• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ?

By ವಸಂತ ಕುಲಕರ್ಣಿ, ಸಿಂಗಪುರ
|
   ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ? | Oneindia Kannada

   ನಮ್ಮದು ಪ್ರಜಾಪ್ರಭುತ್ವ ನೋಡಿ. ಆದುದರಿಂದ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ಎಂಬ ಮಹಾ ಪ್ರಕ್ರಿಯೆ ನಮ್ಮ ರಾಜ್ಯದಲ್ಲಿ ನಡೆದು ಹೋಗುತ್ತದೆ. ಪ್ರತೀ ಬಾರಿಯ ಚುನಾವಣೆ ಸಾಮಾನ್ಯ ಜನತೆಯಲ್ಲಿ ಅನೇಕ ನಿರೀಕ್ಷೆಗಳನ್ನು ಉಂಟುಮಾಡುತ್ತದೆ. ಅದು ಸಹಜವೂ ಹೌದು. ಆದರೆ ಅಂತಹ ನಿರೀಕ್ಷೆಗಳನ್ನು ಚುನಾವಣೆ ಗೆದ್ದ ಪಕ್ಷಗಳು ಪೂರೈಸುತ್ತಲಿವೆಯೇ?

   ಈ ಪ್ರಶ್ನೆಗೆ ಬಹುತೇಕ ಮಟ್ಟಿಗೆ ಋಣಾತ್ಮಕ ಉತ್ತರ ದೊರಕುವುದೇ ಹೆಚ್ಚು. ಆದರೂ ಹೆಚ್ಚಿನ ಜನರು ಆಶಾವಾದಿಗಳು. ಆ ಆಶಾವಾದಿಗಳಲ್ಲಿ ನಾನೂ ಒಬ್ಬ. ಇನ್ನೇನು ನಮ್ಮ ಕರ್ನಾಟಕ ಮತ್ತೊಂದು ಚುನಾವಣೆಯನ್ನು ಎದುರಿಸುತ್ತಲಿದೆ. ಈ ಸಮಯದಲ್ಲಿ ಒಬ್ಬ ಸಾಮಾನ್ಯ ಕನ್ನಡಿಗನಾಗಿ ನಮ್ಮ ಕನಸಿನ ಕರ್ನಾಟಕ ಹೇಗಿರಬೇಕು ಎನ್ನುವುದರ ಬಗ್ಗೆ ನನ್ನ ಅನಿಸಿಕೆಯನ್ನು ಇಲ್ಲಿ ಬರಹ ರೂಪದಲ್ಲಿ ಮೂಡಿಸುತ್ತಿದ್ದೇನೆ. ಈ ಅನಿಸಿಕೆಗಳ ಮೇಲೆ ಸಿಂಗಪುರದಲ್ಲಿಯ ನನ್ನ ಅನುಭವಗಳು ಮತ್ತು ಸನ್ನಿವೇಶಗಳ ಗಾಢ ಪ್ರಭಾವವಿದೆ.

   ಸಿಂಗಪುರದ ಸಾರಿಗೆ ಸಂಪರ್ಕ ಸೂಪರೋ ಸೂಪರು!

