ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಕುಡಿಯುವ ನೀರಿನ ಬರ ನೀಗಿಸಿಕೊಂಡ ಬಗೆ ಹೇಗೆ?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಮೊನ್ನೆ ಮೊನ್ನೆ ಬಂದ ಸುದ್ದಿ ಏನೆಂದರೆ ಕುಡಿಯುವ ನೀರಿನ ಅಭಾವವಿರುದ ವಿಶ್ವದ ಅತಿ ದೊಡ್ಡ ನಗರಗಳಲ್ಲಿ ನಮ್ಮ ಬೆಂಗಳೂರಿನದು ಎರಡನೇ ಸ್ಥಾನ. ಭರದಿಂದ ಸಾಗುತ್ತಿರುವ ನಗರೀಕರಣದ ದೆಸೆಯಿಂದಾಗಿ ಲಂಡನ್, ಟೋಕಿಯೋ, ಬೀಜಿಂಗ್ ನಗರಗಳನ್ನೊಳಗೊಂಡಂತೆ ವಿಶ್ವದ ಅನೇಕ ಪ್ರಮುಖ ಮಹಾನಗರಗಳು ಕುಡಿಯುವ ನೀರಿನ ಅಭಾವದ ಸಮಸ್ಯೆಯನ್ನು ಈಗಾಗಲೇ ಎದುರಿಸುತ್ತಿವೆ ಅಥವಾ ಶೀಘ್ರದಲ್ಲೇ ಎದುರಿಸಲಿವೆ.

ಬೆಳೆಯುತ್ತಿರುವ ಜನಸಂಖ್ಯೆ ಮತ್ತು ನಿರುದ್ಯೋಗದ ಸಮಸ್ಯೆಯಿಂದ ಜನರು ಉದ್ಯೋಗವನ್ನು ಅರಸಿಕೊಂಡು ಹಳ್ಳಿಗಾಡು ಪ್ರದೇಶಗಳಿಂದ ನಗರಗಳಿಗೆ ಗುಳೆ ಹೋಗುತ್ತಿರುವುದರಿಂದ ಮಹಾನಗರಗಳು ಅತೀ ವೇಗದಿಂದ ಬೆಳೆಯುತ್ತಿವೆ. ಅದರ ಜೊತೆಗೆ ನಗರಗಳು ಅನೇಕ ಬೃಹತ್ ಉದ್ಯಮಗಳನ್ನು ಆಕರ್ಷಿಸಿ ಪೋಷಿಸುತ್ತಿವೆ. ಆದುದರಿಂದ ಜನರಿಗೆ ಮತ್ತು ಉದ್ಯಮಗಳಿಗೆ ತಮ್ಮ ನಿತ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚು ಹೆಚ್ಚು ನೀರು ಬೇಕು.

ಸಿಂಗಪುರದ ಸಾರಿಗೆ ಸಂಪರ್ಕ ಸೂಪರೋ ಸೂಪರು!ಸಿಂಗಪುರದ ಸಾರಿಗೆ ಸಂಪರ್ಕ ಸೂಪರೋ ಸೂಪರು!

ಹೆಚ್ಚು ಕಡಿಮೆ ಎಲ್ಲ ಮಹಾನಗರಗಳು ತಮ್ಮ ನೀರಿನ ಪೂರೈಕೆಗೆ ಕೆರೆ, ನದಿಗಳಂತಹ ಸ್ವಾಭಾವಿಕ ನೀರು ಸಂಗ್ರಹಾಗಾರಗಳ ಮೇಲೆ ಅವಲಂಬಿತಗೊಂಡಿವೆ. ಈ ಎಲ್ಲ ಸ್ವಾಭಾವಿಕ ನೀರು ಸಂಗ್ರಹಾಗಾರಗಳು ಮಳೆಯ ಮೇಲೆ ಅವಲಂಬಿತಗೊಂಡಿವೆ. ಆದುದರಿಂದ ಮಳೆ ಕಡಿಮೆಯಾದರೆ ಅಥವಾ ನೀರಿನ ಬಳಕೆ ಸಂಗ್ರಹಾಗಾರಗಳ ಸಾಮರ್ಥ್ಯಕ್ಕಿಂತ ಹೆಚ್ಚಾದರೆ ಮಹಾನಗರಗಳಲ್ಲಿ ನೀರಿನ ಅಭಾವವಾಗುವುದು ಖಚಿತ.

