ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡಿ ನಿರಾಶೆಗೊಳಿಸಿ ಬೆರುಗು ಮೂಡಿಸಿದ ಮೆರಾಪಿ ಜ್ವಾಲಾಮುಖಿ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

Recommended Video

ಇಂಡೋನೇಷ್ಯಾದ ಯೋಗ್ಯಕರ್ತಾ ಬಳಿ ಅದ್ಬುತ ಮೆರಾಪಿ ಪರ್ವತ ಜ್ವಾಲಾಮುಖಿ

ನನಗೆ ಚಿಕ್ಕಂದಿನಿಂದ ಜ್ವಾಲಾಮುಖಿ ಪರ್ವತಗಳೆಂದರೆ ಅದೇನೋ ಭಯ ಮತ್ತು ಎಳೆತ. ಚಂದಮಾಮದ ಧೂಮಕೇತು, ಜ್ವಾಲಾದ್ವೀಪ ಮುಂತಾದ ರೋಚಕ ಧಾರಾವಾಹಿಗಳಲ್ಲಿ ಆಗಾಗ್ಗೆ ಈ ಜ್ವಾಲಾಮುಖಿ ಪರ್ವತಗಳೂ ಕಂಡು ಬರುತ್ತಿದ್ದವು.

ಅಕಸ್ಮಾತ್ತಾಗಿ ಸಿಟ್ಟಿಗೆದ್ದು ಒಮ್ಮೆಲೇ ಸ್ಫೋಟಿಸಿ ತನ್ನ ಸುತ್ತಮುತ್ತಲಿನ ಜನರಲ್ಲಿ ಸಾವುನೋವುಗಳನ್ನುಂಟು ಮಾಡುತಿದ್ದುದಲ್ಲದೇ ಅವರ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದ್ದ ಈ ಜ್ವಾಲಾಮುಖಿ ಪರ್ವತಗಳ ಕಥೆಗಳ ಬಗ್ಗೆ ಅತ್ಯಂತ ಕುತೂಹಲದಿಂದ ಓದುತ್ತಿದ್ದೆ. ಕ್ರಮೇಣ ಜ್ವಾಲಾಮುಖಿಗಳ ಬಗ್ಗೆ ಇದ್ದ ನನ್ನ ಕುತೂಹಲ ಅವುಗಳ ಕುರಿತಾಗಿ ಇರುವ ದಂತಕಥೆಗಳು ಮತ್ತು ನಂಬಿಕೆಗಳ ಬಗ್ಗೆ ಓದುವ, ಅಭ್ಯಸಿಸುವ ಖಯಾಲಿಯಾಗಿ ಮಾರ್ಪಟ್ಟಿತು.

ಜಪಾನ್ ಜರ್ಮನಿಯಂತೆ ಆಗಲು ಭಾರತಕ್ಕೇಕೆ ಸಾಧ್ಯವಾಗಿಲ್ಲ?ಜಪಾನ್ ಜರ್ಮನಿಯಂತೆ ಆಗಲು ಭಾರತಕ್ಕೇಕೆ ಸಾಧ್ಯವಾಗಿಲ್ಲ?

ತೀರ ಇತ್ತೀಚೆಗೆ (ಮೇ 11, 2018 ರಂದು) ಇಂಡೋನೇಶಿಯಾದ ಅತ್ಯಂತ ಸಕ್ರಿಯ ಜ್ವಾಲಾಮುಖಿ "ಮೆರಾಪಿ" ಪರ್ವತ ಬೆಂಕಿ ಉಗುಳತೊಡಗಿದಾಗ ಅದನ್ನೊಮ್ಮೆ ನೋಡಲು ಏಕೆ ಹೋಗಬಾರದು ಎಂಬ ವಿಚಾರ ಮನದಲ್ಲಿ ಮೂಡಿತು.