   ಕಳೆದ ಹದಿನೈದು ವರ್ಷಗಳಿಂದ ಸಿಂಗಪುರದಲ್ಲಿ ವಾಸಿಸುವ ನನ್ನನ್ನು ಆಶ್ಚರ್ಯ ಮತ್ತು ಪ್ರೇರಿಸಿದ ಅಂಶವೆಂದರೆ, ಯಾವುದೇ ಸಂಪನ್ಮೂಲಗಳಿರದಿದ್ದರೂ, ಕೇವಲ ತಮ್ಮ ಕರ್ತೃತ್ವ ಶಕ್ತಿಯಿಂದ, ಅರ್ಧ ಶತಮಾನದಲ್ಲಿ ತಮ್ಮ ದೇಶವನ್ನು ಮೂರನೆಯ ಜಗತ್ತಿನಿಂದ ಪ್ರಥಮ ಜಗತ್ತಿಗೆ ಕೊಂಡೊಯ್ದ ಪರಿ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಈ ಬೆಳವಣಿಗೆಗೆ ದೇಶದ ನೇತೃತ್ವ ಅದೆಷ್ಟು ಕಾರಣವಾಗಿದೆಯೋ ಇಲ್ಲಿನ ಸಾಮಾನ್ಯ ಜನತೆ ಕೂಡ ಅಷ್ಟೇ ಕಾರಣ. ನೇತೃತ್ವ ಜನತೆಗೊಂದು ದೂರದೃಷ್ಟಿಯನ್ನು ನೀಡಿ, ಅದನ್ನು ಪೂರೈಸಲು ಒಂದು ಸಕ್ಷಮ ಚೌಕಟ್ಟನ್ನು ನೀಡಿದರೆ, ಸಾಮಾನ್ಯ ಜನತೆ ಆ ದೂರದೃಷ್ಟಿಯನ್ನು ಗುರಿಯಾಗಿಸಿಕೊಂಡು, ಚೌಕಟ್ಟನ್ನು ಗೌರವಿಸಿ, ದೇಶದ ಬೆಳವಣಿಗೆಗಾಗಿ ದೃಢ ಪ್ರಯತ್ನ ಮಾಡಿದ್ದನ್ನು ಇಲ್ಲಿ ನಾವು ಸ್ಪಷ್ಟವಾಗಿ ಕಾಣಬಹುದು.

   ಆರ್ಥಿಕ ದೃಷ್ಟಿಯಿಂದ ಸಿಂಗಪುರ ಶ್ರೀಮಂತ

   ಆರ್ಥಿಕ ದೃಷ್ಟಿಯಿಂದ ಸಿಂಗಪುರ ಶ್ರೀಮಂತ

   ಸಿಂಗಪುರದಲ್ಲಿ ಯಾವುದೇ ರೀತಿಯ ಸಂಪನ್ಮೂಲಗಳಿಲ್ಲ. ಇಲ್ಲಿ ಖನಿಜ ನಿಕ್ಷೇಪಗಳಿಲ್ಲ. ಪೆಟ್ರೋಲಿಯಂ ನಿಕ್ಷೇಪಗಳಿಲ್ಲ. ದೊಡ್ಡ ವಿಸ್ತೀರ್ಣದ ಫಲವತ್ತಾದ ಭೂಮಿಯಿಲ್ಲ. ಆದರೂ ಈ ಪುಟ್ಟ ದೇಶ ಜಗತ್ತಿನಲ್ಲೇ ಶ್ರೀಮಂತ, ಆಧುನಿಕ ರಾಷ್ಟ್ರಗಳಲ್ಲಿ ಒಂದು. ನಮ್ಮ ಕರ್ನಾಟಕ ಕೂಡ ಅದರಂತೆಯೇ ಆಧುನಿಕ, ಶ್ರೀಮಂತ ಪ್ರದೇಶವಾಗಬೇಕೆಂಬುದು ಒಂದು ಕನಸು. ಈ ದಿಶೆಯಲ್ಲಿ ನಮ್ಮ ಕರ್ನಾಟಕದ ಅಭಿವೃದ್ದಿ ಹೊಂದಬೇಕು. ಆದರೆ ಈ ಅಭಿವೃದ್ದಿ ಕೇವಲ ಬೆಂಗಳೂರು ಮತ್ತು ಮೈಸೂರು ಕೇಂದ್ರಿತವಾಗಬಾರದು. ಮತ್ತು ಈ ಅಭಿವೃದ್ಧಿ ಕೇವಲ ಐಟಿ ಉದ್ಯಮ ಕೇಂದ್ರಿತವೂ ಆಗಬಾರದು.