ಅಂತೆಯೇ ಇತ್ತೀಚೆಗೆ ದಕ್ಷಿಣ ಆಫ್ರಿಕಾ ದೇಶದ ಕೇಪ್ ಟೌನ್ ನಗರ ಇಂತಹ ಸಮಸ್ಯೆಗೆ ಸಿಲುಕಿ ಚಡಪಡಿಸಿತು. ಸತತವಾಗಿ ಮೂರು ವರ್ಷಗಳಿಂದ ಕಾಡುತ್ತಿರುವ ಬರಗಾಲದ ದೆಸೆಯಿಂದ ಕೇಪ್ ಟೌನ್‍ ನಗರಕ್ಕೆ ನೀರು ಸರಬರಾಜು ಮಾಡುವ ಎಲ್ಲ ಸರೋವರಗಳು ಒಣಗಿ ಅಲ್ಲಿನ ಪ್ರಜೆಗಳಿಗೆ ನೀರನ್ನು ರೇಶನ್ ಮೂಲಕ ತಲಾ ಇಂತಿಷ್ಟೆಂದು ಹಂಚುವ ಪರಿಸ್ಥಿತಿ ಒದಗಿದೆ.

ಸಿಂಗಪುರದಲ್ಲಿ ಜಿಎಸ್ಟಿ ಹೇಗಿದೆ, ಯಾರಿಗೆ ಲಾಭವಾಗುತ್ತಿದೆ?ಸಿಂಗಪುರದಲ್ಲಿ ಜಿಎಸ್ಟಿ ಹೇಗಿದೆ, ಯಾರಿಗೆ ಲಾಭವಾಗುತ್ತಿದೆ?

ನಮ್ಮ ಬೆಂಗಳೂರನ್ನೊಳಗೊಂಡಂತೆ ಜಗತ್ತಿನ ಅನೇಕ ನಗರಗಳು ಇದೇ ಹಾದಿಯಲ್ಲಿ ಹೆಜ್ಜೆಯಿಡುತ್ತಿವೆ ಎಂದರೆ ತಪ್ಪೇನಿಲ್ಲ. ಭೂಮಿಯ ತಾಪಮಾನ ಹೆಚ್ಚಳದಿಂದ ಹವಾಮಾನದಲ್ಲಿ ಉಂಟಾಗುವ ಏರುಪೇರುಗಳು ಈ ಸಮಸ್ಯೆಯ ಮಟ್ಟವನ್ನು ಇನ್ನೂ ಹೆಚ್ಚಿಸಲಿವೆ ಎಂಬುದು ಪರಿಸರ ವಿಜ್ಞಾನಿಗಳ ಅಭಿಮತ.

