ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕೇಶ್ವರದ ದಿನಗಳು 12 : ವೈಚಾರಿಕತೆಯನ್ನು ಬಡಿದೆಬ್ಬಿಸಿದ ಶಾಲಾ ನಾಟಕ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ನಾನು ಐದನೆಯ ತರಗತಿಯಲ್ಲಿದ್ದಾಗ ಒಂದು ಮಹತ್ವದ ನಾಟಕವನ್ನು ನೋಡಿದೆ. ಈ ನಾಟಕದಲ್ಲಿ ಮುಖ್ಯ ಪಾತ್ರ ಒಬ್ಬ ಹಳ್ಳಿಯ ಹೆಣ್ಣು ಮಗಳದ್ದು. ಅವಳು ಮದುವೆಯಾಗಿ ಅತ್ತೆಯ ಮನೆಗೆ ಬಂದಿರುತ್ತಾಳೆ. ಅಲ್ಲಿ ಅವಳಿಗೆ ಅತ್ತೆ ಮಾವಂದಿರಾದಿಯಾಗಿ ಎಲ್ಲರೂ ಬಹಳ ತೊಂದರೆ ಕೊಡುತ್ತಿರುತ್ತಾರೆ. ಅಂತಹ ಸಮಯದಲ್ಲಿ ಅವಳನ್ನು ಭೂತವೊಂದು ಹಿಡಿದುಕೊಳ್ಳುತ್ತದೆ. ಅತ್ತೆ ಮಾವಂದಿರು ಭೂತವನ್ನು ಓಡಿಸಲು ಮಂತ್ರವಾದಿಯೊಬ್ಬನನ್ನು ಕರೆಸುತ್ತಾರೆ. ಅವನು ತಲೆಬುರುಡೆಯೊಂದಕ್ಕೆ ಅರಿಷಿಣ ಕುಂಕುಮ ಹಚ್ಚಿ ಭಯಂಕರವಾದ ಪೂಜೆಯೊಂದನ್ನು ಮಾಡಿ ಹೆಣ್ಣು ಮಗಳಿಗೆ ಬಾರುಕೋಲಿನಿಂದ ಚಚ್ಚಿ, ಅವಳ ಮುಖದ ಮೇಲೆ ನೀರು ಉಗ್ಗಿ ಅವಳಲ್ಲಿರುವ ದೆವ್ವವನ್ನು ಓಡಿಸಲು ಪ್ರಯತ್ನಿಸುತ್ತಾನೆ.

ಹೈರಾಣಾದ ಹೆಣ್ಣು ಮಗಳು ಭೀಕರವಾಗಿ ಕೂಗುತ್ತ ಪ್ರಜ್ಞೆ ತಪ್ಪಿ ಬೀಳುವಷ್ಟರಲ್ಲಿ ಅವಳ ಮೈದುನ ಊರಿಗೆ ಬರುತ್ತಾನೆ. ಒಳ್ಳೆಯ ಶಿಕ್ಷಣ ಪಡೆದ ಅವನು ವಿಚಾರವಾದಿಯಾಗಿರುತ್ತಾನೆ. ಅವನು ಮಂತ್ರವಾದಿಗೆ ಸವಾಲು ಎಸೆಯುತ್ತಾನೆ ಮತ್ತು ತನ್ನ ತರ್ಕದಿಂದ ಮಂತ್ರವಾದಿಯನ್ನು ಸೋಲಿಸಿ ಓಡಿಸುತ್ತಾನೆ. ತನ್ನ ತಂದೆ ತಾಯಿಗೆ ಬುದ್ಧಿ ಹೇಳಿ ಅತ್ತಿಗೆಯನ್ನು ಮಾನಸಿಕ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗುತ್ತಾನೆ. ಅತ್ತೆ ಮಾವಂದಿರಿಂದ ಹಿಂಸೆಗೊಳಗಾದ ಅವಳಿಗೆ ತೀವ್ರ ಮಾನಸಿಕ ಅಸ್ವಸ್ಥತೆ ಉಂಟಾಗಿರುವುದು ತಿಳಿದುಬರುತ್ತದೆ. ತಮ್ಮ ಕುಕೃತ್ಯದಿಂದ ನಾಚಿ ತಮ್ಮ ಸೊಸೆಗೆ ಒಳ್ಳೆಯ ಔಷಧಿ ಕೊಡಿಸುವುದಲ್ಲದೇ ಅವಳನ್ನು ಚೆನ್ನಾಗಿ ನೋಡಿಕೊಳ್ಳುವೆವು ಎಂದು ಅವಳ ಅತ್ತೆ ಮಾವಂದಿರು ವಾಗ್ದಾನ ಮಾಡುತ್ತಾರೆ.

