ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಾಯಣ ಮಹಾಭಾರತ ಬಿಂಬಿಸುವ ಬೋರೋಬುದುರ್ ದೇಗುಲ

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಬೆಳಿಗ್ಗೆ ಮೂರುವರೆಗೆ "ಕಿರ್" ಎಂದು ಅಲಾರ್ಮ್ ಕರ್ಕಶವಾಗಿ ಕೂಗಿತು. ತಟ್ಟನೆ ಎದ್ದಾಗ ಒಂದು ಕ್ಷಣ ನಾನೆಲ್ಲಿದ್ದೇನೆಂಬುದು ತಿಳಿಯಲಿಲ್ಲ. ನಂತರ ಯೋಗ್ಯಕರ್ತಾದ ಹೋಟೆಲ್ ರೂಮಿನಲ್ಲಿದ್ದದ್ದು ಅರಿವಾಯಿತು. ಅಲ್ಲದೇ ಇನ್ನೊಂದು ಅರ್ಧ ಗಂಟೆಗೆ ಸೂರ್ಯೋದಯವನ್ನು ನೋಡಲು ಬೋರೋಬುದುರ್ ದೇವಾಲಯಕ್ಕೆ ಹೋಗಬೇಕೆಂದು ಅರಿವಾಗಿ ತಕ್ಷಣ ಮಡದಿ, ಮಕ್ಕಳನ್ನು ನಿದ್ರೆಯಿಂದೆಬ್ಬಿಸಿದೆ.

ನಾವು ತಯಾರಾಗಿ ಹೊರಡಲು ಕೆಳಗೆ ಬಂದಾಗ ಡ್ರೈವರ್ ಮೊದಲೇ ಬಂದು ಕಾದು ಕುಳಿತಿದ್ದ. ನಮ್ಮನ್ನು ನೋಡಿದಾಕ್ಷಣ ತನ್ನ ಹರಕು ಮುರುಕು ಇಂಗ್ಲಿಷಿನಲ್ಲಿ ಪರಿಚಯಿಸಿಕೊಂಡ. ನಾವು ಕಾರನ್ನೇರಿದ ತಕ್ಷಣ ಬೋರೋಬುದುರ್ ನತ್ತ ಓಡಿಸುತ್ತಾ "ಅಲ್ಲಿ ತಲುಪಲು ಒಂದು ಗಂಟೆ ಹದಿನೈದು ನಿಮಿಷಗಳು ಬೇಕಾಗುತ್ತದೆ, ಆದುದರಿಂದ ನೀವು ಬೇಕಾದರೆ ಇನ್ನೂ ಸ್ವಲ್ಪ ಹೊತ್ತು ಮಲಗಿಕೊಳ್ಳಬಹುದು" ಎಂದು ಹೇಳಿದ.

ಕಾಡಿ ನಿರಾಶೆಗೊಳಿಸಿ ಬೆರುಗು ಮೂಡಿಸಿದ ಮೆರಾಪಿ ಜ್ವಾಲಾಮುಖಿಕಾಡಿ ನಿರಾಶೆಗೊಳಿಸಿ ಬೆರುಗು ಮೂಡಿಸಿದ ಮೆರಾಪಿ ಜ್ವಾಲಾಮುಖಿ

ನಾವಾಗಲೇ ಪೂರ್ಣವಾಗಿ ಎಚ್ಚರವಾಗಿದ್ದೆವು. ಆದುದರಿಂದ ಮುಂಜಾವಿನ ಕತ್ತಲಿನ ನೀರವತೆಯನ್ನು ಆನಂದಿಸುತ್ತಾ ಕುಳಿತಿದ್ದೆವು. ಇಂಡೋನೇಶಿಯಾದ ರೋಡುಗಳ ಮತ್ತು ಟ್ರಾಫಿಕ್ ಲೈಟುಗಳ ಒಳ್ಳೆಯ ಸ್ಥಿತಿಯನ್ನು ಕಂಡು ಬೆರಗಾಯಿತು. ಅಲ್ಲದೇ ಬೆಳಗಿನ ಜಾವದಲ್ಲಿ ಚಿಕ್ಕ ಚಿಕ್ಕ ರೋಡುಗಳಲ್ಲಿ ಏನೇನೂ ಸಂಚಾರವಿರದಿದ್ದರೂ ಅಲ್ಲಿನ ಡ್ರೈವರುಗಳು ಸಂಚಾರ ನಿಯಮಗಳನ್ನು ನಿಷ್ಠೆಯಿಂದ ಪಾಲಿಸುವುದನ್ನು ನೋಡಿದಾಗ ಆನಂದವಾಯಿತು.

