• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕರೆಯನ್ನು ನನ್ನ ಬಾಯಿಗೆ ಸುರಿಯುತ್ತಿದ್ದ ಗುಳಂಬದ ಆಯಿ

By ವಸಂತ ಕುಲಕರ್ಣಿ, ಸಿಂಗಪುರ
|

ಗುಳಂಬ ಎಂದರೆ ಬಾಯಲ್ಲಿ ನೀರೂರುವದು ಸಾಮಾನ್ಯ. ಗುಳಂಬ "ಜಾಮ್" ಎಂಬ ನಾಮ ಧರಿಸಿ ಹೊಸ ಹೊಸ ರೂಪಗಳಿಂದ ಬಣ್ಣ ಬಣ್ಣದ ಗಾಜಿನ ಬಾಟಲಿಗಳಲ್ಲಿ ನಿಂತು ಈಗಿನ ಬಾಲರ ಜಗತ್ತನ್ನು ಆಳುತ್ತಿದೆಯಾದರೂ, ನನಗೆ ನನ್ನ ಚಿಕ್ಕಂದಿನ ಗುಳಂಬ ಎಂದರೆ ವಿಶೇಷವಾದ ಪ್ರೀತಿ.

ಈಗಿನ ಗುಳಂಬ ಬೇರೆ ಬೇರೆ ಸ್ವಾದಗಳಲ್ಲಿ ದೊರಕುತ್ತಿದ್ದರೂ, ಚಿಕ್ಕಂದಿನ ಬೇಸಿಗೆ ಕಾಲದಲ್ಲಿ ವಿಶೇಷವಾಗಿ ಮಾಡಲ್ಪಟ್ಟ ಮಾವಿನಕಾಯಿ ಗುಳಂಬ ಮನದಾಳದಲ್ಲಿ ಸ್ಥಿರವಾಗಿ ನಿಂತುಬಿಟ್ಟಿದೆ. ಇಂದು ದೇಶ ವಿದೇಶಗಳಲ್ಲಿ ತಿರುಗಿ ಹಲವಾರು ಜಾಮ್‍ಗಳ ರುಚಿ ನೋಡಿದ್ದೆನಾದರೂ, ಅಂದಿನ ಆ ವಿಶೇಷ ಗುಳಂಬದ ಮುಂದೆ ಎಲ್ಲವೂ ಸ್ವಾದಹೀನ. ಚಿಕ್ಕಂದಿನ ಆ ಕಥೆಯೂ ಅಷ್ಟೇ ಸ್ವಾದಿಷ್ಟಕರವಾಗಿದೆ.

ಬಾಲ್ಯದ ನೆನಪು: ಕದ್ದ ಎಳನೀರು ಕುಡಿಯದಂತೆ ಮಾಡಿದ ಕಿಲಾಡಿ ಗೆಳೆಯರು

ನಾನು ಚಿಕ್ಕವನಿದ್ದಾಗ ಅಂದರೆ ಸುಮಾರು ಆರೇಳು ವರ್ಷದವನಾಗಿರಬೇಕು. ಅಂದಿನ ದಿನಗಳಲ್ಲಿ ಸಾಮಾನ್ಯವಾದ ಬಿಳಿ ಮತ್ತು ಹಳದಿ ಬಣ್ಣದ ಭರಣಿಗಳಲ್ಲಿ ನನಗಾಗಿಯೇ ಕಾದಿಟ್ಟು, ನಾನು ಅವರ ಮನೆಗೆ ಹೋದಾಗಲೊಮ್ಮೆ ಮೇಲಿನಿಂದ ಕೆಳಗಿಳಿಸಿ ಜೋಳದ ಭಕ್ಕರಿ (ರೊಟ್ಟಿ)ಯ ಜೊತೆಗೆ ಪ್ರೀತಿಯಿಂದ ಬಡಿಸುವ ಜೀವ ಒಂದಿತ್ತು. ಅಂದಿನ ಆ ಜೋಳದ ಭಕ್ಕರಿ ಮತ್ತು ಗುಳಂಬದ ರುಚಿ ಮತ್ತು ಅದನ್ನು ನನಗೆ ಅತ್ಯಂತ ಪ್ರೀತಿಯಿಂದ ಬಡಿಸುತ್ತಿದ್ದ ಆ ಜೀವದ ಮಮತೆ ಇಂದಿನವರೆಗೂ ನನ್ನ ಹೃದಯದಲ್ಲಿ ಜೀವಂತವಾಗಿದೆ ಎಂದರೆ ಬೇರೆಯವರಿಗೆ ಸ್ವಲ್ಪ ಅತಿ ಭಾವುಕತೆ ಎನಿಸಬಹುದು. ಆದರೆ ನನಗೆ ಮಾತ್ರ ಅದು ಪವಿತ್ರ ಸತ್ಯ.

