• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರಳಯ : ಪರಿಸರವಾದಿ ಮತ್ತು ತಂತ್ರಜ್ಞಾನಿಗಳ ತಾಕಲಾಟ

By ವಸಂತ ಕುಲಕರ್ಣಿ, ಸಿಂಗಪುರ
|

ಪ್ರಳಯ ನಮ್ಮೆಲ್ಲರಿಗೂ ಅತ್ಯಂತ ರೋಮಾಂಚಕಾರಿ ಆದರೆ ಆಸಕ್ತಿಯ ವಿಷಯ. ನಾವೆಲ್ಲ ಯಾವಾಗಲೋ ಒಮ್ಮೆ ಪ್ರಳಯದ ಬಗ್ಗೆ ನಡೆದ ಚರ್ಚೆಗಳಲ್ಲಿ ಭಾಗವಹಿಸುತ್ತೇವೆ. 2012 ಎಂಬ ಇಂಗ್ಲಿಷ್ ಸಿನೆಮಾವನ್ನು ನಮ್ಮಲ್ಲನೇಕರು ನೋಡಿರುತ್ತೇವೆ. ಅದರಲ್ಲಿ ಸೂರ್ಯನ ಅಧಿಕ ಚಟುವಟಿಕೆಯಿಂದ ಉಂಟಾದ ಸೌರ್ಯ ವಿಕಿರಣದಿಂದ ಪೃಥ್ವಿಯ ಕೇಂದ್ರ ಹೆಚ್ಚು ಕಾದು ಅನೇಕ ಭೂಕಂಪಗಳು ಮತ್ತು ಸುನಾಮಿಗಳು ಉಂಟಾಗಿ ಪ್ರಳಯ ಉಂಟಾಗುತ್ತದೆ. ಆದರೆ ಇಂದು ಅನೇಕರ ಪ್ರಕಾರ ಬಾಹ್ಯ ಕಾರಣಗಳಿಗಿಂತ ಹೆಚ್ಚಾಗಿ ಅಂತರಿಕ ಚಟುವಟಿಕೆಗಳಿಂದಲೇ ಪ್ರಳಯ ಉಂಟಾಗುತ್ತದೆ ಎಂಬ ವಾದ ತೀವ್ರವಾಗಿದೆ.

ಮಾನವನ ಅತಿಯಾದ ಅಹಂನಿಂದ ಮತ್ತು ಭೌತವಾದದಿಂದ ನಮ್ಮ ಭೂಮಿಯ ಸಂಪನ್ಮೂಲಗಳ ಬಳಕೆ ಅತಿ ಹೆಚ್ಚಾಗಿದೆ. ಆದುದರಿಂದ ಈ ಅತಿ ಉಪಭೋಗ ಪ್ರವೃತ್ತಿಯಿಂದ ಜಗತ್ತಿನ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಿದೆಯಲ್ಲದೇ, ನಮ್ಮ ವಾತಾವರಣದ ಮೇಲೆ ತೀವ್ರ ಪರಿಣಾಮ ಉಂಟಾಗಿ ಇಂದು ಜಗತ್ತು ಪ್ರಳಯದತ್ತ ಹಿಂದೆಂದಿಗಿಂತಲೂ ವೇಗವಾಗಿ ಹೆಜ್ಜೆ ಹಾಕುತ್ತಿದೆ ಎಂಬ ವಾದ ಅನೇಕ ಪರಿಸರವಾದಿಗಳದ್ದು.

