ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರೂಸ್ ಲೀ ಅಭಿಮಾನಿ ಶ್ರೀಧರ ಕಟ್ಟಿ, ಮನಸಿನಲ್ಲಿ ಹಸಿರಾಗುಳಿದ ಅಮದ್ಯಾ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಸಂಕೇಶ್ವರದಲ್ಲಿ ನಾವಿದ್ದುದು ಸುಮಾರು ಮೂರೂವರೆ ವರ್ಷ. 1979ರ ಡಿಸೆಂಬರ್ ನಿಂದ 1983ರ ಜೂನ್ ವರೆಗೆ. ಇದರಲ್ಲಿ ಮೊದಲ ಏಳೆಂಟು ತಿಂಗಳು ಮಾತ್ರ ನಾವು ಮಠ ಗಲ್ಲಿಯಲ್ಲಿದ್ದೆವು. ನಂತರ ಬಸವನ ಗಲ್ಲಿಯ ಅಂಬಲಿಮಠ ಅವರ ಮನೆಗೆ ಬದಲಾಯಿಸಿದೆವು. ಮುಂದೆ ಸಂಕೇಶ್ವರ ಬಿಡುವವರೆಗೂ ಅಲ್ಲಿಯೇ ಇದ್ದೆವು.

ನಮ್ಮ ಪಕ್ಕದ ಮನೆಯಲ್ಲಿ ತಂದೆಯವರ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದ ಶ್ರೀ ಶ್ರೀಧರ ಕಟ್ಟಿ ಅವರು ಬಾಡಿಗೆಗೆ ಇದ್ದರು. ಶ್ರೀಧರ ಕಟ್ಟಿ ಅವರದು ಒಂದು ವಿಶಿಷ್ಟ ವ್ಯಕ್ತಿತ್ವ. ಅವರು ನನಗೆ ಕರಾಟೆ ಮತ್ತು ಯೋಗಾಸನಗಳ ಪರಿಚಯ ಮಾಡಿಸಿದರು. ಅವರೊಬ್ಬ ಬ್ರೂಸ್ ಲೀಯ ಭಕ್ತರಾಗಿದ್ದರು. ಅವರ ಮೂಲಕ ನನಗೆ ಬ್ರೂಸ್ ಲೀ ಮತ್ತು ಕರಾಟೆಯ ಬಗ್ಗೆ ತಿಳಿದು ಬಂದಿತು.

ನೆನಪನ್ನು ಹಸಿರಾಗಿಸುವ ಸಂಕೇಶ್ವರದ ಸಕ್ಕರೆ ಕಾರಖಾನೆಯ ಭವ್ಯ ಚಿತ್ರಣ ನೆನಪನ್ನು ಹಸಿರಾಗಿಸುವ ಸಂಕೇಶ್ವರದ ಸಕ್ಕರೆ ಕಾರಖಾನೆಯ ಭವ್ಯ ಚಿತ್ರಣ

ಬ್ರೂಸ್ ಲೀಯ ಚಲನ ಚಿತ್ರಗಳಾದ ಎಂಟರ್ ದಿ ಡ್ರ್ಯಾಗನ್, ಫಿಸ್ಟ್ ಆಫ್ ಫ್ಯೂರಿ, ರಿಟರ್ನ್ ಆಫ್ ದಿ ಡ್ರ್ಯಾಗನ್ ಮುಂತಾದವುಗಳ ಬಗ್ಗೆ ತಿಳಿದು ಬಂದಿತು. ಬ್ರೂಸ್ ಲೀಯ ಬಗ್ಗೆ ಹೇಳುತ್ತಾ ಅವರು ಬ್ರೂಸ್ ಲೀ ಅದೆಷ್ಟು ಕ್ಷಿಪ್ರವಾಗಿ ಕರಾಟೆಯಾಡುತ್ತಿದ್ದನೆಂದರೆ ಅವನ ಕರಾಟೆಯ ಭರಾಟೆಯನ್ನು ಚಿತ್ರೀಕರಿಸಲು ಛಾಯಾಗ್ರಾಹಕರಿಗೆ ತೊಂದರೆಯಾಗುತ್ತಿತ್ತು ಎಂದು ಹೇಳುತ್ತಿದ್ದರು.