ಸಂಕೇಶ್ವರದ ದಿನಗಳು 10 : ಹೆಂಗಿದ್ದ ಜನಾರ್ಧನ ಹೆಂಗಾದ?ಸಂಕೇಶ್ವರದ ದಿನಗಳು 10 : ಹೆಂಗಿದ್ದ ಜನಾರ್ಧನ ಹೆಂಗಾದ?

ಮೂವತ್ತೈದು ವರ್ಷಗಳ ಹಿಂದೆ ಅತ್ಯಂತ ಸಮಯೋಚಿತವಾದ ಈ ನಾಟಕ ನನ್ನ ಮೇಲೆ ಗಾಢ ಪ್ರಭಾವ ಬೀರಿತು. ನಿಜವಾಗಿಯೂ ದೆವ್ವ ಭೂತಗಳಿರುವದು ಸಾಧ್ಯವೇ? ಅಥವಾ ಈ ನಾಟಕ ಹೇಳಿದಂತೆ ಅದು ಮೂಢ ನಂಬಿಕೆಯೇ? ಎಂಬ ವಿಚಾರ ನನ್ನನ್ನು ಕಾಡತೊಡಗಿತು. ನನ್ನ ಅಜ್ಜಿಯಿಂದ ಸಾಕಷ್ಟು ನಿಜವಾದ (?) ದೆವ್ವಗಳ ಕಥೆಯನ್ನು ನಾನು ಕೇಳಿದ್ದೆ. ಅಲ್ಲದೇ ಕೆಲವು ದೆವ್ವ ಹಿಡಿದುಕೊಂಡ ಜನರನ್ನು ಸ್ವತಃ ನೋಡಿದ್ದೆ. ಆದುದರಿಂದ ದೆವ್ವಗಳ ಇರುವಿಕೆ ನಿಜವಾಗಿಯೇ ಇರಬಹುದು ಎಂದು ತಿಳಿದುಕೊಂಡಿದ್ದೆ. ಆದರೆ ಈ ನಾಟಕ ನೋಡಿದ ಮೇಲೆ ನನ್ನ ವೈಚಾರಿಕ ದೃಷ್ಟಿ ಬದಲಾಯಿತು.

