• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಲಾ ದಿನಗಳ ನೆನಪಿನ ಜಾಡಿನಲ್ಲಿ ಸಂಕೇಶ್ವರದತ್ತ ಪಯಣ

By ವಸಂತ ಕುಲಕರ್ಣಿ, ಸಿಂಗಪುರ
|

ಸಂಕೇಶ್ವರ ಬಿಟ್ಟ ಮೇಲೆಯೂ ಅನೇಕ ದಿನಗಳವರೆಗೆ ಸಂಕೇಶ್ವರವನ್ನು ನಾವು ನೆನೆಸಿಕೊಳ್ಳುತ್ತಿದ್ದೆವು. ಅಪ್ಪ ಅನೇಕ ಬಾರಿ ಸಂಕೇಶ್ವರದಲ್ಲಿಯ ತನ್ನ ಮಿತ್ರರ ನೆನಪು ತೆಗೆದು ಅಲ್ಲಿಗೊಮ್ಮೆ ಹೋಗಬೇಕು ಎಂದು ಹೇಳುತ್ತಿದ್ದರು.

ಈ ಬಾರಿ ಭಾರತಕ್ಕೆ ಹೋದಾಗ ಎಲ್ಲರೂ ಕೂಡಿ ಸಂಕೇಶ್ವರಕ್ಕೆ ಹೋಗಬೇಕೆಂದು ನಿಶ್ಚಯ ಮಾಡಿದ್ದೆ. ಅಂತೆಯೇ ಬೆಳಗಾವಿಯುನ್ನು ತಲುಪಿದ ಮರುದಿನವೇ ಅಣ್ಣ ಮತ್ತು ತಂಗಿಯರಿಗೆ ಈ ಬಾರಿ ಸಂಕೇಶ್ವರಕ್ಕೆ ಹೋಗೋಣ ಎಂದು ಹೇಳಿದೆ. ಅವರೂ ಖುಷಿಯಿಂದ ಒಪ್ಪಿದರು. ಭಾನುವಾರದ ದಿನ ಮಧ್ಯಾಹ್ನ ಹನ್ನೆರಡೂವರೆಗೆ ನಾವೆಲ್ಲ ಬೆಳಗಾವಿಯನ್ನು ಬಿಟ್ಟೆವು. ಬೆಂಗಳೂರು ಪುಣೆ ಹಾಯ್ ವೇ ತಲುಪಿದ ಗಾಡಿ ಭರದಿಂದ ಸಂಕೇಶ್ವರದತ್ತ ಓಡಿತು. ಸುತ್ತಲಿನ ಗುಡ್ಡಗಳ ನಡುವಿನ ಕಣಿವೆಯಲ್ಲಿ ಚಾಚಿ ಬಿದ್ದ ಅಂತ್ಯವಿರದ ರಸ್ತೆಯಿಂದ ಕಂಡಿದ್ದು ಎಂದಿನಂತೆ ಹಸಿರು ತುಂಬಿದ ಗುಡ್ಡಗಳು. ಮೊದಲೊಮ್ಮೆ ಮಾನವನ ಚಟುವಟಿಕೆಗಳಿಂದ ಮುಕ್ತವಾಗಿದ್ದ ಈ ಗುಡ್ಡಗಳ ಮೇಲೆ ಮಾನವನ ಅತಿಕ್ರಮಣದ ಕುರುಹಾಗಿ ಅನೇಕ ಗಾಳಿಗಿರಣಿಗಳು ಕಂಡು ಬಂದವು.

