ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ : ಸಿಂಗಪುರದಲ್ಲಿ ಕ್ಯಾಟ್ ಕೆಫೆ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಹಳೆಯ ವರ್ಷವೊಂದನ್ನು ಅದರ ಸಿಹಿ ಕಹಿ ನೆನಪುಗಳೊಂದಿಗೆ ಬೀಳ್ಕೊಟ್ಟು ಹೊಸ ವರುಷದ ಹೊಸ್ತಿಲಲ್ಲಿ ಮತ್ತೆ ಹರುಷದಿಂದ ಕಾಲಿಡುತ್ತಿದ್ದೇವೆ. ಜೀವನದಲ್ಲಿ ಏಳು ಬೀಳುಗಳು ಒಂದು ನಾಣ್ಯದ ಎರಡು ಮುಖಗಳಂತಿದ್ದರೂ ಹೊಸದರತ್ತ ದಾಪುಗಾಲಿಡುವಾಗ ಏನೋ ಮತ್ತದೇ ಒಂದು ಆಶಾಭಾವ, ಎಂಥದೋ ಒಂದು ಉಮೇದು. ಅದು ಹಾಗಿರಲೂ ಬೇಕಲ್ಲವೇ?

ಹಿಂದಿಯಲ್ಲಿ ಒಂದು ನುಡಿಗಟ್ಟಿದೆ "ಉಮೀದ ಪೆ ಹೀ ಇಸ್ ದುನಿಯಾ ಕಾಯಮ್ ಹೈ". ಜೀವನದಲ್ಲಿ ಏನನ್ನಾದರೂ ಒಂದು ಒಳ್ಳೆಯದನ್ನು ಮಾಡುವ ಉತ್ಸಾಹ ಅನೇಕರಿಗಿರುತ್ತದೆ. ಹೊಸ ವರ್ಷದ ಹೊಸ್ತಿಲಲ್ಲಿ ಅನೇಕರು ಅಂತಹ ಒಳ್ಳೆಯದೊಂದನ್ನು ಮಾಡುವ ಸಂಕಲ್ಪ ಮಾಡುತ್ತಾರೆ. ಅನೇಕರು ಅಂತಹ ಸಂಕಲ್ಪವೇನನ್ನೂ ಮಾಡದೇ ನೇರವಾಗಿ ಅಂತಹ ಕೆಲಸದಲ್ಲಿ ತೊಡಗಿರುತ್ತಾರೆ. ಅಂತಹವರೊಬ್ಬರಲ್ಲಿ ನನ್ನ ಮನೆಯ ಹತ್ತಿರ ವಾಸಿಸುವ ಒಬ್ಬರು.

ಕಳ್ಳ ಬಂದ ಕಳ್ಳ ಎಂದು ಎಚ್ಚರಿಸುವ ತಿತ್ತಿರಿ ಹಕ್ಕಿ!ಕಳ್ಳ ಬಂದ ಕಳ್ಳ ಎಂದು ಎಚ್ಚರಿಸುವ ತಿತ್ತಿರಿ ಹಕ್ಕಿ!

ಅವರ ದಿನ ನಿತ್ಯ ಎರಡು ಬಾರಿ ಮನೆಯ ಸುತ್ತ ಮುತ್ತಲೂ ವಾಸಿಸುವ ಅನಾಥ ಬೆಕ್ಕುಗಳಿಗೆ ಆಹಾರ ನೀಡುತ್ತಾರೆ. ಅವರು ತಮ್ಮ ಕೈಯಲ್ಲಿ ಆಹಾರದ ಪೊಟ್ಟಣವನ್ನಿಟ್ಟುಕೊಂಡು ಬರುತ್ತಲೇ ಬೆಕ್ಕುಗಳು ತಮ್ಮ ಅಡಗು ತಾಣಗಳಿಂದ ಹೊರಗೆ ಬರುತ್ತವೆ. ಅವರು ಅವುಗಳೊಡನೆ ಮಾತನಾಡುತ್ತಾ ಒಂದೊಂದಕ್ಕೂ ಒಂದಿಷ್ಟು ಆಹಾರವನ್ನು ಕಾಗದದ ತುಣುಕೊಂದರಲ್ಲಿ ಹಾಕಿ ಬೇರೆ ಬೇರೆಯಾಗಿಯೇ ಬಡಿಸುತ್ತಾರೆ. ಎಲ್ಲಕ್ಕೂ ಒಂದೇ ಕಡೆಗೆ ಹಾಕಿದರೆ ಅವು ತಮ್ಮ ತಮ್ಮೊಳಗೆ ಜಗಳವಾಡುವುದೇ ಹೆಚ್ಚಾಗಿ ಆಹಾರವನ್ನು ತಿನ್ನುವುದಕ್ಕಿಂತ ವ್ಯರ್ಥ ಮಾಡುವುದೇ ಹೆಚ್ಚಾಗುತ್ತದೆ ಎಂದು ವಿವರಿಸುತ್ತಾರೆ.

