ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸಂತ ಕುಲಕರ್ಣಿ ಅವರ ಅಂಕಣ 'ಅಂತರ್ಮಥನ' ಅಜೇಯ ಶತಕ!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ವಿಷಯ ವೈವಿಧ್ಯ ಮತ್ತು ಗಹನವಾದ ಚಿಂತನೆ ಇರುವ ಪ್ರಬುದ್ಧ ಲೇಖನಗಳ ಮೂಲಕ ಒನ್ಇಂಡಿಯಾ ಕನ್ನಡ ಓದುಗರ ಮನದಲ್ಲಿ ಬೇರೂರಿ ನಿಂತವರು ಮತ್ತು ಓದುವ ಅಭಿರುಚಿ ಹೆಚ್ಚಿಸಿದವರು ಸಿಂಗಪುರದಲ್ಲಿ ನೆಲೆನಿಂತಿರುವ ಬೆಳಗಾವಿ ಕನ್ನಡಿಗ ವಸಂತ ಕುಲಕರ್ಣಿ ಅವರು. ತಮ್ಮದೇ ಶೈಲಿಯ ಚಿಂತನೆಯನ್ನು ಯಾವುದೇ ಗೊಂದಲವಿಲ್ಲದೆ, ಅತ್ಯಂತ ಸರಳವಾಗಿ ಮಂಡಿಸುವುದರಲ್ಲಿ ನಿಸ್ಸೀಮರಾಗಿರುವ ವಸಂತ ಅವರು ಸೆಂಚುರಿ ಬಾರಿಸಿದ್ದಾರೆ. ಅವರ ಲೇಖನಗಳನ್ನು ಪ್ರತಿವಾರ ಆಸ್ವಾದಿಸುವ ಸ್ನೇಹಬಳಗದಲ್ಲಿರುವ ಕೆಲವರು ತಮ್ಮ ಅನಿಸಿಕೆಗಳನ್ನೂ ತಿಳಿಸಿದ್ದಾರೆ. ವಸಂತ ಅವರಿಗೆ ಅಭಿನಂದನೆಗಳು. ಇದು ಹೀಗೆಯೇ ಮುಂದುವರಿಯಲಿ ಎಂದು ಆಶಿಸೋಣ - ಸಂಪಾದಕ.

***
"ಹಂಗಾದ್ರ ಈ ವಾರ ಸೆಂಚುರಿ ಬಾರಸ್ತೀರಿ" ಎಂದರು ಪ್ರಸಾದ ನಾಯಿಕ. "ಹೌದು" ಎಂದೆ ಮನದಲ್ಲಿಯೇ ಸಂತೋಷ ಮತ್ತು ಅಭಿಮಾನ ತುಂಬಿಕೊಂಡು. "ಒಳ್ಳೆಯದಾಯಿತು, ಮುಂದುವರೆಸಿ" ಎಂದರು. ಇಂದು ಎಂದರೆ ಜನವರಿ 1, 2019ರಂದು ಈ ನನ್ನ ನೂರನೇ ಲೇಖನವನ್ನು ತಮ್ಮ ಮುಂದೆ ಇರಿಸುತ್ತಿದ್ದೇನೆ.

ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ

ಎರಡು ವರ್ಷಗಳ ಹಿಂದೆ 2016ರ ನವೆಂಬರಿನಲ್ಲಿ "ಏನು ಬೇಕಾದ್ರೂ ಆಗಬಹುದು" ಎಂಬ ಲೇಖನದೊಂದಿಗೆ ನನ್ನ ಅಂತರ್ಮಥನ ಅಂಕಣವನ್ನು ಆರಂಭಿಸಿದಾಗ ನಾನೆಷ್ಟು ಬರೆಯಬಲ್ಲೆ ಎಂಬ ಸಂಶಯ ನನ್ನಲ್ಲೇ ಮನೆ ಮಾಡಿತ್ತು. ವೀರಾವೇಶದಿಂದ ಶುರು ಮಾಡಿದ್ದು ಸರಿ. ನೂರರ ಮಾತು ದೂರ. ಐವತ್ತಾದರೂ ಬರೆಯಬಲ್ಲೆನೆ ಎಂಬ ಅಳುಕು ಕಾಡುತ್ತಿತ್ತು. ಆದರೆ ಬರೆಯುತ್ತ ಹೋದಂತೆ ವಿಷಯಗಳು ಹೊಳೆಯುತ್ತ ಹೋದವು. ಬರವಣಿಗೆ ಸರಾಗವಾಗುತ್ತ ಹೋಯಿತು. ಈಗ ಇನ್ನೂ ಅನೇಕ ವಿಷಯಗಳಿವೆ ಬರೆಯಲು ಎನಿಸುತ್ತದೆ.

