• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಿಂದೂಸ್ತಾನಿ ದಿಗ್ಗಜರನ್ನು ಬೆಳೆಸಿದ ಪುಣ್ಯನೆಲ ಬೆಳಗಾವಿ

By ವಸಂತ ಕುಲಕರ್ಣಿ, ಸಿಂಗಪುರ
|

ನನ್ನೂರಾದ ಬೆಳಗಾವಿಗೂ ಹಿಂದೂಸ್ತಾನಿ ಸಂಗೀತಕ್ಕೂ ಅವಿನಾಭಾವ ಸಂಬಂಧ. ಪದ್ಮ ವಿಭೂಷಣ ಪಂಡಿತ್ ಕುಮಾರ ಗಂಧರ್ವ (ಶಿವಪುತ್ರ ಕೊಂಕಾಳಿಮಠ), ಪದ್ಮ ಭೂಷಣ ಶೋಭಾ ಗುರ್ತು ಅವರಂತಹ ಅನೇಕ ಮಹನೀಯರ ಜನ್ಮ ಭೂಮಿಯಾದರೆ, ಪದ್ಮ ಭೂಷಣ ಮೋಗುಬಾಯಿ ಕುರ್ಡೀಕರ್ (ಗಾನ ಸರಸ್ವತಿ ಪದ್ಮ ವಿಭೂಷಣ ಕಿಶೋರಿ ಅಮ್ಹೋಣಕರ ಅವರ ತಾಯಿ) ಇವರನ್ನು ಸಾಕಿ ಸಲುಹಿ ಬೆಳೆಸಿದೆ ಬೆಳಗಾವಿ.

ಇವರು ಮಾತ್ರವಲ್ಲ, ಸವಾಯಿ ಗಂಧರ್ವರೆಂದೇ ಪ್ರಸಿದ್ಧರಾದ ಪಂ ಭೀಮಸೇನ್ ಜೋಶಿ ಅವರ ಗುರುಗಳಾದ ರಾಮಭಾವು ಕುಂದಗೋಳಕರ್ ಮತ್ತು ಅವರ ಗುರು ಕಿರಾಣಾ ಘರಾಣದ ಮೂಲ ಪ್ರವರ್ತಕರಾದ ಉಸ್ತಾದ್ ಅಬ್ದುಲ್ ಕರೀಂ ಖಾನ್, ಪಂಡಿತ್ ರಾಮಕೃಷ್ಣ ಬುವಾ ವಝೆ ಮತ್ತು ಅವರ ಮಗ ಶಿವರಾಮ್ ಬುವಾ ವಝೆ ಹಾಗೂ ಪಂಡಿತ್ ಕಾಗಲ್‍ಕರ್ ಬುವಾ ಅವರಿಗೆ ಆಶ್ರಯ ನೀಡಿದ ಪುಣ್ಯ ಭೂಮಿ ಬೆಳಗಾವಿ. ಹೀಗಾಗಿ ಬೆಳಗಾವಿಯ ನೆಲದಲ್ಲಿ ಹಿಂದೂಸ್ತಾನಿ ಸಂಗೀತ ತಳ ಊರಿ ತನ್ನ ಕಂಪನ್ನು ಸುತ್ತೆಲ್ಲಾ ಹರಡಿದ್ದು ಸ್ವಾಭಾವಿಕ.[ವೃತ್ತಿಯಲ್ಲಿ ಒಬ್ಬ ಪರ್ಫೆಕ್ಷನಿಸ್ಟ್ ಆಗಬೇಕಾದರೆ...]