ಚಿಕ್ಕಂದಿನಲ್ಲಿ ಎಲ್ಲರೂ ತಮ್ಮ ಅಜ್ಜ ಅಜ್ಜಿಯ ಮನೆಗೆ ಹೋಗಿ ಸ್ವಚ್ಛಂದದಿಂದ ಗದ್ದಲ ಗಲಾಟೆ ಮಾಡುವುದು ಸಹಜ. ನಾನೂ ಸಹ ಹೋಗುತ್ತಿದ್ದೆ. ಅಂದು ನಾವಿರುತ್ತಿದ್ದ ಊರು ಬಿಜಾಪುರ (ವಿಜಯಪುರ). ಅದೇ ಊರಿನ ಮತ್ತೊಂದು ಬಡಾವಣೆಯಲ್ಲಿ ನನ್ನ ಅಜ್ಜ ಅಜ್ಜಿಯರ ಮನೆ ಇತ್ತು. ನಾವು ಅವರ ಮನೆಗೆ ನೆನಪಾದಾಗಲೊಮ್ಮೆ ಹೋಗುತ್ತಿದ್ದೆವು ಎಂದೇ ನೆನಪು. ಅಂದ ಹಾಗೆ ಈ ಅಜ್ಜ ಅಜ್ಜಿ ನನ್ನ ತಾಯಿಯ ತಂದೆ ಮತ್ತು ತಾಯಿ. ನಾವು ಅವರಿಗೆ ಅಜ್ಜ ಅಜ್ಜಿ ಎಂದು ಕರೆಯುತ್ತಿರಲಿಲ್ಲ. ಅಜ್ಜನಿಗೆ ಮುತ್ತ್ಯಾ ಎಂದು ಕರೆದರೆ ಅಜ್ಜಿಗೆ ಆಯಿ ಎಂದು ಕರೆಯುತ್ತಿದ್ದೆವು.

ನನ್ನ ಶಾಸ್ತ್ರೀಯ ಗಾಯನದ ಮೊದಲ ಗುರು ಮೊಹಮ್ಮದ್ ರಫಿ

ನನ್ನ ತಂದೆಯ ತಾಯಿ ನಮ್ಮ ಜೊತೆಯಲ್ಲಿಯೇ ಇದ್ದಳು. ನನ್ನ ತಂದೆಯ ತಂದೆ ಬಹಳ ಮೊದಲೇ ಕಾಲವಾಗಿದ್ದರು. ಅವರನ್ನು ನೋಡಿದ ನೆನಪು ಸ್ವತಃ ನನ್ನ ತಂದೆಯವರಿಗೇ ಇಲ್ಲ. ಸುಮಾರು ಐದು ವರ್ಷದವರಾಗಿದ್ದಾಗಲೇ ನನ್ನ ಅಜ್ಜ ತೀರಿಕೊಂಡರಂತೆ. ಅಲ್ಲಿಂದ ನನ್ನ ತಂದೆ ಮತ್ತು ಸೋದರತ್ತೆಯನ್ನು ಬೆಳೆಸಿ ದೊಡ್ಡವರನ್ನಾಗಿಸಲು ನನ್ನ ಅಜ್ಜಿ (ತಂದೆಯ ತಾಯಿ) ಪಟ್ಟ ಪಾಡು ಒಂದು ದೊಡ್ಡ ಕಥೆ. ಆದರೆ ನನ್ನ ಚಿಕ್ಕಂದಿನಲ್ಲಿ ಅದೇಕೋ ನನ್ನ ತಂದೆಯ ತಾಯಿಗೆ ನನ್ನನ್ನು ಕಂಡರಾಗುತ್ತಿರಲಿಲ್ಲ. ಚಿಕ್ಕಂದಿನಲ್ಲೇ ವಿಧವೆಯಾಗಿ ಬಡತನದಲ್ಲಿಯೇ ಇಬ್ಬರು ಮಕ್ಕಳನ್ನು ಬೆಳೆಸುವ ಕಷ್ಟ ಹೊತ್ತ ಅವಳಿಗೆ ತಮ್ಮ ಮಗಳು ಮತ್ತು ಅವರ ಮಕ್ಕಳ ಮೇಲೆ ಗೀಳು ಎನಿಸುವಷ್ಟು ಮಮತೆಯಿತ್ತು.