Kannada column by Vasant Kulkarni completes century

ನಾನು ಅಂಕಣ ಬರೆಯುತ್ತೇನೆ ಎಂದು ತಿಳಿದ ಅನೇಕ ಮಿತ್ರರು ಯಾವ ವಿಷಯದ ಬಗ್ಗೆ ಬರೆಯುತ್ತೇನೆ ಎಂದು ಕೇಳುತ್ತಾರೆ. ಕನ್ನಡಿಗರಾಗಿದ್ದರೆ "ನೀವೇ ಓದಿ ನೋಡಿ" ಎನ್ನಬಹುದಾಗಿತ್ತು. ಆದರೆ ಬೇರೆಯವರು ಕೇಳುತ್ತಾರೆ. ರಾಜಕೀಯವೋ, ಆರ್ಥಿಕ ಪರಿಸ್ಥಿತಿಯ ಬಗ್ಗೆಯೋ ಅಥವಾ ಸಿನೆಮಾವೋ ಎಂಬುದು ಅವರ ಪ್ರಶ್ನೆ. ಅವರ ಈ ಪ್ರಶ್ನೆ ನನ್ನನ್ನು ಗೊಂದಲಕ್ಕೀಡು ಮಾಡುತ್ತದೆ.

ಯಾರೂ ರೋಲ್ ಮಾಡೆಲ್ಲುಗೊಳೇ ಇಲ್ಲ ಅನ್ನೂದು ಸುಳ್ಳು ಯಾರೂ ರೋಲ್ ಮಾಡೆಲ್ಲುಗೊಳೇ ಇಲ್ಲ ಅನ್ನೂದು ಸುಳ್ಳು

ಮುಖ್ಯವಾಗಿ ನಾನು ಯಾವುದರ ಬಗ್ಗೆ ಬರೆಯುತ್ತೇನೆ? ಈವರೆಗೆ ಬರೆದ ನೂರರಲ್ಲಿ ರಾಜಕೀಯದ ಬಗ್ಗೆ ಎಲ್ಲೋ ಒಂದೆರಡು ಬಾರಿ ಬರೆದಿರಬಹುದು, ಆರ್ಥಿಕ ಪರಿಸ್ಥಿತಿ ಮತ್ತು ಸಿನೆಮಾಗಳ ಬಗ್ಗೆ ಕೂಡ ಅಷ್ಟೇ. ಹೆಚ್ಚಿಗೆ ಬರೆದಿರುವುದು ವಿಜ್ಞಾನ, ಅಧ್ಯಾತ್ಮಗಳ ನಡುವಿನ ಕೊಂಡಿಯನ್ನು ಹುಡುಕುವ ಲೇಖನಗಳೇ ಎನಿಸುತ್ತದೆ. ಅದನ್ನು ಬಿಟ್ಟರೆ ನನ್ನ ಸ್ವಂತದ ಅನುಭವಗಳನ್ನು ಕುರಿತಾದ ಚಿಂತನಾರ್ಹ ವಿಷಯಗಳು. ಅಲ್ಲಲ್ಲಿ ತೀರ ಬೇರೆಯಾದ ವಿಷಯಗಳನ್ನು ಆರಿಸಿಕೊಂಡಿದ್ದೇನೆ. ಆರಿಸಿಕೊಂಡಿದ್ದೇನೆ ಎನ್ನುವುದಕ್ಕಿಂತ ಅಂತಹ ವಿಷಯಗಳೇ ಹೊಳೆದಿವೆ ಎಂದೇ ಹೇಳಬಹುದು.

