ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಾಶಕಾರಿ ಮಾರ್ಗದತ್ತ ಸಾಗದಿರಲಿ ಮಾನವನ ರಚನಾತ್ಮಕ ಬುದ್ಧಿ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

1988ರಲ್ಲಿ ನನ್ನ ಪಿಯುಸಿ ಪರೀಕ್ಷೆಯಾದ ಬಳಿಕ ಸ್ವಲ್ಪ ದಿನಗಳ ಮಟ್ಟಿಗೆ ಬಿಎಸ್‌ಸಿಯಲ್ಲಿ ಪ್ರವೇಶ ಪಡೆದುಕೊಂಡಿದ್ದೆ. ಜನರಲ್ ಮೆರಿಟ್ಟಿನಲ್ಲಿ ಎಂಜಿನೀಯರಿಂಗ್ ಸೀಟು ಸಿಗುವುದು ಖಚಿತವಾಗಿದ್ದರೂ ಎಂಜಿನೀಯರಿಂಗ್ ಕಾಲೇಜಿನ ಶುಲ್ಕದ ಹೆಚ್ಚಳವನ್ನು ಕುರಿತು ಸ್ವಲ್ಪ ಗೊಂದಲವುಂಟಾಗಿತ್ತು. ಅಲ್ಲದೇ ಬೇರೆ ಊರಿನಲ್ಲಿ ಸೀಟು ಸಿಕ್ಕರೆ ಅಲ್ಲಿ ನನ್ನನ್ನು ಕಳಿಸುವುದು ಅಸಾಧ್ಯ ಎಂದು ನನಗೆ ಗೊತ್ತಿತ್ತು. ಆದುದರಿಂದ ಬಿ ಎಸ್ ಸಿಗೆ ಸೇರಿದ್ದೆ.

ಆಗ ನಾನು ಆಯ್ದುಕೊಂಡಿದ್ದ ವಿಷಯಗಳೆಂದರೆ ಭೌತ ಶಾಸ್ತ್ರ, ಗಣಿತ ಮತ್ತು ಭೂವಿಜ್ಞಾನ. ಒಂದು ದಿನ ಭೂವಿಜ್ಞಾನದ ಪಾಠ ನಡೆದಾಗ ಸೌರ ಮಂಡಲ ವಿಷಯವನ್ನು ಕುರಿತು ಚರ್ಚೆ ನಡೆದಿತ್ತು. ಗುರು ಮತ್ತು ಶನಿ ಗ್ರಹಗಳ ಸ್ವಾಭಾವಿಕ ಉಪಗ್ರಹಗಳ ಕುರಿತಾಗಿ ಹೇಳುತ್ತಿದ್ದಾಗ, ವೊಯೇಜರ್ 1 ಮತ್ತು 2 ಅಂತರಿಕ್ಷಯಾನಗಳು ಮತ್ತು ಅವುಗಳು ಕಂಡು ಹಿಡಿದ ತಥ್ಯಗಳನ್ನು ಕುರಿತು ಆಗ ತಾನೇ ಓದಿದ್ದ ನಾನು ಇಡೀ ಕ್ಲಾಸಿಗೆ ಹೇಳಿದ್ದೆ.

ಮನುಷ್ಯನ ವೈಚಾರಿಕ ಜಗತ್ತನ್ನು ಶ್ರೀಮಂತಗೊಳಿಸಿದ ನಾಸ್ತಿಕ ಸಿದ್ಧಾಂತಮನುಷ್ಯನ ವೈಚಾರಿಕ ಜಗತ್ತನ್ನು ಶ್ರೀಮಂತಗೊಳಿಸಿದ ನಾಸ್ತಿಕ ಸಿದ್ಧಾಂತ

ಆಗ ಕ್ಲಾಸಿನ ಯಾರೋ ಒಬ್ಬರು ಈ ಉಪಗ್ರಹಗಳನ್ನು ಉಡಾಯಿಸಿದಾಗ ಅದು ಲಕ್ಷಗಟ್ಟಲೇ ಕಿಲೋಮೀಟರ್ ಪಯಣಿಸುವುದಕ್ಕಾಗಿ ಅದೆಷ್ಟು ಇಂಧನ ಬೇಕಾಗಬಹುದು ಮತ್ತು ಅಷ್ಟೊಂದು ಇಂಧನವನ್ನು ಎಲ್ಲಿ ಸಂಗ್ರಹಿಸುತ್ತಾರೆ ಎಂಬ ಪ್ರಶ್ನೆ ಕೇಳಿದ್ದರು. ಕ್ಲಾಸಿನಲ್ಲಿ ಅದೇನೇನು ಚರ್ಚೆ ನಡೆಯಿತೋ ನನಗೆ ನೆನಪಿಲ್ಲ.

