• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಳಗಾವಿಯ 'ಭಜನ ಸಂಗೀತ ಚೂಡಾಮಣಿ' ಕಡ್ಲಾಸ್ಕರ್ ಬುವಾ

By ವಸಂತ ಕುಲಕರ್ಣಿ, ಸಿಂಗಪುರ
|

1994-95ರ ದಿನಗಳು. ಆಗ ನಾನು ಸೂರತ್ತಿನ ರಿಲಾಯನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದೊಮ್ಮೆ ರಜೆ ಪಡೆದು ಊರಿಗೆ ಹೋದಾಗ, ತಂಗಿಯ ಮನೆಗೆ ಹೋಗಿದ್ದೆ. ನಾನು ತಂಗಿಯ ಮನೆ ತಲುಪಿದಾಗ ಅವಳು ಹುಡುಗಿಯೊಬ್ಬಳಿಗೆ ಗಣಿತ ಪಾಠ ಹೇಳುತ್ತಿದ್ದಳು. ಸ್ವಲ್ಪ ಹೊತ್ತಿನ ನಂತರ ಆ ಹುಡುಗಿ ಪಾಠ ಮುಗಿಸಿ ಮನೆಗೆ ಹೊರಟು ಹೋದಳು.

ತಂಗಿ ನನ್ನ ಹತ್ತಿರ ತಿರುಗಿ "ಈ ಹುಡುಗಿ ಯಾರು ಅಂತ ನಿನಗ ಗೊತ್ತದ ಏನು?" ಎಂದು ಕೇಳಿದಳು. ನಾನು ತಲೆ ಅಲ್ಲಾಡಿಸಿದೆ. "ಅವಳು ಕಡ್ಲಾಸ್ಕರ್ ಬುವಾ ಅವರ ಮೊಮ್ಮಗಳು. ನೋಡು ನನ್ನ ಸಂಗೀತದ ಗುರುವಿನ ಮೊಮ್ಮಗಳಿಗೆ ನಾನು ಗಣಿತದ ಗುರು" ಎಂದು ಹೇಳಿ ಹೆಮ್ಮೆಯಿಂದ ನಕ್ಕಳು.

ವಸಂತ ಕುಲಕರ್ಣಿ ಅವರ ಅಂಕಣ 'ಅಂತರ್ಮಥನ' ಅಜೇಯ ಶತಕ!

ಹಾಗೆಯೇ ಮಾತನಾಡುತ್ತ "ನನ್ನ ಗುರುವಿನ ಮೊಮ್ಮಗಳು ಅಂತ ನಾನು ಪಾಠದ ಫೀ ತಗೊಳ್ಳಲಿಕ್ಕೆ ಒಪ್ಪಲಿಲ್ಲ. ಆದರೆ ಗುರುಗಳು ನನಗೆ ಫೀ ತೊಗೊಳ್ಳಲಾರದೇ ನೀನು ಯಾರಿಗೂ ಯಾವ ವಿದ್ಯೆಯನ್ನೂ ಹೇಳಿಕೊಡಬೇಡ. ಅದರಿಂದ ಆ ವಿದ್ಯೆಯ ಮಹತ್ವ ಹುಡುಗರಿಗೆ ಗೊತ್ತಾಗುವುದಿಲ್ಲ ಎಂದು ಹೇಳಿ ಒತ್ತಾಯಿಸಿ ನನ್ನನ್ನು ಒಪ್ಪಿಸಿದರು" ಎಂದಳು.

ತಮ್ಮ ಯಾವ ಶಿಷ್ಯರಿಗೂ ಫೀ ಕೊಡಲು ಎಂದೂ ಒತ್ತಾಯಿಸದ ಈ ಮೃದು ಮನಸ್ಸಿನ ಸಂಗೀತಾಚಾರ್ಯ ಶ್ರೀ ಕಡ್ಲಾಸ್ಕರ್ ಅವರ ಈ ಮಾತು ಅವರ ಉನ್ನತ ಮನಸ್ಸಿನ ಮುಖವೊಂದನ್ನು ನನಗೆ ಪರಿಚಯಿಸಿತು.

