ಸರಿಯಾಗಿ ಹದಿನಾರು ವರ್ಷಗಳ ಹಿಂದೆ ವಿಮಾನವೇರಿದಾಗ!

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಸರಿಯಾಗಿ ಹದಿನಾರು ವರ್ಷಗಳ ಹಿಂದೆ ಬೇರೆ ದೇಶವೊಂದರಲ್ಲಿ ಕೆಲಸ ಮಾಡುವ ಅವಕಾಶ ನನಗೆ ದೊರಕಿತು. ಅಂದು ಸಾಮಾನ್ಯವಾಗಿ ಭಾರತೀಯ ಐಟಿ ತಜ್ಞರಿಗೆ ಭಾರತದಿಂದ ಹೊರಗೆ (ಕೊಲ್ಲಿ ದೇಶಗಳನ್ನು ಹೊರತು ಪಡಿಸಿ) ಕೆಲಸ ಮಾಡುವ ಅವಕಾಶ ದೊರಕುತ್ತಿತ್ತು. ಸುಮಾರು ಹತ್ತು ವರ್ಷಗಳ ಅನುಭವ ಹೊಂದಿದ ನನಗೆ ದಕ್ಷಿಣ ಕೊರಿಯಾದ ಸುಪ್ರಸಿದ್ಧ ಹ್ಯುಂಡಯಿ ಕಂಪನಿಯಲ್ಲಿ ಸುಮಾರು ಒಂದು ವರ್ಷದ ನಿಯಮಿತ ಕೆಲಸ ದೊರಕಿತ್ತು. ನನ್ನ ಜೊತೆಗೆ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಸಹೋದ್ಯೋಗಿಗೆ ಕೂಡ ಈ ಅವಕಾಶ ದೊರಕಿತ್ತು.

ಚೆನ್ನೈನಿಂದ ಸಿಂಗಪುರ ಏರ್ ಲೈನ್ಸನ ವಿಮಾನ ಹತ್ತಿದಾಗ ನನ್ನ ಮನಸ್ಸು ಅನೇಕ ಭಾವನೆಗಳ ಕಲಸು ಮೇಲೋಗರವಾಗಿತ್ತು. ಒಂದು ಕಡೆಗೆ ಪ್ರಸಿದ್ಧ ಕಂಪನಿಯ ದೊಡ್ಡ ದೊಡ್ಡ ಪ್ರಾಜೆಕ್ಟುಗಳ ಮೇಲೆ ಕೆಲಸ ಮಾಡುವ ಅವಕಾಶ ಕೈ ಬೀಸಿ ಕರೆಯುತ್ತಿದ್ದರೆ, ಇನ್ನೊಂದೆಡೆ ಚಿಕ್ಕ ಮಗು ಮತ್ತು ಪತ್ನಿಯನ್ನು ಬಿಟ್ಟು ಹೋಗುವ ಬಗ್ಗೆ ವಿಷಾದವಿತ್ತು. ಒಂದೆಡೆ ಮುಂದುವರೆದ ದೇಶವೊಂದರಲ್ಲಿ ಕೆಲಸ ಮಾಡುವ ಅವಕಾಶ ಪ್ರೇರೇಪಿಸಿದರೆ, ಇನ್ನೊಂದೆಡೆ ತಾಯ್ನಾಡನ್ನು, ಮಿತ್ರ ಮತ್ತು ಬಂಧುಗಳನ್ನು ಬಿಟ್ಟಗಲುವ ಬಗ್ಗೆ ಖಿನ್ನತೆ ಕಾಡುತ್ತಿತ್ತು. ಪರಿಚಿತ ಜಗತ್ತನ್ನು ಬಿಟ್ಟು ಅಜ್ಞಾತ ನಾಡಿನಲ್ಲಿ ಬದುಕುವ ಬಗ್ಗೆ ಕುತೂಹಲ ಮತ್ತು ಭಯಗಳೆರಡೂ ಕಾಡುತ್ತಿದ್ದವು.

