ಬ್ರಿಟಿಷರಿಗೆ ಭಾರತ ಕಳ್ಳರಿಗೆ ಕಂಡುಬಂದ ಖಜಾನೆ!

Posted By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಮೊನ್ನೆ ನನ್ನ ವಾಟ್ಸಾಪ್‍ನಲ್ಲಿ ಒಂದು ಸಂದೇಶ ಬಂದಿತು. ಈ ಸಂದೇಶದಲ್ಲೊಂದು ವಿಡಿಯೋ ಚರ್ಚೆ ಇತ್ತು. ಆ ಚರ್ಚೆಯಲ್ಲಿ ಪ್ರೇಕ್ಷಕನೊಬ್ಬ ಶಶಿ ತರೂರ್ ಅವರನ್ನು ಹೀಗೆ ಕೇಳುತ್ತಾನೆ.

ಸ್ವಾತಂತ್ರ್ಯ ದಿನದ ಸ್ಮರಣೆಯಲ್ಲಿ ಕತಲೂನ್ಯಾ ಸ್ವಾತಂತ್ರ್ಯ ಹೋರಾಟದ ಕಥೆ...

"ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ಅದನ್ನು ಜಗತ್ತಿನ ಅತ್ಯಂತ ಬಡರಾಷ್ಟ್ರವನ್ನಾಗಿ ಮಾಡಿ ಹೋದರು ಎಂದು ಹೇಳುತ್ತೀರಿ, ಆದರೆ ಭಾರತಕ್ಕೆ ಆಧುನಿಕ ಸಂಪರ್ಕ ಸಾಧನಗಳು, ಹೊಸ ರಾಜಕೀಯ ಪರಿಜ್ಞಾನ ಮತ್ತು ಆಡಳಿತ ಹಾಗೂ ಶಿಕ್ಷಣಗಳಂತ ಕೊಡುಗೆಗಳನ್ನು ಬ್ರಿಟಿಷರು ನೀಡಲಿಲ್ಲವೇ? ಈಗ ಭಾರತ ದಿನೇ ದಿನೇ ಸಬಲಗೊಂಡು ಮುಂದುವರೆಯುತ್ತಿರಲು ಬ್ರಿಟಿಷರ ಈ ಕೊಡುಗೆಗಳೇ ಕಾರಣವಲ್ಲವೇ? ಬ್ರಿಟಿಷರು ಭಾರತಕ್ಕೆ ಬಂದಿರದಿದ್ದರೆ ಭಾರತದ ಗತಿಯೇನಾಗುತಿತ್ತು?"

India would have been more prosperous without British

ಬಹುಶಃ ನಮ್ಮಲ್ಲನೇಕರು ಹೀಗೆಯೇ ಯೊಚಿಸುತ್ತಿರಬಹುದಲ್ಲವೇ? ನಾವು ನೋಡುತ್ತಿರುವ ರಸ್ತೆಗಳು, ರೈಲು ಮಾರ್ಗಗಳು, ಪ್ರಜಾಪ್ರಭುತ್ವ ಮತ್ತು ಆಧುನಿಕ ವಿದ್ಯಾಲಯಗಳು ಬ್ರಿಟಿಷರೇ ಮಾಡಿದ್ದು ಎಂಬ ತಪ್ಪು ಕಲ್ಪನೆ ಅನೇಕರಲ್ಲುಂಟು. ಬ್ರಿಟಿಷರು ಬರುವ ಮುಂಚೆ ಭಾರತ ಅಜ್ಞಾನ ಮತ್ತು ಮೂಢನಂಬಿಕೆಗಳ ಬೀಡಾಗಿತ್ತು ಎಂಬ ನಂಬಿಕೆಯೂ ಅನೇಕರಲ್ಲುಂಟು. ಈ ಪ್ರಶ್ನೆಗೆ ಶಶಿ ತರೂರರ ಉತ್ತರ ಮಾರ್ಮಿಕವಾಗಿತ್ತು.

ಭಾರತ-ಪಾಕ್ ಮಧ್ಯೆ ಗಡಿ ರೇಖೆ ಎಳೆದವರು ಯಾರು?

