• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತುಳಸೀವನದ ಓದುಗರಿಗೆಲ್ಲ ನಮಸ್ಕಾರಗಳು

By Staff
|

ಬಿಡಿಬಿಡಿ ‘ತುಳಸೀವನ’ದ ಲೇಖನಗಳನ್ನು ಹಿಡಿಹಿಡಿಯಾಗಿ ಓದುವ ಅವಕಾಶ ಹತ್ತಿರದಲ್ಲಿಯೇ ಇದೆ. ಅಂಕಣ ಬರೆಯಲು ಆರಂಭಿಸಿದ್ದು ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಬಗ್ಗೆ ಒಂದೆರಡು ಮಾತು. ಮಾತು ಮಾತ್ರವಲ್ಲ, ಸ್ವೀಕರಿಸಿ; ಅಕ್ಕರೆಯ ಕರೆ.

  • ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

sritri@gmail.com

An invitation from Triveni Srinivas for the book release functionಗೋಕುಲಾಷ್ಟಮಿಗೂ ಇಮಾಮ ಸಾಹೇಬರಿಗೂ ಏನು ಸಂಬಂಧ? ಎಂಬ ಗಾದೆ ಮಾತು ಕೇಳಿರಬಹುದು. ಅದೇ ರೀತಿ ನಿಮಗೆ ಇಲ್ಲೊಂದು ಪ್ರಶ್ನೆ.

‘‘ತುಳಸೀವನಕ್ಕೂ ಬಿನ್‌ ಲಾಡೆನ್‌ಗೂ ಏನು ಸಂಬಂಧ?’’ ಬಿನ್‌ ಲಾಡೆನ್‌ ನಮ್ಮ ಮಾವ ಅಲ್ಲ, ಬಿಲ್‌ ಕ್ಲಿಂಟನ್‌ ನನ್ನ ಭಾವನೂ ಅಲ್ಲ ! ಆದರೂ ಇಲ್ಲೊಂದು ಕಾರ್ಯಕಾರಣ ಸಂಬಂಧವಿದೆ. ಏನೆಂದು ತಿಳಿಯಲಿಲ್ಲ ಅಲ್ಲವೇ? ಸರಿ. ‘‘ತುಳಸೀವನ’’ ಹೋಗಿ ‘‘ವಿಚಿತ್ರಾನ್ನ’’ ಆಯಿತೇ ಎಂದು ನಿಮ್ಮ ತಲೆ ಚಿತ್ರಾನ್ನವಾಗುವ ಮೊದಲು ನಾನೇ ಒಗಟು ಬಿಡಿಸುತ್ತೇನೆ.

2001 ವಿಶ್ವ ವಾಣಿಜ್ಯ ಮಳಿಗೆ ಕುಸಿದು ಪ್ರಪಂಚದೆಲ್ಲಾ ಜನರ ಮನಸ್ಸನ್ನು ಕಲಕಿದಂತೆ ಆಗಷ್ಟೇ ಅಮೆರಿಕೆಗೆ ಬಂದಿದ್ದ ನಾನೂ ತಲ್ಲಣಕ್ಕೆ ಗುರಿಯಾದೆ. ನನ್ನ ಪತಿ ಶ್ರೀನಿ ಕೆಲಸ ಮಾಡುತ್ತಿದ್ದುದೂ ಘಟನೆ ನಡೆದ ಸ್ಥಳದ ಸಮೀಪವೇ ಆಗಿದ್ದರಿಂದ ದಿಗ್ಭ್ರಾಂತಳಾಗಿದ್ದೆ.