ಕೇಪ್ ಟೌನ್ ಹಾದಿಯಲ್ಲಿ ನಮ್ಮ ಬೆಂಗಳೂರು

ಕೇಪ್ ಟೌನ್ ಹಾದಿಯಲ್ಲಿ ನಮ್ಮ ಬೆಂಗಳೂರು

ಬೆಂಗಳೂರಿನ ಸಮಸ್ಯೆ ಇತರ ಅನೇಕ ಮಹಾನಗರಗಳಿಗಿಂತ ಬೇರೆಯದೂ ಅಲ್ಲ, ದೊಡ್ಡದೂ ಅಲ್ಲ ಎಂದುಕೊಂಡು ನಮ್ಮನ್ನಾಳುವ ಸರ್ಕಾರವು ಎಂದಿನಂತೆ ಸುಮ್ಮನೇ ಇದ್ದು ಬಿಟ್ಟರೆ, ಕೆಲವೇ ವರ್ಷಗಳಲ್ಲಿ ಸಮಸ್ಯೆ ಇಮ್ಮಡಿಯಾಗಿ ಕೇಪ್ ಟೌನ್‍ನ ಪರಿಸ್ಥಿತಿಯ ಪುನರಾವರ್ತನೆಯಾಗುತ್ತದೆಯೇ ಹೊರತು ಪರಿಹಾರವಾಗುವುದಿಲ್ಲ. ನಮ್ಮ ದೇಶದ ಎಲ್ಲ ಮಹಾನಗರಗಳ (ಅಷ್ಟೇ ಏಕೆ? ಎಲ್ಲ ಗ್ರಾಮ, ಪಟ್ಟಣ ಮತ್ತು ನಗರಗಳ) ಆಡಳಿತ ಮಂಡಳಿ ಮತ್ತು ಯೋಜನಾ ಸಿಬ್ಬಂದಿ ಈ ವಿಷಯವಾಗಿ ಗಂಭೀರವಾಗಿ ಯೋಚಿಸಿ ದಿಟ್ಟ ಹೆಜ್ಜೆಗಳನ್ನಿಡುವ ಸಮಯ ಆಗಲೇ ಬಂದಿದೆ.

ಮಲಯೇಶಿಯಾ ಜೊತೆ ಸಿಂಗಪುರದ ಒಪ್ಪಂದ

ಮಲಯೇಶಿಯಾ ಜೊತೆ ಸಿಂಗಪುರದ ಒಪ್ಪಂದ

ಈ ದಿಶೆಯಲ್ಲಿ ಸಿಂಗಪುರ ದೇಶ ಒಂದು ಮಾದರಿ ಎನ್ನಬಹುದು. ಆದರೆ ಅದು ಮಾದರಿಯಾಗಲು ಕಾರಣ ಅಲ್ಲಿಯ ಆಡಳಿತದ ಜನಪರ ದೃಷ್ಟಿಕೋನ ಮತ್ತು ದೂರದೃಷ್ಟಿ. ಸ್ವಾತಂತ್ರ್ಯಾನಂತರ ಸಿಂಗಪುರ ದೇಶ ತನ್ನ ನೀರಿನ ಪೂರೈಕೆಗೆ ಹೆಚ್ಚು ಕಡಿಮೆ ಮಲಯೇಶಿಯಾ ದೇಶ ಒದಗಿಸುತ್ತಿದ್ದ ನೀರಿನ ಮೇಲೆಯೇ ಅವಲಂಬಿತವಾಗಿತ್ತು. ಸಮುದ್ರದಿಂದ ಸುತ್ತುವರೆದ ಸಿಂಗಪುರದಲ್ಲಿ ಸ್ವಾಭಾವಿಕವಾಗಿ ದೊರಕುವ ಸಿಹಿ ನೀರಿನ ಪ್ರಮಾಣ ಕಡಿಮೆಯೇ. ಅಂತೆಯೇ ಮಲಯೇಶಿಯಾ ಒಕ್ಕೂಟದಿಂದ ಹೊರಬೀಳುವ ಮೊದಲು ಅಲ್ಲಿಯ ಆಡಳಿತ ನೀರಿನ ಪೂರೈಕೆಯ ಬಗ್ಗೆ ಮಲಯೇಶಿಯದೊಂದಿಗೆ ಒಂದು ದೀರ್ಘಕಾಲೀನ ಒಪ್ಪಂದವನ್ನು ಮಾಡಿಕೊಂಡಿತು. ಮುಂದಿನ 99 ವರ್ಷಗಳವರೆಗೆ ಮಲಯೇಶಿಯಾ ಸಿಂಗಪುರಕ್ಕೆ ನೀರು ಒದಗಿಸುವದಕ್ಕೆ ಬದ್ಧವಾಯಿತು.