Memoir of Sankeshwara Days: Bruce Lee Fan Sridhara Katti and Amadya

ಬ್ರೂಸ್ ಲೀ ತನ್ನ ಕೈಯ ಪೆಟ್ಟಿನಿಂದಲೇ ಅನೇಕ ಇಟ್ಟಿಗೆಗಳನ್ನು ಒಡೆದು ಹಾಕುತ್ತಿದ್ದ. ಅನೇಕ ಗೂಂಡಾಗಳನ್ನು ಒಬ್ಬನೇ ಒದ್ದು ಓಡಿಸುವ ಸಾಮರ್ಥ್ಯ ಅವನಲ್ಲಿತ್ತು ಎಂದೆಲ್ಲಾ ಹೇಳುತ್ತಿದ್ದರು. ಅವನ ಉನ್ನತ ಗುಣಗಳ ಬಗ್ಗೆ ಅವರು ಹೇಳುತ್ತಿದ್ದುದನ್ನು ನಾನು ಮತ್ತು ನನ್ನ ಮಿತ್ರ ವೆಂಕಟೇಶ ಬಾಯಿ ತೆರೆದು ಮಂತ್ರಮುಗ್ಧರಾಗಿ ಕೇಳುತ್ತಿದ್ದೆವು. ದಿನಗಳೆದಂತೆ ನಾನು ಕೂಡ ಬ್ರೂಸ್ ಲೀ ಭಕ್ತನಾಗಿ ಪರಿವರ್ತಿಸಿದ್ದೆ.

ಅವರು ತಮ್ಮ ಮನೆಯಲ್ಲಿ ಬಾಕ್ಸಿಂಗ್ ಬ್ಯಾಗ್ ಒಂದನ್ನು ತೂಗು ಹಾಕಿದ್ದರು, ನಮಗೆ ಕರಾಟೆ ಪಟ್ಟುಗಳನ್ನು ಕಲಿಯಲು ಕೈಗಳನ್ನು ಕಬ್ಬಿಣದಂತೆ ಮಾಡಿಕೊಳ್ಳಬೇಕು ಎಂದು ಹೇಳಿ ನಮ್ಮನ್ನು ಮುಷ್ಟಿ ಬಿಗಿ ಮಾಡಿ ಬಾಕ್ಸಿಂಗ್ ಬ್ಯಾಗಿಗೆ ಗುದ್ದಲು ಹೇಳುತ್ತಿದ್ದರು. ನಮ್ಮ ಕರಾಟೆ ಹುಚ್ಚಿನಿಂದ ನನ್ನ ತಾಯಿ ಮತ್ತು ವೆಂಕಟೇಶನ ತಾಯಿ ದಿಗಿಲು ಬಿದ್ದು, ಶ್ರೀಧರ ಕಟ್ಟಿ ಅವರ ಪತ್ನಿಗೆ ದೂರು ಹೇಳಿದರು.

ನೀರಿನ ಉಳಿತಾಯ : ಸಿಂಗಪುರ ಮಾದರಿಯನ್ನೇಕೆ ಅನುಸರಿಸಬಾರದು? ನೀರಿನ ಉಳಿತಾಯ : ಸಿಂಗಪುರ ಮಾದರಿಯನ್ನೇಕೆ ಅನುಸರಿಸಬಾರದು?

ಅದರಿಂದ ನಮ್ಮ ಕರಾಟೆ ಅಭ್ಯಾಸ ನಿಂತಿತಾದರೂ ನನ್ನ ಕರಾಟೆ ಹುಚ್ಚು ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಂಡಿತು. ಬಹಳ ದಿನಗಳ ನಂತರ ನಾನು ನನ್ನ ಇಬ್ಬರೂ ಮಕ್ಕಳಿಗೂ ಜೂಡೊ, ಐಕಿಡೋ ಅಥವಾ ತಾಯೆಕ್ ವುಂಡೋ ಮುಂತಾದವುಗಳಲ್ಲಿ ಯಾವುದಾದರೂ ಒಂದು ಮಾರ್ಶಲ್ ಆರ್ಟ್ ಅನ್ನು ಕಲಿತುಕೊಳ್ಳಲು ಹೇಳಿದೆ. ಆದರೆ ಅವರಿಬ್ಬರೂ ಸಾರಾಸಗಟಾಗಿ ನಿರಾಕರಿಸಿಬಿಟ್ಟರು. ನನಗೆ ಆಶ್ಚರ್ಯವಾಯಿತು.