 Cultural activities were stepping stone in Sankeshwar school

ಅಂದಹಾಗೆ ಈ ನಾಟಕ ನಡೆದದ್ದು ನಾನು ಓದುತ್ತಿದ್ದ ಎಸ್ ಡಿ ಹೈಸ್ಕೂಲಿನ ವಾರ್ಷಿಕೋತ್ಸವದ ದಿನ. ಗಂಭೀರ ಸಂದೇಶವುಳ್ಳ ಆ ನಾಟಕವನ್ನು ಬರೆದು ನಿರ್ದೇಶಿಸಿದವರು ನಮ್ಮ ಹೈಸ್ಕೂಲಿನ ಮಾಧ್ಯಮಿಕ ತರಗತಿಗಳಿಗೆ ವಿಜ್ಞಾನ ವಿಷಯವನ್ನು ಬೋಧಿಸುವ ಶಿವಣ್ಣಗೋಳ್ ಸರ್ ಅವರು. ತುಂಬಾ ಖಡಕ್ ಎನಿಸಿಕೊಂಡ ಅವರದು ಒಂದು ವಿಶಿಷ್ಟ ವ್ಯಕ್ತಿತ್ವ. ಸಂಕೇಶ್ವರದಂತಹ ಹಳ್ಳಿಗಾಡು ಪ್ರದೇಶದಲ್ಲಿ ವಾಸವಾಗಿದ್ದರೂ ಅವರೊಬ್ಬ ದೊಡ್ಡ ರ್‍ಯಾಷನಲಿಸ್ಟ್‌. ಅವರಿಗೆ ದೇವರು ಮತ್ತು ದೆವ್ವಗಳಲ್ಲಿ ಸ್ವಲ್ಪವೂ ನಂಬಿಕೆ ಇರಲಿಲ್ಲ. ಅದರಲ್ಲೂ ದೆವ್ವದ ಮೇಲಿನ ಮೂಢ ನಂಬಿಕೆಗಳನ್ನು ತುಂಬಾ ಹೀಯಾಳಿಸುತ್ತಿದ್ದರು.

ಏಳನೆಯ ತರಗತಿ ಮುಗಿದು ಎಂಟನೆಯ ತರಗತಿಗೆ ಹೋಗುವ ಎಲ್ಲ ಹುಡುಗರ ಮೊದಲನೇ ವಿಜ್ಞಾನ ತರಗತಿಯಲ್ಲಿ ಶಿವಣ್ಣಗೋಳ್ ಗುರುಗಳಿಂದ ದೆವ್ವ, ಮಾಟ ಇತ್ಯಾದಿ ಮೂಢ ನಂಬಿಕೆಗಳ ಬಗ್ಗೆ ಒಂದು ಲೆಕ್ಚರ್ ಕಾಯಂ ಆಗಿ ಇರುತ್ತಿತ್ತು. ಈ ಲೆಕ್ಚರ್ ತುಂಬಾ ಪ್ರಸಿದ್ಧವಾಗಿತ್ತು. ಎಲ್ಲ ಹುಡುಗರಿಗೂ ಈ ಒಂದು ಲೆಕ್ಚರ್ ಬಗ್ಗೆ ಮಾಹಿತಿ ಮೊದಲೇ ಇರುತ್ತಿತ್ತು ಮತ್ತು ಎಲ್ಲರೂ ಅದಕ್ಕಾಗಿ ತುಂಬಾ ಕಾದಿರುತ್ತಿದ್ದರು. ಶಿವಣ್ಣಗೋಳ್ ಸರ್ ಹುಡುಗರನ್ನೂ ಎಂದೂ ನಿರಾಶೆಗೊಳಿಸುತ್ತಿರಲಿಲ್ಲ. ನವಿರಾದ ಹಾಸ್ಯದಿಂದ ಕೂಡಿದ ಅವರ ಈ ಲೆಕ್ಚರ್ ಅಷ್ಟೇ ಪರಿಣಾಮಕಾರಿಯಾಗಿ ಇರುತ್ತಿತ್ತು.

ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು! ಹಳ್ಳಿ ಸೊಗಡಿನ ಸಂಕೇಶ್ವರದ ಕನ್ನಡ ಭಾಷೆಯ ಸೊಬಗು!

