• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಮಠಗಲ್ಲಿಯ ನಮ್ಮ ಮನೆಯ ಎದುರಿನಲ್ಲೇ ಒಂದು ಹಿಟ್ಟಿನ ಗಿರಣಿಯಿತ್ತು. ಹಿಟ್ಟಿನ ಗಿರಣಿಯ ಹೊರಗೆ ಅದರ ಹೆಸರಿನ ಒಂದು ಫಲಕವನ್ನು ತೂಗುಹಾಕಲಾಗಿತ್ತು. "ವಿಜಯ ಹಿಟ್ಟಣ ಗಿರಣಿ" ಎಂದು ಅದರಲ್ಲಿ ಬರೆದಿದ್ದರು. ಇಲ್ಲ, ಇಲ್ಲ ನಾನು ತಪ್ಪಾಗಿ ಬರೆದಿಲ್ಲ. ಫಲಕದ ಮೇಲೇ ಹಾಗೆಯೇ ಬರೆಯಲಾಗಿತ್ತು. ಮೊಟ್ಟ ಮೊದಲ ಬಾರಿಗೆ ಅದನ್ನು ಓದಿದ ಮೇಲೆ ನಾವೆಲ್ಲ ನಕ್ಕಿದ್ದೇ ನಕ್ಕಿದ್ದು. ಅದು ಹೇಗೆ ಈ ತರಹ ತಪ್ಪು ತಪ್ಪಾಗಿ ಫಲಕವನ್ನು ಬರೆದರು? ಬರೆದುದು ಇರಲಿ, ಹೀಗೆ ತಪ್ಪು ಬರೆದ ಫಲಕವನ್ನು ಅದು ಹೇಗೆ ಗಿರಣಿಯ ಮುಂದೆ ತೂಗು ಹಾಕಿದರು ಎಂದು ನಾವು ಯೋಚಿಸಿದ್ದೇ ಯೋಚಿಸಿದ್ದು.

ಮುಂದೆ ಊರಿನ ವಿವಿಧ ಬಡಾವಣೆಗಳಲ್ಲಿ ತಿರುಗಾಡ ತೊಡಗಿದ ಮೇಲೆ ಸಂಕೇಶ್ವರದಲ್ಲಿ ಇಂತಹ ಫಲಕಗಳು ಸರ್ವೇಸಾಮಾನ್ಯ ಎಂದು ತಿಳಿಯಿತು. ನಾವು ಬಸವನ ಗಲ್ಲಿಗೆ ಬಂದ ನಂತರ ನಮ್ಮ ಗಲ್ಲಿಯ ಸಮಾನಾಂತರದಲ್ಲಿ ಆಜಾದ್ ರೋಡು ಇತ್ತು. ಅದು ಸಂಕೇಶ್ವರದ ಮುಖ್ಯ ವ್ಯಾಪಾರೀ ರಸ್ತೆಗಳಲ್ಲಿ ಒಂದು. ಆ ರೋಡಿನಲ್ಲಿ ಬ್ಯಾಂಕುಗಳು, ಅಂಗಡಿಗಳು, ರೇಷನ್ ಅಂಗಡಿ, ಹಾಲಿನ ಡೇರಿ ಇತ್ಯಾದಿಗಳು ಇದ್ದವು.

ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ

ಅದೇ ರೋಡಿನಲ್ಲಿ ಹತ್ತಿಯಿಂದ ಮಾಡಿದ ಗಾದಿ, ತಲೆದಿಂಬುಗಳನ್ನು ಮಾರುವ ಅಂಗಡಿ ಕೂಡ ಇತ್ತು. ಅಂಗಡಿಯ ಮೇಲಿನ ಫಲಕದಲ್ಲಿ "ಇಲಿ ಗಾದಿ ಮಾಡಿ ಕೂಡಲಾಗುವುದು" ಎಂದು ಬರೆದಿದ್ದರು. "ಇಲ್ಲಿ ಗಾದಿ ಮಾಡಿ ಕೊಡಲಾಗುವುದು" ಎಂಬುದರ ಅಪಭೃಂಶವದು. ಮೊಟ್ಟ ಮೊದಲ ಬಾರಿಗೆ ಆ ಫಲಕವನ್ನು ನೋಡಿದಾಗ ಅಂಗಡಿಯ ಮುಂದೆ ನಿಂತು ನಕ್ಕಿದ್ದೇ ನಕ್ಕಿದ್ದು. ಅಂಗಡಿಯ ಮಾಲೀಕ ಹೊರಗೆ ಬಂದು ನಮ್ಮನ್ನೊಮ್ಮೆ ಮತ್ತು ತನ್ನ ಅಂಗಡಿಯ ಫಲಕವನ್ನೊಮ್ಮೆ ನೋಡತೊಡಗಿದ ಮೇಲೆ ಹಗುರವಾಗಿ ನಾವು ಜಾಗ ಖಾಲಿ ಮಾಡಿದೆವು.