ಅದೇ ಸಮಯದಲ್ಲಿ ಸಂಕೇಶ್ವರದ ಚಿತ್ರಮಂದಿರದಲ್ಲಿ ರಿಟರ್ನ್ ಆಫ್ ದಿ ಡ್ರ್ಯಾಗನ್ ಚಿತ್ರ ಬರಬೇಕೆ? ಅದು ನಾನು ನೋಡಿದ ಮೊಟ್ಟ ಮೊದಲ ಇಂಗ್ಲಿಷ್ ಚಿತ್ರ. ಚಿತ್ರದ ಯಾವ ಸಂಭಾಷಣೆಗಳೂ ನನಗೆ ತಿಳಿಯಲಿಲ್ಲವಾದರೂ ದೃಶ್ಯಗಳಿಂದ ಚಿತ್ರದ ಕಥೆ ತಿಳಿಯಿತು.

ಸಂಕೇಶ್ವರದಲ್ಲಿ ನನ್ನಲ್ಲಿನ ಆಟಗಾರನನ್ನ ಬಡಿದೆಬ್ಬಿಸಿದ್ದ ಅಮ್ಮಣಗಿ ಸರ್ ಸಂಕೇಶ್ವರದಲ್ಲಿ ನನ್ನಲ್ಲಿನ ಆಟಗಾರನನ್ನ ಬಡಿದೆಬ್ಬಿಸಿದ್ದ ಅಮ್ಮಣಗಿ ಸರ್

ಕೊನೆಯ ಸೀನಿನಲ್ಲಿ ಬ್ರೂಸ್ ಲೀ ತನ್ನ ಪ್ರತಿಸ್ಪರ್ಧಿ ಚಕ್ ನೋರಿಸ್ ನನ್ನು ಕರಾಟೆಯ ಪಟ್ಟುಗಳಿಂದ ಕೊಂದು ಹಾಕಿದರೂ ಒಬ್ಬ ಯೋಧ ಮತ್ತೊಬ್ಬ ಯೋಧನಿಗೆ ಮಾಡುವಂತೆ ಅವನ ಪಾರ್ಥಿವ ಶರೀರಕ್ಕೆ ವಂದಿಸಿ ಗೌರವ ತೋರಿಸಿದ್ದನ್ನು ನೋಡಿ ಅವನ ಮೇಲೆ ನನಗೆ ಗೌರವ ಉಕ್ಕಿ ಬಂದಿತು. ಸಿನೆಮಾ ಮುಗಿಯುವಷ್ಟರಲ್ಲಿ ಬ್ರೂಸ್ ಲೀಯ ಮೇಲಿನ ನನ್ನ ಭಕ್ತಿ ಇಮ್ಮಡಿಯಾಗಿತ್ತು.

ಕಟ್ಟಿ ಅವರಿಗೆ ಯೋಗದ ಬಗ್ಗೆ ಕೂಡ ಆಸಕ್ತಿ ಇತ್ತು. ಅವರ ಹತ್ತಿರ ಯೋಗದ ಪುಸ್ತಕವೊಂದಿತ್ತು. ಅದರಿಂದ ಕಲಿತು, ಅವರು ನಮಗೆ ಕೆಲವು ಯೋಗಾಸನಗಳನ್ನು ಕೂಡ ಮಾಡಲು ಕಲಿಸಿದರು. ಅಲ್ಲದೇ ಅವರಿಗೆ ಕಚ್ಚಾ ನಿರಗ್ನಿ ಆಹಾರದ ಬಗ್ಗೆ ಬಹಳ ಆಸಕ್ತಿ ಇತ್ತು. ಅದನ್ನು ಕುರಿತ ಕೆಲವು ಪುಸ್ತಕಗಳು ಕೂಡ ಅವರ ಹತ್ತಿರ ಇದ್ದವು. ಅದರಲ್ಲೂ ಗೋಧಿ ಹುಲ್ಲನ್ನು ಸೊಂಪಾಗಿ ಬೆಳೆಸಿ ನಾಜೂಕಾಗಿ ಕತ್ತರಿಸಿ, ತೊಳೆದು ನನಗೆ ತಿನ್ನಲು ಕೊಡುತ್ತಿದ್ದರು.