ನನ್ನ ಬಾಯಿ ಸ್ವಲ್ಪ ದೊಡ್ಡದಾಗಿದ್ದರಿಂದ ನಾನು ಸುಮ್ಮ ಸುಮ್ಮನೇ ಅವಳ ಮಗಳ ಮಕ್ಕಳೊಂದಿಗೆ ಜಗಳ ಕಾಯುತ್ತೇನೆ ಎಂಬ ಭಾವನೆ ಅಜ್ಜಿಯಲ್ಲಿ ಬೆಳೆದಿತ್ತು. ಹೀಗಾಗಿ ನನ್ನ ಅಮ್ಮನೊಂದಿಗೆ ನನ್ನನ್ನು ಕುರಿತು ದಿನವೂ ನೂರು ದೂರು. ಅಲ್ಲದೇ ಅಮ್ಮನ ಮೇಲೆಯೇ ನಾನಾ ತರಹದ ಹೀಗಳಿಕೆ. ಹೀಗಾಗಿ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದ ಅಮ್ಮನ ಹತಾಶೆಗೆ ಆರೇಳು ವರ್ಷದ ನಾನು ಬಲಿಪಶುವಾಗುತ್ತಿದ್ದೆ. ನನ್ನ ಪುಣ್ಯವೇನೋ! 1979ರ ಕೊನೆಯಲ್ಲಿ ನನ್ನ ತಂದೆಗೆ ಬೆಳಗಾವಿ ಜಿಲ್ಲೆಗೆ ವರ್ಗವಾಯಿತು. ನನ್ನ ಅಜ್ಜಿ ಬೆಳಗಾವಿಯ ಚಳಿಗೆ ಹೆದರಿ ತಮ್ಮ ಮಗಳ ಮನೆಯಲ್ಲಿಯೇ ಹೆಚ್ಚು ಹೆಚ್ಚು ಉಳಿಯತೊಡಗಿದರು. ಹೀಗಾಗಿ ಸ್ವಲ್ಪ ಮಟ್ಟಿಗೆ ನಾನು ಪಾರಾದೆ ಎನ್ನಬಹುದು. ಆದರೂ ಚಿಕ್ಕಂದಿನ ಈ ಕೆಟ್ಟ ಅನುಭವಗಳಿಂದ ಅದೇನೋ ಹೇಳಿಕೊಳ್ಳಲಾಗದ ಅಂಜಿಕೆ ಮತ್ತು ಹಿಂಜರಿಕೆ ನನ್ನ ಮನದಲ್ಲಿ ಬೇರೂರಿಬಿಟ್ಟಿತು.

