• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ

By Staff
|

ಹೆಣ್ಣುಮಕ್ಕಳು ಕನ್ನಡಿಯ ಮುಂದೆ ಹೆಚ್ಚು ಹೊತ್ತು ನಿಂತರೆ ಆಕ್ಷೇಪಕ್ಕೆ ಗುರಿಯಾಗುತ್ತಿದ್ದರೂ, ಹೆಂಗಸರಿಗೂ ಕನ್ನಡಿಗೂ ಬಿಡಿಸಲಾರದ ಅನುಬಂಧ. ಹೀಗನ್ನುತ್ತಿರುವಂತೆಯೇ ನನಗೆ ನೆನಪಾಗುತ್ತಿದ್ದಾಳೆ - ಹಣೆಗೆ ಕುಂಕುಮ ಹಚ್ಚಿಕೊಳ್ಳಲು ಹೊರಟು, ತನ್ನ ಸೌಂದರ್ಯಕ್ಕೆ ತಾನೇ ಬೆರಗಾದವಳಂತೆ ಮೈಮರೆತು ನಿಂತಿರುವ ಬೇಲೂರಿನ ದರ್ಪಣ ಸುಂದರಿ! ಡಿ.ವಿ. ಗುಂಡಪ್ಪನವರು ತಮ್ಮ ‘‘ಅಂತ:ಪುರಗೀತೆ’’ಯಲ್ಲಿ ಈ ‘‘ಮುಕುರ ಮುಗ್ಧೆ’’ಯನ್ನು ಪ್ರಶ್ನಿಸುತ್ತಿದ್ದಾರೆ - ’’ ಮುಗುದೆಯಾದೆಯ ಕನ್ನೇ, ಮುಕುರದ ಚೆನ್ನೇ, ನಿನ್ನ ಮೈ ಸೊಬಗಿಗೆ ನೀನೇ ಮನವ ಸೋತು?’’ ಜಕಣ ಈಕೆಯನ್ನು ಕಡೆದಿರಿಸಿ ವರ್ಷಗಳೇ ಸಂದಿದ್ದರೂ ಇನ್ನೂ ಈಕೆಯ ಅಲಂಕಾರವೂ ಮುಗಿದಂತಿಲ್ಲ, ಡಿ.ವಿ.ಜಿ.ಯವರ ಪ್ರಶ್ನೆಗೆ ಉತ್ತರವೂ ದೊರೆತಂತಿಲ್ಲ.

ಕನ್ನಡಿಯನ್ನು ಮಂಗಳಕರವಾದ ವಸ್ತುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮದುವೆ ಸಮಾರಂಭದಲ್ಲಿ ಕಲಶ,ಕನ್ನಡಿಗಳನ್ನು ಹೊತ್ತ ಕಲಶಗಿತ್ತಿ ಪ್ರಧಾನ ಪಾತ್ರ ವಹಿಸುತ್ತಾಳೆ. ಶುಭ ಕೆಲಸಕ್ಕೆಂದು ಹೊರಟಾಗ ಕನ್ನಡಿ ಒಡೆದರೆ ಅದು ಅಪಶಕುನವೆನ್ನುವ ನಂಬಿಕೆ ಇದೆ. ಒಡಕು ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವುದನ್ನು ಕೂಡ ಅಮಂಗಳವೆಂದು ಭಾವಿಸಲಾಗುತ್ತದೆ. ಹಣ,ಆಭರಣದ ಪೆಟ್ಟಿಗೆಯಲ್ಲಿ ಕನ್ನಡಿ ಇಡುವುದರಿಂದ ಅವು ದ್ವಿಗುಣಗೊಳ್ಳುವುದೆಂದೂ ನಂಬಲಾಗುತ್ತದೆ! ಫೆಂಗ್‌ ಶುಯಿ ಪ್ರಕಾರ, ಊಟದ ಮೇಜನ್ನು ಪ್ರತಿಫಲಿಸುವಂತೆ ಕನ್ನಡಿಯನ್ನಿಡುವುದು ಸಂಪದಭಿವೃದ್ಧಿಗೆ ಸಂಕೇತವಾಗುತ್ತದೆ.

