ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಶಾಸ್ತ್ರೀಯ ಗಾಯನದ ಮೊದಲ ಗುರು ಮೊಹಮ್ಮದ್ ರಫಿ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಮೊಹಮ್ಮದ್ ರಫಿ ಅವರ ಹೆಸರು ಕೇಳುವುದಕ್ಕಿಂತ ಮುಂಚೆ ನಾನು ಅವರ ಹಾಡುಗಳನ್ನು ಕೇಳಿ ಬಹಳ ಮೆಚ್ಚಿದ್ದೆ ಎಂದು ನನಗನಿಸುತ್ತದೆ. ನಾನು ಚಿಕ್ಕವನಾಗಿದ್ದಾಗ ಒಳ್ಳೆಯ ಹಾಡೊಂದನ್ನು ಕೇಳಿ ಆನಂದಿಸುವುದು ಮತ್ತು ಅದರಂತೆ ಹಾಡಲು ಪ್ರಯತ್ನಿಸುವದಷ್ಟೇ ನನ್ನ ಸ್ವಾಭಾವಿಕ ಗುಣವಾಗಿತ್ತು. ಅದನ್ನು ಯಾರು ಹಾಡಿದರು, ಯಾರು ಸಂಯೋಜಿಸಿದರು ಎಂದು ತಿಳಿಯುವ ಜಿಜ್ಞಾಸು ಭಾವ ಇನ್ನೂ ಮೂಡಿರಲಿಲ್ಲ.

ಮೈಸೂರು ದಸರಾ - ವಿಶೇಷ ಪುರವಣಿ

ಆಗ ಕೇಳಿದ ಹಾಡುಗಳಲ್ಲಿ ನನಗೆ ತುಂಬಾ ಅಚ್ಚುಮೆಚ್ಚಿನ ಹಾಡೆಂದರೆ "ಮಧು ಬನಮೆ ರಾಧಿಕಾ ನಾಚೀರೆ" ಎಂಬ ಹಾಡು. ಈ ಹಾಡನ್ನು ರೇಡಿಯೋದಲ್ಲಿ ಕೆಲವು ಬಾರಿ ಕೇಳಿದ ನೆನಪು. ಅಲ್ಲದೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ ನನ್ನ ತಂದೆ ಈ ಹಾಡನ್ನು ತುಂಬಾ ಮಧುರವಾಗಿ ಹಾಡುತ್ತಿದ್ದರು. ಅನೇಕ ಲಘು ಆಲಾಪಗಳು, ತಾನ್ ಮತ್ತು ತರಾನಾಗಳನ್ನು ಹೊಂದಿದ ಈ ಅದ್ಭುತ ಚಿತ್ರಗೀತೆ ಶಾಸ್ತ್ರೀಯ ಸಂಗೀತದಲ್ಲಿ ನನಗೆ ಹುಟ್ಟಿದ ಅಪಾರ ಆಸಕ್ತಿಯ ಮೊದಲ ಮೆಟ್ಟಿಲೆಂದರೆ ತಪ್ಪೇನಲ್ಲ. ಹಮೀರ್ ರಾಗದ ಈ ಗೀತೆಯನ್ನು ಹಾಡಿದ ಮಹಾನ್ ಗಾಯಕ ಮೊಹಮ್ಮದ್ ರಫಿ ಮತ್ತು ಸಂಗೀತವನ್ನು ಸಂಯೋಜಿಸಿದ್ದು ಮರೆಯಲಾಗದ ಸಂಗೀತ ನಿರ್ದೇಶಕ ನೌಷಾದ್ ಅಲಿ ಎಂದು ನನಗೆ ತಿಳಿದು ಬಂದಿದ್ದು ಬಹಳ ದಿನಗಳ ನಂತರ.

'ನಾನು' ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ, ಮಾಯದ ಪರದೆ!'ನಾನು' ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ, ಮಾಯದ ಪರದೆ!