ಕಿತ್ತೂರು ರಾಣಿ ಚೆನ್ನಮ್ಮನ ತವರೂರಾದ ಕಾಕತಿಯನ್ನು ದಾಟಿ, ವಂಟಮೂರಿಯ ಘಟ್ಟವನ್ನು ತಲುಪಿದ ತಕ್ಷಣ ಉತ್ಸಾಹದಿಂದ ಮಗನಿಗೆ ಇಷ್ಟರಲ್ಲೇ ಘಟಪ್ರಭಾ ನದಿ ಬರುತ್ತದೆ. ಫೋಟೋಗಳನ್ನು ಕ್ಲಿಕ್ಕಿಸು ಎಂದು ಹೇಳಿದೆ. ಘಟಪ್ರಭಾ ನದಿ ಮತ್ತು ಸುತ್ತಲಿನ ಗುಡ್ಡಗಳನ್ನು ನೋಡಿದ ನನ್ನ ಮಗಳು ಇಂತಹ ರಮಣೀಯ ಸ್ಥಳವೇನಾದರೂ ಸಿಂಗಪುರಲ್ಲಿದ್ದರೆ ದೊಡ್ಡ ಪ್ರವಾಸಿ ತಾಣವಾಗಿ ಮಾರ್ಪಡುತ್ತಿತ್ತು ಎಂದಳು. ಮನಸ್ಸಿನಲ್ಲಿಯೇ "ಹೌದಲ್ಲ? ನಮಗೆ ಹೊಳೆದಿರಲೇ ಇಲ್ಲ" ಎನಿಸಿತು. ಮರುಕ್ಷಣದಲ್ಲಿಯೇ "ಈ ತಾಣಗಳು ಹಾಗೆಯೇ ಉಳಿದರೇ ಸರಿ, ಇಲ್ಲದಿದ್ದರೆ ಗಲೀಜಿನ ತವರಾಗುತ್ತದೆ" ಎಂದುಕೊಂಡೆ. ಮುಂದಿನ ಅರ್ಧಗಂಟೆಯಲ್ಲಿ ಗಾಡಿ ಸಂಕೇಶ್ವರ ಪ್ರವೇಶಿಸಿತು. ಪೇಟೆಯಲ್ಲಿದ್ದ ವಿಠ್ಠಲ ದೇವರ ಗುಡಿಯ ಮುಂದೆ ನಿಲ್ಲಿಸಿ ಫೋಟೋಗಳನ್ನು ತೆಗೆದುಕೊಂಡೆವು. ಗುಡಿ ಇಂದಿಗೂ ಹಾಗೆಯೇ ಇದೆ, ಏನೇನೂ ಬದಲಾಗಿಲ್ಲ ಎನಿಸಿತು. ನಂತರ ಮುಂದುವರೆದು ಅಲ್ಲಿನ ಮಠ ಗಲ್ಲಿಯಲ್ಲಿರುವ ಇತಿಹಾಸ ಪ್ರಸಿದ್ಧ ಶಂಕರಲಿಂಗ ದೇವಸ್ಥಾನ ಮತ್ತು ಶಂಕರ ಮಠವನ್ನು ತಲುಪಿದೆವು.

ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ

ಶಂಕರಲಿಂಗ ದೇವಸ್ಥಾನ ತುಂಬಾ ಹಳೆಯದು ಮತ್ತು ಐತಿಹಾಸಿಕವಾದದ್ದು. ಶಂಕರಲಿಂಗ ದೇವಸ್ಥಾನ ಕ್ರಿ ಶ 980ರಲ್ಲಿ ಕಲ್ಯಾಣಿ ಚಾಲುಕ್ಯರ ಸಾಮಂತರಾದ ಸುಗಂಧವರ್ತಿ (ಸವದತ್ತಿ)ಯ ರಟ್ಟರ ದೊರೆ ಮೊದಲನೇ ಕಾರ್ತವೀರ್ಯನ ಕಾರ್ಯಕಾಲದಲ್ಲಿ ಕಟ್ಟಲ್ಪಟ್ಟಿತು ಎಂದು ತಿಳಿದುಬಂದಿದೆ. ಇದೇ ಬೀದಿಯಲ್ಲಿರುವ ಇನ್ನೊಂದು ಐತಿಹಾಸಿಕ ಗುಡಿ ಲಕ್ಷ್ಮೀನಾರಾಯಣ ಗುಡಿ. ಇದು ಕೂಡ ರಟ್ಟರ ಕಾಲದ ದೇವಸ್ಥಾನ ಎಂದು ತಿಳಿದುಬಂದಿದೆ. ಎರಡೂ ಗುಡಿಗಳು ಕದಂಬರ ಸೋಪಾನ ಶೈಲಿಯಲ್ಲಿ ಕಟ್ಟಿದಂತಹ ಗುಡಿಗಳು. ಸರಳವಾದ ಮತ್ತು ಮೇಲೆ ಹೋದಂತೆ ಕಿರಿದಾಗುತ್ತ ಸಾಗುವ ಗುಡಿಯ ಶಿಖರಗಳು ಮತ್ತು ಅಷ್ಟೇನೂ ಕ್ಲಿಷ್ಟವಲ್ಲದ ಶಿಲ್ಪಗಳು ಈ ಸೋಪಾನ ಶೈಲಿಯ ವೈಶಿಷ್ಟ್ಯಗಳು.

