• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮನುಷ್ಯನ ವೈಚಾರಿಕ ಜಗತ್ತನ್ನು ಶ್ರೀಮಂತಗೊಳಿಸಿದ ನಾಸ್ತಿಕ ಸಿದ್ಧಾಂತ

By ವಸಂತ ಕುಲಕರ್ಣಿ, ಸಿಂಗಪುರ
|

ನಾನು ಚಿಕ್ಕವನಿರುವಾಗ ನಮಗೆ ಗೊತ್ತಿದ್ದ ಹಿರಿಯರೊಬ್ಬರು ನಾಸ್ತಿಕರಾಗಿದ್ದರು. ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದು ಬಂದ ನಮ್ಮ ಮನೆಯಲ್ಲಿ ಆ ಹಿರಿಯರು ಎಂದರೆ ತಿರಸ್ಕಾರ. "ಓ ಅವರಾ? ಅವರೊಬ್ಬ ನಾಸ್ತಿಕ ಶಿಖಾಮಣಿ" ಎಂದು ರಾಗವೆಳೆದು ಅವರ ಪ್ರಭಾವದಿಂದ ದೂರವಿರುವುದೇ ನಮಗೆ ಶ್ರೇಯಸ್ಕರ ಎಂಬುದು ಮನೆಯವರ ಸಲಹೆ.

ಅವರ ವಾದಗಳನ್ನು ಯಾರೂ ಕೇಳುತ್ತಲೇ ಇರಲಿಲ್ಲ. ಬಹುತೇಕ ಜನರಿಗೆ ಅವರ ಬಗ್ಗೆ ಒಂದು ಬಗೆಯ ಅಸಡ್ಡೆ ಅಥವಾ ಇತರರನ್ನು ಕೂಡ ತಮ್ಮಂತೆ ನಾಸ್ತಿಕರನ್ನಾಗಿ ಮಾಡಬಹುದೆಂಬ ಅಂಜಿಕೆ ಇತ್ತು ಅಷ್ಟೇ. ಆದರೆ ಚಾರ್ವಾಕ ಎಂಬ ನಿರೀಶ್ವರವಾದಿಯ ಹೆಸರನ್ನು ನಮ್ಮ ಸಂಪ್ರದಾಯಸ್ಥ ಮನೆಯವರಿಂದಲೇ ಕೇಳಿದ್ದು.

ರಾಮಾಯಣ ಮಹಾಭಾರತ ಬಿಂಬಿಸುವ ಬೋರೋಬುದುರ್ ದೇಗುಲ

ನಾಸ್ತಿಕ ವಾದ ನಮ್ಮ ಈಗಿನ ಬುದ್ಧಿಜೀವಿಗಳಿಂದ ಅಥವಾ ಅವರ ಸಾಂಸ್ಕೃತಿಕ ಪಿತನಾದ ಕಾರ್ಲ್ ಮಾರ್ಕ್ಸ್ ನಿಂದ ಉತ್ಪನ್ನವಾದದ್ದಲ್ಲ. ಈಗಿನ ಅನೇಕ ನಾಸ್ತಿಕರು ಕಾರ್ಲ್ ಮಾರ್ಕ್ಸ್ ಮತ್ತು ಅವನ ಕಮ್ಯೂನಿಸ್ಟ್ ಸಿದ್ಧಾಂತವನ್ನು ನೆಚ್ಚಿದರೆ, ಇನ್ನಿತರರು ತೀವ್ರಗತಿಯಲ್ಲಿ ಬೆಳೆಯುತ್ತಿರುವ ಆಧುನಿಕ ವಿಜ್ಞಾನವನ್ನು ತಮ್ಮ ನಾಸ್ತಿಕ ವಿಚಾರವಾದಕ್ಕೆ ಮೂಲ ಕಾರಣ ಎಂದು ಹೇಳುತ್ತಾರೆ.