ಶಾಸ್ತ್ರೀಯ ಗಾಯನದಲ್ಲಿ ಅಪಾರ ಆಸಕ್ತಿ ಹೊಂದಿದ ನನ್ನ ತಂದೆಯ ಅಚ್ಚು ಮೆಚ್ಚಿನ ಸಿನೆಮಾ ಗಾಯಕ ಮೊಹಮ್ಮದ್ ರಫಿ. ಹೀಗಾಗಿ ಅವರು ರಫಿಯವರ ಅನೇಕ ಹಾಡುಗಳನ್ನು ಹಾಡುತ್ತಿದ್ದರು. ಬೈಜು ಬಾವರಾ ಚಿತ್ರದ "ಮನ ತಡಪತ ಹರಿ ದರುಶನ ಕೋ ಆಜ" ಎಂಬ ಮಾಲಕಂಸ ರಾಗದ ಹಾಡನ್ನು ಅನೇಕ ಬಾರಿ ಹಾಡುತ್ತಿದ್ದರು. ಸುವರ್ಣ ಸುಂದರಿ ಚಿತ್ರದಲ್ಲಿನ ಲತಾ ಮಂಗೇಶ್ಕರ್ ಮತ್ತು ಮೊಹಮ್ಮದ ರಫಿಯವರ "ಕುಹೂ ಕುಹೂ ಬೋಲೆ ಕೋಯಲಿಯಾ" ಎಂಬ ಹಾಡನ್ನು ಅತ್ಯದ್ಭುತವಾಗಿ ಹಾಡುತ್ತಿದ್ದರು. ಈಗ ನನ್ನ ತಂದೆಗೆ ಎಪ್ಪತ್ತಾರರ ಇಳಿವಯಸ್ಸು. ಈಗಲೂ ಸುಶ್ರಾವ್ಯವಾಗಿ ಹಾಡುತ್ತಾರೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

 Mohammad Rafi - Golden Voice of Hindi Silver Screen

ನಾನು ಹೈಸ್ಕೂಲಿನಲ್ಲಿದ್ದಾಗ ನಮ್ಮ ಮನೆಗೆ ಒಂದು ನ್ಯಾಷನಲ್ ಪ್ಯಾನಾಸಾನಿಕ್ ಕಂಪನಿ ತಯಾರಿಸಿದ ಟೇಪ್ ರೆಕಾರ್ಡರ್ ಬಂದಿತು. ಸಾಂಪ್ರದಾಯಿಕ ಮನೋಭಾವವುಳ್ಳ ನನ್ನ ತಾಯಿ "ಇನ್ನು ಮುಗಿಯಿತು, ಈ ಹಾಳಾದ ಟೇಪ್ ರೆಕಾರ್ಡರ್‍ ನಲ್ಲಿ ಸುಡುಗಾಡು ಸಿನೆಮಾ ಹಾಡುಗಳನ್ನು ಕೇಳುತ್ತಾ ಕೂಡುವದೇ ಇವರ ಕೆಲಸವಾಗುತ್ತದೆ" ಎಂದು ಅದಕ್ಕೆ ಅನೇಕ ಬಾರಿ ಶಪಿಸಿದ್ದು ನನಗೆ ಇನ್ನೂ ನೆನಪಿದೆ. ಆದರೆ ಈ ಟೇಪ್ ರೆಕಾರ್ಡರ್ ನಮಗೆ ಸಂಗೀತದ ಅನೇಕ ಪ್ರಕಾರಗಳನ್ನು ಪರಿಚಯಿಸಿ ನಮ್ಮ ಅಚ್ಚುಮೆಚ್ಚಿನ ಸಂಗಾತಿಯಾಯಿತು. ಈ ಟೇಪ್ ರೆಕಾರ್ಡರ್ ನೊಂದಿಗೆ ಮೊಹಮ್ಮದ್ ರಫಿಯವರ ಅನೇಕ ಹಾಡುಗಳ ಕ್ಯಾಸೆಟ್ಟುಗಳೂ ಬಂದವು. ಅಲ್ಲಿಯವರೆಗೆ ನಮ್ಮ ತಂದೆಯ ಕಂಠದಲ್ಲಿ ಕೇಳಿದ್ದ ಹಾಡುಗಳಾದ "ಕುಹೂ ಕುಹೂ ಬೋಲೆ ಕೋಯಲಿಯಾ", "ಮನ ತಡಪತ ಹರಿ ದರುಶನಕೋ ಆಜ" ಎಂಬ ಅತ್ಯದ್ಭುತ ಹಾಡುಗಳನ್ನು ಅವುಗಳ ಮೂಲ ಗಾಯಕನ ಧ್ವನಿಯಲ್ಲಿ ಕೇಳುವ ಅವಕಾಶ ಆಗ ದೊರೆಯಿತು.

ಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರಕನ್ನಡ ನೆಲವೆಂಬ ಸಂಗೀತ ದಿಗ್ಗಜಗಳ ಉಗಮ ಸ್ಥಾನಕ್ಕೆ ಸಾಷ್ಟಾಂಗ ನಮಸ್ಕಾರ

ಈ ಹಾಡುಗಳಲ್ಲದೇ ಚಿತ್ರಲೇಖಾ ಚಿತ್ರದ ಯಮನ್ ಕಲ್ಯಾಣ ರಾಗದ "ಮನರೇ, ತು ಕಾಹೆನ ಧೀರ ಧರೇ", ದರ್ಬಾರಿ ರಾಗದ ಮೇಲೆ ಆಧಾರಿತ "ಓ ದುನಿಯಾಕೆ ರಖವಾಲೇ", ಮಧುವಂತಿ ರಾಗದ ಮೇಲೆ ಅಧಾರಿತ "ಅಜಹುನ ಆಯೇ ಬಾಲಮಾ ಸಾವನ ಬೀತಾ ಜಾಯೆ", ತಿಲಂಗ್ ರಾಗದ "ಮನ ಮೋರಾ ಬಾವರಾ", ಭೈರವಿ ರಾಗದ "ನಾಚೆ ಮನ ಮೋರಾ ಮಗನ್" ಮುಂತಾದ ಬೆಲೆ ಕಟ್ಟಲಾಗದ ಚಿತ್ರಗೀತೆಗಳನ್ನು ಕೇಳುವ ಅವಕಾಶ ದೊರೆಯಿತು. ಈ ಎಲ್ಲ ಹಾಡುಗಳನ್ನು ಹಾಡಿದ ಮಹಾನ್ ಗಾಯಕ ಮೊಹಮ್ಮದ್ ರಫಿ. ಇಂತಹ ಹಾಡುಗಳನ್ನು ಕೇಳುತ್ತಾ ಕೇಳುತ್ತಾ ರಫಿ ನನ್ನ ಮನದಾಳದಲ್ಲಿ ಶಾಶ್ವತವಾಗಿ ನಿಂತು ಬಿಟ್ಟರು. ಒಂದು ರೀತಿಯಲ್ಲಿ ಶಾಸ್ತ್ರೀಯ ಗಾಯನದ ಮೊದಲ ಗುರುವಾಗಿಬಿಟ್ಟರು.