ಮೆರಾಪಿ ಇರುವುದು ಇಂಡೋನೇಶಿಯಾದ ಪುರಾತನ ನಗರ ಯೋಗ್ಯಕರ್ತಾದ ಹತ್ತಿರ. ಯೋಗ್ಯಕರ್ತಾ ನಗರ ತನ್ನ ಪುರಾತನ ಹಿಂದೂ ಮತ್ತು ಬೌದ್ಧ ಸಂಸ್ಕೃತಿಗಳ ಪ್ರತೀಕಗಳೆನಿಸಿದ "ಪ್ರಾಂಬನಾನ್" ಮತ್ತು "ಬೊರೋಬುದುರ್" ದೇವಾಲಯಗಳಿಗೆ ಹೆಚ್ಚು ಪ್ರಸಿದ್ಧ. ಅವುಗಳನ್ನು ನೋಡಲು ಕೂಡ ಹೋಗುವ ಇಚ್ಛೆ ಇತ್ತು. ಆದರೆ ಅವುಗಳಿಗಿಂತ ಹೆಚ್ಚು ಎಳೆತವಿದ್ದದ್ದು "ಮೆರಾಪಿ" ಪರ್ವತದ ಕಡೆಗೇ.

ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ!ದೊಡ್ಡ ಕನಸು ಕಾಣುವವರಿಗೆ ಅಲ್ಪತನ ಇರುವುದಿಲ್ಲ!

ಮೆರಾಪಿ ಇಂಡೋನೇಶಿಯಾದ ಜಾವಾ ದ್ವೀಪದ ಜನರಿಗೆ, ಅದರಲ್ಲೂ ಯೋಗ್ಯಕರ್ತಾ ಪ್ರದೇಶದ ಜನರಿಗೆ ಒಂದು ಪವಿತ್ರ ಪರ್ವತ. ಅದು ಉತ್ತರ ದಕ್ಷಿಣ ದಿಕ್ಕುಗಳನ್ನು ಜೋಡಿಸುವ ಒಂದು ಕಾಲ್ಪನಿಕ ಸರಳ ರೇಖೆಯ ಉತ್ತರ ತುದಿಯಲ್ಲಿದೆ. ಈ ಕಾಲ್ಪನಿಕ ಸರಳ ರೇಖೆ ಮೆರಾಪಿ ಪರ್ವತ, ಯೋಗ್ಯಕರ್ತಾದ ಸುಲ್ತಾನರ ಅರಮನೆ ಮತ್ತು ದಕ್ಷಿಣದಲ್ಲಿರುವ ಹಿಂದೂ ಮಹಾಸಾಗರಗಳನ್ನು ಜೋಡಿಸುತ್ತದೆ.

