ದೆವು. ಅವರಿಗೆ ನಾಲ್ಕು ಮಕ್ಕಳು. ಸಣ್ಣವನಾದ ಮೃತ್ಯುಂಜಯ ನನಗಿಂತ ಒಂದು ವರ್ಷ ದೊಡ್ಡವನಾಗಿದ್ದ. ಅವನ ಇಬ್ಬರು ಅಕ್ಕಂದಿರು ನನಗಿಂತ ಸುಮಾರು ವರ್ಷ ದೊಡ್ಡವರು. ದೊಡ್ಡ ಮಗ ಎಂಜಿನೀಯರಿಂಗ್ ಕಲಿಯಲು ಅದೆಲ್ಲೋ ದೂರದ ಊರಿನಲ್ಲಿದ್ದ.

ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು! ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು!

ಅವರ ಮನೆಯಲ್ಲಿ ಅವರು ಸುಧಾ ವಾರಪತ್ರಿಕೆಯನ್ನು ತರಿಸುತ್ತಿದ್ದರಲ್ಲದೇ ಸಂಯುಕ್ತ ಕರ್ನಾಟಕವನ್ನು ಕೂಡ ತರಿಸುತ್ತಿದ್ದರು. ನಾನು ಪ್ರತಿದಿನ ಬೆಳಗ್ಗೆ ಸ್ನಾನ ಮತ್ತು ಸಂಧ್ಯಾವಂದನೆಗಳನ್ನು ಮುಗಿಸಿಕೊಂಡು ಅವರ ಮನೆಗೆ ಹೋಗಿ ಪೇಪರ್ ಮತ್ತು ಸುಧಾ ಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಂಡಿದ್ದೆ. ಕಾಕಾ ಅವರಿಗೆ ಪೇಪರ್ ಓದುವ ಹವ್ಯಾಸ ಇತ್ತು. ಆದರೆ ಉಳಿದವರಿಗೆ ಪೇಪರ್ ಓದುವ ಅಭ್ಯಾಸ ಇರಲಿಲ್ಲ.

ಕಾಕಾ ಅವರು ಬೆಳಿಗ್ಗೆ ಪೇಪರು ಓದಿ ಕೆಲಸಕ್ಕೆಂದು ಹೋಗಿಬಿಡುತ್ತಿದ್ದರು. ಹೀಗಾಗಿ ಪೇಪರು ನನಗೆ ಯಾವಾಗಲೂ ಸಿಗುತ್ತಿತ್ತು. ಮುಖಪುಟದಿಂದ ಕೊನೆಯ ಪುಟದವರೆಗೂ ನನಗೆ ಇಷ್ಟವೆನಿಸಿದ ಎಲ್ಲಾ ಸುದ್ದಿಗಳನ್ನು ಓದುತ್ತಿದ್ದೆ, ಭಾನುವಾರದ ಪುರವಣಿಗೆ ಅತ್ಯುತ್ಸಾಹದಿಂದ ಕಾದಿರುತ್ತಿದ್ದೆ. ಅವರಿಗೆಲ್ಲ ಚಿಕ್ಕ ಹುಡುಗನಾದ ನಾನು ಇಷ್ಟೊಂದು ಆಸ್ಥೆಯಿಂದ ಪೇಪರು ಓದುವುದನ್ನು ಕಂಡು ಕೌತುಕವೆನಿಸುತ್ತಿತ್ತು. ಕಾಕಾ ಅವರು ಕೂಡ ತಾವು ಮನೆಯಲ್ಲಿದ್ದರೂ ನನ್ನನ್ನು ನೋಡಿ "ವಸಂತ ಬಂದ, ಮೊದಲು ಅವನು ಓದಲಿ" ಎಂದು ಪೇಪರನ್ನು ನನಗೇ ಕೊಟ್ಟು ಬಿಡುತ್ತಿದ್ದರು.