 Mohammad Rafi - Golden Voice of Hindi Silver Screen

ನನ್ನ ಇನ್ನೊಂದು ಅತ್ಯಂತ ನೆಚ್ಚಿನ ಹಾಡೆಂದರೆ "ರಾಧಿಕೆ ತುನೆ ಬನ್ಸುರಿ ಚುರಾಯಿ". ರಫಿಯವರ ಅನೇಕ ಹಾಡುಗಳನ್ನು ನಾನು ಕೇಳಿದ್ದರೂ ದರ್ಬಾರಿ ರಾಗದ ಈ ಹಾಡನ್ನು ನಾನು ಅನೇಕ ವರ್ಷಗಳವರೆಗೆ ಕೇಳಿರಲೇ ಇಲ್ಲ. ಆದರೆ ಈ ಹಾಡಿನ ಕನ್ನಡ ಅವತರಣಿಕೆಯಾದ ತಂದೆ ಮಕ್ಕಳು ಚಿತ್ರದ ಎಸ್ ಪಿ ಬಾಲಸುಬ್ರಮಣ್ಯಂ ಹಾಡಿದ "ರಾಧಿಕೆ ನಿನ್ನ ಸರಸ ಇದೇನೇ" ಎಂಬ ಹಾಡನ್ನು ಅನೇಕ ಬಾರಿ ಕೇಳಿದ್ದೆ, ಕೇಳಿ ಬಹಳ ಮೆಚ್ಚಿದ್ದೆ. ನನ್ನ ಕಾಲೇಜಿನ ಗ್ಯಾದರಿಂಗ್ ಒಂದರಲ್ಲಿ ಉತ್ತರ ಭಾರತದ ಸಹಪಾಠಿಯೊಬ್ಬ ರಫಿ ಅವರು ಹಾಡಿದ ಹಿಂದಿ ಆವೃತ್ತಿಯನ್ನು ಹಾಡಿದ ಮೇಲೆಯೇ ನನಗೆ ಅದರ ಬಗ್ಗೆ ಗೊತ್ತಾಗಿದ್ದು. ಅನಂತರ ರಫಿ ಅವರ ಮೂಲ ಹಾಡನ್ನು ಕೂಡ ಅನೇಕ ಬಾರಿ ಕೇಳಿದೆ. ಮೊದಮೊದಲು ನನಗೆ ಮೂಲ ಆವೃತ್ತಿ ಹಿಂದಿಯದೋ ಅಥವಾ ಕನ್ನಡದ್ದೋ ಗೊತ್ತಿರಲಿಲ್ಲ. ಆದರೆ ಗೂಗಲ್ ಗುರು ರಾರಾಜಿಸತೊಡಗಿದ ನಂತರ ರಫಿ ಅವರದ್ದು ಮೂಲ ಹಾಡು ಎಂದು ತಿಳಿಯಿತು. ಆದರೆ ಈಗಲೂ ನನಗೆ ಎಸ್ ಪಿ ಯವರ ಕನ್ನಡ ಹಾಡು ಹೆಚ್ಚು ಚೆನ್ನವೋ ಅಥವಾ ರಫಿ ಅವರ ಹಿಂದಿ ಆವೃತ್ತಿ ಹೆಚ್ಚು ಚೆನ್ನವೋ ಎಂಬುದರ ಕುರಿತು ಗೊಂದಲವಿದೆ.