ಹಬ್ಬಗಳಿಗೆ ತಳಿರುತೋರಣದಿ ಕಳೆತರುವ ಮಾಮರದ ಜೀವಸ್ವರ

ನನ್ನ ಮುತ್ತ್ಯಾ ಎಂದರೆ ತಾಯಿಯ ತಂದೆ. ಅವರೊಬ್ಬ ಕರ್ಮಜೀವಿ. ಅವರು ಕೆಲಸ ಮಾಡುತ್ತಿದ್ದುದು ವಿಜಯಪುರದ ನಗರ ಸಭೆಯಲ್ಲಿ ಕ್ಲಾರ್ಕ್ ಎಂದು. ತುಂಬಾ ಬಡತನದಲ್ಲಿ ಬೆಳೆದ ಅವರು ತಮ್ಮ ಎಸ್ ಎಸ್ ಎಲ್ ಸಿ ಪಾಸು ಮಾಡಿದ್ದು ತಮ್ಮ ಮಗಳ (ನನ್ನ ತಾಯಿಯ) ಜೊತೆಯಲ್ಲಿ. ಅದೂ ಪ್ರಥಮ ಶ್ರೇಣಿಯಲ್ಲಿ. ಡ್ರೈವಿಂಗ್ ಕಲಿತಿದ್ದರು. ಬಹಳ ಚೆನ್ನಾಗಿ ಈಜುತ್ತಿದ್ದರು. ಹಿಂದುಸ್ತಾನಿ ಸಂಗೀತದಲ್ಲಿ ಸಾಕಷ್ಟು ಪರಿಶ್ರಮವಿತ್ತು. ಚೆನ್ನಾಗಿ ಹಾಡುತ್ತಿದ್ದರಲ್ಲದೇ, ಕೊಳಲನ್ನು ಬಹಳ ಸುಶ್ರಾವ್ಯವಾಗಿ ನುಡಿಸುತ್ತಿದ್ದರು. ಪೌರೋಹಿತ್ಯ ಗೊತ್ತಿತ್ತು. ಸುಂದರವಾಗಿ ರಂಗೋಲಿ ಹಾಕುತ್ತಿದ್ದರು. ಬಟ್ಟೆ ಹೊಲೆಯುವ ಕೆಲಸ ಕೂಡ ಗೊತ್ತಿತ್ತು. ಒಟ್ಟಿನಲ್ಲಿ ಅವರಿಗೆ ಬರದ ವಿದ್ಯೆಗಳೇ ಇರಲಿಲ್ಲ ಎನ್ನಬಹುದು. ಆದರೆ ಅವರಿಗೂ ಕೂಡಾ ನನ್ನನ್ನು ಕಂಡರೆ ಅಷ್ಟಕ್ಕಷ್ಟೆ. ಸಂಸ್ಕೃತ ಸ್ತೋತ್ರ, ಮಂತ್ರಗಳನ್ನೆಲ್ಲ ಕಲಿಯುವುದಲ್ಲದೇ, ಅವರಂತೆಯೇ ಅಚ್ಚುಕಟ್ಟಾಗಿ ಇರುತ್ತಿದ್ದ ನನ್ನಣ್ಣ ಎಂದರೆ ಅವರಿಗೆ ಅಚ್ಚುಮೆಚ್ಚು. ನನ್ನ ಗದ್ದಲ ಗಲಾಟೆಗಳಿಂದ ಬೇಸರಪಟ್ಟು ನನ್ನನ್ನು ದೂರವೇ ಇಡುತ್ತಿದ್ದರು. ಅನೇಕ ಬಾರಿ ನನಗೆ ಅವರಿಂದ ಮಂಗಳಾರತಿಯಾಗುತ್ತಿತ್ತು. ಅವರಿಂದ ಕೂಡ ಪೆಟ್ಟು ತಿಂದ ಹೆಗ್ಗಳಿಕೆ ನನ್ನದಾಗಿತ್ತು.

