• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಳಸಮ್ಮ ಬಾಗಿಲಲ್ಲಿ ನಿಂತಿದ್ದಾಳೆ..

By Staff
|

ಇಂದು(ನ.22) ಉತ್ಥಾನ ದ್ವಾದಶಿ. ತುಳಸಿ ಹಬ್ಬದ ಖುಷಿ ಭಾರತೀಯ ಮಹಿಳೆಯರ ಮನೆ ಮನಗಳಲ್ಲಿ ಮೇಳೈಸಿದೆ. ಈ ಹೊತ್ತಿನಲ್ಲಿ ತುಳಸಿವನ ಅಂಕಣ ಕೊನೆಗೊಳ್ಳುತ್ತಿದೆ ಎಂದು ಹೇಳಲು ನಮಲ್ಲಂತೂ ಖುಷಿಯಿಲ್ಲ. ಆದರೆ ಹೇಳಲೇ ಬೇಕಾಗಿದೆ. ಈವರೆಗೆ ತುಳಸಿವನ ನೀಡಿದ ಆನಂದ, ಅನುಭೂತಿ,ಅಕ್ಕರೆ ಮತ್ತು ಆಪ್ತತೆಯ ಸುಖವುಂಡ ಓದುಗರಿಗೆ ಈ ವಿದಾಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ ಎಂಬುದು ನಮಗೆ ಗೊತ್ತಿದೆ. ಆದರೆ ಅಂತ್ಯದಲ್ಲಿಯೇ ಆರಂಭವೂ ಇದೆ ಎಂದು ನಂಬಿದವರು ನಾವು. ಅಂಕಣವೆಂದು ಸಂತೆಗೆ ತಕ್ಕಂತೆ ಮೂರು ಮೊಳ ನೇಯದೇ, ಗಡಿಯೂರದ ಮುಳ್ಳುಗಳ ಹಿಂದೆ ಓಡದೇ ಒಲಿದಂತೆ ತ್ರಿವೇಣಿ ಈವರೆಗೆ ಹಾಡಿದ್ದಾರೆ. ಅವರ ಹಳೇ ಲೇಖನ'ವಿದಾಯವೆಂದರೆ.. ನೆನಪುಗಳ ಮೆರವಣಿಗೆ!'ಮತ್ತೆ ಓದುಗರಿಗೂ ನೆನಪಾಗುತ್ತಿರಬಹುದು. ಹೀಗಾಗಿ ಮತ್ತೆ ಇಲ್ಲಿ ಪ್ರಕಟಿಸಿದ್ದೇವೆ.

*ಸಂಪಾದಕ

________________________________________________

ವಿದಾಯವೆಂದರೆ...... ನೆನಪುಗಳ ಮೆರವಣಿಗೆ!

ಈ ಜಗತ್ತಿನಲ್ಲಿ ಗೂಟ ಬಡಿದುಕೊಂಡು ಇರುವವರು ಯಾರು ? ಗೆಳೆಯ ಗೆಳತಿ, ಅಪ್ಪಅಮ್ಮ, ಸಂಗಾತಿ- ಪ್ರತಿಯಾಬ್ಬರೂ ಒಂದು ನಿಲ್ದಾಣದವರೆಗಷ್ಟೇ ಜೊತೆಗಾರರು. ವಿದಾಯವೆನ್ನುವುದು ಅನಿವಾರ್ಯ ಅಗತ್ಯ. ಆದರೆ ಆ ವಿದಾಯದ ಕ್ಷಣಗಳಿರುತ್ತವಲ್ಲ ; ಬಂಗಾರದ ಕ್ಷಣಗಳೆಂದರೆ ಅವುಗಳೇನೆ ! ಇಂತಹ ಕೆಲವು ಅಮರ ಮಧುರ ನೆನಪುಗಳು ಇಲ್ಲಿವೆ. ಇವು ನಿಮ್ಮ ನೆನಪುಗಳೂ ಹೌದು.