ಅಂತಹುದರಲ್ಲಿ ಸಿಂಗಪುರ ಏರ್ ಲೈನ್ಸಿನ ಅತ್ಯಾಧುನಿಕ ವಿಮಾನನ್ನು ಏರಿದಾಗ ನಮಗೆ ಒಂದು ರೀತಿಯ ಆಹ್ಲಾದಕರ ಭಾವನೆ ಮೂಡಿತು. ವಿಮಾನ ಚೆನ್ನೈನಿಂದ ಗಗನಕ್ಕೇರಿ ದಕ್ಷಿಣ ಪೂರ್ವ ದಿಕ್ಕಿನೆಡೆ ವಾಯುವೇಗದಿಂದ ಚಲಿಸಲು ತೊಡಗಿದಾಗ, ಸಹೋದ್ಯೋಗಿಯೊಡನೆ ಮುಂದಿನ ದಿನಗಳ ಬಗ್ಗೆ ಮಾತನಾಡಲು ತಿರುಗಿದರೆ ಅವನು ಸುಖನಿದ್ದೆಗೆ ಜರುಗಿದ್ದ! ನಮ್ಮ ಪಯಣ ಸಿಂಗಪುರದಲ್ಲಿ ಹದಿನೈದು ಗಂಟೆಗಳ ವಿರಾಮವನ್ನೊಳಗೊಂಡಿತ್ತು.[ವೃತ್ತಿಯಲ್ಲಿ ಒಬ್ಬ ಪರ್ಫೆಕ್ಷನಿಸ್ಟ್ ಆಗಬೇಕಾದರೆ...]

India need a leader like Lee Kuan Yew, modern architect of Singapore

ನಮ್ಮ ಭಾರತದ ಸಹೋದ್ಯೋಗಿಯೊಬ್ಬರು ಸಿಂಗಪುರದಲ್ಲಿ Transit Visa ದೊರಕುತ್ತದೆ, ಹೋಗಿ ನಗರದರ್ಶನ ಮಾಡಿ ಬನ್ನಿ ಎಂದು ಸಲಹೆ ನೀಡಿದ್ದರು. ನಾನು ಸಿಂಗಪುರದ ಹೆಸರನ್ನು ಮೊದಲ ಬಾರಿಗೆ ಕೇಳಿದ್ದು ದ್ವಾರಕೀಶ್ ಅವರ "ಸಿಂಗಪುರದಲ್ಲಿ ರಾಜಾ ಕುಳ್ಳ" ಎಂಬ ಸಿನೆಮಾ ಬಿಡುಗಡೆಯಾದಾಗ. ನನ್ನ ಸೋದರಮಾವ ಅದನ್ನು ಒಂದು ಮುಂದುವರೆದ ನಗರ ದೇಶ (City State) ಎಂದು ವರ್ಣಿಸಿದ್ದ. ಕೇವಲ ಒಂದು ನಗರ ದೇಶವಾಗಲು ಹೇಗೆ ಸಾಧ್ಯ ಎಂದು ಅಂದಿನ ನನ್ನ ಚಿಕ್ಕ ಮನಸ್ಸು ಅಚ್ಚರಿಗೊಂಡಿತ್ತು.

ಅರೆನಿದ್ದೆಯಲ್ಲಿ ರಾತ್ರಿಯನ್ನು ಕಳೆದು ಇನ್ನೂ ನಸುಕಿನ ನಸುಗತ್ತಲಲ್ಲಿ ವಿಮಾನ ಸಿಂಗಪುರ ವಿಮಾನ ನಿಲ್ದಾಣವನ್ನು ತಲುಪಿದಾಗ, ದಣಿದು ಸುಸ್ತಾಗಿದ್ದ ದೇಹ ವಿರಾಮವನ್ನು ಬಯಸಿತ್ತು. ಏರ್ ಪೋರ್ಟ್ ಹೋಟೆಲ್‍ನಲ್ಲಿ ರೂಮು ಪಡೆದು ವಿಶ್ರಾಂತಿ ತೆಗೆದುಕೊಂಡು ಎದ್ದಾಗ ಮಧ್ಯಾಹ್ನ ಹನ್ನೆರಡಾಗಿತ್ತು. ಊಟ ಮುಗಿಸಿ Transit Visa ಕೌಂಟರ್ ಗೆ ಹೋಗಿ ವೀಸಾ ತೆಗೆದುಕೊಂಡು ಪ್ರವಾಸಿಗಳಿಗಾಗಿ ನಿಲ್ಲಿಸಿದ್ದ ಬಸ್ಸೊಂದನ್ನು ಏರಿದೆವು.