 My friendship with Kannada novels

ಅನೇಕ ಬಾರಿ ಅವರು "ನಮ್ಮ ಮನೆಯ ಪೇಪರನ್ನು ಪೂರ್ತಿಯಾಗಿ ಓದುವವ ನೀನೊಬ್ಬನೇ ಆದುದರಿಂದ ಪೇಪರಿನ ಹಣದಲ್ಲಿ ಅರ್ಧವನ್ನು ನಿನ್ನ ತಂದೆಯಿಂದಲೇ ಕೇಳಿ ಪಡೆಯುತ್ತೇನೆ" ಎಂದು ವಿನೋದವಾಡುತ್ತಿದ್ದರು. ನಾನು ಸಂಕೋಚದ ನಗೆ ಬೀರುತ್ತಿದ್ದೆನಾದರೂ ಅವರು ಹಾಗೆಲ್ಲಾದರೂ ಕೇಳಿಬಿಟ್ಟಾರು ಎಂಬ ಆತಂಕ ನನ್ನನ್ನು ಕಾಡುತ್ತಿತ್ತು.

ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಸಂಕೇಶ್ವರದ ದಿನಗಳು ಶಾಸ್ತ್ರೀಯ ಸಂಗೀತಕ್ಕೆ ಭದ್ರ ಬುನಾದಿ ಹಾಕಿದ ಸಂಕೇಶ್ವರದ ದಿನಗಳು

ಸುಧಾ ಮತ್ತು ಇತರ ಪತ್ರಿಕೆಗಳಲ್ಲಿ ಬರುವ ಸಣ್ಣ ಕಥೆ ಮತ್ತು ಧಾರಾವಾಹಿಗಳನ್ನು ಓದುವ ಹವ್ಯಾಸವನ್ನು ನಾನಿಲ್ಲಿಂದಲೇ ಬೆಳೆಸಿಕೊಂಡೆ. ಸಣ್ಣ ಕಥೆಗಳ ಪ್ರಸಿದ್ಧ ಲೇಖಕರಾದ ಶೇಷನಾರಾಯಣ, ವಸುಮತಿ ಉಡುಪ, ಜಯಂತ ಕಾಯ್ಕಿಣಿ, ಬೆಸಗರಹಳ್ಳಿ ರಾಮಣ್ಣ, ಮಿರ್ಜಿ ಅಣ್ಣಾರಾಯರು, ಗಂಗಾ ಪಾದೇಕಲ್, ಗೀತಾ ಕುಲಕರ್ಣಿ ಮುಂತಾದವರ ಕಥೆಗಳನ್ನು ಓದಿದೆ. ಕಥೆ, ಕಾದಂಬರಿ, ಧಾರಾವಾಹಿಗಳನ್ನು ಸಣ್ಣ ಹುಡುಗರು ಓದಬಾರದು ಎಂಬ ಧೋರಣೆ, ನನ್ನ ತಂದೆ ತಾಯಿಯರದಾಗಿತ್ತು. ಹೀಗಾಗಿ ನಾನು ಓದುತ್ತಿದ್ದ ವಿಷಯವನ್ನು ಅವರಿಗೆ ಹೇಳುತ್ತಿರಲಿಲ್ಲ. ತಂದೆಯವರು ಕೂಡ ಮನೆಗೆ ಗ್ರಂಥಾಲಯದಿಂದ ಅನೇಕ ಕಾದಂಬರಿಗಳನ್ನು ತರುತ್ತಿದ್ದರು ಎಂಬ ನೆನಪು. ಆದರೆ ಬಹುತೇಕ ಕಾದಂಬರಿಗಳು ಹಿರಿಯರಿಗಾಗಿ ಬರೆಯಲ್ಪಟ್ಟಿದುದರಿಂದ ನಮಗೆ ಅವುಗಳನ್ನು ಓದಲು ಕೊಡುತ್ತಿರಲಿಲ್ಲ.