ನನ್ನ ತಾಯಿಯ ತಾಯಿ ಸೀತಾಬಾಯಿ. ಆದರೆ ಅವಳನ್ನು ಉಳಿದವರು ಬನವ್ವ ಎಂದೇ ಕರೆಯುತ್ತಿದ್ದರು. ಆಯಿ ಹುಟ್ಟಿದ ತಕ್ಷಣ ಅವಳ ತಾಯಿ, ಎಂದರೆ ನನ್ನ ಮುತ್ತಜ್ಜಿ ತೀರಿಕೊಂಡರಂತೆ. ತಾಯಿಯಿಲ್ಲದ ಚಿಕ್ಕ ಮಗುವನ್ನು ಬನಶಂಕರಿ ಎಂದು ತಮ್ಮ ಕುಲದೇವಿಯ ಹೆಸರಿಟ್ಟು, ಸಾಕಿ ಬೆಳೆಸಿದ್ದು ಅವಳ ಚಿಕ್ಕಮ್ಮ. ಆ ಚಿಕ್ಕಮ್ಮನಿಗೆ ಒಬ್ಬ ಮಗನಾದ ಮೇಲೆ ಅವರ ಗಂಡ ತೀರಿಕೊಂಡಿದ್ದರಂತೆ. ತಮ್ಮ ಮಗನ ಜೊತೆ ಈ ತಾಯಿಯಿಲ್ಲದ ಮಗುವನ್ನು ಮಗಳಾಗಿ ಮಾಡಿಕೊಂಡು ತುಂಬಾ ಬಡತನದಲ್ಲಿದ್ದರೂ ಬೆಳೆಸಿ, ಆ ಮಗಳು ದೊಡ್ಡವಳಾದ ಕೂಡಲೇ ತಮ್ಮಂತೆಯೇ ಬಡ ಕುಟುಂಬದ ನನ್ನ ತಾತನಿಗೆ ಕೊಟ್ಟು ಮದುವೆಯನ್ನು ಮಾಡಿದರು. ಕಷ್ಟದಲ್ಲಿಯೇ ಬೆಳೆದು, ಕಷ್ಟದಲ್ಲಿಯೇ ಜೀವನ ಸಾಗಿಸಿದ ನನ್ನ ಈ ಅಜ್ಜಿ ಮಾತ್ರ ಸಾತ್ವಿಕತೆಗೆ ಒಂದು ಮಾದರಿ. ಯಾರಿಗೂ ಯಾವತ್ತೂ ಜೋರಾಗಿ ಒಂದು ಮಾತನ್ನೂ ಕೂಡ ಆಡದ ಈ ಅಜ್ಜಿಯೇ ನನ್ನ ಗುಳಂಬದ ಆಯಿ.