Man should use his creative mind for constructive use

ಕೇವಲ ತಿಂಗಳೊಂದರಲ್ಲಿ ನಾನು ನನ್ನ ಬಿ ಎಸ್ ಸಿ ಬಿಟ್ಟು ಮೆಕ್ಯಾನಿಕಲ್ ಎಂಜಿನೀಯರಿಂಗ್ ಸೇರಿದೆ. ಅದರೊಡನೆ ನನ್ನ ಅಂತರಿಕ್ಷ ವಿಜ್ಞಾನದ ಪಾಠಗಳು ಮತ್ತು ಚರ್ಚೆಗಳು ಕೂಡ ಅಲ್ಲಿಯೇ ಉಳಿದವು. ಆದರೆ ಅಂದು ಚರ್ಚೆಯಲ್ಲಿ ಕೇಳಲಾದ ಉಪಗ್ರಹಗಳ ಇಂಧನದ ಕುರಿತಾದ ಪ್ರಶ್ನೆ ನನ್ನ ಮನಸ್ಸಿನ ಮೂಲೆಯೊಂದರಲ್ಲಿ ಹಾಗೆಯೇ ಬಹಳ ದಿನ ಉಳಿಯಿತು. ನಾನು ಹೆಚ್ಚು ಓದಿ ಅದರ ಉತ್ತರವನ್ನು ಯಾವಾಗಲೋ ಕಂಡುಕೊಳ್ಳಬೇಕಾಗಿತ್ತು. ಆದರೆ ಅದೇಕೋ ಹಾಗೆ ಮಾಡಲಿಲ್ಲ. ಜೀವನದ ಇತರ ಅಂಶಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದು ಪ್ರಶ್ನೆ ಮನಸ್ಸಿನ ಮೂಲೆಯಲ್ಲಿ ಕುಳಿತು ಧೂಳು ಸಂಗ್ರಹಿಸತೊಡಗಿತು.

ಮುಂದೆ ಅದೊಂದು ದಿನ ಡಿಸ್ಕವರಿ ಚಾನೆಲ್‍ನಲ್ಲಿ ಅಪೋಲೋ 13 ಅನ್ನು ಕುರಿತ ಕಾರ್ಯಕ್ರಮವನ್ನು ನೋಡಿದೆ. ಅಪೋಲೋ 13 ಚಂದ್ರನ ಮೇಲೆ ಇಳಿಯಲು ಅಮೇರಿಕನ್ನರು ಕಳುಹಿಸಿದ ಮೂರನೆಯ ಯಾನವಾಗಿತ್ತು. ಆದರೆ ಚಂದ್ರನೆಡೆಗೆ ತಲುಪುವುದರ ಮೊದಲೇ ಅದರ ಆಮ್ಲಜನಕದ ಟ್ಯಾಂಕ್ ವಿಸ್ಫೋಟಗೊಂಡಿದ್ದರಿಂದ ಚಂದ್ರನ ಮೇಲೆ ಇಳಿಯುವುದಿರಲಿ, ಭೂಮಿಗೆ ವಾಪಸ್ಸಾಗುವುದು ಕೂಡ ಅಸಾಧ್ಯವೆನಿಸುವಷ್ಟರ ಮಟ್ಟಿಗೆ ಯಾನದ ಮುಖ್ಯ ವ್ಯವಸ್ಥೆಗಳು ನಷ್ಟಗೊಂಡಿದ್ದವು. ಹೆಚ್ಚು ಕಡಿಮೆ ಎಲ್ಲ ಇಂಧನ ಕೂಡ ನಷ್ಟವಾಗಿದ್ದರಿಂದ ಯಾನವನ್ನು ಭೂಮಿಯತ್ತ ತಿರುಗಿಸಿ ಭೂಮಿಯನ್ನು ತಲುಪಲು ಬೇಕಾಗುವಷ್ಟು ವೇಗೋತ್ಕರ್ಷವನ್ನು ಪಡೆಯಲು ಕೂಡ ಅಸಾಧ್ಯವಾಗಿತ್ತು.