ರಾಜ, ಜನರ ನಡುವಿನ ಸಾಮರಸ್ಯದ ಸಂಕೇತ

ರಾಜ, ಜನರ ನಡುವಿನ ಸಾಮರಸ್ಯದ ಸಂಕೇತ

ಈ ರೇಖಾಚಿತ್ರವನ್ನು ಯೋಗ್ಯಕರ್ತಾದಲ್ಲಿರುವ ಸುಲ್ತಾನ ಅರಮನೆ (ಕ್ರಾಟೋನ್ ಅರಮನೆ)ಯಲ್ಲಿ ಇಂದಿಗೂ ನೋಡಬಹುದು. ಅವರ ನಂಬಿಕೆಯ ಪ್ರಕಾರ ಈ ಕಾಲ್ಪನಿಕ ರೇಖೆ ಸೃಷ್ಟಿಕರ್ತ ಭಗವಂತ, ಯೋಗ್ಯಕರ್ತಾದ ರಾಜ ಮತ್ತು ಯೋಗ್ಯಕರ್ತಾದ ಜನರ ನಡುವಿನ ಸೌಹಾರ್ದಯುತ ಸಂಬಂಧದ ಪ್ರತೀಕ. ಮೆರಾಪಿ ಅಗ್ನಿಯ ಪ್ರತೀಕವಾದರೆ, ದಕ್ಷಿಣದ ಸಮುದ್ರ ನೀರಿನ ಪ್ರತೀಕ. ಈ ಅಗ್ನಿ ಮತ್ತು ಜಲಗಳ ಮಧ್ಯೆ ಇರುವ ಕ್ರಾಟೋನ್ ಅರಮನೆ ಭೂಮಿ ತತ್ವದ ಪ್ರತೀಕವಾಗಿ ಅಗ್ನಿ ಮತ್ತು ಜಲ ತತ್ವಗಳ ಸಾಮರಸ್ಯವನ್ನು ಕಲ್ಪಿಸುವ ಪ್ರಮುಖ ಕೊಂಡಿಯಾಗಿ ವರ್ತಿಸುತ್ತದೆ. ಈ ಬಲವಾದ ನಂಬಿಕೆಯಿಂದ ಇಂದಿಗೂ ಯೋಗ್ಯಕರ್ತಾ ಪ್ರಜೆಗಳು ತಮ್ಮ ರಾಜಮನೆತನವನ್ನು ಗೌರವಾದರಗಳಿಂದ ನೋಡುತ್ತಾರೆ. ಇಂಡೋನೇಶಿಯಾದ ಇತರ ಪ್ರದೇಶಗಳಲ್ಲಿ ಗವರ್ನರ್ ಆಡಳಿತಾಧಿಕಾರಿಯಾದರೆ, ಯೋಗ್ಯಕರ್ತಾ ಪ್ರದೇಶದಲ್ಲಿ ಮಾತ್ರ ಇಂದಿಗೂ ಸುಲ್ತಾನರೇ ರಾಜ್ಯಾಧಿಕಾರಿ.

ಕೃಪೆ

ಮೆರಾಪಿ ಎಂಬ ಪವಿತ್ರ ಅಗ್ನಿಪರ್ವತ

ಮೆರಾಪಿ ಎಂಬ ಪವಿತ್ರ ಅಗ್ನಿಪರ್ವತ

ಪ್ರದೇಶದ ಜನರ ಮನದಲ್ಲಿ 'ಮೆರಾಪಿ' ತಮ್ಮನ್ನು ರಕ್ಷಿಸುವ ಒಂದು ಪವಿತ್ರ ಪರ್ವತ. 'ಮೆರಾಪಿ' ಮತ್ತು ಅದರಲ್ಲಿ ವಾಸಿಸುವ ಅತಿಮಾನುಷ ಚೇತನಗಳು ತಮ್ಮನ್ನು ಸದಾಕಾಲಕ್ಕೂ ರಕ್ಷಿಸುತ್ತವೆ ಎಂಬುದು ಅವರ ಬಲವಾದ ನಂಬಿಕೆ. ಇಂದಿಗೂ ಪ್ರತಿ ವರ್ಷ ಅಲ್ಲಿ ಪರ್ವತ ಮತ್ತು ಅದರ ಚೇತನಗಳನ್ನು ಸಂತುಷ್ಟಗೊಳಿಸುವ ಅನೇಕ ಕ್ರಿಯಾವಿಧಿಗಳನ್ನು ಅಲ್ಲಿನ ಜನರು ನಡೆಸುತ್ತಾರೆ. ಯೋಗ್ಯಕರ್ತಾದ ಸುಲ್ತಾನರಿಂದ ನಿಯಮಿಸಲ್ಪಟ್ಟ ಅಸಿಹ ಲುರಾ ಸುರಾಕ್ಸೊ ಸಿಹೋನೋ ಮೆರಾಪಿ ಪರ್ವತ ಪ್ರದೇಶದ ಅಧ್ಯಾತ್ಮಿಕ ರಕ್ಷಕ. ಅವರ ತಂದೆ ಮಂಬಾ ಮರಿದ್ಜಾನ್ ಎಂಬ ಅನುಭಾವಿ.

