• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನದಲ್ಲಿ ಹುದುಗಿದ್ದ ಕವನ ಅರಳಿಸಿದ ಸಿಂಗಪುರ

By ವಸಂತ ಕುಲಕರ್ಣಿ, ಸಿಂಗಪುರ
|

ನನ್ನ ಮೊಟ್ಟ ಮೊದಲ ಸಾಹಿತ್ಯ ರಚನೆ ಒಂದು ಕವನ. ಕನ್ನಡಮ್ಮನ ಮೇಲೆ ಬರೆದದ್ದು. ನಾನಾಗ ನನ್ನ ಐದನೇ ತರಗತಿಯಲ್ಲಿ ಓದುತ್ತಿದ್ದೆ. ನಂತರ ಹತ್ತನೆಯ ತರಗತಿಯವರೆಗೆ ಅನೇಕ ಕವನ, ಕಥೆ ಮತ್ತು ಎರಡು ಕಾದಂಬರಿಗಳನ್ನು ಕೂಡಾ ಬರೆದಿದ್ದೆ. ಬರೆದ ರಚನೆಗಳನ್ನು ಕೆಲವರಿಗೆ ತೋರಿಸಿದ್ದೆ ಕೂಡ. ಓದಿದವರಲ್ಲಿ ಕೆಲವರು ಬೆನ್ನು ತಟ್ಟಿದರು, ಮತ್ತೆ ಕೆಲವರು ಓದಿ ನಕ್ಕರು. ಮುಂದೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಯಾರೂ ಹೇಳಲಿಲ್ಲ. ನಾನು ಯಾರನ್ನೂ ಕೇಳಲಿಲ್ಲ.

ಎಲ್ಲ ಗೆಳೆಯರಿಗೆ ಚೆನ್ನಾಗಿ ಓದಿ, ಅಂಕ ತೆಗೆದು ಎಂಜಿನಿಯರೋ ಅಥವಾ ಡಾಕ್ಟರೋ ಆಗಬೇಕೆಂಬ ಹವಣೆ. ಮುಂದೆ ಓದಲು ಅಮೆರಿಕಕ್ಕೋ ಅಥವಾ ಇಂಗ್ಲೆಂಡಿಗೋ ಹೋಗಬೇಕೆನ್ನುವ ಆಸೆ. ಬದಲಾಗುತ್ತಿರುವ ಭಾರತದಲ್ಲಿ ಕೇವಲ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಮಾತ್ರ ಜೀವನವನ್ನು ಮೇಲೆತ್ತಬಹುದು ಎಂದು ನಂಬಿದ್ದ ಸಮಾಜದಲ್ಲಿ ನನ್ನ ಕನ್ನಡ ಪ್ರೇಮ ಮತ್ತು ಕನ್ನಡ ಕಥೆ, ಕವನಗಳಿಗೆ ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ಹೀಗಾಗಿ ಬರೆಯುವ ಹುಮ್ಮಸ್ಸು ಕುಂದಿತು. ಅಲ್ಲಿಂದ ಮುಂದೆ ಬದುಕಿನ ಗತಿ ಬದಲಾಯಿತು. ಕ್ರಮೇಣ ನನ್ನ ಚಿಕ್ಕಂದಿನ ಕಥೆ ಕವನಗಳೆಲ್ಲಾ ಕಾಲಗರ್ಭದಲ್ಲಿ ಎಲ್ಲೋ ಕಳೆದುಹೋದವು.

ಮುಂದೆ ಎಂಜಿನಿಯರಿಂಗ್ ಓದುತ್ತಾ ಓದುತ್ತಾ ಕನ್ನಡ ಸಾರಸ್ವತ ಲೋಕ ಹೇಗೆ ಮುನ್ನಡೆಯುತ್ತಿದೆ, ಯಾವ ರೀತಿಯ ಕಥೆ ಕವನಗಳು ಬೆಳಕು ಕಾಣುತ್ತಿವೆ, ಎಂತಹ ಪ್ರಯೋಗಗಳಾಗುತ್ತಿವೆ ಎಂಬುದು ತಿಳಿಯಲಿಲ್ಲ. ಬರವಣಿಗೆ ಕುಂಠಿತವಾಯಿತು. ಆಗಾಗ್ಗೆ ಬರೆದಿದ್ದನ್ನು ಓದಿ ತಿದ್ದುವವರು ಯಾರೂ ಇರಲಿಲ್ಲ. ಮುಂದೆ ಹೇಗೆ ಕಾಲಿಡಬೇಕೆಂದು ತಿಳಿಯಲಿಲ್ಲ ಮತ್ತು ಹೊಸ ಜಗತ್ತಿನ ಹೊಸತಿನ ಸುನಾಮಿಯಲ್ಲಿ ಹೇಗೋ ಬದುಕಿ ಉಳಿಯಬೇಕೆಂಬ ಹೋರಾಟದಲ್ಲಿ ಬರಹ ಮತ್ತು ಸಾಹಿತ್ಯ ಮರೆತು ಹೋದವು.