ಅದೇ ಸಮಯಕ್ಕೆ ನಮ್ಮ ತಂದೆಯವರ ಸಹೋದ್ಯೋಗಿಯಾದ ಮೈಸೂರಿನ ಸೀತಾರಾಮಯ್ಯ ಎಂಬುವವರೊಬ್ಬರು ಮನೆಗೆ ಬರುತ್ತಿದ್ದರು. ಮೈಸೂರಿನಿಂದ ಸಂಕೇಶ್ವರಕ್ಕೆ ವರ್ಗವಾಗಿ ಬಂದಿದ್ದ ಅವರು ಹೊಟ್ಟೆಯ ಹುಣ್ಣುಗಳ ಬಾಧೆಗೆ ಒಳಗಾಗಿದ್ದರು. ಹೀಗಾಗಿ ತಂದೆಯವರು ಸಂಜೆಯ ಹೊತ್ತು ಅವರನ್ನು ನಮ್ಮ ಮನೆಗೆ ಊಟಕ್ಕೆ ಕರೆ ತರುತ್ತಿದ್ದರು. ಸುಮಾರು ಎಂಟು ಗಂಟೆಯ ಹೊತ್ತು ಊಟ ಮುಗಿದ ಮೇಲೆ ನಾವು ಆಜಾದ ರೋಡಿನಲ್ಲಿ ಅವರೊಂದಿಗೆ ತಿರುಗಾಡಲು ಹೋಗುತ್ತಿದ್ದೆವು. ಅವರಿಗೆ ನಾವು ಇಲಿ ಗಾದಿಯ ಅಂಗಡಿಯನ್ನು ತೋರಿಸಿದೆವು. ಅವರು ಒಂದು ಕ್ಷಣ ಬೆಪ್ಪನಂತೆ ನಿಂತರು. ನಂತರ ಅರ್ಥ ತಿಳಿದು ಅವರೂ ಕೂಡ ಜೋರಾಗಿ ನಗತೊಡಗಿದರು. ಅವರೊಂದಿಗೆ ನಮ್ಮ ನಗು ಕೂಡ ಗಗನಕ್ಕೇರಿತು. ನಮ್ಮ ನಗುವನ್ನು ಅಂಗಡಿಯ ಮಾಲೀಕ ಮತ್ತೆ ಗಮನಿಸಿದಂತೆ ಭಾಸವಾಯಿತು. ಕೆಲವು ದಿನಗಳ ನಂತರ "ಇಲ್ಲಿ ಗಾದಿ ಮಾಡಿ ಕೋಡಲಾಗುವದು" ಎಂದು ಫಲಕ ಬದಲಾಯಿತು!

ಹೊಸ ಅನುಭೂತಿ ನೀಡಿದ ಸಂಕೇಶ್ವರದ ಚಳಿಗಾಲದ ದಟ್ಟ ಮಂಜು ಹೊಸ ಅನುಭೂತಿ ನೀಡಿದ ಸಂಕೇಶ್ವರದ ಚಳಿಗಾಲದ ದಟ್ಟ ಮಂಜು