ಕರ್ನಾಟಕದ ಶೇಕ್ಸ್ ಪಿಯರ್ ಕಂದಗಲ್ ಹನುಮಂತರಾಯರುಕರ್ನಾಟಕದ ಶೇಕ್ಸ್ ಪಿಯರ್ ಕಂದಗಲ್ ಹನುಮಂತರಾಯರು

ಇಂತಹ ಚಿನ್ನದ ಕಂಠದ ಮೊಹಮ್ಮದ್ ರಫಿ ಅವರು, ಚಿಕ್ಕಂದಿನಲ್ಲಿ ಸೂಫಿ ದೇವರ ನಾಮಗಳನ್ನು ಬೀದಿಯಲ್ಲಿ ಹಾಡುತ್ತಾ ತಿರುಗುತ್ತಿದ್ದ ಒಬ್ಬ ಕುರುಡ ಫಕೀರನಿಂದ ತುಂಬಾ ಪ್ರಭಾವಿತರಾಗಿದ್ದರಂತೆ. ಆ ಫಕೀರನ ಹಾಡುಗಳನ್ನು ಕೇಳುತ್ತಾ ಅವನ ಹಿಂದೆಯೇ ತಿರುಗುತ್ತಿದ್ದರಂತೆ. ಅಷ್ಟೇ ಅಲ್ಲದೇ, ಮನೆಗೆ ಬಂದ ನಂತರ ಈ ಫಕೀರನ ಹಾಡುಗಳನ್ನು ಅನುಕರಿಸಿ ಸುಂದರವಾಗಿ ಹಾಡುತ್ತಿದ್ದರಂತೆ. ಕೇವಲ ಏಳು ವರ್ಷದ ರಫಿ ಅವರ ಈ ಹಾಡುಗಳನ್ನು ಕೇಳುತ್ತಿದ್ದ ಅವರ ಚಿಕ್ಕಪ್ಪ ಹಮೀದ್ ಸಾಹಬ್ ಮತ್ತು ಅವರ ಅಣ್ಣ ಮೊಹಮ್ಮದ್ ದೀನ್ ಆಶ್ಚರ್ಯಚಕಿತರಾಗುತ್ತಿದ್ದರಂತೆ. ಅವರೇ ರಫಿ ಅವರ ತಂದೆಯ ಮನವೊಲಿಸಿ ರಫಿ ಅವರ ಸಂಗೀತ ಜೀವನಕ್ಕೆ ಭದ್ರ ಬುನಾದಿ ಹಾಕಿದರಂತೆ. ಬಹುಶಃ ಅದಕ್ಕೇ ಇರಬೇಕು ಅವರ ಕಂಠದಲ್ಲಿ ಬೇರೆಲ್ಲ ಗೀತೆಗಳಿಗಿಂತ ಭಕ್ತಿಗೀತೆಗಳು ಹೆಚ್ಚು ಅಪ್ಯಾಯಮಾನವಾಗಿದ್ದವು. "ಮನ ತಡಪತ ಹರಿ ದರುಶನ ಕೋ" ಗೀತೆ ಇದರ ಅತ್ಯಂತ ಪ್ರಭಾವಿ ನಿದರ್ಶನ.

 Mohammad Rafi - Golden Voice of Hindi Silver Screen

ಮುಂದೆ ರಫಿ ಸಂಗೀತ ಕಲಿತು ಕೇವಲ ಹದಿಮೂರನೆಯ ವಯಸ್ಸಿನಲ್ಲಿ ಪ್ರಸಿದ್ಧ ಕುಂದನ್ ಲಾಲ್ ಸೆಹಗಲ್ ಅವರ ಸಮ್ಮುಖದಲ್ಲಿ ಮೊದಲ ಸಾರ್ವಜನಿಕ ಕಾರ್ಯಕ್ರಮ ನೀಡಿದರು. ಇಪ್ಪತ್ತನೆಯ ವಯಸ್ಸಿನಲ್ಲಿ ಪಂಜಾಬಿ ಚಲನಚಿತ್ರ ಗುಲ್ ಬಲೋಚ್‍ನಿಂದ ತಮ್ಮ ಹಿನ್ನೆಲೆ ಗಾಯನದ ಜೀವನವನ್ನು ಆರಂಭಿಸಿದರು ಮತ್ತು ಅದರ ಮುಂದಿನ ವರ್ಷದಲ್ಲಿ ಗಾಂವ್ ಕಿ ಗೋರಿ ಚಿತ್ರದಿಂದ ಹಿಂದಿ ಹಿನ್ನೆಲೆ ಗಾಯಕರಾಗಿ ಹೊರಹೊಮ್ಮಿದರು. ಅದೇ ವರ್ಷ ಅವರು ಮಹಾನ್ ಸಂಗೀತಕಾರ ನೌಷಾದ್ ಅಲಿ ಅವರನ್ನು ಭೆಟ್ಟಿ ಮಾಡಿದರು. ಮುಂದೆ ಅದೆಂತಹ ಭವ್ಯ ಇತಿಹಾಸ ರಚನೆಯಾಯಿತು ಎಂದು ಬೇರೆಯಾಗಿ ಹೇಳಬೇಕಾಗಿಲ್ಲ ಅಲ್ಲವೇ?

English summary
Mohammad Rafi - Golden Voice of Hindi Silver Screen. Mohammad Rafi was an Indian playback singer and one of the most popular and successful singers of the Hindi film industry. Vasant Kulkarni how he was mesmerized by the singers voice in his childhood days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X