"ಬ್ರಿಟಿಷರು ಭಾರತಕ್ಕೆ ಬಂದಾಗ ಭಾರತ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿತ್ತು. ಆಗ ಭಾರತದ ಜಿಡಿಪಿ ಜಗತ್ತಿನ ಶೇ.27ರಷ್ಟು ಇತ್ತು. ನಂತರದ ಎರಡುನೂರು ವರ್ಷಗಳ ಅವರ ಆಡಳಿತ ಮುಗಿದಾಗ ಭಾರತ ಜಗತ್ತಿನ ಅತ್ಯಂತ ಬಡ ರಾಷ್ಟ್ರವಾಗಿ ಮಾರ್ಪಾಟುಗೊಂಡಿತ್ತು. ಸ್ವಾತಂತ್ರ್ಯ ಗಳಿಸಿದಾಗ ಭಾರತದ ಒಟ್ಟು ಜಿಡಿಪಿ ವಿಶ್ವದ ಶೇ.3ರಷ್ಟು ಮಾತ್ರ ಇತ್ತು. ಭಾರತದ ಜನಸಂಖ್ಯೆಯ ಶೇ.90ರಷ್ಟು ಜನರು ಬಡತನದ ರೇಖೆಯ ಕೆಳಗೆ ಜೀವಿಸುತ್ತಿದ್ದರು. ಭಾರತೀಯರ ಸರಾಸರಿ ಆಯುಷ್ಯ ಕೇವಲ 27 ವರ್ಷಗಳಾಗಿತ್ತು. ಭಾರತದ ಸಾಕ್ಷರತೆ ಕೇವಲ ಶೇ.17ರಷ್ಟಿತ್ತು". ತರೂರ್ ಅವರ ಈ ಮಾತುಗಳು ಸತ್ಯ ತಾನೇ?

India would have been more prosperous without British

ಬ್ರಿಟಿಷರು ಭಾರತದಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದರು ಎಂಬುದನ್ನು ಇಲ್ಲಿ ಅಲ್ಲಗಳೆಯುವುದಿಲ್ಲ. ಆದರೆ ಅವುಗಳೆಲ್ಲವೂ ತಮ್ಮ ಸಾಮ್ರಾಜ್ಯದ ಮುಂದುವರೆಯುವಿಕೆಗಾಗಿ ಮಾಡಿದ ಬಂಡವಾಳ ಹೂಡಿಕೆ ಅಲ್ಲವೇ? ಕೆಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು ಇಲ್ಲಿಯ ಜನರನ್ನು ಸ್ವಲ್ಪ ಮಟ್ಟಿಗೆ ವಿದ್ಯಾವಂತರನ್ನಾಗಿ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಲು ಎಂದು. ರಸ್ತೆ, ರೈಲುಮಾರ್ಗಗಳು ಮತ್ತು ಸೇತುವೆಗಳನ್ನು ನಿರ್ಮಿಸಿದ್ದು ಇಲ್ಲಿಯ ಕಚ್ಚಾವಸ್ತುಗಳನ್ನು ಯುರೋಪಿಗೆ ಕಳುಹಿಸಿ ಅಲ್ಲಿಯ ಸಂಸ್ಕರಿತ ವಸ್ತುಗಳನ್ನು ಇಲ್ಲಿಗೆ ತಂದು ತಮ್ಮ ಲಾಭವನ್ನು ದ್ವಿಗುಣಕೊಳಿಸಿಕೊಳ್ಳಲು. ಹೊಸ ಆಡಳಿತ ವ್ಯವಸ್ಥೆಯನ್ನು ರೂಪಿಸಿದ್ದು ಕೂಡ ತಮ್ಮ ಹಿತಾಸಕ್ತಿಗಳನ್ನು ಭದ್ರಪಡಿಸಿಕೊಳ್ಳಲು ಮಾತ್ರ. ಭಾರತೀಯರನ್ನು ಯಾವಾಗಲೂ ಕೀಳಾಗಿಯೇ ಕಂಡ ಬ್ರಿಟಿಷರು ಇಲ್ಲಿಯ ಜನರ ಅಭಿವೃದ್ಧಿಗೆ ದುಡಿದರು ಎಂದು ವಿಚಾರಿಸುವುದು ಕೂಡ ಹಾಸ್ಯಾಸ್ಪದ.