ನಾನು ಬರೆದ ಲೇಖನಗಳನ್ನು ಮೊತ್ತ ಮೊದಲ ಬಾರಿಗೆ ಓದಿ ತಿದ್ದುವ ಕೆಲಸವನ್ನು ನನ್ನ ಮಡದಿ ಮಾಡುತ್ತಿದ್ದಾಳೆ. ಸಾಹಿತ್ಯದ ಬಗ್ಗೆ ಅಂತಹ ಒಲವೇನೂ ಇರದ ಕುಟುಂಬದಿಂದ ಬಂದ ಅವಳು, ನನ್ನ ಸಂಗ ದೋಷದಿಂದಲೋ ಏನೋ ಈಗ ಎಸ್ ಎಲ್ ಭೈರಪ್ಪ, ಎಚ್ ಎಸ್ ವೆಂಕಟೇಶಮೂರ್ತಿ, ಬಿ ಆರ್ ಲಕ್ಷ್ಮಣರಾವ್, ತೇಜಸ್ವಿ ಮತ್ತು ಅನಂತಮೂರ್ತಿಯವರ ಕೃತಿಗಳನ್ನು ಓದುತ್ತಾಳೆ. ನಾನು ಬರೆದ ಲೇಖನಗಳನ್ನು ತಾನೇ ಮುಂದೆ ಬಂದು ಪ್ರೂಫ್ ರೀಡ್ ಮಾಡುತ್ತಾಳೆ. ಅವಳು ಓದಿ, ತಿದ್ದಿದ ಮೇಲೆ ಪ್ರಸಾದ ಅವರಿಗೆ ಕಳುಹಿಸಿಕೊಡಲು ಧೈರ್ಯ ಬರುತ್ತದೆ. ನನ್ನ ಲೇಖನಗಳನ್ನು ಕುರಿತಾದ ಅವಳ ತಿದ್ದುಪಡಿಗಳನ್ನು ಹೆಚ್ಚು ವಾದಗಳಿಲ್ಲದೇ ಮಾಡಿಬಿಡುತ್ತೇನೆ. ಆದರೆ ಕೆಲವು ಬಾರಿ ನನ್ನ ಕವನಗಳನ್ನು ಕುರಿತು "ಬಹಳ ಕಠಿಣ" ಎಂದು ವಿಶ್ಲೇಷಿಸಿದಾಗ ನನಗೆ ಸಿಟ್ಟು ಬರುತ್ತದೆ. ಅವಳೊಂದಿಗೆ ಚಿಕ್ಕದೊಂದು ಜಗಳವಾಡುತ್ತೇನೆ. ಆದರೆ ಗುಟ್ಟಾಗಿ ಅಂತಹ ಕವನವನ್ನು ಹೇಗಾದರೂ ಮಾಡಿ ಸರಳಗೊಳಿಸಲೆಂದು ಇನ್ನೊಮ್ಮೆ ಓದುತ್ತೇನೆ.

ಕನಸಾಗಿಯೇ ಉಳಿದ ವೈಜ್ಞಾನಿಕ ಸಂಶೋಧಕನಾಗಬೇಕೆಂಬ ಕನಸು! ಕನಸಾಗಿಯೇ ಉಳಿದ ವೈಜ್ಞಾನಿಕ ಸಂಶೋಧಕನಾಗಬೇಕೆಂಬ ಕನಸು!

