ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ

By Staff
|
Google Oneindia Kannada News


ಈಗಿನ ಆಧುನಿಕ ಮನೆಗಳ ಒಳಹೊಕ್ಕರಂತೂ ಎಲ್ಲೆಲ್ಲೂ ಹೊಳೆಯುವ ಶುಭ್ರ ಕನ್ನಡಿಗಳು. ಅಮೆರಿಕವು ಭೋಗಭೂಮಿ ಎನ್ನುವ ಮಾತಿಗೆ ಕನ್ನಡಿ ಹಿಡಿಯುವಂತೆ, ಇಲ್ಲಿ ಅಡುಗೆಮನೆಗಳಿಗಿಂತಲೂ ಸ್ನಾನದ ಮನೆಗಳೇ ವಿಶಾಲವಾಗಿರುತ್ತವೆ. ಅಲ್ಲಿ ಗೋಡೆಗಳ ಬದಲಿಗೆ ಕನ್ನಡಿಗಳು. ನಮ್ಮ ಮೈಯ ಬೆತ್ತಲೆ ನಮಗೇ ನಾಚಿಕೆ ಬರಿಸುವಂತೆ ಹೊಂಚಿ ಹಾಕಿ ನೋಡುವ ಕನ್ನಡಿಯ ಕಣ್ಣುಗಳು!

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
    ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ
    [email protected]
Mirror Mirror who is more beautiful than me?‘‘ಕನ್ನಡಿ ಎದುರು ಕುಳಿತುಕೊಂಡಿದ್ದ ಅವಳು ಒಮ್ಮೆ ಬೆಚ್ಚಿದಳು. ಕಾಲೇಜಿನ ಸೌಂದರ್ಯ ರಾಣಿಯಾಗಿ ಮೆರೆದವಳು ನಾನೇನಾ ಎಂದು ತನ್ನನ್ನು ತಾನು ಅಪನಂಬಿಕೆಯಿಂದ ಪ್ರಶ್ನಿಸಿಕೊಂಡಳು. ಕಣ್ಣಿನ ಸುತ್ತಲೂ ಇದ್ದ ಕಪ್ಪು ಉಂಗುರ, ಸುಕ್ಕು ಗಟ್ಟಿದ ಕೆನ್ನೆಗಳು, ರಸ ಹೀರಿದ ಕಬ್ಬಿನಂತಿರು ವ ಒಣಗಿದ ತುಟಿಗಳು, ಯಾವುದೋ ಪಳೆಯುಳಿಕೆಯನ್ನು ನೆನಪಿಗೆ ತರುವಂತಿದ್ದ ತನ್ನದೇ ಪ್ರತಿಬಿಂಬವನ್ನು ಕಂಡು ಅವಳು ವ್ಯಗ್ರಳಾದಳು. ಕೋಪ ಉಕ್ಕಿ ಬಂದು, ಬಳಿಯಲ್ಲೇ ಇದ್ದ ಗಡಿಯಾರವನ್ನು ಎತ್ತಿ ಕನ್ನಡಿಯತ್ತ ಬೀಸಿದಳು. ಫಳಾರೆಂಬ ಶಬ್ದದೊಂದಿಗೆ ಸಾವಿರ ಚೂರುಗಳಾಗಿ ಕೋಣೆಯ ತುಂಬಾ ಹರಡಿಕೊಂಡ ಕನ್ನಡಿಯಲ್ಲಿ ಅವಳಿಗೆ ತನ್ನದೇ ಒಡಕು ಬಾಳು ನೂರಾಗಿ, ಸಾವಿರವಾಗಿ ಕಾಣಿಸತೊಡಗಿತು.....’’

ವಾಕ್ಯಗಳು ಇವೇ ಅಲ್ಲವಿರಬಹುದು. ಆದರೆ ಇದೇ ಅರ್ಥ ಬರುವ ಸಾಲುಗಳನ್ನು ನೀವು ಅಸಂಖ್ಯ ಕಥೆ, ಕಾದಂಬರಿಗಳಲ್ಲಿ ಓದಿಯೇ ಇರುತ್ತೀರಿ. ಕನ್ನಡಿಯನ್ನು ನಮ್ಮ ಸಾಹಿತ್ಯದಲ್ಲಿ ಆತ್ಮಾವಲೋಕನಕ್ಕೆ ಒಂದು ಉತ್ತಮ ಸಾಧನವನ್ನಾಗಿ ಬಳಸಿಕೊಳ್ಳಲಾಗಿದೆ. ಕಥೆ,ಕಾದಂಬರಿಗಳಲ್ಲಿ ಮಾತ್ರವಷ್ಟೇ ಅಲ್ಲ, ಅದೆಷ್ಟೋ ಸಿನಿಮಾಗಳಲ್ಲಿ ಇದು ದೃಶ್ಯರೂಪದಲ್ಲಿಯೂ ಬಂದು ಹೋಗಿವೆ.