ಆ ಕ್ಷಣದಲ್ಲಿ ಮನಸ್ಸಿನಲ್ಲಿದ್ದ ಆಕ್ರೋಶವನ್ನೆಲ್ಲಾ ಹೊರ ಹಾಕಿ ‘‘ಒಸಾಮ! ಒಸಾಮ!!’’ ಎಂಬ ಕವನ ಬರೆದಿದ್ದೆ. ಆಗ ತಾನೇ ವಿಶ್ವ ಕನ್ನಡಿಗರ ಮನೆ-ಮನಗಳಲ್ಲಿ ಮೆಲ್ಲಗೆ ಅಡಿಯಿಡಲು ಪ್ರಾರಂಭಿಸಿದ್ದ ದಟ್ಸ್‌ ಕನ್ನಡಕ್ಕೆ ಅದನ್ನು ಕಳಿಸಿದೆ. ಹಸಿಹಸಿ ಭಾವನೆಗಳಲ್ಲಿ ಅದ್ದಿ ತೆಗೆದಂತಿದ್ದ, ಆ ಕಚ್ಚಾ ಕವನ ಅಚ್ಚಾಗುತ್ತದೆಂಬ ನಿರೀಕ್ಷೆಯಾಗಲೀ ಅಚ್ಚಾಗಲಿ ಎಂಬ ಹಂಬಲವಾಗಲೀ ಖಂಡಿತ ನನ್ನಲ್ಲಿರಲಿಲ್ಲ.

ಕವನ ಕಳಿಸಿದ ಎರಡನೆಯ ದಿನವೇ ಸಂಪಾದಕ ಶಾಮ್‌ ಅವರು ನನ್ನ ಕವನದ ಪ್ರಕಟಿತ ಲಿಂಕನ್ನು ಕಳಿಸಿ ಮೆಚ್ಚುಗೆಯ ಮಾತುಗಳ ಪತ್ರ ಬರೆದಿದ್ದರು. ಇಂಟರ್‌ನೆಟ್ಟಿನ ಅಪಾರ ಸಾಧ್ಯತೆಗಳ ಅರಿವಿಲ್ಲದ, ಆಗಷ್ಟೇ ಇಲ್ಲಿಗೆ ಬಂದಿಳಿದಿದ್ದು, ಈ ಮಾಯಾಲೋಕದ ಬಣ್ಣ, ಬೆರಗಿಗೆ ಬೆಪ್ಪಾಗಿ ‘‘ಅಯ್ಯಯ್ಯೋ ಹಳ್ಳೀ ಮುಕ್ಕ’’ ಎಂಬಂತಿದ್ದ ನಾನು ಆ ಪತ್ರ ತೆರೆದು ಓದಿದ್ದು ಮತ್ತೆಷ್ಟೋ ದಿನಗಳ ನಂತರ!

ಈ ರೀತಿಯಾಗಿ ಒಸಾಮನ ಮೂಲಕ ಪ್ರಾರಂಭವಾದ ದಟ್ಸ್‌ಕನ್ನಡ ಮತ್ತು ನನ್ನ ನಂಟು ಇಂದಿನವರೆಗೂ ನಡೆದುಕೊಂಡು ಬಂದಿದೆ. ಗಗನನೌಕೆಯ ಮುಖೇನ ಓದುಗ ಮಿತ್ರರೊಂದಿಗಿನ ಈ ಮಧುರ ಬಾಂಧವ್ಯ ಮುಂದೆಯೂ ಹೀಗೆ ಸಾಗಲಿ ಎಂದು ಆಶಿಸುತ್ತೇನೆ.

ಇದೇ ಬಿನ್‌ ಲಾಡೆನ್‌ ಮತ್ತು ತುಳಸೀವನದ ಸಂಬಂಧ! ಮುಂದಿನದು ನಿಮಗೂ ತಿಳಿದಿದೆ. ಕವನಗಳನ್ನು ಪ್ರಕಟಿಸಿದ ಶಾಮ್‌ ನಂತರ ಲೇಖನಗಳನ್ನು ಬರೆಯಿರಿ ಎಂದೂ ಹೇಳಿದರು. ಏನು ಬರೆಯಬೇಕೆಂದು ಹೊಳೆಯದಿದ್ದಾಗ ಅವರೇ ಈ ವಿಷಯ ಬರೆಯಬಹುದಲ್ಲವೇ? ಆ ವಿಷಯ ಬರೆಯುವುದಿಕ್ಕಾಗದೆ? ಎಂದು ಸೂಚಿಸಿ ನನ್ನ ದಾರಿಯನ್ನು ಸುಗಮಗೊಳಿಸಿದರು.