   ನಮ್ಮಲ್ಲಿ ಉತ್ಪಾದನಾ ಕೈಗಾರಿಕೆಗಳು ಮತ್ತು ಹಣಕಾಸು ಸಂಸ್ಥೆಗಳು ಕೂಡ ಬೃಹತ್ ಪ್ರಮಾಣದಲ್ಲಿ ಬೆಳೆಯಬೇಕು. ಬೇರೆ ಬೇರೆ ಪ್ರದೇಶಗಳ ವಿಶಿಷ್ಟ ಸಾಮರ್ಥ್ಯಗಳನ್ನು ಅರಿತು ಅವುಗಳಿಗೆ ತಕ್ಕಂತೆ ಅಲ್ಲಿ ಉದ್ಯಮಗಳ ಸ್ಥಾಪನೆಯಾಗಬೇಕು. ಉದಾಹರಣೆಗೆ ಬ್ಯಾಂಕುಗಳಿಗೆ ಹೆಸರಾದ ನಮ್ಮ ಮಂಗಳೂರಿನಲ್ಲಿ ಜಗತ್ತಿನ ಎಲ್ಲ ಪ್ರಮುಖ ಹಣಕಾಸು ಸಂಸ್ಥೆಗಳು ತಮ್ಮ ಪ್ರಾದೇಶಿಕ ಕಚೇರಿಗಳನ್ನು ತೆರೆಯುವಂತೆ ಯೋಜನೆಗಳನ್ನು ರೂಪಿಸಬಹುದಲ್ಲವೇ? ಖನಿಜ ಸಮೃದ್ಧ ಪ್ರದೇಶವಾದ ಕಲ್ಯಾಣ ಕರ್ನಾಟಕ ಬೃಹತ್ ಲೋಹದ ಉದ್ಯಮಗಳ ತವರಾಗಬಾರದೇಕೆ? ಪುಣೆಯ ಎಲ್ಲ ವಾಹನ ಕೈಗಾರಿಕೆಗಳಿಗೆ ಯಂತ್ರದ ಬಿಡಿ ಭಾಗಗಳನ್ನು ಪೂರೈಸುವ ಬೆಳಗಾವಿ ಮತ್ತು ಹುಬ್ಬಳ್ಳಿ ನಗರಗಳನ್ನು ಇನ್ನೂ ಹೆಚ್ಚು ಅಭಿವೃದ್ಧಿ ಪಡಿಸಬಹುದಲ್ಲವೇ?

   ಸಾಮಾಜಿಕ ದೃಷ್ಟಿಯಿಂದ ಎಲ್ಲರೂ ಒಂದೇ

   ಸಾಮಾಜಿಕ ದೃಷ್ಟಿಯಿಂದ ಎಲ್ಲರೂ ಒಂದೇ

   ಸಿಂಗಪುರದಲ್ಲಿ ಅನೇಕ ಧರ್ಮ ಮತ್ತು ಜನಾಂಗಗಳಿಗೆ ಸೇರಿದ ಜನರಿದ್ದಾರೆ. ಎಲ್ಲರಿಗೂ ಅವರದೇ ಆದ ಇತಿಹಾಸ ಮತ್ತು ನಂಬಿಕೆಗಳಿವೆ. ಆದರೆ ಜನರ ಧರ್ಮ ಮತ್ತು ಜನಾಂಗ ಭೇದಗಳು ಅವರನ್ನು ಒಡೆಯುವುದಿಲ್ಲ. ಸರಕಾರದ "one united people" ಎಂಬ ಉನ್ನತ ಧ್ಯೇಯ, ದೇಶಕ್ಕಾಗಿ ಎಲ್ಲರನ್ನು ಒಗ್ಗೂಡಿಸುತ್ತದೆ. ನಮ್ಮ ಕರ್ನಾಟಕ ಕೂಡ ಹೀಗೆಯೇ ಆಗಬಹುದೇ? ನನ್ನ ಕನಸೇನೆಂದರೆ ಸಾಮಾಜಿಕವಾಗಿ ನಮ್ಮ ಕರ್ನಾಟಕ ಕೂಡ ಈ ರೀತಿಯ ಆಧುನಿಕ ಮನೋಭಾವವುಳ್ಳದ್ದಾಗಿರಬೇಕು. ಇಲ್ಲಿ ಎಲ್ಲ ಬಗೆಯ ಜನರ ಸಂಸ್ಕೃತಿ ಮತ್ತು ನಂಬಿಕೆಗಳಿಗೆ ಗೌರವ ದೊರೆಯಬೇಕು. ಜನರ ಧಾರ್ಮಿಕ ನಂಬಿಕೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಹೀಗಳೆಯಬಾರದು.