ಮಂಬಾ ಮರಿದ್ಜಾನ್ ಬಗ್ಗೆ ಅಪಾರ ಗೌರವ

ಮಂಬಾ ಮರಿದ್ಜಾನ್ ಬಗ್ಗೆ ಅಪಾರ ಗೌರವ

ಅವರು ಮೆರಾಪಿಯ 2010ರ ಸ್ಫೋಟದಲ್ಲಿ ತೀರಿಕೊಂಡರು. ಅವರು ಅನೇಕರ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ತಮ್ಮ ಪ್ರೀತಿಯ ಪರ್ವತದ ಹತ್ತಿರವೇ ಉಳಿದುಕೊಂಡರು ಮತ್ತು ಅದರಲ್ಲಿ ಲೀನವಾದರು. ಅವರ ಬಗ್ಗೆ ಯೋಗ್ಯಕರ್ತಾದಲ್ಲಿ ಬಹಳ ಗೌರವ. ಅವರು ಮೆರಾಪಿಯ ಅನೇಕ ರಹಸ್ಯಗಳನ್ನು ಬಲ್ಲ ಅನುಭಾವಿಯಾಗಿದ್ದರು ಮತ್ತು ಅವರ ಬಳಿ ಮೆರಾಪಿಯ ಜೊತೆ ಮತ್ತು ಅಲ್ಲಿನ ಚೇತನಗಳ ಜೊತೆ ಸಂಪರ್ಕ ಮಾಡುವ ಶಕ್ತಿಯಿತ್ತು ಎಂಬುದು ಅಲ್ಲಿನ ಜನರ ಪ್ರಬಲ ನಂಬಿಕೆ.

ಯೋಗ್ಯಕರ್ತಾದ ಜನರ ಇಂತಹ ನಂಬಿಕೆಗಳನ್ನು ಭಗ್ನಗೊಳಿಸಲು ಇಂಡೋನೇಶಿಯಾವನ್ನು ವಸಾಹತುಗೊಳಿಸಿದ ಡಚ್ಚರು ಅನೇಕ ಪ್ರಯತ್ನಗಳನ್ನು ಮಾಡಿ ವಿಫಲರಾದರಂತೆ. ಜಾವಾದ ಜನರ ತಮ್ಮ ಮೆರಾಪಿಯ ಮೇಲಿನ ನಂಬುಗೆ ಸಾಂಸ್ಕೃತಿಕವಾಗಿ ಬೇರೂರಿದ್ದು ಇನ್ನೂ ಬಲವಾಗಿದೆ, ಪೂಜನೀಯವಾಗಿದೆ. ಅಂತಹ ಭವ್ಯ ಮೆರಾಪಿ ಪರ್ವತದ ಮೊತ್ತ ಮೊದಲ ವಿಹಂಗಮ ದರ್ಶನವಾದದ್ದು 15 ಜೂನ್ ರಂದು, ಪ್ರಾಂಬನಾನ್ ದೇವಸ್ಥಾನದ ಪ್ರಾಂಗಣದಿಂದ. ಸುಮಾರು ಮೂವತ್ತು ಕಿಲೋಮೀಟರ್ ದೂರದಿಂದ ನನಗೆ 'ಮೆರಾಪಿ' ದರ್ಶನವಿತ್ತದ್ದು ಹೀಗೆ.