ಇಂಡೋನೇಷ್ಯಾದ ಭಾರೀ ದುಬಾರಿ ಲು'ವ್ಯಾಕ್' ಕಾಫಿ!ಇಂಡೋನೇಷ್ಯಾದ ಭಾರೀ ದುಬಾರಿ ಲು'ವ್ಯಾಕ್' ಕಾಫಿ!

ಮಳೆಯೆನ್ನದೇ, ಬಿಸಿಲೆನ್ನದೇ ನಿತ್ಯವೂ ತಪ್ಪದೇ ಬಂದು ಬೀದಿ ಬದಿಯ ಬೆಕ್ಕುಗಳಿಗೆ ಅಕ್ಕರೆಯಿಂದ ಆಹಾರವಿಕ್ಕುವ ಅವರ ಈ ಕಾಯಕ ಮೆಚ್ಚುವಂಥದ್ದೇ. ಮೂಕ ಪ್ರಾಣಿಗಳ ಮೇಲಿನ ಅವರಲ್ಲಿರುವ ಅಪಾರ ಕರುಣೆ ಪ್ರಶಂಸನೀಯ, ಅವರನ್ನು ಕಂಡೊಡನೇ ತಮ್ಮ ತಾಯಿಯನ್ನೇ ಕಂಡಂತೆ ಅವರ ಸುತ್ತಲೂ ತೊಡರಿಕೊಂಡು, "ಮಿಯಾಂವ್ ಮಿಯಾಂವ್" ಎಂದು ಕೂಗುತ್ತ ಈ ಮಾತು ಬರದ ಪ್ರಾಣಿಗಳು ತೋರಿಸುವ ಅಮಾಯಕ ಪ್ರೀತಿಯೇ ಅವರಿಗೆ ದೊರಕುವ ಪ್ರತಿಫಲ. ಅದರಿಂದಲೇ ಅವರಿಗೆ ಸಂತೃಪ್ತಿ.

ಸಿಂಗಪುರದ ಅನನ್ಯ ಸ್ಥಳ ಕ್ಯಾಟ್ ಕೆಫೆ

ಸಿಂಗಪುರದ ಅನನ್ಯ ಸ್ಥಳ ಕ್ಯಾಟ್ ಕೆಫೆ

ಇತ್ತೀಚೆಗೆ ನಾನು ಸಿಂಗಪುರದಲ್ಲಿ ಇರುವ Cat Cafeಯೊಂದಕ್ಕೆ ಭೇಟಿ ನೀಡಿದೆ. ಈ Cat Cafe ಒಂದು ರೀತಿ ಅನನ್ಯವಾದ ಸ್ಥಳ. ಇಲ್ಲಿ ಮಾನವರಲ್ಲಿಯ ಸಹಜ ಪ್ರಾಣಿದಯೆಗೆ ವಾಣಿಜ್ಯದ ತಿರುವೊಂದನ್ನು ನೀಡಿದ್ದಾರೆ. Cat Cafe ಒಂದು ರೀತಿಯ ರೆಸ್ಟೋರೆಂಟು. Cat Cafe ಪ್ರವೇಶಕ್ಕೆ ಹದಿನೈದು ಡಾಲರ್ ಶುಲ್ಕ. ಈ ಶುಲ್ಕದಲ್ಲಿ ಅವರು ಕೋಲ್ಡ್ ಡ್ರಿಂಕ್ ಒಂದನ್ನು ಒದಗಿಸುತ್ತಾರೆ. ಹೆಚ್ಚಿಗೆ ಏನಾದರೂ ತಿನ್ನಲು ಅಥವಾ ಕುಡಿಯಲು ಬೇಕಾದರೆ ಅದಕ್ಕೆ ಪ್ರತ್ಯೇಕ ಶುಲ್ಕ.