ಕಚ್ಚಾ ಗೋಧಿಯನ್ನು ನೆನೆಸಿ, ರುಬ್ಬಿ ಅದನ್ನು ಹಾಲಿನಂತೆ ಮಾಡಿ ಸಕ್ಕರೆ ಸೇರಿಸಿ ನನಗೆ ಕುಡಿಯಲು ಕೊಡುತ್ತಿದ್ದರು. ಅವುಗಳು ಬಹಳ ಆರೋಗ್ಯಕರ ಎಂದು ನಂಬಿದ್ದರು. ಅವರಿಂದ ನಾನು ತುಂಬಾ ಪ್ರಭಾವಿತನಾಗಿದ್ದುದರಿಂದ ಅಣ್ಣ ನನ್ನನ್ನು ಶ್ರೀಧರ ಕಟ್ಟಿಯವರ ಶರಣ ಎಂದು ಹಾಸ್ಯ ಮಾಡುತ್ತಿದ್ದ.

ಅವರ ಇನ್ನೊಂದು ಆಸಕ್ತಿ ಎಂದರೆ ಪಾಶ್ಚಿಮಾತ್ಯ ಪಾಪ್ಯುಲರ್ ಸಂಗೀತ. ಅವರ ಹತ್ತಿರ ಅಂದು ತುಂಬಾ ಪ್ರಸಿದ್ಧವಾಗಿದ್ದ ಬೋನಿ ಎಮ್ ಬ್ಯಾಂಡಿನ ಹಾಡುಗಳಿದ್ದವು. ರಾ ರಾ ರಾಸ್ ಪುಟಿನ್, ಡ್ಯಾಡಿ ಕೂಲ್, ರಿವರ್ಸ್ ಆಫ್ ಬ್ಯಾಬಿಲೋನ್ ಮುಂತಾದ ಪ್ರಸಿದ್ಧ ಹಾಡುಗಳನ್ನು ಅವರು ತಮ್ಮ ಟೇಪ್ ರಿಕಾರ್ಡರ್ ನಲ್ಲಿ ದೊಡ್ಡದಾಗಿ ಹಾಕುತ್ತಿದ್ದರು.

ನನಗೇನೋ ಅವು ಚೆನ್ನಾಗಿವೆ ಎಂದೆನಿಸುತ್ತಿತ್ತು. ಆದರೆ ನನ್ನ ತಂದೆ ತಾಯಿಯರು ಆ ಹಾಡುಗಳು ಶುರುವಾದ ಕೂಡಲೇ ಇಷ್ಟವಿಲ್ಲದಂತೆ ಮುಖ ಕಿವುಚುತ್ತಿದ್ದರು. ಹೀಗಾಗಿ ನಾನು ಅವು ಚೆನ್ನಾಗಿಲ್ಲ ಎಂದು ನಟನೆ ಮಾಡುತ್ತಿದ್ದೆ. ಸಂಕೇಶ್ವರ ಬಿಟ್ಟ ಮೇಲೆ ಈ ಹಾಡುಗಳನ್ನು ನಾನು ಮತ್ತೆ ಕೇಳಿದ್ದು ಕಾಲೇಜು ಸೇರಿದ ಮೇಲೆಯೇ.

ನಾವಿದ್ದ ಮನೆಯ ಮುಂದೆ ಬಹಳಷ್ಟು ಜಾಗವಿತ್ತು. ಆ ಜಾಗದಲ್ಲಿ ದೊಡ್ಡದಾದ ಬಿಲ್ವ ಪತ್ರೆಯ ಮರ, ಮಾವಿನ ಮರ, ಪಪ್ಪಾಯಿ ಹಣ್ಣಿನ ಗಿಡ, ಕರಿಬೇವಿನ ಗಿಡ, ಮಲ್ಲಿಗೆ ಹೂವಿನ ಬಳ್ಳಿ ಮುಂತಾದವುಗಳಿದ್ದವು. ಅಲ್ಲದೇ ಕನಕಾಂಬರ, ದಾಸವಾಳ, ಜಾಜಿ ಮುಂತಾದ ಹೂವುಗಳ ಸಸ್ಯಗಳಿದ್ದವು.

