• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಮೆಯ ನೋಡಲು ತಾ ಬಂದ

By Staff
|

Memories of the day I was propsed to him/herರಾಹುಕಾಲವಿಲ್ಲದ ಹೊತ್ತಿನಲ್ಲಿ, ಹೂವು, ಹಣ್ಣು, ಮಂಗಳದ್ರವ್ಯಗಳು ತುಂಬಿದ ತಟ್ಟೆಯೊಡನೆ ಹೆಣ್ಣಿನ ಮನೆಗೆ ಗಂಡಿನ ಪರಿವಾರದ ಆಗಮನ. ಯಾವುದೇ ಕಾರಣಕ್ಕೂ ಮೂರು ಜನ ಹೆಣ್ಣು ನೋಡಲು ಬರುವಂತಿಲ್ಲ. ಅದು ಅಶುಭದ ಸಂಕೇತವೆನಿಸಿಕೊಳ್ಳುತ್ತಿತ್ತು. ತಮ್ಮ ಮನೆಯವರು ಯಾರೂ ಇಲ್ಲದಿದ್ದ ಪಕ್ಷದಲ್ಲಿ, ನೆರೆಮನೆಯ ಸಣ್ಣಮಗುವನ್ನಾದರೂ ಮಡಿಲಲ್ಲಿ ಎತ್ತಿಕೊಂಡು ಬಂದು ಸಂಖ್ಯೆಯನ್ನು ನಾಲ್ಕಾಗಿಸುತ್ತಿದ್ದುದು ವಾಡಿಕೆ. ಪಕ್ಷ ಮಾಸ, ಆಷಾಢ ಮಾಸ, ಶೂನ್ಯ ಮಾಸಗಳೇನಾದರೂ ಅಡ್ಡ ಬಂದರೆ ಅದು ಕಳೆಯುವವರೆಗೆ ಮದುವೆಯ ಮಾತುಕಥೆಗೆ ಅಲ್ಪ ವಿರಾಮ. ಹೊಸ ಸಂಬಂಧ ಕುದುರಿಸುವ ಪ್ರಯತ್ನ ನಡೆಯುತ್ತಿರುವಾಗ ಭಾವೀ ಬೀಗರ ಮನೆಯಲ್ಲಿ ಊಟೋಪಚಾರ ಸ್ವೀಕರಿಸಬಾರದೆನ್ನುವ ನಿಯಮವನ್ನೂ ಕೆಲವರು ಪಾಲಿಸುವುದುಂಟು.

ಇಲ್ಲಿ ಹೆಣ್ಣು ನೋಡುವುದು ಒಂದು ನೆಪ ಮಾತ್ರ. ಅದರ ಜೊತೆಗೆ ಹಾಸುಹೊಕ್ಕಾದ ಇತರ ಸಂಗತಿಗಳೂ ಇರುತ್ತಿದ್ದವು. ಅಪರಿಚಿತಳಾದ ಹೆಣ್ಣೊಬ್ಬಳನ್ನು ಸೊಸೆಯಾಗಿ ಸ್ವೀಕರಿಸಿ ಮನೆಗೆ ಕರೆತರುವ ಮೊದಲು ಅವಳು ಬೆಳೆದುಬಂದ ವಾತಾವರಣ, ಹೆಣ್ಣಿನ ಆಪ್ತವರ್ಗದ ಗುಣ, ನಡವಳಿಕೆಗಳ ಅವಲೋಕನವೂ ಇನ್ನೊಂದು ಉದ್ದೇಶವಾಗಿತ್ತು. ಮನುಷ್ಯನ ವ್ಯಕ್ತಿತ್ವದ ನಿರ್ಮಾಣದಲ್ಲಿ ಅವನ ಸುತ್ತಲಿನ ಪರಿಸರವೂ ಕಾರಣವೆಂಬುದು ಮನಶಾಸ್ತ್ರಜ್ಞರು ಒಪ್ಪಿಕೊಂಡ ವಿಚಾರವೇ ಆಗಿದೆ. ಬಾಳಸಂಗಾತಿಯಾಗಿ ಬರುವ ಹೆಣ್ಣಿನ ಬಾಹ್ಯ ರೂಪಕ್ಕಿಂತ, ಅವಳ ಸುಸಂಸ್ಕೃತ ಮನೆತನದ ಹಿನ್ನಲೆಯೇ ಸುಖಸಂಸಾರಕ್ಕೆ ಮುಖ್ಯವೆಂಬುದನ್ನು ನಮ್ಮ ಜನಪದರು ತಮ್ಮ ಮುಗ್ಧ ನುಡಿಗಳಲ್ಲಿ ಹಿಡಿದಿಟ್ಟಿರುವುದು ಹೀಗೆ- "ಜಲ ನೋಡಿ ಬಾವಿ ತೆಗೆಯೊ ನಂಜುಂಡ, ಕುಲ ನೋಡಿ ಹೆಣ್ಣ ತೆಗೆಯೊ!"