ನನ್ನ ಸಂಕೇಶ್ವರದ ದಿನಗಳನ್ನು ಕುರಿತ ಲೇಖನಗಳಂತೂ ನನ್ನ ಚಿಕ್ಕಂದಿನ ಅನೇಕ ಸ್ನೇಹಿತರನ್ನು ನನ್ನ ಸನಿಹಕ್ಕೆ ತಂದಿವೆ. ಅನೇಕ ಹೊಸ ಸ್ನೇಹಿತರನ್ನು ಪರಿಚಯಿಸಿವೆ. ಈ ಬಾರಿ ಭಾರತಕ್ಕೆ ಹೋದಾಗ ಸಂಕೇಶ್ವರಕ್ಕೆ ಹೋಗಿ ಚಿಕ್ಕಂದಿನಲ್ಲಿ ತಿರುಗಾಡುತ್ತಿದ್ದ ಸ್ಥಳಗಳಿಗೆ ಇನ್ನೊಮ್ಮೆ ಭೇಟಿ ಮಾಡಿದ್ದಲ್ಲದೇ, ನನ್ನ ನೆಚ್ಚಿನ ಕುಲಕರ್ಣಿ ಟೀಚರ್ ಅವರನ್ನು ಭೆಟ್ಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದನ್ನು ನನ್ನ ಹಿಂದಿನ ಲೇಖನದಲ್ಲಿ ಬರೆದಿದ್ದೇನೆ. ಹೆಮ್ಮೆಯ ವಿಷಯವೆಂದರೆ ನನ್ನ ಬರಹಗಳನ್ನು ಓದಿದ 73ರ ಇಳಿವಯಸ್ಸಿನ ಕುಲಕರ್ಣಿ ಟೀಚರ್ ಅವರಿಗೆ ಕೂಡ ಸ್ಫೂರ್ತಿ ಬಂದು ಅವರು ಕೂಡ ಲೇಖನಗಳನ್ನು ಬರೆಯತೊಡಗಿದ ವಿಷಯವನ್ನು ನನಗೆ ತಿಳಿಸಿದ್ದು.

ಬೆಳಗಾವಿಯ ಬೀದಿಗಳಲ್ಲಿ ತಿರುಗಾಡಿದಾಗ, ನನ್ನ ಸ್ಕೂಲಿನ ಹತ್ತಿರ ಹೋದಾಗ ನನಗೆ ನೆನಪಾಗಿದ್ದು ನನ್ನ ಕನ್ನಡ ಮೇಷ್ಟ್ರು ದಿವಂಗತ ಬಿ ಆರ್ ಕಮ್ಮಾರ ಅವರು. ನನ್ನ ಸಾಹಿತ್ಯದ ಒಲವಿಗೆ ಸಿಂಚನ ನೀಡಿದವರಲ್ಲಿ ಅವರೂ ಒಬ್ಬರು. ಅವರ ನೆಚ್ಚಿನ ಕವಿ ಬೆಳಗಾವಿಯ ಈಶ್ವರ ಸಣಕಲ್. "ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ, ನಾನಕ್ಕು ಜಗವಳಲು ನೋಡಬಹುದೇ? ನಾನಳಲು ಜಗವೆನ್ನನೆತ್ತಿಕೊಳದೇ?" ಎಂಬ ಅದ್ಭುತ ಸಾಲುಗಳನ್ನು ಬರೆದ ಕವಿ ಸಣಕಲ್ ಅನಾಮಧೇಯರಾಗಿಯೇ ಬಾಳಿ ಅನಾಮಧೇಯರಾಗಿಯೇ ಹೊರಟು ಹೋದವರು.

ನನ್ನ ಚಿಕ್ಕಂದಿನ ಬೆಳಗಾವಿಯಲ್ಲಿ ಸಾಹಿತ್ಯದ ಗಂಗೆ ಭೋರ್ಗರೆದು ಹರಿಯುತ್ತಿರಲಿಲ್ಲ. ಸಣ್ಣ ತೊರೆಯ ಮಂದಗತಿಯ ಹರಿವಾಗಿತ್ತು ಎಂದು ನನಗನಿಸಿತ್ತು. ಧಾರವಾಡ, ಬೆಂಗಳೂರು ಮತ್ತು ಮೈಸೂರುಗಳಂತೆ ಸಾಹಿತ್ಯ ಮನೆಮಾತಾಗಿರಲಿಲ್ಲ. ಅಲ್ಲಲ್ಲಿ ಕೇಳಿ ಬರುತ್ತಿದ್ದ ಪಿಸು ಮಾತಾಗಿತ್ತು. ಆದರೂ ಅಲ್ಲಲ್ಲಿ ಹೊಳೆವ ತಾರೆಗಳಂತೆ ಕನ್ನಡ ಸಾಹಿತ್ಯ ಬೆಳಗಾವಿಯ ಆಗಸದಲ್ಲಿ ಮಿಣುಕುತ್ತಿತ್ತು. ಆಗ ಈಶ್ವರ ಸಣಕಲ್, ಚಂದ್ರಕಾಂತ ಕುಸನೂರ್, ಅನಂತ ಕಲ್ಲೋಳ, ಸರಜೂ ಕಾಟಕರ್ ಅಂತಹವರು ಬೆಳಗಾವಿಯಲ್ಲಿ ಕನ್ನಡದ ಜ್ಯೋತಿಯನ್ನು ಪ್ರಜ್ವಲಿಸುತ್ತಿದ್ದವರು. ಅವರ ಪ್ರಕಾಶದಲ್ಲಿ ತಮ್ಮ ನೆರಳನ್ನು ಕಂಡುಕೊಂಡವರಲ್ಲಿ ನಾನೂ ಒಬ್ಬ.

ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ

ನಾನು ಬರೆದ ಲೇಖನಗಳನ್ನು ಅದೆಷ್ಟು ಜನರು ಓದುತ್ತಾರೋ ನನಗೆ ತಿಳಿದಿಲ್ಲ. ಆದರೆ ಆರತಿ ನಾಗೇಶ್, ಸುರೇಶ ಭಟ್ಟ, ವೆಂಕಟ್ ಮತ್ತು ನಾಗೇಶ್ ಮೈಸೂರು ಅವರಂತಹ ಕೆಲವು ಸ್ನೇಹಿತರ ಆತ್ಮೀಯ ನುಡಿಗಳು ಮತ್ತು ಪ್ರೋತ್ಸಾಹ ನನ್ನ ಬರವಣಿಗೆಯ ಕಾಯಕವನ್ನು ಮುನ್ನಡೆಸುವ ಎಂಜಿನ್ ಆಗಿವೆ ಎಂದರೆ ತಪ್ಪೇನಿಲ್ಲ.

ಈಚೆಗೆ ನಾನು ನನ್ನ ಲೇಖನಗಳ ವಿಷಯವನ್ನು ಸ್ವಲ್ಪ ಸರಳೀಕರಿಸಿದಾಗ ಆರತಿ ನಾಗೇಶ್ ಅವರು "ನಿಮ್ಮ ಹೆಚ್ಚು ಅಳವುಳ್ಳ ವಿಷಯಗಳ ಬರವಣಿಗೆಯನ್ನು ಓದಿರುವ ನಮಗೆ, ಇಂತಹ ವಿಷಯಗಳ ಬಗ್ಗೆ ಬರೆಯುವುದು ಸುಲಭ ಅಂತ ಗೊತ್ತಿದೆ. ಏಕೆಂದರೆ, ಹತ್ತಿರದಿಂದ ನಿಮ್ಮನ್ನು ಬಲ್ಲ, ವ್ಯಾಪಕವಾಗಿ ನಿಮ್ಮ ಬರವಣಿಗೆಯನ್ನು ಓದಿರುವ ನನಗೆ, ನಿಮ್ಮ ಬರವಣಿಗೆಯ ಸಾಮರ್ಥ್ಯದ ಅರಿವಿದೆ. ಆದ್ದರಿಂದ, ಇಂತಹ ಬರವಣಿಗೆಗಳು, ಸುಲಭವಾದವು, ನಿಮ್ಮಸಾಮರ್ಥ್ಯಕ್ಕೆ ಅಲ್ಲ ಅಂತ ನನ್ನ ಅನಿಸಿಕೆ. ಬರಹಗಾರರಾಗಿ ಹೆಚ್ಚು ಹೆಚ್ಚು ಕ್ಲಿಷ್ಟ ಹಾಗು ಸವಾಲೊಡ್ಡುವ ಲೇಖನಗಳ ಬರವಣಿಗೆಯಿಂದ ನಾವು ಕೂಡ ಬೆಳೆಯುತ್ತೇವೆ." ಎಂದು ಸ್ಪಷ್ಟವಾಗಿ ತಮ್ಮ ಅನಿಸಿಕೆಯನ್ನು ಮುಂದಿಟ್ಟರು. ಹಲವಾರು ಚಿಂತನಶೀಲ ಪುಸ್ತಕಗಳ ಅನುವಾದಕಿಯಾದ ಅವರ ಈ ವಿಮರ್ಶೆಗೆ ನಾನು ತಲೆಬಾಗುತ್ತೇನೆ.