ಶಂಕರಲಿಂಗ ದೇವಸ್ಥಾನದ ಪ್ರಾಂಗಣದಲ್ಲಿಯೇ ಅದಿ ಶಂಕರಾಚಾರ್ಯರು ಸ್ಥಾಪಿಸಿದ ಶಂಕರ ಮಠವಿದೆ. ದೇಶದ ನಾಲ್ಕೂ ದಿಕ್ಕುಗಳಲ್ಲಿ ಎಂದರೆ ಉತ್ತರಾಖಂಡದ ಜ್ಯೋತಿರ್ಮಠ, ಗುಜರಾತಿನ ದ್ವಾರಕಾ ಪೀಠ, ಕರ್ನಾಟಕದ ಶೃಂಗೇರಿ ಮತ್ತು ಓಡಿಶಾದ ಗೋವರ್ಧನ ಮಠಗಳು ನಾಲ್ಕು ವೇದಗಳಾದ ಅಥರ್ವ ವೇದ, ಸಾಮವೇದ, ಯಜುರ್ವೇದ ಮತ್ತು ಋಗ್ವೇದಗಳನ್ನು ಕ್ರಮವಾಗಿ ಪ್ರತಿನಿಧಿಸುವ ಮಠಗಳನ್ನು ಸ್ಥಾಪಿಸಿದ ಆದಿ ಶಂಕರಾಚಾರ್ಯರು, ಸಂಕೇಶ್ವರದಲ್ಲಿ ಮಾತ್ರ ಶಾಖಾ ಮಠವನ್ನು ಸ್ಥಾಪಿಸಿದ್ದರು ಎಂದು ತಿಳಿದುಬಂದಿದೆ.

ಕನಸಾಗಿಯೇ ಉಳಿದ ವೈಜ್ಞಾನಿಕ ಸಂಶೋಧಕನಾಗಬೇಕೆಂಬ ಕನಸು!

ನಾವು ತಲುಪಿದಾಗ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಅರ್ಚಕರು ದೇವಸ್ಥಾನದ ಬಾಗಿಲು ಹಾಕಿಕೊಂಡು ಹೊರಟು ಹೋಗಿದ್ದರು. ಮಠದ ಆಫೀಸಿಗೆ ಹೋಗಿ ಕೇಳಿಕೊಂಡ ನಂತರ ಅಲ್ಲಿನ ಕಾರ್ಯಕರ್ತರು ನಮಗಾಗಿ ದೇವಸ್ಥಾನದ ಬಾಗಿಲು ತೆಗೆದು ದೇವರ ದರ್ಶನಕ್ಕೆ ಅವಕಾಶ ನೀಡಿದರು. ನಾನು ದೇವಸ್ಥಾನದ ಪ್ರಾಂಗಣದಲ್ಲಿ ಹೆಚ್ಚಿನ ಮಾಹಿತಿಗಾಗಿ ಹುಡುಕಿದೆ. ಆದರೆ ಏನೂ ದೊರಕಲಿಲ್ಲ. ಕಾರ್ಯಕರ್ತರಿಗೆ ಕೇಳಿದೆ. ಅವರು ಎಲ್ಲ ಮಾಹಿತಿ ಮಠದ ಶ್ರೀಗಳ ಹತ್ತಿರ ಮಾತ್ರ ದೊರಕುವದು. ಆದರೆ ಶ್ರೀಗಳು ಈಗ ಯಾತ್ರೆಯಲ್ಲಿದ್ದಾರೆ ಎಂದು ತಿಳಿಸಿದರು. ನನಗೆ ಸ್ವಲ್ಪ ನಿರಾಶೆಯಾಯಿತು. ಇಂತಹ ಐತಿಹಾಸಿಕ ಸ್ಮಾರಕಗಳ ಬಗ್ಗೆ ಯಾವ ಮಾಹಿತಿಯನ್ನು ಕೂಡ ಪ್ರವಾಸಿಗರಿಗಾಗಿ ಇಟ್ಟಿರದ ನಮ್ಮ ಪುರಾತತ್ವ ಇಲಾಖೆಯ ಕಾರ್ಯವೈಖರಿಯನ್ನು ನೋಡಿ ಪಿಚ್ಚೆನಿಸಿತು.