ಒಂದೇ ಮನಸ್ಸಿನ ಎರಡು ದ್ವಂದ್ವಗಳನ್ನು ಪ್ರೇಕ್ಷಕನಿಗೆ ಅರ್ಥ ಮಾಡಿಸಲು ನಿರ್ದೇಶಕರು ಕಂಡಿಕೊಂಡ ಅತಿ ಸಮರ್ಥ ವಿಧಾನವೆಂದರೆ, ಕನ್ನಡಿಯ ಮೂಲಕ ಬಿಂಬ,ಪ್ರತಿಬಿಂಬಗಳ ಸಂವಾದ ಏರ್ಪಡಿಸುವುದು. ಮುಖ ಮನಸ್ಸಿನ ಭಾವನೆಗಳ ಕನ್ನಡಿ ಎನ್ನುವುದುಂಟು. ಅದೇ ಭಾವನೆಗಳನ್ನು ಕನ್ನಡಿಯ ಮೂಲಕ ವ್ಯಕ್ತಪಡಿಸುವುದೂ ಸಿನಿಮಾ ಜನರಿಗೆ ಸುಲಭವಾಗಿ ಕಂಡಿರಬೇಕು.

ತನ್ನನ್ನು ತಾನು ಸಿಂಗರಿಸಿಕೊಂಡು, ಇತರರಿಗೆ ಚಂದವಾಗಿ ಕಾಣಿಸಬೇಕು ಎಂಬ ಪ್ರವೃತ್ತಿ ಮಾನವನಲ್ಲಿ ಮೂಡಿದಾಗಲೇ ಕನ್ನಡಿಯ ಆವಿಷ್ಕಾರವಾಗಿದೆಯೆಂದು ಸುಲಭವಾಗಿ ಊಹಿಸಬಹುದು. ನಿಂತ ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಮೊದಲ ಬಾರಿ ಕಂಡು ಮೋಹಿತನಾದ ಮನುಜನೇ ಇಂದಿನ ವಿವಿಧ ಆಕಾರದ ಕನ್ನಡಿಗಳಿಗೊಂದು ಸುಂದರ ಮುನ್ನುಡಿ ಬರೆದವನು.

ತಾಮ್ರ ಮುಂತಾದ ಲೋಹದ ಹಾಳೆಗಳನ್ನು ಅತಿ ನಯವಾಗಿಸಿ ಹೊಳೆಯುವಂತೆ ಮಾಡಿ ಕನ್ನಡಿಯಂತೆ ಉಪಯೋಗಿಸಲು ಶುರುವಾಗಿದ್ದು, ಇಂದಿನ ನವೀನ ಮಾದರಿಯ ಗಾಜಿನ ಕನ್ನಡಿಗಳವರೆಗೆ ಇದರ ಇತಿಹಾಸ ಹರಿದು ಬಂದಿದೆ. ಭಾರತೀಯರ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತದಲ್ಲಿ ಕನ್ನಡಿಯ ಪ್ರಸ್ತಾಪ ಬರುತ್ತದೆ. ಕೆಲವು ಹಳೆಯ ಕಥೆಗಳಲ್ಲಿ ನವಿಲುಗನ್ನಡಿ, ರತ್ನಗನ್ನಡಿ, ಮಾಯಾ ಕನ್ನಡಿಗಳ ಉಲ್ಲೇಖ ಕಂಡು ಬರುತ್ತದೆ. ‘‘ಬಬ್ರುವಾಹನ’’ ಚಿತ್ರದಲ್ಲಿ ಉಲೂಪಿಯ ತಂದೆ ಮಾಯಾಗನ್ನಡಿಯ ಎದುರು ನಿಂತು, ಚಿತ್ರಾಂಗದೆಯಾಡನೆ ನಲಿಯುತ್ತಿದ್ದ ಅರ್ಜುನನನ್ನು ಪತ್ತೆ ಹಚ್ಚಿ ಮಗಳಿಗೆ ತೋರಿಸುವ ದೃಶ್ಯ ನೆನಪಿಗೆ ಬರುತ್ತಿದೆಯಲ್ಲವೇ?