ಕೆ.ತ್ರಿವೇಣಿ ಶ್ರೀನಿವಾಸರಾವ್‌

ಇಲಿನಾಯ್‌, ಅಮೆರಿಕಾ

(ತವರು : ಕಡೂರು - ಚಿಕ್ಕಮಗಳೂರು ಜಿಲ್ಲೆ)

ಪ್ರತಿಯಾಬ್ಬರ ಬದುಕಿನಲ್ಲೂ ಒಂದಲ್ಲ ಒಂದು ಬಾರಿ ಮಧುರನೆನಪುಗಳಿಂದ ತೊಯ್ದು ತೊಟ್ಟಿಕ್ಕುವ ವಿದಾಯದ ಆರ್ದ್ರ ಘಳಿಗೆಯಾಂದು ಒಮ್ಮೆಯಾದರೂ ಹಾದು ಹೋಗಿರದೆ ಇರಲಾರರು. ಅದು ತವರು ಮನೆಯಿಂದ ತಂಗಿಯನ್ನು ಕಳಿಸಿಕೊಡುವ ಭಾವನಾತ್ಮಕ ಸನ್ನಿವೇಶವೇ ಆಗಿರಬಹುದು, ಓದಿದ ಶಾಲೆ, ಕಾಲೇಜನ್ನು ಬಿಟ್ಟು ಹೊರಬರುವ ಕೊನೆಯ ದಿನವೇ ಇರಬಹುದು, ಇಷ್ಟವಿಲ್ಲದ ಉದ್ಯೋಗದಿಂದ ಮತ್ತೊಂದಕ್ಕೆ ದಾಟಿಕೊಳ್ಳುವ ಬಿಡುಗಡೆಯ ಘಳಿಗೆಯೇ ಆಗಿರಬಹುದು, ಸಾವಿರಾರು ಮೈಲುಗಳಷ್ಟು ದೂರ ಹಾರಿ, ಹೊಸದೊಂದು ಗೂಡನ್ನು ಅರಸಿಕೊಳ್ಳುವ ವಲಸೆ ಹಕ್ಕಿಗಳ ವಿದೇಶ ಪ್ರಯಾಣವೇ ಆಗಿರಲೊಲ್ಲದೇಕೆ? ಈಗ ಆ ಕ್ಷಣದ ನೆನಪಾದರೂ ಸಾಕು - ಅಂದು ಎದೆಯಾಳದಲ್ಲಿ ತುಂಬಿ ಬಂದಿದ್ದ ಭಾವೋದ್ವೇಗವನ್ನು ನೆನೆದು ಇಂದೂ ಕೂಡ ಮನವೊಮ್ಮೆ ನವಿರಾಗಿ ಕಂಪಿಸದೆ ಇರಲಾರದು.