ಹೋಲ್ಡ್ ಆನ್, ಪ್ರಳಯದ ದಿನವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ

ಆದರೆ ಇನ್ನೊಂದು ಗುಂಪು ಈ ಪರಿಸರವಾದಿಗಳನ್ನು ವಿರೋಧಿಸುತ್ತದೆ. ಈ ಗುಂಪಿನ ಪ್ರಕಾರ, ಪರಿಸರವಾದಿಗಳದ್ದು ಅತಿಯಾದ ಭಯೋತ್ಪಾದನೆ! ಅದೇನೆ ಪರಿಸರದ ಸಮಸ್ಯೆ ಇದ್ದರೂ ಅದನ್ನು ವಿಜ್ಞಾನದ ಹೊಸ ಹೊಸ ಸಂಶೋಧನೆಗಳಿಂದ ಪರಿಹರಿಸಬಹುದು. ಆದುದರಿಂದ ಈ ಗುಂಪು ಭಾರಿಯಾದ ಕೈಗಾರಿಕಾ ಉತ್ಪಾದನೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಎಗ್ಗಿಲ್ಲದ ಬಳಕೆಯನ್ನು ಉತ್ತೇಜಿಸುತ್ತಿದೆ. ಈ ಗುಂಪಿನಲ್ಲಿ ಮಂಚೂಣಿಯಲ್ಲಿರುವವರು ಅನೇಕ ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು.

ಪರಿಸರವಾದಿಗಳು ಶರವೇಗದಿಂದ ಓಡುತ್ತಿರುವ ತಂತ್ರಜ್ಞಾನದ ಬೆಳವಣಿಗೆಯನ್ನು ನಿಯಂತ್ರಿಸಿ, ಭೂಮಿಯ ಉಳಿವಿನ ಬಗ್ಗೆ ಸ್ವಲ್ಪ ಯೋಚಿಸುವಂತೆ ಒತ್ತಾಯಿಸಿದರೆ, ಅವರ ವಿರೋಧಿಗಳಾದ ತಂತ್ರಜ್ಞಾನ ಪ್ರತಿಪಾದಕರು ಹೊಸ ಹೊಸ ಸಂಶೋಧನೆಗಳು ಮತ್ತು ಕೈಗಾರಿಕೀಕರಣದ ವೇಗ ಕಡಿಮೆ ಎಂದು ಪ್ರತಿಪಾದಿಸುತ್ತಿದ್ದಾರೆ. ಪರಸರವಾದಿಗಳು ಭೂತ ಕಾಲಕ್ಕೆ ಮರಳಲು ಸಲಹೆ ನೀಡಿದರೆ ತಂತ್ರಜ್ಞಾನದ ಪ್ರತಿಪಾದಕರು ಭವಿಷ್ಯಕ್ಕೆ ಲಗ್ಗೆಯಿಡುವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ.

ತಂತ್ರಜ್ಞಾನದ ಪ್ರತಿಪಾದಕರಿಗೆ ಯಾವುದೂ ಅಸಾಧ್ಯವಲ್ಲ. ಬುದ್ಧಿಶಕ್ತಿ, ಪ್ರಯತ್ನ ಮತ್ತು ಹಣವಿದ್ದರೆ ಯಾವುದೇ ಸಮಸ್ಯೆಯನ್ನು ಅತಿ ಸುಲಭವಾಗಿ ಬಗೆಹರಿಸಬಹುದು ಎನ್ನುವ ಅವರು ಅತಿ ಆಶಾವಾದಿಗಳಾದರೆ, ನಮ್ಮ ಐಹಿಕ ಪ್ರಯತ್ನಗಳೆಷ್ಟೇ ಭವ್ಯವಾಗಿರಲಿ ಅವು ಕೃತಕ, ಕೊನೆಗೆ ಅವು ನೆಲ ಕಚ್ಚುವವಷ್ಟೇ ಅಲ್ಲ, ಪರಿಸರವನ್ನು ಹಾಳುಗೆಡುವದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎನ್ನುವ ಪರಿಸರವಾದಿಗಳು ಅತಿ ನಿರಾಶಾವಾದಿಗಳು.

ಪ್ರಳಯ ಆಗೋದಾದ್ರೆ... ಮನೇಲಿರೋ ಉಪ್ಪಿನಕಾಯಿ ಖಾಲಿ ಮಾಡ್ತೀನಿ!

