• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಮೆಯ ನೋಡಲು ತಾ ಬಂದ

By Staff
|

ಮದುವೆಗೊಂದು ಸಂದರ್ಶನ! ಹುಡುಗಿ ಹಾಡಿ, ಕುಣಿದು ವರ ಮಹಾಶಯನ ಮನವೊಲಿಸಬೇಕು. ವಧು ದಕ್ಷಿಣೆ ನೀಡಿ ಬೆಣ್ಣೆ ಸವರಬೇಕು. ವಧು ಪರೀಕ್ಷೆಯಲ್ಲಿ ಪಾಸಾಗಬೇಕು! ಆಮೇಲೆ ಮದುವೆ, ಮಸಿ, ಮಕ್ಕಳು! ಈ ವ್ಯಂಗ್ಯಗಳು ಏನೇ ಇರಲಿ, ಹೆಣ್ಣು ನೋಡುವ ದಿನದಂದು ಮನೆ ತುಂಬ ಹಾಲು ಬೆಳದಿಂಗಳು!


  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

sritri@gmail.com

Memories of the day I was propsed to him/herಅದು ಹಬ್ಬ, ಹುಣ್ಣಿಮೆಯ ದಿನವಲ್ಲ! ಪಂಚಾಂಗವೆಲ್ಲಾ ತಡಕಿದರೂ ಏನೇನೂ ವಿಶೇಷವಿಲ್ಲ. ಆದರೂ ಮನೆಯಲ್ಲಿ ತುಂಬಿತುಳುಕುತ್ತಿರುವ ಸಂಭ್ರಮ, ಸಡಗರದ ವಾತಾವರಣ.

ಅಕ್ಕನಿಂದಲೋ, ಅತ್ತಿಗೆಯರಿಂದಲೋ ಸಿಂಗರಿಸಿಕೊಳ್ಳುತ್ತಾ, ಅವರ ಕೀಟಲೆಯ ಮಾತುಗಳಿಗೆ ನಾಚುತ್ತಾ, ಮನಸಿನಲ್ಲೇ ಕನಸಿನ ಚಿತ್ತಾರ ಬರೆದುಕೊಳ್ಳುತ್ತಿರುವ ಹೆಣ್ಣು; ಅಡುಗೆ ಮನೆಯಲ್ಲಿ ತುಪ್ಪ, ಸಕ್ಕರೆ, ದ್ರಾಕ್ಷಿ, ಗೋಡಂಬಿಗಳ ಘಮಘಮ ಎಬ್ಬಿಸುತ್ತಾ, ಮಗಳ ಮದುವೆಯಾಗಿ ಅವಳು ಗಂಡನೊಡನೆ ಹೊರಟುನಿಂತಂತೆಯೇ ಕಲ್ಪಿಸಿಕೊಂಡು ಹನಿಗಣ್ಣಾಗುತ್ತಲೇ ಸಿಹಿ, ಖಾರ ತಿಂಡಿಗಳ ತಯಾರಿಯಲ್ಲಿ ತೊಡಗಿರುವ ತಾಯಿ; ನಿಂತಲ್ಲಿ ನಿಲ್ಲದೆ ಒಳಗೂ ಹೊರಗೂ ಗಸ್ತು ತಿರುಗುತ್ತಿರುವ ತಂದೆ; ಹೆಣ್ಣು ಹೆತ್ತ ತಂದೆಯ ಹೊಣೆಯನ್ನು ತನ್ನ ಹೆಗಲಿಗೂ ಅಷ್ಟಿಷ್ಟು ವರ್ಗಾಯಿಸಿಕೊಂಡು, ಎಂದಿಗಿಂತಲೂ ಸ್ವಲ್ಪ ಹಿರಿಯನಂತೆ ಗಾಂಭೀರ್ಯದಿಂದ ವರ್ತಿಸುತ್ತಿರುವ ಅಣ್ಣ; ತಾಯಿ ಯಾವುದೋ ಸಹಾಯಕ್ಕೆಂದು ಕರೆದಾಗ ಅತ್ತ, ತಂದೆ ಮತ್ತಾವುದಕ್ಕೋ ಕರೆದಾಗ ಇತ್ತ, ಸೈನಿಕನಂತೆ ಚಟುವಟಿಕೆಯಿಂದ ತಿರುಗುತ್ತಾ, ತೆರೆದ ಕಿಟಕಿಯಲ್ಲೊಮ್ಮೆ ಇಣುಕಿನೋಡಿ "ಬಂದರು.... ಬಂದರು" ಎಂದು ಸುಳ್ಳೇ ಕೂಗಿ ಎಲ್ಲರ ಎದೆಬಡಿತವನ್ನು ಕ್ಷಣಕಾಲ ಹೆಚ್ಚಿಸಿ, ಬೈಯಿಸಿಕೊಂಡೂ ನಗುತ್ತಿರುವ ತುಂಟ ತಮ್ಮ.

