ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜ್ಞಾನ- ವೇದಾಂತದ ಅಪರೂಪದ ಮಿಶ್ರಣ ಜಾರ್ಜ್ ಸುದರ್ಶನ್ ಗೆ ವಿದಾಯ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಡಾ.ಇ.ಸಿ. ಜಾರ್ಜ್ ಸುದರ್ಶನ್ ಎಂಬತ್ತಾರರ ಇಳಿವಯಸ್ಸಿನಲ್ಲಿ ತೀರಿಕೊಂಡು ಹೆಚ್ಚು ಕಡಿಮೆ ಒಂದು ತಿಂಗಳಾಯಿತು. ಅವರ ಹೆಸರನ್ನು ಅನೇಕರು ಕೇಳಿರಬಹುದು. ಆದರೂ "ಯಾರೀ ಜಾರ್ಜ್ ಸುದರ್ಶನ್" ಎಂದು ಕೇಳುವವರೇ ಹೆಚ್ಚು ಎಂದು ನನ್ನ ಅನಿಸಿಕೆ. ಇದರಲ್ಲಿ ಅವರ ತಪ್ಪೇನಿಲ್ಲ.

ರಾಜಕೀಯ, ಸಿನಿಮಾ ಮತ್ತು ಕ್ರಿಕೆಟ್ ಗಳ ಗೀಳು ಹಚ್ಚಿಕೊಂಡಿರುವ ನಮ್ಮ ದೇಶದ ಮಾಧ್ಯಮಗಳು ದಿನದ ಇಪ್ಪತ್ನಾಲ್ಕು ಗಂಟೆಗಳೂ ಅವುಗಳಿಗೆ ಸಂಬಂಧಿಸಿದ ವಿಷಯಗಳನ್ನೇ ಬಿತ್ತರಿಸುತ್ತಿದ್ದರೆ, ಡಾ. ಜಾರ್ಜ್ ಸುದರ್ಶನ್ ಅವರಂತಹ ಮಹನೀಯರ ಬಗ್ಗೆ ನಮ್ಮಂತಹ ಜನ ಸಾಮಾನ್ಯರಿಗೆ ಹೇಗೆ ಗೊತ್ತಾಗಬೇಕು?

ಕರ್ನಾಟಕದ ಶೇಕ್ಸ್ ಪಿಯರ್ ಕಂದಗಲ್ ಹನುಮಂತರಾಯರುಕರ್ನಾಟಕದ ಶೇಕ್ಸ್ ಪಿಯರ್ ಕಂದಗಲ್ ಹನುಮಂತರಾಯರು

ಡಾ. ಇ ಸಿ ಜಾರ್ಜ್ ಸುದರ್ಶನ್ ಅವರ ಹೆಸರನ್ನು ನಾನು ಕೇಳಿದ್ದು ಕಾಲೇಜಿನಲ್ಲಿ ಓದುತ್ತಿದ್ದಾಗ. ಅಂದ ಹಾಗೆ ಕೇಳಿದ್ದಲ್ಲ. ಓದಿದ್ದು. ಬಹುಶಃ ಸೈನ್ಸ್ ಟುಡೇ ಎಂಬ ಮಾಸಪತ್ರಿಕೆಯಲ್ಲಿ ಎಂದು ನೆನಪು. ಡಾ. ಎನ್ನಾಕಲ್ ಚಂಡಿ ಜಾರ್ಜ್ ಸುದರ್ಶನ್ ಒಬ್ಬ ಪ್ರಸಿದ್ಧ ಭೌತ ಶಾಸ್ತ್ರಜ್ಞ. ಅಮೆರಿಕದ ಯೂನಿವರ್ಸಿಟಿ ಆಫ್ ಟೆಕ್ಸಾಸ್ ನಲ್ಲಿ ಹಿರಿಯ ಪ್ರೊಫೆಸರ್ ಎಂದು ಬಹುಕಾಲ ಕೆಲಸ ಮಾಡಿದ ಡಾ.ಇ.ಸಿ.ಜಾರ್ಜ್ ಸುದರ್ಶನ್ ಒಬ್ಬ ಹೆಸರಾಂತ ಸಂಶೋಧಕ.

Indian theoretical physicist, Professor George Sudarshan obituary

ಕೇರಳದ ಕೊಟ್ಟಾಯಮ್ ಮೂಲದ ಡಾ. ಜಾರ್ಜ್ ಸುದರ್ಶನ್ ತಮ್ಮ ಬಿಎಸ್ ಸಿ ಪದವಿಯನ್ನು ಪಡೆದದ್ದು ತಮ್ಮೂರಿನ ಸಿಎಮ್ ಎಸ್ ಕಾಲೇಜಿನಲ್ಲಿ. ಮುಂದೆ ಚೆನ್ನೈನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಿಂದ ಸ್ನಾತಕೋತ್ತರ ಪದವಿ ಪಡೆದು ಟಾಟಾ ಮೂಲಭೂತ ಸಂಶೋಧನಾ ಕೇಂದ್ರ (Tata Institute of Fundamental Research)ದಲ್ಲಿ ಹೋಮಿ ಜಹಾಂಗೀರ್ ಭಾಭಾ ಅವರೊಂದಿಗೆ ಕೆಲ ಕಾಲ ಕೆಲಸ ಮಾಡಿದರು.