ನಮ್ಮಲ್ಲಿ ಕರ್ಣನೂ ಇದ್ದಾನೆ, ಧರ್ಮನಿಷ್ಠ ವಿದುರನೂ ಇದ್ದಾನೆ

ಬೇರೆಲ್ಲರಿಗೆ ತಲೆಹರಟೆ ಎನಿಸಿದ ನಾನು ಈ ಆಯಿಗೆ ಮಾತ್ರ ಅಚ್ಚುಮೆಚ್ಚು. ಈ ಆಯಿಯ ಮನೆಗೆ ಹೋದರೆ ಆಯಿತು. ಆಯಿ ನನಗೆ ಹುಳಿ ಅನ್ನ, ಜೋಳದ ಭಕ್ಕರಿ ಮತ್ತು ಗುಳಂಬವನ್ನು ತಪ್ಪದೇ ಬಡಿಸುತ್ತಿದ್ದಳು. ನಾನು ದಾಂಧಲೆ ಮಾಡಿ ತಾಯಿಯಿಂದ ಬೈಸಿಕೊಂಡಾಗಲೆಲ್ಲ ಈ ಆಯಿಯೇ ನನ್ನ ರಕ್ಷಣೆಗೆ ಬರುತ್ತಿದ್ದಳು. ನನ್ನ ಮುತ್ತ್ಯಾ ತರುತ್ತಿದ್ದ ಅಲ್ಲೀಪಾಕಿ(ಸಕ್ಕರೆ ಮತ್ತು ಹಸಿ ಶುಂಠಿಯಿಂದ ಮಾಡಿದ ತಿಂಡಿ)ನಲ್ಲಿ ನನಗೆ ಎಲ್ಲರಿಗಿಂತ ದೊಡ್ಡ ತುಂಡು ದೊರಕುತ್ತಿತ್ತು. ಅವಳು ಮಾಡಿಟ್ಟಿರುತ್ತಿದ್ದ ರಾಮನ ಪ್ರಸಾದ (ಗುಳಪಾಟಿ)ದಲ್ಲಿ ಕೂಡ ದೊಡ್ಡ ಪಾಲು ನನ್ನದೇ. ಸದಾ ಮುಗುಳ್ನಗು, ಶಾಂತಿ ಮತ್ತು ಸಹನೆ ತುಂಬಿರುತ್ತಿದ್ದ ಆಯಿಯ ಮುಖ ನನಗೆ ಸಾಂತ್ವನ ನೀಡುತ್ತಿತ್ತು. ಆದರೆ ಆಯಿಗೆ ದಮ್ಮು ಕಾಡುತ್ತಿತ್ತು. ಜೊತೆಗೆ ಅರ್ಥ್ರೈಟಿಸ್ ಕೂಡ. ಬಿಜಾಪುರದ ರಣ ರಣ ಬಿಸಿಲಿನಿಂದ ರಕ್ಷಣೆ ಪಡೆಯಲು ಕಪ್ಪು ಛತ್ರಿಯನ್ನು ಯಾವಾಗಲೂ ತನ್ನೊಂದಿಗೆ ಕೊಂಡೊಯ್ಯುತ್ತಿದ್ದ ನೆನಪು ಗಾಢವಾಗಿ ಇನ್ನೂ ನನ್ನ ಮನದಲ್ಲಿ ಉಳಿದಿದೆ.

ನನಗೆ ಎಂಟು ತುಂಬಿರಬಹುದು. ಆಯಿಗೆ ದಮ್ಮು ಹೆಚ್ಚಾಗಿತ್ತು. ಅಮ್ಮನ ಜೊತೆ ನಾವೆಲ್ಲ ಆಯಿಯ ಮನೆಗೆ ಹೋದೆವು. ಡಾಕ್ಟರು ಮನೆಗೆ ಬಂದು ಆಯಿಯ ಕೈಯ ರಕ್ತನಾಳದಲ್ಲಿ ಇಂಜೆಕ್ಷನ್ ನೀಡುವುದನ್ನು ನೋಡಿ ತುಂಬಾ ಹೆದರಿದ್ದೆ. ಆದರೆ ಎರಡು ಮೂರು ದಿನಗಳ ಮೇಲೆ ಕಾಯಿಲೆ ಉಲ್ಬಣವಾಗಿ ಆಯಿಯನ್ನು ಆಸ್ಪತ್ರೆಗೆ ಸೇರಿಸಿದರು. ಅದೊಂದು ದಿನ ಬೆಳ್ಳಂಬೆಳಗ್ಗೆ ಮನೆಯಲ್ಲಿ ಸೇರಿದ ಅಮ್ಮ, ಅಣ್ಣ, ದೊಡ್ಡಮ್ಮ ಎಲ್ಲಾ ಒಮ್ಮೆಲೇ ರೋಧಿಸತೊಡಗಿದರು. ಸಾಮಾನ್ಯವಾಗಿ ಸ್ಥಿತಪ್ರಜ್ಞರಂತೆ ಇರುತ್ತಿದ್ದ ಮುತ್ತ್ಯಾ ಅವರ ಕಂಗಳಲ್ಲೂ ನೀರು. ಎಲ್ಲರೂ ಅಳತೊಡಗಿದ್ದನ್ನು ನೋಡಿದ ಐದು ವರ್ಷದ ತಂಗಿಯೂ ಕೂಡ ಅಳತೊಡಗಿದಳು. ನನಗೋ ಕಕ್ಕಾಬಿಕ್ಕಿ. ಯಾಕೆ ಹೀಗೆ ಅಳುತ್ತಿದ್ದಾರೆ ಎಂಬುದು ತಿಳಿಯದೆಯೇ ಹಜಾರದ ದೊಡ್ಡ ಹೊಸ್ತಿಲ ಮೇಲೆ ದಿಗಿಲಿನಿಂದ ಕುಳಿತುಕೊಂಡೆ. ಮುಂದೆ ಅದಾರೋ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿದರು ಎಂಬ ನೆನಪು. ಮತ್ತಾರೋ ಯಾರಿಗೋ "ದೇವರು ಒಳ್ಳೆಯ ಜನರನ್ನೇ ಮೊದಲು ಕರೆದುಕೊಂಡು ಹೋಗುತ್ತಾನೆ" ಎಂದು ಹೇಳಿದ ನೆನಪು.