ಕೃಪೆ

ಮೆರಾಪಿ ಮೆರ್ಬಾವು ಸಹೋದರ ಪರ್ವತಗಳು

ಮೆರಾಪಿ ಮೆರ್ಬಾವು ಸಹೋದರ ಪರ್ವತಗಳು

ಅದರಿಂದ ಹೊರಡುವ ಹೊಗೆಯನ್ನು ಈ ಛಾಯಾಚಿತ್ರದಲ್ಲಿ ಸ್ಪಷ್ಟವಾಗಿ ಕಾಣಬಹುದು. ಮರುದಿನ ಬೆಳ್ಳಂಬೆಳಗ್ಗೆ ಸೂರ್ಯೋದಯ ದರ್ಶನ ಮಾಡಲು ನಾವು ಬೋರೊಬುದುರ್ ದೇವಸ್ಥಾನಕ್ಕೆ ಹೋದಾಗ ಅಸಲಿಗೆ ಸೂರ್ಯೋದಯವಾಗುವುದು ಮೆರಾಪಿ ಮತ್ತು ಅದರ ಸಹೋದರ ಪರ್ವತವಾದ ಮೆರ್ಬಾವು ಪರ್ವತಗಳ ನಟ್ಟ ನಡುವೆ ಎಂಬ ಕಲ್ಪನೆಯೂ ನನಗಿರಲಿಲ್ಲ. ಬೋರೊಬುದುರ್ ದೇವಸ್ಥಾನದ ಮೇಲಂತಸ್ತಿನಿಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿರುವ ಸಹೋದರ ಪರ್ವತಗಳು ನಮಗೆ ಕಂಡು ಬಂದದ್ದು ಹೀಗೆ:

ಮಂತ್ರಮುಗ್ಧವಾಗಿಸಿದ ಕರಕಲಾದ ಕಣಿವೆ

ಮಂತ್ರಮುಗ್ಧವಾಗಿಸಿದ ಕರಕಲಾದ ಕಣಿವೆ

ಅದೇ ಮಧ್ಯಾಹ್ನ ನಾವು ಮೆರಾಪಿಯನ್ನು ನೋಡಲು ಅದರ ಬುಡಕ್ಕೆ ಹೊರಟೆವು. ಮಧ್ಯಾಹ್ನದ ಸುಮಾರು ಎರಡು ಗಂಟೆಗೆ ಅಲ್ಲಿ ತಲುಪಿದೆವು. ಬೇಸ್ ಕ್ಯಾಂಪ್ ತುಂಬಾ ಆಹ್ಲಾದಕರವಾಗಿತ್ತು. ಮೋಡಗಳು ಮತ್ತು ಸೂರ್ಯನ ನಡುವಿನ ಚೆಲ್ಲಾಟದಲ್ಲಿ ಸುತ್ತಮುತ್ತಲಿನ ದೃಶ್ಯಗಳು ಮನಮೋಹಕವಾಗಿದ್ದವು. ಹಚ್ಚ ಹಸುರಿನಿಂದ ಆವೃತವಾದ ಪರ್ವತಗಳು, ಲಾವಾ ಹರಿದುಹೋಗಿ ಕರಕಲಾಗಿರುವ ಕಣಿವೆಗಳು ನಮ್ಮನ್ನು ಮುಗ್ಧರನ್ನಾಗಿಸಿದವು.

ಮೋಡಗಳ ನಡುವೆ ಹುದುಗಿಹೋಗಿದ್ದ ಪರ್ವತ

ಮೋಡಗಳ ನಡುವೆ ಹುದುಗಿಹೋಗಿದ್ದ ಪರ್ವತ

ಆದರೆ ಮೆರಾಪಿಯ ಭವ್ಯದರ್ಶನಕ್ಕೆ ತುಡಿತರಾಗಿದ್ದ ನಮಗೆ ಅದು ಕಾಣಿಸಲೇ ಇಲ್ಲ. ಮೋಡಗಳ ನಡುವೆ ಹುದುಗಿಹೋಗಿತ್ತು. ಇಷ್ಟು ಹತ್ತಿರದಿಂದ ಅದೆಷ್ಟು ಭವ್ಯವಾಗಿ ಕಾಣಬಹುದು ಎಂಬ ಕುತೂಹಲಪೀಡಿತರಾದ ನಮಗೆ ಅದರ ದರ್ಶನವಾಗದಿದ್ದುದು ನಿರಾಸೆ ಉಂಟುಮಾಡಿತು. ಹೀಗಾದದ್ದು ಮೊದಲ ಬಾರಿಯೇನಲ್ಲ. 2001ರಲ್ಲಿ ಜಪಾನಿನ ಫುಜಿ ಪರ್ವತದ ಬೇಸ್ ಕ್ಯಾಂಪಿಗೆ ಹೋದಾಗಲೂ ಹೀಗೆಯೇ ಆಗಿತ್ತು!