ಇಂದು ದೈತ್ಯಾಕಾರವಾಗಿ ಬೆಳೆದು ನಿಂತ ಸಂಪರ್ಕ ಮಾಧ್ಯಮಗಳಿಂದ ಅನೇಕ ಬಗೆಯ ವಿಚಾರಗಳು ಮತ್ತು ವೈಚಾರಿಕ ಪರಂಪರೆಗಳು ಪರಸ್ಪರ ವಿನಿಮಯಗೊಳ್ಳುತ್ತಿವೆ ಮತ್ತು ಹರಡುತ್ತಿವೆ. ಅವುಗಳಲ್ಲಿ ನಾಸ್ತಿಕ ಪರಂಪರೆ ಕೂಡ ಒಂದು. ಆದರೆ ನಾಸ್ತಿಕತೆ ಕಮ್ಯೂನಿಸ್ಟ್ ಸಿದ್ಧಾಂತ ಮತ್ತು ವೈಜ್ಞಾನಿಕ ಪ್ರಗತಿಗಳಿಂದ ಮಾತ್ರ ಉತ್ಪನ್ನವಾದದ್ದಲ್ಲ. ನಾಸ್ತಿಕ ವಾದಗಳು ತಲೆತಲಾಂತರಗಳಿಂದ ನಾಗರಿಕ ಜೀವನದಲ್ಲಿ ಜಾರಿಯಲ್ಲಿವೆ.

ಕಾರ್ಲ್ ಮಾರ್ಕ್ಸ್ ಕೂಡ ತನ್ನ ವಿಚಾರಧಾರೆಯ ಮೂಲವನ್ನು ಪುರಾತನ ಗ್ರೀಕ್ ತತ್ವಜ್ಞಾನಿಗಳಾದ ಡೆಮೊಕ್ರಿಟಸ್ ಮತ್ತು ಎಪಿಕ್ಯುರಿಯಸ್ ಅವರ ವಿಚಾರಗಳಿಂದ ತೆಗೆದುಕೊಂಡಿದ್ದು ಎಂದು ಹೇಳಲಾಗಿದೆ. "ಈ ಜಗತ್ತು ಆದಿ ಅಂತ್ಯಗಳಿಲ್ಲದ ಅನಂತವಾದ ಸತ್ಯ. ಈ ಜಗತ್ತಿನ ಎಲ್ಲ ಘಟನೆಗಳು ಪರಮಾಣುಗಳ ಮತ್ತು ಅವಕಾಶ(Space)ದ ತಾಕಲಾಟದಿಂದ ಉಂಟಾಗುತ್ತವೆ. ಸಾವು ಒಂದು ಪರಮ ಸತ್ಯವಾಗಿದ್ದು ಅದು ದೇಹದ ಮತ್ತು ಆತ್ಮದ ಅಂತ್ಯವಾಗಿದ್ದು ಅದರ ಬಗ್ಗೆ ಯಾವುದೇ ಅಂಜಿಕೆ ಸಲ್ಲದು" ಎಂಬುದು ಈ ಗ್ರೀಕ್ ತತ್ವಜ್ಞಾನಿಗಳ ವಿಚಾರಧಾರೆಯಾಗಿತ್ತು.

ಸಂಕಷ್ಟ ಎದುರಾದಾಗ ಕೆಚ್ಚೆದೆಯಿಂದ ಹೋರಾಡುವುದೊಂದೇ ದಾರಿ!

ಎಪಿಕ್ಯೂರಿಯನ್ ವಿಚಾರಧಾರೆಯ ಪ್ರಕಾರ, ಈ ಜಗತ್ತು ಕೆಲವು ಸ್ವಾಭಾವಿಕ ನಿಯಮಗಳಿಂದ ನಡೆಯುತ್ತದೆ ಮತ್ತು ಅದರ ಆಗುಹೋಗುಗಳಲ್ಲಿ ದೇವರು ಆಸಕ್ತಿ ಹೊಂದಿರುವುದಿಲ್ಲ. ಮಾನವ ಜಗತ್ತು ಮತ್ತು ದೈವಿಕ ಜಗತ್ತಿನ ಸಂಬಂಧವನ್ನು ಎಪಿಕ್ಯೂರಿಯನ್ ತತ್ವಜ್ಞಾನ ಅಲ್ಲಗಳೆಯುತ್ತದೆ.

