ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ಚಳಿಗಾಲ, ನನ್ನೂರು ಬೆಳಗಾವಿಯ ನೆನಪುಗಳ ಮೆರವಣಿಗೆ

ಹುಟ್ಟಿದ ಊರು, ಬಾಲ್ಯದ ನೆನಪು- ಎಂದಿಗೂ ಸಂಭ್ರಮ, ಹಿರಿಮೆ ಮೂಡಿಸುವ ಸಂಗತಿಗಳು. ಬೆಳಗಾವಿ ಬಗ್ಗೆ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ ವಸಂತ ಕುಲಕರ್ಣಿ

By ವಸಂತ ಕುಲಕರ್ಣಿ
|
Google Oneindia Kannada News

ಡಿಸೆಂಬರ್ ಬಂದರೆ ಮನ ಗರಿಗೆದರುತ್ತದೆ. ಊರಿಗೆ ಹೋಗುವ ವಿಚಾರದಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ಕಳೆದೆರಡು ದಶಕಗಳಿಂದ ಬೆಳಗಾವಿಯಿಂದ ಹೊರಗಿದ್ದರೂ, ಒಂದು ವರ್ಷ ಅಲ್ಲಿಗೆ ಹೋಗದಿದ್ದರೆ ಏನನ್ನೋ ಕಳೆದುಕೊಂಡ ಅನುಭವವಾಗುತ್ತದೆ. ವಿವರಿಸಲಾಗದಂತಹ ಚಡಪಡಿಕೆ ಶುರುವಾಗುತ್ತದೆ. ಹುಟ್ಟಿ ಬೆಳೆದ ಊರಿನ ಆಕರ್ಷಣೆಯೇ ಹಾಗೆಯೇ ಏನೋ?

ನಾನು ಕೂಡಿ ಆಡಿ, ಓದಿದ ಮಿತ್ರರಲ್ಲಿ ಅನೇಕರು ಬೆಳಗಾವಿಯನ್ನು ಬಿಟ್ಟು ಹೋಗಿ ವಿಶ್ವದ ಅನೇಕ ಭಾಗಗಳಲ್ಲಿ ನೆಲೆಸಿದ್ದಾರೆ. ನನ್ನ ಕೆಲವು ಮೆಚ್ಚಿನ ಗುರುಗಳನ್ನೊಳಗೊಂಡು ನಾನು ಗೌರವಿಸಿದ ಅನೇಕ ಹಿರಿಯ ತಲೆಗಳು ಈಗಿಲ್ಲ. ಉಳಿದವರು ಈಗೆಲ್ಲಿದ್ದಾರೋ ತಿಳಿಯದು.
ಆದರೂ ಈ ಎರಡು ದಶಕಗಳಲ್ಲಿ ಅನೇಕ ಬೆಳವಣಿಗೆಗಳನ್ನು ಕಂಡ ಬೆಳಗಾವಿ ಮೇಲ್ನೋಟಕ್ಕೆ ಅಪರಿಚಿತವೆನಿಸಿದರೂ ಅಪರಿಚಿತವಲ್ಲ.[ಮುದುಡಿದ ಮನ ಅರಳಿಸುವ ಬೆಳಗಾವಿಯ ಕಮಲ ಬಸದಿ]

ಈಗಲೂ ಹಿಂದವಾಡಿಯ ಎತ್ತರವನ್ನೇರುವಾಗ, ಇಳಿಯುವಾಗ ಅಂದು ಆಗುತ್ತಿದ್ದ ಮುದವೇ ಆಗುತ್ತದೆ. ಅಂದು ಹೆಣಗಾಡಿ ಸೈಕಲ್ಲೇರಿಸುತ್ತಿದ್ದ ನಾನಿಂದು ಸುಲಭವಾಗಿ ಸ್ಕೂಟರನ್ನೇರಿಸುವಾಗ ಕೂಡ ಅಂದು ಕಚಗುಳಿಯಿಡುತ್ತಿದ್ದ ತಂಪು ಗಾಳಿ ಇಂದೂ ಕೂಡ ಹಿತ ನೀಡುತ್ತದೆ. ಅಂದು ಸೈಕಲ್ಲೇರಿ ಗೋವಾವೇಸ್ ಮೂಲಕ ರೈಲಿನ ಓವರ್ ಬ್ರಿಡ್ಜ್ ಅನ್ನು ಎಚ್ಚರಿಕೆಯಿಂದ ಏರಿಸಿ ಸುತ್ತ ಮುತ್ತಲಿನ ಹಸಿರು ಪೈರನ್ನು ನೋಡಿ ಆನಂದಿಸುತ್ತಿದ್ದೆ.