ಅಲ್ಲಿಂದ ಮುಂದೆ ನ್ಯೂಯಾರ್ಕ್ ನ ಯೂನಿವರ್ಸಿಟಿ ಆಫ್ ರೋಚೆಸ್ಟರ್‍ ನಲ್ಲಿ ಓದಿ ಡಾಕ್ಟರೇಟ್ ಪದವಿ ಪಡೆದರು. ಮುಂದೆ ಹಾರ್ವರ್ಡ್ ನಲ್ಲಿ ಪೋಸ್ಟ್ ಡಾಕ್ಟರಲ್ ಸಂಶೋಧನೆ ಕೈಗೊಂಡರು. 1969ರಲ್ಲಿ ಅಮೇರಿಕದ ಯೂನಿವರ್ಸಿಟಿ ಆಫ್ ಟೆಕ್ಸಾಸ್‍ ಸೇರಿ ತಮ್ಮ ನಿವೃತ್ತಿಯವರೆಗೆ ಅಲ್ಲಿಯೇ ಕೆಲಸ ಮಾಡಿದರು.

ಜಗತ್ತಿನ ರಹಸ್ಯ ಸ್ಪಷ್ಟವಾಗಿ ಹೇಳಬಲ್ಲ ಸಿದ್ಧಾಂತ ಯಾವುದು?ಜಗತ್ತಿನ ರಹಸ್ಯ ಸ್ಪಷ್ಟವಾಗಿ ಹೇಳಬಲ್ಲ ಸಿದ್ಧಾಂತ ಯಾವುದು?

ಅವರು ಯೂನಿವರ್ಸಿಟಿ ಆಫ್ ಟೆಕ್ಸಾಸ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ ಸಮಾನಾಂತರವಾಗಿ ನಮ್ಮ ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರ (Indian Institute of Science)ದಲ್ಲಿ ಕೂಡ ಪ್ರೊಪೆಸರ್ ಎಂದು ಕೆಲಸ ಮಾಡುತ್ತಿದ್ದರು. ಹೀಗೆ ಅವರು ಭಾರತ ಮತ್ತು ಅಮೆರಿಕದಲ್ಲಿ ಸಮ ಸಮವಾಗಿ ತಮ್ಮ ಸೇವೆ ಸಲ್ಲಿಸಿದರು. ಅವರು ಚೆನ್ನೈನ ಗಣಿತ ವಿಜ್ಞಾನ ಕೇಂದ್ರ (Institute of Mathematical Science)ದ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದರು.

ಡಾ. ಜಾರ್ಜ್ ಸುದರ್ಶನ್ ತಮ್ಮ ಅತ್ಯಪೂರ್ವ ಸಂಶೋಧನೆಗಳಿಗೆ ಹೆಸರಾಗಿದ್ದಾರೆ. ಅವರು V.A theory of weak forces, Quantum Optics, Quantum zeno effect, non-variance groups ಮತ್ತು positive maps of density matrices ಮುಂತಾದ ವಿಷಯಗಳಲ್ಲಿ ಉನ್ನತ ಸಂಶೋಧನೆಯನ್ನು ಮಾಡಿದರು. ಅವರು ಐನ್ ಸ್ಟೀನ್ ಅವರ ಸಾಪೇಕ್ಷ ಸಿದ್ಧಾಂತಕ್ಕೆ ಕೂಡ ಸವಾಲೆಸೆದಿದ್ದರು.

ಸಾಪೇಕ್ಷ ಸಿದ್ಧಾಂತದ ಪ್ರಕಾರ ಯಾವ ವಸ್ತುವೂ ಬೆಳಕಿನ ವೇಗಕ್ಕಿಂತ ಹೆಚ್ಚು ವೇಗವನ್ನು ಪಡೆಯುವುದು ಸಾಧ್ಯವಿಲ್ಲ. ಆದರೆ ಅವರು ಟ್ಯಾಚಿಯೊನ್ ಎಂಬ ಕಣ ಬೆಳಕಿನ ವೇಗಕ್ಕಿಂತ ಹೆಚ್ಚು ವೇಗವನ್ನು ಹೊಂದಬಹುದು ಎಂದು ಸೈದ್ಧಾಂತಿಕವಾಗಿ ತೋರಿಸಿಕೊಟ್ಟರು.

