ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಯಾಮಯನಾದ ದೇವರೇ, ಯಾಕೆ ನೀನು ಅಷ್ಟು ನಿಷ್ಕರುಣಿ?

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಕಳೆದ ವರ್ಷ ಜನೇವರಿ ಮೊದಲ ವಾರ ಇರಬಹುದು. ಆಫೀಸಿನ ಕೆಲಸ ಮುಗಿಸಿ ಮನೆಗೆ ಮರಳಲು ಬಸ್ಸಿನ ದಾರಿ ಕಾಯುತ್ತಿದ್ದೆ. ಬಸ್ ಸ್ಟಾಪಿನಲ್ಲಿ ಒಂದು ಮುಖ ಪರಿಚಿತ ಎನಿಸಿತು. ಆದರೂ ಖಚಿತವಾಗಿರಲಿಲ್ಲ. ಬಸ್ಸೇರಿ ನನ್ನ ಸ್ಟಾಪಿನಲ್ಲಿ ಇಳಿಯುವಾಗ ಅವರೂ ಇಳಿದರು. ನನ್ನನ್ನು ನೋಡಿ ನಸು ನಕ್ಕರು. ಆಗ ಖಚಿತವಾಯಿತು. ನಾನು ಕೂಡ ಪರಿಚಯದ ನಸು ನಕ್ಕೆ. ತುಂಬಾ ಇಳಿದು ಹೋಗಿದ್ದರು. ಕಣ್ಣಿನ ಸುತ್ತಲೂ ಕಪ್ಪು ಅಡರಿತ್ತು. ಉದ್ದವಾದ ಕೂದಲು ಹೋಗಿ ಬಾಬ್ ಕಟ್ ಬಂದಿತ್ತು. ಅವರನ್ನೊಮ್ಮೆ ನೋಡಿ ಮನದಲ್ಲಿಯೇ ಸಂಕಟವಾಯಿತು. ಮನದಲ್ಲಿಯೇ ಎಂಟು ಒಂಬತ್ತು ತಿಂಗಳ ಮೊದಲು ನನ್ನ ಮಡದಿ ಹೇಳಿದ್ದ ಮಾತು ನೆನಪಾಯಿತು. "ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಆಗಿದೆಯಂತೆ!".

ಅವರನ್ನು ಮಾತನಾಡಿಸಿದೆ. "ಹೇಗಿದ್ದೀರಿ ಈಗ?" ಅವರು ನಸು ನಗುತ್ತಲೇ ಹೇಳಿದರು "ಡಾಕ್ಟರು ಕೇವಲ ಮೂರು ತಿಂಗಳು ಎಂದು ಹೇಳಿದ್ದಾರೆ".

ನನ್ನ ಬಾಯಿಯಿಂದ ಮಾತೇ ಹೊರಡಲಿಲ್ಲ! ಈ ಮಾತು ಹೇಳುವಾಗ ಅವರ ಶಾಂತ ಭಾವವನ್ನು ಕಂಡು ಅವರ ಮಾನಸಿಕ ಸ್ಥೈರ್ಯದ ಬಗ್ಗೆ ಅಪಾರವಾದ ಗೌರವ ಉಂಟಾಯಿತು. ಮುಂದುವರೆದು ತಾವೇ ಹೇಳಿದರು. "ಕೀಮೋಥೆರಪಿ ಮಾಡಿದ್ದಾರೆ. ಆದರೆ ಫಲ ಕಂಡು ಬರಲಿಲ್ಲ. ನನ್ನ ಡಾಕ್ಟರು ಇನ್ನೊಂದು ಬಾರಿ ಕೀಮೋಥೆರಪಿ ಆಗಲಿ ಎಂದು ಹೇಳಿದ್ದಾರೆ. ಕೇವಲ ಮೂರು ತಿಂಗಳು ಎಂದು ಡಾಕ್ಟರು ಹೇಳಿದ್ದರೂ, ನಾನು ಅವರನ್ನು ನಂಬುವುದಿಲ್ಲ".

ಕ್ಯಾನ್ಸರ್ ಸಂಪೂರ್ಣ ಗುಣಪಡಿಸುವ ಔಷಧಿ 2020ಕ್ಕೆ ಮಾರುಕಟ್ಟೆಗೆ! ಕ್ಯಾನ್ಸರ್ ಸಂಪೂರ್ಣ ಗುಣಪಡಿಸುವ ಔಷಧಿ 2020ಕ್ಕೆ ಮಾರುಕಟ್ಟೆಗೆ!