ಇಂದು ಜನವರಿ ಇಪ್ಪತ್ತೊಂಬತ್ತರಂದು ಬೆಳಗಾವಿಯ ಹಿರಿಯ ಸಂಗೀತಗಾರ, ಗುರು ಬಿ. ವ್ಹಿ. ಕಡ್ಲಾಸ್ಕರ್ ಅವರ ಪುಣ್ಯತಿಥಿ. ಹೊಸ ವರ್ಷದ ಮೊತ್ತ ಮೊದಲ ಲೇಖನ ಈ ಮಹಾನ್ ಸಂಗೀತ ಗುರುವಿಗೆ ಅರ್ಪಣೆ. ಬೆಳಗಾವಿಯಲ್ಲಿ ಹಿಂದೂಸ್ತಾನಿ ಸಂಗೀತವನ್ನು ಬೆಳೆಸಿ ಮುನ್ನಡೆಸಿದ ಮಹನೀಯರಲ್ಲಿ ಬಿ. ವ್ಹಿ. ಕಡ್ಲಾಸ್ಕರ್ ಅವರದು ಮಹತ್ತರ ಪಾತ್ರ. ನಾನು ಚಿಕ್ಕವನಿದ್ದಾಗ ಬೆಳಗಾವಿಯಲ್ಲಿ ಅದರಲ್ಲೂ ಶಹಾಪುರ, ಖಾಸಬಾಗ್, ವಡಗಾಂವ್ ಮುಂತಾದ ಬಡಾವಣೆಗಳಲ್ಲಿ ಯಾರಾದರೂ ಶಾಸ್ತ್ರೀಯ ಗಾಯನ ಕಲಿಯುತ್ತಿದ್ದೇನೆ ಎಂದು ಹೇಳಿದರೆ, "ಯಾರ ಹತ್ತಿರ? ಕಡ್ಲಾಸ್ಕರ್ ಬುವಾ ಹತ್ತಿರವೋ?" ಎಂಬ ಮರು ಪ್ರಶ್ನೆ ಬರುತ್ತಿದ್ದುದು ಬಹಳ ಸಹಜವಾಗಿತ್ತು.

ಯಾರೂ ರೋಲ್ ಮಾಡೆಲ್ಲುಗೊಳೇ ಇಲ್ಲ ಅನ್ನೂದು ಸುಳ್ಳು

ಅಂದಿನ ದಿನಗಳಲ್ಲಿ ಬೆಳಗಾವಿಯಲ್ಲಿ ಶಾಸ್ತ್ರೀಯ ಸಂಗೀತ ಸಭೆ ಎಂದರೆ "ಎರಡು ಕಪ್ಪು ಟೊಪ್ಪಿಗೆ ಮತ್ತು ಒಂದು ಬಿಳಿ ಟೊಪ್ಪಿಗೆ ಅಲ್ಲಿ ಇರಲೇಬೇಕು" ಎಂಬ ಮಾತೊಂದಿತ್ತು. ಎರಡು ಕಪ್ಪು ಟೊಪ್ಪಿಗೆಗಳೆಂದರೆ ಒಂದು ಬಿ ವ್ಹಿ ಕಡ್ಲಾಸ್ಕರ್ ಬುವಾ ಅವರದು, ಇನ್ನೊಂದು ಹಾರ್ಮೋನಿಯಂ ಮಾಂತ್ರಿಕ ರಾಮ್ ಭಾವು ಬಿಜಾಪುರೆ ಗುರುಗಳದು. ಬಿಳಿ ಟೊಪ್ಪಿಗೆ ಎಂದರೆ ಆರ್ ಎನ್ ಜೋಶಿ ಬುವಾ ಅವರದು. ಈ ಮೂರು ಟೊಪ್ಪಿಗೆಗಳಿದ್ದರೆ ಬೆಳಗಾವಿಯ ಸಂಗೀತ ಪರಂಪರೆಯ ಪರಿಪೂರ್ಣ ಸಮ್ಮಿಲನ ಅಲ್ಲಿ ಆಗುತ್ತಿತ್ತು ಎಂದರ್ಥ.