ಅವರ ಸಂಶೋಧನೆಗಳು ಅದೆಷ್ಟು ಹೆಸರಾದವೆಂದರೆ, ಅವರ ಹೆಸರು ನೊಬೆಲ್ ಪಾರಿತೋಷಕಕ್ಕೆ ಒಂಬತ್ತು ಬಾರಿ ಸೂಚಿಸಲ್ಪಟ್ಟಿತ್ತು. ಅದರೆ ಒಂದು ಬಾರಿಯೂ ನೊಬೆಲ್ ಅವರಿಗೆ ದೊರಕಲಿಲ್ಲ ಎಂದರೆ ದೌರ್ಭಾಗ್ಯವೇ ಸರಿ. ಅವರೊಂದಿಗೆ ಸೇರಿ ಕೆಲಸ ಮಾಡಿದವರಿಗೆ, ಅವರ ಸಿದ್ಧಾಂತಗಳ ಆಧಾರದ ಮೇಲೆ ಹೆಚ್ಚಿನ ಕೆಲಸ ಮಾಡಿದವರಿಗೆ ನೊಬೆಲ್ ಬಹುಮಾನ ದೊರಕಿದ್ದು, ಆದರೆ ನೊಬೆಲ್ ಸಮಿತಿ ಅವರ ಹೆಸರನ್ನು ನಿರ್ಲಕ್ಷಿಸಿದ್ದುದನ್ನು ನೋಡಿದರೆ, ನೊಬೆಲ್ ಸೈತಿಯ ಕಾರ್ಯ ವಿಧಾನದ ಬಗ್ಗೆ ಶಂಕೆಯನ್ನುಂಟು ಮಾಡುತ್ತದೆ.

ಕ್ವಾಂಟಮ್ ಮೆಕ್ಯಾನಿಕ್ಸ್ ನ ಒಂದು ಮಹತ್ವದ ಸೂತ್ರವನ್ನು ಕಂಡು ಹಿಡಿದ ಸುದರ್ಶನ್ ಅವರ ಸಂಶೋಧನೆಯನ್ನು ಅಮೆರಿಕದ ರಾಯ್ ಗ್ಲಾಬರ್ ಎಂಬ ವಿಜ್ಞಾನಿ ಮೊದಲು ಕಟುವಾಗಿ ಟೀಕಿಸಿ ನಂತರ ಅದೇ ಸಂಶೋಧನೆಯನ್ನು ತನ್ನದೇ ಆದ ಬೇರೆ ರೂಪದಲ್ಲಿ ವ್ಯಕ್ತಪಡಿಸಿ, ಆ ಸಂಶೋಧನೆ ತಮ್ಮದೇ ಎಂದು ಪ್ರಕಟಿಸಿದರು.

ವೈಜ್ಞಾನಿಕ ಸಮೂಹ ಅದನ್ನು ಟೀಕಿಸಿದ ನಂತರ ಆ ಸಂಶೋಧನೆಗೆ "ಸುದರ್ಶನ್ - ಗ್ಲಾಬರ್ ಪಿ ರಿಪ್ರೆಸೆಂಟೇಶನ್" ಎಂದು ಹೆಸರಿಟ್ಟರು. ಅದೇ ಹೆಸರಿನಿಂದ ಅದು ತುಂಬಾ ಪ್ರಸಿದ್ಧಿ ಪಡೆಯಿತು. ಆದರೆ 2005ರಲ್ಲಿ ನೊಬೆಲ್ ಸಮಿತಿ ತನ್ನ ಬಹುಮಾನವನ್ನು ಗ್ಲಾಬರ್ ಅವರಿಗೆ ಕೊಟ್ಟು, ಜಾರ್ಜ್ ಸುದರ್ಶನ್ ಅವರ ಹೆಸರನ್ನು ಕಡೆಗಣಿಸಿತು.

ಇಂತಹ ದೊಡ್ಡ ಭೌತ ವಿಜ್ಞಾನಿ ಡಾ. ಸುದರ್ಶನ್, ವೇದಾಂತದಲ್ಲಿ ಕೂಡ ಅಪಾರ ಆಸಕ್ತಿ ಹೊಂದಿದ್ದರು. ವೇದಾಂತ ವಿಷಯದಲ್ಲಿ ಸ್ವಾಮಿ ಚಿನ್ಮಯಾನಂದ, ಡಾ. ಸತ್ಯನಾರಾಯಣ ಶಾಸ್ತ್ರಿ ಮುಂತಾದ ವೇದ ಪಾರಂಗತರೊಂದಿಗೆ ವಿಚಾರ ವಿನಿಮಯ ಮಾಡುತ್ತಿದ್ದರು. ಅವರು ವೇದಾಂತ ಮತ್ತು ಭೌತ ವಿಜ್ಞಾನದ ಬಗ್ಗೆ ಅನೇಕ ಪ್ರವಚನಗಳನ್ನು ಕೂಡ ನೀಡುತ್ತಿದ್ದರು.