ಇಂತಹ ಪುಣ್ಯನೆಲದಲ್ಲಿ ಹುಟ್ಟಿ ಬೆಳೆದು, ತಮ್ಮ ಪ್ರಖರ ಪಾಂಡಿತ್ಯದಿಂದ ಮತ್ತು ಅದರ ಜೊತೆಯೇ ಒಂದು ಉಜ್ವಲ ಶಿಷ್ಯ ಪರಂಪರೆಯನ್ನು ಬೆಳೆಸಿದುದರಿಂದ ಜನಮನದಲ್ಲಿ ನಿಂತವರು ಪ್ರಖ್ಯಾತ ಹಾರ್ಮೋನಿಯಂ ವಿದ್ವಾಂಸ ಪಂಡಿತ್ ರಾಮಭಾವು ಬಿಜಾಪುರೆ. ಪಂಡಿತ್ ರಾಮಭಾವು ಬಿಜಾಪುರೆ ಹುಟ್ಟಿದ್ದು 1917ರ ಜನವರಿ 7ರಂದು, ಬೆಳಗಾವಿಯ ಅಥಣಿ ತಾಲೂಕಿನ ಕಾಗವಾಡ ಗ್ರಾಮದಲ್ಲಿ. ಅವರ ತಂದೆ ಕಲ್ಲೋಪಂತ್ ಬಿಜಾಪುರೆ ಅವರು ಕವಿ ಮತ್ತು ನಾಟಕಕಾರ.

ಅವರ ತಂದೆಯ ನಾಟಕಗಳಿಗೆ ಸಂಗೀತ ನೀಡಲು ಬರುತ್ತಿದ್ದ ವಿದ್ವಾನ್ ಹಣ್ಣೀಕೇರಿ ಮಲ್ಲಯ್ಯನವರು ಬಾಲಕ ರಾಮಭಾವುವಿನಲ್ಲಿದ್ದ ಸಂಗೀತಕಾರನನ್ನು ಗುರುತಿಸಿ ಅವರಿಗೆ ಹಾರ್ಮೋನಿಯಂ ವಾದನದ ಶ್ರೀಕಾರವನ್ನು ಹಾಕಿದರು. ಮುಂದೆ ರಾಮಭಾವು ಅವರು ಮೀರಜ್‍ನ ನೀಲಕಂಠಬುವಾ ಗಾಡಗೋಳಿ ಅವರಲ್ಲಿ ಸಂಗೀತಾಭ್ಯಾಸವನ್ನು ಮುಂದುವರೆಸಿದರು. 1928ಕ್ಕೆ ಬೆಳಗಾವಿ ನಗರಕ್ಕೆ ಆಗಮಿಸಿದ ನಂತರ ಪಂಡಿತ್ ರಾಮಕೃಷ್ಣಬುವಾ ವಝೆ ಮತ್ತು ಕಾಗಲ್‍ಕರ್ ಬುವಾ ಅವರಲ್ಲಿ ಗಾಯನದ ಅಭ್ಯಾಸ ನಡೆಸಿದರು. ಗೋವಿಂದರಾವ್ ಗಾಯಕ್ವಾಡ್ ಮತ್ತು ಪಂಡಿತ್ ರಾಜವಾಡೆಯವರಲ್ಲಿ ಹಾರ್ಮೋನಿಯಂ ಅಬ್ಯಾಸವನ್ನು ಮಾಡಿದರು.

ಹೀಗೆ ಒಬ್ಬ ಪಾರಂಗತ ಸಂಗೀತ ವಿದ್ವಾಂಸರಾಗಿ ಹೊರಹೊಮ್ಮಿದ ಪಂಡಿತ ರಾಮಭಾವು ಬಿಜಾಪುರೆ ಮುಂದೆ ಉಸ್ತಾದ್ ಅಬ್ದುಲ್ ಕರೀಂ ಖಾನರಾದಿಯಾಗಿ ಸುಮಾರು ಐದು ತಲೆಮಾರಿನ ಭಾರತದ ಮಹಾನ್ ಗಾಯಕ ಗಾಯಕಿಯರಿಗೆ ಸಮರ್ಥ ಸಹ ವಾದಕರಾಗಿ ಸೇವೆ ಸಲ್ಲಿಸಿ ಪ್ರಖ್ಯಾತಿ ಗಳಿಸಿದರು. ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಓಂಕಾರನಾಥ ಠಾಕೂರ್, ಡಿ.ವಿ. ಪಲೂಸ್ಕರ್, ಸವಾಯಿ ಗಂಧರ್ವ, ಮಲ್ಲಿಕಾರ್ಜುನ್ ಮನ್ಸೂರ್, ಕುಮಾರ್ ಗಂಧರ್ವ, ಕಿಶೋರಿ ಅಮ್ಹೋಣಕರ್ ರಂತಹ ದಿಗ್ಗಜ ಸಂಗೀತಕಾರರಿಗೆ ಸಹವಾದನ ಮಾಡಿದ ಕೀರ್ತಿ ಪಂಡಿತ ರಾಮಭಾವು ಬಿಜಾಪುರೆ ಅವರದು.[ಸರಿಯಾಗಿ ಹದಿನಾರು ವರ್ಷಗಳ ಹಿಂದೆ ವಿಮಾನವೇರಿದಾಗ!]