ಬಸವಂತಪ್ಪ ವಿರೂಪಾಕ್ಷಪ್ಪ ಕಡ್ಲಾಸ್ಕರ್ ಅವರು 1922ರ ನವೆಂಬರ್ 22ರಂದು ಬೆಳಗಾವಿಯ ಶಹಾಪುರದಲ್ಲಿ ಸಂಗೀತಗಾರ ಮನೆತನದಲ್ಲಿ ಜನಿಸಿದರು. ಅಜ್ಜ ತಬಲಾ ವಾದಕರಾಗಿದ್ದರು. ಅಣ್ಣ ಬಾಲಕೃಷ್ಣ ಅವರು ಸಂಗೀತನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಅವರ ತಾಯಿ ಮನೆಯಲ್ಲಿ ಹಾಡುತ್ತಿದ್ದ ದೇವರನಾಮಗಳ ಮೂಲಕ ಅವರ ಸಂಗೀತದ ಪ್ರಥಮ ಪ್ರವೇಶ. ಆದರೆ ಶಾಸ್ತ್ರೀಯ ಸಂಗೀತದಲ್ಲಿ ಅವರ ಸುಪ್ತ ಪ್ರತಿಭೆಯನ್ನು ಗುರುತಿಸಿದ ಅವಧೂತಪುರುಷರಾದ ಕಲ್ಲೇಶ್ವರ ಸ್ವಾಮೀಜಿ ಅವರು ಬಾಲಕ ಬಸವಂತಪ್ಪ ಅವರನ್ನು ಕಿರಾಣಾ ಘರಾಣೆಯ ಗುರು ಚಿನ್ಮಯಶಾಸ್ತ್ರಿ ಅಣ್ಣೀಕೇರಿ ಅವರ ಹತ್ತಿರ ಕಲಿಯಲು ಕಳುಹಿಸಿಕೊಟ್ಟರು. ಐದಾರು ವರ್ಷ ಅವರಲ್ಲಿ ಅಭ್ಯಾಸ ಮಾಡಿದ ನಂತರ ಬಾಲಕ ಬಸವಂತಪ್ಪ ಕಡ್ಲಾಸ್ಕರ್ ತಾಮ್ಹಣಕರ್ ಬುವಾ ಅವರ ಹತ್ತಿರ ನಾಲ್ಕು ವರ್ಷ ಮತ್ತು ಎಸ್ ಎಮ್ ಕೋಮಕಾಳಿ (ಪಂಡಿತ್ ಕುಮಾರ ಗಂಧರ್ವರ ಅಣ್ಣ) ಅವರ ಹತ್ತಿರ ಕೆಲ ಕಾಲ ಸಂಗೀತ ಅಭ್ಯಾಸ ಮಾಡಿದರು. ಮುಂದೆ ಸಂಗೀತ ವಿಶಾರದ ಮತ್ತು ಕರ್ನಾಟಕ ಸರಕಾರದ ಸಂಗೀತ ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು.