ಹೆಣ್ಣು ನೋಡುವ ಕಾರ್ಯಕ್ರಮದಲ್ಲಿ ಹೆಣ್ಣಿನಿಂದ ಹಾಡಿಸುವ ಪರಿಪಾಠವಿತ್ತು. ಹೆಣ್ಣಾದ ಮೇಲೆ ಅವಳಿಗೆ ಹಾಡಲು ಬರಲೇಬೇಕು ಎಂಬುದು ಅಂದಿನ ಅಲಿಖಿತ ನಿಯಮ. ಹಿಂದಿನ ಚಲನಚಿತ್ರಗಳನ್ನು ಒಮ್ಮೆ ನೆನಪಿಸಿಕೊಳ್ಳಿ. "ಎಲ್ಲಿ ಒಂದು ಹಾಡು ಹಾಡಮ್ಮಾ.." ಎಂದು ಹಿರಿಯರಾರೋ ನುಡಿದೊಡನೆ, ಕನ್ಯೆಯ ತಮ್ಮ ಓಡಿ ಹೋಗಿ ವೀಣೆಯನ್ನು ತಂದು ಅಕ್ಕನ ಕೈಗಿಟ್ಟನೆಂದೇ ಲೆಕ್ಕ. ಆ ಸನ್ನಿವೇಶಕ್ಕೆಂದು ಸೃಷ್ಟಿಯಾಗಿರುವ ಚಿತ್ರಗೀತೆಗಳಂತೂ ಒಂದಕ್ಕಿಂತ ಒಂದು ಮಧುರ.

ಸ್ಕೂಲ್‍ಮಾಸ್ಟರ್ ಚಿತ್ರಕ್ಕಾಗಿ ಸೂಲಮಂಗಲಂ ರಾಜಲಕ್ಷ್ಮಿ ಹಾಡಿರುವ "ಭಾಮೆಯ ನೋಡಲು ತಾ ಬಂದ", ಸಾಕ್ಷಾತ್ಕಾರ"ದಲ್ಲಿ ಪಿ.ಸುಶೀಲಾ ಹಾಡಿರುವ "ಕಾದಿರುವಳು ಕೃಷ್ಣಾ", "ಗಾಳಿಮಾತು" ಚಿತ್ರದಲ್ಲಿ, ಎಸ್.ಜಾನಕಿಯವರು ಹಾಡಿರುವ "ನಗಿಸಲು ನೀನು, ನಗುವೆನು ನಾನು" ಹಾಡುಗಳು ತಕ್ಷಣ ನೆನಪಿಗೆ ಬಂದವಲ್ಲವೇ? "ಮಹಾತ್ಯಾಗ" ಚಿತ್ರದಲ್ಲಿ ವೀಸಿಯವರ ಭಾವಗೀತೆ "ಯಾವ ಜನ್ಮದ ಕೆಳೆಯೋ ಕಾಣೆನು" ಬಳಕೆಯಾಗಿದೆ. ಈ ಕವಿತೆಯ "ಕಣ್ಗೆ ರೂಪವು ಇಳಿವ ಮುನ್ನವೇ ಎದೆಗೆ ಪ್ರೇಮವು ಹರಿಯಿತು" ಸಾಲಂತೂ ಆ ಸನ್ನಿವೇಶಕ್ಕೆ ಅತ್ಯುತ್ತಮವಾಗಿ ಹೊಂದಿಕೆಯಾಗುತ್ತದೆ.

ಮದುವೆಗೆಂದು ಹೆಣ್ಣು ನೋಡುವ ಕಾರಣದಿಂದ ಹೆಣ್ಣು ಹೆತ್ತವರ ಮನೆಗೆ ಎಡತಾಕುತ್ತಾ, ಉಪ್ಪಿಟ್ಟು, ಕೇಸರಿಬಾತ್ ಸವಿಯುತ್ತಿದ್ದ ಗಂಡುಗಳ ಪಾಲಿಗೆ ಹೆಣ್ಣು ನೋಡುವ ಶಾಸ್ತ್ರ ಎಷ್ಟರಮಟ್ಟಿಗೆ ಆಹ್ಲಾದಕರವಾಗಿತ್ತೋ ಗೊತ್ತಿಲ್ಲ. ಆದರೆ ಕಂಡಕಂಡ ಗಂಡುಗಳ ಮುಂದೆ ಪ್ರದರ್ಶನದ ವಸ್ತುವಿನಂತೆ ಕುಳಿತುಕೊಳ್ಳುವ ಈ ಪದ್ಧತಿ ಹೆಣ್ಣುಗಳ ಪಾಲಿಗೆ ಮಾತ್ರ ಅಸಹನೀಯವೇ ಆಗಿತ್ತೆನ್ನಬಹುದು. ಹೆಣ್ಣಿನ ಗುಣ,ಸ್ವಭಾವ,ವ್ಯಕ್ತಿತ್ವಗಳನ್ನು ಗೌರವಿಸದ, ಕೇವಲ ಹೊರ ರೂಪದಿಂದಷ್ಟೇ ಅವಳನ್ನು ಅಳೆಯುವ ಈ ಸಂಪ್ರದಾಯ ಬಹಳ ನೋವುಂಟು ಮಾಡುವಂತಹದಾಗಿತ್ತು.