ಅವರ ದನಿಯಲ್ಲಿಯ ಖಚಿತತೆ ಮತ್ತು ಹೋರಾಟದ ಮನೋಭಾವ ಕಂಡು ಮನಸ್ಸು ತುಂಬಿ ಬಂದಿತು. ಅಷ್ಟೊಂದು ಪರಿಚಯ ಇಲ್ಲದಿದ್ದರೂ, ನನ್ನ ಒಡ ಹುಟ್ಟಿದವಳೇನೋ ಎನ್ನುವ ಭಾವ ಉಕ್ಕಿ ಬಂತು. "ಇಲ್ಲ, ಡಾಕ್ಟರನ್ನು ನಂಬಬೇಡಿ. ನಿಮ್ಮ ಹೋರಾಟ ಮುಂದುವರೆಸಿ. ದೇವರು ನಿಮ್ಮೊಂದಿಗಿದ್ದಾನೆ. ನಮ್ಮೆಲ್ಲರ ಪ್ರಾರ್ಥನೆಗಳು ಕೂಡ ನಿಮ್ಮೊಂದಿಗಿವೆ. ಖಂಡಿತ ಗುಣವಾಗುತ್ತೀರಿ". ಎಂದು ಮನಃಪೂರ್ವಕವಾಗಿ ಹೇಳಿದೆ. ಹಾಗೆಯೇ ಕ್ಯಾನ್ಸರ್ ನೊಂದಿಗೆ ಹೋರಾಡಿ ಗೆದ್ದ ಅಮಿತ್ ವೈದ್ಯ ಅವರ ಕಥೆಯನ್ನು ಅವರಿಗೆ ಹೇಳಿದೆ.

God has some other plans, we ought to follow

ಅವರ ಮಗ ನನ್ನ ಮಗನ ಸ್ಕೂಲಿನಲ್ಲಿಯೇ ಓದುತ್ತಿದ್ದ. ಹೀಗಾಗಿ ಮಗನನ್ನು ಸ್ಕೂಲು ಬಸ್ಸಿಗೆ ಕಳುಹಿಸುವಾಗ ಸಿಗುತ್ತಿದ್ದರು. ಸ್ನಿಗ್ಧ ಸೌಂದರ್ಯದ, ಸರಳ ನಡವಳಿಕೆಯ ಮತ್ತು ಯಾವಾಗಲೂ ನಸು ನಗು ತುಂಬಿಕೊಂಡಿರುತ್ತಿದ್ದ ಲಕ್ಷಣವಂತ ಮಹಿಳೆ. ಅವರನ್ನು ನೋಡುತ್ತಲೇ ಗೌರವ ಹುಟ್ಟಿಕೊಳ್ಳುತ್ತಿತ್ತು. ನಾವಿರುತ್ತಿದ್ದ ಕಟ್ಟಡದ ಮೇಲ್ಭಾಗದ ಅಪಾರ್ಟ್ಮೆಂಟಿನಲ್ಲಿರುತ್ತಿದ್ದರು. ಅವರ ಮಗ ನನ್ನ ಮಗನಿಗಿಂತ ಎರಡು ವರ್ಷ ಚಿಕ್ಕವನು. ಇನ್ನೂ ಚಿಕ್ಕವಳಾದ ಮಗಳೊಬ್ಬಳಿದ್ದಳು.

ಪುಲ್ವಾಮಾ ಬರ್ಬರ ಹತ್ಯಾಕಾಂಡ ಮತ್ತು ಇತಿಹಾಸದ ಪುಟಗಳು ಪುಲ್ವಾಮಾ ಬರ್ಬರ ಹತ್ಯಾಕಾಂಡ ಮತ್ತು ಇತಿಹಾಸದ ಪುಟಗಳು