India would have been more prosperous without British

ಭಾರತವನ್ನು ಸುಮಾರು ಎರಡುನೂರು ವರ್ಷಗಳ ಕಾಲ ಆಳಿದ ಬ್ರಿಟಿಷರು ಮನಸ್ಸು ಮಾಡಿದ್ದರೆ ಭಾರತದ ಶ್ರೀಮಂತ ಸಂಪನ್ಮೂಲಗಳ ಮೂಲಕ ಅದನ್ನು ಇನ್ನೂ ಉಚ್ಛ್ರಾಯ ಸ್ಥಿತಿಗೆ ಏರಿಸಬಹುದಾಗಿತ್ತು. ಅದೇ ಸಮಯದಲ್ಲಿ ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿ (Industrial Revolution) ನಡೆದಿತ್ತು. ಆ ಕೈಗಾರಿಕಾ ಕ್ರಾಂತಿಯ ಪರಿಣಾಮವನ್ನು ಭಾರತದ ವಿಪುಲ ಸ್ವಾಭಾವಿಕ ಸಂಪನ್ಮೂಲಗಳು ಮತ್ತು ಅಪಾರ ಜನ ಸಂಪನ್ಮೂಲವನ್ನು ಸರಿಯಾಗಿ ಉಪಯೋಗಿಸಿ ಭಾರತವನ್ನು ಇನ್ನೂ ಉನ್ನತ ಸ್ಥಿತಿಗೆ ತಲುಪಿಸ ಬಹುದಾಗಿತ್ತು. ಹಾಗೇಕೆ ಮಾಡಲಿಲ್ಲ? ಇದರ ಉತ್ತರ ಏನೆಂದರೆ ಕೇವಲ ಲೂಟಿಯನ್ನೇ ಗುರಿಯಾಗಿಸಿಕೊಂಡ ಬ್ರಿಟಿಷರಿಗೆ ಭಾರತ, ಕಳ್ಳರಿಗೆ ಕಂಡು ಬಂದ ಖಜಾನೆಯಾಗಿತ್ತೇ ವಿನಃ ಬೇರೇನೂ ಆಗಿರಲಿಲ್ಲ. ಬ್ರಿಟಿಷರು ಹಂತಹಂತವಾಗಿ ವಿಪರೀತ ತೆರಿಗೆಗಳನ್ನು ಹೇರಿ, ವ್ಯವಸ್ಥಿತ ಸುಲಿಗೆ ಮಾಡಿ, ಕುಶಲ ಕೈಗಾರಿಕೆಗಳನ್ನು ನಾಶಗೊಳಿಸಿ ಮತ್ತು ಕುಶಲ ಕಾರ್ಮಿಕರ ಅಂತ್ಯಗೊಳಿಸಿ ಭಾರತದ ಸ್ವಂತಿಕೆಯನ್ನು ಸರ್ವನಾಶಗೊಳಿಸಿದರು. ಶಶಿ ತರೂರ್ ಹೇಳುವ ಪ್ರಕಾರ ಬ್ರಿಟಿಷರ ಆಡಳಿತದಲ್ಲಿ ಭಾರತದ ವಾರ್ಷಿಕ Growth Rate 0.001%ಗೆ ಇಳಿಯಿತಂತೆ.