ಮತ್ತೊಂದು ದಿನ ಸಂಜೆ ಅದೇ ರೋಡಿನಲ್ಲಿ ತಿರುಗಾಡುವಾಗ ಅವರು ನಮಗೆ ಮತ್ತೊಂದು ಫಲಕವನ್ನು ತೋರಿಸಿ ನಗತೊಡಗಿದರು. "ಅನಿಲ್ ಯಮರಾಡ್ರಿ ಟೇಲರ್" ಎಂದು ಅಲ್ಲಿ ಬರೆದಿತ್ತು. ಅದನ್ನು ನೋಡಿದ ತಂದೆ ಮತ್ತು ಅಣ್ಣನೂ ಕೂಡ ನಗತೊಡಗಿದರು. ಆದರೆ ನನಗೆ ತಿಳಿಯಲಿಲ್ಲ. ಅಣ್ಣನಿಗೆ "ಏನಿದರ ಅರ್ಥ?" ಎಂದು ಕೇಳಿದೆ. ಎಂಬ್ರೊಯ್ಡರಿ (Embroidery) ಎನ್ನುವುದರ ಬದಲಿಗೆ "ಯಮರಾಡ್ರಿ" ಎಂದು ಬರೆದಿದ್ದಾರೆ ಎಂದು ಹೇಳಿದ. ನನಗೆ ಸ್ವಲ್ಪ ನಗು ಬಂದಿತಾದರೂ Embroidery ಪದದ ಅರ್ಥ ನನಗೆ ಗೊತ್ತಿರಲಿಲ್ಲ. ಹೀಗಾಗಿ ಅದರ ನಿಜವಾದ ವಿನೋದ ನನಗೆ ಆಗಲಿಲ್ಲ, ಸೀತಾರಾಮಯ್ಯ ಮಾತ್ರ ನೆನೆಸಿಕೊಂಡು ನಗುತ್ತಲೇ ಇದ್ದರು. "ಯಮರಾಡ್ರಿ ಅಲ್ಲ, ಯಮರಾಡಿ ಎಂದು ಬರೆದಿದ್ದರೆ ಇನ್ನೂ ಮಜವಾಗಿರುತ್ತಿತ್ತು ಎಂದು ಕೆಲವು ಬಾರಿ ಹೇಳುತ್ತಿದ್ದರು! ಇಂದು ಕೂಡ ನಾನು ಆಗಾಗ ಅದನ್ನು ನೆನೆಸಿಕೊಂಡು ನಗುತ್ತಿರುತ್ತೇನೆ.

ಸಂಕೇಶ್ವರದ ಭಾಷೆಯೂ ಅಷ್ಟೇ ತಮಾಷೆಯದಾಗಿತ್ತು. ಬಂದ ಹೊಸದರಲ್ಲಿ ಅಲ್ಲಿನ ಜನ ಮಾತನಾಡುತ್ತಿದ್ದ ಕೆಲವು ಪದಗಳ ಅರ್ಥ ನನಗೆ ಆಗುತ್ತಿರಲಿಲ್ಲ. ಅಲ್ಲಿನ ಜನ ಮಾತಿನ ವರಸೆಯಲ್ಲಿ "ಏಕೆ ಯಾರಿಗೆ ಗೊತ್ತು?" ಎನ್ನುವುದರ ಬದಲು "ಯಾಕ ಯಾಂಬಲ್ಲ?" ಎನ್ನುತ್ತಿದ್ದರು. ಮೊದಮೊದಲು ತಿಳಿಯಲಿಲ್ಲವಾದರೂ, ನಂತರ "ಯಾಂಬಲ್ಲ?" ಎಂದರೆ "ಯಾವನು ಬಲ್ಲ?" ಎಂಬುವುದರ ತದ್ಭವ ರೂಪ ಎಂದು ತಿಳಿದು ತಮಾಷೆಯೆನಿಸಿತು. ಬಿಜಾಪುರದಿಂದ ಬಂದ ನಮಗೆ "ಯಾರಿಗ್ಗೊತ್ತು?" ಎಂದು ನುಡಿದೇ ರೂಢಿ. ನಿಜಕ್ಕೂ ನನಗೆ "ಯಾವನು ಬಲ್ಲ" ಎಂಬುವುದರ ತದ್ಭವರೂಪ ಬಹಳ ಶುದ್ಧ ಕನ್ನಡ ಎನಿಸಿತು.