ನೂರು ಲೇಖನಗಳ ಈ ಸಂಭ್ರಮದಲ್ಲಿ ನಾನು ನನ್ನ ಈ ಸ್ನೇಹಿತರಿಗೆ ತಮ್ಮ ಅನಿಸಿಕೆಗಳನ್ನು ಬರೆಯಲು ಕೇಳಿಕೊಂಡೆ. ಆರತಿ ನಾಗೇಶ್ ಅವರು ಕಳುಹಿಸಿದ್ದು ಹೀಗೆ :

"ಆಯ್ಕೆ ಮಾಡಿಕೊಳ್ಳುವ ವಿಷಯಗಳ ಬಗ್ಗೆ ಆಳವಾದ ಅರಿವು, ಬರವಣಿಗೆಯ ಮೇಲೆ ಹಿಡಿತ, ಹಾಗು ವಿಷಯಗಳ ಹದವಾದ ಪ್ರಸ್ತುತತೆ - ಇವೆಲ್ಲ ವಸಂತ್ ಅವರ ಬರವಣಿಗೆಯ ಕೆಲ ಅವಿಭಾಜ್ಯ ಅಂಗಗಳು. ಜೀವನಾನುಭವ ಅವರ ಬರವಣಿಗೆಗಳಲ್ಲಿ ಅಡಕಗೊಂಡಿರುವುದರಿಂದ, ಓದುಗರು ತಾವೇ ಎಲ್ಲ ಘಟನೆಗಳನ್ನು ಅನುಭವಿಸುತ್ತಿರುವಂತೆ ಭಾಸವಾಗುತ್ತದೆ. ವಸಂತ್ ಅವರ ಸಾಹಿತ್ಯ ಸೇವೆ ಇದೇ ರೀತಿ ಇನ್ನು ಹಲವಾರು ವರ್ಷಗಳ ಕಾಲ ಮುಂದುವರೆಯಲಿ ಎಂಬ ಆಶಯ ನನ್ನದು".

ಸಿಂಗಪುರದ ಭರವಸೆಯ ಕವಿ ವೆಂಕಟ್ ಬರೆದದ್ದು ಹೀಗೆ :