ನಮಗೆಲ್ಲಾ ಶಾಲೆ, ಕಾಲೇಜುಗಳಲ್ಲಂತೂ ಬೀಳ್ಕೊಡುಗೆಯ ಸಮಾರಂಭವೆಂಬುದು ವಾರ್ಷಿಕ ಪರೀಕ್ಷೆಗಳಷ್ಟೇ ಕಡ್ಡಾಯವಾಗಿ ಹೋಗಿತ್ತು. ವರ್ಷವಿಡೀ ಪುಂಡಾಟಿಕೆಯಲ್ಲೇ ಕಾಲ ಕಳೆಯುತ್ತಿದ್ದ ಹಿಂದಿನ ಸಾಲಿನ ಹುಡುಗರೆಲ್ಲಾ ಆಗ ಚುನಾವಣೆ ಎದುರು ನೋಡುವ ರಾಜಕಾರಣಿಗಳಂತೆ ಬಲು ಚುರುಕಾಗಿ ಬಿಡುತ್ತಿದ್ದರು. ಶಿಕ್ಷಕರನ್ನು ಪತ್ತರಗುಟ್ಟಿಸುತ್ತಿದ್ದ ಆ ಕಿಡಿಗೇಡಿಗಳು ವಿದಾಯದ ದಿನಗಳು ಹತ್ತಿರವಾದಂತೆ ನಮ್ಮ ಗುರುಗಳೆಲ್ಲರ ಎಡಬಲದಲ್ಲೇ ಸುತ್ತಾಡುತ್ತ ಅತಿ ವಿನಯದ ವಿದ್ಯಾರ್ಥಿಗಳಾಗಿಬಿಡುತ್ತಿದ್ದರು. ನಮ್ಮ ಪ್ರೀತಿಯ ಕನ್ನಡ ಅಧ್ಯಾಪಕರೊಬ್ಬರು 'ನೀವು ಈ ಸಮಾರಂಭಕ್ಕೆ ತೋರಿಸುತ್ತಿರುವ ಉತ್ಸಾಹದಲ್ಲಿ ಕಾಲು ಭಾಗವನ್ನು ಓದೋದ್ರಲ್ಲಿ ತೋರಿಸಿದ್ದರೂ ಸಾಕಿತ್ತು. ನೀವು ಈ ಹೊತ್ತಿಗೆ ಅಲ್ಲೆಲ್ಲೋ ಇರ್ತ್ತಿದ್ರಿ ಕಣ್ರಯ್ಯಾ" ಎಂದು ಮಮತೆಯಿಂದ ಕೆಲವು ಬಾರಿ ಗದರುತ್ತಿದ್ದರು. ಆದರೆ ಅದನ್ನು ತಲೆಗೆ ಹಚ್ಚಿಕೊಳ್ಳುವವರಾದರೂ ಯಾರು? ಮೇಷ್ಟ್ರುಗಳಿರುವುದೇ ಹುಡುಗರನ್ನು ಬೈಯುವುದಕ್ಕೆ ತಾನೇ?

ಆ ಸಮಯದಲ್ಲಿ ಎಲ್ಲರ ಹೆಗಲೇರುತ್ತಿದ್ದ ಮತ್ತೊಂದು ಬಹು ಮುಖ್ಯ ಜವಾಬ್ದಾರಿಯೆಂದರೆ ಆಟೊಗ್ರಾಫುಗಳಲ್ಲಿ ಸಹಿ ಸಂಗ್ರಹಿಸುವುದು. ಅಧ್ಯಾಪಕರು, ಸಹಪಾಠಿಗಳಿರಲಿ, ಕಾಲೇಜಿನ ಗುಮಾಸ್ತರು, ಗ್ರಂಥಪಾಲಕರಿಗೂ ತಪ್ಪದ ಶನಿಕಾಟ. ಸರಕಾರೀ ಸುತ್ತೋಲೆಗಳಂತೆ ಇಡೀ ಕಾಲೇಜಿನ ಕಾರಿಡಾರಿನಲ್ಲಿ ಸುತ್ತಾಡುತ್ತಿದ್ದ ಆಟೊಗ್ರಾಫುಗಳಲ್ಲಿ ಆಗ ಬಹು ಬೇಡಿಕೆಯಲ್ಲಿದ್ದ ಸಾಲುಗಳೆಂದರೆ- 'ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ, ಈ ಬಾಳ ಬುತ್ತಿಯಲಿ ಸಿಹಿಯೆಲ್ಲಾ ನಿನಗಿರಲಿ, ಕಹಿಪಾಲು ನನಗಿರಲಿ", 'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ನನ್ನ ಮರೆಯದಿರು."