ಗ್ರೀಕ್ ಮತ್ತು ರೋಮನ್ ಯುಗಗಳ ನಂತರ ಯುರೋಪಿನಲ್ಲಿ ನಾಸ್ತಿಕವಾದ ಅಷ್ಟಾಗಿ ಬೆಳೆಯಲಿಲ್ಲ. ಬಹುಶಃ ಅದಕ್ಕೆ ತದ್ವಿರುದ್ಧವಾದ ಆಸ್ತಿಕ ಧರ್ಮದ ಸಾರ್ವತ್ರಿಕ ಬೆಳವಣಿಗೆ ಮತ್ತು ಸ್ವೀಕಾರ ಕಾರಣವಾಗಿರಬಹುದು. ಅಲ್ಲದೇ ಆಸ್ತಿಕತೆ ತೀವ್ರಗಾಮಿಯಾಗಿ ನಾಸ್ತಿಕತೆಯನ್ನು ಅಸಹನೀಯವೆಂದು ತೀರ್ಮಾನಿಸಿ ನಾಗರಿಕ ಜಗತ್ತಿನಿಂದ ಅದನ್ನು ದೂರಮಾಡಿತು. ಈ ಕಾರಣದಿಂದಲೇ ಗ್ಯಾಲಿಲಿಯೋ ಮತ್ತು ಕೋಪರ್ನಿಕಸ್ ಅವರಂತಹ ವಿಜ್ಞಾನಿಗಳ ಸತ್ಯ ಶೋಧನೆ ಕೂಡ ಅವರನ್ನು ಮತೀಯ ಜಗತ್ತಿನ ಕೆಂಗಣ್ಣಿಗೆ ಗುರಿ ಮಾಡಿತು. ಮತಾಂಧತೆ ನಾಸ್ತಿಕರನ್ನು ಹಿಂಸಿಸಿ ನಾಸ್ತಿಕವಾದವನ್ನು ಮಟ್ಟ ಹಾಕಿತು.

ಯಶಸ್ಸು ಅಂದ್ರೇನು? ಯಶಸ್ಸಿನ ಗುಟ್ಟು ಬಲ್ಲವರು ಯಾರು?

ಭಾರತದಲ್ಲಿ ನಿರೀಶ್ವರವಾದಕ್ಕೆ ನಾಂದಿ ಹಾಡಿದವನು ಚಾರ್ವಾಕ ಎಂದು ಪ್ರತೀತವಾಗುತ್ತದೆ. ಚಾರ್ವಾಕ ದರ್ಶನ ಎಪಿಕ್ಯೂರಿಯನ್ ತತ್ವದ ಹಾಗೆ ಮುಚ್ಚು ಮರೆಯ ನಿರೀಶ್ವರವಾದವಾಗಿರಲಿಲ್ಲ. ಅದು ಯಾವುದೇ ಲಜ್ಜೆಯಿರದ, ನಿಷ್ಠುರ ನಾಸ್ತಿಕವಾದವಾಗಿತ್ತು. ಅದರ ಪ್ರಕಾರ, ಪ್ರತ್ಯಕ್ಷ ಕಂಡಿದ್ದಷ್ಟೇ ಸತ್ಯ. ಯಾವುದು ಕಾಣುವುದಿಲ್ಲವೋ ಅದು ಮಿಥ್ಯೆ. ಹೀಗಾಗಿ ದೇವರು, ಆತ್ಮ ಮುಂತಾದವುಗಳನ್ನು ಚಾರ್ವಾಕ ದರ್ಶನ ಸ್ಪಷ್ಟವಾಗಿ ನಿರಾಕರಿಸುತ್ತದೆ. ಜಗತ್ತಿನ ಎಲ್ಲ ವಸ್ತುಗಳು ಪಂಚಭೂತಗಳಿಂದ ಮಾಡಲ್ಪಟ್ಟಿದ್ದು ಪಂಚಭೂತಗಳಲ್ಲಿ ಲೀನವಾಗುತ್ತವೆ. ಹೀಗಾಗಿ ಇರುವಷ್ಟು ದಿನ ಸುಖಪಡುವುದೊಂದೇ ಮಾನವನ ಗುರಿ ಎಂದು ಸಾರುತ್ತದೆ. ಚಾರ್ವಾಕ ವಾದವನ್ನು ಲೋಕಾಯತ ಎಂದೂ ಕರೆಯುತ್ತಾರೆ.