ಸಂಕೇಶ್ವರದ ಗ್ರಂಥಾಲಯದಲ್ಲಿ ಪ್ರಜಾಮತ ಸಂಚಿಕೆಗಳನ್ನು ಸಂಗ್ರಹಿಸಿ ಬೈಂಡಿಂಗ್ ಮಾಡಿ ಪುಸ್ತಕಗಳನ್ನು ಮಾಡಿಟ್ಟಿರುತ್ತಿದ್ದರು. ಆ ಪುಸ್ತಕಗಳನ್ನು ತಂದೆಯವರು ಮನೆಗೆ ತರುತ್ತಿದ್ದರು. ಆ ಪುಸ್ತಕಗಳಲ್ಲಿ ಮೂಡಿಬಂದ "ದೊಂಬರ ಕೃಷ್ಣ" ನಾನು ಪೂರ್ತಿಯಾಗಿ ಓದಿದ ಮೊದಲ ಕಾದಂಬರಿ ಎಂದು ನನಗೆ ನೆನಪು. ಮುಂದೆ ತುಳಸೀ ದಳ, ತುಳಸಿ, ಅಷ್ಟಾವಕ್ರ ಮುಂತಾದ ಕಾದಂಬರಿಗಳನ್ನು ಕೂಡ ಓದಿದೆ, ಭಯಂಕರ ಮಂತ್ರವಾದಿಗಳನ್ನು ಕುರಿತು ಬರೆದ ಈ ಕಾದಂಬರಿಗಳನ್ನು ಓದಿ ಬಹಳ ಅಂಜಿದ್ದೆ ಕೂಡ. ಅದರಲ್ಲೂ ಅಷ್ಟಾವಕ್ರ ಕಾದಂಬರಿಯಲ್ಲಿ ಬರುವ ಭಯಂಕರ ಮತ್ತು ಭೀಭತ್ಸ ಘಟನೆಗಳು ನನ್ನನ್ನು ನಡುಗಿಸಿದ್ದವು. ಎಂಡಮೂರಿ ವಿರೇಂದ್ರನಾಥ ಅವರ ತೆಲುಗಿನ ಮೂಲದ ಈ ಕಾದಂಬರಿಗಳನ್ನು ಕನ್ನಡಕ್ಕೆ ವಂಶಿ, ಸರಿತಾ ಜ್ಞಾನಾನಂದ ಮುಂತಾದವರು ಅನುವಾದಿಸಿದ್ದರು. ಮುಂದೆ ಬೆಳಗಾವಿಗೆ ಬಂದ ಮೇಲೆ ಎಂಡಮೂರಿ ಅವರ ಬೆಳದಿಂಗಳ ಬಾಲೆ, ಆನಂದೋಬ್ರಹ್ಮ ಇತ್ಯಾದಿ ಧಾರಾವಾಹಿಗಳನ್ನು ಓದಿದೆ.