ಈ ಸಂದರ್ಶನ ಒಂದು, ಎರಡು ಗಂಡುಗಳನ್ನು ನೋಡುವಷ್ಟರ ಮಟ್ಟಿಗೆ ಸೀಮಿತವಾಗಿದ್ದರೆ ಸರಿ. ಸಾಧಾರಣ ರೂಪ ಹೊಂದಿದ್ದು, ಗಂಡುಗಳಿಂದ ನಿರಂತರ ನಿರಾಕರಣೆಗೆ ಗುರಿಯಾಗುತ್ತಲೇ ಉಳಿಯುತ್ತಿದ್ದ ಹೆಣ್ಣಿನ ಮನಸ್ಸಿಗಾಗುತ್ತಿದ್ದ ನೋವು, ಅಪಮಾನ, ಕೀಳರಿಮೆಯ ಭಾವ ಅಪಾರ. ಎಲ್ಲವೂ ಒಪ್ಪಿಗೆಯಾದ ನಂತರವೂ ಚಾಡಿಮಾತು, ಗಾಳಿಮಾತುಗಳ ಕಾರಣಗಳಿಂದಾಗಿ ಮುರಿದು ಬೀಳುತ್ತಿದ್ದ ಸಂಬಂಧಗಳಿಗೂ ಲೆಕ್ಕವಿಲ್ಲ. ಇನ್ನೂ ತುಂಬಾ ಹಿಂದೆ ಹೆಣ್ಣು ನೋಡುವ ಕಲಾಪದಲ್ಲಿ, ಹುಡುಗಿಯ ಕಣ್ಣು ಸರಿಯಾಗಿದೆಯೋ ಇಲ್ಲವೋ ತಿಳಿಯಲು ಸೂಜಿ, ದಾರ ಪೋಣಿಸಲು ಹೇಳುತ್ತಿದ್ದ, ನಡಿಗೆಯನ್ನು ಪರೀಕ್ಷಿಸಲು ನಡೆದಾಡಲು ಹೇಳುತ್ತಿದ್ದ ಅಮಾನವೀಯ ಅಭ್ಯಾಸಗಳೂ ಜಾರಿಯಲ್ಲಿದ್ದವೆಂದು ಕೇಳಿ ತಿಳಿದಿದ್ದೇನೆ. ಆದರೆ ನಾನೆಂದೂ, ಎಲ್ಲೂ ಇಂತಹವುಗಳನ್ನು ಕಂಡಿಲ್ಲ!

ಇಂದಿನಂತೆ ದಿನ ಪತ್ರಿಕೆಗಳ ಮ್ಯಾಟ್ರಿಮೋನಿಯಂ ವೇದಿಕೆ ಮೂಲಕ, ಅಂತರಜಾಲದ ಹಲವಾರು ತಾಣಗಳ ಮೂಲಕ ಗಂಡು-ಹೆಣ್ಣುಗಳು ಪರಸ್ಪರ ಪರಿಚಯ ಮಾಡಿಕೊಳ್ಳುವ, ಗೆಳೆತನ ಬೆಳೆಸಿಕೊಳ್ಳುವ ಅವಕಾಶವಿಲ್ಲದಿದ್ದುದರಿಂದ ಹೆಣ್ಣು ನೋಡುವ ಕಾರ್ಯಕ್ರಮ ಅಂದಿನಮಟ್ಟಿಗೆ ಅನಿವಾರ್ಯವೂ ಆಗಿತ್ತೆನ್ನಬಹುದು. ಈಗ ಗಂಡು, ಹೆಣ್ಣು ಒಬ್ಬರನ್ನೊಬ್ಬರು ಅರಿತುಕೊಳ್ಳಲು ಅನೇಕ ಸಾಧನಗಳಿದ್ದು, ಪ್ರೇಮವಿವಾಹಗಳು ಹೆಚ್ಚಾಗಿರುವ ಈ ಹೊತ್ತಿನಲ್ಲಿ ಹಿಂದಿನಂತೆ "ಹೆಣ್ಣು ನೋಡುವ ಶಾಸ್ತ್ರ" ಮದುವೆಯ ಒಂದು ಭಾಗವಾಗಿ ಉಳಿದಿಲ್ಲ. ಹಾಗೆಂದು ಈ ಪದ್ಧತಿ ಪೂರ್ತಿ ಕಣ್ಮರೆಯಾಗಿಯೂ ಇಲ್ಲ. ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ಸುಧಾರಿತ ರೂಪ ಪಡೆದುಕೊಂಡಿದೆ.