Kannada dialect in Sankeshwar was unique in nature

ಸ್ಕೂಲಿನಲ್ಲಿ ನನ್ನ ಭಾಷೆ ಕೆಲವರಿಗೆ ಹೆಚ್ಚು ಶುದ್ಧ ಎನಿಸಿತ್ತು. ಅದೊಂದು ದಿನ ಕುಲಕರ್ಣಿ ಟೀಚರ್ ಪಾಠ ಮಾಡುತ್ತ "ಬೆಳಗಾವಿ ನಗರ ಮತ್ತು ಹರಗಾಪುರ ಹಳ್ಳಿಯಾದರೆ ಸಂಕೇಶ್ವರ ಏನಾಗುತ್ತದೆ?" ಎಂದು ಕೇಳಿದರು. ಯಾರಿಗೂ ಹೇಳಲು ಬರಲಿಲ್ಲ. ನಾನು ಎದ್ದು ನಿಂತು "ಚಿಕ್ಕ ಪಟ್ಟಣ" ಎಂದೆ. ನನ್ನ ಗ್ರಾಂಥಿಕ ಭಾಷೆಯನ್ನು ಕೇಳಿ "ನಿನ್ನ ಭಾಷೆ ಬಹಳ ಶುದ್ಧವಾಗಿದೆ" ಎಂದರು. ನನಗೆ ಹೆಮ್ಮೆಯಾಯಿತು! "ಚಿಕ್ಕ ಪಟ್ಟಣ" ಎಂದು ಮಾತಿನ ವರಸೆಯಲ್ಲಿ ನಾವೂ ಕೂಡ ಹೇಳುತ್ತಿರಲಿಲ್ಲ. ಆದರೆ ಚಂದಮಾಮ ಮುಂತಾದ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದರಿಂದ ಉತ್ತರ ಹೇಳುವಾಗ ಗ್ರಾಂಥಿಕ ಭಾಷೆಯನ್ನು ಉಪಯೋಗಿಸಿದ್ದೆ. ಅದು ನನಗೆ ಟೀಚರ್ ಅವರಿಂದ ಶಭಾಷಗಿರಿ ಕೊಡಿಸಿತ್ತು!

ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ

"ನಾನೂ ಸಹ", "ನಾನೂ ಕೂಡಾ" ಎನ್ನುವುದಕ್ಕೆ ಅಲ್ಲಿನ ಜನ "ನಾನೂ ಭೀ" ಎಂದೋ ಅಥವಾ "ನಾ ಭೀ" ಎಂದೋ ಹೇಳುತ್ತಿದ್ದರು. ಹಿಂದಿಯ "ಭೀ" ಕನ್ನಡದ "ನಾನು" ಜೊತೆಗೆ ಅದು ಹೇಗೋ ಸೇರಿಕೊಂಡು ಬಿಟ್ಟಿತ್ತು. ಅದು ಕೇಳಲು ತುಂಬಾ ತಮಾಷೆಯಾಗಿರುತ್ತಿತ್ತು. ನಿಜ ಹೇಳಬೇಕೆಂದರೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಮರಾಠಿ ಮೂಲದ "ಸುದ್ದಾ"ದ ಪ್ರಯೋಗವೇ ಹೆಚ್ಚು. ಬೆಳಗಾವಿ, ಬಿಜಾಪುರ ಮತ್ತು ಧಾರವಾಡಗಳಲ್ಲಿ "ನಾನೂ ಸಹ", "ನಾನೂ ಕೂಡಾ" ಎನ್ನುವುದರ ಬದಲು "ನಾ ಸುದ್ದಾ" ಎಂದು ಹೇಳುವುದೇ ಹೆಚ್ಚು.