ಎಲ್ಲ ಹುಡುಗರಲ್ಲೂ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸಲು ಅವರು ಪ್ರಯತ್ನ ಪಡುತ್ತಿದ್ದುದು ಸ್ಪಷ್ಟವಾಗಿತ್ತು. ನನಗನಿಸುವ ಮಟ್ಟಿಗೆ ಈ ದಿಶೆಯಲ್ಲಿ ಅವರು ಸಾಕಷ್ಟು ಯಶಸ್ವಿಯಾಗಿದ್ದರು ಕೂಡ. ನಾನೂ ಕೂಡ ಅವರ ಮಾರ್ಗದರ್ಶನದಲ್ಲಿ ರ್‍ಯಾಷನಲಿಸ್ಟ್‌ ಆಗಲು ಹೋಗಿ ದೇವರು ದೆವ್ವಗಳ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿ ಮನೆಯವರಿಂದ ಸಾಕಷ್ಟು ಬೈಯಿಸಿಕೊಂಡಿದ್ದೆ. ಈಗ ನಾನು ದೃಢವಾದ ರ್‍ಯಾಷನಲಿಸ್ಟ್‌ ಅಲ್ಲದಿದ್ದರೂ ಇಂದಿಗೂ ನನ್ನಲ್ಲಿ ಜಾಗೃತವಾಗಿರುವ ಜಿಜ್ಞಾಸು ಸ್ವಭಾವಕ್ಕೆ ಶಿವಣ್ಣಗೋಳ್ ಸರ್ ಅವರೇ ಪ್ರಥಮ ಪ್ರೇರಣೆ ಎಂದು ನನ್ನ ಅಭಿಪ್ರಾಯ.

 Cultural activities were stepping stone in Sankeshwar school

ಶಿವಣ್ಣಗೋಳ್ ಸರ್ ಅವರ ನಾಟಕ ನೋಡಿದ ಸಂದರ್ಭದಲ್ಲಿಯೇ ನನಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಅಭಿರುಚಿ ಬೆಳೆಯತೊಡಗಿತ್ತು. ಶಾಲೆಯ ಕಾರ್ಯಕ್ರಮದಲ್ಲಿ ಹಾಡುವುದು, ಭಾಷಣ ಮಾಡುವುದು ಮತ್ತು ನಾಟಕ ಮಾಡುವ ತೀವ್ರ ಇಚ್ಛೆಯುಂಟಾಗಿತ್ತು. ನಮ್ಮ ಎಸ್ ಡಿ ಹೈಸ್ಕೂಲಿನಲ್ಲಿ ಪ್ರತಿ ವರ್ಷ ವಾರ್ಷಿಕೋತ್ಸವ ಇರುತ್ತಿತ್ತು. ಈ ವಾರ್ಷಿಕೋತ್ಸವದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಪಠ್ಯೇತರ ಪ್ರತಿಭೆಯನ್ನು ತೋರಿಸಲು ಅವಕಾಶ ಇರುತ್ತಿತ್ತು.

ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಂಕೇಶ್ವರದ ಆ ದಿನಗಳುನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದ ಸಂಕೇಶ್ವರದ ಆ ದಿನಗಳು

ಹೈಸ್ಕೂಲಿನಲ್ಲಿಯ ನನ್ನ ಮೊದಲ ವರ್ಷವೇ ನನಗೆ ವಾರ್ಷಿಕೋತ್ಸವದಲ್ಲಿ ಏನಾದರೂ ಮಾಡುವ ಉಮೇದು ಬಂದಿತ್ತು. ಅದೇ ಸಮಯದಲ್ಲಿ ನಮ್ಮ ಸ್ಕೂಲಿನ ಟೀಚರುಗಳು ಹುಡುಗಿಯರಿಂದ ನೃತ್ಯ ಮಾಡಿಸಲು ಒಂದು ಒಳ್ಳೆಯ ಹಾಡಿಗಾಗಿ ಹುಡುಕುತ್ತಿದ್ದರು. ಆ ವೇಳೆಗೆ ಸ್ಕೂಲಿನಲ್ಲಿ ಹಾಡಿಗಾಗಿ ನಾನು ಸ್ವಲ್ಪ ಹೆಸರು ಮಾಡಿದ್ದೆ. ಟೀಚರುಗಳು ನನ್ನನ್ನು ಒಳ್ಳೆಯ ಹಾಡೊಂದನ್ನು ಹುಡುಕಲು ಹೇಳಿದರು. ನನಗೆ ನೆನಪಾದ ಮೊಟ್ಟ ಮೊದಲ ಹಾಡು ಶಂಕರಾ ರಾಗದ "ಕುಣಿಯುತ ನಲಿಯುತ ಬಾ, ಶಂಕರಾ" ಎಂಬ ಹಾಡು. ನಾನು ನಮ್ಮ ಟೀಚರುಗಳಿಗೆ ಹಾಡಿ ತೋರಿಸಿದೆ. ಹುರುಪು ತುಂಬುವ ಈ ನಾದಮಯ ದಾಸರ ಪದವನ್ನು ಕೇಳಿ ಅವರಿಗೆ ಬಹಳ ಖುಶಿಯಾಗಿ ಬಿಟ್ಟಿತು. ಟೀಚರುಗಳು ಸೇರಿ ಆ ಹಾಡಿಗೆ ಅನುಗುಣವಾದ ನೃತ್ಯವನ್ನು ಸಂಯೋಜಿಸಿ ನನ್ನ ಕ್ಲಾಸಿನ ಇಬ್ಬರು ಹುಡುಗಿಯರಿಗೆ ಕಲಿಸಿದರು. ಹಾಡನ್ನು ನನಗೇ ಹಾಡಲು ಹೇಳಿದರು.