ನಾವು ನಮ್ಮ ಪೂರ್ವಾಗ್ರಹಗಳ ಕೈದಿಗಳು, ನಾವು ವಿತಂಡವಾದಿಗಳು!ನಾವು ನಮ್ಮ ಪೂರ್ವಾಗ್ರಹಗಳ ಕೈದಿಗಳು, ನಾವು ವಿತಂಡವಾದಿಗಳು!

ಅದರಲ್ಲಿನ ಮೂವರು ಅಂತರಿಕ್ಷ ಯಾತ್ರಿಗಳನ್ನು ಹೇಗೆ ಸುರಕ್ಷಿತವಾಗಿ ಭೂಮಿಗೆ ಮರಳಿ ತರುವುದು ಎಂಬ ವಿಷಯವನ್ನು ಕುರಿತು ಬಹಳ ಯೋಚನೆ ಮಾಡಿದ ನಂತರ ಅಮೇರಿಕದ ವಿಜ್ಞಾನಿಗಳು ಯಾನವನ್ನು ಭೂಮಿಯತ್ತ ತಿರುಗಿಸಿ ತಕ್ಕ ವೇಗೋತ್ಕರ್ಷವನ್ನು ಪಡೆಯಲು ಭೌತ ವಿಜ್ಞಾನದ ಒಂದು ಮೂಲಭೂತ ಸಿದ್ಧಾಂತವನ್ನು ಬಳಸಿದರು. ಆ ಯೋಜನೆ ಯಶಸ್ವಿಯಾಯಿತು ಮತ್ತು ಯಾನ ಮತ್ತು ಅದರ ಯಾತ್ರಿಗಳು ತಿರುಗಿ ಭೂಮಿಗೆ ಸುರಕ್ಷಿತವಾಗಿ ಮರಳಿದರು.

ಆ ಮೂಲಭೂತ ಸಿದ್ಧಾಂತವೇ "Gravitational SlingShot (ಗುರುತ್ವಾಕರ್ಷಣ ಕವಣೆ)". ಈ ಗುರುತ್ವಾಕರ್ಷಣ ಕವಣೆಯಿಂದ ಉಪಗ್ರಹದ ತುಲನಾತ್ಮಕ ವೇಗ ಮತ್ತು ಗ್ರಹದ ಗುರುತ್ವಾಕರ್ಷಣ ಶಕ್ತಿಯಿಂದ ಉಪಗ್ರಹದ ದಿಕ್ಕು ಮತ್ತು ವೇಗವನ್ನು ಬದಲಿಸಲು ಸಾಧ್ಯವಾಗುತ್ತದೆ. ಉಪಗ್ರಹದ ವೇಗವನ್ನು ಹೆಚ್ಚಿಸಲು ಉಪಗ್ರಹವನ್ನು ಮುಖ್ಯ ಗ್ರಹದ ಚಲನೆಯೊಂದಿಗೆ ಸಮೀಕರಿಸಿದರೆ ಸಾಕು. ಉಪಗ್ರಹದ ವೇಗ ಹೆಚ್ಚಾಗಿ ಕವಣೆಯ ಕಲ್ಲಿನಂತೆ ತೀವ್ರವಾಗಿ ಸಾಗುತ್ತದೆ. ಅದಕ್ಕಾಗಿ ಹೆಚ್ಚಿನ ಇಂಧನದ ಅವಶ್ಯಕತೆಯೇ ಇಲ್ಲ. ಈ ಉಪಾಯವನ್ನು ಹೂಡಿದ ಅಮೇರಿಕದ ವಿಜ್ಞಾನಿಗಳು ಅಪೋಲೋ 13 ಉಪಗ್ರಹವನ್ನು ಚಂದ್ರನ ಗುರುತ್ವಾಕರ್ಷಣ ಶಕ್ತಿಯನ್ನು ಕವಣೆಯಂತೆ ಉಪಯೋಗಿಸಿ ಅದರ ದಿಕ್ಕು ಬದಲಿಸಿ ಅದರ ವೇಗವನ್ನು ಹೆಚ್ಚಿಸಿ ಇಂಧನವನ್ನು ಉಪಯೋಗಿಸದೇ ಭೂಮಿಯನ್ನು ತಲುಪುವಂತೆ ನೋಡಿಕೊಂಡರು.