ಮೆರಾಪಿಯ ಸುಂದರ ದರ್ಶನ ನಮಗಾಗಲೇ ಇಲ್ಲ

ಮೆರಾಪಿಯ ಸುಂದರ ದರ್ಶನ ನಮಗಾಗಲೇ ಇಲ್ಲ

ಬುಡದಲ್ಲಿ ನಿಂತು, ಮೆರಾಪಿ ಅದು ಇಷ್ಟೆತ್ತರವಾಗಿರಬಹುದು, ಹೀಗೆ ಕಾಣುತ್ತಿರಬಹುದು ಎಂದು ಕಲ್ಪನೆ ಮಾಡುತ್ತಿದ್ದೆವು. ನಮ್ಮ ಕಾರಿನ ಡ್ರೈವರ್ ಅದು ನಾವು ಮಾಡುತ್ತಿದ್ದ ಕಲ್ಪನೆಗಿಂತ ಹೆಚ್ಚು ಎತ್ತರವಾಗಿ ಕಾಣುತ್ತದೆ ಎಂದಾಗ ನಮಗೆ ನಂಬಿಕೆಯಾಗಲಿಲ್ಲ. ಇನ್ನೇನು ಅಲ್ಲಿಂದ ಹೊರಡಬೇಕು ಎಂದು ತಯಾರಾದಾಗ ಮೋಡಗಳ ನಡುವಿನ ಅದರ ಒಂದು ಝಲಕ್ ಒಂದು ಕ್ಷಣಕ್ಕೆ ಮಾತ್ರ ನಮಗೆ ಕಾಣ ಸಿಕ್ಕಿತು.

ಮೆರಾಪಿಯ ಸ್ಪಷ್ಟ ಸುಂದರ ದರ್ಶನ ನಮಗಾಗಲೇ ಇಲ್ಲ. ಬಹುಶಃ ಅಲ್ಲಿನ ಪವಿತ್ರಾತ್ಮಗಳಿಗೆ ನಮ್ಮ ಮೇಲೆ ಕರುಣೆ ಬರಲಿಲ್ಲ ಎಂದು ಕಾಣುತ್ತದೆ. ಸ್ವಲ್ಪ ನಿರಾಸೆಯಿಂದಲೇ ಕೆಳಗಿಳಿದೆವು. ಆದರೂ ನಮಗೆ ಅಲ್ಲಿ ಪ್ರಕೃತಿ ದೇವತೆಯ ಸೌಂದರ್ಯ ಮತ್ತು ಪ್ರಕೋಪಗಳ ವೈರುಧ್ಯಗಳ ಪರಿಚಯವಾಯಿತು. ಜ್ವಾಲಾಮುಖಿಯ ಪ್ರಕೋಪಕ್ಕೆ ಸಿಲುಕಿದ ಅಲ್ಲಿನ ಭಗ್ನ ಮನೆಯೊಂದನ್ನು ಈಗ ಒಂದು ಚಿಕ್ಕ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಿದ್ದಾರೆ. ಅಲ್ಲಿ ಕಂಡು ಬಂದ ದೃಶ್ಯಗಳು ನಮ್ಮ ಕಣ್ಣು ತೆರೆಸಿದವು ಎಂದರೆ ಅತಿಶಯೋಕ್ತಿಯೇನಲ್ಲ.