ಅವರು ಕೇವಲ ಸಹವಾದ್ಯಕಾರರಾಗಿ ಸೀಮಿತಗೊಳ್ಳದೇ, ಒಬ್ಬ ಸಮರ್ಥ ಸ್ವತಂತ್ರ ವಾದಕರಾಗಿ ಕೂಡ ಸಾಧನೆ ಮಾಡಿದರು. ಹಾರ್ಮೋನಿಯಂನಂತಹ ಒಂದು ಜಡ ನಿರ್ಜೀವ ವಾದ್ಯದ ಆಂತರ್ಯವನ್ನು ತಟ್ಟಿ, ತಮ್ಮ ಅಂತರ್ದೃಷ್ಟಿಯ ಮೂಲಕ ಅದಕ್ಕೆ ಒಂದು ಹೊಸ ಚೈತನ್ಯವನ್ನು ನೀಡಿದರು. ಹಾರ್ಮೋನಿಯಂನಿಂದ ಹೊರಬರುವ ವಿಭಿನ್ನ ಆದರೆ ಪ್ರತ್ಯೇಕ ಸ್ವರಗಳನ್ನು ತಮ್ಮ ಕೈಚಳಕದಿಂದ ಸಂಘಟಿಸಿ ತಂತಿ ವಾದ್ಯಗಳಂತೆ ಸ್ವರಗಳ ನಿರಂತತೆಯನ್ನು ಸಾಧಿಸಿದರು. ಈ ರೀತಿಯಾಗಿ ಅವರು ಹಾರ್ಮೋನಿಯಂ ವಾದನಕ್ಕೆ ಒಂದು ಹೊಸ ಭಾಷ್ಯವನ್ನು ಬರೆದರು. ಈ ಅವರ ವಿಶೇಷ ಶೈಲಿ ಅವರ ಸಮರ್ಥ ಶಿಷ್ಯರು ಮತ್ತು ಪ್ರಶಿಷ್ಯರಲ್ಲಿಯೂ ಮುಂದುವರೆದಿದ್ದನ್ನು ನಾವು ಇಂದೂ ಕಾಣುತ್ತೇವೆ.

ಅವರ ಇನ್ನೂ ಒಂದು ಪ್ರಮುಖ ವಿಶೇಷವೆಂದರೆ ಅವರ ಸಹಸ್ರ ಶಿಷ್ಯಗಣ. ತಾವು ಕಲಿತು ವಿದ್ವಾಂಸರಾದುದಲ್ಲದೇ ಅನೇಕ ಜನ ಶಿಷ್ಯರನ್ನು ತಯಾರಿಸಿ ತಮ್ಮಂತೆಯೇ ಪಾರಂಗತರನ್ನಾಗಿ ಮಾಡಿದ್ದು ರಾಮಭಾವು ಅವರ ವೈಶಿಷ್ಟ್ಯ. ಗಾಯನದಲ್ಲಿ ಅವರು ಕುಂದಾ ವೆಲ್ಲಿಂಗ್, ಮಾಣಿಕ್ ಮೋಘೆ, ನೀಲಾ ಮೋಘೆ, ಕಿರಣ್ ಮೋಘೆ, ಧೋಪೇಶ್ವರಕರ, ಶ್ರೀಧರ್ ಕುಲಕರ್ಣಿಯವರಂತಹ ಉತ್ತಮ ಶಿಷ್ಯರನ್ನು ತಯಾರು ಮಾಡಿದರೆ, ಸುಧಾಂಶು ಕುಲಕರ್ಣಿ, ರವೀಂದ್ರ ಮಾನೆ, ಕುಸುಮ್ ಕಾಕೋಡೆಕರ್, ದೀಪಕ್ ಮರಾಠೆ ಮಾತು ರವೀಂದ್ರ ಕಾಟೋಟಿಯವರಂತಹ ದಿಗ್ಗಜ ಹಾರ್ಮೋನಿಯಂ ವಾದಕರನ್ನು ಸಿದ್ಧಗೊಳಿಸಿದರು.[ಸಿಂಗಪುರದಲ್ಲಿಯೂ ಇಣುಕುತ್ತಿದೆ ಉದ್ಯೋಗದ ಅಭದ್ರತೆ!]