ಈ ಗುರುತ್ವಾಕರ್ಷಣ ಕವಣೆ ಸಿದ್ಧಾಂತದಿಂದಾಗಿ ನನ್ನ ಮನಸ್ಸಿನಲ್ಲಿ ಉಳಿದಿದ್ದ ಪ್ರಶ್ನೆಯೂ ಬಗೆ ಹರಿಯಿತು. ವೊಯೇಜರ್ ಉಪಗ್ರಹಗಳು ತಮ್ಮ ಅಂತರಿಕ್ಷ ಯಾನವನ್ನು ಮಾಡಿದ್ದೂ ಈ ಗುರುತ್ವಾಕರ್ಷಣ ಕವಣೆಯಿಂದಲೇ. ಸೌರ ಮಂಡಲದ ಗ್ರಹಗಳ ತುಲನಾತ್ಮಕ ನೆಲೆ ಸಹಾಯಕವಾದ್ದರಿಂದ 1977ರ ಆಗಸ್ಟ್ ಮತ್ತು ಸೆಪ್ಟೆಂಬರ್‍ ನಲ್ಲಿ ಅಂತರಿಕ್ಷಕ್ಕೆ ಹಾರಿದ ವಾಯೇಜರ್ 1 ಮತ್ತು 2 ಉಪಗ್ರಹಗಳು ಸೌರಮಂಡಲದ ಮುಖ್ಯ ಗ್ರಹಗಳಿಂದ ಗುರುತ್ವಾಕರ್ಷಣ ಕವಣೆ ಪರಿಣಾಮವನ್ನು ಪಡೆದು ಹೆಚ್ಚಿನ ಇಂಧನದ ಅಗತ್ಯವಿಲ್ಲದೇ ಸಾಕಷ್ಟು ದೂರವನ್ನು ಕ್ರಮಿಸಿ ಈಗ ಸೌರಮಂಡಲವನ್ನು ದಾಟಿ ಬಹಳ ಮುಂದೆ ಸಾಗಿವೆ. ತಮ್ಮ ಈ ಸುದೀರ್ಘ ಯಾತ್ರೆಯಲ್ಲಿ ಸೌರಮಂಡಲದ ಎಲ್ಲ ಗ್ರಹಗಳ ಮತ್ತು ಅವುಗಳ ಉಪಗ್ರಹಗಳ ಛಾಯಾಚಿತ್ರಗಳನ್ನು ವಿಜ್ಞಾನಿಗಳಿಗೆ ಕಳುಹಿಸಿದುದಲ್ಲದೇ ಸೌರಮಂಡಲದ ಬಗ್ಗೆ ಅದುವರೆಗೆ ಗೊತ್ತಿರದ ಅನೇಕ ಉಪಯುಕ್ತ ಮಾಹಿತಿಗಳನ್ನು ಕಳುಹಿಸಿ ಮಾನವನ ಅಂತರಿಕ್ಷ ವಿಜ್ಞಾನದ ತಿಳಿವಳಿಕೆಯನ್ನು ಅನೇಕ ಸ್ತರಗಳಷ್ಟು ಹೆಚ್ಚಿಸಿವೆ.

ಅಂದ ಹಾಗೆ ಈ ಗುರುತ್ವಾಕರ್ಷಣ ಕವಣೆಯನ್ನು ಮೊಟ್ಟ ಮೊದಲ ಬಾರಿಗೆ ಬಳಸಿದ್ದು 1959ರಲ್ಲಿ, ರಷಿಯಾದ (ಹಿಂದಿನ ಸೋವಿಯತ್ ಯೂನಿಯನ್) ಲೂನಾ 3 ಉಪಗ್ರಹ. ಈ ಉಪಗ್ರಹ ಈ ಸಿದ್ಧಾಂತವನ್ನು ಮೊಟ್ಟ ಮೊದಲಿಗೆ ಬಳಸಿ ಚಂದ್ರನ ಹಿಂದಿನ ಬದಿಯ ಛಾಯಾಚಿತ್ರಗಳನ್ನು ತೆಗೆದುಕೊಂಡಿತು. ಮುಂದೆ ವೊಯೇಜರ್ ಉಪಗ್ರಹಗಳಲ್ಲದೇ, ಮರೈನರ್, ಗ್ಯಾಲಿಲಿಯೋ, ಯೂಲಿಸಿಸ್, ಮೆಸೆಂಜರ್ ಮತ್ತು ಕಸೀನಿ ಮುಂತಾದ ಉಪಗ್ರಹಗಳು ಕೂಡ ಈ ಸಿದ್ಧಾಂತವನ್ನು ಬಳಸಿ ಅಂತರಿಕ್ಷ ಯಾನ ಮಾಡಿ ಹೊಸ ಹೊಸ ಮಾಹಿತಿಗಳನ್ನು ಕಂಡು ಹಿಡಿದವು.