ಅವರು 1999ರಲ್ಲಿ ಟೋನಿ ರಾಥಮನ್ ಅವರೊಂದಿಗೆ "Doubt and Certainty: The Celebrated Academy Debates on Science, Mysticism Reality" ಎಂಬ ಪುಸ್ತಕವನ್ನು ರಚಿಸಿದರು. ಈ ಪುಸ್ತಕದಲ್ಲಿ ವೇದಾಂತ ಮತ್ತು ಭೌತ ವಿಜ್ಞಾನಗಳಲ್ಲಿನ ಸಾಮ್ಯತೆಯನ್ನು ಕುರಿತು ಚರ್ಚೆ ಮಾಡುತ್ತಾರೆ.

ಇಂತಹ ಉನ್ನತ ಮಟ್ಟದ ಪ್ರತಿಭೆ ಡಾ. ಜಾರ್ಜ್ ಸುದರ್ಶನ್ ತಮ್ಮ ಅನೇಕ ಸಂಶೋಧನೆಗಳನ್ನು ಅಮೆರಿಕದಲ್ಲಿ ಇದ್ದುಕೊಂಡು ಮಾಡಿದರು. ಅದರೆ ಮುಖ್ಯವಾದ ಸಂಗತಿಯೇನೆಂದರೆ ಡಾ. ಜಾರ್ಜ್ ಸುದರ್ಶನ್ ಅಮೆರಿಕಕ್ಕೆ ಸಂಪೂರ್ಣವಾಗಿ ವಲಸೆ ಹೋಗಲಿಲ್ಲ. ಅಮೆರಿಕದ ವಿಶ್ವ ವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಲೇ ಭಾರತದಲ್ಲಿ ಕೂಡ ಸೇವೆ ಸಲ್ಲಿಸಿದರು. ತಾವು ಕೆಲಸ ಮಾಡಿದ ಭಾರತದ ವಿಜ್ಞಾನ ಸಂಸ್ಥೆಗಳನ್ನು ವಿಶ್ವ ಮಟ್ಟಕ್ಕೇರಿಸಲು ಶ್ರಮಿಸಿದರು.

ಅವರು ಮನಸ್ಸು ಮಾಡಿದ್ದರೆ ಅಮೆರಿಕದಲ್ಲಿಯೇ ಇದ್ದು, ತಮ್ಮ ವೈಜ್ಞಾನಿಕ ಸಂಶೋಧನೆಗಳಿಗೆ ಸಂಪೂರ್ಣ ಗಮನ ಕೊಟ್ಟು, ಇನ್ನೂ ಹೆಚ್ಚಿನ ಯಶಸ್ಸು ಗಳಿಸಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಇದು ಅವರಲ್ಲಿ ಜ್ವಲಿಸುತ್ತಿದ್ದ ದೇಶ ಭಕ್ತಿಯನ್ನು ಎತ್ತಿ ತೋರಿಸುತ್ತದೆ. ಈ ಕಾರಣಕ್ಕಾಗಿಯೇ ಎಷ್ಟೇ ಅರ್ಹರಾಗಿದ್ದರೂ ಅವರ ಹೆಸರನ್ನು ನೊಬೆಲ್ ಸಮಿತಿ ಮಾನ್ಯ ಮಾಡಲಿಲ್ಲವೇನೋ?

ಡಾ. ಸುದರ್ಶನ್ ಅವರ ಹೆಸರು ಹೋಮಿ ಜಹಾಂಗೀರ್ ಭಾಭಾ, ಸಿ.ವಿ.ರಾಮನ್, ಜಗದೀಶ್ ಚಂದ್ರ ಬೋಸ್ ಮುಂತಾದವರ ಹಾಗೆ ಮನೆ ಮಾತಾಗಿರಲಿಕ್ಕಿಲ್ಲ. ಆದರೆ ವಿಜ್ಞಾನಕ್ಕೆ ಮತ್ತು ಭಾರತದ ಗರಿಮೆಗೆ ಅವರ ಕೊಡುಗೆ ಅಪಾರವಾದದ್ದು. ಅಂತಹ ಮಹಾನ್ ಚೇತನ ಡಾ. ಸುದರ್ಶನ್ ಅವರಿಗೆ ನನ್ನದೊಂದು ಶ್ರದ್ಧಾಂಜಲಿಪೂರ್ವಕ ನಮನ.

English summary
Ennackal Chandy George Sudarshan was an Indian theoretical physicist and a professor at the University of Texas, recently passed away. He was very interesting and important scientist from India. Here is the obituary by Oneindia Kannada columnist Vasanth Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X