ಮತ್ತೊಂದು ಮೇಲಿಂದ ಮೇಲೆ ಕೇಳಿ ಬರುತ್ತಿದ್ದ ಶಬ್ದ 'ಅಗಾವ್". ಹೆಚ್ಚಾಗಿ ಸ್ಕೂಲು ಹುಡುಗರಲ್ಲಿ ಪ್ರಚಲಿತವಿದ್ದ ಈ ಶಬ್ದ ಯಾವನಾದರೋ ಒಬ್ಬ ಹುಡುಗ ಹೆಚ್ಚಿಗೆ ಮಾತನಾಡುತ್ತಿದ್ದಾನೆ ಅಥವಾ ಜಂಭ ತೋರಿಸುತ್ತಿದ್ದಾನೆ ಅನ್ನಿಸಿದರೆ ಉಳಿದವರು ಅವನನ್ನು ಕುರಿತು "ಅಂವಾ ಭಾಳ ಅಗಾವ್ ಇದ್ದಾನ" ಎಂದು ಹೇಳುತ್ತಿದ್ದರು. ಅಗಾವ್ ಎನ್ನುವುದು ಮೂಲ ಮರಾಠಿ ಪದ. ಅಗಾವ್ ಎಂದರೆ ಮುಂಚಿತವಾಗಿ ಎಂದು ಅರ್ಥ. ಅದೇಕೆ ಸಂಕೇಶ್ವರದಲ್ಲಿ ಜಂಭದ ಹುಡುಗರನ್ನು ವರ್ಣಿಸಲು ಉಪಯೋಗಿಸಲ್ಪಡುತ್ತಿತ್ತೋ ನನಗೆ ಗೊತ್ತಾಗಲಿಲ್ಲ. ಈ ಪದ ಕೇವಲ ಐವತ್ತು ಕಿಲೋಮೀಟರ್ ದೂರದ ಬೆಳಗಾವಿಯಲ್ಲಿ ರೂಢಿಯಲ್ಲಿರಲಿಲ್ಲ (ಬೆಳಗಾವಿಯಲ್ಲಿ ಅಕಡೂ ಎಂದು ಕರೆಯುತ್ತಾರೆ). ಈ ಲೇಖನ ಬರೆಯುತ್ತಿದ್ದಾಗ ತಿಳಿದು ಬಂದ ವಿಷಯವೇನೆಂದರೆ ಈ ಪದ, ಅದೇ ಅರ್ಥದಲ್ಲಿ ಕಲ್ಬುರ್ಗಿಯಲ್ಲಿ ಉಪಯೋಗಿಸಲ್ಪಡುತ್ತದೆ ಎಂದು ತಿಳಿಯಿತು. ಎಲ್ಲಿಯ ಕಲ್ಬುರ್ಗಿ? ಎಲ್ಲಿಯ ಸಂಕೇಶ್ವರ? ನನಗೆ ಆಶ್ಚರ್ಯವಾಯಿತು.

ಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣಸಂಕೇಶ್ವರದ ದಿನಗಳು ಭಾಗ 6 : ಗೀತಾ ಪಠಣ ಮತ್ತು ಭಾಷಣ

ಮತ್ತೊಂದು ದಿನ ಬೆಳಗ್ಗೆ ಕುಲಕರ್ಣಿ ಟೀಚರ್ ಪಾಠ ಹೇಳುತ್ತಿದ್ದಾಗ ನನ್ನ ಸಹಪಾಠಿಯೊಬ್ಬನನ್ನು ಅವನ ಅಮ್ಮ ದರ ದರ ಎಳೆದುಕೊಂಡು ಬಂದಳು. ನನಗೆ ಗೊತ್ತಾಗಿದ್ದೇನೆಂದರೆ ಈ ಸಹಪಾಠಿ ಸ್ಕೂಲನ್ನು ಮೇಲಿಂದ ಮೇಲೆ ತಪ್ಪಿಸುತ್ತಿದ್ದುದರಿಂದ ಕುಲಕರ್ಣಿ ಟೇಚರ್ ಅವನ ಅಮ್ಮನನ್ನು ಹೇಳಿಕಳುಹಿಸಿದ್ದರು. ಮಗ ಸ್ಕೂಲು ತಪ್ಪಿಸುತ್ತಿದ್ದಾನೆಂದು ಅನಕ್ಷರಸ್ಥೆಯಾದ ಅವಳಿಗೆ ಆಗಲೇ ತಿಳಿದದ್ದು. ಅವಳು ಅವನನ್ನು ಎಳೆದು ತಂದು ತಂದೆಯಿಲ್ಲದ ಅವನಿಗಾಗಿ ತಾನು ಪಡುತ್ತಿರುವ ಪಡಿಪಾಟವನ್ನು ವಿವರಿಸುತ್ತಾ ಕುಲಕರ್ಣಿ ಟೀಚರ್ ಮುಂದೆಯೇ ಅವನಿಗೆ ನಾಲ್ಕು ಬಿಗಿದಳು.