ತಮ್ಮ ಕೆಲವು ಕಲಾವಿದ ಮಿತ್ರರ ಪ್ರೋತ್ಸಾಹದಿಂದ ಸಂಗೀತವನ್ನು ಕಲಿಸಲು ಆರಂಭಿಸಿದರು. ಮೂಲತಃ ಅಕ್ಕಸಾಲಿಗ ಮನೆತನದವರಾದ ಕಡ್ಲಾಸ್ಕರ್ ಬುವಾ ಅವರಿಗೆ ತಮ್ಮ ಮನೆತನದ ಕಸುಬಿಗಿಂತ ಸಂಗೀತ ಶಿಕ್ಷಣದಲ್ಲಿಯೇ ಆತ್ಮಾನಂದ ದೊರಕುತಿತ್ತು. ಅವರಿಗೆ ಸಂಗೀತವನ್ನು ಹೇಳಿಕೊಡುವುದು ಒಂದು ಕಸುಬಾಗಿರಲಿಲ್ಲ. ಅವರಿಗೆ ಅದು ಆತ್ಮೋನ್ನತಿಯ ಮಾರ್ಗವಾಗಿತ್ತು. ಮುಂಜಾನೆಯಿಂದ ರಾತ್ರಿಯವರೆಗೂ ಸಂಗೀತ ಹೇಳಿಕೊಡುತ್ತಿದ್ದ ಅವರು ತಮ್ಮ ಶಿಷ್ಯರಿಗೆ ತಿಂಗಳ ಫೀ ಬಾಕಿ ಇದೆ, ಕೊಡಿ ಎಂದು ಎಂದಿಗೂ ಕೇಳುತ್ತಿರಲಿಲ್ಲ.

ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ

ಎಲ್ಲ ವಿದ್ಯಾರ್ಥಿಗಳು ಅವರಿಗೆ ಅವರ ಮಕ್ಕಳಿಗಿಂತ ಹೆಚ್ಚೇ ಆಗಿದ್ದರು. ಈ ಮಾತನ್ನು ನಾನು ಎಲ್ಲಿಯೋ ಕೇಳಿ ಹೇಳುತ್ತಿಲ್ಲ. ಸ್ವತಃ ನನ್ನ ತಂಗಿ ಅವರ ಹತ್ತಿರ ಸುಮಾರು ಆರು ವರ್ಷ ಸಂಗೀತವನ್ನು ಕಲಿತಿದ್ದಾಳೆ. ಅವಳಿಗೆ ಕ್ಲಾಸಿನಿಂದ ಅಥವಾ ಪರೀಕ್ಷಾ ಕೇಂದ್ರದಿಂದ ಬರಲು ತಡವಾದರೆ ತಾವೇ ಸ್ವತಃ ಮನೆಯವರೆಗೆ ಬಂದು ಬಿಟ್ಟು ಹೋಗುತ್ತಿದ್ದರು. ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಉಚಿತ ಸಂಗೀತ ಶಿಕ್ಷಣ ನೀಡಿದ್ದಲ್ಲದೇ ಅವರಿಗೆ ಜೀವನೋಪಾಯವನ್ನು ಕೂಡಾ ಕಲ್ಪಿಸಿಕೊಡಲು ಸಹಾಯ ಮಾಡುತ್ತಿದ್ದರು.

ಆಕಾಶವಾಣಿ ಧಾರವಾಡ ಕೇಂದ್ರದಲ್ಲಿ ಅನೇಕ ಬಾರಿ ಕಾರ್ಯಕ್ರಮವನ್ನು ಕೊಟ್ಟಿದ್ದಲ್ಲದೇ, ಬೆಳಗಾವಿಯಲ್ಲಿ ಭಾಷೆಯ ಭೇದವಿಲ್ಲದೇ, ಕನ್ನಡ ದಾಸರ ಪದಗಳು ಮತ್ತು ವಚನಗಳೊಂದಿಗೆ ಮರಾಠಿ ಅಭಂಗಗಳು, ಹಿಂದಿಯ ಕಬೀರ, ಮೀರಾಬಾಯಿ ಅವರಂತಹ ಸಂತರ ಪದಗಳನ್ನು ಕೂಡ ಸ್ವರ ಸಂಯೋಜನೆ ಮಾಡಿ ಹಾಡುತ್ತಿದ್ದರು ಮತ್ತು ತಮ್ಮ ಶಿಷ್ಯರಿಂದ ಹಾಡಿಸುತ್ತಿದ್ದರು. ಅಲ್ಲದೇ ಬೆಳಗಾವಿಯಲ್ಲಿ ಅನೇಕ ಭಜನಾ ಮಂಡಳಿಗಳನ್ನು ಹುಟ್ಟು ಹಾಕಿದರು. ಅವುಗಳಿಗೆ ಬೆಂಬಲ ಕೊಟ್ಟು ಭಕ್ತಿ ಸಂಗೀತ ಬೆಳಗಾವಿಯಲ್ಲಿ ಕಾಲೂರುವಂತೆ ಮಾಡಿದರು. ಭಜನೆ ಸಂಗೀತಕ್ಕೆ ಅವರು ನೀಡಿದ ಕೊಡುಗೆಯನ್ನು ಗಮನಿಸಿ ಪಂಢರಪುರದ ಭಾಸ್ಕರ ಮಹಾರಾಜ ಅವರು ಕಡ್ಲಾಸ್ಕರ್ ಬುವಾ ಅವರಿಗೆ "ಭಜನ ಸಂಗೀತ ಚೂಡಾಮಣಿ" ಎಂಬ ಬಿರುದನ್ನು ಕೊಡ ಮಾಡಿದರು.