ಆದುದರಿಂದ ಒಂದು ವೇಳೆ ಬ್ರಿಟಿಷರು ಭಾರತಕ್ಕೆ ಬರದಿದ್ದರೆ ಕೆಲವರು ಅಂದುಕೊಂಡಂತೆ ನಮ್ಮ ದೇಶ ಅವನತಿಯನ್ನೇನೂ ತಲುಪುತ್ತಿರಲಿಲ್ಲ ಎಂಬುದು ನನ್ನ ದೃಢ ಭಾವನೆ. ಯುರೋಪಿನಲ್ಲುಂಟಾದ ಕೈಗಾರಿಕಾ ಕ್ರಾಂತಿಯಿಂದ ಭಾರತದ ಗೃಹ ಕೈಗಾರಿಕೆಗಳಿಗೆ ಧಕ್ಕೆ ತಗುಲುತ್ತಿತ್ತೇನೋ ಸರಿ. ಆದರೆ ಭಾರತ ತನ್ನ ದಾರಿಯನ್ನು ತಾನು ಕಂಡುಕೊಳ್ಳಲು ಸ್ವತಂತ್ರವಾಗಿರುತ್ತಿತ್ತು ಮತ್ತು ಸಶಕ್ತವಾಗಿತ್ತು. ಸರಕಾರ ಮತ್ತು ನಾಗರಿಕರು ಹೊಸ ಬದಲಾವಣೆಗಳಿಗೆ ತಕ್ಕಂತೆ ಮಾರ್ಪಾಟು ಹೊಂದಿ ಆಧುನಿಕತೆಯನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತಿದ್ದರು. ನಮ್ಮ ದೇಶ ಕೂಡಾ ಉಳಿದೆಲ್ಲಾ ದೇಶಗಳಂತೆ ಸ್ವಾಭಾವಿಕವಾಗಿ ವಿಕಾಸಗೊಳ್ಳುತ್ತಿತ್ತು. ಯುರೋಪಿನ ದೇಶಗಳಿಗೆ ಹೋಲಿಸಿದರೆ ಸ್ವಲ್ಪ ನಿಧಾನವಾಗಿಯಾದರೂ ತನಗೆ ತಾನೇ ಅಭಿವೃದ್ದಿಯ ಪಥದಲ್ಲಿ ಹೆಮ್ಮೆಯಿಂದ ಕಾಲಿಡುತ್ತಿತ್ತು.

India would have been more prosperous without British

ಬ್ರಿಟಿಷರು ಬರದಿದ್ದರೆ ನಮ್ಮ ದೇಶದಲ್ಲಿ ಕರಕುಶಲ ಕರ್ಮಿಗಳ ಕಗ್ಗೊಲೆ ಆಗುತ್ತಿರಲಿಲ್ಲ. ಕ್ಲರ್ಕುಗಳನ್ನು ತಯಾರಿಸುವ ಶಾಲೆ ಕಾಲೇಜುಗಳ ಬದಲಿಗೆ ಐಐಟಿಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಇನ್ನು ಮೊದಲೇ ಸ್ಥಾಪಿತಗೊಳ್ಳುತ್ತಿದ್ದವು. ಬಂಗಾಲ ಭೀಕರ ಬರಗಾಲವನ್ನು ಕಾಣುತ್ತಿರಲಿಲ್ಲ. ಆಕ್ರಮಿತ ದೇಶ ಎಂಬ ಕೀಳರಿಮೆ ಇರುತ್ತಿರಲಿಲ್ಲ. ಬ್ರಿಟಿಷರು ಬಿತ್ತಿದ ವಿಭಜನೆಯ ವಿಷ ನಮ್ಮನ್ನಿಂದು ಕಾಡುತ್ತಿರಲಿಲ್ಲ. ನಮ್ಮ ದೇಶ ಕೂಡಾ ಇಂದಿನ ಅನೇಕ ರಾಷ್ಟ್ರಗಳಂತೆ Constitutional Monarchyಯಾಗಿ ಪರಿವರ್ತನೆಗೊಳ್ಳೂತ್ತಿತ್ತೋ ಏನೋ?