   ಇತಿಹಾಸದಲ್ಲಿ ನಡೆದವೆನ್ನಲಾದ ಕೆಟ್ಟ ಸಂಗತಿಗಳಿಗೆ ಇಂದಿನ ಜನರನ್ನು ಹೊಣೆ ಮಾಡಿ ಪೀಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹಳೆಯ ಭೂತಗಳನ್ನು ಹುಗಿದಿಟ್ಟು ಹೊಸ ಇತಿಹಾಸ ರಚಿಸುವತ್ತ ನಾವು ಕನ್ನಡಿಗರೆಲ್ಲರೂ ಕಟಿಬದ್ಧರಾಗಬೇಕು. ಈ ವಿಷಯದಲ್ಲಿ ದೇಶದ ಉಳಿದ ಭಾಗಗಳಿಗೆ ನಾವು ಮಾದರಿಯಾಗಲು ಸಾಧ್ಯವೇ? ಈ ದಿಶೆಯಲ್ಲಿ ಸಿಂಗಪುರ ಒಂದು ಪ್ರೇರಣೆ. ಜನರೆಲ್ಲಾ ಈ ವಿಷಯದಲ್ಲಿ ಎಚ್ಚರಗೊಂಡರೆ ಅದಾವ ನರಿ ಬುದ್ಧಿಯ ನಾಯಕನೂ ನಮ್ಮನ್ನು ಒಡೆಯಲಾರ. ಆದರೆ ಈ ಅರಿವು ಉಂಟಾಗದಿದ್ದರೆ ನಮ್ಮನ್ನು ಒಡೆಯಲು ಅನೇಕ ಪ್ರಕಾರದ ವೇಷಗಳನ್ನು ಧರಿಸಿಕೊಂಡು ಅನೇಕ ಹೊಸ ಹೊಸ ಹಂಚಿಕೆಗಳನ್ನು ಈ ನಾಯಕರು ಹೂಡುತ್ತಲೇ ಇರುತ್ತಾರೆ.

   ಸಿಂಗಪುರ ಕುಡಿಯುವ ನೀರಿನ ಬರ ನೀಗಿಸಿಕೊಂಡ ಬಗೆ ಹೇಗೆ?