ಕಡ್ಲಾಸ್ಕರ್ ಬುವಾ ಅವರು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕ್ಯಾಡೆಮಿ ಮತ್ತು ಪುಣೆಯ ಗಂಧರ್ವ ಮಹಾವಿದ್ಯಾಲಯಗಳಿಂದ ಸಂಗೀತ ಪರೀಕ್ಷಕರೆಂದು ಮಾನ್ಯತೆ ಪಡೆದರು. ಕರ್ನಾಟಕ ಸಂಗೀತದ ಪ್ರಕಾರವಾದ ಗಮಕ ಕಲೆಯಲ್ಲೂ ಪರಿಣಿತಿ ಪಡೆದು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಬೆಳಗಾವಿಯಲ್ಲೂ ಕೂಡಾ ಗಮಕ ತರಬೇತಿ ವರ್ಗಗಳನ್ನು ನಡೆಸಿದ್ದರು ಎಂಬುದು ತೀರ ಇತ್ತೀಚೆಗೆ ನನಗೆ ತಿಳಿದು, ಅವರ ಬಹುಮುಖ ಸಾಮರ್ಥ್ಯದ ಬಗ್ಗೆ ಕೌತುಕವೆನಿಸಿತು. 1993-94ರ ಸಾಲಿನ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕ್ಯಾಡೆಮಿಯು ಅವರಿಗೆ "ಕರ್ನಾಟಕ ಕಲಾ ತಿಲಕ" ಎಂಬ ಪ್ರಶಸ್ತಿ ನೀಡಿ ಗೌರವಿಸಿತು.

ನಮ್ಮ ಆತ್ಮವೇ ರಾಮ, ನಮ್ಮ ಮನಸ್ಸೇ ಸೀತೆ, ಉಸಿರೇ ಹನುಮಂತ!

ಜನಸಾಮಾನ್ಯರಲ್ಲಿ ಸಂಗೀತದ ಬಗ್ಗೆ ತಿಳುವಳಿಕೆ ಮತ್ತು ಆಸಕ್ತಿ ಬೆಳೆಸಲು ಬೆಳಗಾವಿಯಲ್ಲಿ ತಮ್ಮ ಸಂಗೀತ ಕಲಾಕಾರ ಸಂಘದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರೂ ಕೂಡ ಅದಕ್ಕಾಗಿಯೇ ಬಂದ ಪಿಂಚಣಿಯನ್ನು ದೇಶಸೇವೆ ಮಾಡಿದ್ದಕ್ಕೆ ಪ್ರತಿಫಲವನ್ನು ನಾನು ತೆಗೆದುಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದರು.