ಬದುಕಿನ ಗತಿ ಫಾಸ್ಟ್ ಫಾರ್ ವರ್ಡ್ ಆಯಿತು. ಡಿಗ್ರಿ ಮುಗಿಸಿ, ಕೆಲವು ಕಂಪನಿಗಳಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಮೈ ಮುರಿದು ದುಡಿದು ಬದುಕು ಯಾಂತ್ರಿಕವಾಯಿತು. ವಿವಾಹವಾಗಿ ಮಗಳು ಹುಟ್ಟಿ ಕುಟುಂಬದ ಉತ್ತಮ ನಿರ್ವಹಣೆಗೆಂದು ಹಣ ಗಳಿಸಲು ದೇಶ ಬಿಟ್ಟು ಹೊರಗಿನ ಕಂಪನಿಗಳಿಗೆ ಹೋಗಬೇಕೆಂಬ ಇಚ್ಛೆ ಉಂಟಾಯಿತು. ಅದೃಷ್ಟದ ನೆರವಿನಿಂದ ಹಾಗಾಯಿತು ಕೂಡ. ದಕ್ಷಿಣ ಕೊರಿಯಕ್ಕೆ ಹೋಗುವ ಅವಕಾಶ ದೊರೆತು ಮುಂದೆ ದೈವದ ಮತ್ತೊಂದು ಕೃಪಾದೃಷ್ಟಿಯಿಂದ ಸಿಂಗಪುರಕ್ಕೆ ಕಾಲಿಟ್ಟೆ.

ಸಿಂಗಪುರದ ನವ ತಾರುಣ್ಯದ ಪರಿಸರದಲ್ಲಿ ಮುದುಡಿದ ಮನ ಮತ್ತೆ ಗರಿಗೆದರಿತು. ಹದಿನೈದು ವರ್ಷಗಳ ತರುವಾಯ ಮನಸ್ಸಿನಲ್ಲಿ ಕಾವ್ಯಸೆಲೆ ಉಕ್ಕ ತೊಡಗಿತು. ಆದರೆ ಯಾವುದೋ ಅವ್ಯಕ್ತ ಆತಂಕದ ಛಾಯೆಯಲ್ಲಿ ಅಜ್ಞಾತವಾಗಿಯೇ ಉಳಿಯಿತು. ಅಷ್ಟರಲ್ಲಿ ಸಿಂಗಪುರದ ಕನ್ನಡ ಸಂಘದ ಪರಿಚಯವಾಯಿತು. ಸಹೋದ್ಯೋಗಿ ಮಿತ್ರ ಮತ್ತು ಬರಹಗಾರ ಗಿರೀಶ್ ಜಮದಗ್ನಿ ಅವರ ಪ್ರೋತ್ಸಾಹ ದೊರೆತು. ಕನ್ನಡ ಸಂಘ (ಸಿಂಗಪುರ)ದ ನಾಟಕವೊಂದರಲ್ಲಿ ಭಾಗವಹಿಸುವ ಅವಕಾಶ ದೊರೆಯಿತು.

ಅಲ್ಲಿ ಅವರಂತೆಯೇ ಇನ್ನೂ ಕೆಲವು ಸಾಹಿತ್ಯದ ಒಲವಿರುವ ಮಿತ್ರರ ಪರಿಚಯವಾಯಿತು. ಸುರೇಶ ಭಟ್ಟ, ವೆಂಕಟ್, ರಮೇಶ್, ಜಯಪ್ರಕಾಶ್ ಅವರಂತಹ ಸಮಾನಾಸಕ್ತ ಗೆಳೆಯರು ಕೂಡಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತ ಕವನಗಳನ್ನು, ಕಥೆಗಳನ್ನು, ಲೇಖನಗಳನ್ನು ಬರೆಯತೊಡಗಿದೆವು. ಅಂತರ್ಜಾಲ ಪತ್ರಿಕೆಗಳಲ್ಲಿ ಕೂಡ ನನ್ನ ಕವನ, ಲೇಖನಗಳು ಪ್ರಕಟವಾಗತೊಡಗಿದವು. ಹೀಗೆ ಸುಪ್ತವಾಗಿದ್ದ ಸಾಹಿತ್ಯದ ಸೆಲೆ ಮತ್ತೆ ಭರದಿಂದ ಹರಿಯತೊಡಗಿತು.