ಬಣ್ಣ ಬಣ್ಣದ ಡೇಸಿಗಳನ್ನು ನಮ್ಮ ಮನೆಯ ಮಾಲೀಕರು ಒಂದು ಸಾಲಿನಲ್ಲಿ ಬೆಳೆಸಿದ್ದರು. ಅವುಗಳನ್ನು ನೋಡುವುದೇ ಒಂದು ಹಬ್ಬವಾಗಿತ್ತು. ಮಾವಿನ ಮರ ಮತ್ತು ಪೇರು ಹಣ್ಣಿನ ಗಿಡಗಳನ್ನು ಏರಿ ಆಗಾಗ ಹಣ್ಣು ಕಿತ್ತು ತಿಂದು ಮನೆಯಲ್ಲಿ ಬೈಯಿಸಿಕೊಳ್ಳುತ್ತಿದ್ದೆ. ನಮ್ಮ ಮನೆ ಯಜಮಾನರ ಹಿರಿಯ ಮಗಳಿಗೆ ತಮ್ಮ ಮಾವಿನ ಗಿಡವೆಂದರೆ ಬಹಳ ಪ್ರಾಣ. ಅದರಲ್ಲಿ ಎರಡು ವರ್ಷಕ್ಕೊಮ್ಮೆ ಸ್ವಲ್ಪ ಮಾತ್ರ ಹಣ್ಣಾಗುತ್ತಿದ್ದವು.

ಆ ಹಣ್ಣುಗಳನ್ನು ನಾನು ಕಿತ್ತು ತಿಂದರೆ ಅವಳಿಗೆ ಬಹಳ ಸಂಕಟವಾಗುತ್ತಿತ್ತು. ನನ್ನ ವಿರುದ್ಧ ಅವರಮ್ಮನಿಗೆ ಅವಳು ದೂರು ನೀಡುತ್ತಿದ್ದಳು. ಅವರು ನಕ್ಕು ಸುಮ್ಮನಾಗುತ್ತಿದ್ದರು. ಆದರೆ ಮನೆಯಲ್ಲಿ ನನಗೆ ಬೈಗುಳ ಸಿಗುತ್ತಿತ್ತು.

ಬಿಲ್ವದ ಎಲೆಗಳನ್ನು ಕಹಿಯಾಗಿದ್ದರೂ ನಾನು ಅನೇಕ ಬಾರಿ ತಿನ್ನುತ್ತಿದ್ದೆ. ಅವುಗಳು ಬಹಳ ಆರೋಗ್ಯದಾಯಕ ಎಂದು ಯಾರೋ ಹೇಳಿದ್ದರು. ಅಲ್ಲದೇ ಬಿಲ್ವದ ಹಣ್ಣುಗಳು ಅತ್ಯಂತ ಕಹಿಯಾಗಿರುತ್ತಿದ್ದರೂ ಅವುಗಳ ಹೊರಕವಚದ ಒಳಗಿನ ಬದಿಯಲ್ಲಿ ಸಿಹಿಕಹಿ ಪದರವಿರುತ್ತಿತ್ತು ಎಂದು ನನಗೆ ಗೊತ್ತಿತ್ತು.

ನಮ್ಮ ಈ ಹಚ್ಚ ಹಸಿರು ಅಂಗಳದಲ್ಲಿ ಆಗಾಗ್ಗೆ ಮಂಗಗಳ ಹಿಂಡುಗಳು ದಾಳಿ ಮಾಡುತ್ತಿದ್ದವು. ಎಲೆಗಳನ್ನು, ಹಣ್ಣುಗಳನ್ನು ಕಿತ್ತು ಅರ್ಧ ತಿಂದು ಕೆಳಗೆ ಎಸೆಯುತ್ತಿದ್ದವು. ಅವುಗಳ ಚೇಷ್ಟೆಗಳನ್ನು ನೋಡಲು ಮತ್ತು ಅವುಗಳ ಪುಟ್ಟ ಪುಟ್ಟ ಮರಿಗಳು ತಮ್ಮ ಅಮ್ಮನ ಮಡಿಲಿನಿಂದ ಪಿಳಿಪಿಳಿ ಕಣ್ಣು ಬಿಡುತ್ತ ನಮ್ಮತ್ತ ನೋಡುವುದು ನನಗೆ ಬಹಳ ಇಷ್ಟವಾಗುತ್ತಿತ್ತು.