Borobudur worlds largest Buddhist temple

ಸುಮಾರು ಒಂದೂವರೆ ಗಂಟೆಯಲ್ಲಿ ನಮ್ಮನ್ನು ಬೋರೋಬುದುರ್ ನ ಟಿಕೆಟ್ ಕೌಂಟರ್ ಹತ್ತಿರ ತಂದಿದ್ದ. ನಾವು ಲಗುಬಗೆಯಿಂದ ಟಿಕೆಟ್ ಕೊಂಡುಕೊಂಡು ಅವರು ನಮಗೆ ಕೊಟ್ಟ ಪುಟ್ಟ ಬ್ಯಾಟರಿಗಳ ಮಿಣುಕು ಬೆಳಕಿನಲ್ಲಿ ಇತರ ಪ್ರವಾಸಿಗರನ್ನು ಹಿಂಬಾಲಿಸುತ್ತಾ ನಡೆದೆವು. ಸುಮಾರು ಹತ್ತು ನಿಮಿಷಗಳ ನಂತರ ಭವ್ಯವಾದ ದೇವಾಲಯದ ಮುಂದೆ ನಿಂತೆವು. ಮುಖ್ಯದ್ವಾರದ ಮುಂದೆ ಎರಡು ಪೌರಾಣಿಕ ಕಾಲದ ಸಿಂಹಗಳ ವಿಗ್ರಹಗಳು ಮುಗುಳ್ನಗುತ್ತ ನಮ್ಮನ್ನು ಸ್ವಾಗತಿಸುತ್ತಿರುವಂತೆ ಭಾಸವಾಯಿತು. ನಸುಗತ್ತಲಲ್ಲಿ ಬೃಹದಾಕಾರವಾದ ಪಿರಮಿಡ್ ಹಾಗೆ ಕಾಣಿಸಿದ ದೇವಸ್ಥಾನದ ತುಟ್ಟ ತುದಿ ತಲುಪಲು ಏರಲಾರಂಭಿಸಿದೆವು.

ದೇಗುಲದ ಎಂಟನೆಯ ಅಂತಸ್ತಿಗೆ ಏರಿದಾಗ ನಮ್ಮಂತೆ ಅನೇಕ ಪ್ರವಾಸಿಗಳು ಆಗಲೇ ಅಲ್ಲಿ ಸೂರ್ಯೋದಯಕ್ಕಾಗಿ ಕಾದು ನಿಂತಿದ್ದರು. ನಸುಬೆಳಕಿನಲ್ಲಿ ಪೂರ್ವದಿಕ್ಕಿನತ್ತ ನೋಡಿದಾಗ ನಮಗೆ ದೂರದಲ್ಲಿ ಮೆರ್ ಬಾಬು ಮತ್ತು ಮೆರಾಪಿ ಜ್ವಾಲಾಮುಖಿಗಳು ಕಂಡವು. ಸುತ್ತ ಮುತ್ತಲೂ ಒಮ್ಮೆ ನೋಡಿದಾಗ ಹಸಿರಿನಿಂದಾವೃತವಾದ ಪರ್ವತ ಶಿಖರಗಳು ಕಂಡವು. ಆದರೆ ಮೊದಲು ನಾವು ಕಾದು ಕುಳಿತದ್ದು ಸೂರ್ಯೋದಯಕ್ಕಾಗಿ. ಸೂರ್ಯದೇವನ ದರ್ಶನವಾದದ್ದು ಹೀಗೆ:

Borobudur worlds largest Buddhist temple

ಸೂರ್ಯೋದಯದ ದಿವ್ಯ ದರ್ಶನದ ನಂತರವೇ ನಮ್ಮ ದೃಷ್ಟಿ ದೇಗುಲದತ್ತ ತಿರುಗಿದ್ದು. ಆಗ ನಮಗೆ ಈ ದೇವಸ್ಥಾನದ ಭವ್ಯತೆಯ ನಿಜವಾದ ಅರಿವಾಯಿತು. ಈ ದೇಗುಲ ಒಂಭತ್ತು ಅಂತಸ್ತನ್ನೊಳಗೊಂಡಿದ್ದು ಕೆಳಗಿನ ಆರು ಅಂತಸ್ತುಗಳು ಚೌಕಾಕಾರವಾಗಿದ್ದರೆ, ಮೇಲಿನ ಮೂರು ಅಂತಸ್ತುಗಳು ವರ್ತುಲಾಕಾರದ್ದಾಗಿವೆ. ಮೇಲಿನ ಮೂರು ಅಂತಸ್ತುಗಳು ಎಪ್ಪತ್ತೆರಡು ಸ್ತೂಪಗಳನ್ನು ಹೊಂದಿದೆ. ಪ್ರತಿ ಸ್ತೂಪವು ಗಂಟೆಯಾಕಾರ ಹೊಂದಿದ್ದು, ಅವುಗಳಲ್ಲಿ ಅನೇಕ ಕಿಟಿಕಿಗಳಿವೆ. ಪ್ರತಿ ಸ್ತೂಪದೊಳಗೆ ಬುದ್ಧನ ಮೂರ್ತಿಯಿದೆ. ಮಧ್ಯದಲ್ಲಿ ಒಂದು ಬೃಹತ್ ಸ್ತೂಪವಿದೆ. ಅದಕ್ಕೆ ಯಾವುದೇ ಕಿಟಿಕಿಗಳಿಲ್ಲ.

Borobudur worlds largest Buddhist temple

ಕೆಳಗಿನ ಆರು ಅಂತಸ್ತುಗಳ ಗೋಡೆಯ ಮೇಲೆ ಸಿದ್ಧಾರ್ಥ ಬುದ್ಧನ ಜೀವನ ಚರಿತ್ರೆಯ ಸುಂದರ ಶಿಲ್ಪಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಅತ್ಯಂತ ಕೆಳಗಿನ ಅಂತಸ್ತನ್ನು 'ಕಾಮಧಾತು' ಎಂದು ಕರೆಯುತ್ತಾರೆ. ಬೌದ್ಧ ಅಧ್ಯಾತ್ಮಿಕ ವಿಜ್ಞಾನದಲ್ಲಿ 'ಕಾಮಧಾತು' ಸಾಮಾನ್ಯ ಜನರ ಜಗತ್ತನ್ನು ಪ್ರತಿನಿಧಿಸುತ್ತದೆ. ನಂತರದ ಐದು ಅಂತಸ್ತುಗಳು 'ರೂಪಧಾತು'ವನ್ನು ಪ್ರತಿನಿಧಿಸುತ್ತವೆ. 'ರೂಪಧಾತು' ಜನಸಾಮಾನ್ಯರು ತಮ್ಮ ಸಾಧಾರಣ ಜೀವನದಿಂದ ಮೇಲೆ ಬಂದು ಆಸೆಗಳನ್ನು ಮೀರಿದ ಅವಧೂತರ ಸ್ಥಿತಿಯನ್ನು ಪ್ರತಿನಿಧಿಸುತ್ತದೆ. ಮೇಲಿನ ಮೂರು ಅಂತಸ್ತುಗಳನ್ನು 'ಅರೂಪಧಾತು' ಎಂದು ಕರೆಯುತ್ತಾರೆ. 'ಅರೂಪಧಾತು' ನಿರ್ವಾಣಾವಸ್ಥೆಯನ್ನು ತಲುಪಿದ ಬೌದ್ಧರ ಲೋಕವನ್ನು ಪ್ರತಿನಿಧಿಸುತ್ತದೆ.

Borobudur worlds largest Buddhist temple

ಈ ಅದ್ಭುತ ದೇವಸ್ಥಾನವನ್ನು ನೋಡಿದಷ್ಟೂ ಕಡಿಮೆಯೆನಿಸಿತು. ಹಾಗೆಯೇ ಪೂರ್ತಿ ದಿನ ನೋಡುತ್ತಲೇ ಇರಬೇಕು ಎಂಬ ಬಲವಾದ ಆಸೆ ಮೂಡಿತು. ಆದರೆ ಒಲ್ಲದ ಮನಸ್ಸಿನಿಂದಲೇ ಅಲ್ಲಿಂದ ಹೊರಟೆವು.