ದೊಡ್ಡ ಬಸ್ಸಿನಲ್ಲಿ ನಮ್ಮಿಬ್ಬರನ್ನು ಬಿಟ್ಟರೆ ಇನ್ನೂ ಐದಾರು ಜನರು ಮಾತ್ರವಿದ್ದರು. ನಮ್ಮ ಸಹಪ್ರಯಾಣಿಕಳೊಬ್ಬಳು ದಕ್ಷಿಣ ಕೊರಿಯದವಳು ಎಂದು ತಿಳಿದಾಗ ನಮಗೆ ಹರುಷವಾಯಿತು. ಅವಳಿಗೆ ನಾವಲ್ಲಿಗೇ ಹೋಗುತ್ತಿರುವುದಾಗಿ ಹೇಳಿದಾಗ ಆಕೆಯೂ ಸಂತಸದಿಂದ ಕೊರಿಯದ ಜನರ ಬಗ್ಗೆ, ಭಾಷೆಯ ಬಗ್ಗೆ ಮತ್ತು ಅಲ್ಲಿನ ಸಂಸ್ಕೃತಿಯ ಬಗ್ಗೆ ಸ್ವಲ್ಪ ಹೇಳಿದ್ದುದು ನೆನಪಿದೆ.[ಮನುಕುಲದ ಸರ್ವನಾಶಕ್ಕೆ ಗಣನೆ ಆರಂಭವಾಗಿದೆಯಾ?]

India need a leader like Lee Kuan Yew, modern architect of Singapore

ಬಸ್ಸು ನಮಗೆ ಸಿಂಗಪುರದ ಅನೇಕ ವಿಶೇಷಗಳ ಪರಿಚಯ ಮಾಡಿಸಿ ಕೊನೆಗೆ ಸಿಂಗಪುರ ನದಿಯ ದಂಡೆಗೆ ಕರೆದೊಯ್ಯಿತು. ಆಗಲೇ ಸಿಂಗಪುರದ ಸ್ವಚ್ಛ, ಹಸಿರಿನಿಂದಾವೃತ ಪರಿಸರ, ನುಣುಪಾದ, ಸರಾಗವಾದ ರಸ್ತೆಗಳು ಮತ್ತು ಅದರ ಆಧುನಿಕ ವಿಶೇಷಗಳನ್ನು ನೋಡಿ ಸಂತಸಗೊಂಡಿದ್ದ ನನ್ನ ಮನಸ್ಸು, ಸಿಂಗಪುರದ ನದಿ ದಂಡೆಯಿಂದ ಗಗನಕ್ಕೆ ಚಾಚಿದ ಕಟ್ಟಡಗಳನ್ನು ನೋಡಿ ಆನಂದದ ಉತ್ತುಂಗಕ್ಕೇರಿತು. ಜಪಾನ್ ಅನ್ನು ಬಿಟ್ಟರೆ ಇಂತಹ ದೇಶವೊಂದು ನಮ್ಮ ಸಮೀಪದಲ್ಲಿಯೇ ಇದೆ ಎಂಬುದನ್ನು ನಾನು ಕಲ್ಪಿಸಿರಲಿಲ್ಲ. ದೂರದ ಕೊರಿಯಕ್ಕಿಂತ ಈ ದೇಶದಲ್ಲಿಯೇ ನನಗೆ ಕೆಲಸ ಸಿಕ್ಕಿ ಬಿಟ್ಟರೆ? ಎಂಬ ಭಾವನೆ ಬಲವಾಗಿ ಮೂಡಿತು.