ಅವರು ಮತ್ತು ಅವರ ಪತಿ ಇಬ್ಬರೂ ಕಂಪ್ಯೂಟರ್ ಎಂಜಿನೀಯರ್ ಎಂದೂ, ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಎಂದೂ ತಿಳಿದು ಬಂದಿತ್ತಷ್ಟೇ. ಒಂದೆರಡು ಬಾರಿ ನಮ್ಮ ಮನೆಗೆ ನನ್ನ ಮಡದಿ ಕರೆದ ಅರಿಷಿಣ ಕುಂಕುಮಕ್ಕೆ ಬಂದಿದ್ದರು. ನಂತರ ನಾವು ಬೇರೆ ಬಡಾವಣೆಯಲ್ಲಿ ಬಾಡಿಗೆ ಮನೆ ಹಿಡಿದೆವು. ಆ ಮನೆಯಲ್ಲಿರುವಾಗಲೇ ನನ್ನ ಮಡದಿಗೆ ಅವರ ಕ್ಯಾನ್ಸರ್ ಬಗ್ಗೆ ತಿಳಿಯಿತು. ಅಂದು ನಮ್ಮಿಬ್ಬರ ಮನಸ್ಸಿಗೆ ತುಂಬಾ ಸಂಕಟವಾಗಿತ್ತು. ಕೆಲ ಕಾಲದ ನಂತರ ಮತ್ತೆ ನಾವು ಅವರಿರುವ ಬಡಾವಣೆಗೇ ವಾಪಸ್ಸು ಬಂದೆವು. ಆಮೇಲೆ ನನಗೆ ಅವರು ಬಸ್ಸಿನಲ್ಲಿ ಸಿಕ್ಕಿದ್ದು.

ಭಾರತದ ಅಗ್ಗದ ಕ್ಯಾನ್ಸರ್ ಔಷಧಕ್ಕೆ ಚೀನಾದಲ್ಲಿ ಭಾರೀ ಬೇಡಿಕೆಭಾರತದ ಅಗ್ಗದ ಕ್ಯಾನ್ಸರ್ ಔಷಧಕ್ಕೆ ಚೀನಾದಲ್ಲಿ ಭಾರೀ ಬೇಡಿಕೆ

ಮುಂದಿನ ಎರಡು ವಾರಗಳವರೆಗೆ ಆಗಾಗ ಆಫೀಸಿನಿಂದ ಮನೆಗೆ ಬರುವಾಗ ಸಿಗುತ್ತಿದ್ದರು. ಆಗ ಅವರೊಂದಿಗೆ ಮಾತುಕತೆ ಆಗುತ್ತಿದ್ದಾಗ ತಿಳಿದು ಬಂದ ವಿಷಯವೇನೆಂದರೆ ಅವರು ಮೂಲತಃ ತಮಿಳು ಭಾಷಿಕರು. ಅವರ ತಂದೆ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ವಿಜ್ಞಾನಿಯಾಗಿ ನಿವೃತ್ತರಾಗಿದ್ದರು. ಮದುವೆಯಾಗಿ ತಮ್ಮ ಪತಿಯ ಜೊತೆ ಸಿಂಗಪುರಕ್ಕೆ ಬಂದ ಮೇಲೆಯೂ ಇಲ್ಲಿನ ಪ್ರತಿಷ್ಠಿತ ಎನ್ ಯು ಎಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತೆ.

ಅದರೂ ಅವರ ಮಾತುಕತೆ ತಮ್ಮ ಮಗನ ವಿದ್ಯಾಭ್ಯಾಸವನ್ನು ಕುರಿತಾಗಿಯೇ ಇರುತ್ತಿತ್ತೆಂದು ನನ್ನ ಮಡದಿ ಹಲವಾರು ಬಾರಿ ಹೇಳಿದ್ದಳು. ನನ್ನ ಮಗನ ಪ್ರಾಥಮಿಕ ವಿದ್ಯಾಭಾಸ ಮುಗಿದು ಆತ ಮಾಧ್ಯಮಿಕ ಶಾಲೆಗೆ ಹೊರಟು ನಿಂತಾಗ, ಅವನ ಎಲ್ಲ ಪಠ್ಯ ಪುಸ್ತಕ ಮತ್ತು ಚಟುವಟಿಕೆಗಳ ಬಗ್ಗೆ ಕೂಲಂಕುಶವಾಗಿ ಮಾತನಾಡಿ ತಿಳಿದುಕೊಂಡಿದ್ದರೆಂದು ನನ್ನ ಪತ್ನಿ ಹೇಳಿದ್ದಳು. ಸಾಮಾನ್ಯ ಗೃಹಿಣಿಯಂತೆ ಯಾವಾಗಲೂ ತಮ್ಮ ಪುಟ್ಟ ಮಗನ ವಿದ್ಯಾಭ್ಯಾಸದ ಬಗೆಗೇ ಚಿಂತಿಸುತ್ತಿದ್ದ ಈ ಮಹಿಳೆಯ ಅಹಂ ರಹಿತ ನಡವಳಿಕೆಯನ್ನು ನೋಡಿದರೆ ಇಂತಹ ಪ್ರತಿಭಾವಂತ ಚೇತನವೊಂದು ಅವರಲ್ಲಡಗಿದೆ ಎಂದು ನನಗೆ ಅವರಾಗಿಯೇ ತಮ್ಮ ಬಗ್ಗೆ ಹೇಳುವವರೆಗೆ ತಿಳಿದಿರಲಿಲ್ಲ.