ಸಾಂಖ್ಯ ದರ್ಶನದ ಒಂದು ಅಂಗ ಕೂಡ ನಿರೀಶ್ವರವಾದಕ್ಕೆ ಪುಷ್ಟಿ ನೀಡುತ್ತದೆ. ಸಾಂಖ್ಯ ದರ್ಶನದ ಪ್ರಕಾರ, ಈ ಜಗತ್ತು ಪ್ರಜ್ಞೆ (ಪುರುಷ) ಮತ್ತು ಜಡದ್ರವ್ಯ (ಪ್ರಕೃತಿ)ಗಳಿಂದ ಮಾಡಲ್ಪಟ್ಟಿದೆ. ಜೀವ ಜಗತ್ತಿನ ಇರುವಿಕೆಯ ಮುಖ್ಯ ಕಾರಣವೇನೆಂದರೆ, ಅಪ್ಪಟ ಪ್ರಜ್ಞೆಯನ್ನು ಜಡದಿಂದ ಬೇರ್ಪಡಿಸಿ ಮುಕ್ತಿಯನ್ನು ಹೊಂದುವುದು ಎಂದು ಸಾಂಖ್ಯ ಪ್ರತಿಪಾದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ದೇವರಿಗೆ ಯಾವುದೇ ಸ್ಥಾನವಿಲ್ಲ, ಆದುದರಿಂದ ಸಾಂಖ್ಯ ದರ್ಶನ ನಿರೀಶ್ವರವಾದಕ್ಕೆ ಪುಷ್ಟಿ ನೀಡುತ್ತದೆ ಎಂದು ಕೆಲವರು ನಂಬುತ್ತಾರೆ.

ಅದರಂತೆಯೇ ಬುದ್ಧ ಮತ್ತು ಜೈನ ಧರ್ಮಗಳು ಕೂಡ ಸರ್ವಶಕ್ತ ಭಗವಂತನನ್ನು ನಿರಾಕರಿಸುತ್ತವೆ. ಜಗತ್ತಿನ ಮುಖ್ಯ ಅಂಶಗಳಾದ ಜೀವ, ಜಡ, ಸಮಯ, ಚಲನೆ ಮುಂತಾದವುಗಳು ನಿರಂತರವಾಗಿದ್ದು ಅವುಗಳು ಜಗತ್ತಿನ ಕೆಲವು ನಿಯಮಗಳಿಗೆ ಒಳಪಟ್ಟಿವೆ. ಇದರಲ್ಲಿ ಸರ್ವಶಕ್ತ ಭಗವಂತನಿಗೆ ಯಾವುದೇ ಪಾತ್ರವಿಲ್ಲ. ಜೀವಿಗಳು ಕೇವಲ ಜ್ಞಾನವನ್ನು ಪಡೆಯುವುದರ ಮೂಲಕ ಮುಕ್ತಿಯನ್ನು ಹೊಂದುವುದೇ ಪರಮ ಧ್ಯೇಯ ಎಂದು ಈ ಮತಗಳು ಪ್ರತಿಪಾದಿಸುತ್ತವೆ. ಭಾರತದಲ್ಲಿ ಚಾರ್ವಾಕ ಮತ್ತು ಸಾಂಖ್ಯ ದರ್ಶನಗಳು ಅವನತಿ ಹೊಂದಿದರೂ ಬೌದ್ಧ ಮಾತು ಜೈನ ಧರ್ಮಗಳು ಉಳಿದುಕೊಂಡವು. ಆದರೂ ಆಸ್ತಿಕ ಮತಗಳಷ್ಟು ಜನಪ್ರಿಯತೆ ಗಳಿಸಲಿಲ್ಲ. ಆದರೆ ಬೌದ್ಧ ಮತ ಭಾರತದಿಂದ ಹೊರಬಿದ್ದು ಜಪಾನ್, ಚೀನ, ಶ್ರೀಲಂಕಾ ಮತ್ತು ದಕ್ಷಿಣ ಪೂರ್ವ ದೇಶಗಳಲ್ಲೆಲ್ಲಾ ಹರಡಿ ಜನಪ್ರಿಯವಾಯಿತು.

