ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಮತ್ತು ಕವಿತೆ ಸಂಬಂಧ ಲಕ್ಷ್ಮಣ ಮತ್ತು ಊರ್ಮಿಳೆಯದ್ದು

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಕವಿತೆಗಳನ್ನು ಬರೆಯುವುದನ್ನು ನಾನು ನನ್ನ ಐದನೇ ತರಗತಿಯಲ್ಲಿ ಶುರು ಮಾಡಿದ್ದೆ. ಹೀಗೆ ಬರಿ ಎಂದು ನನಗಾರೂ ಹೇಳಿರಲಿಲ್ಲ. ಪಠ್ಯ ಪುಸ್ತಕಗಳಲ್ಲಿ ಬಂದ ಪದ್ಯಗಳನ್ನು ಬಿಟ್ಟರೆ ಬೇರೇ ಯಾವ ಪದ್ಯವನ್ನೂ ಓದಿರಲಿಲ್ಲ. ಆದರೆ ಓದುವ ಮನಸ್ಸು ಇತ್ತು. ಮನೆಯಲ್ಲಿ ಕೇಳಿ ಬರುತ್ತಿದ್ದ ದಾಸರ ಪದಗಳನ್ನು ಕೇಳುತ್ತಿದ್ದೆ ಮತ್ತು ಸಂಗೀತವನ್ನು ಕಲಿಯದಿದ್ದರೂ ಕೂಡ ಚೆನ್ನಾಗಿಯೇ ಹಾಡುತ್ತಿದ್ದೆ.

ದಾಸರಪದಗಳ ಅರ್ಥದ ಜಿಜ್ಞಾಸೆ ಮನೆಯಲ್ಲಿ ಆಗಾಗ ಆಗುತ್ತಿತ್ತು. ಅವಾಗಾವಾಗ ಕುಮಾರವ್ಯಾಸ ಭಾರತ ಮತ್ತು ತೊರವೆ ರಾಮಾಯಣಗಳ ಉಲ್ಲೇಖ ಮನೆಯಲ್ಲಾಗುತ್ತಿತ್ತು ಮತ್ತು ಅವುಗಳ ಕರ್ತೃಗಳನ್ನು ಕುರಿತ ಕೆಲವು ಕಥೆಗಳು ನನ್ನ ತಾಯಿಯ ಆಗಾಧವಾದ ಸ್ಮರಣ ಪಟಲದಿಂದ ಹರಿದು ಬರುತ್ತಿದ್ದವು. ಅಷ್ಟನ್ನು ಬಿಟ್ಟರೆ ಸಾಹಿತ್ಯದ ದುರ್ಲಭ ದರ್ಶನವಾಗುತ್ತಿದ್ದುದು ಮನೆಯಲ್ಲಿ ಕೆಲವೊಂದು ಬಾರಿ ಕಂಡು ಬರುತ್ತಿದ್ದ ಸುಧಾ, ತರಂಗ ಮತ್ತು ಮಯೂರಗಳಂತಹ ಪತ್ರಿಕೆಗಳಲ್ಲಿ ಮಾತ್ರ. ಕಥೆ ಕಾದಂಬರಿಗಳು ರುಚಿಸುತ್ತಿದ್ದರೂ, ಕವನಗಳು ಮಾತ್ರ ಮನದ ಕತ್ತಲ ಗುಹೆಯಲ್ಲಿ ಅಡಗಿ ಕುಳಿತ ಬುಗ್ಗೆಗಳನ್ನು ಆಕಾಶದೆತ್ತರಕ್ಕೆ ಚಿಮ್ಮಿಸುತ್ತಿದ್ದವು.

How did I became a Kannada poet?

ಬೇಂದ್ರೆಯವರ ಸಾಲುಗಳಾದ
"ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ.
ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ"
ಎಂಬ ಸಾಲುಗಳು ಪದಗುಚ್ಛಗಳಲ್ಲಡಗಿದ ಲಯದಲ್ಲಿ ಮನಸ್ಸನ್ನು ಲೀನಗೊಳಿಸಿದರೆ, ಈಶ್ವರ ಸಣಕಲ್ ಅವರ,
"ಜಗವೆಲ್ಲ ನಗುತಿರಲಿ, ಜಗದಳಲು ನನಗಿರಲಿ,
ನಾ ನಕ್ಕು ಜಗವಳಲು ನೋಡಬಹುದೇ,
ನಾನಳಲು ಜಗವೆನ್ನನೆತ್ತಿಕೊಳದೇ"

ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?ಎಲ್ಲವನ್ನೂ ಬಿಟ್ಟು ಹೊರದೇಶಕ್ಕೆ ಏಕೆ ಹೊರಟು ಹೋದಿರಿ?