   ಶೈಕ್ಷಣಿಕ ದೃಷ್ಟಿಯಿಂದಲೂ ಸಿಂಗಪುರ ಮುಂದು

   ಶೈಕ್ಷಣಿಕ ದೃಷ್ಟಿಯಿಂದಲೂ ಸಿಂಗಪುರ ಮುಂದು

   ಸಿಂಗಪುರ ಈ ಜಗತ್ತಿನ ಕೆಲವೇ ಅಪ್ಪಟ Meritocratic ದೇಶಗಳಲ್ಲೊಂದು. ಇಲ್ಲಿ ಅಗತ್ಯ ಅರ್ಹತೆಗಳಿದ್ದವನಿಗೆ, ಅವನೆಂತಹ ಬಡವನೇ ಆಗಿರಲಿ ತಕ್ಕ ಸ್ಥಾನಮಾನ ದೊರೆಯುತ್ತವೆ ಎನ್ನುವುದು ಸತ್ಯ. ಅರ್ಹತೆಯಿರದಿದ್ದರೆ ಅವನು ಯಾವ ದೊಣ್ಣೆ ನಾಯಕನ ಮಗನೇ ಆಗಿರಲಿ, ಯಾವ ಸ್ಥಾನಮಾನವೂ ದೊರಕದು. ಇನ್ನು ಯಾರಿಗಾದರೂ ಪ್ರತಿಭೆ ಇದ್ದು ಅವರು ಬಡವರಾಗಿದ್ದರೆ ಇಲ್ಲಿನ ಸರಕಾರ ಅಂತಹವರಿಗೆ ಅನೇಕ ರೀತಿಯ ಸ್ಕಾಲರ್ ಶಿಪ್ ಗಳನ್ನು ಒದಗಿಸಿ ಸಹಾಯ ಮಾಡಿ ಅಂತಹವರನ್ನು ಕೂಡ ಮುಂದೆ ತರುತ್ತದೆ. ಈ ವಿಷಯದಲ್ಲಿ ಅವರು ಯಾವ ಧರ್ಮದವರು, ಯಾವ ಜನಾಂಗದವರು ಎಂಬುದನ್ನು ಎಳ್ಳಷ್ಟೂ ಲಕ್ಷಿಸುವುದಿಲ್ಲ.

   ನಮ್ಮ ಕರ್ನಾಟಕದಲ್ಲಿ ಕೂಡ ಇಂತಹ ಪ್ರಭುತ್ವ ಬರಬಹುದೇ? ಜಾತಿ ಧರ್ಮಗಳ ಸಂಕೀರ್ಣತೆಯನ್ನು ಗೆದ್ದು ಬರುವುದು ನಮ್ಮಿಂದ ಸಾಧ್ಯವಾದೀತೆ? ಅಲ್ಲದೇ ಸಿಂಗಪುರ ಕೇವಲ ಒಂದು ನಗರ ದೇಶವಾದರೂ ಇಲ್ಲಿ ಜಗತ್ತಿನಲ್ಲೇ ಉತ್ತಮ ದರ್ಜೆಯ ವಿಶ್ವ ವಿದ್ಯಾಲಯಗಳಿವೆ. ಶಿಕ್ಷಣಕ್ಕೆ ಮೊದಲಿನಿಂದಲೇ ಹೆಸರಾದ ನಮ್ಮ ಕರ್ನಾಟಕದಲ್ಲಿ ಇರುವ ಅನೇಕ ಉನ್ನತ ವಿಶ್ವವಿದ್ಯಾಲಯಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಜಗತ್ತಿನ ಅತ್ಯುನ್ನತ ಶಿಕ್ಷಾ ಸಂಸ್ಥೆಗಳನ್ನಾಗಿ ಪರಿವರ್ತಿಸಲು ನಮ್ಮಿಂದಾದೀತೇ?