ಇನ್ನು ಕೆಲವಂತೂ ಕನಸಿನಲ್ಲೂ ಈಡೇರಲಾರದ ಗಗನಕುಸುಮದಂತಹ ಆಶೋತ್ತರಗಳು! ಅಖಂಡ ಕನ್ನಡಪ್ರೇಮಿಯಾಬ್ಬ ನನ್ನ ಪುಸ್ತಕದಲ್ಲಿ- 'ನಾಟ್ಯರಾಣಿ ಶಾಂತಲೆಯಂತೆ ನಿಮ್ಮ ಕಲೆ ಕನ್ನಡನಾಡನ್ನೆಲ್ಲಾ ಬೆಳಗಲಿ" - ಎಂದು ಮುಕ್ತ ಮನಸ್ಸಿನಿಂದ ಹಾರೈಸಿದ್ದ. ನೃತ್ಯದ ಓನಾಮ ಕೂಡ ತಿಳಿಯದ ನಾನು ಕಣ್ಣು ಕಣ್ಣು ಬಿಡುವುದಲ್ಲದೆ ಇನ್ನೇನು ತಾನೇ ಮಾಡಿಯೇನು? ಇವುಗಳ ಜೊತೆಗೆ 'ಸ್ನೇಹವನ್ನು ಸಕ್ಕರೆಯಂತೆ ಮುಕ್ಕಬೇಡ, ಕುಂಕುಮದಂತೆ ಬಳಸು", 'ಮುಖವು ಕಮಲದಂತಿದ್ದರೂ ಹೃದಯ ಕತ್ತರಿಯಂತೆ ಇರುತ್ತದೆ, ಅರಿತು ಸ್ನೇಹ ಬೆಳೆಸು" ಎಂಬ ಬಹು ಬೆಲೆಬಾಳುವ ಹಿತವಚನಗಳೂ ಅಲ್ಲಿರುತ್ತಿದ್ದವು. ಆ ಬೃಹಸ್ಪತಿಗಳು ಕತ್ತರಿಗೂ, ಕಮಲಕ್ಕೂ ಅದು ಹೇಗೆ ಗಂಟು ಹಾಕಿ ನಂಟು ಬೆಸೆದಿದ್ದರೋ? ಆ ದೇವನೊಬ್ಬನೇ ಬಲ್ಲ !

ಇನ್ನು ಕೆಲವು ಮಹನೀಯರುಗಳು - 'ಪರೀಕ್ಷೆಯೆಂಬ ಯುದ್ಧದಲ್ಲಿ, ಲೇಖನಿಯೆಂಬ ಖಡ್ಗ ಹಿಡಿದು, ಮಸಿಯೆಂಬ ರಕ್ತ ಚೆಲ್ಲಿ ಗೆದ್ದು ಬಾ ಗೆಳತಿ" ಎಂದು ಪರೀಕ್ಷೆಯನ್ನು ಕಾರ್ಗಿಲ್‌ ಕದನಕ್ಕೆ ಹೋಲಿಸಿ, ಪರೀಕ್ಷೆಯೆಂಬ ಭೂತಕ್ಕೆ ಮೊದಲೇ ಹೆದರಿ ನಡುಗುವ ಅಂಜುಬುರುಕರನ್ನು, ಮತ್ತಷ್ಟು ಬೆದರಿಸಿ ಕಂಗಾಲಾಗುವಂತೆ ಮಾಡಿಬಿಡುತ್ತಿದ್ದರು. ತಮ್ಮಿಂದಾಗದ ಕೆಲಸವನ್ನು ಬೇರೆಯವರಾದರೂ ಮಾಡಲಿ ಎಂಬ ಸದಾಶಯ ಅವರದು! ಒಂದು ಪುಟದಲ್ಲಿ ತಮ್ಮ ಅಮೂಲ್ಯ ಸಂದೇಶ ಬರೆದು ಸಹಿ ಹಾಕಿ, ಅದರ ಹಿಂದಿನ ಪುಟದಲ್ಲಿ ವಿಳಾಸ ಬರೆದು ಅದರ ಕೆಳಗೆ 'ಮ.ಮ.ಕ.ಕ.ಮ" ಎಂಬ ಗುಪ್ತ ಸಂದೇಶ. ಈ ಕೋಡ್‌ವರ್ಡ್‌ನ ಅರ್ಥ ಮದುವೆಯ ಮಮತೆಯ ಕರೆಯೋಲೆ ಕಳಿಸಲು ಮರೆಯಬೇಡ ಎಂಬುದು ಆಗ ಎಲ್ಲರಿಗೂ ಗೊತ್ತೇ ಇದ್ದ ಬಹಿರಂಗ ರಹಸ್ಯ.

