ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷಾ ಕಲಹದ ನಡುವೆ ಸೊರಗುತ್ತಿರುವ ಬೆಳಗಾವಿ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನಾನು ಬೆಳಗಾವಿ ನಗರದಲ್ಲಿ ನನ್ನ ಬಾಲ್ಯ ಮತ್ತು ಹರೆಯದ ಮೊದಲಿನ ದಿನಗಳನ್ನು ಕಳೆದವನು. ಅಲ್ಲಿದ್ದು ಅಲ್ಲಿಯ ವಿಚಿತ್ರ ರಾಜಕೀಯವನ್ನು ಕಣ್ಣಾರೆ ಕಂಡವನು. ಅಲ್ಲಿನ ಕೆಲವು ಮರಾಠಿ ನೇತಾರರು ಮತ್ತು ಪತ್ರಿಕೆಗಳು ಕನ್ನಡವನ್ನು ತೀರ ನಿಕೃಷ್ಟವಾಗಿ ಕಂಡು ಕನ್ನಡಿಗರನ್ನು ವಿಧವಿಧವಾಗಿ ಹೀಯಾಳಿಸುವುದು ಸರ್ವೇ ಸಾಮಾನ್ಯವಾಗಿತ್ತು.

ಬ್ರಿಟಿಷರಿಗೆ ಭಾರತ ಕಳ್ಳರಿಗೆ ಕಂಡುಬಂದ ಖಜಾನೆ!ಬ್ರಿಟಿಷರಿಗೆ ಭಾರತ ಕಳ್ಳರಿಗೆ ಕಂಡುಬಂದ ಖಜಾನೆ!

ಬೆಳಗಾವಿಯ ಮೇಲಿನ ಕರ್ನಾಟಕದ ಆಡಳಿತವನ್ನು ಪರಾಡಳಿತ ಎಂದು ಘೋಷಿಸಿ ತಿಂಗಳಿಗೊಮ್ಮೆ ದೊಂಬಿ ಎಬ್ಬಿಸುತ್ತಿದ್ದರು. ತಮ್ಮದೇ ದೇಶದವರಾದ ಕನ್ನಡಿಗರನ್ನು ಅನ್ಯಲೋಕದ ಜೀವಿಗಳಂತೆ ಸಂಶಯದಿಂದ ಮತ್ತು ಅನೇಕ ಬಾರಿ ನಿಕೃಷ್ಟದಿಂದ ಕಾಣುತ್ತಿದ್ದರು. ಮರಾಠಿ ನೇತಾರರು ಕನ್ನಡ ಮತ್ತು ಕನ್ನಡಿಗರನ್ನು ಒಂದು ವಿಶಿಷ್ಟ ಪಡಿಯಚ್ಚಿನಲ್ಲಿ ಚಿತ್ರಿಸುತ್ತಿದ್ದರು. ಕನ್ನಡಿಗರು ಹಿಂದುಳಿದವರು, ಅವರ ಭಾಷೆ ಒರಟು ಎಂಬ ಅಪಪ್ರಚಾರ ನಡೆಸುತ್ತಿದ್ದರು. ಕರ್ನಾಟಕದ ಆಡಳಿತದಲ್ಲಿ ಮರಾಠಿಗರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ ಎಂಬೆಲ್ಲಾ ಹುಯಿಲು ಎಬ್ಬಿಸುತ್ತಿದ್ದರು.

Development of Belagavi is still distant dream

ಅದೇ ರೀತಿಯಾಗಿ ಕನ್ನಡ ಪರ ನೇತಾರರು ಮತ್ತು ಪತ್ರಿಕೆಗಳು ಮರಾಠಿಗರನ್ನು ಅದೇ ರೀತಿಯಾಗಿ ಪರಕೀಯರಾಗಿ ಕಂಡು ಅವರ ದಬ್ಬಾಳಿಕೆಯನ್ನು ವಿಧ ವಿಧವಾಗಿ ವಿರೋಧಿಸುತ್ತಿದ್ದರು. ಅವರ ಕನ್ನಡ ವಿರೋಧಿ ಚಟುವಟಿಕೆಗಳನ್ನು ಕುರಿತು ವ್ಯಂಗ್ಯವಾಡುತ್ತಿದ್ದರು. ಮರಾಠಿಗರೆಂದರೆ ದೊಂಬಿ ಎಬ್ಬಿಸುವ ಒರಟು ಜನ, ಗೂಂಡಾಗರ್ದಿ ನಡೆಸುವ ಹಿಂಸಾತ್ಮಕ ಜನ ಎಂಬ ಚಿತ್ರಣ ಎದ್ದು ಕಾಣುತ್ತಿತ್ತು.