God has some other plans, we ought to follow

ಅವರ ತಂದೆ ವಿಜ್ಞಾನಿ ಎಂದು ಹೇಳಿದಾಗ ನನಗೆ ಬಹಳ ಖುಶಿಯಾಯಿತು. "ನನ್ನ ಮಗನಿಗೂ ಕೂಡ ವಿಜ್ಞಾನದಲ್ಲಿ ಬಹಳ ಆಸಕ್ತಿ. ನಿಮ್ಮ ತಂದೆ ಬಂದಾಗ ಹೇಳಿ. ಅವರನ್ನೊಮ್ಮೆ ಭೇಟಿ ಮಾಡಲು ಹೇಳುತ್ತೇನೆ" ಎಂದು ಒಮ್ಮೆ ಕೇಳಿಕೊಂಡೆ. ಅವರು ಬಹಳ ಖುಶಿಯಿಂದಲೇ ಒಪ್ಪಿಕೊಂಡರು. ಅವರ ಮಾತಿನಿಂದ ಆ ವರ್ಷ ಅವರ ಮಗ ಕೂಡ ಪಿ ಎಸ್ ಎಲ್ ಇ (ಸಿಂಗಪುರದ ಪ್ರಾಥಮಿಕ ಶಾಲೆಯ ಮುಕ್ತಾಯದ ಪರೀಕ್ಷೆ) ಯಲ್ಲಿದ್ದುದರಿಂದ ಅವನ ಪರೀಕ್ಷೆಯ ಚಿಂತೆಯಲ್ಲಿದ್ದುದು ಕಂಡು ಬಂದಿತು. ಪಿ ಎಸ್ ಎಲ್ ಇ ಪರೀಕ್ಷೆಯ ಆಧಾರದ ಮೇಲೆ ಸಿಂಗಪುರದಲ್ಲಿ ಮಾಧ್ಯಮಿಕ ಶಾಲೆಯ ಪ್ರವೇಶ ದೊರೆಯುತ್ತದೆ. ಆದುದರಿಂದ ಬಹಳ ಹೆಸರಾಂತ ಮತ್ತು ಉತ್ತಮ ಶಾಲೆಯಲ್ಲಿ ಪ್ರವೇಶ ಪಡೆಯಲು ಈ ಪಬ್ಲಿಕ್ ಪರೀಕ್ಷೆಯಲ್ಲಿ ಒಳ್ಳೆ ಅಂಕಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಆದುದರಿಂದ ಅವರು ಆ ಚಿಂತೆಯಲ್ಲಿದ್ದರು. ಆಗ ನಾನು "ನಿಮ್ಮ ಇಡೀ ಕುಟುಂಬವೇ ಪ್ರತಿಭಾವಂತ ಕುಟುಂಬ. ನೀವೇನೂ ಚಿಂತೆ ಮಾಡಬೇಡಿ. ಅವನು ಉತ್ತಮ ಅಂಕಗಳನ್ನೇ ಗಳಿಸುತ್ತಾನೆ" ಎಂದು ಸಮಾಧಾನ ಹೇಳಿದ್ದೆ.

ಐನ್ ಸ್ಟೀನ್ ನ ಸಾಪೇಕ್ಷ ಸಿದ್ಧಾಂತದ ಬಗ್ಗೆ ನಿಮಗೆಷ್ಟು ತಿಳಿದಿದೆ?ಐನ್ ಸ್ಟೀನ್ ನ ಸಾಪೇಕ್ಷ ಸಿದ್ಧಾಂತದ ಬಗ್ಗೆ ನಿಮಗೆಷ್ಟು ತಿಳಿದಿದೆ?