ಸಿಂಗಪುರದಲ್ಲಿ ಸರೋವರಗಳ ಅಭಿವೃದ್ಧಿ

ಸಿಂಗಪುರದಲ್ಲಿ ಸರೋವರಗಳ ಅಭಿವೃದ್ಧಿ

ಆದರೆ ಸಿಂಗಪುರದ ಆಡಳಿತ ಅಲ್ಲಿಗೇ ಸುಮ್ಮನಾಗಲಿಲ್ಲ. ಜಲ ಸಂರಕ್ಷಣೆಯ ದಿಶೆಯಲ್ಲಿ ಶತಾಯ ಗತಾಯ ಪ್ರಯತ್ನ ನಡೆಸಿ ಸಿಂಗಪುರದಲ್ಲಿ ನೀರಿನ ಸಂಗ್ರಹವನ್ನು ಹೆಚ್ಚಿಸುವ ಕೆಲಸ ಮಾಡಿತು. ಅಲ್ಲಿಯ ಅನೇಕ ಸರೋವರಗಳನ್ನು ಅಭಿವೃದ್ದಿಪಡಿಸಿತು. ಮಳೆನೀರಿನ ಕುಯಿಲನ್ನು ಜಾರಿಗೊಳಿಸುವುದಕ್ಕೆ ಪ್ರೋತ್ಸಾಹ ನೀಡಿತು. ಇಂದು ಸಮುದ್ರದ ನೀರಿನ ಉಪ್ಪನ್ನು ಬೇರ್ಪಡಿಸಿ ಕುಡಿಯುವ ನೀರನ್ನು ತಯಾರಿಸುವ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡ ದೇಶಗಳಲ್ಲಿ ಸಿಂಗಪುರ ಅಗ್ರ ಪಂಕ್ತಿಗೆ ಸೇರಿದೆ.

ಮಳೆ ನೀರನ್ನು ಸಂಗ್ರಹಿಸುವ ಕೆರೆಗಳು

ಮಳೆ ನೀರನ್ನು ಸಂಗ್ರಹಿಸುವ ಕೆರೆಗಳು

ಇಂದು ಸಿಂಗಪುರದಲ್ಲಿ ನಾಲ್ಕು ನೀರಿನ ಮೂಲಗಳಿವೆ. ಮೊಟ್ಟಮೊದಲನೇಯದಾಗಿ ಮಳೆ ನೀರು. ಸಿಂಗಪುರದಲ್ಲಿ ಹಲವಾರು ಕೃತ್ರಿಮ ಕೆರೆಗಳಿವೆ. ಈ ಕೆರೆಗಳು ಮಳೆನೀರನ್ನು ಸಂಗ್ರಹಿಸುತ್ತವೆ. ಸಂಗ್ರಹಿಸಿದ ಮಳೆ ನೀರಿನ ಪ್ರಮಾಣ ಸಿಂಗಪುರದ ಒಟ್ಟು ಬೇಡಿಕೆಯ ಸುಮಾರು ಶೇಕಡಾ 25ರಷ್ಟು ಪೂರೈಸುತ್ತದೆ. ಎರಡನೇಯದಾಗಿ ಒಟ್ಟು ಬೇಡಿಕೆಯ ಸುಮಾರು ಶೇ.50ರಷ್ಟು ನೀರನ್ನು ಮಲಯೇಶಿಯಾದಿಂದ ಪಡೆಯುತ್ತದೆ.