 My friendship with Kannada novels

ಅದೇ ಸಮಯದಲ್ಲಿ ಸುಧಾದಲ್ಲಿ ವಿಜಯ ಸಾಸನೂರ ಅವರ ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟಗೊಳ್ಳುತ್ತಿದ್ದವು. ಅವುಗಳನ್ನು ಕೂಡ ಓದಿದೆ. ನನ್ನ ತಂದೆಯವರಿಗೆ ಪತ್ತೇದಾರಿ ಕಾದಂಬರಿಗಳನ್ನು ಓದುವ ಹವ್ಯಾಸ ಇತ್ತು. ಹೀಗಾಗಿ ಅವರು ಎನ್ ನರಸಿಂಹಯ್ಯ ಮತ್ತು ಟಿ ಕೆ ರಾಮರಾವ್ ಅವರ ಕಾದಂಬರಿಗಳನ್ನು ಮನೆಗೆ ತರುತ್ತಿದ್ದರು. ಮನೆಯಲ್ಲಿ ಆ ಪುಸ್ತಕಗಳ ಬಗ್ಗೆ ಅಲ್ಪ ಸ್ವಲ್ಪ ಚರ್ಚೆ ಆಗುತ್ತಿತ್ತು. ಅಲ್ಲದೇ ಆಗಾಗ ನಾನು ಕೂಡ ಪತ್ತೇದಾರಿ ಕಾದಂಬರಿಗಳನ್ನು ಓದುತ್ತಿದ್ದೆ. ಎನ್ ನರಸಿಂಹಯ್ಯ ಅವರ ಕಾದಂಬರಿಗಳ ನಾಯಕರುಗಳಾದ ಪುರುಷೋತ್ತಮ ಮತ್ತು ಮಧುಸೂದನ ಮುಂತಾದವರು ಕೆಲವು ಕಾಲ ನನ್ನ ನೆಚ್ಚಿನ ನಾಯಕರುಗಳಾದರು. "ದೆವ್ವವಿದೆ ಎಚ್ಚರಿಕೆ" ಎಂಬ ಕಾದಂಬರಿ ನಾನು ಓದಿದ ಮೊದಲ ಪತ್ತೇದಾರಿ ಕಾದಂಬರಿ ಎಂದು ನನ್ನ ನೆನಪು. ಇಂತಹದೇ ಕಾದಂಬರಿಯೊಂದು ಅಂಬರೀಷ್ ಅಭಿನಯದ "ಅಜಿತ್" ಎಂಬ ಸಿನಿಮಾ ಆಗಿ ಹೊರಬಂದಿತು. ದೇಶಪ್ರೇಮವನ್ನು ಗಾಢವಾಗಿ ಚಿತ್ರಿಸುವ ಈ ಸಿನಿಮಾವನ್ನು ನಾವು ಮಕ್ಕಳು ಕೂಡ ನೋಡಬಹುದು ಎಂದು ಆ ಸಿನಿಮಾ ನೋಡಲು ನಾನು ಮತ್ತು ಅಣ್ಣನನ್ನು ಕಳುಹಿಸಿದ್ದರು ನನ್ನ ತಂದೆ ತಾಯಿ. ಆದರೆ ಹದಿಹರೆಯ ದಾಟುವಷ್ಟರಲ್ಲಿ ಪತ್ತೇದಾರಿ ಸಾಹಿತ್ಯದಲ್ಲಿ ನನ್ನ ಆಸಕ್ತಿ ಕಡಿಮೆಯಾಯಿತು.

ಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣ ಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣ

ಎಸ್ ಎಲ್ ಭೈರಪ್ಪ ಅವರ ಹೆಸರನ್ನು ಮೊಟ್ಟ ಮೊದಲ ಬಾರಿಗೆ ಕೇಳಿದ್ದು ಸಂಕೇಶ್ವರದಲ್ಲಿದ್ದಾಗಲೇ. ಅವರ ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೇ ಕಾದಂಬರಿಗಳನ್ನು ಕುರಿತು ಮನೆಯಲ್ಲಿ ತಂದೆ ತಾಯಿಯರ ನಡುವೆ ಚರ್ಚೆ ನಡೆದಿತ್ತು ಎಂಬ ಅಸ್ಪಷ್ಟ ನೆನಪು. ಆದರೆ ಎಸ್ ಎಲ್ ಭೈರಪ್ಪ ಅವರ ಕಾದಂಬರಿಗಳನ್ನು ಮಕ್ಕಳಾದ ನಾವು ಓದಕೂಡದು ಎಂದು ನನ್ನ ತಾಯಿ ಹೇಳಿದ್ದ ನೆನಪು. ಹೀಗಾಗಿ ಅವರ ಪುಸ್ತಕಗಳನ್ನು ಓದುವದು ಸಾಧ್ಯವಾಗಿರಲಿಲ್ಲ. ನಿಜವಾಗಲೂ ಅವರ ಕಾದಂಬರಿಗಳನ್ನು ನಾನು ಓದತೊಡಗಿದ್ದು ಕಳೆದ ಹತ್ತು ವರ್ಷಗಳಿಂದ.

