ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ. ಅ.ರಾ.ಮಿತ್ರರೊಡನೆ someವಾದ

By Staff
|
Google Oneindia Kannada News


ಶ್ರೀವತ್ಸ ಜೋಶಿ:- ಹಾಸ್ಯಗಾರರು, ಕವಿಗಳು, ನಟರು ನೋವನ್ನು ನುಂಗಿ ನಗೆಯನ್ನು ಹಂಚುತ್ತಾರೆಂಬುದು ಸತ್ಯದ ಮಾತೇ ಆಗಿರುತ್ತದೆ. ನಿಮ್ಮ ಅಭಿಪ್ರಾಯವೇನು?

ಪ್ರೊ. ಅ.ರಾ.ಮಿತ್ರ:- ಹಾಸ್ಯಗಾರರು ನೋವನ್ನು ನುಂಗಿ ನಗೆಯನ್ನು ಹಂಚುತ್ತಾರೆಂಬ ಮಾತನ್ನು ನಾನು ವಿರೋಧಿಸುತ್ತೇನೆ. ವೈಯುಕ್ತಿಕ ನೋವುಗಳನ್ನು ಸಾಹಿತ್ಯಕ್ಕೆ ಎಳೆತರುವುದು ಸರಿಯಲ್ಲ. ಸಾಹಿತ್ಯ ಬದುಕಿನ ನೋವು, ನಲಿವು, ಎಲ್ಲವುಗಳ ಅಭಿವ್ಯಕ್ತಿ. ನೋವೊಂದೇ ಸಾಹಿತ್ಯದ ಪ್ರೇರಣೆಯಾಗುವುದಾದರೆ, ಹೆರಿಗೆ ನೋವು ತಿನ್ನುವ ಹೆಣ್ಣು ಮಾತ್ರ ಸಾಹಿತಿಯಾಗಬೇಕಾಗುತ್ತದೆ.

ಬಿ. ಇಂದುಶೇಖರ್‌:- ‘‘ಕುವೆಂಪು ಅವರು ಕನ್ನಡದ ಬಗ್ಗೆ ಬರೀ ಮಂತ್ರ ಹೇಳಿದರು. ತಂತ್ರ ತೋರಿಸಲಿಲ್ಲ’’ ಎಂಬ ತೇಜಸ್ವಿಯವರ ಹೇಳಿಕೆ ನಿಜ ಅನ್ನಿಸುತ್ತದೆ. ಉದಾಹರಣೆಗೆ- ‘‘ಕನ್ನಡಕ್ಕಾಗಿ ಕೈಯೆತ್ತು, ಅದು ಗೋವರ್ಧನ ಗಿರಿಯಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೂಡುತ್ತದೆ’’ ಎಂದರೇ ವಿನಃ, ಕನ್ನಡಕ್ಕಾಗಿ ಕಿಸೆ ತೆಗೆ, ಆಗ ಕನ್ನಡ ಸರಸ್ವತಿ ಎಲ್ಲರಿಗೂ ದಕ್ಕುತ್ತಾಳೆ. ಲಕ್ಷ್ಮೀ ಕಾಲ್ಮುರಿದು ಮನೆಯಲ್ಲೇ ಬಿದ್ದಿರ್ತಾಳೆ ಅನ್ನಲಿಲ್ಲ- ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಪ್ರೊ. ಅ.ರಾ.ಮಿತ್ರ:- ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಲು ಹಿಂದೆ ಇಂತಹ ವೀರಾವೇಶದ ಮಾತುಗಳ ಅಗತ್ಯವಿತ್ತು. ಈ ಮಾತುಗಳು ಬರೀ ಮಂತ್ರವಾಯಿತೇ ಹೊರತು ತಂತ್ರವಾಗಲಿಲ್ಲ. ಕೇವಲ ಅಭಿಮಾನದ ಮಾತುಗಳಿಂದ ಭಾಷೆಯನ್ನು ಗೆಲ್ಲಿಸುವುದು ಸಾಧ್ಯವಿಲ್ಲ. ಭಾಷೆಯನ್ನು ಕುರಿತ ಅಭಿಮಾನ ಕೃತಿಯ ಮೂಲಕ ಪ್ರಕಟವಾದಾಗಲೇ ಭಾಷೆಯ ಉದ್ಧಾರ ಸಾಧ್ಯ. ಕನ್ನಡ ಭಾಷೆಯನ್ನು ತಮ್ಮ ಕೃತಿಯ ಮೂಲಕ ಬೆಳೆಸಿದ ಅನೇಕ ಮಹನೀಯರು ನಮ್ಮಲ್ಲಿದ್ದಾರೆ.

ಬಿ. ಇಂದುಶೇಖರ್‌:- ನಮ್ಮ ಸರಕಾರ ಜೈನ, ವಚನ, ದಾಸ ಸಾಹಿತ್ಯಗಳಿಗೆಂದು ಪ್ರತ್ಯೇಕ ವೆಬ್‌ ಸೈಟುಗಳನ್ನು ಮಾಡುವ ಬದಲು, ಕನ್ನಡ ಸಾಹಿತ್ಯ ಎಂಬ ಒಂದೇ ವೆಬ್‌ ಸೈಟ್‌ ಮಾಡಿ ಜೈನ, ವಚನ, ದಾಸ, ಜನಪದ, ನವ್ಯ ಸಾಹಿತ್ಯಗಳು ಅಲ್ಲೇ ಸಿಗುವಂತೆ ಮಾಡುವುದು ಸರಿಯಲ್ಲವೇ?