ಬೀಳ್ಕೊಡುಗೆ ಸಮಾರಂಭದ ಸಂಜೆಗಂತೂ ಯಾವುದೋ ಶೋಕ ಸಮಾರಂಭದ ಕಳೆ. ಎಂದಿನಂತೆ ಹೆಚ್ಚು ಮಾತುಕತೆಯಿಲ್ಲ , ಗಲಾಟೆಯಿಲ್ಲ , ಕೋತಿ ಕುಣಿತಗಳಿಲ್ಲ. ಅಗಲಿಕೆಯ ಭಾರಕ್ಕೆ ಬಾಡಿಹೋಗಿ ನಗು ಮರೆತಂತಿದ್ದ ಎಲ್ಲರ ತುಟಿಗಳ ಹಿಂದಿದ್ದ ಒಂದೇ ಶೋಕ ಸಂದೇಶ - 'ವಿದಾಯ ಗೆಳೆಯನೆ, ವಿದಾಯ ಗೆಳತಿಯೆ........" ಇದರ ಮಧ್ಯೆ ಫೋಟೋ ತೆಗೆಸಿಕೊಳ್ಳುವ ಸಂಭ್ರಮ ಬೇರೆ ಇರುತ್ತಿತ್ತು. ಹೆಚ್ಚು ಬೆಳಕಿಗೆ ಬಾರದೆ ತಮ್ಮ ಪಾಡಿಗೆ ತಾವಿರುತ್ತಿದ್ದ, ಇದ್ದಿದ್ದರಲ್ಲಿಯೇ ಸ್ವಲ್ಪ ಜಾಣ ವಿದ್ಯಾರ್ಥಿಗಳನ್ನು ಆರಿಸಿ ಅವರಿಗೆ ವಿದ್ಯಾರ್ಥಿ ಜೀವನದ ಬಗ್ಗೆ ನಾಲ್ಕೇ ನಾಲ್ಕು ಮಾತಾಡುವ ಭಾರ ಹೊರಿಸುತ್ತಿದ್ದರು. ಪಾಪ! ಯಾವ ತಂಟೆ ತಕಾರಾರಿಗೆ ಹೋಗದ ಆ ಮೆತ್ತನೆಯ ಬಡಪಾಯಿ ವಿದ್ಯಾರ್ಥಿಗಳಿಗೆ ಇದ್ದಕ್ಕಿದ್ದಂತೆ ಅಷ್ಟೊಂದು ಜನರ ಮುಂದೆ ಮಾತಾಡಲು ನಿಂತಾಗ ಸಭಾಕಂಪನ ಉಂಟಾಗಿ ನಾಲ್ಕು ಮಾತಿರಲಿ, ಒಂದೇ ಒಂದು ಮಾತೂ ಹೊರಬರದೆ ಪರದಾಡುವುದನ್ನು ಕಂಡು, ಗಂಭೀರವಾಗಿರಬೇಕೆಂದು ಹರಸಾಹಸ ಪಡುತ್ತಿದ್ದ ನಮ್ಮ ಎಲ್ಲಾ ಪ್ರಯತ್ನಗಳೂ ಆ ದಂತಚೋರ ವೀರಪ್ಪನನ್ನು ಹಿಡಿಯುವ ಕರ್ನಾಟಕ, ತಮಿಳುನಾಡು ಪೋಲೀಸರ ಹಲವಾರು ಯೋಜನೆಗಳಂತೆ ವಿಫಲವಾಗಿ ಹೋಗಿಬಿಡುತ್ತಿದ್ದವು. ಅಧ್ಯಕ್ಷ ಸ್ಥಾನದಲ್ಲಿರುತ್ತಿದ್ದ ನಮ್ಮ ಪ್ರಿನ್ಸಿಪಾಲರ ಸಿಡುಕು ಮುಖದಲ್ಲೂ ಅಪರೂಪಕ್ಕೊಮ್ಮೆ ಕಿರುನಗೆಯ ಕಾಮನಬಿಲ್ಲು !