ಹುಡುಗಿಯರು ಮಾಡುವ ನೃತ್ಯಕ್ಕೆ ಹುಡುಗನಾದ ನಾನು ಹಾಡುವುದು ನನ್ನ ಕ್ಲಾಸಿನ ಇತರ ಹುಡುಗರಿಗೆ ಒಂದು ದೊಡ್ಡ ಮೋಜಿನ ಸುದ್ದಿಯಾಯಿತು. ನಮ್ಮದು ಕೋ ಎಜ್ಯುಕೇಶನ್ ಸ್ಕೂಲಾಗಿದ್ದರೂ ಅದೇಕೋ ಹುಡುಗರು ಮತ್ತು ಹುಡುಗಿಯರು ಪರಸ್ಪರ ಮಾತನಾಡುತ್ತಿರಲಿಲ್ಲ. ವಿಜಾಪುರದ ಕನ್ನಡ ಶಾಲೆಯಲ್ಲಿ ಹುಡುಗ ಹುಡುಗಿಯರು ಮಾತನಾಡುತ್ತಿದ್ದೆವು. ಇಲ್ಲಿ ಹಾಗೆ ಮಾತನಾಡದಿರುವದು ನನಗೆ ಆಶ್ಚರ್ಯದ ವಿಷಯವಾಗಿತ್ತು. ಹಳ್ಳಿಯ ವಾತಾವರಣವಿರುವುದರಿಂದ ಹಾಗಿತ್ತೇನೋ?

ಹರಗಾಪುರ ಹಳ್ಳಿ ಸಹಪಾಠಿಗಳಾದ ಕಾಂಬಳ್ಯಾ ಕಣಕಣ್ಯಾ ಲೋಹ್ಯಾಹರಗಾಪುರ ಹಳ್ಳಿ ಸಹಪಾಠಿಗಳಾದ ಕಾಂಬಳ್ಯಾ ಕಣಕಣ್ಯಾ ಲೋಹ್ಯಾ

ಅಂತಹ ಸಂದರ್ಭದಲ್ಲಿ ಹುಡುಗಿಯರ ನೃತ್ಯಕ್ಕೆ ನಾನು ಹಾಡುವ ವಿಷಯ ಇತ್ತ ತರುಣರೂ ಅಲ್ಲದ ಅತ್ತ ಬಾಲಕರೂ ಅಲ್ಲದ ಕಿಶೋರಾವಸ್ಥೆಯ ನನ್ನ ಕ್ಲಾಸಿನ ಹುಡುಗರಿಗೆ ಒಂದು ಗಾಸಿಪ್ಪಿನ ವಿಷಯವಾಗಿ ಮಾರ್ಪಟ್ಟಿತ್ತು. ಆದರೆ ಕ್ಲಾಸಿನ ಟಾಪರ್ ಗಳಲ್ಲಿ ಒಬ್ಬನಾದ ನನ್ನನ್ನು ಅಷ್ಟೊಂದು ಕೆಣಕುವ ಧೈರ್ಯ ಬಹಳ ಸಹಪಾಠಿಗಳಿಗಿರಲಿಲ್ಲ. ಆದರೂ ಕೆಲವರು ಈ ವಿಷಯವಾಗಿ ನನ್ನನ್ನು ಅಣಕಿಸಿದ್ದರು. ಹಾಡುವ ಹುರುಪಿನಲ್ಲಿ ನಾನು ಅವರನ್ನು ನಿರ್ಲಕ್ಷ ಮಾಡಿದ್ದೆ.