Memoir of Belagavi by Vasantha Kulakarni

ಸಿಕ್ಕಾಪಟ್ಟೆ ಹೆಚ್ಚಾದ ವಾಹನಗಳ ಮಧ್ಯದಲ್ಲಿ ಈಗ ಸ್ಕೂಟರನ್ನು ಅಷ್ಟೇ ಎಚ್ಚರಿಕೆಯಿಂದ ಓಡಿಸುತ್ತಿರುವಾಗ ಹಿಂದಿನ ಸೀಟಿನಲ್ಲಿ ಕುಳಿತ ಮಗನಿಗೆ ಧೂಳು ಮತ್ತು ವಾಯು ಮಾಲಿನ್ಯದಿಂದ ಇರಿಸು ಮುರಿಸಾಗುತ್ತದೆ. ಅಂದು ಕಂಡು ಬರುತ್ತಿದ್ದ ಹಸಿರು ಹೊಲಗಳು ಇಂದು ಬಹು ಮಹಡಿ ಕಟ್ಟಡಗಳಾಗಿ ಪರಿವರ್ತನೆಗೊಂಡಿವೆ. ಪೈರುಗಳ ನಡುವೆ ಆಗಾಗ ಕಂಡು ಬರುತ್ತಿದ್ದ ಚಲಿಸುವ ರೈಲು ಈಗ ಕಾಣಿಸಲಾಗದಷ್ಟು ಕಟ್ಟಡಗಳು ತುಂಬಿಕೊಂಡಿವೆ. ಆದರೂ ಚಳಿಗಾಲದ ತಂಪು ಗಾಳಿ ಮಗನಿಗೆ ಹಿಡಿಸುತ್ತದೆ ಎಂದು ತಿಳಿದಾಗ ಮನಸ್ಸಿಗೇನೋ ಸಮಾಧಾನ.[ಜಪಾನ್ ಜರ್ಮನಿಯಂತೆ ಆಗಲು ಭಾರತಕ್ಕೇಕೆ ಸಾಧ್ಯವಾಗಿಲ್ಲ?]

ಚೆನ್ನಮ್ಮ ನಗರ, ಭಾಗ್ಯ ನಗರ ಮತ್ತು ಟಿಳಕವಾಡಿಗಳ ಚಿಕ್ಕ ದೊಡ್ಡ ಬಂಗಲೆಗಳಲ್ಲಿ ವೃದ್ಧ ತಂದೆ ತಾಯಿಯರೇ ತುಂಬಿಕೊಂಡಿದ್ದಾರೆ ಎಂದೆನಿಸುತ್ತದೆ. ಎಲ್ಲರ ಮನೆಯಲ್ಲಿ ನನ್ನಂತೆ ಕೇವಲ ಡಿಸೆಂಬರಿನಲ್ಲೋ ಅಥವಾ ಮತ್ಯಾವಾಗಲೋ ಒಮ್ಮೆ ಬಂದು ಹೋಗುವ ಅನಿವಾಸಿ ಮಕ್ಕಳೇ ಹೆಚ್ಚೋ ಏನೋ ಎಂಬ ವಿಷಣ್ಣ ಭಾವನೆ ಮೂಡುತ್ತದೆ.