ಕಾಲಾಯ ತಸ್ಮೈ ನಮಃ! ಬದಲಾಗುತ್ತಿರುವ ಜನಜೀವನದ ಅಗತ್ಯಗಳಿಗೆ ತಕ್ಕಂತೆ ನಮ್ಮ ಶಾಸ್ತ್ರ, ಸಂಪ್ರದಾಯಗಳೂ ಬದಲಾವಣೆಗೊಂಡರೆ ಅದರಲ್ಲಿ ತಪ್ಪಾದರೂ ಎಲ್ಲಿದೆ?

ಅದೆಲ್ಲಾ ಇರಲಿ. ನಿಮ್ಮ ಬಾಳಸಂಗಾತಿಯನ್ನು ನೀವು ಮೊದಲಬಾರಿ ನೋಡಿದ್ದೆಲ್ಲಿ? ನೆನಪಿಲ್ಲವೇ? ನಾನಂತೂ ನಂಬುವುದಿಲ್ಲ. ಏಕೆಂದರೆ, ಆ ದಿನ ಮರೆತುಹೋಗಿರುವುದಂತೂ ಸಾಧ್ಯವೇ ಇಲ್ಲ. ಹೆಚ್ಚೆಂದರೆ ಸ್ವಲ್ಪ ಮರೆವಿನ ಧೂಳು ಮುಸುಕಿರಬಹುದು ಅಷ್ಟೆ. ನಾನು ಮೇಲೆ ಹೇಳಿದಂತೆ ತೀರಾ ಸಾಂಪ್ರದಾಯಿಕ ಭೇಟಿ ನಿಮ್ಮದಾಗಿಲ್ಲದೇ ಇರಬಹುದು. ಬೇಂದ್ರೆಯವರು ಬರೆದಂತೆ "ಹಳ್ಳದ ದಂಡ್ಯಾಗ ಮೊದಲಿಗೆ ಕಂಡಿದ್ದ" ಆ ಮುಖವೇ ಬಾಳಿನುದ್ದಕ್ಕೂ ಸ್ಫೂರ್ತಿಯ ಚಿಲುಮೆಯಾಗಿ ಹಿಂಬಾಲಿಸಿರಬಹುದು ; ಸಂತೆ ಗದ್ದಲದ ನಡುವೆ ತಟ್ಟನೆ ಹಿಡಿದು ನಿಲ್ಲಿಸಿದ ಯಾರದೋ ಕೊರಳು ಬಿಡಿಸಲಾಗದ ಬಂಧ ಬೆಸೆದಿರಬಹುದು ; ಗುಡಿಯಲ್ಲಿ ಮೂರ್ತಿಯೆದುರು ಕಣ್ಮುಚ್ಚಿ ನಿಂತಾಗ, ಒಳಗಣ್ಣುಗಳೆದುರಿನಲ್ಲಿ ಮತ್ತಾರದೋ ಮನಮೋಹಕ ರೂಪ ಪ್ರತ್ಯಕ್ಷವಾಗಿ ಚಿತ್ತವನ್ನು ಚಂಚಲಗೊಳಿಸಿ ಕಾಡಿರಲೂರಬಹುದು.

ಅಲ್ಲೋ, ಇಲ್ಲೋ, ಇನ್ನೆಲ್ಲೋ ಆಗಿರಲಿ. ಒಮ್ಮೆ ನಿಮ್ಮ ಬದುಕಿನ ಫ್ಲಾಷ್ ಬ್ಯಾಕಿಗೆ ಹೋಗಿ ಬನ್ನಿ. ಅಲ್ಲಿ ಸಿಕ್ಕುವ ವರ್ಣರಂಜಿತ ಚಿತ್ರಗಳನ್ನು ಎತ್ತಿ ತಂದು, ಆ ನೆನಪುಗಳನ್ನು ಮತ್ತೊಮ್ಮೆ ಎದೆಗೊತ್ತಿ ಆನಂದಿಸಿ. ಮೊದಲಬಾರಿ ಕದ್ದು ಕದ್ದು ಒಬ್ಬರನ್ನೊಬ್ಬರು ನೋಡಿದಾಗಿನ ಆ ರೋಮಾಂಚನವನ್ನು ಈಗ ನೆನೆದಾಗಲೂ ಮೈಮನ ಮತ್ತೊಮ್ಮೆ ಪುಳಕಗೊಳ್ಳದಿದ್ದರೆ ಆಗ ಹೇಳಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more