ಆಧುನಿಕ ಯುಗ ಆರಂಭವಾದಂತೆ ಪಾಶ್ಚಿಮಾತ್ಯ ಜಗತ್ತಿನಿಂದ ವೈಜ್ಞಾನಿಕ ಮನೋಭಾವನೆ ಮತ್ತು ಕಮ್ಯೂನಿಸ್ಟ್ ಮುಂತಾದ Rationalist ವಿಚಾರಧಾರೆಗಳು ಭಾರತಕ್ಕೆ ಬಂದು ಇಲ್ಲಿ ಕೂಡ ಅನೇಕ ಹೊಸ ವೈಚಾರಿಕ ಶಾಖೆಗಳನ್ನು ಹುಟ್ಟು ಹಾಕಿದವು. ಸತ್ಯೇಂದ್ರನಾಥ ಬೋಸ್, ಪೆರಿಯಾರ್, ಸಾವರ್ಕರ್, ಭಗತ್ ಸಿಂಗ್ ಮುಂತಾದ ನಾಸ್ತಿಕತೆಯ ಪ್ರತಿಪಾದಕರು ಹೊಸ ಹೊಸ ವಿಚಾರಧಾರೆಗಳನ್ನು ಸೃಷ್ಟಿಸಿ ನಮ್ಮ ನೆಲದಲ್ಲಿ ವೈಚಾರಿಕ ಕ್ರಾಂತಿಯ ಪುನರುತ್ಥಾನಕ್ಕೆ ಕಾರಣರಾದರು.

ಹೀಗೆ ಒಟ್ಟಿನಲ್ಲಿ ನಾಸ್ತಿಕ ಪರ ವಾದಗಳು ಮಾನವನ ನಾಗರಿಕತೆಯ ಆರಂಭದಿಂದಲೇ ಹುಟ್ಟಿ ಬೆಳೆದು ಬಂದಿವೆ ಎಂದು ಹೇಳಬಹುದು. ನಾಸ್ತಿಕತೆ ಇಂದಿನ ಯುಗದಲ್ಲಿ ಒಂದು ಫ್ಯಾಶನ್ ಆಗಿರಬಹುದು. ಆದರೆ ನಾಗರಿಕ ಜಗತ್ತಿನಲ್ಲಿ ನಾಸ್ತಿಕತೆ ಒಂದು ತರ್ಕಬದ್ಧ ಪರ್ಯಾಯ ವೈಚಾರಿಕ ಪರಂಪರೆಯಾಗಿ ಬೆಳೆದುಬಂದಿದೆ. ಅದರ ತರ್ಕದಲ್ಲಿ ತಪ್ಪುಗಳಿರಬಹುದು ಅಥವಾ ಎಲ್ಲರಿಗೂ ಜೀರ್ಣವಾಗದ ಅಂಶಗಳಿರಬಹುದು. ಅದೇನೇ ಇದ್ದರೂ ಒಟ್ಟಿನಲ್ಲಿ ಮನುಷ್ಯನ ವೈಚಾರಿಕ ಜಗತ್ತನ್ನು ನಾಸ್ತಿಕ ಸಿದ್ಧಾಂತಗಳು ಶ್ರೀಮಂತಗೊಳಿಸಿವೆ. ಆಸ್ತಿಕತೆಯ ಉತ್ತುಂಗವನ್ನು ತಲುಪಲು ಮೆಟ್ಟಿಲುಗಳಾಗಿವೆ ಎಂದೇ ನನ್ನ ಭಾವನೆ.