ಎಂಬ ಸಾಲುಗಳು ತಮ್ಮ ಸರಳತೆಯಲ್ಲಿಯೇ ಕವಿಯ ದೊಡ್ಡ ಮನಸ್ಸನ್ನು ಶೃಂಗದೆತ್ತರಕ್ಕೇರಿಸಿ ಇಂತಹುದೇ ಸಾಲುಗಳನ್ನು ಬರೆಯಲು ಪ್ರಯತ್ನಿಸುವುದಕ್ಕೆ ಪ್ರೇರೇಪಿಸುತ್ತಿದ್ದವು. ವಿ.ಸೀತಾರಾಮಯ್ಯನವರ "ಕಾದಿರುವಳು ಶಬರಿ" ಓದಿದಾಗ ಭಕ್ತಿಯ ಮಿಗಿಲಾದ ಮುಖದ ದರ್ಶನ ಶರತ್ಕಾಲದ ಬೆಳದಿಂಗಳಂತೆ ಸ್ಪಷ್ಟವಾಗಿತ್ತು. ಡಿವಿಜಿಯವರ ಮಂಕುತಿಮ್ಮನ ಕಗ್ಗವಾದ,
"ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ" ಎಂಬ ಕಗ್ಗವಂತೂ ನನ್ನ ಪಾಲಿಗೆ ಭಗವದ್ಗೀತೆಯಾಗಿತ್ತು.

How did I became a Kannada poet?

ಪ್ರಬಂಧ ಸ್ಪರ್ಧೆಯೊಂದರಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಬೇಂದ್ರೆಯವರ ಉಯ್ಯಾಲೆ ಮತ್ತು "ಮತ್ತೆ ಶ್ರಾವಣ ಬಂತು" ಎಂಬ ಕವನ ಸಂಕಲನಗಳು ದೊರಕಿದಾಗ ನಿಜವಾಗಿಯೂ ಮನಸ್ಸು ಭೃಂಗದ ಬೆನ್ನೇರಿತ್ತು. ಗೆಳೆಯನೊಬ್ಬ ತನ್ನ ಹತ್ತಿರವಿದ್ದ ನಾದಲೀಲೆ ಕವನ ಸಂಕಲನವನ್ನು ಕೊಟ್ಟಾಗ ಅವುಗಳಲ್ಲಿದ್ದ ಕವನಗಳನ್ನು ಓದಿದ್ದೇ ಓದಿದ್ದು. ಅನಂತ ಪ್ರಣಯ ಎಂಬ ಪ್ರಸಿದ್ಧ ಕವನ "ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ, ಚುಂಬಕ ಗಾಳಿಯು ಬೀಸುತಿದೆ" ಎಂಬ ಸಾಲುಗಳು ಮತ್ತು ಶೀರ್ಷಿಕೆ ಗೀತವಾದ ನಾದಲೀಲೆಯ,
"ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ,
ತರಳ ಎರಳೆ, ಚಿಗುರ ಚಿಗುರೆ, ಹೂವು ಹೂವು ಹುಲ್ಲೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ,
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ.
ಮುಂಜಾವದ ಎಲರ ಮೂಸಿ ನೋಡುತಿಹವು ನಲ್ಲೆ"

ಎಂಬ ಸಾಲುಗಳು ಅದೇ ತಾನೇ ಯೌವನಕ್ಕೆ ಕಾಲಿರಿಸುತ್ತಿದ್ದ ನನ್ನನ್ನು ರೋಮಾಂಚನಗೊಳಿಸಿದ್ದವು.

ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ?ನಾನು ಕಂಡ ಕರ್ನಾಟಕದ ಕನಸು ನನಸಾಗುವುದೆ?