ಇದು ಮದುವೆಯ ವಯಸ್ಸಿಗೆ ಬಂದಿದ್ದ ಹೆಣ್ಣುಮಕ್ಕಳನ್ನು ಹೊಂದಿದ್ದ, ಅಂದಿನ ಸಂಪ್ರದಾಯಸ್ಥ ಮಧ್ಯಮ ವರ್ಗದ ಮನೆಗಳಲ್ಲಿನ ಒಂದು ಸಾಮಾನ್ಯ ದೃಶ್ಯ. ಈ ಚಿತ್ರಣ ಮತ್ತಷ್ಟು ಸ್ಫುಟವಾಗಿ ಮೂಡಲು, ನಿಮ್ಮ ಕಲ್ಪನೆಯ ಕಣ್ಣುಗಳ ಮುಂದೆ ಹೆಣ್ಣು ಹೆತ್ತ ತಂದೆಯ ಪಾತ್ರಕ್ಕೆ ಕೆ.ಎಸ್.ಅಶ್ವಥ್ ಅವರನ್ನೋ, ತಾಯಿಯ ಪಾತ್ರಕ್ಕೆ ಪಂಢರಿಬಾಯಿಯವರನ್ನೋ ತಂದು ನಿಲ್ಲಿಸಿಕೊಳ್ಳಿ.

"ಮೊನ್ನೆ ತಾವರೆಗೆರೆಯ ಜೋಯಿಸರ ಮೊಮ್ಮಗನು ಹೆಣ್ಣು ನೋಡಲು ಬಂದ ಅವರ ಮನೆಗೆ" ಎಂದು ಕೆ. ಎಸ್. ನರಸಿಂಹಸ್ವಾಮಿಯವರ ಕವಿತೆಯಲ್ಲಿ ಬಂದಂತೆ, ಈ ಸಮಾರಂಭದ ಹೆಸರೇ "ಹೆಣ್ಣು ನೋಡುವುದು". ಇಲ್ಲಿ ಗಂಡನ್ನು ಹೆಣ್ಣು ನೋಡಿದಂತೆಯೇ, ಹೆಣ್ಣು, ಹೆಣ್ಣಿನ ಬಳಗದವರು ಗಂಡನ್ನೂ ನೋಡುತ್ತಾರೆ. ಆದರೆ ಗಂಡು ನೋಡುವ ನೋಟಕ್ಕೆ ಮಾತ್ರ ಒಂದು ಮದುವೆಯನ್ನು ನಿಶ್ಚಯಿಸುವ ಶಕ್ತಿ ಇರುತ್ತಿತ್ತಾದ್ದರಿಂದ ಬಹುಶ: ಈ ಕಲಾಪಕ್ಕೆ ಆ ಹೆಸರು ಬಂದಿರಬಹುದು!

ಆಗೆಲ್ಲ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದೊಡನೆ ಮನೆಗಳಲ್ಲಿ ಮದುವೆಯ ಮಾತುಗಳು ಪ್ರಾರಂಭವಾಯಿತೆಂದೇ ಅರ್ಥ. ಮಗಳ ಜೊತೆಗೆ ಓಡಾಡಿಕೊಂಡಿರುತ್ತಿದ್ದ ನೆರೆಹೊರೆಯ ಹುಡುಗಿಯರಿಗೆ ಗಂಡು ಗೊತ್ತಾಗಿದ್ದು ತಿಳಿದಕೂಡಲೇ ತಾಯಿಯ ಮುಖಗಳಲ್ಲಿ ಆತಂಕದ ಕರಿ ಮೋಡ ಸುಳಿಯಲಾರಂಭಿಸುತ್ತಿತ್ತು. ಅದರ ಜೊತೆಗೆ ಯಾವ ಚಿಂತೆಯನ್ನೂ ಹಚ್ಚಿಕೊಳ್ಳದ ಸ್ಥಿತಪ್ರಜ್ಞ ತಂದೆಗೂ ಕಾಟ ಶುರು. - "ಬೆಳೆದ ಹೆಣ್ಣು ಮಗಳನ್ನು ಮನೆಯಲ್ಲಿಟ್ಟುಕೊಂಡು ಹೀಗೆ ನಿಶ್ಚಿಂತರಾಗಿದ್ದರೆ ಹೇಗೆ?" ಎಂಬ ತಾಯಿಯ ತಿವಿತಕ್ಕೆ "ಅದಕ್ಕೆ ನಾನೇನು ಮಾಡಬೇಕು? ಗಂಡುಗಳೇನು ನಮ್ಮೂರ ಸಂತೆಯಲ್ಲಿ ಸಿಗುತ್ತವೆಯೇ ಹುಡುಕಿ ತರಲು?" ಎಂದು ಗೊಣಗಿಕೊಳ್ಳುತ್ತಲೇ ತಂದೆಯ ಕರ್ತವ್ಯ ಪ್ರಜ್ಞೆ ಜಾಗೃತವಾಗುತ್ತಿತ್ತು.