ದುರಂತಕ್ಕೆ ಮೂಕ ಸಾಕ್ಷಿಯಾಗಿರುವ ಗಡಿಯಾರ

ದುರಂತಕ್ಕೆ ಮೂಕ ಸಾಕ್ಷಿಯಾಗಿರುವ ಗಡಿಯಾರ

ನವೆಂಬರ್ 5, 2010ರ ರಾತ್ರಿ ಸರಿಯಾಗಿ ಹನ್ನೆರಡು ಗಂಟೆ ಐದು ನಿಮಿಷಕ್ಕೆ ಸ್ಫೋಟಿಸಿದ ಜ್ವಾಲಾಮುಖಿಯ ಪ್ರಕೋಪಕ್ಕೆ ಈ ಮನೆ ತುತ್ತಾಯಿತು. ಮನೆಯಲ್ಲಿನ ಪಶುಪಕ್ಷಿಗಳು ಬಲಿಯಾದವು. ಸುತ್ತಮುತ್ತಲಿನ ಸಾವಿರಾರು ಜನ ಗಾಯಗೊಂಡರು. ನಡುರಾತ್ರಿಯಾದದ್ದರಿಂದ ಅನೇಕ ಜನರು ತೀರಿಕೊಂಡರು. ಮೇಲಿನ ಛಾಯಾಚಿತ್ರದಲ್ಲಿ ಕಂಡಹಾಗೆ ಮನೆಯ ಗಡಿಯಾರ ರಾತ್ರಿ 12:05ಕ್ಕೆ ನಿಂತಿದ್ದು, ಈ ಘಟನೆಗೆ ದುರಂತಕ್ಕೆ ಮೂಕ ಸಾಕ್ಷಿಯಾಗಿದೆ.

ಅದೋ, ಅಲ್ಲಿ ನೋಡಿ, ನಿಮ್ಮ ಪ್ರೀತಿಯ ಮೆರಾಪಿ

ಅದೋ, ಅಲ್ಲಿ ನೋಡಿ, ನಿಮ್ಮ ಪ್ರೀತಿಯ ಮೆರಾಪಿ

ಜೂನ್ 18ರಂದು ನಾವು ಸಿಂಗಪುರಕ್ಕೆ ಮರಳಲು ವಿಮಾನವೇರಿದೆವು. ವಿಮಾನ ಏರುವ ಮುಂಚೆ ಬೆಳ್ಳಂಬೆಳಗ್ಗೆ ಚೆನ್ನಾಗಿ ಬಿಸಿಲಿದ್ದು ಮೋಡಗಳು ಸ್ವಲ್ಪವೂ ಇರಲಿಲ್ಲ. ಆಕಾಶ ಕಡು ನೀಲಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಮನದಲ್ಲಿ "ಛೆ, ನಿನ್ನೆಯ ದಿನ ಹೀಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು?" ಎಂದು ಅಂದುಕೊಂಡೆ. ಸ್ವಲ್ಪ ಹೊತ್ತಿನಲ್ಲಿ ವಿಮಾನ ಆಕಾಶಕ್ಕೆ ನೆಗೆದು ಸಿಂಗಪುರದತ್ತ ಮುಖ ಮಾಡಿತು. ಕಿಟಿಕಿಯ ಬಳಿ ಕುಳಿತಿದ್ದ ನನ್ನ ಮಡದಿ, "ಅದೋ, ಅಲ್ಲಿ ನೋಡಿ, ನಿಮ್ಮ ಪ್ರೀತಿಯ ಮೆರಾಪಿ" ಎಂದು ಕೈ ಮಾಡಿ ತೋರಿಸಿದಳು. ಹೊರಗೆ ನೋಡಿದರೆ ಮೆರಾಪಿ ದೇದೀಪ್ಯಮಾನವಾಗಿ ನಸುನಗುತ್ತ ನಮಗೆ ವಿದಾಯ ಹೇಳುತ್ತಿತ್ತು.

English summary
Mesmerising Merapi Volcano in Indonesia. The country had raised alert in May 2018 when Mount Merapi erupted. Travelogue by Vasant Kulkarni, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X