ಅವರೆಷ್ಟು ಒಳ್ಳೆಯ ಶಿಕ್ಷಕರಾಗಿದ್ದರೋ ಅಷ್ಟೇ ಉತ್ತಮ ಗಾಯಕರಾಗಿದ್ದರು ಕೂಡ. ಅವರನ್ನು ಕೇಳಿದ ಅನೇಕ ಹಿರಿಯರು ಅವರ ಗಾಯನವನ್ನು ಸುಮಧುರ, ಭಾವಪೂರ್ಣ ಮತ್ತು ಖಾನದಾನಿ ಶೈಲಿಯದ್ದು ಎಂದು ವರ್ಣಿಸಿದ್ದಾರೆ. ಕಿರಾಣಾ ಮತ್ತು ಗ್ವಾಲಿಯರ್ ಘರಾಣೆಗಳ ಶೈಲಿಯನ್ನು ತಮ್ಮ ಗಾಯನದಲ್ಲಿ ಸಮ್ಮಿಲನ ಮಾಡಿಕೊಂಡು ಹೃದಯ ಸ್ಪಂದನವಾಗುವಂತಹ ಕಾರ್ಯಕ್ರಮ ನೀಡುತ್ತಿದ್ದರು ಎಂದು ಹಿರಿಯರಿಂದ ಕೇಳಿದ್ದೇನೆ. ಅಲ್ಲದೇ ಅನೇಕ ಬಾರಿ ನನ್ನ ತಂಗಿ ಕೂಡ ತಮ್ಮ ಗುರುಗಳ ಸಾಮರ್ಥ್ಯಕ್ಕೆ ತಕ್ಕ ಹೆಸರು ಬರಲಿಲ್ಲ ಎಂದು ನೊಂದುಕೊಳ್ಳುತ್ತಿದ್ದಳು.

ಆದರೇನಂತೆ? ಅವರು ಬಹುದೊಡ್ಡ ಶಿಷ್ಯ ಪರಂಪರೆಯನ್ನು ಬೆಳೆಸಿ ಸಂಗೀತ ಕ್ಷೇತ್ರದಲ್ಲಿ ಶಾಶ್ವತವಾದ ಹೆಸರನ್ನು ಪಡೆದಿದ್ದಾರೆ. ಅವರ ಅನೇಕ ಶಿಷ್ಯರು ಇಂದು ಖ್ಯಾತಿ ಪಡೆದ ಸಂಗೀತಗಾರರಾಗಿ, ಸಂಗೀತದ ಶಿಕ್ಷಕರಾಗಿ ಹೆಸರು ವಾಸಿಯಾಗಿದ್ದಾರೆ. ಅವರಲ್ಲಿ ವಿನಾಯಕ ಶಿರಸಾಟ್, ರಾಜಪ್ರಭು ಧೋತ್ರೆ, ಮಹೇಶ್ ಕುಲಕರ್ಣಿ, ಗೀತಾ ಬೇಡೇಕರ್, ಡಾ. ಸ್ನೇಹಾ ರಾಜೂರಿಕರ್, ವಾಮನ ವಾಗೂಕರ್, ಗುರುರಾಜ್ ಕುಲಕರ್ಣಿ, ಜಯಶ್ರೀ ಸವಾಗುಂಜಿ (ಕಡ್ಲಾಸ್ಕರ್ ಬುವಾ ಅವರ ಮಗಳು) ಮತ್ತು ಗಾಯತ್ರಿ ಅರ್ಕಸಾಲಿ (ಅವರ ಮೊಮ್ಮಗಳು) ಅವರು ಪ್ರಮುಖರು.