ಸಂಗೀತ ನಾಟಕ ಅಕಾಡೆಮಿಯ "ಕರ್ನಾಟಕ ಕಲಾ ತಿಲಕ", ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿಯ "ನಾದಶ್ರೀ ಪುರಸ್ಕಾರ", ಮೈಸೂರು ಟಿ. ಚೌಡಯ್ಯ ಪ್ರಶಸ್ತಿ, ಮೈಸೂರು ದಸರಾ ಹಬ್ಬದ "ರಾಜ್ಯ ಸಂಗೀತ ವಿದ್ವಾನ್" ಮತ್ತು ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ "ಮಹಾಮಹೋಪಾಧ್ಯಾಯ" ಎಂಬ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಪಂಡಿತ್ ರಾಮಭಾವು ಬಿಜಾಪುರೆ ನಮ್ಮನ್ನಗಲಿದ್ದು ನವೆಂಬರ್ 19, 2010ರಂದು. 93 ವರ್ಷಗಳ ತುಂಬು ಜೀವನ ನಡೆಸಿದ ರಾಮಭಾವು ಬಿಜಾಪುರೆ ತಮ್ಮ ಜೀವನದ ಕೊನೆಯ ದಿನಗಳವರೆಗೆ ಸಂಗೀತ ವಿದ್ಯೆಯ ದಾನದಲ್ಲಿ ನಿರತರಾಗಿದ್ದರು ಎಂಬುದು ಅಚ್ಚರಿಯ ಸಂಗತಿ.

ನನ್ನ ಚಿಕ್ಕಂದಿನಲ್ಲಿ ನಾನು ಬೆಳಗಾವಿಯಲ್ಲಿ ಶಾಲೆ ಕಲಿಯುತ್ತಿದ್ದಾಗ ಪಂಡಿತ್ ರಾಮಭಾವು ಬಿಜಾಪುರೆಯವರ ಹೆಸರನ್ನು ಅನೇಕ ಬಾರಿ ಕೇಳಿದ್ದೆ. ಅನೇಕ ಬಾರಿ ನನಗೆ ಅವರ ಹತ್ತಿರ ಹೋಗಿ ಶಿಷ್ಯವೃತ್ತಿ ಶುರು ಮಾಡುವ ಮನಸ್ಸೂ ಆಗಿತ್ತು. ಆದರೆ ಕಾರಣಾಂತರಗಳಿಂದ ನಾನು ಸಂಗೀತ ಕಲಿಯಲಿಲ್ಲ. ಸಂಗೀತದ ಉಪಾಸಕನಾಗಿ ಉಳಿದು ಬೆಳೆದಿದ್ದು ಮಾತ್ರ ಸತ್ಯ. ಅದಕ್ಕೆ ರಾಮಭಾವು ಬಿಜಾಪುರೆಯವರಂತಹ ಮಹನೀಯರು ಬೆಳೆಸಿದ ಪ್ರಭೆಯ ಸ್ರೋತವೇ ಮುಖ್ಯ ಕಾರಣ ಎನ್ನಬಹುದು.[ಸ್ವಾರ್ಥ ಮೀರಿದ ದೇಶಪ್ರೇಮವಿದ್ದರೆ ಮಾತ್ರ ಇಂಥ ಅದ್ಭುತ ಸಾಧ್ಯ!]