ಭಾಗ್ಯನಗರದಿಂದ ಅದೊಮ್ಮೆ ಸುಂದರವಾಗಿ, ಸ್ಪಷ್ಟವಾಗಿ ಕಾಣುವ ಎಳ್ಳೂರಿನ ರಾಜಹಂಸಗಡ್ ಇಂದು ಕಾಣುವುದೇ ಇಲ್ಲ. ಇಷ್ಟು ಸುಂದರವಾದ ಬಂಗಲೆಗಳನ್ನು ಕಟ್ಟಿ, ದೊಡ್ಡದೊಂದು ಕೋಟೆ ಗೋಡೆಯಂತಹ ಕಂಪೌಂಡು ಕಟ್ಟಿ, ನಾಯಿಗಳನ್ನು ಬಿಟ್ಟುಕೊಂಡು ಮನೆಗಳನ್ನು ರಕ್ಷಿಸುವ ಜನ ಮತ್ತು ಅವರ ಈ ಪರಿ ತೀರ ಅಪರಿಚಿತವೆನಿಸಿದರೂ, ಸ್ವಲ್ಪವೇ ಮುಂದೆ ತನ್ನ ಮನೆಯ ಮುಂದೆ, ಲುಂಗಿಯನ್ನುಟ್ಟುಕೊಂಡು ಕಾರನ್ನು ತೊಳೆಯುತ್ತಿದ ಮಿತ್ರ ಕಾಣಿಸಿ, "ಹೇಯ್ ವಸಂತ, ಯಾವಾಗ ಬಂದೆಯೋ?" ಎಂದು ಖುಷಿ ವ್ಯಕ್ತ ಪಡಿಸುವ ಪರಿ ತೀರ ಅಪ್ಯಾಯಮಾನವೆನಿಸಿ ಸುತ್ತಲೂ ಮೊಳಗಿ ಅಜ್ಞಾತ ಭಾವನೆ ದೂರವಾಗುತ್ತದೆ.[ಸ್ಮಾರ್ಟ್ ಸಿಂಗಪುರದಲ್ಲಿ ಪ್ರತಿಯೊಂದಕ್ಕೂ ಸ್ಮಾರ್ಟ್ ಕಾರ್ಡ್]

ಈಗ ತಮ್ಮಪ್ಪನ ಚುರುಮುರಿ ಅಂಗಡಿಯ ಮಾಲೀಕನಾಗಿರುವ ಸಹಪಾಠಿ, ಅವನ ಅಂಗಡಿಯ ಮುಂದೆ ಹಾದು ಹೋಗುವಾಗ, "ಏ ವಿ ಜಿ, ಇಲ್ಲಿ ಬಾರೋ! ಎಷ್ಟು ದಿನಾ ಆಯ್ತೋ ನಿನ್ನನ್ನು ನೋಡಿ?" ಎಂದಾಗ, ಈ ಊರಿನಲ್ಲಿ ನಾನಿನ್ನು ಕಳೆದು ಹೋಗಿಲ್ಲ ಎಂಬ ಭಾವನೆ ಬಲವಾಗುತ್ತದೆ.

ಬಸ್ಸು ನಿಲ್ದಾಣದ ಹಿಂದೆ ಹಸಿರಿನಿಂದಾವೃತವಾಗಿ ನಿಗೂಢವಾಗಿ ಕಾಣುತ್ತಿದ್ದ ಬೆಳಗಾವಿಯ ಕೋಟೆ ಇಂದೂ ಅಷ್ಟೇ ನಿಗೂಢ. ಕೋಟೆಯ ಮುಂದಿನ ಕೆರೆ, ಅದರಿಂದಾಚೆ ಕಾಣುವ ಕಣಬರಗಿಯ ಗುಡ್ಡಗಳು ಇಂದೂ ಅಷ್ಟೇ ಆತ್ಮೀಯ. ಹಿಂದವಾಡಿಯ ದಿಬ್ಬವನ್ನೇರಿಳಿಯುವಾಗ ಕಾಣುತ್ತಿದ್ದ ಹಳದಿ ಹೂವು ಬಿಡುವ ಗಿಡ ಇನ್ನೂ ಹಾಗೆಯೇ ಇದೆ.

ಚಳಿಯಲ್ಲಿ ಕೂಡ ಶಹಾಪೂರಿನಲ್ಲಿ ನಾನು ಮತ್ತು ನನ್ನ ಮಿತ್ರರು ಹೋಗಿ ಕುಳಿತು ಬದಾಮ್ ಥಂಡಾಯಿಯೋ ಅಥವಾ ಮ್ಯಾಂಗೋ ಐಸ್ ಕ್ರೀಮ್ ಅನ್ನೋ ತಿನ್ನುತ್ತಿದ್ದ ಕೋಲ್ಡ್ ಡ್ರಿಂಕ್ಸ್ ಅಂಗಡಿ ಇನ್ನೂ ಹಾಗೆಯೇ ಇದೆ. ಬೋಗಾರ್ ವೇಸ್ (ಧರ್ಮ ವೀರ ಸಂಭಾಜಿ ವೃತ್ತ) ಕಾಲದ ಜೊತೆ ಅನೇಕ ಮಾರ್ಪಾಟು ಕಂಡರೂ ನನ್ನ ಕಣ್ಣಿಗೆ ಇನ್ನೂ ಹಾಗೆಯೇ ಕಂಡು ನನ್ನ ಮತ್ತು ಈ ಊರಿನ ಬೆಸುಗೆಯನ್ನು ಇನ್ನೂ ಹಾಗೆಯೇ ಬೆಸೆದಿಟ್ಟಿದೆ.