ಒಂದು ಸೈದ್ಧಾಂತಿಕ ಪ್ರಮೇಯವನ್ನು ಬಳಸಿ ಭೂಮಿಯಲ್ಲೇ ಕುಳಿತು ತನ್ನ ಯಂತ್ರಗಳನ್ನು ದೂರದ ಗ್ರಹಗಳ ಮುಖತಃ ಭೆಟ್ಟಿಗೆ ಕಳುಹಿಸಿದ ಮನುಷ್ಯನ ಬುದ್ಧಿಮತ್ತೆ ಎಂತಹುದು ಎಂಬುದರ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಬೇಕಾಗಿಲ್ಲ. ಆದರೆ ಈ ಬುದ್ಧಿಮತ್ತೆಯನ್ನು ಧನಾತ್ಮಕ ಮಾರ್ಗದಲ್ಲಿ ನಡೆಸಿಕೊಂಡು ಹೋಗುವುದು ಇಂದಿನ ಅವಶ್ಯಕತೆಯಾಗಿದೆ. ಇಲ್ಲದಿದ್ದರೆ ಇದೇ ರಚನಾತ್ಮಕ ಬುದ್ಧಿ ವಿನಾಶಕಾರಿ ಮಾರ್ಗದತ್ತ ನಡೆದು ಸ್ವಯಂಘಾತಕವಾಗುವ ಅಪಾಯವಿದೆ. ಈ ಅಪಾಯದ ಪ್ರಮುಖ ಉದಾಹರಣೆ ಎಂದರೆ ನ್ಯೂಯಾರ್ಕ್‍ನ World Trade Centerನ ಎರಡೂ ಗೋಪುರಗಳನ್ನು ನಾಗರೀಕ ವಿಮಾನಗಳನ್ನು ಬಳಸಿ ನಾಶಗೊಳಿಸಿದ ವಿಕೃತ ಬುದ್ಧಿಯದು. ಈ ವಿಕೃತ ಬುದ್ಧಿಯನ್ನು ನಾಶಗೊಳಿಸದಿದ್ದರೆ ಅಂತರಿಕ್ಷಯಾನದಂತಹ ಸೃಜನಾತ್ಮಕ ಮತ್ತು ಜ್ಞಾನವರ್ಧಕ ಕಾರ್ಯಕ್ರಮಗಳನ್ನು ತಿರಸ್ಕರಿಸಿ, ತಾರಾಯುದ್ಧ (Star war) ಮತ್ತು ಪರಮಾಣು ಬಾಂಬುಗಳಂತೆ ಇನ್ನೂ ಅನೇಕ ಹೊಸ ವಿನಾಶಕಾರಿ ಯೋಜನೆಗಳು ಜನ್ಮ ತಳೆಯುವ ಅಪಾಯವಿದೆ. ಆದುದರಿಂದ ಮನುಷ್ಯನ ಬುದ್ಧಿಮತ್ತೆಯನ್ನು ಸರಿಯಾದ ಮಾರ್ಗಕ್ಕೆ ಕೊಂಡೊಯ್ಯಲು ಯಾವ ಯೋಜನೆಗಳನ್ನು ಹಾಕಿಕೊಳ್ಳಬೇಕು ಎಂಬುದನ್ನು ಕುರಿತು ವಿಶ್ವದ ನಾಯಕತ್ವದಲ್ಲಿ ಜಾಗತಿಕ ಮಟ್ಟದ ವಿಚಾರ ವಿನಿಮಯವಾಗಬೇಕಾಗಿದೆ.

English summary
Man should use his creative mind for constructive use. There is no doubt that man has become smart enough to use the mind power in whatever way he wants. Vasant Kulkarni explains with the example of Apollo 13 mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X