ಮಠದ ಹಿಂದಿನ ಹಿರಣ್ಯಕೇಶಿ ನದಿಯನ್ನು ನೋಡಲು ಹೋದಾಗ ಮತ್ತೆ ನಿರಾಶೆ ಕಾದಿತ್ತು. ನದಿಯ ಆಚೆಗಿನ ಬಿದಿರ ಮೆಳೆಗಳೆಲ್ಲಾ ಮಾಯವಾಗಿದ್ದವು. ನದಿಯ ಆಚೆ ತೀರಕ್ಕೆ ಹಾಯ್ ವೇ ನಿರ್ಮಾಣವಾಗಿ, ಒಂದೊಮ್ಮೆ ಮೌನದ ಅಂಗಳವಾದ ನದೀ ತೀರ ಇಂದು ವಾಹನಗಳ ಸದ್ದಿನಿಂದ ಗಲಾಟೆ ಗದ್ದಲಗಳ ಗೂಡಾಗಿತ್ತು. ಸ್ವಚ್ಛ ಮರಳಿದ್ದ ನದಿಯ ತೀರ ಇಂದು ಪ್ಲಾಸ್ಟಿಕ್ ಬ್ಯಾಗುಗಳು ಮತ್ತು ಬಾಟಲುಗಳ ತಿಪ್ಪೆಯಾಗಿತ್ತು. ಕೆಸರು ನದೀ ತೀರದುದ್ದಕ್ಕೂ ಹರಡಿ ಸ್ವಲ್ಪ ಮಟ್ಟಿಗೆ ದುರ್ವಾಸನೆ ಹರಡಿತ್ತು. ಬೇಸಿಗೆ ಕಾಲದಲ್ಲಿ ನಾವು ನೀರು ತರುತ್ತಿದ್ದ ಒರತೆ ನೀರಿದ್ದುದರಿಂದ ಕಾಣಲಿಲ್ಲ. ಆದರೆ ಅದು ಈಗ ನದಿಯ ಮೇಲಿನ ಸೇತುವೆಯ ಕೆಳಭಾಗದಲ್ಲಿರಬಹುದೆಂಬ ಅಂದಾಜು ಮಾಡಿದೆ. ಆದರೆ ಈ ಕೆಸರಿನಲ್ಲಿ ಅಲ್ಲಿಯವರೆಗೆ ಯಾರು ಮತ್ತು ಹೇಗೆ ಹೋಗುತ್ತಾರಪ್ಪ ಎನಿಸಿತು.

'ನಾನು' ಎಂಬ ಅಹಂಕಾರದ ಮಿಥ್ಯೆಯ ಕತ್ತಲೆ, ಮಾಯದ ಪರದೆ!

ಅಲ್ಲಿಂದ ಮುಂದೆ ನಾವು ಕಣಗಲಾ ಗ್ರಾಮದ ವೆಂಕಟೇಶ ದೇವಸ್ಥಾನಕ್ಕೆ ಹೊರಟೆವು. ಹಾದಿಯಲ್ಲಿಯೇ ಹಿಂದೆ ನಾವು ಕಲಿಯುತ್ತಿದ್ದ ಶ್ರೀ ದುರದುಂಡೀಶ್ವರ ಪ್ರೌಢಶಾಲೆಯನ್ನು ನೋಡಿ ತುಂಬಾ ಖುಷಿಯಾಯಿತು. ಶಾಲೆಯ ಹಿಂದಿನ ಹರಗಾಪುರದ ಗುಡ್ಡಗಳು, ಅಲ್ಲಿ ಭವ್ಯವಾಗಿ ಎದ್ದು ಕಾಣುವ ಶಿವಾಜಿ ಮಹಾರಾಜರ ಕಾಲದ ವಲ್ಲಭಗಡದ ವಿಹಂಗಮ ನೋಟ ನಮ್ಮ ಬಾಲ್ಯದ ದಿನಗಳ ನೆನಪುಗಳನ್ನು ಮರುಕಳಿಸಿತು. ಕಣಗಲಾದ ವೆಂಕಟೇಶದೇವರ ಮೂರ್ತಿ ತುಂಬಾ ಸೌಮ್ಯವಾದ ಮಂಗಳ ಮೂರ್ತಿ. ಮೂವತ್ತೈದು ವರ್ಷಗಳ ನಂತರ ಕೂಡ ಅಲ್ಲಿನ ಅರ್ಚಕರು ನಮ್ಮನ್ನು ಗುರುತಿಸಿದರು. ಆಗ ನಾವೆಲ್ಲ ತುಂಬಾ ಚಿಕ್ಕವರು. ಅರ್ಚಕರು ಕೂಡ ಹದಿವಯಸ್ಸಿನವರಾಗಿರಬೇಕು. ನನಗೆ ಆಶ್ಚರ್ಯವಾಯಿತು.