ಪ್ರೊ. ಅ.ರಾ.ಮಿತ್ರ:- ಅಭ್ಯಾಸದ ದೃಷ್ಟಿಯಿಂದ ಮಾತ್ರ ಈ ರೀತಿಯ ವಿಂಗಡನೆ ಮಾಡಲಾಗಿದೆ. ಇದರಿಂದ ಆಸಕ್ತರು ತಮಗೆ ಬೇಕಾದ ತಾಣಕ್ಕೆ ಹೋಗಿ ಅಧ್ಯಯನ ಮಾಡಬಹುದಾದ ಅನುಕೂಲ ಒದಗಿದೆ.

ಸುಕುಮಾರ್‌:- ಈಚೆಗೆ ಬೆಂಗಳೂರಿನ ಕನ್ನಡ ಪುಸ್ತಕದಂಗಡಿಯಾಂದಕ್ಕೆ ಭೇಟಿ ನೀಡಿದಾಗ, ‘‘ಆವರಣ’’ದಂತಹ ಕೆಲವನ್ನು ಹೊರತುಪಡಿಸಿ, ಕನ್ನಡ ಪುಸ್ತಕಗಳು ಮಾರಾಟವಾಗುವುದು ಕಷ್ಟ ಎಂದು ತಿಳಿಯಿತು. ಕನ್ನಡದ ಪುಸ್ತಕಗಳ ಭವಿಷ್ಯದ ಬಗ್ಗೆ ಭಯವಾಗುವುದಿಲ್ಲವೇ? ಕನ್ನಡ ಸಾಹಿತಿಗಳ ಅಭಿಪ್ರಾಯವೇನು?

ಪ್ರೊ. ಅ.ರಾ.ಮಿತ್ರ:- ಖಂಡಿತ ಭಯವಿಲ್ಲ. ಏಕೆಂದರೆ ಇದು ಶಾಶ್ವತ ಸಾಹಿತ್ಯ. ಅಂದರೆ ಮಾರಾಟವಾಗದೆ ಕಪಾಟಿನಲ್ಲಿ ಭದ್ರವಾಗಿ ಉಳಿಯುವ ಸಾಹಿತ್ಯ (ನಗು). ಉತ್ತಮ ಸಾಹಿತ್ಯ ಎಲ್ಲಾ ಕಾಲಕ್ಕೂ, ಎಲ್ಲಾ ಭಾಷೆಯಲ್ಲಿಯೂ ಅಲ್ಪ ಸಂಖ್ಯಾತವೇ. ಉತ್ತಮ ಸಾಹಿತ್ಯವನ್ನು ಪ್ರೋತ್ಸಾಹಿಸುವ ಜನರೂ ಅಲ್ಪಸಂಖ್ಯಾತರು. ಆದರೂ ಅವರು ಯಾವಾಗಲೂ ಇದ್ದೇ ಇರುತ್ತಾರೆ. ಸಾಹಿತ್ಯ ಉಳಿಯುವುದು, ಬೆಳೆಯುವುದು ಅಂತಹವರಿಂದಲೇ.

ಸುಕುಮಾರ್‌:- ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯದ ಕೊರತೆಗೆ ಕಾರಣವೇನು?

ಪ್ರೊ. ಅ.ರಾ.ಮಿತ್ರ:- ಹಾಸ್ಯ ಸಾಹಿತ್ಯವನ್ನೇ ಉದ್ದೇಶಪೂರ್ವಕವಾಗಿ ಬರೆಯಲು ಹೊರಟರೆ ಅದು ಮೂರ್ಖತನವಾಗುತ್ತದೆ, ಶೋಕಗೀತೆಯನ್ನು ಉದ್ದೇಶಪೂರ್ವಕವಾಗಿ ಬರೆಯಲು ಹೋಗುವ ಹಾಗೆಯೇ. ಬೇಂದ್ರೆಯವರ ಶೋಕಗೀತೆಗಳು ಬರೆಯಲೇಬೇಕೆಂದು ಬರೆದದ್ದಲ್ಲ. ಮನಸ್ಸಿನ ಭಾವನೆ ನೈಜವಾಗಿದ್ದಲ್ಲಿ ಅದು ಹಾಸ್ಯ, ಶೋಕ, ಮುಂತಾದ ರಸಗಳ ಮೂಲಕ ಅಭಿವ್ಯಕ್ತಿಗೊಳ್ಳುತ್ತದೆ. ಹಾಸ್ಯ ಬಲವಂತವಾದರೆ ಹಾಸ್ಯಾಸ್ಪದವಾಗುತ್ತದೆ. ಜೋಕ್‌ ಹೇಳುವುದೇ ಹಾಸ್ಯ ಸಾಹಿತ್ಯ ಎಂದುಕೊಳ್ಳಬಾರದು. ಹಾಗಾದಾಗ-

‘‘ಹಿಮಾಲಯದ ತಪ್ಪಲಲ್ಲಿ
ವಿಮಲೆ ಯಮುನೆ ಹರಿಯುವಲ್ಲಿ
ದಿವ್ಯಯೋಗಿಯಾಬ್ಬನು
ಬೀಡಿ ಸೇದುತ್ತಿದ್ದನು’’

-ಎಂಬಂತಹ ಅರ್ಥಹೀನ ಸಾಹಿತ್ಯ ಸೃಷ್ಟಿಯಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X