ನನ್ನ ಈ ಮೇಲಿನ ಕಲ್ಪನೆ ಸತ್ಯದಿಂದ ಬಹಳ ದೂರವಾದದ್ದು ಎಂದೇನೂ ನನಗನಿಸುವುದಿಲ್ಲ. ಉದಾಹರಣೆಗೆ ನಮ್ಮ ಕರ್ನಾಟಕವನ್ನೇ ತೆಗೆದುಕೊಳ್ಳಿ. ಮಹಾರಾಜರ ಆಡಳಿತದಲ್ಲಿನ ಮೈಸೂರು ಪ್ರಾಂತ್ಯಕ್ಕೂ ಬ್ರಿಟಿಷರ ಆಡಳಿತದಲ್ಲಿದ್ದ ಉತ್ತರ ಕರ್ನಾಟಕಕ್ಕೂ ಹೋಲಿಸಿದಾಗ ಮಹಾರಾಜರ ಆಡಳಿತದ ಜನಪದ ಮತ್ತು ಪ್ರಗತಿಪರ ಕೆಲಸಗಳಿಂದ ಮೈಸೂರು ಪ್ರಾಂತ್ಯ, ಬಹಳ ಮುಂದುವರೆದರೆ ಬ್ರಿಟಿಷರ ಆಡಳಿತದ ಉತ್ತರ ಕರ್ನಾಟಕದ ಗತಿ ಚಿಂದಿ ಬಟ್ಟೆಯಂತಾಯಿತು. ಅದೇ ರೀತಿ ಬರೋಡಾ ಪ್ರಾಂತ್ಯವೂ ಕೂಡ ಅಲ್ಲಿನ ಮಹಾರಾಜರ ಆಡಳಿತದಲ್ಲಿ ಉತ್ಕರ್ಷಗೊಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಅನೇಕ ಬಾರಿ "ಬ್ರಿಟಿಷರು ಬರುವ ಮೊದಲು ನಮ್ಮ ದೇಶ ಒಂದು ದೇಶವಾಗಿಯೇ ಇರಲಿಲ್ಲ. ಅನೇಕ ಚಿಕ್ಕ ಪುಟ್ಟ ದೇಶಗಳನ್ನು ಹೊಂದಿದ ಪ್ರದೇಶವಾಗಿತ್ತು. ಭಾರತವನ್ನು ಒಗ್ಗೂಡಿಸಿದ್ದು ಬ್ರಿಟಿಷರು" ಎಂಬ ಅಭಿಪ್ರಾಯವನ್ನು ನಾನು ಅನೇಕರಿಂದ ಕೇಳುತ್ತೇನೆ. ಈ ಹೇಳಿಕೆ ನನ್ನನ್ನು ಅತಿಯಾಗಿ ಕಾಡುವಂತಹದು. ನನ್ನ ಮಟ್ಟಿಗೆ ಹಿಂದೆ ಭಾರತ ಆಡಳಿತಾತ್ಮಕವಾಗಿ ಒಂದು ದೇಶವಾಗಿರದಿದ್ದರೂ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಯಾವಾಗಲೂ ಒಂದಾಗಿದ್ದ ಪುಣ್ಯಭೂಮಿ.

India would have been more prosperous without British

ಕಾಶಿ, ಬದರಿ ಮತ್ತು ಕೇದಾರನಾಥಗಳು ನಮ್ಮ ಜನರ ನಂಬಿಕೆ ಮತ್ತು ಆಧ್ಯಾತ್ಮಿಕತೆಗಳ ಏಕತೆಯ ಪ್ರತೀಕಗಳಾದರೆ, ನಮ್ಮ ಶ್ರೀಮಂತ ತತ್ವಜ್ಞಾನ, ಸಾಹಿತ್ಯ, ಸಂಗೀತ ಮತ್ತು ನೃತ್ಯಗಳು ನಮ್ಮ ಜನರ ಸೃಜನಶೀಲತೆಯ ಏಕಾತ್ಮಕ ಪ್ರತೀಕಗಳು. ಬ್ರಿಟಿಷರ ಗುಲಾಮಗಿರಿಯ ಕಹಿಯನ್ನು ನಾವೆಲ್ಲ ಮರೆತು ನಾವು ನಮ್ಮ ದೇಶದ ಹಿರಿಮೆಯ ಬಗ್ಗೆ ಹೆಮ್ಮೆಪಡುವುದನ್ನು ಕಲಿಯಬೇಕಾಗಿದೆ.

ಹಾಗಾದರೆ ನಾವೆಲ್ಲರೂ ಒಂದು, ಭಾರತ ನಮ್ಮೆಲ್ಲರ ತಾಯಿ ಎಂಬ ಭಾವನೆ ಪ್ರಬಲವಾಗಿ, ನಮ್ಮ ನಮ್ಮಲ್ಲಿಯ ಭಿನ್ನತೆಗಳನ್ನು ತೊಡೆದು ಒಂದು ಹೊಸ ದೇಶವಾಗಿ ಹೊರಹೊಮ್ಮುತ್ತೇವೆ ಎಂಬ ಭರವಸೆ ನನ್ನದು. ಈ ದಿಶೆಯಲ್ಲಿ ತಾಯಿ ಭಾರತಿಯ ಉಜ್ವಲ ಪರಂಪರೆಯ ಬೆಳಕು ನಮಗೆ ದಾರಿ ತೋರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India would have been more prosperous without British. Vasant Kulkarni from Singapore analysis why India took more time to grow, how India's growth rate would have been tremendous had the British invaded and looted the rich resources of India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