ಅಲ್ಲಿಂದ ಹೊರಟು ನಾವು ಮತ್ತೆ ಸಂಕೇಶ್ವರಕ್ಕೆ ಬಂದೆವು. ಕುಲಕರ್ಣಿ ಟೀಚರ್ ಮನೆಗೆ ಹೋದೆವು. ಫೋನ್ ಮಾಡಿ ಮೊದಲೇ ತಿಳಿಸಿದ್ದರಿಂದ ಅವರು ನಮಗೆ ಅವರ ಮನೆ ತಲುಪುವ ಮಾರ್ಗವನ್ನು ಹೇಳಿಕೊಟ್ಟರು. ನಮ್ಮನ್ನು ನೋಡಿ ಅವರಿಗೆ ತುಂಬಾ ಆನಂದವಾಯಿತು. ಉಭಯ ಕುಶಲೋಪರಿಯಾದ ನಂತರ ಅವರು ನನ್ನ ಲೇಖನವನ್ನು ಓದಿದ ನಂತರ ಅವರಿಗೆ ಬರೆಯುವ ಸ್ಫೂರ್ತಿ ಬಂದಿತು ಮತ್ತು ನಾಲ್ಕು ಲೇಖನಗಳನ್ನು ಬರೆದಿದ್ದೇನೆ ಎಂದು ಹೇಳಿ ಒಂದು ಲೇಖನವನ್ನು ಓದಿ ಹೇಳಿದರು. ಅವರ ಅನುಭವಪೂರ್ವಕ ನುಡಿಗಳಿಂದ ನಾವೆಲ್ಲ ಭಾವುಕರಾದೆವು.

ಅಪ್ರತಿಮ ಸೇನಾನಿ ಲಚಿತ್ ಬೋರ್ ಫುಕಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಕುಲಕರ್ಣಿ ಟೀಚರ್ ಮತ್ತು ಅವರ ಪತಿ ಶ್ರೀಯುತ ಸಬನೀಸ್ ಅವರ ಆಶೀರ್ವಾದ ಪಡೆದುಕೊಂಡು ಅವರಿಂದ ಬೀಳ್ಕೊಟ್ಟು ನಿಡಸೋಸಿಯ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದತ್ತ ಹೊರಟೆವು. ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠ ಅರಭಾವಿಯ ದುರದುಂಡೀಶ್ವರ ಮಠದ ಶಾಖಾ ಮಠ ಎಂದು ತಿಳಿದು ಬರುತ್ತದೆ. ಈ ಮಠದ ಮೂಲ ಕರ್ತೃವಾದ ಶ್ರೀ ಆದಿ ನಿಜಲಿಂಗೇಶ್ವರ ಸ್ವಾಮಿಗಳು ಅರಭಾವಿಯ ಸಂತ ದುರದುಂಡೀಶ್ವರ ಸ್ವಾಮಿಗಳ ಶಿಷ್ಯರು. ಶ್ರೀ ಆದಿ ನಿಜಲಿಂಗೇಶ್ವರ ಸ್ವಾಮಿಗಳು ಹದಿನೆಂಟನೆಯ ಶತಮಾನದವರು. ಅವರು ಸ್ಥಾಪಿಸಿದ ಈ ಮಠಕ್ಕೆ ವೀರಶೈವರಲ್ಲದೇ ಇತರರೂ ಭಯ ಭಕ್ತಿಗಳಿಂದ ನಡೆದುಕೊಳ್ಳುತ್ತಾರೆ. ಸಂಕೇಶ್ವರ ಪ್ರಾಂತ್ಯದ ಎಲ್ಲ ಜನರ ಶ್ರದ್ಧಾಕೇಂದ್ರ ಈ ಮಠ. ಈ ಮಠಕ್ಕೆ ಕೊಲ್ಹಾಪುರದ ಛತ್ರಪತಿ ರಾಜಮನೆತನದವರೂ ಮತ್ತು ಸಾಂಗಲಿಯ ಪಟವರ್ಧನ ರಾಜಮನೆತನದವರೂ ಶ್ರೀಮಠಕ್ಕೆ ಗೌರವ ಸಲ್ಲಿಸುತ್ತ ಬಂದಿದ್ದಾರೆ.