ಅವರ ಪಟ್ಟ ಶಿಷ್ಯರಲ್ಲೊಬ್ಬರಾದ ಡಾ. ರವೀಂದ್ರ ಕಾಟೋಟಿ ನನ್ನ ಶಾಲಾ ಮಿತ್ರ. ಅಂದಿನಿಂದ ಇಂದಿನವರೆಗೆ ನನ್ನ ಹತ್ತಿರದ ಮಿತ್ರರಾಗಿದ್ದು ನನ್ನ ಸುದೈವವೇ ಸರಿ. ಡಾ. ರವೀಂದ್ರ ಕಾಟೋಟಿ, ತನ್ನ ಗುರುಗಳ ಕನಸನ್ನು ನನಸು ಮಾಡಿ ವಿಶ್ವಮಟ್ಟದಲ್ಲಿ ಹಾರ್ಮೋನಿಯಂ ವಾದ್ಯದ ಸ್ವತಂತ್ರ ವಾದನಕ್ಕೊಂದು ಸ್ಥಾನ ಕಲ್ಪಿಸುವುದರ ಮಹತ್ವದ ಕೆಲಸದಲ್ಲಿ ಅವಿರತವಾಗಿ ನಿರತರಾಗಿದ್ದಾರೆ.

ಸ್ವತಃ ಒಬ್ಬ ದೊಡ್ಡ ವಿದ್ವಾಂಸನಾಗಿದ್ದು, ಭೀಮಸೇನ್ ಜೋಶಿ, ಗಂಗೂಬಾಯಿ ಹಾನಗಲ್, ಜಸರಾಜ್, ರಾಜನ್ ಮತ್ತು ಸಾಜನ್ ಮಿಶ್ರಾ, ಪರ್ವೀನ್ ಸುಲ್ತಾನಾ ಮುಂತಾದವರೊಂದಿಗೆ ಸಹವಾದನ ಮಾಡಿದ ಖ್ಯಾತಿ ರವೀಂದ್ರರದು. ಅವರು ತನ್ನ ಗುರುಗಳ ಕೆಲಸವನ್ನು ಜನಮಾನಸಕ್ಕೆ ಮುಟ್ಟಿಸುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಬಿಜಾಪುರೆ ಹಾರ್ಮೋನಿಯಂ ಪ್ರತಿಷ್ಠಾನವನ್ನು ಕಟ್ಟಿ ಹಿಂದೂಸ್ತಾನಿ ಹಾರ್ಮೋನಿಯಂನ ಸ್ವರ ಪರಿಮಳವನ್ನು ಜಗತ್ತಿನ ಎಲ್ಲ ದಿಕ್ಕುಗಳಿಗೆ ಪಸರಿಸುವ ಕೆಲಸದಲ್ಲಿ ತೊಡಗಿದ್ದಾರೆ. ಗುರುಗಳು ಹಾಕಿಕೊಟ್ಟ ಮಾರ್ಗದಂತೆ ಅವರೂ ಕೂಡ ಅನೇಕ ಶಿಷ್ಯರನ್ನು ತಯಾರುಗೊಳಿಸುವ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ.

ಈ ವರ್ಷ ಪಂಡಿತ್ ರಾಮಭಾವು ಬಿಜಾಪುರೆಯವರ ಜನ್ಮ ಶತಮಾನೋತ್ಸವ. ಈ ಜನ್ಮ ಶತಮಾನೋತ್ಸವದ ಉದ್ಘಾಟನೆ ಅವರ ಹುಟ್ಟೂರಾದ ಕಾಗವಾಡದಲ್ಲಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪವಿತ್ರ ಹಸ್ತದಿಂದ ಆಯಿತು. ಇದರ ಅಂಗವಾಗಿ ಅವರು ಕಳೆದ ಎರಡು ತಿಂಗಳಿನಿಂದ ಅಮೆರಿಕಕ್ಕೆ ಭೇಟಿ ನೀಡಿ ಅಲ್ಲಿ ಸುಮಾರು ಹದಿನೈದು ಸ್ವತಂತ್ರ ಕಾರ್ಯಕ್ರಮಗಳನ್ನು ನೀಡಿ ತನ್ನ ಪ್ರವಾಸದ ಕೊನೆಯ ಅಂಗವಾಗಿ ಸಿಂಗಪುರಕ್ಕೆ ಬಂದಿದ್ದರು.