ಕುಲಕರ್ಣಿ ಟೀಚರಿಗೆ ದೂರು ಒಪ್ಪಿಸುತ್ತಾ, "ನೋಡ್ರಿ ಅಕ್ಕಾವ್ರ, ಇವನಿಗ್ ನಾನು ದಿನಾ ಊದು ಊದು ಅಂತ್ ಹೇಳಿದ್ರ, ಇಂವಾ ಊದುಗೋಲು ಹಿಡದು ಒಲೀ ಊದತಾನ ನೋಡ್ರಿ" ಎಂದಳು. "ಓದು" ಎನ್ನುವ ಬದಲಿಗೆ ಅವಳು "ಊದು" ಎಂದು ಹೇಳುತ್ತಿದ್ದಳು. ಓದಲು ಕಲಿತ ಅವಳ ಮಗ ಅವಳನ್ನು ಅಣಕಿಸಲು ಕೊಳವೆ ಹಿಡಿದು ಸೌದೆ ಒಲೆಯನ್ನು ಊದುತ್ತ "ಊದಬೇಕಲಾ, ಒಲೀ ಊದತೇನ್ ನೋಡ" ಎಂದು ತೋರಿಸಿದ. ಅವಳ ಮಾತು ಕೇಳಿದ ಕುಲಕರ್ಣಿ ಟೀಚರಿಗೆ ನಗು ತಡೆಯಲಾಗಲಿಲ್ಲ. ಆ ಹುಡುಗನ ಅಮ್ಮ "ಅಂವಾ ನನ್ನ ಮಾತ ಕೇಳಂಗಿಲ್ರೀ, ನೀವೇ ಅವನ ಕಿವಿಗಡ್ಡಿ ಹಿಂಡಿ, ನಾಲ್ಕ್ ಕಪಾಳಕ್ಕೆ ಹೊಡೆದು ದಾರಿಗೆ ತರಬೇಕ್ರಿ" ಎಂದು ಗೋಗರೆದು ಹೊರಟು ಹೋದಳು. ಅವಳು ಹೋಗುವವರೆಗೂ ನಸುನಗುತ್ತಿದ್ದ ಕುಲಕರ್ಣಿ ಟೀಚರ್ ನನ್ನ ಆ ಮಹಾನ್ ಸಹಪಾಠಿಯತ್ತ ಮುಖ ತಿರುಗಿಸಿ ಒಮ್ಮೆಲೇ ದುರ್ಗೆಯಾದರು. ಸಹಪಾಠಿಗೆ ಮುಖ ಮೋರೆ ನೋಡದೆ ಬೈದರು. ಕಷ್ಟಜೀವಿಯಾದ ಅವನ ಅಮ್ಮ ಅವನಿಗಾಗಿ ಪಡುತ್ತಿದ್ದ ಕಷ್ಟವನ್ನು ವಿವರಿಸಿ ಅವನಿಗೆ ತನ್ನ ಜವಾಬ್ದಾರಿಯನ್ನು ತಿಳಿಹೇಳಿದರು. ಅಲ್ಲಿಂದ ಮುಂದೆಯೂ ಅವನತ್ತ ಅವರ ವಿಶೇಷ ಗಮನವಿರುತ್ತಿತ್ತು ಎಂದು ನನಗನಿಸುತ್ತಿತ್ತು.