ಇದೆಲ್ಲಾ ನನ್ನ ಶಾಲಾ ದಿನಗಳ ಕಥೆಯಾದರೆ, ನಮ್ಮ ಮನೆಯಲ್ಲಿ ಒಂದು ಸಂಪ್ರದಾಯವಿತ್ತು. ಮನೆಗೆ ಯಾರೇ ನೆಂಟರು ಬಂದರೂ ಅವರನ್ನು ಸಂಸಾರ ಸಮೇತ ಹೋಗಿ ಬಸ್ಸು ಹತ್ತಿಸಿ ಬರುವುದು. ಬಹುಶಃ ನಮ್ಮ ಮನೆಯ ಜನಗಳಿಗೆ ಅಂತಹ ತಲೆಹೋಗುವ ಕೆಲಸ ಯಾವುದೂ ಇಲ್ಲದಿದ್ದುದು, ಬಸ್ಸು, ರೈಲು ನಿಲ್ದಾಣಗಳು ನಮ್ಮ ಮನೆಗೆ ಅತಿ ಸಮೀಪವೇ ಇದ್ದುದೂ ಕೂಡ ಈ ರೂಢಿ ಬೆಳೆದು ಬರಲು ಕಾರಣವಿದ್ದರೂ ಇರಬಹುದು. ಆ ಬಸ್ಸುಗಳೋ ಎಂದಿಗೂ ಕೂಡ ನಿಗದಿತ ಸಮಯಕ್ಕೆ ಬರುತ್ತಿರಲಿಲ್ಲ. ಹಾಗೆಂದು ಬಂಧುಗಳನ್ನು ಅನಾಥರಂತೆ ಬಸ್ಸು ಬರುವ ಮೊದಲೇ ಬಿಟ್ಟು ಮನೆಗೆ ಬರುವುದು ನಮ್ಮ ಅಂತಃಕರಣಕ್ಕೆ ಒಗ್ಗದ ವಿಷಯ. ಆ ಮಾತೂ, ಈ ಮಾತೂ, ಊರಿನವರೆಲ್ಲರ ಮಾತಾಡಿ, ಪರಿಚಿತರ ಬುಕ್‌ಸ್ಟಾಲಿನಲ್ಲಿದ್ದ ಪತ್ರಿಕೆಗಳನ್ನೆಲ್ಲಾ ಓದಿ ಮುಗಿಸಿ, ತಂದಿದ್ದ ಕಾಫಿಯೂ ಮುಗಿದು ಹೋದರೂ ಬಸ್ಸಿನ ದರುಶನ ಭಾಗ್ಯವಿಲ್ಲ. ಈ ಅವಧಿಯಲ್ಲಿ ಅತಿಥಿಗಳು ಮನೆಯಲ್ಲಿ ಮರೆತು ಬಂದಿದ್ದ ತಮ್ಮ ವಸ್ತುಗಳನ್ನು ನೆನಪಿಸಿಕೊಂಡು ನಮ್ಮಂತಹ ಚಿಕ್ಕ ಪುಟ್ಟ ಹುಡುಗರನ್ನು ಮನೆಗೆ ಓಡಿಸಿ ತರಿಸಿಕೊಳ್ಳುತ್ತಿದ್ದುದೂ ಉಂಟು. ಯಾವಾಗೊಮ್ಮೆ ಈ ನೆಂಟರು ಇಲ್ಲಿಂದ ಹೋಗುತ್ತಾರಪ್ಪಾ ಎಂದು ನಾವು ಬೇಸರದಿಂದ ಆಕಳಿಸತೊಡಗಿದಾಗಲೇ ಬಸ್ಸು ನಗರಪಾಲಿಕೆಯ ನಲ್ಲಿಗಳಲ್ಲಿ ನೀರು ಬರುವಂತೆ ಕೊನೆಗೂ ತನ್ನ ಮುಖ ತೋರಿಸುತ್ತಿತ್ತು.