ಎರಡೂ ಸಮುದಾಯಗಳು ನಗರದಲ್ಲಿ ಒಟ್ಟಿಗೆ ಕೂಡಿ ಇರುತ್ತಿದ್ದರೂ ಪರಸ್ಪರ ಅಪನಂಬಿಕೆ ಮತ್ತು ಅಗೌರವಗಳು ಎದ್ದು ಕಾಣುತ್ತಿದ್ದವು. ಎರಡೂ ಸಮುದಾಯಗಳ ಸಾಮಾನ್ಯ ಜನರಲ್ಲಿ ಅನೇಕ ವೈಯುಕ್ತಿಕ, ಸಾಮಾಜಿಕ ಮತ್ತು ಕೌಟುಂಬಿಕ ಸಂಬಂಧಗಳಿರುತ್ತಿದ್ದರೂ ರಾಜಕೀಯ ವರ್ಗಗಳ ಅಪಪ್ರಚಾರ ಜನಗಳ ಮನಸ್ಸಿನಲ್ಲಿ ಕಿಚ್ಚೆಬ್ಬಿಸಿ ಅನೇಕ ದಂಗೆಗಳಲ್ಲಿ ಪರ್ಯವಸಾನ ಹೊಂದಿ ಅವುಗಳಿಂದಾಗಿ ದುರ್ಘಟನೆಗಳು ಉಂಟಾಗುತ್ತಿದ್ದವು. ಎರಡೂ ಸಮುದಾಯಗಳ ಜನರಲ್ಲಿ ತಾವು ತಮ್ಮ ಭಾಷೆಯ ಅಭಿವೃದ್ಧಿ ಮತ್ತು ಉನ್ನತ ಸ್ಥಾನಕ್ಕೆ ಹೋರಾಟ ಮಾಡುತ್ತಿದ್ದೇವೆ ಎಂಬ ಹುಸಿ ಪ್ರಜ್ಞೆ ಮೂಡುತ್ತಿತ್ತು.

ಬದುಕಿನ ಬಗ್ಗೆ ಮತ್ತಷ್ಟು ಕನಸನ್ನು ಬಿತ್ತುವ ಕ್ರೆಮ್ಲಿನ್!ಬದುಕಿನ ಬಗ್ಗೆ ಮತ್ತಷ್ಟು ಕನಸನ್ನು ಬಿತ್ತುವ ಕ್ರೆಮ್ಲಿನ್!

ಅಸಲಿಗೆ ಈ ರಾಜಕೀಯ ಮತ್ತು ದೊಂಬಿಗಳ ಲಾಭವನ್ನು ರಾಜಕೀಯ ವರ್ಗ ಪಡೆದುಕೊಳ್ಳುತ್ತಿತ್ತು. ಅನೇಕ ರಾಜಕಾರಣಿಗಳಿಗೆ ನಮ್ಮ ಬೆಳಗಾವಿಯ ಈ ಜಗಳ ವರವಾಗಿತ್ತು. ಐದು ವರ್ಷಕ್ಕೊಮ್ಮೆ ಜನರ ಮನದಲ್ಲಿ ಈ ಪ್ರತ್ಯೇಕತೆಯ ಕಿಚ್ಚೆಬ್ಬಿಸಿ, ಇನ್ನೇನು ಬೆಳಗಾವಿ ಮಹಾರಾಷ್ಟ್ರವಾಗಿಯೇ ಬಿಡುತ್ತದೆ ಎಂಬ ಹುಸಿ ಆಸೆಯನ್ನು ಹುಟ್ಟಿಸಿ ಚುನಾವಣೆಯಲ್ಲಿ ಗೆದ್ದು ಬಿಟ್ಟರೆ ಮುಗಿಯಿತು. ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೆರಡು ಮೂರು ಬಾರಿ ನಗರದಲ್ಲಿ ದಂಗೆ ಎಬ್ಬಿಸಿ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿ, ಸಾರ್ವಜನಿಕರಿಗೆ ನಷ್ಟ ಉಂಟು ಮಾಡಿದರೆ ಅವರ ಕೆಲಸ ಮುಗಿದ ಹಾಗೆ.