ಮುಂದೆ ಅನೇಕ ತಿಂಗಳುಗಳವರೆಗೆ ಸಿಕ್ಕಿರಲಿಲ್ಲ. ಅದರೆ ಪ್ರತಿದಿನವೂ ನಾನು ಮನಸ್ಸಿನಲ್ಲಿಯೇ ಗುರು ರಾಘವೇಂದ್ರರ ಪ್ರಾರ್ಥನೆ ಮಾಡುತ್ತಾ ಅವರ ಉತ್ತಮ ಆರೋಗ್ಯವನ್ನು ಕೋರಿಕೊಳ್ಳುತ್ತಿದ್ದೆ. ಏಳೆಂಟು ತಿಂಗಳುಗಳು ಉರುಳಿದವು. ಒಮ್ಮೆ ನಾನು ಮತ್ತು ನನ್ನ ಮಡದಿ ನಮ್ಮ ವಾಕಿಂಗ್‍ನಿಂದ ಮರಳಿ ಬರುವಾಗ ಅವರು ತಮ್ಮ ಮಗಳೊಂದಿಗೆ ಸಿಕ್ಕರು. ನಮ್ಮಿಬ್ಬರಿಗೂ ಅವರನ್ನು ನೋಡಿ ಖುಶಿಯಾಯಿತಾದರೂ, ಅವರು ಇನ್ನಷ್ಟು ಇಳಿದಿದ್ದರು. ಅವರ ಮುಗ್ಧ ಮಗಳ ಮುಖ ಮತ್ತು ಅವರ ಸ್ಥಿತಿಯನ್ನು ನೋಡಿ ನನ್ನ ಮಡದಿಯ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಅವರೊಂದಿಗೆ ಮಾತನಾಡಿ ಅವರನ್ನು ಮತ್ತಷ್ಟು ಪ್ರೋತ್ಸಾಹಿಸಿ ಮನೆಗೆ ಮರಳಿದಾಗ ಮನಸ್ಸಿನಲ್ಲಿ ಆಗಾಧ ನೋವು.

ಎರಡು ಮೂರು ತಿಂಗಳುಗಳು ಹಿಂದೆ ಇರಬಹುದು. ನನ್ನ ಮಗ ಅವರು ಸಾಕಷ್ಟು ಗುಣಮುಖರಾಗಿದ್ದಾರೆ ಮತ್ತೆ ಮೊದಲಿನಂತೆಯೇ ಕಾಣುತ್ತಿದ್ದಾರೆ ಎಂದು ಹೇಳಿದಾಗ ಸಂತೋಷವಾಯಿತು. ಕೆಟ್ಟ ಕ್ಯಾನ್ಸರ್ ರೋಗದ ವಿರುದ್ಧ ಅವರು ಹೋರಾಡಿ ಗೆಲ್ಲುತ್ತಿದ್ದಾರೆ ಎಂದು ತಿಳಿದು ಬಹಳ ಖುಷಿಯಾಯಿತು. ಆದರೆ ಈ ಸಂತೋಷ ಬಹಳ ಕಾಲ ನಿಲ್ಲಲಿಲ್ಲ. ಕಳೆದ ವಾರ ನಾನು ಮನೆಗೆ ಬಂದಾಗ ಅವರ ಆರೋಗ್ಯ ತುಂಬಾ ಕೆಟ್ಟಿದೆ ಎಂದು ತಿಳಿದು ಬಂದಿತು. ಶ್ವಾಸಕೋಶದ ಕ್ಯಾನ್ಸರ್ ಮಾಯವಾಗಿತ್ತಾದರೂ, ಆಕಸ್ಮಾತ್ತಾಗಿ ಅದು ಯಕೃತ್ತಿಗೆ ಹರಡಿತ್ತು ಎಂದು ತಿಳಿದು ಬಂದಿತು. ಮನಸ್ಸಿನಲ್ಲಿ ತುಂಬಾ ತಳಮಳ ಉಂಟಾಯಿತು.