ಬೆಕ್ಕುಗಳೊಂದಿಗೆ ತಕ್ಕೊಳ್ಳಿ ಸೆಲ್ಫಿ

ಬೆಕ್ಕುಗಳೊಂದಿಗೆ ತಕ್ಕೊಳ್ಳಿ ಸೆಲ್ಫಿ

ಈ ರೆಸ್ಟೋರೆಂಟಿನ ವಿಶೇಷತೆಯೆಂದರೆ, ಅಲ್ಲಿ ಸಾಕಲ್ಪಟ್ಟಿರುವ ಸುಮಾರು ಹದಿನೈದು ಬೆಕ್ಕುಗಳು. ರೆಸ್ಟೋರೆಂಟಿನಲ್ಲಿ ಈ ಬೆಕ್ಕುಗಳು ಆರಾಮವಾಗಿ ವಿಹರಿಸುತ್ತವೆ. ಅವುಗಳಿಗೆ ಆಡಲು ಅನೇಕ ಆಟಿಕೆಗಳನ್ನು ಇಟ್ಟಿದ್ದಾರೆ. ಕೃತಕ Tree houseಗಳನ್ನು ಒದಗಿಸಿದ್ದಾರೆ. ರೆಸ್ಟೋರೆಂಟಿಗೆ ಭೇಟಿ ನೀಡಿದ ಗ್ರಾಹಕರು ಈ ಬೆಕ್ಕುಗಳ ಆಟಗಳನ್ನು ನೋಡಿ ಆನಂದಿಸಬಹುದು. ಅವುಗಳ ಮೈತಡವಬಹುದು. ಅವುಗಳ ಜೊತೆ ಫೋಟೊ ಕೂಡ ತೆಗೆದುಕೊಳ್ಳಬಹುದು. ಆದರೆ ಬೆಕ್ಕುಗಳಿಗೆ ಏನನ್ನೂ ತಿನ್ನಿಸುವಂತಿಲ್ಲ. ಈ ಬೆಕ್ಕುಗಳಿಗೆ ತಕ್ಕದಾದ ಆಹಾರ, ನೀರುಗಳನ್ನು ರೆಸ್ಟೋರೆಂಟಿನವರೇ ಕಾಲಕಾಲಕ್ಕೆ ನೀಡುತ್ತಾರೆ. ಅವುಗಳ ಆರೋಗ್ಯ ಕಾಪಾಡಲು ಈ ರೀತಿಯ ಮುಂಜಾಗರೂಕತೆ.

ಅನಾಥ ಬೆಕ್ಕುಗಳಿಗೆ ಆಶ್ರಯತಾಣ

ಅನಾಥ ಬೆಕ್ಕುಗಳಿಗೆ ಆಶ್ರಯತಾಣ

ನಾನು ಅಲ್ಲಿಯ ವ್ಯವಸ್ಥಾಪಕನಿಗೆ ಕೇಳಿದಾಗ, ಅವನು ಸಿಂಗಪುರದಲ್ಲಿಯ ಕೆಲವು ಅನಾಥ ಬೆಕ್ಕುಗಳನ್ನು ಅವರು ತಂದು ಸಾಕಿದ್ದಾರೆ ಎಂದು ತಿಳಿದುಬಂತು. ಬೆಕ್ಕುಗಳ ಸಂಖ್ಯೆ ಹೆಚ್ಚಾದಾಗ ಅವುಗಳನ್ನು ಸಲಹಲು ಬೇಕಾದ ಹಣವನ್ನು ಗಳಿಸಲು, ಆಸಕ್ತಿಯುಳ್ಳ ಗ್ರಾಹಕರಿಂದ ಪ್ರವೇಶ ಶುಲ್ಕ ಪಡೆಯುವ ಪದ್ಧತಿ ಆರಂಭವಾಯಿತು. ಸಿಂಗಪುರದಲ್ಲಿ ಅಲ್ಲಿಯ ಪಬ್ಲಿಕ್ ಹೌಸಿಂಗ್ ಸೊಸೈಟಿಗಳಲ್ಲಿ ಕಾನೂನುಬದ್ಧವಾಗಿ ಬೆಕ್ಕುಗಳನ್ನು ಸಾಕುವ ಅವಕಾಶವಿಲ್ಲ. ಆದರೆ ಮಾರ್ಜಾಲಪ್ರಿಯರಿಗೆ ಅವುಗಳ ಜೊತೆ ಸ್ವಲ್ಪ ಸಮಯ ಕಳೆಯಲು ಕಾನೂನುಬದ್ಧವಾಗಿ ರೂಪುಗೊಂಡ ಬೆಕ್ಕುಗಳ ಆಶ್ರಯ ತಾಣ ಈ Cat Cafe.