ಈ ನಿಟ್ಟಿನಲ್ಲಿ ಕನ್ನಡ ಸಂಘ (ಸಿಂಗಪುರ) ನಮ್ಮ ಆಸಕ್ತಿಯನ್ನು ಗುರುತಿಸಿ, ಪ್ರೋತ್ಸಾಹಿಸಿ ನಮ್ಮನ್ನು ಬರೆಯುವ ಕಾಯಕಕ್ಕೆ ಮತ್ತೆ ಮತ್ತೆ ತೊಡಗಿಸಿತು. ನನ್ನ ಮಟ್ಟಿಗೆ ಮುಖ್ಯವಾಗಿ ಕನ್ನಡ ಸಂಘದ ಹಿಂದಿನ ಅಧ್ಯಕ್ಷರಾದ ಡಾ. ವಿಜಯಕುಮಾರ್, ವಿಶಾಲಾಕ್ಷಿ ವೈದ್ಯ ಮತ್ತು ಇಂದಿನ ಅಧ್ಯಕ್ಷರಾದ ವಿಜಯರಂಗಪ್ರಸಾದ್ ಅವರ ಭೂಮಿಕೆಯನ್ನು ನಾನು ಸದಾ ನೆನಪಿಡಬೇಕು. ಯಾವುದೇ ಚಿಕ್ಕ ದೊಡ್ಡ ಕಾರ್ಯಕ್ರಮವಿರಲಿ ನಮ್ಮನ್ನು ಆತ್ಮೀಯತೆಯಿಂದ ಕರೆದು ವರದಿಯನ್ನು ಬರೆಯುವ ಮತ್ತು ಗಣ್ಯರ ಸಂದರ್ಶನ ಮಾಡುವ ಕಾರ್ಯ ವಹಿಸುತ್ತಿದ್ದರು.

ವಿಜಯರಂಗಪ್ರಸಾದ್ ಸ್ವತಃ ಹವ್ಯಾಸಿ ಬರಹಗಾರ ಮತ್ತು ಅಪಾರ ಸಾಹಿತ್ಯಾಸಕ್ತರು. ಸದಾ ಕಾರ್ಯಶೀಲ ವ್ಯಕ್ತಿಯಾದ ಅವರು ಕನ್ನಡ ಸಂಘದ ಬೆಳವಣಿಗೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಗಣನೀಯ ಪಾತ್ರ ವಹಿಸಿದ್ದಾರೆ. 2008ರಲ್ಲಿ ನನ್ನ ಮನವೊಲಿಸಿ ಸಂಘದ ದ್ವೈವಾರ್ಷಿಕ ಪತ್ರಿಕೆಯಾದ 'ಸಿಂಗಾರ'ದ ಸಂಪಾದಕತ್ವವನ್ನು ವಹಿಸಿದರು. ಅಳುಕುತ್ತಲೇ ಅದರ ಚುಕ್ಕಾಣಿ ಹಿಡಿದ ನಾನು, ಆ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದರಲ್ಲಿ ಕನ್ನಡ ಸಂಘದ ಮತ್ತು ಸಿಂಗನ್ನಡಿಗ ಮಿತ್ರರ ಪಾತ್ರವೇ ದೊಡ್ಡದು.

ನಂತರ ಆಗಾಗ್ಗೆ 'ಸಿಂಗಾರ' ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಕನ್ನಡ ಸಂಘದ ಮಾಸ ಪತ್ರಿಕೆ 'ಸಿಂಚನ'ದ ಮೊದಲ ವರ್ಷ ಸಂಪಾದಕೀಯ ಸಮಿತಿಯಲ್ಲಿದ್ದು "ಚಿಂತನ ಚಾವಡಿ" ಎಂಬ ಅಂಕಣ ಬರೆಯುತ್ತಿದ್ದೆ. 2012ರಲ್ಲಿ ನಾನು ಹಿಂದಿನ ಐದು ವರ್ಷಗಳಲ್ಲಿ ಬರೆದ ಅರವತ್ತು ಕವನಗಳನ್ನು ಒಟ್ಟುಗೂಡಿಸಿ "ಅಂತರ ಮತ್ತು ಇತರ ಕವನಗಳು" ಎಂಬ ಕವನ ಸಂಕಲನವನ್ನು ಹೊರ ತರುವ ಧೈರ್ಯ ಮಾಡಿದ್ದು ಕೂಡ ಕನ್ನಡ ಸಂಘದ ಪ್ರೋತ್ಸಾಹ ಮತ್ತು ಸುರೇಶ ಭಟ್ಟ ಅವರಂತಹ ಸಿಂಗನ್ನಡಿಗ ಮಿತ್ರರ ಓಲೈಕೆಯಿಂದಲೇ.