ಒಟ್ಟಿನಲ್ಲಿ ಕವಿತೆ ಎಂದರೇನೆಂದು ತಿಳಿಯದೆಯೇ ಅವುಗಳ ಸುಳಿವಿನಲ್ಲಿ ಮುಳುಗಿದ್ದೆ. ಅಂದಿನಿಂದ ಇಂದಿನವರೆಗೆ ಕವಿತೆಯ ಮತ್ತು ನನ್ನ ಸಂಬಂಧ ಊರ್ಮಿಳೆ ಮತ್ತು ಲಕ್ಷ್ಮಣರದ್ದು. ಜೊತೆಗೂ ಇರಲಾರೆವು, ಬೇರೆಯೂ ಇರಲಾರೆವು. ಸುಮಾರು ಹತ್ತನೆಯ ವಯಸ್ಸಿನಲ್ಲಿ ಮೊದಲ ಕವನ ಬರೆದ ನಾನು ಮುಂದಿನ ಏಳೆಂಟು ವರ್ಷಗಳಲ್ಲಿ ನೂರಕ್ಕೂ ಹೆಚ್ಚು ಕವನಗಳನ್ನು ಬರೆದಿರಬಹುದು. ನನಗರಿವಿಲ್ಲದೆಯೇ ನಾನು ಕವನ ಸಾಹಿತ್ಯದ ಆಗಾಧ ಅಂತರಿಕ್ಷದಲ್ಲಿ ಲೀನವಾಗಿ ಹೋಗಿದ್ದೆ. ಆದರೆ ಏನನ್ನು ಓದಬೇಕು? ಯಾವುದನ್ನು ಅಧ್ಯಯನ ಮಾಡಬೇಕು ಎಂದು ಹೇಳುವವರಾರೂ ಇರಲಿಲ್ಲ.

How did I became a Kannada poet?

ಯೌವನಕ್ಕೆ ಪ್ರವೇಶಿಸಿದಂತೆ ನನ್ನ ಸಾಹಿತ್ಯದ ಒಲವು ಐದನೆಯ ಗಿಯರ್ ಗೆ ಪ್ರವೇಶಿಸಬೇಕಾಗಿತ್ತು. ಜೀವನದ ಉತ್ಸಾಹ, ತಾರುಣ್ಯದ ಭಾವಾವೇಶ, ಆದರ್ಶಗಳು ಮತ್ತು ಒತ್ತಡಗಳ ಮಿಶ್ರಣ ನನ್ನ ಕಾವ್ಯ ಜೀವನವನ್ನು ಹೊಸದೊಂದು ಎತ್ತರಕ್ಕೆ ಕರೆದೊಯ್ಯಬೇಕಾಗಿತ್ತು. ದುರದೃಷ್ಟವಶಾತ್, ಹಾಗಾಗಲಿಲ್ಲ. ಸಾಹಿತ್ಯದ ಓದಿನ ಬದಲು ತಾಂತ್ರಿಕ ವಿದ್ಯಾಭ್ಯಾಸಕ್ಕೆ ಕಾಲಿಟ್ಟೆ. ತಾಂತ್ರಿಕ ವಿದ್ಯಾಭ್ಯಾಸದ ಆಯಾಮವೇ ಬೇರೆಯಾಗಿತ್ತೇನೋ? ನನಗೆ ಸಾಹಿತ್ಯದ ಒಲವಿದ್ದ ಸಮಾನಮನಸ್ಕ ಮಿತ್ರರು ಕೂಡ ದೊರಕಲಿಲ್ಲ. ಮಾರ್ಗದರ್ಶಕರಂತೂ ಮೊದಲೇ ಇರಲಿಲ್ಲ.

ವಾಕ್ ಸ್ವಾತಂತ್ರ್ಯ ನಮ್ಮ ದೇಶದ ಗೌರವಕ್ಕಿಂತ ಹೆಚ್ಚೆ?ವಾಕ್ ಸ್ವಾತಂತ್ರ್ಯ ನಮ್ಮ ದೇಶದ ಗೌರವಕ್ಕಿಂತ ಹೆಚ್ಚೆ?