ಅಲ್ಲಿಂದ ಮತ್ತೆ ಮುಂದಿನ ಚುನಾವಣೆಗೆ ಹಾದಿ! ಮತ್ತದೇ ಹಾಡು! ಮತ್ತದೇ ಧಾಟಿ! ಇದಕ್ಕೆಲ್ಲಾ ಹಲವಾರು ಮರಾಠಿ ಪತ್ರಿಕೆ ನಡೆಸುವವರ ಕುಮ್ಮಕ್ಕು ಬೇರೆ. ಒಟ್ಟಿನಲ್ಲಿ ಸಮಾಜದಲ್ಲಿ ಬಿರುಕು ಹುಟ್ಟಿಸಿ, ಭಾಷೆಗಳ ಮೇಲೆ ಜಗಳ ಎಬ್ಬಿಸಿ ತಮ್ಮ ತಮ್ಮ ಬೇಳೆಗಳನ್ನು ಬೇಯಿಸಿಕೊಳ್ಳುತ್ತಿದ್ದವರು ಕೆಲವರು. ತಾವು ತತ್ವಗಳಿಗೆ ಹೋರಾಡುತ್ತಿದ್ದೇವೆ ಎಂದು ಬಲವಾಗಿ ನಂಬಿದ ಮುಗ್ಧ ಜನ ಅನೇಕರು!

ಹೀಗಿದ್ದರೂ ನನ್ನ ಅನುಭವದ ಪ್ರಕಾರ, ಬೆಳಗಾವಿಯ ಸಾಮಾನ್ಯ ಜನರಲ್ಲಿ ಮೈತ್ರಿಯೇ ಪ್ರಧಾನವಾಗಿತ್ತು. ಅಪ್ಪಟ ಕನ್ನಡಿಗ ಮತ್ತು ಕನ್ನಡದ ಪರಮ ಅಭಿಮಾನಿಯಾದ ನನಗೆ ಅನೇಕ ಜನ ಮರಾಠಿ ಮಿತ್ರರು. ನನ್ನ ಅನೇಕ ಮಿತ್ರರ ಕುಟುಂಬಗಳು ಸಹಜವಾಗಿ ದ್ವಿಭಾಷಿಗಳು, ಎಂದರೆ ಅಪ್ಪ ಕನ್ನಡಿಗನಾದರೆ, ಅಮ್ಮ ಮರಾಠಿ ಇಲ್ಲವೇ ಅದರ ಪ್ರತಿಕ್ರಮ (Vice versa). ನಾವೆಲ್ಲಾ ಸೇರಿಕೊಂಡು ಅಭ್ಯಾಸ ಮಾಡುತ್ತಿದ್ದೆವು, ಸಿನೆಮಾಗಳನ್ನು ನೋಡುತ್ತಿದ್ದೆವು, ಕೀಟಲೆಗಳನ್ನು ಮಾಡುತ್ತಿದ್ದೆವು. ಒಟ್ಟಿನಲ್ಲಿ ಯುವಕರು ಮಾಡಬೇಕಾದ ಎಲ್ಲ ಬಗೆಯ ಚೆಲ್ಲಾಟಗಳನ್ನು ಮಾಡುತ್ತಿದ್ದೆವು.

ಆದರೆ ನವೆಂಬರ್ ಒಂದರಂದು ನಾನು ಅಪ್ಪಟ ಕನ್ನಡಿಗನಾಗಿ ರಾಜ್ಯೋತ್ಸವದಲ್ಲಿ ಭಕ್ತಿ ಪೂರ್ವಕವಾಗಿ ಭಾಗವಹಿಸಿದರೆ, ನನ್ನ ಅಪ್ಪಟ ಮರಾಠಿ ಮಿತ್ರರಿಗೆ ಅಂದು ಕಾಲಾ ದಿನ್! ಅನೇಕ ಬಾರಿ ಭಾವಾತಿರೇಕದಲ್ಲಿ ವಾದ ವಿವಾದಗಳನ್ನು ಮಾಡಿ, ಒಬ್ಬರಿಗೊಬ್ಬರು ಬೈದುಕೊಂಡು ಮನೆಗೆ ಹೋಗಿ ಮತ್ತೆ ಮರುದಿನ ಒಂದಾಗಿ ಶಾಲೆ ಕಾಲೇಜುಗಳಿಗೆ ಹೋದ ದಿನಗಳಿಗಂತೂ ಲೆಕ್ಕವಿಲ್ಲ! ನಮಗೆ ಕನ್ನಡಮ್ಮ ಮತ್ತು ನಾಡೋಜ ಪತ್ರಿಕೆಗಳು ಅಭಿಮಾನದ ಸಂಕೇತಗಳಾದರೆ, ಅವರಿಗೆ ತರುಣ್ ಭಾರತ್. ನಮ್ಮ ಭಾಷೆ ನಮ್ಮಲ್ಲಿ ಜಗಳ ಹುಟ್ಟಿಸಿದರೂ ನಮ್ಮ ಮೈತ್ರಿಯನ್ನು ಮುರಿಯಲಿಲ್ಲ. ಈಗಲೂ ನಾನು ಬೆಳಗಾವಿಗೆ ಹೋದರೆ ನನ್ನ ಮರಾಠಿ ಭಾಷಿಕ ಮಿತ್ರರ ಮನೆಗೆ ಹೋಗಿ ಊಟ ಮಾಡುತ್ತೇನೆ.