ಕಳೆದ ವರ್ಷವಂತೂ ನನಗೆ ಚಿರಸ್ಮರಣೀಯವಾದುದು. ಉಪಾಸನಾ ಸಂಸ್ಥೆಯ ಹರಿಕಾರ, ಸುಪ್ರಸಿದ್ಧ ಸಂಯೋಜಕ ಮತ್ತು ಹಾಡುಗಾರ ಉಪಾಸನಾ ಮೋಹನ್ ಅವರು ನನ್ನ ಮತ್ತು ನನ್ನ ಕವಿ ಮಿತ್ರ ವೆಂಕಟ್ ಅವರ ಕವನಗಳನ್ನು ಮೆಚ್ಚಿ ಕೆಲವು ಆಯ್ದ ಕವನಗಳಿಗೆ ಸಂಗೀತ ನೀಡಿ ಪ್ರಸಿದ್ಧ ಹಾಡುಗಾರರಿಂದ ಹಾಡಿಸಿ "ಪ್ರೇಮ ಪ್ರಣತಿ" ಎಂಬ ಧ್ವನಿಸುರುಳಿಯೊಂದನ್ನು ರಚಿಸಿದರು. ಆ ಧ್ವನಿಸುರುಳಿಯ ಬಿಡುಗಡೆಗೆ ಕೂಡ ಕನ್ನಡ ಸಂಘ (ಸಿಂಗಪುರ) ಮುಂದೆ ಬಂದಿತು.

2016ರ ಜೂನ್ ತಿಂಗಳಲ್ಲಿ ಸುಪ್ರಸಿದ್ಧ ಕವಿ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದ ಆ ಕ್ಷಣ ಇಂದಿಗೂ ಅಚ್ಚಳಿಯದೇ ಮನದಲ್ಲಿ ನಿಂತಿದೆ. 2016ರ ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ಈ ಧ್ವನಿಸುರುಳಿ ಖ್ಯಾತ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಹಸ್ತದಿಂದ ಮತ್ತೊಮ್ಮೆ ಬಿಡುಗಡೆಯಾಯಿತು. ಮತ್ತೊಂದು ಮಹತ್ತರ ಘಟನೆಯೆಂದರೆ ಒನ್ಇಂಡಿಯಾದ ಸಹ ಸಂಪಾದಕ ಪ್ರಸಾದ ನಾಯಿಕರ ಪ್ರೋತ್ಸಾಹದಿಂದ ಈ ಅಂಕಣವನ್ನು ಆರಂಭಿಸಿದ್ದು.

ಕೇವಲ ಹವ್ಯಾಸಿ ಬರಹಗಾರನಾಗಿ ಆಗಾಗ್ಗೆ ಬಿಡುವಿನ ಸಮಯದಲ್ಲಿ ಬರಹದ ಕಾಯಕದಲ್ಲಿ ತೊಡಗಿದ ನನ್ನ ಬೆಳವಣಿಗೆಗೆ ಇಂಬು ನೀಡಿದ್ದು ಸಿಂಗಪುರದ ಕನ್ನಡಿಗರೆಲ್ಲ ಕೂಡಿ ನಿರ್ಮಿಸಿದ ನಮ್ಮ ಕನ್ನಡ ಸಂಘ. ಹಲವಾರು ಗಣ್ಯ ಮತ್ತು ಸಮರ್ಥ ನಾಯಕರ ನೇತೃತ್ವದಲ್ಲಿ ರೂಪುಗೊಂಡ ಮತ್ತು ಇನ್ನೂ ಬೆಳೆಯುತ್ತಿರುವ ಕನ್ನಡ ಸಂಘ ಈ ವರ್ಷ ತನ್ನ ಇಪ್ಪತ್ತನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಕನ್ನಡ ಸಂಘ ನನ್ನಂತೆ ಅನೇಕ ಸಿಂಗನ್ನಡಿಗ ಕಲಾವಿದರಿಗೆ ಮಾತೃ ಸ್ವರೂಪಿಯಾಗಿ ನಿಂತು ಪ್ರೋತ್ಸಾಹದ ಸಿಂಚನ ನೀಡಿದ ಸಂಸ್ಥೆ. ಅದು ಇನ್ನೂ ಬೆಳೆದು ದೊಡ್ಡದಾಗಿ ತನ್ನ ಕನ್ನಡ ಪರ ಕಾರ್ಯಕ್ರಮಗಳಿಗೆ ವಿಶ್ವವಿಖ್ಯಾತಿ ಪಡೆಯಲಿ ಮತ್ತು ವಿಶ್ವದ ಕನ್ನಡಿಗರನ್ನೆಲ್ಲಾ ಒಂದುಗೂಡಿಸುವ ವೇದಿಕೆಯಾಗಲಿ ಎಂಬುದು ನನ್ನ ಹೃದಯಾಂತರಾಳದ ಹಾರೈಕೆ.

English summary
Thanks to Singapore Kannada Sangha and friends for nourishing poetry in me and making me a noted Kannada poet and writer. Writes Vasant Kulkarni from Singapore in his weekly Kannada column. Vasant goes down the memory lane and recalls how he became a poet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more