ಎನ್ಈವಾಟರ್ ಎಂಬ ತಂತ್ರಜ್ಞಾನದ ಅಭಿವೃದ್ಧಿ

ಎನ್ಈವಾಟರ್ ಎಂಬ ತಂತ್ರಜ್ಞಾನದ ಅಭಿವೃದ್ಧಿ

ಅಲ್ಲದೇ ಸಿಂಗಪುರ ತನ್ನದೇ ಆದ NEWater ಎಂಬ ಒಂದು Technologyಯನ್ನು ಅಭಿವೃದ್ದಿಪಡಿಸಿದೆ. ಈ Technologyಯ ಮೂಲಕ ಬಳಸಿದ ನೀರನ್ನು ಮತ್ತೆ ಪರಿಶುದ್ಧಗೊಳಿಸಿ ಪುನರ್ಬಳಕೆ ಮಾಡುತ್ತದೆ. ಈ ರೀತಿಯಾಗಿ ಸುಮಾರು ಶೇ. 30ರಷ್ಟು ನೀರನ್ನು ಪಡೆಯುತ್ತದೆ. ಕೊನೆಯದಾಗಿ ಸಿಂಗಪುರ ದೊಡ್ಡ ಪ್ರಮಾಣದ Desalination (ಸಮುದ್ರದ ನೀರಿನಿಂದ ಉಪ್ಪನ್ನು ಬೇರ್ಪಡಿಸುವ) ಸ್ಥಾವರಗಳನ್ನು ನಿರ್ಮಿಸಿದೆ. ಈ ಮೂಲಕ ಸುಮಾರು ಶೇ.10ರಷ್ಟು ನೀರನ್ನು ಪಡೆಯುತ್ತದೆ.

ಮರೀನಾ ಬ್ಯಾರೇಜ್ ಎಂಬ ಅದ್ಭುತ

ಮರೀನಾ ಬ್ಯಾರೇಜ್ ಎಂಬ ಅದ್ಭುತ

ಮಳೆ ನೀರು ಸಂಗ್ರಹಿಸುವುದಕ್ಕಾಗಿ ಕೈಗೊಂಡ ಮರೀನಾ ಬ್ಯಾರೇಜ್ ಕೂಡ ಒಂದು ಅದ್ಭುತ ಯೋಜನೆ. ಸಿಂಗಪುರ ನದಿ ಮತ್ತು ಕಲ್ಲಾಂಗ್ ನದಿಗಳು ಸಮುದ್ರ ಸೇರುವ ಪ್ರದೇಶದಲ್ಲಿ ಕಟ್ಟಿದ ಈ ಬ್ಯಾರೇಜ್‍ನಿಂದಾಗಿ ಸಿಂಗಪುರದ ಹದಿನೈದನೇ ಜಲಾಶಯ ನಿರ್ಮಿತವಾಯಿತು. ಮಳೆ ಹೆಚ್ಚಾದಾಗ ಬ್ಯಾರೇಜ್‍ನ ದ್ವಾರಗಳು ಜಲಾಶಯದ ನೀರನ್ನು ಸಮುದ್ರಕ್ಕೆ ಬಿಡುತ್ತವೆಯೇ ಹೊರತು ಸಮುದ್ರದ ನೀರನ್ನು ಜಲಾಶಯದೊಳಗೆ ನುಗ್ಗದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಉಪ್ಪುನೀರಿನ ಜಲಾಶಯ ಕ್ರಮೇಣ ತಮ್ಮ ಲವಣಾಂಶ ಕಳೆದುಕೊಂಡು ಸಿಹಿ ನೀರಿನ ಜಲಾಶಯವಾಗಿ ಪರಿವರ್ತನೆಗೊಳ್ಳುತ್ತದೆ. ಹತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿತವಾದ ಈ ಜಲಾಶಯ ಜಲಸಂರಕ್ಷಣೆಯತ್ತ ಸಿಂಗಪುರದ ದಿಟ್ಟ ಹೆಜ್ಜೆ.