ಕೊನೆಗೊಮ್ಮೆ ಅಂಕಣ ಬರೆಯಲು ಆಹ್ವಾನಿಸಿ ನನ್ನ ಲೇಖನದ ಆಶಯಗಳಿಗೆ ಸೂಕ್ತವೆನಿಸುವಂತಹ ‘‘ತುಳಸೀವನ’’ ಎಂಬ ಸುಂದರ ಹೆಸರನ್ನೂ ಅವರೇ ಹುಡುಕಿಕೊಟ್ಟರು. ಅಂದು ಮೊಳಕೆಯೊಡೆದ ತುಳಸೀಗಿಡ ಇಂದು ಹುಲುಸಾಗಿ ಬೆಳೆದು ನಿಂತಿದೆ. ಅಂತರ್ಜಾಲದಲ್ಲಿ ‘‘ಬಂಧಿ’’ಯಾಗಿದ್ದ ಬರಹಗಳಿಗೆ ಇದೀಗ ಪುಸ್ತಕ ರೂಪದಲ್ಲಿ ‘‘ಬಿಡುಗಡೆ’’ಯಾಗುವ ಯೋಗವೂ ಒದಗಿಬಂದಿದೆ. 2003-2007ರವರೆಗೆ ದಟ್ಸ್‌ಕನ್ನಡದಲ್ಲಿ ಅರಳಿದ ನನ್ನ ಲೇಖನಗಳನ್ನು ಹೊತ್ತ ‘‘ತುಳಸೀವನ’’ ಸಂಕಲನ ಬಿಡುಗಡೆಗೆ ಸಿದ್ಧವಾಗಿದೆ.

ಅಮೆರಿಕಾದ ಕನ್ನಡ ಸಾಹಿತ್ಯ ರಂಗವು ಮೇ, 19, 20ರಂದು ಶಿಕಾಗೋದಲ್ಲಿ ನಡೆಸುತ್ತಿರುವ ವಸಂತೋತ್ಸವದ ಬಗ್ಗೆ ನಿಮಗೀಗಾಗಲೇ ತಿಳಿದಿದೆ. ಸಮ್ಮೇಳನದ ಎರಡನೆಯ ದಿನವಾದ 20ರಂದು ವಿದ್ವಾಂಸ ಪ್ರೊ.ಅ.ರಾ.ಮಿತ್ರ ಅವರು ‘‘ತುಳಸೀವನ’’ವನ್ನು ಬಿಡುಗಡೆಗೊಳಿಸಲಿದ್ದಾರೆ. ದಟ್ಸ್‌ಕನ್ನಡದ ಸಹ ಲೇಖಕರಾದ ‘‘ಜಾಲತರಂಗ’’ ಅಂಕಣಕಾರ ಮೈ. ಶ್ರೀ. ನಟರಾಜ, ‘‘ವಿಚಿತ್ರಾನ್ನ’’ ಬಾಣಸಿಗ ಶ್ರೀವತ್ಸ ಜೋಶಿ, ಡಾ. ಗುರುಪ್ರಸಾದ್‌ ಕಾಗಿನೆಲೆ, ಕೃಷ್ಣಪ್ರಿಯ, ನಾಗ ಐತಾಳ, ವಲ್ಲೀಶ ಶಾಸ್ತ್ರಿ, ಸುಕುಮಾರ್‌ ರಘುರಾಂ, ಜ್ಯೋತಿ ಮಹಾದೇವ್‌, ನಳಿನಿ ಮೈಯ ಮುಂತಾದ ಹಿರಿ-ಕಿರಿಯರು ಈ ಶುಭ ಮುಹೂರ್ತಕ್ಕೆ ಸಾಕ್ಷಿ ನುಡಿಯಲಿದ್ದಾರೆ.