ಕನ್ನಡಿಯ ಬಗೆಗಿರುವ ಇನ್ನೊಂದು ಆಶ್ಚರ್ಯಕರವಾದ ನಂಬಿಕೆಯೆಂದರೆ, ಮರಣ ಸನ್ನಿಹಿತವಾದ ವ್ಯಕ್ತಿ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ, ತನ್ನ ಮುಖ ಅಲ್ಲಿ ಅವನಿಗೆ ಕಾಣಿಸುವುದಿಲ್ಲವಂತೆ! ಈ ನಂಬಿಕೆ ನಿಜವೋ ಸುಳ್ಳೋ ಪರೀಕ್ಷಿಸುವವರಾದರೂ ಯಾರು? ಬದುಕು, ಸಾವಿನೊಡನೆ ಸೆಣೆಸುತ್ತಿರುವ ಮನುಷ್ಯನ ಮುಖಕ್ಕೆ ಕನ್ನಡಿ ಹಿಡಿಯುವುದು ಶುದ್ಧ ಅವಿವೇಕ ಅನ್ನಿಸಿಕೊಂಡೀತು.

ಕನ್ನಡಿಯ ಕುರಿತಾದ ಕೆಲವು ನುಡಿಗಟ್ಟುಗಳು ನಮ್ಮ ಆಡುಭಾಷೆಯಲ್ಲಿ ಚಲಾವಣೆಯಲ್ಲಿದೆ. ಕಣ್ಣೆದುರೇ ಕಾಣಿಸುತ್ತಿರುವ ಸತ್ಯವನ್ನು ಅರಿಯಲು ಹೆಚ್ಚಿನ ಪರಿಶ್ರಮ ಬೇಕಿಲ್ಲ ಎಂಬ ಅಭಿಪ್ರಾಯ ‘‘ಅಂಗೈ ಹುಣ್ಣಿಗೆ ಕನ್ನಡಿ ಏಕೆ?’’ ಎಂಬ ಗಾದೆ ಮಾತಿನದು. ನಮಗೆ ಎಂದೆಂದಿಗೂ ಸಿಕ್ಕದ, ದಕ್ಕದ ವಸ್ತುವನ್ನು ಸೂಚಿಸಲು ‘‘ಕನ್ನಡಿಯಾಳಗಿನ ಗಂಟು’’ ಎನ್ನಲಾಗುತ್ತದೆ.

‘‘ಕನ್ನಡಿಯಾಳಗಿನ ಗಂಟು ಕಂಡ ಕಳ್ಳ ಕನ್ನವಿಕ್ಕಲವನ ವಶವಹುದೇ?’’ ಎನ್ನುತ್ತಾರೆ ದಾಸರು ‘‘ನಾ ನಿನ್ನ ಧ್ಯಾನದೊಳಿರಲು’’ ಎಂಬ ದೇವರನಾಮದಲ್ಲಿ ಕಣ್ಣಿನ ಕನ್ನಡಿಯಲ್ಲಿ ಕಣ್ಣನ್ನಿಟ್ಟು ನೋಡಿದಾಗ ಅಲ್ಲಿ ಮನುಷ್ಯನ ಅಂತರಂಗ ಪ್ರತಿಫಲಿಸುತ್ತದಂತೆ. ಒಬ್ಬ ವ್ಯಕ್ತಿ ಪ್ರಾಮಾಣಿಕ ಹೌದೋ,ಅಲ್ಲವೋ ಎಂಬುದನ್ನು ಅವನ ಕಣ್ಣುಗಳೇ ಕನ್ನಡಿಯಂತೆ ತೋರಿಸುವುದಂತೆ. ನಿಜವೇ? ಇರಲಾರದು. ಇದೂ ಕೂಡ ನಮ್ಮ ಹಲವಾರು ಸುಂದರ ಭ್ರಮೆಗಳಲ್ಲಿ ಒಂದಿರಬಹುದು. ಕಣ್ಣಿನ ಕನ್ನಡಿಯಲ್ಲೇ ಮುಚ್ಚಿಟ್ಟ ಅಂತರಂಗವನ್ನು ತೆರೆದು ಓದುವಂತಿದ್ದರೆ ತೆಲಗಿಗೇಕೆ ಬೇಕಿತ್ತು ಆ ಪಾಟಿ ಮಂಪರು ಪರೀಕ್ಷೆ?