ಎರಡು ಬಣಗಳು ಎರಡು ಪರಸ್ಪರ ವಿರುದ್ಧ ಧ್ರುವಗಳನ್ನು ಪ್ರತಿನಿಧಿಸುತ್ತಿವೆ. ಆದರೆ ಆಧುನಿಕ ಯುಗದಲ್ಲಿ, ಸದ್ಯದ ವಿಶ್ವ ಸಮಾಜದಲ್ಲಿ ನಾವು ತಂತ್ರಜ್ಞಾನ, ವಿಜ್ಞಾನ ಮತ್ತು ಹೊಸ ಹೊಸ ಅವಿಷ್ಕಾರಗಳ ಕೈ ಬಿಟ್ಟು, ಪರಿಸರವಾದಿಗಳ ಅಣತಿಯಂತೆ ಸರಳ ಜೀವನ ನಡೆಸಲು ಸಾಧ್ಯವೇ? ಆದರೆ ಹಾಗೆಯೇ ಬಿಟ್ಟರೆ, ಮಾನವನ ವಿನಾಶಕಾರಿ ಚಟುವಟಿಕೆಗಳಿಂದ ನಮ್ಮ ಗ್ರಹಕ್ಕೆ ಬದಲಿಸಲಾಗದ ಹಾನಿಯಾಗುತ್ತದೆ. ಅದನ್ನು ನೋಡಿಯೂ ಸುಮ್ಮನಿರುವುದು ಸಾಧ್ಯವೇ? ಅಂದರೇನು ಮಾಡಬೇಕು? ಇದೊಂದು ಧರ್ಮ ಸಂಕಟವೇ ಸರಿ. ನನಗನಿಸುವ ಮಟ್ಟಿಗೆ ಸಮಸ್ಯೆಯ ನಿಜವಾದ ಪರಿಹಾರ ಈ ಎರಡು ಪರಸ್ಪರ ವಿರುದ್ಧದ ಧ್ರುವಗಳ ಮಧ್ಯದ ಮಾರ್ಗವೊಂದನ್ನು ಕಂಡು ಹಿಡಿಯುವುದು.

ನಾವು ಮುಂಬರುವ ದಿನಗಳಲ್ಲಿ ತೀವ್ರ ನಗರೀಕರಣವನ್ನು ತಡೆಯಲಾಗುವುದಿಲ್ಲ. ಎಲ್ಲಾ ಅಂಕಿ ಅಂಶಗಳ ಪ್ರಕಾರ, ಜಗತ್ತಿನ ಜನಸಂಖ್ಯೆ ಕೂಡ 2050ರವರೆಗೆ ಹೆಚ್ಚಾಗುತ್ತಲೇ ಹೋಗುತ್ತದೆ. ಆದುದರಿಂದ ವಿಶ್ವದ ಪರಿಮಿತ ಸಂಪನ್ಮೂಲಗಳ ಮೇಲೆ ಒತ್ತಡ ಕೂಡ ಹೆಚ್ಚಾಗುತ್ತಲೇ ಹೋಗುತ್ತದೆ. ಅದರೊಟ್ಟಿಗೆ ಅವುಗಳನ್ನು ಪಡೆಯಲು ಯತ್ನಿಸುತ್ತಿರುವ ದೇಶಗಳ, ಜನರ ಪೈಪೋಟಿ ಕೂಡ. ನಗರೀಕರಣ ಮತ್ತು ಜನಸಂಖ್ಯಾ ಸ್ಫೋಟಗಳಿಗೆ ಉತ್ತರವಾಗಿ ನಾವು ಹೊಸ ಹೊಸ ತಂತ್ರಜ್ಞಾನಗಳನ್ನು ಅವಿಷ್ಕರಿಸಿ ಬಳಸಲೇ ಬೇಕಾಗುತ್ತದೆ. ಆದರೆ ಎಲ್ಲ ತಂತ್ರಜ್ಞಾನಗಳಿಗೆ ಹಸಿರು ಆತ್ಮವನ್ನು ನೀಡಬೇಕಾಗಿದೆ. ಹೊಸ ಅವಿಷ್ಕಾರಗಳನ್ನು ದ್ವೇಷಿಸುವುದರ ಬದಲಿಗೆ ಅವುಗಳನ್ನು ಪರಿಸರ ಸ್ನೇಹಿಗಳನ್ನಾಗಿ ಮಾಡಲು ಪರಿಶ್ರಮಿಸಬೇಕಾಗಿದೆ.

ಜಗತ್ತು ಅಂತ್ಯವಾಗುವ ಆ 8 ಸಂಭವನೀಯ ವರ್ಷಗಳು!