ಇಲ್ಲಿನ ಪ್ರತಿಷ್ಠಿತ ಟೆಂಪಲ್ ಆಫ್ ಫೈನ್ ಆರ್ಟ್ಸ್ ನಲ್ಲಿ ಕಾರ್ಯಕ್ರಮ ನೀಡಿ, ಅಲ್ಲಿನ ನುರಿತ ಶ್ರೋತೃಗಳ ಮೆಚ್ಚುಗೆ ಗಳಿಸಿದರು. ನಂತರ ನನ್ನ ಮನೆಯಲ್ಲೊಂದು ಚಿಕ್ಕ ಬೈಠಕ್ ಕೂಡ ನಡೆಸಿಕೊಟ್ಟರು. ರಾಗ ಶಾಮ ಕಲ್ಯಾಣದಲ್ಲಿ ಖಯಾಲ್ ಮತ್ತು ಠುಮ್ರಿ, ಟಪ್ಪಾಗಳಲ್ಲದೇ ಅನೇಕ ಪ್ರಸಿದ್ಧ ಭಜನೆಗಳನ್ನು ಕೂಡ ನುಡಿಸಿ ಶ್ರೋತೃಗಳ ಮನ ಸೂರೆಗೊಂಡರು. ಸಿಂಗಪುರದಲ್ಲಿ ಅವರು ಕಳೆದ ಒಂದು ವಾರ ನನ್ನ ಮಟ್ಟಿಗೆ ಅವಿಸ್ಮರಣೀಯ. ಅವರ ಮಹತ್ಕಾರ್ಯದಲ್ಲಿ ಚಿಕ್ಕದೊಂದು ಪಾತ್ರ ವಹಿಸಿದ್ದು ನನಗೆ ಸಂತೃಪ್ತಿಯ ವಿಷಯ.

ಅವರ ಕಾರ್ಯ ಹೀಗೆಯೇ ಮುಂದುವರೆದು ಸಂವಾದಿನಿ (ಹಾರ್ಮೋನಿಯಂ) ಕೇವಲ ಸಹ ವಾದಿನಿಯಾಗಿ ಉಳಿಯದೇ, ಒಂದು ಸ್ವತಂತ್ರ ಮತ್ತು ಘನತೆಯ ವಾದ್ಯವಾಗಿ ಬೆಳೆಯಲಿ ಎಂಬುದು ನನ್ನ ಮಹದಾಸೆ ಕೂಡ. ಸಂವಾದಿನಿಯ ಮೂಲಕ ಹೊರಹೊಮ್ಮುವ ಸ್ವತಂತ್ರ ಸ್ವರಗಳು ವಿಶ್ವದಾದ್ಯಂತ ಪಸರಿಸಿ ಸಂಗೀತ ಪ್ರಪಂಚದಲ್ಲಿ ಹೊಸದೊಂದು ಪರಿಮಳ ಬೀರುವ ಪುಷ್ಪಗಳಾಗಲಿ ಎಂಬ ಆಶಯದೊಂದಿಗೆ ಶುಭ ಕೋರಿ ಅವನನ್ನು ಇಂದು ಬೀಳ್ಕೊಡುತ್ತಿದ್ದೇನೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belagavi has groomed many hindustani musical maestros including Rambhau Bijapure, pandit Bhimsen Joshi, Abdul Karim Khan etc. Vasant Kulkarni remembers the Indian harmonium player in the Hindustani Classical tradition, R K Bijapure, whose birth centenary is being celebrated this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more