ಹಾಗೆಯೇ ಹತ್ತಾರು ವರ್ಷಗಳು ಹಾರಿ ಹೋದವು. ಕೆಲಸ, ಮದುವೆ, ಮಕ್ಕಳು ಎಂಬ ಮಜಲುಗಳನ್ನೇರಿ ಹೊರ ದೇಶದಲ್ಲಿ ನೆಮ್ಮದಿಯ ನೆಲೆಯಾದ ಮೇಲೆ ಹುದುಗಿ ಹೋಗಿದ್ದ ಸೆಲೆ ಮತ್ತೆ ಒಸರತೊಡಗಿತು. ವಿದೇಶದ ನೆಲದಲ್ಲಿ ಕಾವ್ಯಾಸಕ್ತಿಯುಳ್ಳ ಕೆಲವು ಮಿತ್ರರು ಸಿಕ್ಕು ಮೊದಮೊದಲು ಪ್ರೇರಣೆ ಮತ್ತು ಮಾರ್ಗದರ್ಶಕ ಎರಡೂ ಆದರು. ಮತ್ತೆ ಕವನಗಳು ಮನದಾಳದ ಶರಧಿಯಿಂದ ಉದಿಸತೊಡಗಿದವು. ಭಾವಗೀತೆಗಳ ಪ್ರಕಾರದ ಮೇಲೆ ಹೆಚ್ಚಿನ ಒಲವಿದ್ದ ನನ್ನ ಮೊದಲ ರಚನೆಗಳು ಕೂಡಾ ಹೆಚ್ಚಾಗಿ ಭಾವಗೀತೆಗಳೇ ಆಗಿದ್ದವು. "ಹಾರಯಿಕೆಯ ಕವಿ" ವಸಂತ ಕುಷ್ಟಗಿ ಅವರ ಬೆಂಬಲದಿಂದ ನನ್ನ ಮೊದಲ ಕವನ ಸಂಕಲನ "ಅಂತರ" ಕೂಡ ಪ್ರಕಟವಾಯಿತು. ಆದರೆ ನನ್ನ ಕವನಗಳಿಂದ ನನಗೆ ಅಷ್ಟೊಂದು ತೃಪ್ತಿಯಾಗಿರಲಿಲ್ಲ.

ನಾನಿನ್ನೂ ಕವಿತಾ ಪ್ರಪಂಚದ ಬಾಲ್ಯಾವಸ್ಥೆಯಲ್ಲಯೇ ಇದ್ದೇನೆ. ಇನ್ನೂ ಪ್ರಬುದ್ಧವಾಗಬೇಕು ಎಂಬ ಭಾವ ಗಾಢವಾಗತೊಡಗಿತ್ತು. ಕಾವ್ಯದ ಅರಿವು ನನ್ನಲ್ಲಿ ಆಳವಾಗಿ ನನ್ನ ಕಾವ್ಯದ ಅಭಿವ್ಯಕ್ತಿಯ ಗುಣಮಟ್ಟ ಏರಬೇಕು ಮತ್ತು ಸ್ವಂತಿಕೆಯನ್ನೂ ಪಡೆಯಬೇಕು ಎಂಬ ಭಾವನೆ ಹೆಚ್ಚು ಗಟ್ಟಿಯಾಗತೊಡಗಿತು. ಊರಿಗೆ ಹೋದಾಗಲೊಮ್ಮೆ ನನಗೆ ದೊರೆತ ಕವನ ಸಂಕಲನಗಳನ್ನು ತಂದು ಓದ ತೊಡಗಿದೆ. ನನ್ನ ಕವನಗಳನ್ನು ಕೆಲವು ಹಿರಿಯರಿಗೆ ತೋರಿಸಿದೆ ಕೂಡ. ಭಾಷೆ ನುರಿತವಾಗಿದೆಯಾದರೂ ಅಭಿವ್ಯಕ್ತಿ ಇನ್ನೂ ಸ್ಪಷ್ಟವಾಗಬೇಕು ಎಂದು ಒಬ್ಬರು ನುಡಿದರೆ, ಮತ್ತೋರ್ವರು ಭಾಷೆ ಸವಕಲಾಗಿದೆ, ಹೊಸತನ ಬರಲಿ ಎಂದು ಹೇಳಿದರು. ಸುಧಾರಿಸಬೇಕು ಎಂಬುದು ಸ್ಪಷ್ಟವಾಯಿತಾದರೂ ಅದು ಹೇಗೆ ಎಂಬ ಪ್ರಶ್ನೆ, ಪ್ರಶ್ನೆಯಾಗಿಯೇ ಉಳಿಯಿತು.