ತುಳಸೀವನದ ಬೆಳವಣಿಗೆ ಮತ್ತು ಪೋಷಣೆಗೆ ಓದುಗರ ಪ್ರೋತ್ಸಾಹವೇ ಗೊಬ್ಬರ ಎನ್ನುವುದರಲ್ಲಿ ಎರಡು ಮಾತಿಲ್ಲ. ನನಗೆ ತುಂಬಾ ಸಂತೋಷ ನೀಡಿರುವ ಸಂಗತಿಯೊಂದಿದೆ. ಓದುಗರು ನನ್ನನ್ನು ಲೇಖಕಿಯಾಗಿ, ದೂರದಿಂದ ಗುರುತಿಸುವುದಕ್ಕಿಂತ ಅಕ್ಕನಂತೆ ತಂಗಿಯಂತೆ, ತಮ್ಮ ‘‘ಮನೆ ಮಗಳಂತೆ’’ ಪ್ರೀತಿಯಿಂದ ನೋಡಿಕೊಂಡರು. ಹಾಗಾಗಿ, ತಪ್ಪು ಮಾಡಿದಾಗಲೂ ಬೈದು ಬುದ್ಧಿ ಹೇಳುವ ಬದಲು, ‘‘ಇರಲಿ ಬಿಡು, ಪರವಾಗಿಲ್ಲ’’ ಎಂದು ನಕ್ಕು ಸುಮ್ಮನಾದವರೇ ಹೆಚ್ಚು. ಇಂತಹ ವಾತ್ಸಲ್ಯದ ಒರತೆ ಎಲ್ಲರಿಗೂ ಸಿಕ್ಕುವುದು ಸಾಧ್ಯವಿಲ್ಲ. ಕನ್ನಡತಿಯಾಗಿ ಹುಟ್ಟಿರುವ ನಾನೇ ಭಾಗ್ಯವತಿ!

ನಿಮ್ಮೆಲ್ಲರ ಕಣ್ಗಾವಲಿನಲ್ಲಿಯೇ ಬೆಳೆದು ನಿಂತಿರುವ ತುಳಸೀ ತೋಟ ಈಗ ನಿಮ್ಮ ನೋಟಕ್ಕೆ ಕಾದಿದೆ. ಮೇ, 20ರಂದು, ಭಾನುವಾರ ನಡೆಯಲಿರುವ ಈ ಕಾರ್ಯಕ್ರಮಕ್ಕೆ ನಿಮ್ಮೆಲ್ಲರನ್ನೂ ಹೃತ್ಪೂರ್ವಕವಾಗಿ ಆಹ್ವಾನಿಸುತ್ತಿದ್ದೇನೆ. ಆ ಸಂತಸದ ಘಳಿಗೆಯಲ್ಲಿ, ನನ್ನ ನಲಿವನ್ನು ಹಂಚಿಕೊಳ್ಳಲು ನೀವೂ ಜೊತೆಗಿರಬೇಕೆಂದು ಬಯಸುತ್ತೇನೆ.

ಸಪ್ತ ಸಾಗರದಾಚೆಯ ಈ ಊರಿಗೆ ನಿಮ್ಮೆಲ್ಲರಿಗೂ ಬರಲಾಗುವುದಿಲ್ಲವೆಂದೂ ನನಗೆ ಗೊತ್ತು. ಆದರೇನು? ನನ್ನ ಕಲ್ಪನೆಯ ಕಂದ ಕಣ್ತೆರೆದು ನಗುವಾಗ ನಿಮ್ಮೆಲ್ಲರನ್ನೂ ಒಮ್ಮೆ ಮನದುಂಬಿ ನೆನೆಯುತ್ತೇನೆ. ನನ್ನ ಕಣ್ಣಂಚಿನಲ್ಲಿ ಹೊಳೆಯುವ ಆನಂದ ಬಾಷ್ಪದಲ್ಲಿ ನಿಮ್ಮೆಲ್ಲರ ಪ್ರತಿಬಿಂಬವಿರುತ್ತದೆ. ನೀವಿಲ್ಲಿರದಿದ್ದರೂ ನೀವಿರುತ್ತೀರಿ!

ಅದಕ್ಕೆ ಮೊದಲು ನಿಮ್ಮೆಲ್ಲರ ಹಾರೈಕೆಗಳನ್ನು ಸೆರಗೊಡ್ಡಿ ಬೇಡುತ್ತಿದ್ದೇನೆ. ನೀವೆಲ್ಲರೂ ಒಮ್ಮನಸ್ಸಿನಿಂದ, ಒಮ್ಮೆ, ‘‘ಶುಭ’’ವೆಂದು ನುಡಿದುಬಿಡಿ. ನೀವೇ ಶುಭ ನುಡಿಯುವಾಗ, ಏನಿದ್ದೇನೂ ಎಲ್ಲಾ ಶುಭವೇ!

ಸ್ನೇಹದಿಂದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more