"ವಸಂತ ಕುಲಕರ್ಣಿಯವರ ವಿವಿಧ ವಿಷಯಗಳನ್ನು ಹೊತ್ತುಕೊಂಡು ಪ್ರತೀ ವಾರವು ಕುತೂಹಲ ಹುಟ್ಟಿಸುವ ಅಂಕಣಗಳ ಸರಮಾಲೆ ನಿಜಕ್ಕೂ ಅದ್ಭುತ ಹಾಗೂ ಓದುಗರಿಗೊಂದು ರಸದೌತಣ ಅಂತ ಹೇಳಬಹುದು. ಕೆಲವೊಂದು ಅಂಕಣಗಳು ತಪ್ಪಿಸಿಕೊಂಡಿವೆಯಾದರೂ, ನನಗೆ ವೈಯಕ್ತಿಕವಾಗಿ ತುಂಬಾ ಇಷ್ಟವಾದ ವಿಷಯವೆಂದರೆ ಪ್ರತೀ ವಾರದಲ್ಲೂ ಕಂಡುಬರುವ ವೈವಿಧ್ಯತೆಯ ವೈಶಿಷ್ಟ್ಯ. ಯಾವುದೇ ಒಂದು ವಿಷಯಕ್ಕೆ ಅಂಟಿಕೊಳ್ಳದೆ ಅನೇಕ ವಿಧವಾದ ವಿಷಯಗಳ ಬಗ್ಗೆ ಕೂಲಂಕುಷ, ನಿಷ್ಪಕ್ಷಪಾತ, ನಿಷ್ಠುರವೆನಿಸಿದರೂ ನೇರ ಅನಿಸಿಕೆ, ಅಭಿಪ್ರಾಯಗಳು ಹಾಗೂ ಓದುಗರ ಅಭಿಪ್ರಾಯಗಳಿಗೂ ಗೌರವಾನ್ವಿತ ಸಂದೇಶವನ್ನು ಹೊತ್ತುಕೊಂಡೇ ನಿಂತ ಸಾಲುಗಳು. ಪ್ರಾಯಶಃ ಅವರ ವಸ್ತು ಹಾಗೂ ವಿಷಯಗಳ ಜ್ಞಾನವು ವಿಜ್ಞಾನ, ಇತಿಹಾಸ, ಸಾಹಿತ್ಯ, ರಾಜಕೀಯ, ತತ್ವಶಾಸ್ತ್ರ ಹಾಗೂ ಮನಶಾಸ್ತ್ರಗಳ ಸೂಕ್ಷ್ಮತೆಗಳನ್ನು ಹೆಣೆಯುವ ಶೈಲಿ ಹಾಗೂ ಇತ್ತೀಚಿನ ಅವರ ಅಂಕಣ ಉತ್ತರ ಕರ್ನಾಟಕದ ಭಾಷೆಯ ಶೈಲಿಯಲ್ಲಿ ಮೂಡಿಬಂದಿದ್ದು ಮತ್ತೆ ಮತ್ತೆ ಓದುವಂತೆ ಮಾಡಿದ್ದಂತೂ ನಿಜ. ಅವರಿಂದ ಇನ್ನೂ ಅನೇಕ ವಿಷಯಗಳ ಮಂಥನ ನಡೆದು ಅದರ ಸದುಪಯೋಗ ನಮ್ಮಂತಹ ಓದುಗರಿಗಾಗಲಿ ಎಂದು ಹಾರೈಸುತ್ತೇನೆ."

ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಕವಿಯಾಗಿ ಹೊರಹೊಮ್ಮುತ್ತಿರುವ ಸ್ನೇಹಿತ ನಾಗೇಶ ಮೈಸೂರು ಅವರು ಬರೆದಿದ್ದು ಹೀಗೆ :

"ಯಾವುದೇ ಹಮ್ಮು ಬಿಮ್ಮಿಲ್ಲದ ತಣ್ಣನೆಯ ದನಿಯಲ್ಲಿ, ತನ್ನ ಸುತ್ತಲಿನ ಪರಿಸರ, ಆಗುಹೋಗುಗಳಿಂದ ಹೆಕ್ಕಿದ ಸರಳ ವಿಷಯಗಳಿಗೆ ನಮ್ಮನಿಮ್ಮೆಲ್ಲರಂತೆ ಸರಳವಾಗಿ ಸ್ಪಂದಿಸುತ್ತ ಬರೆಯುವ ಅಪರೂಪದ ಬರಹಗಾರ ವಸಂತ್ ಕುಲಕರ್ಣಿ. ಸಿಂಗಾಪುರದಲ್ಲಿದ್ದುಕೊಂಡೆ ಕನ್ನಡದ ಸೊಗಡನ್ನು ಪಸರಿಸುವ ಕಾರ್ಯದಲ್ಲಿ ನಿರತರಾದ ವಸಂತರ ಕನ್ನಡ ಸೇವೆ ಶ್ಲಾಘನೀಯ. ಯಾವುದೇ ಪ್ರತಿಫಲಾಫೇಕ್ಷೆಯಿಲ್ಲದೆ ತಮ್ಮ ಜ್ಞಾನದ ಸಂಪತ್ತನ್ನು ಆನ್ಲೈನ್ ಬರಹದ ಮೂಲಕ ಆಸಕ್ತ ಓದುಗ ವೃಂದಕ್ಕೆ ಹಂಚುತ್ತಿರುವ ವಸಂತ್ ಹೆಸರಿಗೆ ತಕ್ಕಂತೆ "ಕನ್ನಡ ಕುಲ-'ಕರ್ಣ' "ಎಂದರೆ ಅತಿಶಯೋಕ್ತಿಯೇನು ಆಗಲಾರದು. ಒನ್ಇಂಡಿಯಾ ನ್ಯೂಸ್ ಪೋರ್ಟಲ್ಲಿನಲ್ಲಿ 100 ಬರಹಗಳನ್ನು ಪ್ರಕಟಿಸಿದ ಮಹತ್ಸಾಧನೆಗೆ ಅಭಿನಂದಿಸುತ್ತ , ವಸಂತರ ಕನ್ನಡ ಸೇವೆ ಹೀಗೆ ಅವಿರತವಾಗಿ ಮುಂದುವರೆಯಲಿ ಎಂದು ಆಶಿಸುತ್ತೇನೆ".