ಜಯಂತ ಕಾಯ್ಕಿಣಿಯವರ "ಅಂಕೋಲೆ ಎಂದರೆ" ಚಿಕ್ಕ ಪ್ರಬಂಧ ಮನಸ್ಸನ್ನಾವರಿಸತೊಡಗಿ ಅವರಂತೆ ನಮ್ಮೂರನ್ನು ಶಬ್ದ ಚಿತ್ರಗಳಲ್ಲಿ ಹಿಡಿದಿಡುವ ದೃಶ್ಯಗಳನ್ನು ಮಿದುಳಿನ ಮೂಲೆಯಿಂದ ಬಗೆಯತೊಡಗುತ್ತೇನೆ.[ಸಿಂಗಪುರದ ಮಾಜಿ ಪ್ರಧಾನಿ ಯೂ ಅವರನ್ನು ನೆನೆಯುತ್ತ]

ಬೆಂಗಳೂರಿನಿಂದ ರಾತ್ರಿಯ ಬಸ್ಸು ಹತ್ತಿ ರಾತ್ರಿಯನ್ನೆಲ್ಲಾ ಅರೆನಿದ್ದೆಯಲ್ಲಿ ಕಳೆದು, ಬೆಳಗಿನ ಮಂದ ಬೆಳಕಿನಲ್ಲಿ ನಿಚ್ಚಳವಾಗಿ ಎದ್ದಾಗ ಕಿಟಕಿಯಿಂದ ಕಂಡಿದ್ದು ಕಿತ್ತೂರು. ಕಿತ್ತೂರು ಬಂತಂದರೆ ನಮ್ಮೂರು ಬಂದ ಹಾಗೆಯೇ. ಅಗೋ ನೋಡಿ, ಮುಗಟ್‍ಖಾನ್ ಹುಬ್ಬಳ್ಳಿಯ ಮುಂದಿನ ಮಲಪ್ರಭಾ ನದಿ ಮಂಜುಳವಾಗಿ, ಶೀತಲವಾಗಿ ಹರಿದುಕೊಂಡಿದೆ.

ಹರಡಿದ ಗಿಡಗಳ ಮಧ್ಯದಲ್ಲೆಲ್ಲೋ ಹುದುಗಿಕೊಂಡಿರುವ "ನಂಬಿದ ನಭೋವಾಣಿ ನರಸಿಂಹ"ನ ಗುಡಿಯನ್ನು ಹುಡುಕಲು ತಲೆತಲಾಂತರದಿಂದ ಸಂಸ್ಕಾರಗೊಂಡ ಮನ ಪ್ರೇರೇಪಿಸುತ್ತದೆ. ಬಸ್ಸು ದಾಟಿ ಮುಂದೆ ಹೋಗಿ ಬಿಡುತ್ತದೆ. ಇನ್ನೇನು, ಹಿರೇ ಬಾಗೇವಾಡಿಯ ಗುಡ್ಡವೇರಿ ಕೆಕೆ ಕೊಪ್ಪದ ದಿಬ್ಬವನ್ನು ಬಳಸಿ ಹಲಗಾ ಊರು ದಾಟಿದರೆ ಬೆಳಗಾವಿಯೇ!

ಊರಿಗೆ ಬಂದು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿಳಿದಾಗ ಮೊದಲು ತೆಗೆದುಕೊಂಡಿದ್ದು ಚುಮು ಚುಮು ಚಳಿಯಲ್ಲಿನ ನನ್ನೂರಿನ ಛಾಯಾ ಚಿತ್ರ. ಮನಸ್ಸಿನಲ್ಲಿ ಮೂಡಿದ್ದು ಬೇಂದ್ರೆಯವರ "ಬಾರೋ ಸಾಧನಕೇರಿಗೆ, ಮರಳಿ ನಿನ್ನೀ ಊರಿಗೆ" ಪದ್ಯದ
"ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ?"