ಕೆಲ ತುಂಟ ಬೆಕ್ಕು, ಕೆಲ ಸಾಧು ಬೆಕ್ಕು

ಕೆಲ ತುಂಟ ಬೆಕ್ಕು, ಕೆಲ ಸಾಧು ಬೆಕ್ಕು

ಪ್ರತಿಯೊಂದು ಬೆಕ್ಕಿಗೂ ಹೆಸರೊಂದನ್ನು ಕೊಟ್ಟು ಅವುಗಳ ಸ್ವಭಾವವನ್ನು ಗಮನಿಸಿ ರೆಸ್ಟೋರೆಂಟಿಗೆ ಆಗಮಿಸಿದ ಗ್ರಾಹಕರಿಗೆ ಅವುಗಳ ಬಗ್ಗೆ ತಿಳಿವಳಿಕೆ ನೀಡುತ್ತಾರೆ. ಕೆಲವು ತುಂಟ ಬೆಕ್ಕುಗಳಾದರೆ ಮತ್ತೆ ಕೆಲವು ಸಾಧು ಬೆಕ್ಕುಗಳು. ಇನ್ನೂ ಕೆಲವು ಚಟುವಟಿಕೆಯುಳ್ಳವಾದರೆ ಮತ್ತೆ ಕೆಲವು ಮೊದ್ದು ಬೆಕ್ಕುಗಳು. ಒಟ್ಟಿನಲ್ಲಿ ಮಾರ್ಜಾಲ ಪ್ರಿಯರಿಗೆ ತಕ್ಕ ಸ್ಥಳ ಈ Cat Cafe. ಎಲ್ಲಕ್ಕಿಂತ ನನಗೆ ಹಿಡಿಸಿದ ವಿಷಯವೇನೆಂದರೆ, ಅನಾಥ ಬೆಕ್ಕುಗಳನ್ನು ಸಾಕಿ ಸಲಹುವುದಲ್ಲದೇ, ಈ ರೀತಿಯಾಗಿ ಒಂದು ಹೊಸ ವಾಣಿಜ್ಯ ವ್ಯವಹಾರವನ್ನೇ ಆರಂಭಿಸಿದ ಪರಿ.

ಪ್ರಕೃತಿ ಎಲ್ಲ ಜೀವಿಗಳಿಗೆ ಆಶ್ರಯತಾಣ

ಪ್ರಕೃತಿ ಎಲ್ಲ ಜೀವಿಗಳಿಗೆ ಆಶ್ರಯತಾಣ

ಭೂತದಯೆ ಎಂಬುವುದು ಒಂದು ಪುರಾತನ ಪರಿಕಲ್ಪನೆ. ಜಗತ್ತಿನ ಸಕಲ ಜೀವಿಗಳಿಗೂ ದಯೆ, ಅನುಕಂಪ ತೋರುವುದು ಮತ್ತು ಕರುಣೆಯಿಂದ ನೆರವಾಗುವುದು ಈ ಪರಿಕಲ್ಪನೆಯ ಮುಖ್ಯಾಂಶ. ಮಾನವ ಸಹಜವಾದ ಈ ನಡವಳಿಕೆ ಇಂದಿನ ಯಾಂತ್ರಿಕ ಜಗದಲ್ಲಿ ಇನ್ನೂ ಹೆಚ್ಚಿಗೆ ಪ್ರಸ್ತುತ. ನಾಗಾಲೋಟದಿಂದ ಸಾಗುತ್ತಿರುವ ಮಾನವನ ನಾಗರಿಕತೆ ನಮ್ಮಲ್ಲಿಯ ಮಾನವೀಯತೆಯನ್ನು ಕೊಲ್ಲದೇ ಈ ಪ್ರಕೃತಿ ತನಗಷ್ಟೇ ಅಲ್ಲ, ಎಲ್ಲ ಬಗೆಯ ಜೀವ ರಾಶಿಗಳಿಗೆ ಆಶ್ರಯ ತಾಣ, ಈ ಜಗತ್ತಿನಲ್ಲಿ ಬದುಕಿ ಬಾಳುವ ಹಕ್ಕು ತನಗಷ್ಟೇ ಅಲ್ಲದೇ ಇತರ ಪ್ರಾಣಿ ಪಕ್ಷಿಗಳಿಗೂ ಇದೆ ಎಂಬ ತಿಳಿವಳಿಕೆಯನ್ನು ಹರಡುವ ಇಂತಹ ಚಟುವಟಿಕೆಗಳು ಇನ್ನೂ ವಿಸ್ತೃತಗೊಳ್ಳಲಿ ಎಂಬುದು ನನ್ನ ಆಶಯ.

English summary
Cat Cafe in Singapore, a Perfect place for Cat lovers. The cafe has given shelter for destitute cats. One can enjoy by playing with cute Kitties, taking selfies, but you cannot feed anything to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X