ಇವುಗಳ ಮಧ್ಯೆ ದಕ್ಷಿಣ ಕೊರಿಯದ ಮಹಿಳೆ ನಮಗೆ ಅನೇಕ ವಿಶೇಷಗಳ ಬಗ್ಗೆ ಮತ್ತು ಸಿಂಗಪುರದ ಇತಿಹಾಸದ ಬಗ್ಗೆ ಸ್ವಲ್ಪ ವಿವರಿಸಿದಳು. ಬ್ರಿಟಿಷರು ಈ ಪ್ರದೇಶವನ್ನು ಮಲಯದ ರಾಜನೊಬ್ಬನಿಂದ ಗುತ್ತಿಗೆ ಪಡೆದಿದ್ದು, ನಂತರ ಅದನ್ನು ಒಂದು ದೊಡ್ಡ ಬಂದರಾಗಿ ಮತ್ತು ವ್ಯಾಪಾರೀ ಕೇಂದ್ರವಾಗಿ ಬೆಳೆಸಿದ್ದು, ಜಪಾನ್ ಅದನ್ನು ಆಕ್ರಮಿಸಿದ್ದು, ಸ್ವಾತಂತ್ರ್ಯಾನಂತರದ ಅದರ ಬೆಳವಣಿಗೆ ಇತ್ಯಾದಿಗಳ ಬಗ್ಗೆ ತಿಳಿಸಿದಳು. ಪುಟ್ಟ ಸಿಂಗಪುರ ದೇಶ ಮೊದಲ ಭೇಟಿಯಲ್ಲಿಯೇ ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದುಕೊಂಡು ಬಿಟ್ಟಿತು.

ದಕ್ಷಿಣ ಕೊರಿಯವನ್ನು ತಲುಪಿ ಕೆಲಸವನ್ನು ಸೇರಿಕೊಂಡೆ. ಒಳ್ಳೆಯ ಸ್ನೇಹಭಾವದ ಜನ ಮತ್ತು ಸುಂದರ ದೇಶವಾದರೂ ನನ್ನನ್ನು ಏಕಾಂಗಿತನ ಮತ್ತು ದೇಶದಿಂದ ದೂರವಿದ್ದುದು ಕಾಡತೊಡಗಿತು. ಮೂರು ತಿಂಗಳಾಗುವಷ್ಟರಲ್ಲಿ ನನಗೆ ಹೇಗಾದರೂ ಮಾಡಿ ದೇಶದ ಹತ್ತಿರವೇ ಹೋಗಿ ಸೇರಿಕೊಳ್ಳುವ ಬಯಕೆ ಬಲವಾಯಿತು. ಮುಂದೆ ನನ್ನ ಮಡದಿ ಮತ್ತು ಮಗು ಬಂದು ಸೇರಿದ ಮೇಲೆ ಕೂಡ ನಾನು ಈ ಪ್ರಯತ್ನವನ್ನು ಮುಂದುವರೆಸಿದೆ.

India need a leader like Lee Kuan Yew, modern architect of Singapore

ಕೊಲ್ಲಿ ದೇಶಗಳಲ್ಲಿಯ ಮತ್ತು ಸಿಂಗಪುರದ ಕಂಪನಿಗಳಿಗೆ ಅರ್ಜಿ ಸಲ್ಲಿಸತೊಡಗಿದೆ. ದಕ್ಷಿಣ ಕೊರಿಯ ತಲುಪಿದ ಆರು ತಿಂಗಳುಗಳ ನಂತರ, ನನ್ನ ಪ್ರಯತ್ನಕ್ಕೆ ಫಲವೋ ಎಂಬಂತೆ ಒಂದು ದಿನ ಸಿಂಗಪುರದಲ್ಲಿಯ ಮಲ್ಟಿ ನ್ಯಾಶನಲ್ ಕಂಪನಿಯೊಂದರಿಂದ ನನಗೆ ಕರೆ ಬಂದಿತು. 2002ರ ನವೆಂಬರ್ ತಿಂಗಳಲ್ಲಿ ಹೋಗಿ ಕೆಲಸಕ್ಕೆ ಸೇರಿಕೊಂಡೆ. ಆರಂಭದ ಒಂದು ವಾರ ನಾನು ನನ್ನ ಮಿತ್ರನೊಬ್ಬನ ಮನೆಯಲ್ಲಿ ಇಳಿದುಕೊಂಡಿದ್ದೆ.