 My friendship with Kannada novels

ನನಗೆ ನೆನಪಿರುವ ಮಟ್ಟಿಗೆ ನಾನು ಓದಿದ ಅವರ ಮೊದಲ ಕಾದಂಬರಿ ಸಾರ್ಥ. ಸಾರ್ಥ ನನ್ನ ಮೇಲೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಈಗಲೂ ಯಾರಾದರೂ ನನಗೆ ಎಸ್ ಎಲ್ ಭೈರಪ್ಪ ಅವರ ಅತ್ಯುತ್ಕೃಷ್ಟ ಕೃತಿ ಯಾವುದು ಎಂದು ಕೇಳಿದರೆ ಸಾರ್ಥ ಎಂದು ತಟ್ಟನೇ ಹೇಳಿ ಬಿಡುತ್ತೇನೆ. ಅಲ್ಲಿಂದ ಮುಂದೆ ಹೆಚ್ಚು ಕಡಿಮೆ ಅವರ ಎಲ್ಲ ಕಾದಂಬರಿಗಳನ್ನು ಓದಿ ಮುಗಿಸಿದ್ದೇನೆ. ಗೃಹಭಂಗ, ಭಿತ್ತಿ, ಉತ್ತರಕಾಂಡ, ನಾಯಿ ನೆರಳು, ವಂಶವೃಕ್ಷ, ದಾಟು ಮನಸ್ಸಿನಲ್ಲಿ ಅಚ್ಚಳಿಯದೇ ನಿಂತು ಬಿಟ್ಟಿವೆ. ಕಾರಂತರ ಅಪೂರ್ವ ಪಶ್ಚಿಮ ಮತ್ತು ವಿಜ್ಞಾನ ಪ್ರಪಂಚಗಳನ್ನು ಕೂಡ ಬೆಳಗಾವಿಯಲ್ಲಿದ್ದಾಗ ಓದಿದ್ದು. ಆದರೆ ಕಾರಂತರ ಕಾದಂಬರಿಗಳನ್ನು ಓದಿದ್ದು ಈಚಿನ ವರ್ಷಗಳಲ್ಲಿ.

'ಬಾರಿಸು ಕನ್ನಡ ಡಿಂಡಿಮವ' ಕವನದ ಸಾಲುಗಳಲ್ಲಿನ ಪದಲಾಲಿತ್ಯ 'ಬಾರಿಸು ಕನ್ನಡ ಡಿಂಡಿಮವ' ಕವನದ ಸಾಲುಗಳಲ್ಲಿನ ಪದಲಾಲಿತ್ಯ

ಉಚ್ಛ ಶ್ರೇಣಿಯ ಸಾಹಿತ್ಯವನ್ನು ಓದಬೇಕೆನ್ನುವ ಅಭಿಲಾಷೆ ಅದು ಹೇಗೋ ನನ್ನಲ್ಲಿ ತನ್ನಿಂತಾನೇ ಹುಟ್ಟಿದರೂ ಯಾವುದು ಉಚ್ಛಶ್ರೇಣಿಯ ಸಾಹಿತ್ಯ ಎಂದು ಹೇಳುವವರು ಯಾರೂ ಇರಲಿಲ್ಲ. ಹೀಗಾಗಿ ಪ್ರಶಸ್ತಿ ಪಡೆದ ಸಾಹಿತ್ಯ ಉಚ್ಛ ಶ್ರೇಣಿಯದು ಎಂದು ನನ್ನ ನಾನು ಅಂದುಕೊಂಡಿದ್ದೆ. ಸಂಕೇಶ್ವರಕ್ಕೆ ಬಂದ ಹೊಸದರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತ್ತು. ನನಗೆ ನನ್ನ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿ ಕೊಳ್ಳುವ ಉತ್ಸುಕತೆ ಹೆಚ್ಚಾಗಿತ್ತು. ಹೀಗಾಗಿ ಅದಕ್ಕೂ ಮುನ್ನ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರು ಕುವೆಂಪು, ಬೇಂದ್ರೆ ಮತ್ತು ಶಿವರಾಮ ಕಾರಂತ್ ಅವರು ಎಂದು ತಿಳಿಯಿತು. ಅಂತಹ ಮಹಾನ್ ಸಾಹಿತಿಗಳ ಕಥೆ ಕವನಗಳನ್ನು ಓದುವ ಅಭ್ಯಾಸವನ್ನು ನಿಧಾನವಾಗಿ ಬೆಳೆಸಿಕೊಂಡೆ. ಕಸ್ತೂರಿ ಮಾಸಿಕದ ಕೊನೆಯಲ್ಲಿ ಪುಸ್ತಕ ವಿಭಾಗದಲ್ಲಿ ಜಗತ್ತಿನ ಅನೇಕ ಉಚ್ಛ ಶ್ರೇಣಿಯ ಪುಸ್ತಕಗಳ ಸಂಕ್ಷಿಪ್ತ ಹೊತ್ತಿಗೆ ದೊರಕುತ್ತಿತ್ತು. ಹೀಗಾಗಿ ನನಗೇ ಅರಿವಿಲ್ಲದೇ ನಾನು ಶಿಂಡ್ಲರ್ಸ್ ಲಿಸ್ಟ್, ಟೈಟ್ಯಾನಿಕ್ ನಂತಹ ಪುಸ್ತಕಗಳನ್ನು ಓದಿದ್ದೆ.