ತಾತನ ಕಾಲದಿಂದ ಮನೆ-ಮಂದಿಯ ಜಾತಕಗಳನ್ನೆಲ್ಲಾ ತನ್ನಲ್ಲೇ ಅಡಗಿಸಿಟ್ಟುಕೊಂಡಿರುತ್ತಿದ್ದ ದೊಡ್ಡ ರಿಜಿಸ್ಟರಿನಿಂದ ಮಗಳ ಜಾತಕವನ್ನು ಹುಡುಕಿ, ಬೇರೊಂದು ಹಾಳೆಯಲ್ಲಿ ಅದರ ನಕಲು ತೆಗೆದುಕೊಂಡರೆಂದರೆ, ಅಲ್ಲಿಗೆ ಜಾತಕ ಹೊರಬಿದ್ದಂತೆ. ಮನೆಗೆ ಬಂದ ನೆಂಟರಿಗೆ, ಸ್ನೇಹಿತರಿಗೆ "ನಮ್ಮ ಮಗಳಿಗೆ ಮದುವೆ ಮಾಡೋಣವೆಂದಿದ್ದೇವೆ. ನಿಮ್ಮ ಕಣ್ಣಿಗೆ ಒಳ್ಳೆಯ ವರ ಕಂಡು ಬಂದರೆ ದಯವಿಟ್ಟು ತಿಳಿಸಿ." - ಎಂಬ ಸವಿನಯ ಮನವಿಯೊಂದಿಗೆ ಜಾತಕದ ವಿತರಣೆ. ಇದು ಮದುವೆಯ ಮಂಗಳ ಮುಹೂರ್ತಕ್ಕೆ ಮುನ್ನುಡಿ.

"ಒಳ್ಳೆಯ ವರ" ಎಂಬ ಪದಕ್ಕೆ ಯಾವ ನಿಘಂಟಿನಲ್ಲಿ ಏನು ಅರ್ಥವಿದೆಯೋ ನನಗಂತೂ ಗೊತ್ತಿಲ್ಲ. ನನ್ನ ಅಮ್ಮನ ದೃಷ್ಟಿಯಲ್ಲಿ ಮಾತ್ರ ಸರಕಾರಿ ಕೆಲಸದಲ್ಲಿರುವವನೇ ಜಗತ್ತಿನ ಅತ್ಯಂತ ಒಳ್ಳೆಯ ವರನಾಗಿದ್ದ. "ಬೇಸಾಯ, ನೀಸಾಯ, ನಿನ್ನ ಮನೆಮಂದಿಯೆಲ್ಲಾ ಸಾಯ" ಎಂಬ ಗಾದೆ ಮಾತಿನಂತೆ, ಕೃಷಿಯನ್ನು ನೆಚ್ಚಿಕೊಂಡಿದ್ದ ತಂದೆಯ ಅನಿಶ್ಚಿತ ವರಮಾನದಲ್ಲಿ ಕಷ್ಟನಷ್ಟಗಳನ್ನೇ ಅನುಭವಿಸಿದ್ದ ಅಮ್ಮನಿಗೆ, ತಿಂಗಳ ಸಂಬಳ ಬರುವ, ನಿವೃತ್ತಿ ವೇತನ ತರುವ ಸರಕಾರಿ ಕೆಲಸ ದೇವರ ಕೆಲಸದಂತೆ ಆಕರ್ಷಕವಾಗಿ ಕಂಡಿದ್ದರೆ ಆಶ್ಚರ್ಯವೇನಿಲ್ಲ.