ಶ್ರೀ ಮಠದ ಪ್ರಾಂಗಣದಲ್ಲಿಯ ಪುರಾತನ ಸಂಸ್ಕೃತ ಪಾಠಶಾಲೆ ಇಂದಿಗೂ ನಡೆಯುತ್ತ ಬಂದಿದೆ. ಭವ್ಯವಾದ ಈ ಮಠದ ಭೇಟಿ ಚಿಕ್ಕಂದಿನ ನೆನಪುಗಳನ್ನು ತಾಜಾ ಮಾಡಿತು. ಕೆಲವು ಬಾರಿ ಸಂಕೇಶ್ವರದಿಂದ ಈ ಮಠಕ್ಕೆ ನಾನು ನನ್ನ ಮಿತ್ರರೊಂದಿಗೆ ನಡೆದೇ ಬರುತ್ತಿದ್ದೆ. ಶ್ರೀ ಮಠದಲ್ಲಿ ದೇವರ ದರ್ಶನ ಪಡೆದು, ಊಟ ಮುಗಿಸಿ ಸಂಕೇಶ್ವರಕ್ಕೆ ತಿರುಗಿ ಹೋಗುತ್ತಿದ್ದೆವು. ಸುತ್ತಮುತ್ತಲಿನ ಹಚ್ಚ ಹಸಿರು ಕಡಲೆ, ತಂಬಾಕು, ಮೆಣಸಿನಕಾಯಿ ಮತ್ತು ಕಬ್ಬಿನ ಗದ್ದೆಗಳನ್ನು ನೋಡುತ್ತಾ ನಡೆಯುತ್ತಿದ್ದರೆ ಹಾದಿ ಸವೆದದ್ದು ತಿಳಿಯುತ್ತಲೇ ಇರಲಿಲ್ಲ.

ಶ್ರೀಮಠದ ದೇವರ ದರ್ಶನ ಪಡೆದು ನಮ್ಮ ಗಾಡಿ ಬೆಳಗಾವಿಯತ್ತ ಮುಖ ಮಾಡಿದಾಗ ಮುಸ್ಸಂಜೆಯ ಮಬ್ಬು ಕವಿದಿತ್ತು. ನಮ್ಮೆಲ್ಲರ ಮುಖಗಳಲ್ಲಿ ಪ್ರಸನ್ನತೆ ಒಡಮೂಡಿತ್ತು. ನಮ್ಮೆಲ್ಲರನ್ನೂ ನೋಡಿ ಖುಷಿಯಿಂದ ಮುಗುಳ್ನಕ್ಕ ಕುಲಕರ್ಣಿ ಟೀಚರ್ ದಂಪತಿಗಳ ನಗು ಮುಖ ಮತ್ತೊಮ್ಮೆ ನನ್ನ ಕಣ್ಣ ಮುಂದೆ ಮರುಕಳಿಸಿತು. ಮತ್ತೊಮ್ಮೆ ಮಗದೊಮ್ಮೆ ಇತ್ತ ಬರುವ ಇಚ್ಛೆಯೂ ತೀವ್ರವಾಗಿ ಉಂಟಾಯಿತು. ಮುಂದೆ ಮತ್ತೆ ಅಂತಹ ದಿನ ಎಂದು ಬರುತ್ತದೋ ಗೊತ್ತಿಲ್ಲ.

English summary
Sankeshwar travelogue. Refreshing memories of childhood days in Sankeshwar in Belagavi district. Vasant Kulkarni from Singapore writes about the city where he spent his childhood and religious and historical places it has.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more