ಹಾಗಿರುವಾಗ ಅದೃಷ್ಟವೋ ಏನೋ, ಕನ್ನಡದ ಮೇರು ಕವಿ ಎಚ್ಎಸ್ ವೆಂಕಟೇಶಮೂರ್ತಿಯವರು ಸಿಂಗಪುರಕ್ಕೆ ಬಂದರು. ಅವರೊಂದಿಗೆ ನಡೆದ ಕೇವಲ ಎರಡು ಗಂಟೆಗಳ ಮಾತು, ನನ್ನ ಕಾವ್ಯವಾಹಿನಿಯ ದಿಕ್ಕನ್ನೇ ಬದಲಿಸಿತು. ಕಾವ್ಯಾಭಿವ್ಯಕ್ತಿಯಲ್ಲಿ ರಚನಾತ್ಮಕತೆ ಎದ್ದು ಕಾಣಬೇಕು ಮತ್ತು ಕವಿ ತನ್ನ ಕವನಗಳಲ್ಲಿ ಹೊಸ ಹೊಸ ರೂಪಕಗಳನ್ನು ಚಿತ್ರಿಸಿ ವಾಚಕರ ಮುಂದೆ ಹೊಸ ಜಗತ್ತನ್ನು ಸೃಷ್ಟಿ ಮಾಡಬೇಕು ಎಂದು ಅವರು ಉದಾಹರಣೆಗಳೊಂದಿಗೆ ತಿಳಿಸಿ ಹೇಳಿದರು. ನನ್ನ ಕೆಲವು ಕವನಗಳನ್ನು ಓದಿ ಅವುಗಳನ್ನು ಕುರಿತು ವಿಮರ್ಶಾತ್ಮಕ ವಿಶ್ಲೇಷಣೆ ಮಾಡಿದರು. ಅಲ್ಲದೇ ಕಾವ್ಯದ ಗುಣ ಮಟ್ಟ ಹೆಚ್ಚಾಗಲು ಏನನ್ನು ಓದಬೇಕು ಎಂಬುದನ್ನು ವಿವರಿಸಿದರು.

ಈಗಲೂ ಕೂಡ ಫೋನ್ ಮಾಡಿದಾಗಲೆಲ್ಲ "ಏನನ್ನು ಓದಿದ್ದೀರಿ? ಏನು ಬರೆಯುತ್ತೀರಿ?" ಎಂದು ಪ್ರೀತಿಯಿಂದ, ಕಳಕಳಿಯಿಂದ ಕೇಳಿ, ಮುಂದುವರೆಯಲು ಪ್ರೇರೇಪಿಸುತ್ತಾರೆ.
ಈಗ ಅವರು ಹೇಳಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಪಯಣ ಇನ್ನೂ ಸುಂದರವಾಗಿ ಕಾಣತೊಡಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯ ವಯಸ್ಸಿನತ್ತ ಹೆಜ್ಜೆಯಿಟ್ಟಿರುವ ನನಗೀಗ ಗಮ್ಯ ತಲುಪುವ ಗಡಿಬಿಡಿ ಇಲ್ಲ. ಪ್ರಯಾಣದ ಅನುಭವವೇ ಗುರಿ.

ಚಿತ್ರಕಾರನೊಬ್ಬ ತನ್ನ ಆತ್ಮ ತೃಪ್ತಿಗಾಗಿ ಮಾತ್ರ ಸುಂದರ ರಚನೆಯೊಂದರಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ಹುದುಗಿಸಿಕೊಂಡಂತೆ, ಕಾವ್ಯದ ಅಭ್ಯಾಸದಲ್ಲಿ, ಪ್ರಯೋಗದಲ್ಲಿ ನನ್ನನ್ನು ನಾನು ಸಾಕಷ್ಟು ತೊಡಗಿಸಿಕೊಂಡಿದ್ದೇನೆ. ಎಂದೋ ಒಂದು ದಿನ ನನ್ನ ಮನಸ್ಸಿಗೆ ಪೂರ್ತಿಯಾಗಿ ತೃಪ್ತಿಯಾಗುವಂತಹ ಒಂದು ಕವಿತೆಯೊಂದನ್ನು ನಾನು ರಚಿಸಿದರೂ ಸಾಕು. ಹದಿನಾಲ್ಕು ವರ್ಷಗಳಿಂದ ಕಾಯ್ದ ಊರ್ಮಿಳೆಗೆ ಅವಳ ಲಕ್ಷ್ಮಣ ದೊರೆತಂತೆ.

English summary
APJ Abdul Kalam had said poetry comes from the highest happiness or the deepest sorrow. Poetry is a painting that speaks. Vasant Kulkarnni from Singapore takes you through his poetic journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X