ಈಚೆಗೆ ನಾನು ಅವರ ಶಿಷ್ಯರಾದ ಗುರುರಾಜ್ ಕುಲಕರ್ಣಿ ಅವರೊಂದಿಗೆ ಮಾತನಾಡುತ್ತಿದ್ದೆ. ಗುರುಗಳ ಬಗ್ಗೆ ಮಾತನಾಡುತ್ತ ತುಂಬಾ ಭಾವುಕರಾಗಿ ಅವರು "ನಮ್ಮ ಗುರು ನನ್ನನ್ನು ಬೇರೆ ಎಂದು ಎಂದೂ ತಿಳಿಯಲೇ ಇಲ್ಲ. ಯಾವಾಗಲೂ ನನ್ನನ್ನು ಮಗನಂತೆಯೇ ನೋಡಿಕೊಂಡರು. ತಮ್ಮ ವಿದ್ಯೆಯನ್ನು ಬಹಳ ಪ್ರೀತಿಯಿಂದ ಕಲಿಸಿಕೊಟ್ಟರು. ಅವರದು ತುಂಬಾ ವಿಶಾಲವಾದ ಮನಸ್ಸು. ಯಾವಾಗಲೂ ನಮಗೆ ಬೇರೆ ಬೇರೆ ಜನರಿಂದ ಉತ್ತಮವಾದುದನ್ನು ಕಲಿಯುವಂತೆ ಪ್ರೋತ್ಸಾಹಿಸಿದರು. ಅವರು ಯಾವತ್ತೂ ಪ್ರಶಸ್ತಿ, ಪುರಸ್ಕಾರಗಳ ಬೆನ್ನು ಹತ್ತಲಿಲ್ಲ, ಬಹಳ ಸ್ವಚ್ಛ ಮತ್ತು ಪ್ರಾಮಾಣಿಕ ಮನಸ್ಸು ಅವರದು" ಎಂದು ನುಡಿದರು.

ಜನವರಿ 29, 2002ರಂದು ಹರಿಪದವನ್ನು ಪಡೆದ ಬಿ ವ್ಹಿ ಕಡ್ಲಾಸ್ಕರ್ ಬುವಾ ಅವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಬೆಳಗಾವಿಯ ಸಂಗೀತ ಕ್ಷೇತ್ರದ ಆಧಾರ ಸ್ತಂಭವಾಗಿ ನಿಂತು ಬೆಳೆಸಿದ ಈ ಉಚ್ಛ ಶಿಷ್ಯಕೋಟಿ ಅವರ ನೆನಪನ್ನು ಸದಾ ಹಸಿರಾಗಿಟ್ಟಿದೆ. ಮುಂದಿನ ವಾರ ಫೆಬ್ರುವರಿ 2, 3ರಂದು ಅವರ ಶಿಷ್ಯಗಣ ಬೆಳಗಾವಿಯಲ್ಲಿ ಗುರುಗಳ 17ನೇಯ ಪುಣ್ಯ ತಿಥಿಯ ನಿಮಿತ್ತವಾಗಿ ಎರಡು ದಿನಗಳ ಸಂಗೀತ ಮಹೋತ್ಸವವನ್ನು ಏರ್ಪಡಿಸಿದ್ದಾರೆ. ಗೀತಾ ಗುಲ್ವಾಡಿ ಮತ್ತು ರಾಜಪ್ರಭು ಧೋತ್ರೆ ಅವರ ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ಸುಧಾಂಶು ಕುಲಕರ್ಣಿ ಅವರ ಹಾರ್ಮೋನಿಯಂ ಸೋಲೋ ಮತ್ತು ವಿನಾಯಕ ನಾಯಿಕ್ ಅವರ ತಬಲಾ ಸೋಲೋ ಕಾರ್ಯಕ್ರಮಗಳು ಈ ಉತ್ಸವದ ಮುಖ್ಯಾಂಶಗಳು. ಆ ದಿನಗಳಂದು ಬೆಳಗಾವಿಯಲ್ಲಿದ್ದರೆ ಈ ಕಾರ್ಯಕ್ರಮದಲ್ಲಿ ಖಂಡಿತ ಭಾಗವಹಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Today, 29th January is death anniversary of Hindustani Music exponent Kadlaskar Bua from Belagavi. He always treated his disciples as his kids and never demanded anything from them. Vasant Kulkarni remembers the great singer from Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more