ಇನ್ನು ನನ್ನ ಮದುವೆಯಾದ ಮೇಲೆ ಪ್ರತಿಬಾರಿ ನನ್ನನ್ನು ಗಂಡನ ಮನೆಗೆ ಕಳಿಸಿಕೊಡುವುದೇ ಒಂದು ದೊಡ್ಡ ಕಾರ್ಯಕ್ರಮ. ಶಿವಮೊಗ್ಗ, ಭದ್ರಾವತಿಗಳನ್ನು ಬಿಟ್ಟು ಬೇರೆಡೆಗೆ ಹೆಣ್ಣು ಕೊಟ್ಟು, ತಂದು ಸಂಬಂಧ ಬೆಳೆಸದ ನನ್ನ ಕುಲಬಾಂಧವರಿಗೆ ಬೆಂಗಳೂರು ಎಂದರೆ ಎಲ್ಲೋ ಇರುವ ಪರದೇಶದಷ್ಟೇ ದೂರ! ಪ್ರತಿಬಾರಿ ನಾನು ಊರಿಗೆ ಹೊರಟು ನಿಂತಾಗಲೂ ಒಂದು ಹದಿನೈದು ನಿಮಿಷ ನನ್ನ ಅತ್ತಿಗೆಯ ಕಂಬನಿಧಾರಾ ಕಾರ್ಯಕ್ರಮ. ನನ್ನ ಅಮ್ಮ, ಅತ್ತಿಗೆ ಜೀವಾವಧಿ ಶಿಕ್ಷೆ ಅನುಭವಿಸಲು ಹೋಗುತ್ತಿರುವ ಖೈದಿಯನ್ನು ಕಳಿಸಿಕೊಡುವವರಂತೆ ನನ್ನನ್ನು ಅಪ್ಪಿಕೊಂಡು ಕಣ್ಣೀರುಗರೆಯುತ್ತಿದ್ದರು. ಅವರ ಕಳವಳಕ್ಕೆ ಅವರದೇ ಆದ ಕಾರಣಗಳೂ ಅವರ ಬಳಿ ಇದ್ದವು. ನನ್ನವರಿಗೆ ಅತ್ಯಂತ ಮುಜುಗರ ಉಂಟುಮಾಡುತ್ತಿದ್ದ ಕ್ಷಣಗಳವು!

ಕೊನೆಗೊಮ್ಮೆ ಸಮಾಧಾನ ಮಾಡಿಕೊಂಡು ಅತ್ತು, ಅತ್ತು ಕಣ್ಣು, ಮೂಗು ಕೆಂಪಾಗಿಸಿಕೊಂಡ ಅತ್ತಿಗೆ ನನ್ನ ಮಡಿಲು ತುಂಬಿ ಬೀಳ್ಕೊಡುತ್ತಿದ್ದಳು. ಊರು ತಲುಪಿದ ಮೇಲೂ ಅವಳು ಮುಡಿಗೇರಿಸಿದ ದುಂಡುಮಲ್ಲಿಗೆ ತನ್ನ ಕಂಪು ಬೀರುತ್ತಲೇ ಇರುತ್ತಿತ್ತು, ಅವರೆಲ್ಲರ ಅಸೀಮ ವಾತ್ಸಲ್ಯದಂತೆ! ರೈಲಿನ ಕಿಟಕಿಯಾಚೆಗೆ ಆತಂಕ ಹೊತ್ತು ಮುದುಡಿ ನಿಂತಿರುತ್ತಿದ್ದ ನನ್ನ ತಂದೆ, ತಾಯಿ, ಅಣ್ಣಂದಿರ ಪ್ರೀತಿ ತುಂಬಿದ ಮುಖಗಳನ್ನು ನಾನು ಎದೆಯಲ್ಲಿ ಹಾಗೆಯೇ ಅಚ್ಚಾಗಿಸಿಕೊಳ್ಳುತ್ತಿದ್ದೆ. ಮತ್ತೊಮ್ಮೆ ನಾನು ಅವರನ್ನು ಭೇಟಿ ಆಗುವವರೆಗೂ ನನ್ನ ನೆನಪಿನ ಚೌಕಟ್ಟಿನಲ್ಲಿ ತೂಗಾಡುತ್ತಿದ್ದುದು ಅದೇ ಒಲುಮೆಯ ಸ್ಥಿರಚಿತ್ರ! ಈಗ ಆ ಬೆಂಗಳೂರನ್ನೂ ತೊರೆದು ಸಾವಿರಾರು ಮೈಲು ದೂರದ ಈ ಅಮೆರಿಕಾಕ್ಕೆ ಹೊರಟು ನಿಂತ ವೇಳೆ ನನ್ನ ತಾಯಿಯೇನಾದರೂ ಇದ್ದಿದ್ದರೆ ಆ ಹೃದಯ ಅದು ಹೇಗೆ ಒಡೆದು ಚೂರಾಗಿರುತ್ತಿತ್ತೋ? ಈ ಬದುಕೇ ಹೀಗೆ - ಇದೊಂದು ನಿಲ್ಲದ ಪಯಣ - ಎಲ್ಲಾ ಭಾವನೆಗಳನ್ನೂ ಧಿಕ್ಕರಿಸುತ್ತಾ ಮುನ್ನಡೆವುದೊಂದೇ ಇದರ ಮೈಗಂಟಿದ ಗುಣ!