ಸಿಂಗಪುರದ ಮತ್ತೊಬ್ಬ ಬರಹಗಾರ ಸುರೇಶ ಭಟ್ಟ ಅವರು ಹೇಳಿದ್ದು ಹೀಗೆ :

"ವಸಂತ ಕುಲಕರ್ಣಿ ಅವರದು ಸುಂದರ, ಸರಳ ವ್ಯಕ್ತಿತ್ವ. ಅವರ ಈ ಸರಳತೆ ಅವರ ಲೇಖನಗಳಲ್ಲಿ ಎದ್ದು ಕಾಣುತ್ತದೆ. ಲೇಖನಗಳಲ್ಲದೇ, ಕಥೆ, ಕವನಗಳಂತಹ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಈ ಅಂಕಣದ ಲೇಖನಗಳು ನೂರಕ್ಕೆ ತಲುಪಿರುವುದು ಹೆಮ್ಮೆಯ ವಿಷಯ. ಅವರ ಲೇಖನಗಳಲ್ಲಿ ನನಗೆ ತುಂಬಾ ಇಷ್ಟವಾಗುವ ವಿಷಯವೆಂದರೆ ಅವರು ಆರಿಸಿಕೊಳ್ಳುವ ವಿಷಯ. ಪ್ರತಿ ವಾರಕ್ಕೂ ಒಂದು ಹೊಸ ವಿಷಯದ ಬಗ್ಗೆ ಯೋಚಿಸಿ ಬರೆಯುವುದು ಸುಲಭದ ಮಾತಲ್ಲ. ನೂರು ವಾರಗಳಲ್ಲಿ ನೂರು ಹೊಸ ವಿಷಯ ಆರಿಸಿ ಬರೆದಿರುವುದು ಒಂದು ಅಮೋಘ ಸಾಧನೆ. ಅವರ ಬಹುತೇಕ ಲೇಖನಗಳು ಸರಳವಾಗಿದ್ದರೂ, ಕೆಲವು ಲೇಖನಗಳು ಕ್ಲಿಷ್ಟಕರ ಎನಿಸುತ್ತವೆ. ಇತ್ತೀಚೆಗೆ ಅವರು ತಮ್ಮ ಶೈಲಿಯನ್ನು ಬದಲಿಸಿ ಸರಳ ಎನಿಸುವ ಲೇಖನಗಳನ್ನು ಬದಲಿಸಿ ಎಲ್ಲರಿಗೂ ಮುಟ್ಟುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ನನ್ನ ಅನಿಸಿಕೆ. ಇನ್ನೂ ಬಹುಕಾಲ ಅವರು ಹೀಗೆಯೇ ಬರೆಯಲಿ ಎಂದು ನನ್ನ ಆಶಯ"

ಈ ನನ್ನ ಸ್ನೇಹಿತರ ಪ್ರೋತ್ಸಾಹದ ನುಡಿಗಳಿಗೆ ನಾನೆಷ್ಟು ಅರ್ಹನೋ ತಿಳಿಯೆ. ಅವರ ಅಭಿಮಾನಕ್ಕೆ ಮಾತ್ರ ಚಿರಋಣಿ. ಅವರ ಈ ನುಡಿಗಳು ನನ್ನ ಬರವಣಿಗೆಗೆ ಇನ್ನಷ್ಟು ಪ್ರೇರಣೆ ನೀಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

English summary
Kannada column 'Antarmathana' by Vasant Kulkarni, Singapore has completed century. The thought provoking articles by Vasant has carved niche for himself. Many readers have appreciated his way of story telling in simple way. Congratulations to Vasant Kulkarni by Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X