ಜಿಜ್ಞಾಸುಗಳ ಅಧ್ಯಾತ್ಮ ಯಾತ್ರೆ ನಾಸ್ತಿಕತೆಯ ಮೆಟ್ಟಿಲುಗಳ ಮೇಲೆ ನಡೆದು ಅಧ್ಯಾತ್ಮದ ಉತ್ತುಂಗಕ್ಕೆ ಏರಿದರೆ ಅದರ ಬುನಾದಿ ಭದ್ರವಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ. ನಾಸ್ತಿಕತೆ ಮತ್ತು ಆಸ್ತಿಕತೆಗಳು ಅಧ್ಯಾತ್ಮದ ಎರಡು ವಿರುದ್ಧ ಧ್ರುವಗಳಾಗಿದ್ದು, ಇವೆರಡರ ಅರಿವು ಅಧ್ಯಾತ್ಮ ಪಥದಲ್ಲಿ ಮುಖ್ಯ ಎಂದೆನಿಸುತ್ತದೆ. ಆದುದರಿಂದಲೇ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರ ಪರಮತಗಳನ್ನು ಸಾಕಷ್ಟು ಮುತುವರ್ಜಿಯಿಂದ ಕಲಿಯುತ್ತಿದ್ದರು. ಹಿಂದೆ ಪರಮತಗಳ ವಿದ್ವಾಂಸರೊಂದಿಗೆ ಶಾಂತಿಪೂರ್ವಕ ಶಾಸ್ತ್ರಾರ್ಥ ನಡೆಸುತ್ತಿದ್ದರು. ಒಂದೇ ಮನೆಯಲ್ಲಿ ವಿವಿಧ ಮತಗಳನ್ನು ಪಾಲಿಸುತ್ತಿದ್ದ ಜನರಿರುತ್ತಿದ್ದರು. ಹೊಯ್ಸಳ ರಾಜ ವಿಷ್ಣುವರ್ಧನ ವೇದಾಂತ ದರ್ಶನವನ್ನು ಪಾಲಿಸುತ್ತಿದ್ದರೆ, ಅವನ ಪಟ್ಟದ ರಾಣಿ ಶಾಂತಲೆ ಜೈನ ದರ್ಶನವನ್ನು ಪಾಲಿಸುತ್ತಿದ್ದಳು. ಇದು ಮಧ್ಯಕಾಲದಲ್ಲಿ ನಮ್ಮ ದೇಶದಲ್ಲಿದ್ದ ಪ್ರಾಜ್ಞ ಪರಂಪರೆಯ ಉಚ್ಛ ಉದಾಹರಣೆ.

ದುರದೃಷ್ಟಾವಶಾತ್ ಕಾಲಕ್ರಮೇಣದಲ್ಲಿ ಈ ಪ್ರಾಜ್ಞ ಪರಂಪರೆ ಹೊರದೇಶಗಳಿಂದ ಬಂದ ಆಕ್ರಮಿಕ ಆಡಳಿತಗಾರದ ಕೆಂಗಣ್ಣಿಗೆ ಸಿಕ್ಕು ನಷ್ಟಗೊಂಡಿತು. ಆದರೆ ಈಗಲೂ ಕೂಡ ನಮ್ಮ ದೇಶದಲ್ಲಿ ಹೊಸ ವಿಚಾರಗಳನ್ನು, ವೈಜ್ಞಾನಿಕ ಪ್ರಜ್ಞೆಯನ್ನು ಆದರದಿಂದ ಸ್ವಾಗತಿಸುವುದಲ್ಲದೇ, ನಮ್ಮದೇ ಆದ ಉಚ್ಚ ಪರಂಪರೆಯನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೇ ಅಭ್ಯಸಿಸಿದರೆ, ಮತ್ತೊಮ್ಮೆ ಹಳೆಯ ಪ್ರಾಜ್ಞ ಪರಂಪರೆಯನ್ನು ಪುನರುಜ್ಜೀವನಗೊಳಿಸಬಹುದು ಎಂದೆನಿಸುತ್ತದೆ. ಹಾಗಾದರೆ ಅದೆಷ್ಟು ಒಳ್ಳೆಯದಲ್ಲವೇ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Atheism is the world's fastest growing new religion. Thought provoking write up on Atheism vs Antitheism by Vasant Kulkarni, Singapore in his Kannada column in Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more