ಅದೇ ಸಮಯದಲ್ಲಿ ನಾನು ಕ್ಲಾಸಿನ ಕೆಲವು ಹುಡುಗರನ್ನು ಕಲೆ ಹಾಕಿ ನಾಟಕವನ್ನು ಮಾಡೋಣ ಎಂದು ಆರಂಭಿಸಿದ್ದೆ. ಮನೆಯಲ್ಲಿದ್ದ ನಾಟಕದ ಪುಸ್ತಕವನ್ನು (ಸಂದರ್ಶನ ಎಂಬ ನಗೆ ನಾಟಕ, ಅದನ್ನು ಬರೆದವರಾರು ಎಂಬುದು ನನಗೆ ನೆನಪಿಲ್ಲ) ಓದಿದ್ದೆ. ಆ ಅನುಭವದ ಆಧಾರದ ಮೇಲೆ ಚಿಕ್ಕದೊಂದು ಪ್ರಹಸನ ಬರೆದೆ. ಈ ಪ್ರಹಸನದಲ್ಲಿ ನಾಲ್ವರು ಹುಡುಗರು ತಮ್ಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಏನು ಮಾಡಬೇಕು ಎಂಬುದರ ಬಗ್ಗೆ ನಾನಾ ತರಹದ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಆದರೆ ಕೊನೆಗೆ ಅವರು ಜಾಣ ವಿದ್ಯಾರ್ಥಿಯೊಬ್ಬನಿಂದ ಸಹಾಯ ಪಡೆದು ಪಾಸಾಗಲು ಯಶಸ್ವಿಯಾಗುತ್ತಾರೆ.

ನಾನು ಬರೆದುದ್ದನ್ನು ನಾಟಕ ಎಂದೇ ತಿಳಿದಿದ್ದೆ. ಆದರೆ ನನ್ನ ತಂದೆ ಅದನ್ನು ಓದಿ ನಕ್ಕು ಅದೊಂದು ಪ್ರಹಸನ ಅಷ್ಟೇ ಎಂದರು. ಏನೇ ಆಗಲಿ ಅದನ್ನು ಮಟ್ಟಿಕಲ್ಲಿ ಟೀಚರಿಗೆ ತೋರಿಸಿದಾಗ ಅವರು ಖುಶಿ ಪಟ್ಟು "ಆಯ್ತು, ಚೆನ್ನಾಗಿದೆ ಮಾಡಿ" ಎಂದರು. ಅಲ್ಲಿಂದ ಮುಂದೆ ನಾವು ಅನೇಕ ಬಾರಿ ನಾಟಕದ ಅಭ್ಯಾಸ ಮಾಡಿದ್ದೇ ಮಾಡಿದ್ದು. ನಾವು ಮಾಡುತ್ತಿದ್ದುದು ಸಾಕಷ್ಟು ಚೆನ್ನಾಗಿದೆ ಎಂದೆನಿಸಿದಾಗ ನಮ್ಮ ಕ್ಲಾಸಿನಲ್ಲಿ ಒಂದೆರಡು ಬಾರಿ ಮಾಡಿ ತೋರಿಸಿದೆವು. ಮಟ್ಟಿಕಲ್ಲಿ ಟೀಚರು ಮತ್ತು ಕ್ಲಾಸಿನ ಹುಡುಗರಿಂದ ಒಳ್ಳೆಯ ಪ್ರತಿಕ್ರಿಯೆ ದೊರಕಿತು.