ಆದರೂ ನಮ್ಮ ಮೇಲೇನಾದರೂ ದಾಳಿ ಮಾಡಿಯಾವು ಎಂಬ ಅಂಜಿಕೆ ಇರುತ್ತಿತ್ತು. ಏಕೆಂದರೆ ಒಂದು ದಿನ ನಾವೆಲ್ಲ ಆಟವಾಡುತ್ತಿದ್ದಾಗ ಮಂಗದ ಹಿಂಡು ಅಲ್ಲಿಗೆ ಬಂದಿತು. ನಾವೆಲ್ಲ ದೂರ ಸರಿದು ನಿಂತೆವು. ಆದರೆ ನಮ್ಮ ವಠಾರದಲ್ಲಿಯೇ ವಾಸಿಸುತ್ತಿದ್ದ ನನ್ನ ಚಿಕ್ಕ ಮಿತ್ರನೊಬ್ಬ ಹೊರಗಿನಿಂದ ಒಳಗೆ ಬಂದ ಕೂಡಲೇ ಅವನ ಮೇಲೆ ದಾಳಿ ಮಾಡಿದವು.

ಅವನು ಅವುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಆಯ ತಪ್ಪಿ, ನಾವೆಲ್ಲ ಕಸ ಚೆಲ್ಲುತ್ತಿದ್ದ ತಿಪ್ಪೆಯೊಳಗೆ ಜಾರಿ ಬಿದ್ದ. ಅದನ್ನು ನೋಡಿ ನಾವೆಲ್ಲ ಜೋರಾಗಿ ಬಿದ್ದು ಬಿದ್ದು ನಕ್ಕೆವು.

ನಮ್ಮ ಕಂಪೌಂಡಿನ ಪಕ್ಕದ ಕಂಪೌಂಡು ಒಬ್ಬ ಡಾಕ್ಟರ್ ಅವರ ದವಾಖಾನೆಯ ಹಿಂದಿನ ಹಿತ್ತಲು. ಆ ಹಿತ್ತಲಿನಲ್ಲಿ ಆ ಡಾಕ್ಟರು ಕೂಡ ಅನೇಕ ಹೂವಿನ ಗಿಡಗಳನ್ನು ಬೆಳೆಸಿದ್ದರು. ನಮ್ಮ ಕಂಪೌಂಡಿನಲ್ಲಿ ಗಿಡ, ಮರ ಮತ್ತು ಬಳ್ಳಿಗಳು ಹೇಗೋ ಬೆಳೆದಿದ್ದರೆ, ಡಾಕ್ಟರ್ ಅವರ ಕಂಪೌಂಡಿನಲ್ಲಿ ಎಲ್ಲವನ್ನೂ ಸುವ್ಯವಸ್ಥಿತವಾಗಿ ಬೆಳೆಸಲಾಗಿತ್ತು.

ಅದಕ್ಕೆ ಕಾರಣ ಅವರ ಹತ್ತಿರ ಕೆಲಸ ಮಾಡುತ್ತಿದ್ದ ಒಬ್ಬ ಜವಾನ. ಅವನ ನಿಜವಾದ ಹೆಸರು ಅಹಮದ್ ನೋ ಅಥವಾ ಅಮಜದ್ ನೋ ಇರಬಹುದು. ಆದರೆ ನಾವು ಮಕ್ಕಳೆಲ್ಲಾ ಅವನನ್ನು ನಾವು ಅಮದ್ಯಾ ಎಂದೇ ಕರೆಯುತ್ತಿದ್ದೆವು. ಅವನು ಮೂವತ್ತೈದು ನಲವತ್ತು ವಯಸ್ಸಿನವನಾದರೂ ಅನೇಕ ಬಾರಿ ಚಿಕ್ಕ ಮಕ್ಕಳ ಹಾಗೆಯೇ ಆಡುತ್ತಿದ್ದ.

ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಎಲ್ಲರೊಂದಿಗೂ ಕಾಲು ಕೆದರಿ ಜಗಳಕ್ಕೆ ನಿಲ್ಲುತ್ತಿದ್ದ. ದೊಡ್ಡವರಾರೂ ಅವನೊಂದಿಗೆ ಮಾತನಾಡುತ್ತಿರಲಿಲ್ಲ. ಏಕೆಂದರೆ ಅವನಿಗೆ ಸಿಟ್ಟು ಬಂದರೆ ಎಲ್ಲರಿಗೂ ಸಂಸ್ಕೃತದ ಶಾಸ್ತ್ರೀಯ ಬೈಗಳುಗಳನ್ನು ರಾಕೆಟ್ಟುಗಳಂತೆ ಉಡಾಯಿಸುತ್ತಿದ್ದ. ನಾವೆಲ್ಲ ಮಕ್ಕಳಿಗೆ ಕೂಡ ಅವನೆಂದರೆ ಭಯ.

ನಾವ್ಯಾರಾದರೂ ಹೂವು ಅಥವಾ ಹಣ್ಣುಗಳನ್ನು ಕೀಳಲು ಹೋದರೆ ಅವನ ಸಿಟ್ಟು ನೆತ್ತಿಗೇರುತ್ತಿತ್ತು. ಅವನಿಗೆ ತಾನು ಬೆಳೆಸಿದ ಗಿಡ, ಬಳ್ಳಿ ಮತ್ತು ಸಸ್ಯಗಳೆಂದರ ತನ್ನ ಮಕ್ಕಳಷ್ಟು ಪ್ರಾಣ. ಬಹಳ ಅಕ್ಕರೆಯಿಂದ ಅವುಗಳನ್ನು ಬೆಳೆಸುತ್ತಿದ್ದ. ಬೇಸಿಗೆಯಲ್ಲಿ ನೀರಿನ ಬರವಿದ್ದರೂ ಎಲ್ಲಿಂದಲೋ ನೀರು ಹೊತ್ತು ತಂದು ತನ್ನ ಸಸಿಗಳಿಗೆ ಹನಿಸುತ್ತಿದ್ದ.

ನಾವು ಮಕ್ಕಳೆಲ್ಲಾ ಅವನ ಹೂ ಗಿಡಗಳನ್ನು ನಾಶಗೊಳಿಸುತ್ತೇವೆ ಎಂಬ ಆತಂಕವಿದ್ದರೂ ಅವನಿಗೆ ನಮ್ಮ ಮೇಲೇನೋ ಒಂದು ಬಗೆಯ ಅಕ್ಕರೆ. ಪೇರಲ ಗಿಡ ಏರಬೇಡಿ, ಅವುಗಳ ಟೊಂಗೆಗಳ ಮೇಲಿನ ಪದರು ಉದುರಿ ಬಹಳ ಜಾರುತ್ತವೆ, ಬಿದ್ದು ಪೆಟ್ಟು ಮಾಡಿಕೊಳ್ಳಬೇಡಿ ಎಂದು ಹೇಳುತ್ತಿದ್ದ.

ಒಮ್ಮೆ ನನಗ್ಯಾರೋ ದಾಸವಾಳದ ಮೊಗ್ಗುಗಳ ಹಿಂದಿನ ಹಸಿರು ತೊಟ್ಟು ತೆಗೆದು ಹೀರಿದರೆ ಸಿಹಿ ರಸ ಬರುತ್ತದೆ ಎಂದು ಹೇಳಿದರು. ನಾನು ಒಂದು ಮೊಗ್ಗನ್ನು ತೆಗೆದು ಅವರು ಹೇಳಿದ ಹಾಗೆ ಮಾಡಿದೆ. ಬಹಳ ಮಧುರವಾಗಿತ್ತು. ಅದೊಂದು ದಿನ ಡಾಕ್ಟರ್ ಸಾಹೇಬರ ಅಂಗಳದಲ್ಲಿ ಬೆಳೆದ ದಾಸವಾಳದ ಗಿಡದಲ್ಲಿ ಬಹಳ ಮೊಗ್ಗುಗಳಾಗಿದ್ದವು.