ನಾನು ನೋಡ ನೋಡುತ್ತಿದ್ದಂತೆಯೇ ಬೆಳಗಾವಿಯ ರಾಜಕೀಯದಲ್ಲಿ ಹಳೆಯ ತಲೆಮಾರುಗಳು ಹೋಗಿ ಹೊಸ ತಲೆಮಾರುಗಳು ಬಂದವು. ನನ್ನ ಜೊತೆಗಿನ ನನ್ನ ಅನೇಕ ಕನ್ನಡ ಮತ್ತು ಮರಾಠಿ ಗೆಳೆಯರು ಜೀವನದ ಸಂಗ್ರಾಮದಲ್ಲಿ ತೊಡಗಿ ಅವರಲ್ಲನೇಕರು ಬೆಂಗಳೂರು, ಮುಂಬಯಿ ಮತ್ತು ಪುಣೆಗಳಂತಹ ಊರುಗಳಿಗೆ ವಲಸೆ ಹೋದರು. ಹೊರಗಿನಿಂದ ಅನೇಕ ಜನ ಬಂದು ಬೆಳಗಾವಿಯಲ್ಲಿ ನೆಲೆಯೂರಿದರು. ಆದರೂ ಹೊಸ ಹೊಸ ರಾಜಕೀಯ ಜನ ಸೇರಿ ಹೊಸ ಹೊಸ ಹುಯಿಲೆಬ್ಬಿಸಿ ಆಗಾಗ್ಗೆ ತಮಾಷೆ ನೋಡುವ ಪ್ರಕ್ರಿಯೆ ಇನ್ನೂ ನಡೆಯುತ್ತಲೇ ಇದೆ.

ಈ ಅಲ್ಲೋಲ ಕಲ್ಲೋಲದಲ್ಲಿ ತಮ್ಮ ನಗರ ಪ್ರಗತಿಯತ್ತ ಸಾಗುತ್ತಿದೆಯೋ ಇಲ್ಲವೋ ಎಂದು ವಿಚಾರಿಸುವಷ್ಟು ಕೂಡ ಯೋಚಿಸದ ಮನೋಸ್ಥಿತಿಯನ್ನು ಹೊಂದಿದ ಜನ, ಅನೇಕ ವರ್ಷಗಳ ಕಾಲ ಮೋಸ ಹೋಗುತ್ತಿದ್ದರು. ಸ್ವಾತಂತ್ರ್ಯಾನಂತರ ನಡೆದ ಚುನಾವಣೆಗಳಲ್ಲಿ ಬೆಳಗಾವಿ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಆರಿಸಲ್ಪಟ್ಟ ರಾಜಕಾರಣಿಗಳು ಈ ಪ್ರದೇಶಕ್ಕೆ ಏನು ಕಾಣಿಕೆ ನೀಡಿದರು ಎಂಬುದನ್ನು ಹಾಡ ಹಗಲಿನಲ್ಲಿ ಸರ್ಚ್ ಲೈಟ್ ಹಾಕಿ ಹುಡುಕಿದರೂ ಗೊತ್ತಾಗುವುದಿಲ್ಲ.