ಮಲೆನಾಡಿನ ಬಾಲ್ಯ ಅಡಕೆ ಹಾಳೆಯ ದೋಣಿಯಂತೆ ಮುಳುಗುವುದೇ ಇಲ್ಲ!

ನನ್ನದೇ ಆಗಿದ್ದ ಒಂದೇ ಒಂದು ಪ್ರೀತಿಯ ಸೆಲೆ ಅಂದು ಬತ್ತಿ ಹೋಗಿತ್ತು ಎಂದು ನನಗೆ ಅರಿವಾಗಿದ್ದು ಒಂದೆರಡು ದಿನಗಳ ಮೇಲೆಯೇ. ಗುಳಂಬದ ಆಯಿ ತನ್ನ ದಾಂಧಲೆಕೋರ ಮೊಮ್ಮಗನನ್ನು ಶಾಶ್ವತವಾಗಿ ಬಿಟ್ಟು ಹೋಗಿದ್ದಳು. ಅವಳ ಸಾತ್ವಿಕ ಪ್ರೀತಿಗಾಗಿ ಸದಾ ಎದುರು ನೋಡುತ್ತಿದ್ದ ನನ್ನ ಎಳೆ ಮನದ ಮೇಲೆ ಅವಳ ಸಾವು ಹೇಳಿಕೊಳ್ಳಲಾಗದಂತಹ ಘಾಸಿ ಮಾಡಿತು.

ವಿಕೃತ ಸ್ವಾತಂತ್ರ್ಯದ ಹುಚ್ಚು ಹೊಳೆಯ ಪ್ರವಾಹದಲ್ಲಿ...

ಸದಾ ಗಲಾಟೆ ಮಾಡಿಕೊಂಡಿರುತ್ತಿದ್ದ ನಾನು ಅನೇಕ ದಿನಗಳವರೆಗೆ ಮಾತು ಕಡಿಮೆ ಮಾಡಿದ್ದೆ. ದುಃಖದಲ್ಲಿ ಮುಳುಗಿದ್ದ ನನ್ನ ಅಮ್ಮ ಮತ್ತು ಇತರರಿಗೆ ಅದರ ಅರಿವಾಗಿತ್ತೋ ಏನೋ ಗೊತ್ತಿಲ್ಲ. ಅದೊಂದು ದಿನ ನನ್ನ ದೊಡ್ಡಮ್ಮನ ಮಗ (ನನಗಿಂತ ನಾಲ್ಕೈದು ವರ್ಷ ದೊಡ್ಡವನು) ನಾವೆಲ್ಲ ಮಕ್ಕಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಗಂಭೀರವಾಗಿ ನಡೆಯುತ್ತಿದ್ದ ನನ್ನನ್ನು ನೋಡಿ ಏನನಿಸಿತೋ, "ವಸಂತ, ಆಯಿ ಎಲ್ಲಿ ಹೋದಳೋ" ಎಂದು ಕೇಳಿದ. ನಾನು ಮಾತನಾಡದೇ ಬೆರಳೆತ್ತಿ ಆಕಾಶದತ್ತ ತೋರಿಸಿ ಮುನ್ನಡೆದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
My ever adorable grand mother and her Gulamba. Vasant Kulkarni from Singapore takes us down the memory lane, narrating his childhood memories where he would get lot of love from his grand mother and never forgettable Gulamb (Mango Jam).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more