ವಿದಾಯದ ಕುರಿತು ಬರೆಯ ಹೊರಟರೆ ಮನದ ಅಂಗಳದಿಂದ ಮೆರವಣಿಗೆ ಹೊರಟು ನಿಲ್ಲುವ ಸಾಲು ಸಾಲು ಸಿಂಗಾರದ ನೆನಪುಗಳು. ಅವು ಬರಹಕ್ಕಿಳಿದು ಬರಲು ಬಯಸದ ಬಂಗಾರದ ನೆನಪುಗಳು! ಒಟ್ಟಿನಲ್ಲಿ ವಿದಾಯದ ಘಳಿಗೆಗಳು ಎಂತಹ ಕಠಿಣ ಹೃದಯವನ್ನೂ ಕ್ಷಣದ ಮಟ್ಟಿಗಾದಾರೂ ಮೆತ್ತಗಾಗಿಸುವುದು ಮಾತ್ರ ಸುಳ್ಳಲ್ಲ. ಎಷ್ಟೋ ದಿನ ಜೊತೆ ಜೊತೆಯಲ್ಲೇ ಇದ್ದಾಗ ಸಣ್ಣ ಪುಟ್ಟ ಕಾರಣಗಳಿಗೂ ಸಿಡಿಮಿಡಿಗೊಳ್ಳುವ ಮನಸ್ಸು ವಿದಾಯದ ಆ ದುರ್ಬಲ ನಿಮಿಷಗಳಲ್ಲಿ 'ಛೇ, ಇಷ್ಟು ದಿನ ನಾನೇ ಇವರನ್ನೆಲ್ಲಾ ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲವೇ" ಎಂದು ಆಶ್ಚರ್ಯಚಕಿತವಾಗುವುದೂ ಇದೆ. ವಿರಹದ ಕಹಿ ಅನುಭವಿಸಿದವರಿಗೆ ಮಾತ್ರ ಮಿಲನದ ಸಿಹಿ ದೊರೆಯುವುದು ಸಾಧ್ಯ. ಅಗಲಿಕೆಯ ನೆನಪುಗಳು ನಮ್ಮ ನಮ್ಮ ಪ್ರೀತಿಯನ್ನು ಮತ್ತಷ್ಟು ಒರೆಗೆ ಹಚ್ಚಿ ನೋಡಿಕೊಳ್ಳಲು ಬೇಕು. ಈ ಬದುಕು ಸವಿಯಲು ಇಂತಹ ಸವಿನೆನಪುಗಳು ಬೇಕೇ ಬೇಕು!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more