ಬಸವನ ಗಲ್ಲಿಯ ಮನೆಗೆ ಬಂದು ಕೆಲವು ದಿನಗಳು ಮಾತ್ರ ಆಗಿತ್ತು. ನಮ್ಮ ಮನೆಯ ಮಾಲೀಕರ ಮಗಳು ಆರನೇಯ ತರಗತಿಯಲ್ಲಿರಬಹುದು. ಅವಳು ತನ್ನ ಅಮ್ಮನನ್ನು "CAP" ಅಂದರೇನು? ಎಂದು ಕೇಳಿದಳು. ಅವರ ಅಮ್ಮ "ಅಯ್ಯ! ನಿನಗ ಕ್ಯಾಪ್ ಅಂದರೇನು ಗೊತ್ತಿಲ್ಲೇನು? ಕ್ಯಾಪ್ ಅಂದರ ಟೆಪಿಗಿ" ಎಂದು ಹೇಳಿದಾಗ ನಾವೆಲ್ಲ ಗಲಗಲನೇ ನಕ್ಕು ಬಿಟ್ಟೆವು. ಅವರಿಗೋ ನಾವೇಕೆ ನಗುತ್ತಿದ್ದೇವೆ ಎಂದು ಆಶ್ಚರ್ಯ. ಆದರೆ ಸಂಕೇಶ್ವರದಲ್ಲಿ ಟೊಪ್ಪಿಗೆಗೆ ಟೆಪಿಗಿ ಎಂದೇ ಹೇಳುತ್ತಿದ್ದರು ಎಂದು ನಂತರ ಗೊತ್ತಾಯಿತು.

ನಮ್ಮ ಕನ್ನಡ ಅದೆಷ್ಟು ಸ್ವಾದಿಷ್ಟ ಭಾಷೆ ಅಲ್ಲವೇ? ಅದೆಷ್ಟು ವಿವಿಧತೆಗಳು? ಅದೆಷ್ಟು ಸೊಬಗು? ಕರ್ನಾಟಕದ ಪ್ರತಿ ಐವತ್ತು ಕಿಲೋಮೀಟರಿಗೆ ಭಾಷೆ ಮತ್ತು ಊಟ ಬದಲಾಗುತ್ತದಂತೆ. ಹೀಗಾಗಿಯೇ ನಮ್ಮ ಧಾರವಾಡದ ಅಚ್ಚ ಕನ್ನಡ ನಮಗೆ ಆಪ್ತವಾಗುತ್ತದೆ. ಮೈಸೂರಿನ ಉಚ್ಚ ಕನ್ನಡ ನಮಗೆ ಹೆಮ್ಮೆಯುಂಟು ಮಾಡುತ್ತದೆ. ಮಂಗಳೂರಿನ ಸ್ವಚ್ಛ ಕನ್ನಡ ನಮ್ಮಲ್ಲಿ ಸಂತೋಷವನ್ನುಂಟು ಮಾಡುತ್ತದೆ. ಆದರೆ ನಮ್ಮ ಸಂಕೇಶ್ವರದ ಗ್ರಾಮ್ಯ ಭಾಷೆ ಮೊದಮೊದಲಿಗೆ ಸ್ವಲ್ಪ ಒರಟೆನಿಸಿದರೂ ಅದರಲ್ಲಿ ಅಡಕವಾಗಿರುವ ಮುಗ್ಧತೆ, ಭಾವುಕತೆ ಮತ್ತು ಆತ್ಮೀಯತೆ ನನ್ನನ್ನು ಗಾಢವಾಗಿ ಸೆಳೆದು ಬಿಟ್ಟಿತ್ತು. ಸಂಕೇಶ್ವರದ ಗ್ರಾಮ್ಯ ಜೀವನದಲ್ಲಿ ಒಂದಾಗಿ ಬಿಡುವಂತೆ ಮಾಡಿಬಿಟ್ಟಿತ್ತು. ಇಂದು ಸಂಕೇಶ್ವರವನ್ನು ಬಿಟ್ಟು ಎಷ್ಟೋ ವರ್ಷಗಳಾದರೂ ಸಂಕೇಶ್ವರದ ಭಾಷೆ, ಜನ ಮತ್ತು ಸಂಸ್ಕೃತಿ ನನ್ನ ಮನಸ್ಸನ್ನು ಗಾಢವಾಗಿ ಆವರಿಸಿಕೊಂಡುಬಿಟ್ಟಿದೆ.

English summary
Kannada dialect in Sankeshwar was unique in nature. Many Kannada words in colloquial language were unusual, mixed with Marathi and Urdu. Vasant Kulkarni recalls some of the wonderful memories from Sankeshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X