ಉದಾಹರಣೆಗೆ ಹೆಚ್ಚುತ್ತಿರುವ ವಿಶ್ವದ ಜನಸಂಖ್ಯೆಯ ಆಹಾರದ ಬೇಡಿಕೆಯನ್ನು ಪೂರೈಸಲು ತಳಿ ಸಂಸ್ಕರಿಸಿದ ಬೆಳೆಗಳ (Genetically modified crops) ಅವಶ್ಯಕತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಈ ದಿಶೆಯಲ್ಲಿ ತಕ್ಕ ಮಟ್ಟಿನ ಎಚ್ಚರಿಕೆ ವಹಿಸುವುದು ಕೂಡಾ ಅತ್ಯವಶ್ಯಕ. ಹೊಸ ಹೊಸ ಕಟ್ಟಡಗಳನ್ನು ಕಟ್ಟುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಕಟ್ಟಡಗಳನ್ನು ಕೂಡ ಪರಿಸರ ಸ್ನೇಹಿ ಕಟ್ಟಡಗಳನ್ನಾಗಿ (Green Building) ಮಾರ್ಪಡಿಸುವುದು ಸಾಧ್ಯ ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ ಅಲ್ಲವೇ?

ಕೇವಲ Smart City ಮಾತ್ರವಲ್ಲ, Smart Villageಗಳನ್ನು ಹೆಚ್ಚು ಹೆಚ್ಚು ನಿರ್ಮಿಸುವುದು ಕೂಡ ಪ್ರಮುಖ ತಂತ್ರವಾಗಬೇಕು. Reduce, Reuse and Recycle ಕೇವಲ ಘೊಷಣೆ ಮಾತ್ರ ಆಗಿ ಉಳಿಯದೇ ಜನ ಜೀವನದಲ್ಲಿ ಹಾಸು ಹೊಕ್ಕಾಗಬೇಕು.

ಇಂದು ಪರಿಸರವಾದಿ, ಆಧುನಿಕ ತಂತ್ರಜ್ಞಾನದ ವಿರೋಧಿಯಾಗಬೇಕಿಲ್ಲ. ಅದರ ಬದಲಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಸಿದ್ಧಾಂತಗಳನ್ನು ಪರಿಸರ ಸ್ನೇಹಿ ಸಲಕರಣೆಗಳು ಮತ್ತು ಜೀವನ ವಿಧಾನಗಳನ್ನು ರೂಪಿಸಲು ಬಳಸಬೇಕು. ಪರಿಸರವಾದಿ ಆಧುನಿಕತೆ (Environmental Modernism) ಎಂಬ ಹೊಸ ಸಿದ್ಧಾಂತವೊಂದು ಈಗ ಶೈಕ್ಷಣಿಕ ಕ್ಷೇತ್ರದಲ್ಲಿ ರೂಪುಗೊಳ್ಳುತ್ತಿದೆ.

ಪರಿಸರ ಮತ್ತು ಆಧುನಿಕತೆ ಪರಸ್ಪರ ವಿರುದ್ಧ ತತ್ವಗಳಲ್ಲ, ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಯೋಗಗಳು ಪರಿಸರ ಹಾಕಿದ ಎಲ್ಲೆಯನ್ನು ಮೀರದಂತೆ ನೋಡಿಕೊಂಡರೆ, ಅವು ಪರಸ್ಪರ ಪೂರಕ ಎಂದು ಈ ಸಿದ್ಧಾಂತ ಪ್ರತಿಪಾದಿಸುತ್ತಿದೆ. ಈ ತತ್ವದ ಅಡಿಯಲ್ಲಿ ನಮ್ಮ ಮಾನವ ಜನಾಂಗ ಮುಂದುವರೆದರೆ ಮಾನವ ಜನ್ಯ ಪ್ರಳಯ ಕೇವಲ ಮಾನವ ಕಲ್ಪಿತ ಕಟ್ಟುಕತೆಯಾಗಿ ಉಳಿಯಲು ಸಾಧ್ಯ.

English summary
Are we nearing the end of the world? Why there is so much talk about doomsday? If at all there is threat to the world due to natural disaster what are the reasons? An article by Vasant Kulkarni, Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more