ಬೆಳಗಾವಿ ಸಮುದ್ರ ಮಟ್ಟದಿಂದ ಸುಮಾರು ಎಂಟುನೂರು ಮೀಟರ್ ಎತ್ತರಕ್ಕಿರುವ ಮತ್ತು ಸಹ್ಯಾದ್ರಿ ಪರ್ವತ ಶ್ರೇಣಿಗಳಿಗೆ ಹತ್ತಿರವಿರುವ ಸುಂದರ ಹಸಿರು ಪ್ರದೇಶ. ಮಲೆನಾಡಿನ ಸೆರಗು! ಆಹ್ಲಾದಕರ ಹವಾಮಾನ, ಉತ್ತಮ ನೀರು ಮತ್ತು ಕುಶಲ ಕೆಲಸಗಾರರಿಗೆ ಮೊದಲಿನಿಂದಲೂ ಹೆಸರಾದ ಊರು. ಕೋಯಿಮತ್ತೂರು ಬಿಟ್ಟರೆ ಫೌಂಡ್ರಿ ಉದ್ಯೋಗಕ್ಕೆ ದಕ್ಷಿಣ ಭಾರತದಲ್ಲಿ ಬೆಳಗಾವಿಯದೇ ಪ್ರಥಮ ಸ್ಥಾನ. ಬೆಳಗಾವಿ Hydraulics ಕೈಗಾರಿಕೆಗೂ ಹೆಸರಾದ ನಗರ. ಪುಣೆಯ ಅನೇಕ ವಾಹನ ಉದ್ಯೋಗಗಳಿಗೆ ಕಚ್ಚಾ ವಸ್ತುಗಳನ್ನು ಮೊದಲಿನಿಂದಲೂ ಒದಗಿಸುತ್ತ ಬಂದಿದೆ. ಇಂತಹ ವಾತಾವರಣವಿರುವ ಈ ನಗರ ಅದ್ಯಾವಾಗಲೋ ಕರ್ನಾಟಕದ ಎರಡನೇ ಅತಿ ದೊಡ್ಡ ಕೈಗಾರಿಕಾ ನಗರವಾಗಿ ಬೆಳೆಯ ಬೇಕಾಗಿತ್ತು. ಆದರೆ ನಮ್ಮ ರಾಜ್ಯದ ನೇತಾರರು ಮತ್ತು ಸ್ಥಳೀಯ ರಾಜಕಾರಣಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ತನ್ನ ಗಡಿ ವಿವಾದದಿಂದಾಗಿ ಈ ನಗರ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆಯಲೇ ಇಲ್ಲ.

ಕೆಲವು ವರ್ಷಗಳ ಹಿಂದೆ ಎರಡನೇ ರಾಜಧಾನಿ ಎಂದು ಘೋಷಿಸಿ ವಿಧಾನಸೌಧದ ಪ್ರತಿಕೃತಿಯೊಂದನ್ನು ನಿರ್ಮಿಸಿದರೂ ಮೂಲಭೂತ ಸೌಲಭ್ಯಗಳ ಬೆಳವಣಿಗೆ ಮತ್ತು ಸರಿಯಾದ ಮಾರ್ಕೆಟಿಂಗ್ ಇಲ್ಲದೇ ಈ ನಗರಕ್ಕೆ ದೊಡ್ಡ ಬಂಡವಾಳ ಹೂಡಿಕೆ ಬರಲೇ ಇಲ್ಲ. ಆದರೆ ಅದೃಷ್ಟಾವಶಾತ್ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಘೋಷಿಸಿದ Smart City ಯೋಜನೆಯ ಪ್ರಥಮ ಪಟ್ಟಿಯಲ್ಲಿ ಸ್ಥಾನ ಪಡೆದ ಇಪ್ಪತ್ತು ನಗರಗಳಲ್ಲಿ ನನ್ನೂರಾದ ಬೆಳಗಾವಿ ಸ್ಥಾನ ಪಡೆದದ್ದು ನಮ್ಮಂತಹ ಅಪ್ಪಟ ಬೆಳಗಾವಿಗರಿಗೆ ಸಮಾಧಾನ ನೀಡಿದೆ.

ತಡವಾಗಿಯಾದರೂ ಸರಿ, ಬೆಳಗಾವಿಗೆ ರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆ ದೊರೆತದ್ದು ಸಂತೋಷದ ವಿಷಯ. ಇನ್ನು ಮುಂದೆಯಾದರೂ ಈ ಪ್ರದೇಶ ಪ್ರಗತಿ ಪಥದತ್ತ ನಡೆದು ಈ ಭಾಗದ ಆರ್ಥಿಕ ಪರಿಸ್ಥಿತಿ ಉತ್ತಮ ಮಟ್ಟವನ್ನು ಪಡೆಯುತ್ತದೆ ಎಂಬ ಭರವಸೆ ಮೂಡಿದೆ. Smart City ಯೋಜನೆ ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಯಂತೆ ಒಡೆಯಲಾಗದ ಕಗ್ಗಲ್ಲುಗಳನ್ನು ಎದುರಿಸದೆ ಸಮರ್ಥವಾಗಿ ಅನುಷ್ಠಾನಗೊಳ್ಳಲಿ ಎಂಬುದು ಬೆಳಗಾವಿಯ ಜನರ ಮಹದಾಸೆ.

English summary
Belagavi, the city in North Karnataka dominated by Marathi speaking people, where Kannada and Kannadigas are given second preferance, is still far away from developments. Vasant Kulkarni dreams of a Belagavi without any language clashes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X