ಎಂಬ ಅಮರಗೀತೆಯ ಅಮೃತ ಬಿಂದುಗಳು.

ಧೂಳು, ಪರಿಸರ ಮಾಲಿನ್ಯ ಹೆಚ್ಚಾಗಿದ್ದರೂ ಆತ್ಮೀಯತೆಯಿಂದ ಕನ್ನಡ ಮತ್ತು ಮರಾಠಿ ಭಾಷೆಗಳನ್ನು ಬೇರೆ ಬೇರೆಯಾಗಿಯೋ ಹಾಗೆಯೇ ಒಟ್ಟಿಗೆ ಸೇರಿಸಿಯೋ ಕುಂದಾದ ಸಿಹಿಯಂತೆ ಮಧುರವಾಗಿ ಮಾತನಾಡುವ ನನ್ನೂರಿನ ಜನ, ತನ್ನ ಪ್ರಸಿದ್ಧ ತೇವಯುಕ್ತ ಚಳಿಯನ್ನು ಇನ್ನೂ ತನ್ನ ಒಡಲಲ್ಲಿ ಅಡಗಿಸಿಕೊಂಡಿರುವ ಈ ನಂದನದ ತುಣುಕು ಹೀಗೆಯೇ ನಂದನದ ತುಣುಕಾಗಿಯೇ ಮುಂದುವರೆಯಲಿ!

ಸ್ಮಾರ್ಟ್ ಸಿಟಿಯಾಗುವತ್ತ ದಾಪುಗಾಲಿಟ್ಟಿರುವ ಈ ತೂಕಡಿಸುವ ಪಟ್ಟಣ ತನ್ನಲ್ಲಿಯೇ ಹುದುಗಿಕೊಂಡ ತನ್ನನ್ನೇ ವ್ಯಾಖ್ಯಾನಿಸುವ ತನ್ನ ಸ್ವಂತದ ಲಕ್ಷಣಗಳನ್ನು ಕಳೆದುಕೊಳ್ಳದೇ ಇರಲಿ.

ಸಿಂಗಪುರದ ಸಿಂಗಾರ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ಬಂದಾಗ ಎಸ್ ಎಲ್ ಭೈರಪ್ಪನವರು ಹೇಳಿದ "ನಾನು ವಿಶ್ವದ ಯಾವುದೇ ದೇಶಕ್ಕೆ ಹೋಗಿರಲಿ, ವಾಪಾಸು ಬರುವವರೆಗೆ ಮನಸ್ಸಿನಲ್ಲಿ ಸಮಾಧಾನ ಇರುವುದಿಲ್ಲ. ವಿಮಾನ ದೇಶದ ಗಡಿ ದಾಟಿತೋ ಮನಸ್ಸು ವಿಷಣ್ಣಗೊಳ್ಳುತ್ತದೆ. ವಾಪಸ್ ಬರುವಾಗ ದೇಶ ಗಡಿಯನ್ನು ಪ್ರವೇಶಿಸಿದಾಗ ಹೇಳಲಾಗದಂತಹ ಸಂತೋಷ, ಸಂಭ್ರಮ ಉಂಟಾಗುತ್ತದೆ" ಈ ಮಾತು ನನಗೂ ಅಕ್ಷರಶಃ ಸತ್ಯ.

ನನಗನಿಸುವ ಮಟ್ಟಿಗೆ ತಮ್ಮೂರಿನ ಮಣ್ಣಿನ ಗಾಢವಾದ ಮಮತೆಯ ಪರಿಮಳವುಂಡ ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ ಎಂದುಕೊಳ್ಳುತ್ತೇನೆ. ನನ್ನ ನಂದನದ ತುಣುಕು ನನ್ನ ಮಕ್ಕಳಿಗೂ ನಂದನದ ತುಣುಕಾಗಿಯೇ ಉಳಿಯಲಿ ಎಂಬ ಸ್ವಾರ್ಥದ ಭಾವನೆ ನನ್ನಲ್ಲಿ! ಹಾಗಾಗುತ್ತದೆ ಎಂದುಕೊಳ್ಳುತ್ತೇನೆ.

English summary
Belagavi- A Beautiful city of Karnataka. Vasanth Kulakarni, columnist shared his memories which are relate with Belagavi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X