ನಾನು ಚಿಕ್ಕವಳಾಗಿದ್ದಾಗ ನಮ್ಮ ಮನೆಯಲ್ಲಿ ನಿಲುವುಗನ್ನಡಿ ಇರಲೇ ಇಲ್ಲ. ಕೈಯಲ್ಲಿ ಹಿಡಿದು ನೋಡಿಕೊಳ್ಳುವಂತಹ ಚೌಕದ ಕನ್ನಡಿಗಳಿರುತ್ತಿದ್ದವು. ಯಾವುದೋ ಕಿಟಕಿಗೊರಗಿರುತ್ತಿದ್ದ ಈ ಕನ್ನಡಿಯನ್ನು ಹುಡುಕುವುದೇ ಒಂದು ಸಾಹಸವಾಗುತ್ತಿತ್ತು. ಮನೆಯಲ್ಲಿದ್ದ ಹೆಂಗಸರು ತಮ್ಮ ಕೆಲಸಗಳ ನಡುವೆ ಬಿಡುವಾದಾಗ ,ಕನ್ನಡಿಯನ್ನು ತಮ್ಮ ಕಾಲಿನ ನಡುವೆ ಸಿಕ್ಕಿಸಿಕೊಂಡು, ಅದರಲ್ಲಿ ನೋಡಿಕೊಳ್ಳುತ್ತಾ ಅಲಂಕರಿಸಿಕೊಳ್ಳುತ್ತಿದ್ದುದು ನೆನಪಿದೆ.

ನನ್ನಂತಹ ಚಿಕ್ಕ ಹುಡುಗಿಯರಿಗಂತೂ, ಜಡೆ ಹೆಣೆದು, ಮುಖಕ್ಕೆ ಪೌಡರ್‌ ಬಳಿದು, ಆಮೇಲೆ ಹಣೆಗೆ ತಿಲಕವಿಟ್ಟ ನಂತರ ಒಮ್ಮೆ ಕನ್ನಡಿಯಲ್ಲಿ ಮುಖ ತೋರಿಸಲಾಗುತ್ತಿತ್ತು ಅಷ್ಟೆ. ಹೀಗಿರುವಾಗ ನಮ್ಮ ದೊಡ್ಡಪ್ಪನೇ ಇರಬೇಕು, ಒಂದು ದಿನ ಆಫೀಸಿನಿಂದ ಬರುವಾಗ ಸುಮಾರು ಮೂರು ಅಡಿಗಳಷ್ಟು ದೊಡ್ಡದಾದ ಕನ್ನಡಿಯನ್ನು ಮನೆಗೆ ಹೊತ್ತು ತಂದರು. ಆದರೆ, ಆ ಕನ್ನಡಿಯನ್ನು ನಡುಮನೆಯಿಂದ ಅಡುಗೆಮನೆಗೆ ಪ್ರವೇಶಿಸುವ ಬಾಗಿಲ ಚೌಕಟ್ಟಿನ ಮೇಲೆ ಓರೆಯಾಗಿ ನಿಲ್ಲಿಸಲಾಯಿತು. ಎತ್ತರದಲ್ಲಿರುವ ಆ ಕನ್ನಡಿಯನ್ನು ಒಂದು ನಿರ್ದಿಷ್ಟ ದೂರದಿಂದ ನೋಡಿದರೆ ಮಾತ್ರ ನಮ್ಮ ಮುಖ ಕಾಣುತ್ತಿತ್ತೇ ಹೊರತು, ತೀರಾ ಹತ್ತಿರ ನಿಂತು ನೋಡಿದರೆ ಏನೂ ಕಾಣುತ್ತಲೇ ಇರಲಿಲ್ಲ!

ಈಗ ಕನ್ನಡಿಗಳು ಯಾರಿಗೂ ಅಪರೂಪವಲ್ಲ. ಎಲ್ಲರ ಮನೆಗಳಲ್ಲಿಯೂ ನಿಲುವುಗನ್ನಡಿಗಳು ರಾರಾಜಿಸುತ್ತಿರುತ್ತವೆ. ಈಗಿನ ಆಧುನಿಕ ಮನೆಗಳ ಒಳಹೊಕ್ಕರಂತೂ ಎಲ್ಲೆಲ್ಲೂ ಹೊಳೆಯುವ ಶುಭ್ರ ಕನ್ನಡಿಗಳು. ಅಮೆರಿಕವು ಭೋಗಭೂಮಿ ಎನ್ನುವ ಮಾತಿಗೆ ಕನ್ನಡಿ ಹಿಡಿಯುವಂತೆ, ಇಲ್ಲಿ ಅಡುಗೆಮನೆಗಳಿಗಿಂತಲೂ ಸ್ನಾನದ ಮನೆಗಳೇ ವಿಶಾಲವಾಗಿರುತ್ತವೆ. ಅಲ್ಲಿ ಗೋಡೆಗಳ ಬದಲಿಗೆ ಕನ್ನಡಿಗಳು. ನಮ್ಮ ಮೈಯ ಬೆತ್ತಲೆ ನಮಗೇ ನಾಚಿಕೆ ಬರಿಸುವಂತೆ ಹೊಂಚಿ ಹಾಕಿ ನೋಡುವ ಕನ್ನಡಿಯ ಕಣ್ಣುಗಳು!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X