ಕೆಲ ದಿನಗಳ ಹಿಂದೆ ಸಂಜೆಗೆ ಮಿತ್ರನೊಬ್ಬ ಅವರು ತಮ್ಮ ಕೊನೆಯ ಗಳಿಗೆಯಲ್ಲಿದ್ದಾರೆ ಎಂಬ ಸಂದೇಶ ಕಳುಹಿಸಿದ. ಆತಂಕದಲ್ಲಿಯೇ ಇದ್ದ ನಮಗೆ ಕಳೆದ ರವಿವಾರ ಮುಂಜಾನೆ ಅವರ ಮರಣದ ಸುದ್ದಿ ತಿಳಿಯಿತು. ಸರಳ ಮನಸ್ಸಿನ ಮತ್ತು ಅಹಮಿಕೆಯ ಲವಲೇಶವೂ ಇಲ್ಲದ ಈ ಪ್ರತಿಭಾವಂತ ಮಹಿಳೆಯನ್ನು ಲವಲೇಶವೂ ಕರುಣೆಯಿಲ್ಲದೇ ವಿಧಿ ತನ್ನತ್ತ ಸೆಳೆದುಕೊಂಡಿತು. ಸರಳ ಮನಸ್ಸಿನ, ಸದ್ಗುಣಿ ಮತ್ತು ಉದಾರ ಭಾವದ ಮನುಷ್ಯರನ್ನು ಕಂಡರೆ ವಿಧಿಗೆ ಅದೇನು ಆಕರ್ಷಣೆಯೋ? ತುಂಬು ಸಂಸಾರವನ್ನು ಬಿಟ್ಟು ಬಹು ದೂರ ನಡೆದ ಅವರ ಇಬ್ಬರೂ ಪುಟ್ಟ ಮಕ್ಕಳ ಮುಖ ನನ್ನ ಕಣ್ಣೆದುರು ಸುಳಿದಾಡುತ್ತಿದೆ.

ಹೋಗಿ ಬನ್ನಿ ತಂಗಿ, ಕೇವಲ ಮೂರು ತಿಂಗಳು ಎಂದು ಹೇಳಿದ ಡಾಕ್ಟರ ಹೇಳಿಕೆಯನ್ನು ಮೀರಿ ಕಳೆದ ಎರಡು ವರ್ಷಗಳಿಂದ ನೀವು ನಡೆಸಿದ ಹೋರಾಟ ಅನೇಕರಿಗೆ ಮಾದರಿಯಾಗಲಿ. ನಿಮ್ಮ ತುಂಬು ಧೈರ್ಯ ಅನೇಕರಲ್ಲಿ ಸ್ಫೂರ್ತಿ ತುಂಬಲಿ. ದೇವರು ನಿಮ್ಮ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವನ ನೀಡಲಿ. "ನನ್ನ ಪಾಲಿನ ಇಬ್ಬರು ದೇವರು" ಎಂದು ನೀವು ಹೇಳಿದ ನಿಮ್ಮ ಅಮ್ಮ ಮತ್ತು ನಿಮ್ಮ ಪತಿಗೆ ನಿಮ್ಮ ಅಗಲಿಕೆಯನ್ನು ಸಹಿಸಲು ದೇವರು ಶಕ್ತಿ ನೀಡಲಿ. ನಿಮ್ಮ ಮಕ್ಕಳ ಬಗ್ಗೆ ಚಿಂತೆ ಬೇಡ. ನಿಮ್ಮ ಹೋರಾಟದ ಮನೋಭಾವ, ನಿಮ್ಮ ಧೈರ್ಯ ಮತ್ತು ನಿಮ್ಮ ಅಗಾಧವಾದ ಬುದ್ಧಿಮತ್ತೆ ಅವರಿಗೂ ಬಳುವಳಿಯಾಗಿ ದೇವರು ನೀಡಿರುತ್ತಾನೆ. ನಿಮ್ಮ ಕುಟುಂಬದವರ ಸಂರಕ್ಷಣೆಯಲ್ಲಿ ಬೆಳೆದು ಅವರು ನಿಮಗೆ ತಕ್ಕ ಹೆಸರು ತರುತ್ತಾರೆ. ಏಕಾದಶಿಯ ಪುಣ್ಯ ದಿವಸದಂದು ದೇವರು ನಿಮ್ಮನ್ನು ಕರೆಸಿಕೊಂಡಿದ್ದಾನೆ. ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ ಎಂದು ನಮ್ಮ ಪ್ರಾರ್ಥನೆ.
ಹರಿ ಓಂ. ಓಂ ಶಾಂತಿ. ಓಂ ಶಾಂತಿ.

English summary
God has some other plans, we ought to follow. Vasant Kulkarni from Singapore narrates the story of extremely talented women, who faught against Cancer and could not succeed. We are just puppets in the hands of almighty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X