ಜಾತಕವನ್ನು ಅವರಿಂದ ಇವರಿಗೂ, ಇವರಿಂದ ಅವರಿಗೂ ತಲುಪಿಸುವ ಮಧ್ಯವರ್ತಿಗಳು ವಹಿಸುತ್ತಿದ್ದ ಪಾತ್ರ ಇಲ್ಲಿ ಬಹಳ ದೊಡ್ಡದು. "ಓಹೋ! ಈ ಹುಡುಗ ನನಗೆ ಚೆನ್ನಾಗಿ ಪರಿಚಯ. ಆ ಮನೆಗೆ ಸೊಸೆಯಾಗಲು ನಿಮ್ಮ ಹುಡುಗಿ ಪುಣ್ಯ ಮಾಡಿರಬೇಕು ", "ಆ ಹುಡುಗಿಯನ್ನು ನಾನು ಚಿಕ್ಕಂದಿನಿಂದ ಎತ್ತಿ ಆಡಿಸಿದ್ದೇನೆ. ಅಪ್ಪಟ ಚಿನ್ನದಂತಹ ಹೆಣ್ಣು"- ಇಂತಹ ಶಿಫಾರಸುಗಳ ಮೂಲಕ ಎರಡು ಕುಟುಂಬಗಳ ನಡುವೆ ಸಂಬಂಧದ ಸುಂದರ ಸೇತುವೆಯನ್ನು ನಿರ್ಮಿಸುತ್ತಿದ್ದವರೇ ಅವರು.

ಮದುವೆ ಮಾಡಿಸುವುದರಿಂದ ಮಧ್ಯವರ್ತಿಗಳಿಗೆ ಯಾವುದೇ ಲಾಭವಿಲ್ಲದಿದ್ದರೂ, ಕಲ್ಯಾಣ ಕಟ್ಟಿಸುವುದು ಒಂದು ಪುಣ್ಯಕಾರ್ಯ ಎಂಬ ಭಾವನೆ ಇದ್ದ ಕಾಲವದು. ಕೆಲವೊಮ್ಮೆ ಈ ಮಧ್ಯಸ್ಥಿಕೆಗಾರರು "ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡಿಸಬೇಕು" ಎಂಬ ಹುಸಿ ಆದರ್ಶಕ್ಕೆ ಕಟ್ಟುಬಿದ್ದು ಎಷ್ಟೋ ದಂಪತಿಗಳ ಬದುಕನ್ನೇ ನರಕವಾಗಿಸಿರುವ ಉದಾಹರಣೆಗಳೂ ಇವೆ. ಗಂಡಿನ ಅಥವಾ ಹೆಣ್ಣಿನ ಮುಚ್ಚಿಟ್ಟ ಲೋಪದೋಷಗಳು ಮುಂದೆ ಬಯಲಾಗಿ ಸಂಸಾರಗಳೇ ಬಿರುಗಾಳಿಗೆ ಸಿಕ್ಕಿರುವುದುಂಟು. "ಅಳಿಯನ ಕುರುಡು ಬೆಳಗಾದ ಮೇಲೆ ನೋಡು" ಎಂಬ ಗಾದೆ ಹುಟ್ಟಿಕೊಂಡಿರುವುದೇ ಹೀಗೆ.

ಎಲ್ಲಾ ಹೂವುಗಳು ಕಾಯಾಗಿ ಹಣ್ಣಾಗುವುದಿಲ್ಲ. ಕೊಟ್ಟ ಜಾತಕಗಳೆಲ್ಲಾ ಕೂಡುವುದಿಲ್ಲ. ಜಾತಕ ಕೂಡಿದ ಕಡೆ ಮುಂದುವರೆಯಲು ಮನಸ್ಸುಗಳು ಕೂಡಿಬರುವುದಿಲ್ಲ. ಜಾತಕಗಳೂ ಹೊಂದಿ, ಪರಸ್ಪರರಲ್ಲಿ ಸಂಬಂಧ ಬೆಳೆಸಬಹುದೆನ್ನುವ ನಂಬಿಕೆ ಬಂದಾಗಲೇ ಹೆಣ್ಣು ನೋಡುವ ಶಾಸ್ತ್ರ. ಅದಕ್ಕಾಗಿ ಮೊದಲು ಒಂದು ಶುಭದಿನವನ್ನು ನಿಗದಿಪಡಿಸಲಾಗುತ್ತಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more