ಅದೇ ದಿನಗಳಲ್ಲಿ, ಅಲ್ಲಿನ ಸ್ಥಳೀಯ ನ್ಯೂಸ್ ನೋಡುತ್ತಿದ್ದಾಗ ಒಂದು ದಿನ ಟಿವಿ ನ್ಯೂಸ್‍ನಲ್ಲಿ ವೃದ್ಧರೊಬ್ಬರ ಸಂದರ್ಶನ ಬರುತ್ತಿತ್ತು. ಅವರ ಮಾತುಗಳಲ್ಲಿನ ತರ್ಕ, ಪ್ರಬುದ್ಧತೆ ಮತ್ತು ಪ್ರಖರತೆ ನನ್ನನ್ನು ಆಕರ್ಷಿಸಿದವು. ಇವರಾರೋ ಸಿಂಗಪುರದ ಪ್ರಸಿದ್ಧ ಬುದ್ಧಿಜೀವಿಯೋ ಅಥವಾ ಪ್ರೊಫೆಸರೋ ಆಗಿರಬೇಕೆಂದು ನನ್ನ ಮಿತ್ರನಿಗೆ "ಯಾರು ಇವರು? ಇಷ್ಟು ಚೆನ್ನಾಗಿ ಮಾತನಾಡುತ್ತಿದ್ದಾರೆ?" ಎಂದು ಕೇಳಿದೆ.

ಆತ ಮುಖವನ್ನು ಸಿಂಡರಿಸಿ, "ನಿನಗೆ ನಿಜವಾಗಿಯೂ ಇವರಾರು ಎಂದು ಗೊತ್ತಿಲ್ಲವೇ? ನಿನ್ನ ಜನರಲ್ ನಾಲೆಡ್ಜ್ ಚೆನ್ನಾಗಿದೆ ಎಂದು ಕೊಂಡಿದ್ದೆ!" ಎಂದು ಪ್ರಶ್ನಿಸಿದ. ನನಗೆ ನಿಜವಾಗಿಯೂ ಗೊತ್ತಿಲ್ಲ ಎಂದು ಹೇಳಿದಾಗ, "ಅಯ್ಯೋ, ಇವರೇ ಸುಪ್ರಸಿದ್ಧ ಲೀ ಕುವಾನ್ ಯೂ, ಆಧುನಿಕ ಸಿಂಗಪುರದ ಜನಕ, ಇಂದು ಯಾವುದೇ ಸಂಪನ್ಮೂಲಗಳಿರದ ಈ ಪುಟ್ಟ ದೇಶ ಸಿಂಗಪುರ ಸುತ್ತಲಿನ ಎಲ್ಲ ಥರ್ಡ್ ವರ್ಲ್ಡ್ ದೇಶಗಳ ನಡುವೆ ಏಕೈಕ ಫರ್ಸ್ಟ್ ವರ್ಲ್ಡ್ ದೇಶವಾಗಿ ಹೊರ ಹೊಮ್ಮಬೇಕಾದರೆ ಇವರೇ ಕಾರಣ" ಎಂದು ವಿವರಿಸಿ ಹೇಳಿದಾಗ, ನನ್ನ ಅಜ್ಞಾನಕ್ಕೆ ನಾನೇ ನಾಚಿಕೊಂಡೆ.

India need a leader like Lee Kuan Yew, modern architect of Singapore

ಮುಂದೆ ನಾನು ನನ್ನ ಈ ನ್ಯೂನತೆಯನ್ನು ಹೋಗಲಾಡಿಸಿಕೊಳ್ಳಲು ಈ ಮಹಾನ್ ನೇತಾರನ ಬಗ್ಗೆ ಓದಿಕೊಂಡೆ. ನಾನು ಹೆಚ್ಚು ಹೆಚ್ಚು ತಿಳಿದುಕೊಂಡಂತೆ ಲೀ ಕುವಾನ್ ಯೂ ಅವರ ಬಗ್ಗೆ ನನ್ನ ಗೌರವ ಹೆಚ್ಚಾಗುತ್ತ ಹೋಯಿತು. ಒಬ್ಬ ದೇಶ ಭಕ್ತ ನಾಯಕ ತನ್ನ ದೇಶದ ಒಳಿತಿಗಾಗಿ ದೂರದೃಷ್ಟಿಯಿಂದ ಸ್ವತಃ ಕಷ್ಟ ಪಟ್ಟು ದುಡಿಯುವುದಲ್ಲದೇ, ತನ್ನ ಪೀಳಿಗೆ ಮತ್ತು ಮುಂದಿನ ಹಲವಾರು ಪೀಳಿಗೆಗಳಿಗೂ ಮಾರ್ಗದರ್ಶಕನಾಗಿ ಹೊರಹೊಮ್ಮಿದರೆ ಮಾತ್ರ ಸಿಂಗಪುರದಂತಹ ಆಧುನಿಕ ಪವಾಡಗಳನ್ನು ಸೃಷ್ಟಿಸುವುದು ಸಾಧ್ಯ. ಇಂದು ಸಿಂಗಪುರ ತನ್ನ ಸುತ್ತಮುತ್ತಲಿನ ದೇಶಗಳಿಗೆ ಮಾತ್ರವಲ್ಲದೇ, ಮುಂದಕ್ಕೆ ಬರಲು ಪ್ರಯತ್ನಿಸುತ್ತಿರುವ ಎಲ್ಲ ದೇಶಗಳಿಗೂ ಮಾದರಿಯಾಗಿ ನಿಂತಿದ್ದು ಈ ಬೃಹತ್ ಪ್ರತಿಭಾವಂತ ನಾಯಕನ ಕಾರಣದಿಂದ.