ಹಿಂದಿನ ದಿನ ಸಂಜೆಯೇ ನಾವು ವಿರುದ್ಧ ದಿಕ್ಕಿನಲ್ಲಿದ್ದ ಪ್ರಾಂಬನಾನ್ ಹಿಂದೂ ಮಂದಿರದ ದರ್ಶನ ಮಾಡಿದ್ದೆವು. ಬೋರೋಬುದುರ್ ಹಾಗೆಯೇ ಪ್ರಾಂಬನಾನ್ ಕೂಡ ಮತ್ತೊಂದು ಅದ್ಭುತ ಕಲಾದೇಗುಲವೆಂದೇ ಹೇಳಬೇಕು. ಪ್ರಾಂಬನಾನ್ ಹಿಂದೂ ದೇವಸ್ಥಾನ ಮುಖ್ಯವಾಗಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ಮಂದಿರ. ಮಧ್ಯದಲ್ಲಿ ಬೃಹತ್ ಶಿವ ಮಂದಿರವಿದ್ದು ಅಕ್ಕ ಪಕ್ಕದಲ್ಲಿ ಬ್ರಹ್ಮ ಮತ್ತು ವಿಷ್ಣು ಮಂದಿರಗಳಿವೆ. ಗರ್ಭಗುಡಿ ಎತ್ತರದಲ್ಲಿದ್ದು ಅಲ್ಲಿಯವರೆಗೆ ತಲುಪಲು ಸುಮಾರು ಐವತ್ತು ಎತ್ತರವಾದ ಮೆಟ್ಟಿಲುಗಳನ್ನೇರಬೇಕು. ತ್ರಿಮೂರ್ತಿ ಮಂದಿರಗಳ ಎದುರಿಗೆ ಅವರ ವಾಹನಗಳಾದ ನಂದಿ, ಹಂಸ ಮತ್ತು ಗರುಡರ ಗುಡಿಗಳಿವೆ. ಈ ಎಲ್ಲ ಗುಡಿಗಳ ಗೋಡೆಗಳ ಮೇಲೆ ರಾಮಾಯಣ ಮತ್ತು ಮಹಾಭಾರತಗಳ ಪ್ರಸಂಗಗಳನ್ನ ಬಹಳ ಸುಂದರವಾಗಿ ಕೆತ್ತಿದ್ದಾರೆ. ಇವಲ್ಲದೇ ಇನ್ನೂ ಕೆಲವು ಚಿಕ್ಕ ಮಂದಿರಗಳಿವೆ. ಒಟ್ಟಿನಲ್ಲಿ ಮುಖ್ಯ ಆರು ಗುಡಿಗಳ ಸುತ್ತ 232 ಚಿಕ್ಕ ಮಂದಿರಗಳಿದ್ದುವಂತೆ. ಆದರೆ ಈಗ ಗುಡಿಯ ಸುತ್ತಮುತ್ತ ಬರೀ ದೊಡ್ದ ದೊಡ್ಡ ಕಲ್ಲುಗಳ ಅವಶೇಷಗಳನ್ನು ಮಾತ್ರ ನೋಡಬಹುದು.

Borobudur worlds largest Buddhist temple

ಬೋರೋಬುದುರ್ ದೇವಸ್ಥಾನವನ್ನು ಕ್ರಿಶ 760ರಿಂದ ಕ್ರಿಶ 830ರವರೆಗೆ ಕಟ್ಟಲಾಯಿತು ಎಂದು ಹೇಳಲಾಗಿದೆ. ಆಗ ಮಧ್ಯ ಜಾವಾದಲ್ಲಿ ಮಾತರಂ ರಾಜ್ಯವನ್ನು ಶೈಲೇಂದ್ರ ಅರಸು ಮನೆತನದವರು ಆಳುತ್ತಿದ್ದರು. ಪ್ರಾಂಬನಾನ್ ದೇವಸ್ಥಾನ ಸಂಕುಲವನ್ನು ಕ್ರಿಶ 850ರಿಂದ ಮುಂದಿನ ಐವತ್ತು ವರ್ಷಗಳಲ್ಲಿ ಕಟ್ಟಲಾಯಿತು. ಅಂದು ಯೋಗ್ಯಕರ್ತಾ ಪ್ರದೇಶದ ಮಾತರಂ ರಾಜ್ಯವನ್ನು ಸಂಜಯ ಅರಸು ಮನೆತನದವರು ಆಳುತ್ತಿದ್ದರು.