ವಾರ್ಷಿಕೋತ್ಸವ ದಿನ ಕೆಲವೇ ದಿನಗಳಿರುವಾಗ ಪ್ರಹಸನದ ಡೈರೆಕ್ಟರ್ ಆದ ನನಗೆ ಅದೇನು ಕೆಟ್ಟ ಬುದ್ಧಿ ಬಂದಿತೋ, ನನ್ನ ನಾಟಕದ ಟೀಮಿನ ಗೆಳೆಯನೊಬ್ಬನ ಅಭಿನಯವನ್ನು ಕುರಿತು ಸ್ವಲ್ಪ ಕಟು ವಿಮರ್ಶೆ ಮಾಡಿದೆ. ಹೀಗಾಗಿ ಅವಮಾನಿತನಾದ ಆತ ತಾನು ಪ್ರಹಸನದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿಬಿಟ್ಟ. ಅಲ್ಲದೇ ಪಟ್ಟು ಹಿಡಿದು ನಾವೆಲ್ಲಾ ಕೂಡಿ ಅದೆಷ್ಟು ಕೇಳಿಕೊಂಡರೂ ಆತ ಒಪ್ಪಲೇ ಇಲ್ಲ. ಹೀಗಾಗಿ ನಮ್ಮ ಪ್ರಹಸನ ಕ್ಯಾನ್ಸಲ್ ಆಗಿಬಿಟ್ಟಿತು. ಅಲ್ಲದೇ ನಮ್ಮ ಟೀಚರುಗಳಿಗೆ ಅದೇನೆನ್ನಿಸಿತೋ, ನೃತ್ಯದ ಹಾಡಿಗಾಗಿ ನನ್ನ ಜೊತೆ ಮತ್ತೊಬ್ಬ ಟೀಚರ್ ಅವರನ್ನು ಸೇರಿಸಿಬಿಟ್ಟರು. ವಾರ್ಷಿಕೋತ್ಸವದ ದಿನ ನನ್ನ ಧ್ವನಿಗಿಂತ ಟೀಚರ್ ಅವರ ಧ್ವನಿ ಜೋರಾಗಿ ಕೇಳಿಸಿ ನೃತ್ಯಕ್ಕಾಗಿ ನಾನು ಹಾಡಿದ್ದು ಸಭಿಕರಿಗೆ ತಿಳಿಯಲೇ ಇಲ್ಲ. ಹೀಗಾಗಿ ನನಗೆ ನಿರಾಶೆಯಾಯಿತು.

ಮುಂದಿನ ಎರಡು ವರ್ಷಗಳಲ್ಲಿ ನಾನು ಕೆಲವು ನಾಟಕಗಳನ್ನು ಮಾಡಿದೆನಾದರೂ ಅದೇಕೋ ನನ್ನ ಪ್ರಪ್ರಥಮ ಪ್ರಯತ್ನದಲ್ಲಿಯ ಹೀಗೆ ವಿಫಲವಾಗಿದ್ದು ಸ್ವಲ್ಪ ಕಹಿ ಮೂಡಿಸಿತ್ತು. ಅದೇನೆ ಇರಲಿ. ಸಂಕೇಶ್ವರದ ನನ್ನ ಶಾಲೆಯ ವೇದಿಕೆ ನನ್ನ ಸಾಂಸ್ಕೃತಿಕ ಚಟುವಟಿಕೆಗಳ ಮೊದಲ ಮೆಟ್ಟಿಲಾಗಿತ್ತು. ಇಂದಿನ ನನ್ನನ್ನು ರೂಪಿಸುವುದರಲ್ಲಿ ಅಂದಿನ ಸಾಂಸ್ಕೃತಿಕ ಚಟುವಟಿಕೆಗಳ ಪಾತ್ರ ಬಹಳ ದೊಡ್ದದು ಎಂದು ನನಗನಿಸುತ್ತದೆ.

English summary
Social and cultural activities in school in Sankeshwar were the stepping stones of my career, writes Vasant Kulkarni from Singapore in his Kannada column.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X