ನಮ್ಮ ದೇಶದ ಅನೇಕ ರಾಜಕಾರಣಿಗಳು ಸಿಂಗಪುರಕ್ಕೆ ಬಂದು ಭೇಟಿ ನೀಡಿ ಪ್ರಭಾವಿತರಾಗಿ ತಮ್ಮ ರಾಜ್ಯದ ರಾಜಧಾನಿಯನ್ನು ಸಿಂಗಪುರವನ್ನಾಗಿ ಮಾಡುತ್ತೇವೆ ಎಂದೆಲ್ಲಾ ಕೊಡುವ ಹೇಳಿಕೆಗಳು ಎಂದಿನಂತಿನ ಶುಷ್ಕ ಆಶ್ವಾಸನೆಗಳು ಎಂಬುದು ನಮಗೆಲ್ಲರಿಗೂ ಗೊತ್ತು. ಸಿಂಗಪುರದಂತಹ ದೇಶದ ಒಂದು ಕಾಲು ಭಾಗದಷ್ಟಾದರೂ ಪ್ರಗತಿಯನ್ನು ಸಾಧಿಸಲು ಬೇಕಾದ ದೇಶಭಕ್ತಿ, ದೈತ್ಯ ಪ್ರತಿಭೆ ಮತ್ತು ಕಾರ್ಯಕ್ಷಮತೆ ಅವರುಗಳಿಗಿದೆಯೇ ಎಂಬುದು ಪ್ರಶ್ನಾರ್ಹ.

ಕೆಲವು ವರ್ಷಗಳ ನಂತರ ನನ್ನ ಪ್ರಾಜೆಕ್ಟನ ಸಹೋದ್ಯೋಗಿಯೊಬ್ಬರೊಂದಿಗೆ ಮಾತನಾಡುತ್ತಿದ್ದೆ. ಆವಾಗ "ಭಾರತದಲ್ಲಿಯೂ ಕೂಡಾ ಲೀ ಕುವಾನ್ ಯೂ ಅವರಂತಹ ಒಬ್ಬ ಮಹಾನ್ ನಾಯಕ ಹುಟ್ಟಿ ಬಂದರೆ ಎಷ್ಟು ಚೆನ್ನಾಗಿರುತ್ತದೆ" ಎಂದು ನನ್ನಲ್ಲಿಯೇ ಏನೋ ಎಂಬಂತೆ ಹೇಳಿಕೊಂಡೆ. ಅದನ್ನು ಕೇಳಿದ ಅವರು "ಲೀ ಕುವಾನ್ ಯೂ ಅವರಂತಹ ಮತ್ತೊಬ್ಬ ನಾಯಕ ಹಿಂದಿರಲಿಲ್ಲ, ಮುಂದೆ ಹುಟ್ಟಲು ಸಾಧ್ಯವಿಲ್ಲ" ಎಂದು ಖಡಾಖಂಡಿತವಾಗಿ ನುಡಿದರು. ಅವರ ಮಾತು ಸತ್ಯ ಎಂದು ನನ್ನ ಹೃದಯ ನುಡಿಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India need a leader like Lee Kuan Yew, modern architect of Singapore, if India wants to progress in every field, says Vasant Kulkarni. He recalls the incident when he got the first opportunity to work in foreign country and visit Singapore for the first time.
Please Wait while comments are loading...