‘‘ಕನ್ನಡಿ ಕೈತಪ್ಪಿ ಹನ್ನೆರಡು ಚೂರಾಗಿ, ಹೆಣ್ಣಿನ ಮನವು ಎರಡಾಗಿ, ದಾಳಿಂಬೆ ಹಣ್ಣಾದರೇನು ಫಲವಿಲ್ಲ’’ - ಎನ್ನುತ್ತಾನೆ ಜನಪದ ಕವಿ. ಇಲ್ಲಿ, ಮೊದಲು ಎಚ್ಚರದಿಂದಿರದೆ, ಕಾಲ ಕೈಮೀರಿ ಹೋದ ಮೇಲೆ ಪಶ್ಚಾತ್ತಾಪ ಪಡುವುದರಿಂದ ಏನೇನೂ ಪ್ರಯೋಜನವಿಲ್ಲ ಎಂಬ ಬದುಕಿನ ದೊಡ್ಡ ನೀತಿಯನ್ನು ಕನ್ನಡಿಯನ್ನು ಆಧಾರವಾಗಿ ಇಟ್ಟುಕೊಂಡು ಅತ್ಯಂತ ಸರಳವಾಗಿ ತಿಳಿಯ ಹೇಳಲಾಗಿದೆ. ಒಡೆದ ಕನ್ನಡಿ, ಒಡೆದ ಹಾಲು, ಒಡೆದ ಮನಸ್ಸು ಎಲ್ಲವೂ ಸರಿ ಸಮಾನ. ಒಮ್ಮೆ ಕೈತಪ್ಪಿದರೆ ಮತ್ತೆಂದೂ ಸರಿಪಡಿಸದಂತೆ ಒಡೆಯುವಂತಹ ನಾಜೂಕಿನ ವಸ್ತುಗಳು.

‘‘ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ, ಕಣ್ಣ ಮಿಂಚು ನೋಟದಲ್ಲಿ ಕಂಡೆ ಪ್ರೇಮ ದೀಪ’’ - ‘‘ಸ್ವಯಂವರ’’ ಚಿತ್ರಕ್ಕೆಂದು ಆರ್‌.ಎನ್‌.ಜಯಗೋಪಾಲ್‌ ಬರೆದಿರುವ ಈ ಚಿತ್ರಗೀತೆ ‘‘ಕನ್ನಡಿ’’ಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿರುವ ನಿತ್ಯ ಹರಿದ್ವರ್ಣ ಗೀತೆಗಳಲ್ಲೊಂದು! ಕನ್ನಡಿಯ ಅಗತ್ಯವನ್ನೇ ನಿರಾಕರಿಸುವಂತೆ ಪ್ರೀತಿಸಿದವರ ಕಣ್ಣನ್ನೇ ನಾವು ಕನ್ನಡಿಯಂತೆ ಉಪಯೋಗಿಕೊಳ್ಳುವುದು ಎಂತಹ ಸುಂದರ ಕಲ್ಪನೆ! ಆದರೆ, ಪಾಪ, ಕನ್ನಡಿ ತಯಾರಕರ ಪಾಡೇನು?

ಕೊನೆಯದಾಗಿ ‘‘ಕನ್ನಡಿ’’ ಎಂಬ ನನ್ನದೇ ಒಂದು ಹನಿಗವನದಿಂದ ಈ ಲೇಖನವನ್ನು ಮುಕ್ತಾಯಗೊಳಿಸುತ್ತಿದ್ದೇನೆ -

’’ಇನಿಯಾ,

ನನ್ನ ಕಣ್ಣುಗಳು

ವಿಕಸಿತ ಕಮಲವಲ್ಲ

ಪ್ರಶಾಂತ ತಿಳಿಗೊಳವಲ್ಲ

ಮಿನುಗುವ ನಕ್ಷತ್ರವಲ್ಲ

ಫಳಗುಟ್ಟುವ ಮೀನೂ ಅಲ್ಲ

ಅದು ಕೇವಲ-

ನಿನ್ನೊಲವ ಪ್ರತಿಫಲಿಪ

ಕನ್ನಡಿ ಮಾತ್ರ!’’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X