ರಚನಾತ್ಮಕ ನಡೆಗೆ ಕಾರಣರಾದವರು ಲೀ ಕುವಾನ್ ಯೂ

ರಚನಾತ್ಮಕ ನಡೆಗೆ ಕಾರಣರಾದವರು ಲೀ ಕುವಾನ್ ಯೂ

ಸಿಂಗಪುರದ ಈ ರಚನಾತ್ಮಕ ನಡೆ(structured approach)ಗೆ ಕಾರಣೀಭೂತರಾದವರು, ತಮ್ಮ ದೇಶದ ನೀರು ಸಂರಕ್ಷಣೆ (Water Security)ಯ ಮಹತ್ವವನ್ನು ಮನಗಂಡ ಅಂದಿನ ಪ್ರಧಾನಿ ಮತ್ತು ರಾಜಕೀಯ ಮುತ್ಸದ್ದಿ ಲೀ ಕುವಾನ್ ಯೂ ಜಲ ಸಂರಕ್ಷಣೆಯತ್ತ ಮರೀನಾ ಬ್ಯಾರೇಜ್‍ನಂತಹ ಅನೇಕ ಅದ್ಭುತ ಯೋಜನೆಗಳ ಜನಕರಾದರು. ಒಟ್ಟಿನಲ್ಲಿ ಸಿಂಗಪುರದ ಇಂದಿನ ನೀರು ಸಂರಕ್ಷಣೆ (Water Security)ಯ ಯಶಸ್ಸಿಗೆ ಹಲವು ದಶಕಗಳ ಕಾರ್ಯ ಯೋಜನೆ ಮತ್ತು ದೂರದೃಷ್ಟಿ ಕಾರಣ.

ನಮ್ಮ ನಾಯಕರಲ್ಲಿ ದೂರದೃಷ್ಟಿಯ ಕೊರತೆ

ನಮ್ಮ ನಾಯಕರಲ್ಲಿ ದೂರದೃಷ್ಟಿಯ ಕೊರತೆ

ದುರದೃಷ್ಟಾವಶಾತ್ ನಮ್ಮ ದೇಶದ ಮುಂದಾಳತ್ವದಲ್ಲಿ ಈ ಎರಡೂ ಸದ್ಗುಣಗಳು ಅತೀ ಕಡಿಮೆ. ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ರಾಷ್ಟ್ರಗಳಲ್ಲೊಂದಾದ ಭಾರತಕ್ಕೆ ಈ ರೀತಿಯ ದೂರದೃಷ್ಟಿ ಮತ್ತು ಕಾರ್ಯ ಯೋಜನೆ ಅತ್ಯಗತ್ಯ ಎಂಬುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ದೇಶದಲ್ಲಿ ಜಲಸಂಪನ್ಮೂಲದ ಸಂರಕ್ಷಣೆ ದೇಶದ ಒಟ್ಟಾರೆ ಸಂರಕ್ಷಣೆಯಷ್ಟೇ ಮಹತ್ವದ್ದು. ನಮ್ಮಲ್ಲೂ ಕೂಡ ರಾಜಕೀಯ ಮುತ್ಸದ್ದಿತನ ಬೆಳೆದು ನಮ್ಮ ರಾಷ್ಟ್ರ ನಾಯಕರೆನಿಸಿಕೊಂಡವರು ಇಂತಹ ರಾಷ್ಟ್ರಹಿತದ ಕಾರ್ಯಗಳಲ್ಲಿ ಪರಸ್ಪರ ವಿರೋಧವನ್ನು ಮರೆತು ದಿಟ್ಟ ಹೆಜ್ಜೆಗಳನ್ನಿಡುವರೆ? ಈ ಪ್ರಶ್ನೆಗೆ ಕಾಲ ಮಹಾಶಯನೇ ಉತ್ತರ ನೀಡಬೇಕು.

English summary
Is Singapore prepared to face drinking water scarcity? Singapore has no natural water supply. Though it is getting water from Malaysia, the country has developed several lakes, built Marina barriage, using desalination to extract drinking water from sea, developed NEwater technology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X