ಅಲ್ಲೆಲ್ಲೂ ಅಮದ್ಯಾನ ಇರುವಿಕೆಯ ಲಕ್ಷಣಗಳು ಕಾಣಲಿಲ್ಲ. ನಾನು ತೆಪ್ಪಗೆ ಒಂದೊಂದಾಗಿ ಮೊಗ್ಗುಗಳನ್ನು ಕೀಳುತ್ತಾ ಅವುಗಳ ರಸ ಹೀರಿ ಕುಡಿದ ಮೇಲೆ ಮೊಗ್ಗುಗಳನ್ನು ಕೆಳಗೆ ಚೆಲ್ಲತೊಡಗಿದೆ. ಸ್ವಲ್ಪ ಹೊತ್ತಿನ ನಂತರ ಅದೆಲ್ಲಿಂದಲೋ ಬಂದ ಅಮದ್ಯಾ ನಾನು ಮಾಡಿದ ಘನ ಕಾರ್ಯವನ್ನು ನೋಡಿ ಕೆಂಡಾಮಂಡಲ ಸಿಟ್ಟಾದ. ಬಾಯಿಗೆ ಬಂದ ಹಾಗೆ ಬೈಯತೊಡಗಿದ.

ಆಗ ಅಲ್ಲಿಗೆ ಬಂದ ನನ್ನ ತಾಯಿಯನ್ನು ನೋಡಿ ಅವರನ್ನು ಕೂಡ ಬೈಯತೊಡಗಿದ. ಮೊದಲು ಅವರಿಗೆ ಏನಾಯಿತೆಂದು ತಿಳಿಯದೆ ಕಕ್ಕಾಬಿಕ್ಕಿಯಾದರು. ನಂತರ ನನ್ನ ಕೆಲಸ ನೋಡಿ ಅವರಿಗೂ ಸಿಟ್ಟು ಬಂದಿತು. ಮೊಗ್ಗುಗಳ ಹಿಂದೆ ಸಿಹಿ ರಸ ಇರುತ್ತದೆ, ಅದಕ್ಕಾಗಿ ಹೀಗೆ ಮಾಡಿದೆ ಎಂಬ ನನ್ನ ಮುಗ್ಧ ಸಮರ್ಥನೆ ಅವರಾರಿಗೂ ತಿಳಿಯಲೇ ಇಲ್ಲ.

ಅಂದಿನ ಹೊಣೆಯಿಲ್ಲದ ನಿರಾತಂಕದ ದಿನಗಳು ಇಂದೂ ಸವಿ ನೆನಪಾಗಿ ಉಳಿದುಕೊಂಡಿವೆ. ಅದರ ಜೊತೆಗೇ ನಮ್ಮ ಮನೆಯ ಸುತ್ತಲಿನ ಹಸಿರು ಗಿಡ ಮರಗಳು, ಹೂವಿನ ಬಳ್ಳಿ, ಸಸ್ಯಗಳು ಮತ್ತು ಅವುಗಳು ಹರಡುತ್ತಿದ್ದ ಮಧುರ ಕಂಪು ಇಂದಿಗೂ ಅಚ್ಚಳಿಯದೇ ಮನಸ್ಸಿನಲ್ಲಿ ಉಳಿದಿವೆ. ಇಂದು ಶ್ರೀಧರ ಕಟ್ಟಿ ಅವರು ಬದುಕಿಲ್ಲ.

ಆದರೆ, ವಿವಿಧ ವಿಷಯಗಳಲ್ಲಿ ನನ್ನಲ್ಲಿ ಆಸಕ್ತಿ ಬೆಳೆಸಿದ ಅವರ ನೆನಪು ಹಚ್ಚ ಹಸಿರಾಗಿದೆ. ಹಾಗೆಯೇ ತನ್ನ ಹೂ ಗಿಡಗಳನ್ನು ಬಹಳ ಅಕ್ಕರೆಯಿಂದ ನೋಡಿಕೊಳ್ಳುತ್ತಾ ಅವುಗಳಿಗಾಗಿ ನಮ್ಮೊಂದಿಗೆ ಜಗಳವಾಡುತ್ತಿದ್ದ ಮುಗ್ಧ ಅಮದ್ಯಾ ಕೂಡ ಮನಸಿನ ಮೂಲೆಯಲ್ಲಿ ವಾಸವಾಗಿದ್ದಾನೆ.

English summary
Writer Vasant Kulkarni from Singapore writes about memoir of Sankeshwara days. Also remembers Sridhara Katti and Amadya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X