ಟಿವಿ ಮಾಧ್ಯಮ ಇರಲಿಲ್ಲವಾದುದರಿಂದ ಅಂದು ಪುಸ್ತಕಗಳೇ ಜನರ ಮನರಂಜನೆಯ ಜೀವನಾಡಿಯಾಗಿದ್ದವು. ಆದರೆ ಅವುಗಳ ಪ್ರಭಾವ ಕೇವಲ ಮನರಂಜನೆಗೆ ಸೀಮಿತವಾಗಿರಲಿಲ್ಲ. ಬದುಕಿನ ಸಂಕೀರ್ಣತೆಯ ಬಗ್ಗೆ ತಿಳಿಸುವ ಗುರುವಿನಂತೆ, ಸರಿ ತಪ್ಪುಗಳ ವಿಶ್ಲೇಷಣೆ ಮಾಡುವಂತಹ ವಿವೇಚನೆ ನೀಡುವ ಹಿರಿಯನಂತೆ, ನಮ್ಮ ಮನದಾಳದ ಭೀತಿ, ಬಯಕೆ ಮತ್ತು ಆಕಾಂಕ್ಷೆಗಳನ್ನು ನಮ್ಮ ಮುಂದೆಯೇ ಎತ್ತಿತೋರಿಸುವ ಕನ್ನಡಿಯಂತೆ ಈ ಪುಸ್ತಕಗಳು ಕೆಲಸ ಮಾಡುತ್ತಿದ್ದವು.

ಹೀಗಾಗಿ ನನಗೆ ಈ ಪುಸ್ತಕಗಳೇ ನನ್ನ ಪ್ರಿಯ ಮಿತ್ರನಾಗಿ ತೋರತೊಡಗಿದವು. ಪುಸ್ತಕ ಬಿಟ್ಟರೆ ಬೇರೇನೂ ಬೇಕಾಗುತ್ತಿರಲಿಲ್ಲ. ಈ ನನ್ನ ಗೀಳು ನನ್ನ ವ್ಯಕ್ತಿತ್ವದ ಮೇಲೆ ಅಪರಿಮಿತ ಪರಿಣಾಮ ಬೀರಿತು. ನನ್ನನ್ನು ನಿತ್ಯದ ಜಂಜಡದಿಂದ ಮೇಲೆತ್ತಿ ಒಂದು ಹೊಸದಾದ ಉನ್ನತ ಲೋಕಕ್ಕೆ ಕರೆದೊಯ್ಯತೊಡಗಿದವು. ಆದರೆ ನಾನು ಸಾಮಾಜಿಕ ಜೀವನದಿಂದ ವಿಮುಖನಾಗಿ ನನ್ನ ಕಲ್ಪನಾಲೋಕದಲ್ಲಿಯೇ ಇರತೊಡಗಿದೆ ಎಂದು ನನಗೆ ಅನಿಸುತ್ತದೆ. ಅದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಇಂದಿಗೂ ಪುಸ್ತಕ ತೆರೆದರೆ ಸಾಕು. ನಾನು ನನ್ನ ಸುತ್ತಮುತ್ತಲಿನ ಲೋಕವನ್ನು ಮರೆತು ಬಿಡುತ್ತೇನೆ.

English summary
Sankeshwar Days - part 11 : My friendship with Kannada novels started in Sankeshwar and continued after moving to Belagavi, writes Kannada columnist Vasant Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X