ಎರಡೂ ದೇವಸ್ಥಾನಗಳು ಕಾಲದ ಹೊಡೆತಕ್ಕೆ ಸಿಕ್ಕು ಅವನತಿಗೊಂಡರೂ, ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಮತ್ತೆ ಈ ಗುಡಿಗಳ ಜೀರ್ಣೋದ್ಧಾರವನ್ನು ಅಂದು ಇಂಡೋನೇಶಿಯಾವನ್ನು ಆಳುತ್ತಿದ್ದ ಡಚ್ ಸರಕಾರ ಆರಂಭಿಸಿತು. ಮುಂದೆ ಇಂಡೋನೇಶಿಯ ಸ್ವತಂತ್ರವಾದ ಮೇಲೆ ತಮ್ಮ ದೇಶದ ಉನ್ನತ ಇತಿಹಾಸ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನದಿಂದ ಇಂಡೋನೇಶಿಯ ಸರಕಾರ ಜೀರ್ಣೋದ್ಧಾರವನ್ನು ಮುಂದುವರೆಸಿ ಈ ಕಲಾದೇಗುಲಗಳನ್ನು ಮತ್ತೊಮ್ಮೆ ಉಚ್ಛ್ರಾಯ ಸ್ಥಿತಿಗೆ ಏರಿಸಿತು. ಇಂದು ಈ ಎರಡೂ ಅತ್ಯಪೂರ್ವ ಸ್ಮಾರಕಗಳು ಯುನೆಸ್ಕೋ ಹೆರಿಟೇಜ್ ತಾಣಗಳಾಗಿವೆ.

Borobudur worlds largest Buddhist temple

ಎಲ್ಲಕ್ಕಿಂತ ಮುಖ್ಯವಾಗಿ ಇಂಡೋನೇಶಿಯದ ಜನರು ಅತ್ಯಂತ ಅಭಿಮಾನದಿಂದ ತಮ್ಮ ಈ ಸಾಂಸ್ಕೃತಿಕ ತಾಣಗಳನ್ನು ಸಂರಕ್ಷಿಸಿದ್ದಾರೆ. ಅತ್ಯಂತ ಅಭಿಮಾನದಿಂದ ಅವುಗಳನ್ನು ನಮ್ಮಂತಹ ವಿದೇಶೀಯರಿಗೆ ಪರಿಚಯಿಸುತ್ತಾರೆ. ಇಂದಿಗೂ ಇಂಡೋನೇಶಿಯದ ಅನೇಕ ಜನರ ಮತ್ತು ಅಂಗಡಿಗಳ ಹೆಸರುಗಳು ರಾಮಾಯಣ ಮತ್ತು ಮಹಾಭಾರತದ ಪಾತ್ರಗಳ ಹೆಸರುಗಳಾಗಿವೆ.

Borobudur worlds largest Buddhist temple

ನಮ್ಮ ಟ್ಯಾಕ್ಸಿ ಚಾಲಕನ ಹೆಸರು ವಾಯು. ನಾವಿದ್ದ ಹೋಟೆಲ್ ಹೆಸರು ವಿನೋತೊಶಾಸ್ತ್ರೊ. ದೊಡ್ದದೊಂದು ವ್ಯಾಪಾರ ಮಳಿಗೆಯ ಹೆಸರು ರಾಮಾಯಣ. ಇನ್ನೊಂದು ದೊಡ್ಡ ಬಟ್ಟೆ ಅಂಗಡಿಯ ಹೆಸರು ಯುಧಿಷ್ಟಿರ. ಇನ್ನೊಂದು ರೆಸ್ಟುರಾಂಟ್‍ನ ಹೆಸರು ನಕುಲ ಸಹದೇವ. ಇಂದು ಇಂಡೋನೇಶಿಯದ ಬಹುತೇಕ ಜನರು ಪರಧರ್ಮೀಯರಾಗಿದ್ದರೂ ತಮ್ಮ ಬೌದ್ಧ ಮತ್ತು ಹಿಂದೂ ಇತಿಹಾಸ ಹಾಗೂ ಸಂಸ್ಕೃತಿಗಳ ಬಗ್ಗೆ ಇಂದಿಗೂ ಅತ್ಯಂತ ಅಭಿಮಾನ ಹೊಂದಿದ್ದನ್ನು ನೋಡಿದರೆ, ಇಂಡೋನೇಶಿಯನ್ ಪ್ರಜೆಗಳೇ ನಿಜವಾದ ಸೆಕ್ಯುಲರ್ ಎಂದೆನಿಸಿ ಅವರ ಬಗ್ಗೆ ಬಹಳ ಆದರದ ಭಾವ ಉಕ್ಕುತ್ತದೆ.

English summary
Borobudur is a 9th-century Mahayana Buddhist temple in Magelang Regency, not far from the town of Muntilan, in Central Java, Indonesia. It is the world's largest Buddhist temple. Travelogue by Vasant Kulkarni, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X