   ರಾಜಕೀಯ ದೃಷ್ಟಿಯಿಂದ ಸಿಂಗಪುರ ದಕ್ಷ

   ರಾಜಕೀಯ ದೃಷ್ಟಿಯಿಂದ ಸಿಂಗಪುರ ದಕ್ಷ

   ಸಿಂಗಪುರ ತನ್ನ ಸ್ವಚ್ಛ, ಪ್ರಾಮಾಣಿಕ ಮತ್ತು ದಕ್ಷ ಆಡಳಿತಕ್ಕೆ ಹೆಸರಾಗಿದೆ. ಇಲ್ಲಿ ಭ್ರಷ್ಟಾಚಾರವನ್ನು ಎಳ್ಳಷ್ಟೂ ಸಹಿಸಲಾಗುವುದಿಲ್ಲ. ಅಪರಾಧಿಗಳು ಬಹು ಬೇಗ ಶಿಕ್ಷೆಗೊಳಿಸಲ್ಪಡುತ್ತಾರೆ. ತ್ವರಿತವಾಗಿ ನ್ಯಾಯ ಒದಗಿಸುವುದಕ್ಕೆ ಇಲ್ಲಿನ ನ್ಯಾಯಾಲಯಗಳು ಹೆಸರುವಾಸಿ. ಆದರೆ ಭ್ರಷ್ಟಾಚಾರ, ಅಪರಾಧ ಮತ್ತು ಅಶಿಸ್ತು ನಮ್ಮ ಕರ್ನಾಟಕ ರಾಜ್ಯವನ್ನು ಕಬಳಿಸತೊಡಗಿವೆ. ಸಿಂಗಪುರದಂತೆ ನಮ್ಮಲ್ಲಿಯೂ ಭ್ರಷ್ಟಾಚಾರರಹಿತ, ಸ್ವಚ್ಛ, ಪ್ರಾಮಾಣಿಕ ಮತ್ತು ದಕ್ಷ ಆಡಳಿತ ದೊರಕಲು ಸಾಧ್ಯವೇ? ಇಮ್ಮಡಿ ಪುಲಕೇಶಿ, ಅಮೋಘವರ್ಷ, ಹೊಯ್ಸಳ ವಿಷ್ಣು ವರ್ಧನ, ಶ್ರೀ ಕೃಷ್ಣ ದೇವರಾಯರಂತಹ ಸಮರ್ಥ ಆಡಳಿತಗಾರರನ್ನು ನೀಡಿದ ನಮ್ಮ ಕರ್ನಾಟಕ ಮತ್ತೆ ಅಂತಹ ಸುವರ್ಣಯುಗವನ್ನು ನೋಡಲು ಸಾಧ್ಯವೇ?

   ಬೆಂಗಳೂರು ನಗರಕ್ಕಿಂತ ಚಿಕ್ಕದಾದ ಈ ದೇಶದ ಜಿಡಿಪಿ (Gross Domestic Product) US$ 297 billion. ಈ ದೇಶಕ್ಕಿಂತ ಸುಮಾರು ಇನ್ನೂರೈವತ್ತು ಪಟ್ಟು ದೊಡ್ಡದಾದ ನಮ್ಮ ಕರ್ನಾಟಕದ ಜಿಡಿಪಿ (Gross Domestic Product) US$ 200 billion ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಆದರೆ ಇಲ್ಲಿ ದೊಡ್ಡದೊಂದು ಪಾಠವಿದೆ.

   ಯಶಸ್ಸಿನ ವರಮಾಲೆ ಒಗ್ಗಟ್ಟು, ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮಗಳಿಗೆ ಒಲಿಯುತ್ತದೆ. ದೂರದೃಷ್ಟಿಯುಳ್ಳ, ಶಿಸ್ತಿನ ಮತ್ತು ಭ್ರಷ್ಟಾಚಾರರಹಿತ ನೇತೃತ್ವಕ್ಕೆ ಒಲಿಯುತ್ತದೆ. ಅಶಿಸ್ತು, ಭ್ರಷ್ಟಾಚಾರ ಮತ್ತು ಒಳಜಗಳಗಳನ್ನುಳ್ಳ ಸಮಾಜದಿಂದ ಯಶಸ್ಸು ದೂರಸರಿಯುತ್ತದೆ. ನಮ್ಮ ಕನಸುಗಳನ್ನು ಈಡೇರಿಸಲು ಎಂತಹ ಪಥವನ್ನು ನಾವು ಅನುಸರಿಸಬೇಕು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಅಲ್ಲವೇ?

   ಸಿಂಗಪುರದ ಬಜೆಟ್ಟಿನಲ್ಲಿ ನೌಕರರಿಗೆ ಭರ್ಜರಿ ಬೋನಸ್

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Why should not I dream to make my Karnataka Singapore on day? It has everything. Natural resources, top class education, unmatchable talent etc. Only thing that is lacking in Karnataka is political will to achieve. Hope one day Karnataka becomes Singapore.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more